ಗೊಂದಲಿಗರ ಆಟ
ಗೊಂದಲಿಗರದು ಒಂದು ಅಲೆಮಾರಿ ಸಮುದಾಯ. ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ವ್ಯಾಪಕವಾಗಿ ಮತ್ತು ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಂಚಿಹೋಗಿದ್ದಾರೆ. ಅವರ ತಾಯಿನುಡಿಯು ಮರಾಠಿಯಾದರೂ, ತಾವು ನೆಲೆಸಿರುವ ಪ್ರದೇಶದ ಭಾಷೆಯನ್ನು ಕಲಿಯುವುದು ಮತ್ತು ಬಳಸುವುದು ಅವರ ಜಾಯಮಾನ. ‘ಗೊಂದಲ’ವು ಅಂಬಾಭವಾನಿಯನ್ನು ಕುಲದೇವತೆಯಾಗಿ ಹೊಂದಿರುವ ಕುಟುಂಬಗಳು, ನಡೆಸುವ ಆಚರಣೆಗಳಲ್ಲಿ ಒಂದು. ಗೊಂದಲವನ್ನು ನಡೆಸುವ ಕೆಲಸದಲ್ಲಿ ಪರಿಣಿತರಾದ ಗೊಂದಲಿಗರ ನಾಯಕತ್ವ ಹಾಗೂ ಮೇಲ್ವಿಚಾರಣೆಯಲ್ಲಿ ಈ ಆಚರಣೆಯು ನಡೆಯುತ್ತದೆ. ಅಷ್ಟೇ ಅಲ್ಲ, ಗೊಂದಲಿಗರು ಗೊಂದಲಿಗರ ಆಟ ಎಂಬ ನಾಟಕರೂಪವನ್ನು ಪ್ರದರ್ಶಸುವುದರಲ್ಲಿಯೂ ವಂಶಪಾರಂಪರ್ಯವಾದ ತರಬೇತಿಯನ್ನು ಪಡೆದಿರುತ್ತಾರೆ. ಈ ಟಿಪ್ಪಣಿಯು ಧಾರ್ಮಿಕ ಆಚರಣೆ ಮತ್ತು ನಾಟಕರೂಪಗಳೆರಡರ ಬಗ್ಗೆಯೂ ಮಾಹಿತಿ ನೀಡುತ್ತದೆ.ಗೊಂದಲಿಗರಲ್ಲಿ ಎಂಟು ಒಳಗುಂಪುಗಳಿವೆ. ಗೊಂದಲಿಗ, ಬುಡಬುಡಿಕೆ, ಅರೆಪಂಚಾಂಗ, ಸಿಂಗ, ಭೂಕೇರು, ಚಿತ್ರವೃತ್ತಿ, ಭಟ ಮತ್ತು ವಾಸುದೇವ ಎನ್ನುವುದು ಆ ಗುಂಪುಗಳ ಹೆಸರು. ತುಳಜಾಪುರದ ಅಂಬಾಭವಾನಿಯು ಇವರೆಲ್ಲರ ಕುಲದೇವತೆ. ಅವರು ಸವದತ್ತಿಯ ರೇಣುಕಾದೇವಿಯನ್ನೂ ಪೂಜಿಸುತ್ತಾರೆ. ಗೊಂದಲಿಗರು ಋಷಿ ಜಮದಗ್ನಿಯು ತಮ್ಮ ಮೂಲಪುರುಷನೆಂದು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಆಚರಣೆಗಳು ಮತ್ತು ರಂಗಪ್ರದರ್ಶನಗಳೆರಡರಲ್ಲೂ ಪ್ರಾದೇಶಿಕವಾದ ಭಾಷೆಯನ್ನೇ ಬಳಸುತ್ತಾರೆ.<ref>[https://web.archive.org/web/20200926015350/https://shastriyakannada.org/DataBase/KANNADA%20UNICODE%20HTML/Folklore%20and%20Folk%20literature/GONDALIGA,%20GONDALIGARA%20ATA.html Archived 2020-09-26 ವೇಬ್ಯಾಕ್ ಮೆಷಿನ್ ನಲ್ಲಿ.
ಆಚರಣೆಗಳು
[ಬದಲಾಯಿಸಿ]ಗೊಂದಲದ ಆಚರಣೆಯು ಕರ್ನಾಟಕದಲ್ಲಿಯೇ ಉಗಮವಾದಂತಿದೆ. ಅದು ಸಂಪೂರ್ಣವಾಗಿ ಸಮುದಾಯ ವಿಶಿಷ್ಟವಾದ ಆಚರಣೆ. ಅದನ್ನು ಗೊಂದಣ, ಗೊಂದ್ಲಿ, ಗೌಂದಿಲಿ, ಗೊಂದಲೆ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ಅಂಬಾಭವಾನಿಯ ಭಕ್ತರು, ನವರಾತ್ರಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಅಂತೆಯೇ ತಮ್ಮ ಮನೆಗಳಲ್ಲಿ ಮದುವೆಯಂತಹ ಶುಭಸಮಾರಂಭಗಳು ನಡೆದಾಗ ಗೊಂದಲಿಗರನ್ನು ಆವಾಹಿಸುತ್ತಾರೆ. ತಮ್ಮ ಮನೆಯಲ್ಲಿ ಗೊಂದಲವನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸುತ್ತಾರೆ. ಈ ಆಚರಣೆಯನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬರಲಾಗಿದೆ. ಕದಂಬ, ಚಾಳುಕ್ಯ, ಯಾದವ ಮುಂತಾದ ರಾಜಮನೆತನಗಳ ಆಳ್ವಿಕೆಯಲ್ಲಿಯೇ ಇದರ ಆಚರಣೆಯಿತ್ತೆಂದು ಹೇಳಲು ಸಾಕ್ಷಿಗಳು ದೊರಕಿವೆ. ಪಂಪ, ರುದ್ರಭಟ್ಟ, ನಾಗಚಂದ್ರ ಮುಂತಾದ ಕವಿಗಳು ಹಾಗೂ ಹನ್ನೆರಡನೆಯ ಶತಮಾನದ ಶಿವಶರಣರು ತಮ್ಮ ಬರವಣಿಗೆಯಲ್ಲಿ ಗೊಂದಲದ ಪ್ರಸ್ತಾಪ ಮಾಡಿದ್ದಾರೆ.
ಗೊಂದಲದ ದಿನ
[ಬದಲಾಯಿಸಿ]ಗೊಂದಲದ ದಿನ ಅದನ್ನು ನಡೆಸುವವರ ಮನೆಗೆ ಗೊಂದಲಿಗರು ಬಂದು, ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡುತ್ತಾರೆ. ಹೂವು, ತೆಂಗಿನಕಾಯಿ, ಎಲೆ-ಅಡಕೆ ಮತ್ತು ಒಡವೆಗಳಿಂದ ಅಲಂಕೃತವಾದ ಕಳಶವು ಅಂಬಾಭವಾನಿಯನ್ನು ಪ್ರತಿನಿಧಿಸುತ್ತದೆ. ದೇವಿಯ ಮುಂದೆ ಹಣತೆ ಅಥವಾ ನಂದಾದೀಪವಿರುತ್ತದೆ. ಕಳಶಪೂಜೆಯು ಈ ಆಚರಣೆಯ ಮೊದಲ ಹಂತ. ಅದು ಮುಗಿದ ನಂತರ, ಗೊಂದಲಿಗರ ತಂಡದ ನಾಯಕನು ಹಾಡತೊಡಗುತ್ತಾನೆ. ಅವನು ಬಿಳಿಯ ಅಂಗಿಯನ್ನು ಹಾಕಿಕೊಂಡಿರುತ್ತಾನೆ. ಕವಡೆಗಳ ಸರವನ್ನು ಧರಿಸಿರುತ್ತಾನೆ. ಅವನ ಹಣೆಯ ಮೇಲೆ ಅರಿಶಿನ ಮತ್ತು ಇತರ ವಸ್ತುಗಳಿಂದ ತಯಾರಾದ ಭಂಡಾರವನ್ನು ಬಳಿದುಕೊಂಡಿರುತ್ತಾನೆ. ಅವನನ್ನು ಪರಶುರಾಮನೆಂದು ಕರೆಯುತ್ತಾರೆ. ಅವನು ಹಾಡುಗಳು, ಲಘು ಕುಣಿತ, ಅಭಿನಯ ಮತ್ತು ಗದ್ಯದಲ್ಲಿರುವ ನಿರೂಪಣೆಗಳ ಮೂಲಕ ಅಂಬಾಭವಾನಿಯ ಕಥೆಯನ್ನು ನಿರೂಪಿಸುತ್ತಾನೆ. ಈ ನಿರೂಪಣೆಯ ನಡುನಡುವೆ ಮನರಂಜಕವಾದ ಪ್ರಸಂಗಗಳೂ ಇರುತ್ತವೆ. ಆಗೀಗ ತಂಡದ ಸದಸ್ಯರು ಪರಸ್ಪರ ನಾಟಕೀಯವಾದ ಸಂಭಾಷಣೆಯಲ್ಲಿ ತೊಡಗುತ್ತಾರೆ. ರಾತ್ರಿಯಲ್ಲಿ ಪ್ರಾಂಭವಾಗುವ ಗೊಂದಲವು ಮುಂಜಾನೆಯವರೆಗೂ ಹರಡಿಕೊಂಡಿರುತ್ತದೆ.
ಗೊಂದಲಿಗರ ರಂಗಭೂಮಿ
[ಬದಲಾಯಿಸಿ]ಗೊಂದಲಿಗರು ರಾತ್ರಿಯ ಹೊತ್ತು ಇಂತಹ ಆಚರಣೆಗಳಲ್ಲಿ ತೊಡಗಿಕೊಂಡರೂ ಹಗಲಿನಲ್ಲಿ ಭಿಕ್ಷಾಟನೆಯನ್ನೂ ನಡೆಸುತ್ತಾರೆ. ಇವಲ್ಲದೆ ಅವರು ‘ಗೊಂದಲಿಗರ ಆಟ’ದಲ್ಲಿ ಪರಿಣಿತರು. ಈ ಆಟವು, ಯಾವುದೋ ಒಂದು ಕಥೆಯ ಬಹಳ ನಾಟಕೀಯವಾದ ನಿರೂಪಣೆ. ನೆಲಮಟ್ಟದಿಂದ ಸ್ವಲ್ಪ ಎತ್ತರಿಸಿದ ವೇದಿಕೆಯೇ ಅವರ ರಂಗಭೂಮಿ. ಪ್ರಧಾನ ನಿರೂಪಕನ ಸಂಗಡ ಇರುವ ಇಬ್ಬರು ಸಹಾಯಕರು, ಚೌಡಿಕೆ ಮತ್ತು ಸಂಬಳ ಎಂಬ ವಾದ್ಯಗಳನ್ನು ನುಡಿಸಿ, ಹಿನ್ನೆಲೆಯನ್ನು ಒದಗಿಸುತ್ತಾರೆ. ಕಥಾನಿರೂಪಣೆಯು ಅನೇಕ ರಂಗತಂತ್ರಗಳನ್ನು ಬಳಸಿಕೊಳ್ಳುತ್ತದೆ. ತಂಡದ ನಾಯಕನು ಏಕಪಾತ್ರಾಭಿನಯದಲ್ಲಿ ನಿಪುಣ. ಅವನಿಗೆ ನರ್ತನ, ಹಾಡುಗಾರಿಕೆ ಮತ್ತು ಅಬಿನಯಗಳು ಗೊತ್ತಿರುತ್ತವೆ.
ಸ್ವಾರಸ್ಯ
[ಬದಲಾಯಿಸಿ]ಈ ಆಟಗಳು ಮುಖ್ಯವಾಗಿ ಮನರಂಜನೆಯನ್ನೇ ಉದ್ದೇಶವಾಗಿ ಹೊಂದಿರುತ್ತವೆ. ಆದರೂ ಅಲ್ಲಿಲ್ಲಿ ನೈತಿಕವಾದ ನಿಲುವುಗಳನ್ನು ಕಾಣಬಹುದು. ಕೆಟ್ಟ ಶಕ್ತಗಳ ಮೇಲೆ ಒಳ್ಳೆಯದರ ಗೆಲುವು, ಮಹಿಳೆಯರ ಪಾತಿವ್ರತ್ಯದ ವೈಭವೀಕರಣ ಮತ್ತು ಮಾನವೀಯ ಮೌಲ್ಯಗಳ ಪ್ರಚಾರವು, ಮತ್ತೆ ಮತ್ತೆ ಕಾಣಿಸಿಕೊಳ್ಳುವ ಬಹಳ ಜನಪ್ರಿಯವಾದ ಕೆಲವು ಆಶಯಗಳು
ಪ್ರಸಿದ್ಧ ಜಾನಪದ ವಿದ್ವಾಂಸರಾದ ಮುದೇನೂರು ಸಂಗಣ್ಣನವರು, ಗೊಂದಲಿಗರ ದೇವೇಂದ್ರಪ್ಪನವರ ಕೆಲವು ಆಟಗಳ ನಿರೂಪಣೆಯನ್ನು ಸಂಗ್ರಹಿಸಿ, ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಹೊರತಂದಿದೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]