ಗೋಣಿತಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಣಿತಟ್ಟು ಎಂದರೆ ಸೆಣಬಿನ ನಾರಿನಿಂದ ತಯಾರಿಸಲಾಗುವ ತಟ್ಟು (ಹೆಸಿಯನ್, ಬರ್ಲಾಪ್). ಗೋಣಿಯ ತಟ್ಟನ್ನು ಸಾದಾ ನೆಯ್ಗೆಯ (ಪ್ಲೇನ್ ವೀವ್) ವಿಧಾನದಿಂದ ಚದರ ಅಂಗುಲಕ್ಕೆ 8-12 ದಾರಗಳಿರುವಂತೆ ತಯಾರಿಸಲಾಗುತ್ತದೆ. ಕೆಲವೊಮ್ಮೆ ಅಂಗುಲಕ್ಕೆ 4ರಷ್ಟು ಕಡಿಮೆಯಾಗಿಯೂ 20ರಷ್ಟು ಹೆಚ್ಚಾಗಿಯೂ ದಾರಗಳಿರಬಹದು. ತಟ್ಟಿನ ಒಟ್ಟು ಅಗಲ ಸಾಮಾನ್ಯವಾಗಿ 40 ಇರುತ್ತದೆ. ಇದು ಚದರಗಜವೊಂದಕ್ಕೆ 10.5 ಔನ್ಸ್ ತೂಗುತ್ತದೆ.

ಗೋಣಿತಟ್ಟನ್ನು ಅನೇಕ ತರಹ ಸಾಮಾನುಗಳ ಸಂವೇಷ್ಟನಕ್ಕೆ, ವಿವಿಧ ಬಗೆಯ ಸರಕುಗಳನ್ನು ತುಂಬುವ ಚೀಲಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ನೀರುಳ್ಳಿ ತುಂಬುವ ಜಾಳು ಚೀಳ, ಅಕ್ಕಿ ತುಂಬುವ ಉತ್ತಮ ಚೀಲ, ಸಕ್ಕರೆ, ರವೆ ತುಂಬುವ ಅಚ್ಚುಕಟ್ಟಾದ ಚೀಲ-ಹೀಗೆ ಚೀಲಗಳಲ್ಲಿ ವಿವಿಧ ಬಗೆಗಳಿವೆ. ಅಲ್ಲದೆ ತಟ್ಟಿಗೆ ಬಣ್ಣಹಾಕಿ ಕೋಟಿನ ಲೈನಿಂಗ್, ಸೋಫಾ ಲೈನಿಂಗ್, ಪಾದರಕ್ಷೆಗಳ ಒಳಭಾಗ ಮುಂತಾದವಕ್ಕೂ ಉಪಯೋಗಿಸಬಹುದು. ಕೆಲವು ರಾಸಾಯನಿಕಗಳನ್ನು ಬಳಸಿ ಗೋಣಿತಟ್ಟು ನೀರಿನಿಂದ ಕೊಳೆಯದಂತೆ ಮಾಡಿ ಅದರ ಉಪಯುಕ್ತತೆ ಹೆಚ್ಚುವಂತೆ ಮಾಡಲಾಗಿದೆ. ತಟ್ಟಿನ ಮೇಲೆ ಅಂದವಾದ ವಿನ್ಯಾಸಗಳನ್ನು ಮುದ್ರಿಸಿ ಅಲಂಕರಣ ವಸ್ತುವಾಗಿ ಬಳಸುವುದುಂಟು. ನೆಲಕ್ಕೆ ಹಾಸುವ ಲಿನೋಲಿಯಮ್ ಬಟ್ಟೆ ಸಹ ಗೋಣಿತಟ್ಟಿನಿಂದ ತಯಾರಾದುದು.

ಗೋಣಿತಟ್ಟು ಸಾಗಾಣಿಕೆಯ ಒರಟು ವಿಧಾನಗಳಿಗೆ ಜಗ್ಗದ ಪದಾರ್ಥ. ಅಲ್ಲದೆ ಬಹಳ ಅಗ್ಗ. ಇದರಿಂದಾಗಿ ಹಿಂದೆ ಇದಕ್ಕೆ ಬಹಳ ಬೇಡಿಕೆ ಇತ್ತು; ತಯಾರಿಕೆಯ ಪ್ರಮಾಣವೂ ಸಾಕಷ್ಟಿತ್ತು. ಆದರೆ ಇತ್ತೀಚೆಗೆ ಕೃತಕ ಎಳೆಗಳಿಂದ ತಯಾರಿಸಲಾಗುವ ಸಂವೇಷ್ಟನ ವಸ್ತುಗಳ ಬಳಕೆಯಿಂದ ಇದರ ತಯಾರಿಕೆ ಇಳಿಮುಖವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: