ಗೋತ್ರ ಮತ್ತು ಪ್ರವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಋಗ್ವೇದದ ಕೆಲವು ಶ್ಲೋಕಗಳಲ್ಲಿ ಗೋತ್ರ ಎಂದರೆ ಗೋ ಸಮೂಹ ಎಂಬ ಅರ್ಥ ಬರುವಂತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅದು ಗುಂಪು ಎಂಬರ್ಥದಲ್ಲಿ ಬಳಕೆಯಾಗಿದೆ. ಕಾಲಕ್ರಮೇಣ ಅದು (ರಕ್ತ ಸಂಬಂಧವುಳ್ಳ) ವ್ಯಕ್ತಿಗಳ ಸಮೂಹ ಎಂಬರ್ಥವನ್ನು ಪಡೆಯಿತು. ಒಂದೊಂದು ಕುಟುಂಬವೂ ತನ್ನ ಮೂಲಪುರುಷ ಒಬ್ಬ ಋಷಿ ಎಂದು ಹೇಳಿಕೊಳ್ಳುತ್ತಿದೆ. ಅವನೇ ಆ ಕುಟುಂಬದ ಜನಕ. ಹೀಗೆ ಒಬ್ಬ ಪುರುಷನಿಂದ ಆರಂಭವಾಗಿ ಮುಂದೆ ನಿರಂತರವಾಗಿ ಬಂದ ಪುರುಷ ಸಂತಾನಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳೂ ಒಂದು ಗೋತ್ರಕ್ಕೆ ಸೇರಿದವರು. ಇದೇ ಗೋತ್ರದ ವಿಷಯವಾಗಿರುವ ಸಾಮಾನ್ಯ ಭಾವನೆ. ಒಬ್ಬ ತಾನು ಜಮದಗ್ನಿ ಗೋತ್ರದವನು ಎಂದು ಹೇಳಿಕೊಂಡರೆ ಅವನ ಅಭಿಪ್ರಾಯವಿಷ್ಟೇ: ತನ್ನ ಹಿಂದಿನ ಪುರುಷಸಂತಾನಗಳ ಮೂಲಪುರುಷ ಜಮದಗ್ನಿ ಎಂಬ ಪ್ರಾಚೀನ ಮಹರ್ಷಿ.

ಗೋತ್ರ ಪದ್ಧತಿ ತನ್ನ ಉಪಶಾಖೆಗಳೊಡನೆ ಬ್ರಾಹ್ಮಣಗಳ ಮತ್ತು ಪ್ರಾಚೀನ ಉಪನಿಷತ್ತುಗಳ ಕಾಲಕ್ಕೆ ರೂಢಮೂಲವಾಗಿತ್ತು. ಉದಾಹರಣೆಗೆ ಬ್ರಾಹ್ಮಣಗಳಲ್ಲಿ ನಾವು ನೋಡುವಂತೆ ಅನೇಕ ವೈದಿಕ ಕುಟುಂಬಗಳು ತಮ್ಮ ನಿಜವಾಗಿರಬಹುದಾದ ಅಥವಾ ಕಾಲ್ಪನಿಕವಾಗಿರಬಹುದಾದ ಮೂಲಪುರುಷರಿಗನುಗುಣವಾಗಿ ಅನೇಕ ಗುಂಪುಗಳಾಗಿ ವ್ಯವಸ್ಥೆಗೊಂಡಿದ್ದುವು. ಅಂತೆಯೆ ತಾವು ಸೇರಿದ ಆಯಾ ಗುಂಪಿಗನುಗುಣವಾದ ಪೂಜಾವಿಧಾನಗಳನ್ನು ಅನುಸರಿಸುತ್ತಿದ್ದರು. ಭೃಗುಗಳು ಇಲ್ಲವೆ ಆಂಗೀರಸರು ತಮತಮಗೆ ನಿರ್ಧಿಷ್ಟವಾದ ಮಂತ್ರಗಳೊಂದಿಗೆ ಹೋಮಾದಿಗಳನ್ನು ನಡೆಯಿಸಬೇಕೆಂದು ತೈತ್ತೀರಿಯ ಬ್ರಾಹ್ಮಣಗಳು ವಿಧಿಸುತ್ತವೆ. ಉಪನಿಷತ್ತುಗಳಲ್ಲಿ ಋಷಿಗಳ ಆತ್ಮವಿದ್ಯೆಯನ್ನುಪದೇಶಿಸಿದಾಗ ತಮ್ಮ ಶಿಷ್ಯರನ್ನು ಅವರವರ ಗೋತ್ರ ಹೆಸರುಗಳ ಮೂಲಕ ಸಂಬೋಧಿಸುತ್ತಿದ್ದರು. ಎಂದರೆ ಮೇಲಿನ ಕೃತಿಗಳಲ್ಲಿ ಹೋಮ ಅಥವಾ ಅಧ್ಯಯನಗಳಿಗೆ ಸಂಬಂಧಿಸಿದ ಸನ್ನಿವೇಶಗಳಲ್ಲಿ ಗೋತ್ರ ಅಥವಾ ಸಗೋತ್ರಗಳ ಉಲ್ಲೇಖ ಬಂದಿಲ್ಲವೆಂದೇ ಹೇಳಬಹುದು.

ಗೋತ್ರ ಮತ್ತು ಅದರ ಶಾಖೆಗಳು[ಬದಲಾಯಿಸಿ]

ಆರಂಭದಲ್ಲಿ ಎಂಟು ಜನ ಮೂಲಪುರುಷರಿದ್ದರೆಂದೂ ಅವರಿಗೆ ಸಂಬಂಧಿಸಿದ ಎಂಟು ಗೋತ್ರಗಳು ಮಾತ್ರ ಇದ್ದುವೆಂದೂ ಹೇಳಲಾಗಿದೆ. ಈ ಎಂಟು ಜನ ಮೂಲಪುರುಷರು ಕುಲವೃದ್ಧರಾದ ಋಷಿಗಳಾದ್ದರಿಂದ ಇವರು ಬ್ರಹ್ಮನ ಎಂಟು ಜನ ಪುತ್ರರೆಂದು ಸಂಪ್ರದಾಯ ಹೇಳುತ್ತದೆ. ಇವರು ಮೊದಲು ಕಶ್ಯಪ, ವಸಿಷ್ಠ, ಅಗಸ್ತ್ಯ, ಭೃಗು, ಗೌತಮ, ಭಾರದ್ವಾಜ, ಅತ್ರಿ ಮತ್ತು ವಿಶ್ವಾಮಿತ್ರ ಎಂಬ ಎಂಟು ಗೋತ್ರಗಳನ್ನು ಸ್ಥಾಪಿಸಿದರು. ಇದೇ ಪ್ರಾತಿನಿಧಿಕವಾದ ಬ್ರಾಹ್ಮಣ ಗೋತ್ರಗಳು. ಕ್ಷತ್ರಿಯರಿಂದ ಸ್ಥಾಪಿತವಾದ ಇನ್ನೂ ಹತ್ತು ಗೋತ್ರಗಳಿವೆ. ಕಾಲಕಳೆದಂತೆ ಈ ಮೂಲಪುರುಷರಾದ ಋಷಿಗಳ ಸಂತತಿಯವರು ನೂರಾರು ಗೋತ್ರಗಳನ್ನು ಸ್ಥಾಪಿಸಿದರು. ಅನೇಕ ಕುಟುಂಬಗಳು ಇವುಗಳ ಹೆಸರುಗಳನ್ನು ಧರಿಸಿದುವು. ಬೇರೆ ಜಾತಿಗಳಲ್ಲೂ ಬ್ರಾಹ್ಮಣ ಗೋತ್ರಗಳನ್ನು ಕಾಣಬಹುದು. ಬ್ರಾಹ್ಮಣರಲ್ಲಿ ಗೋತ್ರವು ಸಂತತಿಯ ಮೂಲಪುರುಷನನ್ನು ಸೂಚಿಸಿದರೆ ಬೇರೆ ಜಾತಿಗಳಲ್ಲಿ ಅದು ಅವರ ಸಂತತಿಯ ಒಬ್ಬ ವ್ಯಕ್ತಿಗೆ ಕುಲಪುರೋಹಿತನಾಗಿದ್ದ ಋಷಿಯನ್ನು ಸೂಚಿಸುತ್ತದೆ.

ವೀರಶೈವರಲ್ಲಿ ಗೋತ್ರದ ಬಳಕೆ ಕಂಡುಬರುತ್ತದೆ. ಅವರು ತಾವು ಪ್ರಾಚೀನ ಪುರುಷರೆನಿಸಿದ ಪಂಚಾಚಾರ್ಯ ವಂಶಜರೆಂದು ಹೇಳಿಕೊಳ್ಳುತ್ತಾರೆ. ಪಂಚಾಚಾರ್ಯರೇ ವೀರಶೈವ ಮತದ ಮೂಲಸ್ಥಾಪಕರು. ಆ ಪಂಚಾಚಾರ್ಯರ ಹೆಸರು ಅವರು ಸ್ಥಾಪಿಸಿದ ಪೀಠ, ಗೋತ್ರ ಇತ್ಯಾದಿಗಳ ಹೆಸರು ಇಂತಿವೆ:

ಆಚಾರ್ಯರ ಹೆಸರು ಶಿವನ ಉತ್ಪತ್ತಿ ಸ್ಥಾನ ಸ್ಥಾಪಿಸಿದ ಪೀಠ ಗೋತ್ರ ಸೂತ್ರ ಪ್ರವರ
ರೇವಣಾರಾಧ್ಯ ಸದ್ಯೋಜಾತ ರಂಭಾಪುರಿ ವೀರ ಪಡವಿಡಿ ಏಕಾಕ್ಷರ
ಮರುಳಾರಾಧ್ಯ ವಾಮದೇವ ಉಜ್ಜಯಿನಿ ನಂದಿ ವೃಷ್ಟಿ ದ್ವ್ಯಕ್ಷರ
ಏಕೋರಾಮಾಧ್ಯ ಅಘೋರ ಹಿಮವತ್ ಕೇದಾರ ಭೃಂಗಿ ಲಂಬನ ತ್ರ್ಯಕ್ಷರ
ಪಂಡಿತರಾಧ್ಯ ತತ್ಪುರುಷ ಶ್ರೀಶೈಲ ವೃಷಭ ಮುಕ್ತಗುಚ್ಛ ಚತುರ್ಥಾಕ್ಷರ
ವಿಶ್ವಾರಾಧ್ಯ ಈಶಾನ್ ಕಾಶಿ ಸ್ಕಂದ ಪಂಚವರ್ಣ ಪಂಚಾಕ್ಷರ

ಮತ್ತೆ ವೀರಶೈವರಲ್ಲಿ ಗುರು ಅಥವಾ ಜಂಗಮ ಮತ್ತು ಭಕ್ತ ಎಂಬ ಬಗೆಗಳುಂಟು. ಈ ಎರಡು ಬಗೆಗಳಿಗೆ ಗೋತ್ರ ಸೂತ್ರಗಳು ಸಮಾನವಾದರೂ ಪರಸ್ಪರ ಕೊಟ್ಟು ತರುವುದು ವಿಶೇಷ ಬಳಕೆಯಲ್ಲಿಲ್ಲ. ಈಗೀಗ ಗುಂಪುಗಳಲ್ಲಿಯೂ ಸಂಪ್ರದಾಯ ಶರಣರು ಕಡಿಮೆಯಾಗುತ್ತಿದ್ದಾರೆ.

ಒಕ್ಕಲಿಗರಲ್ಲಿ ಗೋತ್ರ ಪ್ರವರಗಳ ಹೆಸರು ಕೇಳಿಬರುವುದಿಲ್ಲ. ಅವರಲ್ಲಿ ಹೆಣ್ಣು ಕೊಡುವ ವಿಚಾರದಲ್ಲಿ ಒಕ್ಕಲು ಮತ್ತು ಕುಲ ಎಂಬ ಪದಗಳು ರೂಢಿಯಲ್ಲಿರುವುದು ಕಂಡುಬರುತ್ತದೆ. ಒಂದೇ ಒಕ್ಕಲಿನವರು, ಉದಾಹರಣೆಗೆ ತ್ರಿಪುರ ಸುಂದರಿ ಒಕ್ಕಲಿನವರು ತಮ್ಮ ತಮ್ಮಲ್ಲಿಯೇ ವಿವಾಹ ಸಂಪರ್ಕ ಏರ್ಪಡಿಸಿಕೊಳ್ಳುವುದಿಲ್ಲ. ಕಾರಣ, ಅವರಲ್ಲರೂ ಸೋದರರೆನಿಸಿಕೊಳ್ಳುವುದೇ ಆಗಿದೆ.

ಗೋತ್ರದ ಪ್ರಾಮುಖ್ಯ[ಬದಲಾಯಿಸಿ]

ಗೋತ್ರಕ್ಕೆ ಅನೇಕ ಮೂಲಭೂತ ವಿಷಯಗಳಲ್ಲಿ ಅಪಾರ ಪ್ರಾಮುಖ್ಯವಿದೆ. ಗೋತ್ರ ಹಿಂದೂಗಳ ಅಸಂಖ್ಯಾತ ಆಚಾರ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಸಗೋತ್ರ ವಿವಾಹಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಿವಾಹದ ಲಾಜಹೋಮದಲ್ಲಿ ಎಲ್ಲರೂ ಎರಡು ಆಹುತಿಗಳನ್ನು ಕೊಡಬೇಕು. ಜಾಮದಗ್ನ್ಯರು ಮಾತ್ರ ಮೂರು ಆಹುತಿಗಳನ್ನು ಕೊಡಬೇಕು. ಒಬ್ಬ ಹಿಂದೂ ಅಪುತ್ರಕನಾಗಿ ಮಡಿದರೆ ಅವನ ಗೋತ್ರಕ್ಕೆ ಸೇರಿದವರು ಅವನ ಆಸ್ತಿಗೆ ವಾರಸುದಾರರಾಗಬಹುದು. ಶ್ರಾದ್ಧಕ್ಕೆ ಆಹ್ವಾನಿತರಾಗಿ ಬಂದಿರುವವರು ಆಹ್ವಾನಿಸಿರುವವನ ಗೋತ್ರಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಸೇರಿರಬಾರದು. ಸ್ವಲ್ಪ ಹಿಂದೆ ಮಡಿದ ವ್ಯಕ್ತಿಯ ಪ್ರೇತಕ್ಕೆ ತರ್ಪಣ ಕೊಡುವಾಗ ಅವನ ಹೆಸರನ್ನೂ ಅವನ ಗೋತ್ರದ ಹೆಸರನ್ನು ಕೂಡಿಸಿ ಉಚ್ಚರಿಸಬೇಕು. ಪಾಕಯಜ್ಞಗಳಲ್ಲಿ ಎಲ್ಲರೂ ಆಹುತಿಯನ್ನು ಹವಿಸ್ಸಿನ ಮಧ್ಯದಿಂದ ಮತ್ತು ಮುಂಭಾಗದ ಅರ್ಧದಿಂದ ಕತ್ತರಿಸಬೇಕು. ಜಾಮದಗ್ನ್ಯರು ಮಾತ್ರ ಮಧ್ಯಭಾಗದಿಂದ ಹಿಡಿದು ಮುಂಭಾಗ ಮತ್ತು ಹಿಂಭಾಗಗಳಲ್ಲಿ ಕತ್ತರಿಸಬೇಕು. ಚೌಲ ಕರ್ಮದಲ್ಲಿ ವಟುವಿನ ಕುಟುಂಬದ ಗೋತ್ರ ಮತ್ತು ಸಂಪ್ರದಾಯದ ಪ್ರಕಾರ ಅವನ ತಲೆಯ ಮೇಲೆ ಸ್ವಲ್ಪ ಕೂದಲನ್ನು ಉಳಿಸುತ್ತಾರೆ. ಪ್ರಾತಃಕಾಲ ಮತ್ತು ಸಂಧ್ಯಾ ಕಾಲದ ಪ್ರಾರ್ಥನೆಗಳಲ್ಲಿ ಪ್ರತಿಯೊಬ್ಬನೂ ತನ್ನ ಗೋತ್ರ ಪ್ರವರಗಳನ್ನು ಉಚ್ಚರಿಸಬೇಕು.

ಪ್ರವರದ ಅರ್ಥ[ಬದಲಾಯಿಸಿ]

ಗೋತ್ರಕ್ಕೆ ಬಹು ನಿಕಟವಾಗಿ ಹೆಣೆದುಕೊಂಡಿರುವ ಮತ್ತೊಂದು ತತ್ತ್ವ ಪ್ರವರ. ಈ ಶಬ್ದ ಋಗ್ವೇದದಲ್ಲಿ ಬಳಕೆಯಾಗಲಿಲ್ಲ. ಆದರೆ ಅದಕ್ಕೆ ಸಮಾನಾರ್ಥಕವಾದ ಆರ್ಷೇಯ ಎಂಬುದು ಅಲ್ಲಿದೆ. ಪ್ರವರ ಎಂಬುದಕ್ಕೆ ವಾಚ್ಯಾರ್ಥ ಪ್ರಾರ್ಥನೆ ಎಂದು. ಯಜ್ಞ ಮಾಡುವವನ ಹವಿಸ್ಸನ್ನು ಹಿಂದೆ ಅಗ್ನಿಯನ್ನು ಆಹ್ವಾನಿಸಿದ್ದ ಋಷಿಗಳ ಹೆಸರುಗಳೊಡನೆ ದೇವತೆಗಳಿಗೆ ಕೊಂಡೊಯ್ಯುವಂತೆ ಅಗ್ನಿಯನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದುದರಿಂದ ಪ್ರವರ ಎಂಬ ಪದ ಯಜ್ಞ ಮಾಡುವವನ ಪೂರ್ವಜರಾದ ಒಬ್ಬ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಋಷಿಗಳನ್ನು ಸೂಚಿಸತೊಡಗಿದರು.

ಪ್ರವರ ಗೃಹಸಂಬಂಧದ ಅನೇಕ ಅಚಾರ ವ್ಯವಹಾರಗಳೊಂದಿಗೆ ನಿಕಟ ಸಂಪರ್ಕ ಪಡೆದಿದೆ. ಅವುಗಳಲ್ಲಿ ವಿವಾಹ ಅತಿ ಮುಖ್ಯವಾದುದು. ಹೆಣ್ಣಿನ ತಂದೆಯ ಪ್ರವರವೂ ಗಂಡಿನ ತಂದೆಯ ಪ್ರವರವೂ ಒಂದೇ ಆಗಿರಬಾರದು. ಉಪನಯನದ ಸಂದರ್ಭದಲ್ಲಿ ಕಟ್ಟುವ ಕಟಿಸೂತ್ರದಲ್ಲಿ ವಟುವಿನ ಪ್ರವರದಲ್ಲಿರುವ ಋಷಿಗಳ ಸಂಖ್ಯೆ ಅನುಗುಣವಾಗಿ ಒಂದು, ಮೂರು ಅಥವಾ ಐದು ಎಳೆಗಳು ಇರಬೇಕು. ಚೌಲ್ಯ ಸಮಯದಲ್ಲಿ ತಲೆಯ ಮೇಲೆ ಬಿಡುವ ಜುಟ್ಟು ಹುಡುಗನ ಕುಟುಂಬದ ಪ್ರವರಕ್ಕೆ ಸಂಬಂಧಿಸಿದ ಋಷಿಗಳ ಸಂಖ್ಯೆಯನ್ನು ಅನುಸರಿಸಿರುತ್ತದೆ.

ವಿವಾಹದ ವಿಧಿ ನಿಷೇಧಗಳಿಗೆ ಸಂಬಂಧಿಸಿದಂತೆ ಗೋತ್ರ ಮತ್ತು ಪ್ರವರಗಳನ್ನು ಬಳಸುತ್ತಾರೆ. ಒಂದೇ ಜಾತಿಯಲ್ಲಿ ಸಗೋತ್ರರು, ಸಪ್ರವರರು ಪರಸ್ಪರ ವಿವಾಹ ಮಾಡಿಕೊಳ್ಳುವಂತಿಲ್ಲ. ಒಬ್ಬ ಹುಡುಗಿ ಸಪ್ರವರಳಾಗಿರದಿದ್ದರೂ ಸಗೋತ್ರಳಾಗಿದ್ದರೆ ಸಾಕು ಅವಳನ್ನು ಮದುವೆ ಮಾಡಿಕೊಳ್ಳುವಂತಿಲ್ಲ. ಹಾಗೆಯೇ ಅವಳು ಸಗೋತ್ರಳಾಗಿರದಿದ್ದರೂ ಸಪ್ರವರಳಾಗಿದ್ದರೆ ಸಾಕು, ಅವಳನ್ನು ಮದುವೆ ಮಾಡಿಕೊಳ್ಳುವಂತಿಲ್ಲ. ಒಬ್ಬನಿಗೆ ತನ್ನ ಗೋತ್ರ ಪ್ರವರಗಳು ಗೊತ್ತಿರದಿದ್ದರೆ ಅವನು ತನ್ನ ಕುಲ ಪುರೋಹಿತನ ಗೋತ್ರಗಳನ್ನು ಅಂಗೀಕರಿಸಬೇಕು. ತನ್ನ ಕುಲಪುರೋಹಿತನ ಗೋತ್ರವನ್ನು ಬಳಸುತ್ತಿದ್ದರೂ ಅವನು ಆತನ ಮಗಳೊಬ್ಬಳನ್ನು ಬಿಟ್ಟು ಅದೇ ಗೋತ್ರಕ್ಕೆ ಸೇರಿದ ಇತರ ಹುಡುಗಿಯರನ್ನು ಬೇಕಾದರೆ ಮದುವೆ ಮಾಡಿಕೊಳ್ಳಬಹುದು.

ಸಗೋತ್ರರಾದ ಅಥವಾ ಸಪ್ರವರರಾದ ಗಂಡು ಹೆಣ್ಣುಗಳ ಮದುವೆ ಮದುವೆಯೇ ಅಲ್ಲ: ಅಂಥ ಮದುವೆ ನಡೆದರೂ ಆ ಸ್ತ್ರೀ ಆ ಪುರುಷನ ಪತ್ನಿಯಾಗಲಾರಳು. ಒಬ್ಬ ಪುರುಷ ಸಗೋತ್ರಸ್ತ್ರೀಯೊಡನೆ ಸಂಪರ್ಕ ಮಾಡಿದರೆ ಅವನು ಪಾಪವಿಮೋಚನೆಗಾಗಿ ಚಾಂದ್ರಾಯಣ ವ್ರತ ನಡೆಸಬೇಕೆಂದೂ ಅನಂತರ ಆ ಸ್ತ್ರೀಯನ್ನು ಕೈ ಬಿಡದೆ ಅವಳನ್ನು ತನ್ನ ತಾಯಿಯೊಂತೆಯೋ ತಂಗಿಯಂತೆಯೋ ನೋಡಿಕೊಳ್ಳಬೇಕೆಂದೂ ಬೌಧಾಯನ ವಿಧಿಸುತ್ತಾನೆ. ಅವರಿಗೆ ಒಂದು ಮಗು ಹುಟ್ಟಿದರೆ ಅದಕ್ಕೆ ಪಾಪ ಅಂಟುವುದಿಲ್ಲ; ಅದು ಕಶ್ಯಪ ಗೋತ್ರವನ್ನೇ ಅಂಗೀಕರಿಸಬೇಕು.

ಹಿಂದೂ ವಿವಾಹ ಕಾಯಿದೆ, 1955 ರ ಪ್ರಕಾರ ವಿವಾಹ ಸಂಪರ್ಕಗಳು ವಿವಿಧ ಜಾತಿ ಮತ್ತು ಸಗೋತ್ರಗಳವರ ಮಧ್ಯೆ ಏರ್ಪಡಬಹುದು. ಅವು ಪ್ರಾಚೀನ ಸಂಪ್ರದಾಯದಂತೆ ನಡೆಯಬಹುದು. ನಡೆಯದಿರಬಹುದು. ಈ ದೃಷ್ಟಿಯಲ್ಲಿ ಗೋತ್ರ ಮತ್ತು ಪ್ರವರಗಳ ಪ್ರಾಮುಖ್ಯ ಇಂದು ತಗ್ಗುತ್ತ ಬರುತ್ತಿದೆ. ಮೈಸೂರಿನ ಯುವಕನೊಬ್ಬ ಕಾಶ್ಮೀರದ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಬಹುದು. ಅವರ ಮಾತಾ ಪಿತರು ಸಗೋತ್ರರಿರಬಹುದು. ಸಹಸ್ರಾರು ವರ್ಷಗಳ ಹಿಂದೆ ಸಾಮಾಜಿಕ ಸಂಪರ್ಕಗಳು, ವ್ಯವಹಾರಗಳು ಅಷ್ಟು ಸುಲಭವಾಗಿಲ್ಲದಿರುವಾಗ ಸಗೋತ್ರ. ಸಪ್ರವರ ವಿವಾಹಗಳನ್ನು ನಿಷೇದಿಸುವುದು ಸರಿಯೆನಿಸುತ್ತಿತ್ತು. ಆದರೆ ನಿಷೇಧ ಅನೇಕರಿಗೆ ಹಿಡಿಸದಿರಬಹುದು. ಅರ್ಥವಿಲ್ಲದ್ದೆನಿಸಬಹುದು. ಬಹಳ ಜನ ತಾವು ಯಾವ ಗೋತ್ರ ಪ್ರವರಗಳಿಗೆ ಸೇರಿದ್ದಾರೆಂಬುದನ್ನೂ ಮರೆತಿದ್ದಾರೆಂದರೆ ಅತಿಶಯೋಕ್ತಿಯೇನಲ್ಲ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Ruegg, D. Seyfort (1976). 'The Meanings of the Term "Gotra" and the Textual History of the "Ratnagotravibhāga"'. Bulletin of the School of Oriental and African Studies, University of London, Vol. 39, No. 2 (1976), pp. 341–363

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: