ವಿಷಯಕ್ಕೆ ಹೋಗು

ಗೊಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೊಡ್ಡೆ
L. coromandelica flowers in Hyderabad, India.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Lannea

A. Rich. in Guillem.
Synonyms[]
  • Calesiam Adans. (1763)
  • Lanneoma Del. (1843)
  • Odina Roxb. (1832)
  • Scassellatia Chiov. (1932)

ಗೊಡ್ಡೆ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಕಾಡುಮರ. ಊದಿಮರ, ಉಡೀಮರ, ಸಿಂಟೆಮರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಇಂಡಿಯನ್ ಆಷ್‍ಟ್ರೀ ಎಂದು ಕರೆಯಲಾಗುತ್ತದೆ. ಲ್ಯಾನಿಯ ಕೋರೊಮ್ಯಾಂಡಲಿಕ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದರ ವ್ಯಾಪ್ತಿ ಇದೆ. ಇದು ಅಂಡಮಾನ್ ದ್ವೀಪಗಳಲ್ಲೂ ಕಾಣದೊರೆಯುತ್ತದೆ. ಹಿಮಾಲಯದಲ್ಲಿ 1500 ಮೀ ಎತ್ತರದ ವರೆಗಿನ ಪ್ರದೇಶಗಳ ಸಾಲವೃಕ್ಷಗಳ ಕಾಡುಗಳಲ್ಲೂ ದೇಶದ ಉಳಿದೆಡೆ ಶುಷ್ಕ ಹವೆಯಿರುವ ಮೈದಾನ ಇಲ್ಲವೆ ಬೆಟ್ಟಸೀಮೆಗಳ ಮಿಶ್ರಪರ್ಣಪಾತಿ ಕಾಡುಗಳಲ್ಲೂ ಇದನ್ನು ಕಾಣಬಹುದು.

ಲಕ್ಷಣಗಳು

[ಬದಲಾಯಿಸಿ]

ಸುಮಾರು 15-24 ಮೀ ಎತ್ತರಕ್ಕೆ ಬೆಳೆಯುವ ಪರ್ಣಪಾತಿ ಮರವಿದು. ಇದರ ರೆಂಬೆಗಳು ದೃಢವಾಗಿದ್ದು ಚಪ್ಪರದಂತೆ ಅಗಲವಾಗಿ ಹರಡಿಕೊಂಡು ಬೆಳೆಯುತ್ತವೆ. ತೊಗಟೆ ನಯವಾಗಿದೆ; ಇದರ ಬಣ್ಣ ಬೂದು ಇಲ್ಲವೆ ಬಿಳಿ; ಇದು ಆಗಾಗ್ಗೆ ವೃತ್ತಾಕಾರದ ಹಾಳೆಗಳಂತೆ ಸುಲಿದು ಬೀಳುತ್ತದೆ. ಎಲೆಗಳು ಸಂಯುಕ್ತ ಮಾದರಿಯವು; ಸಾಮಾನ್ಯವಾಗಿ ರೆಂಬೆಗಳ ತುದಿಯಲ್ಲಿ ಗುಂಪು ಗುಂಪಾಗಿರುತ್ತವೆ. ಹೂಗಳು ಚಿಕ್ಕ ಗಾತ್ರದವು. ಹಳದಿ ಇಲ್ಲವೆ ನಸು ಊದಾ ಬಣ್ಣದವು; ಏಕಲಿಂಗಿಗಳು. ಗಂಡು ಹೂಗಳು ಸಂಯುಕ್ತ ರೇಸೀಮ್ ಗೊಂಚಲುಗಳಲ್ಲೂ ಹೆಣ್ಣು ಹೂಗಳು ಸರಳ ರೇಸೀಮ್ ಗೊಂಚಲುಗಳಲ್ಲೂ ಸಮಾವೇಶಗೊಂಡಿವೆ. ಫಲ ಅಷ್ಟಿ ಮಾದರಿಯದು. ಇದರ ಬಣ್ಣ ಕೆಂಪು. ಹಣ್ಣಿನೊಳಗೆ ಒಂದೇ ಬೀಜವಿದೆ.

ಬೇಸಾಯ

[ಬದಲಾಯಿಸಿ]

ಗೊಡ್ಡೆ ಮರಳುಶಿಲೆ, ಸುಣ್ಣಕಲ್ಲು, ಜಂಬಿಟ್ಟಿಗೆ (ಲ್ಯಾಟರೈಟ್) ಮುಂತಾದ ಹಲವಾರು ವಿಧದ ಮಣ್ಣಿನಲ್ಲಿ ಬೆಳೆಯಬಲ್ಲುದಾದರೂ ನೀರು ಸರಾಗವಾಗಿ ಬಸಿದು ಹೋಗುವಂಥ ಮೆಕ್ಕಲು ಮಣ್ಣಿನಲ್ಲಿ ಮಾತ್ರ ಬಲು ಉತ್ಕೃಷ್ಟವಾಗಿ ಬೆಳೆಯುತ್ತದೆ. ಈ ಮರ ಹವೆಯ ಶುಷ್ಕತೆಯನ್ನು ಎದುರಿಸಬಲ್ಲದು. ಆದರೆ ಕಡುಚಳಿಯನ್ನು ತಡೆಯಲಾರದು. ಮರವನ್ನು ಕಡಿದಾಗ ಉಳಿಯುವ ಮೋಟಿನಿಂದ ಬಲುಬೇಗ ಚಿಗುರೊಡೆಯುವುದರಿಂದ ಮತ್ತು ವಿಪುಲವಾಗಿ ಬೇರುಸಸಿಗಳು (ರೂಟ್ ಸಕರ್ಸ್‌) ಒಡೆಯುವುದರಿಂದ ಗೊಡ್ಡೆ ಒಳ್ಳೆಯ ಕಾಡುಮರ ಅನ್ನಿಸಿಕೊಂಡಿದೆ. ನಿಸರ್ಗದಲ್ಲಿ ಗೊಡ್ಡೆಯ ಸಂತಾನವೃದ್ಧಿ ಬೀಜಗಳಿಂದ ನಡೆಯುತ್ತದೆ. ಬೀಜಪ್ರಸಾರ ಹಕ್ಕಿಗಳ ಮೂಲಕ. ಕೃತಕವಾಗಿ ಗೊಡ್ಡೆಯನ್ನು ಬೀಜಗಳಿಂದಲೇ ಬೆಳೆಸಬಹುದಾದರೂ ಬೀಜಗಳ ಮೊಳೆಯುವ ಸಾಮರ್ಥ್ಯ ಬಹಳ ಕಡಿಮೆಯಾದ್ದರಿಂದ 1-2 ವರ್ಷ ವಯಸ್ಸಾದ ಕಾಂಡತುಂಡುಗಳಿಂದ ವೃದ್ಧಿಸುವುದೇ ವಾಡಿಕೆಯಲ್ಲಿರುವ ಕ್ರಮ.

ಉಪಯೋಗಗಳು

[ಬದಲಾಯಿಸಿ]

ಗೊಡ್ಡೆಯಿಂದ ಸಾಕಷ್ಟು ಗಟ್ಟಿಯಾಗಿರುವ, ಒತ್ತಾದ ಕಣವಿನ್ಯಾಸ ಮತ್ತು ಸಮ ರಚನೆಯುಳ್ಳ ಹಾಗೂ ಹಗುರವಾದ ಚೌಬೀನೆಯನ್ನು ಪಡೆಯಬಹುದು. ಚೌಬೀನೆಗೆ ಜಿಂಗನ್ ಅಥವಾ ಒಡಿಯರ್ ಎಂಬ ವಾಣಿಜ್ಯ ನಾಮವಿದೆ. ಹೊಸದಾಗಿ ಕತ್ತರಿಸಿದಾಗ ಚೌಬೀನೆಯ ಚೇಗುಭಾಗ ನಸುಗೆಂಪಾಗಿದ್ದು ಕಾಲ ಕಳೆದಂತೆ ಕಂದುಮಿಶ್ರಿತ ಕೆಂಪುಬಣ್ಣವನ್ನು ತಳೆಯುತ್ತದೆ. ರಸಕಾಷ್ಠ ಮೊದಲಿಗೆ ಬಿಳಿ ಇಲ್ಲವೆ ನಸುಹಳದಿ ಬಣ್ಣಕ್ಕಿದ್ದು ಬರಬರುತ್ತ ಕಂದು ಮಿಶ್ರಿತ ಬೂದಿಬಣ್ಣಕ್ಕೆ ತಿರುಗುತ್ತದೆ. ಚೌಬೀನೆಯನ್ನು ಸಂಸ್ಕರಿಸುವುದು ಕೊಂಚ ಕಷ್ಟ. ಅಲ್ಲದೆ ಇದಕ್ಕೆ ಬಹಳ ಕಾಲ ಹಿಡಿಯುತ್ತದೆ. ಚೇಗು ಮತ್ತು ರಸಕಾಷ್ಠಗಳು ಏಕಕಾಲದಲ್ಲಿ ಒಣಗದೆ ಇರುವುದೂ ಒಣಗುವಾಗ ಇವುಗಳ ತುದಿಭಾಗಗಳು ಸೀಳುವುದೂ ರಸಕಾಷ್ಠ ಬಲುಬೇಗ ಕೀಟಗಳ ಹಾವಳಿಗೆ ತುತ್ತಾಗುವುದೂ ಸಂಸ್ಕರಣೆಯಲ್ಲಿನ ತೊಂದರೆಗೆ ಕಾರಣ. ಆದರೂ ಗರಗಸದಿಂದ ಸರಾಗವಾಗಿ ಕೊಯ್ಯಬಹುದಾದ್ದರಿಂದ ಮತ್ತು ಇದು ಮರಗೆಲಸಗಳಿಗೆ ಸುಲಭವಾಗಿ ಮಣಿಯುವುದರಿಂದ, ಚೌಬೀನೆಯನ್ನು ಮನೆ ಕಟ್ಟಡಗಳಿಗೆ, ಪೆಟ್ಟಿಗೆ, ಪೀಠೋಪಕರಣ, ಗಾಣದ ಸಾಮಾನುಗಳು, ಅಕ್ಕಿಕೊಟ್ಟಣ, ನೇಗಿಲು ನೊಗ, ಬ್ರಷ್ ಹಿಡಿ, ಮರದ ಹೂಜಿ, ಪೀಪಾಯಿ, ಆಸರೆಗಂಬ, ಮೋಚಿಯಚ್ಚು, ದೋಣಿ, ಬಾಚಣಿಗೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದ ಪ್ಲೈವುಡ್, ಚಹಾ ಪೆಟ್ಟಿಗೆ, ಪೆನ್ಸಿಲ್ ಮತ್ತು ಸ್ಲೇಟುಗಳ ಚೌಕಟ್ಟು, ದಾರ, ಹುರಿ, ಮುಂತಾದವನ್ನು ಸುತ್ತಿಡುವ ಉರುಳೆಗಳು, ರೈಲ್ವೆ ಸ್ಲೀಪರುಗಳು ಮತ್ತು ಬೆಂಕಿಕಡ್ಡಿ ಮೊದಲಾದವನ್ನೂ ತಯಾರಿಸಬಹುದು. ಮೇಲೆ ಹೇಳಿದ ಕೆಲಸಗಳಿಗೆ ಬಾರದ ಕೆಳದರ್ಜೆಯ ಮರವನ್ನು ಸೌದೆಯಾಗಿ ಬಳಸಬಹುದು. ಗೊಡ್ಡೆಮರದಲ್ಲಿ ಸೂಕ್ತ ಪ್ರಮಾಣದಲ್ಲಿ ಸೆಲ್ಯುಲೋಸ್ ಶೇ. 53.37, ಲಿಗ್ನಿನ್ ಶೇ. 24.11, ಪೆಂಟೋಸಾನುಗಳು ಶೇ. 15.40 ಇರುವುದರಿಂದ ಇದನ್ನು ಬಿದಿರಿನೊಂದಿಗೆ ಮಿಶ್ರಿಸಿ ಕಾಗದ ತಯಾರಿಕೆಯಲ್ಲೂ ಬಳಸಬಹುದಾಗಿದೆ.

ಗೊಡ್ಡೆಮರದಿಂದ ಹಳದಿ ಬಣ್ಣದ ಗೋಂದು ದೊರೆಯುತ್ತದೆ. ಅರ್ಯಾಬಿಕ್ ಗೋಂದನ್ನು ಹೋಲುವ ಇದು ಅದರಂತೆಯೆ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಆದರೆ ಗೊಡ್ಡೆಮರದ ಗೋಂದಿಗೆ ಸ್ನಿಗ್ಧತೆ ಕಡಿಮೆ. ಇದನ್ನು ಕ್ಯಾಲಿಕೊ ಮುದ್ರಣ, ಶಾಯಿ ಮತ್ತು ಕೆಳದರ್ಜೆಯ ಮೆರುಗೆಣ್ಣೆಗಳ ತಯಾರಿಕೆ. ಮೀನುಬಲೆಗಳ ರಕ್ಷಣೆ, ಮಿಠಾಯಿ ತಯಾರಿಕೆ ಮೊದಲಾದ ಕಾರ್ಯಗಳಿಗೆ ಬಳಸುತ್ತಾರೆ. ಅಲ್ಲದೆ ಗೋಂದನ್ನು ಆಲ್ಕೊಹಾಲಿನಿಂದ ಶುದ್ಧೀಕರಿಸಿ ಕಬ್ಬಿನ ರಸವನ್ನು ಸ್ವಚ್ಛಗೊಳಿಸಲು ಉಪಯೋಗಿಸುವು ದುಂಟು. ಗೊಡ್ಡೆಮರದ ತೊಗಟೆಯಲ್ಲಿ ಫ್ಲೋಬ ಟ್ಯಾನಿನ್ ಎಂಬ ವಿಶೇಷ ವಸ್ತುವಿರುವುದರಿಂದ ತೊಗಟೆಯನ್ನು ಚರ್ಮ ಹದಗೊಳಿಸುವುದಕ್ಕೆ ಉಪಯೋಗಿಸುತ್ತಾರೆ. ತೊಗಟೆಯ ರಸವನ್ನು ಹತ್ತಿ ಮತ್ತು ಸಿಲ್ಕ್‌ ಬಟ್ಟೆಗಳಿಗೆ, ಕಂದಿನಿಂದ ಕಪ್ಪು ಬಣ್ಣದವರೆಗಿನ ಬಣ್ಣ ಕೊಡಲು ಬಳಸುತ್ತಾರೆ.

ಔಷಧೀಯ ಗುಣಗಳು

[ಬದಲಾಯಿಸಿ]

ಗೊಡ್ಡೆಮರಕ್ಕೆ ಔಷಧೀಯ ಗುಣಗಳೂ ಉಂಟು. ಇದರ ತೊಗಟೆಯ ಕಷಾಯ ವನ್ನು ತರಚುಗಾಯ, ವ್ರಣ, ಕಣ್ಣುಹುಣ್ಣು ಮೊದಲಾದವುಗಳಿಗೆ ಬಳಸುವುದುಂಟು. ಗೋಂದನ್ನು ಉಬ್ಬಸಕ್ಕೆ ಉಪಯೋಗಿಸುವುದಿದೆ. ಎಲೆಗಳನ್ನು ಕುದಿಸಿ ಉಳುಕು, ತರಚುಗಾಯ, ಬಾವು ಮುಂತಾದವುಗಳಿಗೆ ಬೆಚ್ಚಾರವಾಗಿ ಲೇಪಿಸುತ್ತಾರೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Lannea A. Rich. in Guillem.". Anacardiaceae and Burseraceae. National Science Foundation (NSF). Archived from the original on 27 ಮಾರ್ಚ್ 2019. Retrieved 23 October 2012.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೊಡ್ಡೆ&oldid=1054908" ಇಂದ ಪಡೆಯಲ್ಪಟ್ಟಿದೆ