ಗೇಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೇಷ ಗೀತನೃತ್ಯಗಳಲ್ಲಿ, ಮಾತುಕತೆಯಲ್ಲಿ ಪರಿಣಿತಳಾಗಿದ್ದು ಮನೋರಂಜನೆಯನ್ನೊದಗಿಸುವುದಕ್ಕಾಗಿಯೇ ಮೀಸಲಾದ ಜಪಾನೀ ಮಹಿಳೆ. ಶ್ರೀಮಂತ ಜನಕ್ಕೆ, ಬಳಲಿದ ವ್ಯಾಪಾರೋದ್ಯಮಿಗಳಿಗೆ ಸಂತೋಷವನ್ನು ಕೊಡುವುದೇ ಇಂಥ ಮಹಿಳೆಯರ ಕೆಲಸ. ಮಿಂಚುವ ದಟ್ಟ ಕೇಶರಾಶಿಗಳಿಂದ, ಆಶ್ಚರ್ಯಕರವಾಗಿ ಸಿದ್ಧಗೊಳಿಸಿ ಥಳಕುಬೆಳಕಿನ ಕಿಂಕಾಪು ಉಡುಪುಗಳಿಂದ, ಒನಪು ಒಯ್ಯಾರಗಳಿಂದ ಜನಮನವನ್ನು ಆಕರ್ಷಿಸುವ ಗೇಷ ರಮಣಿಯರಿಂದ ಜಪಾನಿನ ಪ್ರಮುಖ ಪಟ್ಟಣಗಳ ಜೀವನ ಆಕರ್ಷಕವಾಗಿ ರೂಪಿಸಲ್ಪಟ್ಟಿದೆ. ಹೊಳಪಿನ ಕಾಂತಿಯುತ ದೇಹಕ್ಕೆ ಆಕರ್ಷಕ ಉಡುಪನ್ನು ಧರಿಸಿದ ಇವರು ಪದ್ಯಗಳನ್ನು ಹಾಡುವುದು, ರಸಿಕೋಕ್ತಿಯೊಂದಿಗೆ ಸಂಭಾಷಿಸುವುದು, ನರ್ತಿಸುವುದು ಅಲ್ಲದೇ ಸ್ಯಾಮಿಸೆನ್ ವಾದ್ಯದಲ್ಲಿ ಜಪಾನೀ ಸಂಗೀತದ ಮಾಧುರ್ಯವನ್ನು ಹೊಮ್ಮಿಸುವುದು ಮುಂತಾದ ಕಲಾವಿಲಾಸಗಳಲ್ಲಿ ನಿಪುಣರು. ಸಂತೋಷ ಕೂಟಗಳಲ್ಲಿ ಸೇರುವ ರಸಿಕರ ಮನತಣಿಸಲು ಇವರನ್ನು ಕರೆಸಲಾಗುತ್ತದೆ. ಸಾಂಪ್ರದಾಯಿಕ ಶಿಷ್ಟಾಚಾರಗಳ ಒಡತಿಯರಾದ ಇವರು ಸಾಮಾನ್ಯವಾಗಿ ತಮ್ಮ ವೃತ್ತಿಯಲ್ಲಿ ಅಗ್ರಗಣ್ಯರು. ಅಲ್ಲದೆ ತಮ್ಮ ಆಶ್ರಯದಾತರಲ್ಲಿ ನಿಷ್ಠೆಯಿಂದ ನಡೆದು ವಿಶ್ವಾಸಕ್ಕೆ ಪಾತ್ರರಾಗುವಂಥವರು. ರಾಜಕಾರಣಿಗಳ ಅಥವಾ ಔದ್ಯಮಿಕ ವ್ಯಕ್ತಿಗಳ ಮಹತ್ತ್ವದ ಸಭೆ, ಪರಿಷತ್ತುಗಳು ಹಿಂದಿನಿಂದಲೂ ನಡೆಯುವುದು ಪ್ರಮುಖ ಗೇಷ ಮಂದಿರಗಳಲ್ಲಿಯೇ. ಆದರೂ ಗೇಷೆಯರ ಕಿವಿಯ ಮೇಲೆ ಅನಿವಾರ್ಯವಾಗಿ ಬಿದ್ದ ವಿಷಯಗಳು ಹೊರಬರುವುದು ತೀರ ಅಪರೂಪ. ಅಷ್ಟರಮಟ್ಟಿಗೆ ಅವರದು ನಿಯತ್ತಿನ ನಡತೆ.

Typical nape make-up on a maiko (Note the red collar)
Maiko playing the game "konpira fune fune" with a female patron

ಜಪಾನಿನಲ್ಲಿ ಹಿಂದೊಂದು ಕಾಲದಲ್ಲಿ ಗ್ರಾಮೀಣ ಕುವರಿಯರನ್ನು ಅಪಹರಿಸಿ ತರಬೇತುಗೊಳಿಸಿ ರಾಜಗೃಹಗಳಿಗೆ ರವಾನಿಸುತ್ತಿದ್ದರು. ಹೀಗೆ ರವಾನಿಸಲ್ಪಟ್ಟ ಹುಡುಗಿಯರು ಹಗಲಿನಲ್ಲಿ ಊಟದ ಪರಿಚಾರಿಕೆಯರಾದರೆ, ರಾತ್ರಿಯಲ್ಲಿ ನೃತ್ಯ ವಾದ್ಯಗಳೊಂದಿಗೆ ವಿನೋದವನ್ನೊದಗಿಸುತ್ತಿದ್ದರು. ಇದೇ ಪದ್ಧತಿ ಮುಂದುವರಿದು, ಕಾಲಾಂತರದಲ್ಲಿ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿ, ಗೇಷ ವ್ಯವಸ್ಥೆಯಾಗಿ ಮಾರ್ಪಟ್ಟಿತು.

Two senior maiko performing a dance.

ಉದಯೋನ್ಮುಖ ಗೇಷೆಯರು ಬಹು ತೀವ್ರವಾಗಿ ತಮ್ಮ ಜೀವನಕ್ರಮದಲ್ಲಿ ಮೇಲೇರುತ್ತಾರೆ. ಪ್ರಾರಂಭದಿಂದ 16-18 ನೆಯ ವರ್ಷದ ವರೆಗೆ ಹಾಡು, ನೃತ್ಯ, ಸಂಗೀತ, ಸಾಂಪ್ರದಾಯಿಕ ಶಿಷ್ಟಾಚಾರದ ನಡೆವಳಿಕೆ, ಬರೆವಣಿಗೆ, ಜೊತೆಗೆ ಹೂದಾನಿಗಳ ಹೊಂದಾಣಿಕೆ, ಚಹಕೂಟಗಳ ವ್ಯವಸ್ಥೆ ಮುಂತಾದ ವಿಷಯಗಳಲ್ಲೆಲ್ಲ ಇವರಿಗೆ ತರಬೇತಿ ಕೊಡಲಾಗುವುದು. ತಮ್ಮ ವೃತ್ತಿಯಲ್ಲಿ ಪರಿಣಿತರಾದಂತೆ ಇವರು ಹೆಚ್ಚೆಚ್ಚು ಕರ್ತವ್ಯದಕ್ಷರಾಗುವರು. ಪ್ರೌಢವಯಸ್ಕರಾದಂತೆ ಪ್ರಮುಖ ಗೇಷ ಮಂದಿರಗಳಲ್ಲಿ ಇವರು ಸಂಚಾಲಕಿಯರಾಗಬಹುದು ಇಲ್ಲವೆ ಮದುವೆಯಾಗಿ ಗೃಹಕೃತ್ಯದಲ್ಲಿ ತೊಡಗಬಹುದು. ಗೇಷೆಯರೆಲ್ಲ ವಾರಾಂಗನೆಯರಲ್ಲ. ಆದರೆ ಯಾವ ರೀತಿಯ ನಿರ್ಬಂಧವೂ ಇಲ್ಲದೆ ಶ್ರೀಮಂತರ ಪ್ರೀತಿಗೆ ಪಾತ್ರರಾಗಿ ಅವನ ಆಶ್ರಯದಲ್ಲಿದ್ದು ಬಿಡುವವರೇ ಹೆಚ್ಚು. ಗೇಷೆಯರು ಜಪಾನಿನ ಪ್ರಧಾನಿಗಳನ್ನು ವಿವಾಹವಾದ ಉದಾಹರಣೆಗಳು ಉಂಟು. ಗೇಷೆಯರ ಸಾಮಾಜಿಕ ಪ್ರತಿಷ್ಠೆ ಕಾಲದೇಶಗಳಿಗೆ ತಕ್ಕಂತಿರುತ್ತದೆ. ಈಗ ಇವರನ್ನು 5 ರಿಂದ 10 ವರ್ಷಗಳ ಅವಧಿಯ ಮೇರೆಗೆ ಗೇಷ ಗೃಹಗಳಲ್ಲಿ ನಿಯಮಿಸಲಾಗುತ್ತಿದೆ. ಅದಕ್ಕಾಗಿ ನಿರ್ದಿಷ್ಟಪಡಿಸಿದ ಹಣ ಗೇಷೆಯರ ತಂದೆತಾಯಿಗಳಿಗೆ ಇಲ್ಲವೆ ವಾರಸುದಾರರಿಗೆ ಸೇರುತ್ತದೆ. ಸೌಂದರ್ಯಕ್ಕೆ ತಕ್ಕಂತೆ ಸಂಭಾವನೆ. ಗೇಷೆಯರ ಬಹುಪಾಲು ಆದಾಯವೆಲ್ಲ ಅವರ ಸೌಂದರ್ಯ ಹಾಗೂ ಕಲಾಸಾಧನೆಗಾಗಿ ಹಣವ್ಯಯಮಾಡಿದ ಒಡತಿಯರಿಗೆ ಸಲ್ಲುವುದು.

ಟೋಕಿಯೊ, ಕಿಯೋಟೊ, ಒಕಾಸಾದಂಥ ನಗರಗಳಲ್ಲಿ ಗೇಷ ಮಹಿಳೆಯರು ನಿರ್ದಿಷ್ಟ ಸಂಖ್ಯೆಯಲ್ಲಿದ್ದಾರಾದರೂ ಸಾಧಾರಣವಾಗಿ ಎಲ್ಲ ಕಡೆಗಳಲ್ಲಿಯೂ ಅವರನ್ನು ಕಾಣಬಹುದು. ಗೇಷ ಶಿಕ್ಷಣವೀಯುವ ಪ್ರಮುಖ ಶಾಲೆಯೊಂದು ಜಪಾನಿನ ಟೋಕಿಯೋದ ಗಿಯಾನ್ ಅಮ್ಯೂಸ್ಮೆಂಟ್ ಕ್ವಾರ್ಟರ್ಸ್‌ ಎಂಬಲ್ಲಿದೆ. ಟೋಕಿಯೋದ ಮುಖ್ಯ ಸ್ಥಳಗಳಲ್ಲಿ ಗೇಷಾಗೃಹಗಳು ಒಂದೇ ಕಡೆಗೆ ಗುಂಪುಗುಂಪಾಗಿ ನೆಲೆಗೊಂಡಿವೆ.


ಇತ್ತೀಚಿನ ದಿನಗಳಲ್ಲಿ ಬದಲಾಗುತ್ತ ನಡೆದಿರುವ ಜಪಾನಿನ ಜೀವನಕ್ಕೆ ಅನುಗುಣವಾಗಿ ಗೇಷೆಯರು ಕಣ್ಮರೆಯಾಗುತ್ತ ನಡೆದಿದ್ದಾರೆ. ಆದ್ದರಿಂದ ಜಪಾನಿನ ನವಪೀಳಿಗೆಗೆ ಗೇಷ ಮನೋರಂಜನ ಕೂಟಗಳು ಕೇವಲ ಸಾಂಪ್ರದಾಯಿಕವೆನಿಸಿವೆ. ಮಹಾಯುದ್ಧಕ್ಕೆ ಪುರ್ವದಲ್ಲಂತೂ ಗೇಷೆಯರ ಒಡನಾಟವೆಂದರೆ ಪ್ರತಿಷ್ಠೆಯ ಸಂಕೇತವೆಂದು ಪರಿಗಣಿತವಾಗಿತ್ತು. ಪ್ರಚಲಿತ ಪಾಶ್ಚಾತ್ಯ ನೃತ್ಯ ಮತ್ತು ಮನೋರಂಜನ ವಿಧಾನಗಳಿಂದಾಗಿ ಗೇಷೆಯರ ಅದೃಷ್ಟ ಮಂಕಾಗುತ್ತಿದೆ. ಇಂಥ ನವ ವಿಧಾನಗಳೊಂದಿಗೆ ಸ್ಪರ್ಧೆಗಿಳಿಯಲು ಅನೇಕ ಗೇಷ ಸ್ತ್ರೀಯರು ಪಾಶ್ಚಾತ್ಯ ಶೈಲಿಯ ನೃತ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಆದರೂ ಭದ್ರ ಬುನಾದಿಯ ಮೇಲೆ ನಿಂತ ಜಪಾನಿನ ಇತರ ಹಳೆಯ ಮೌಲ್ಯಗಳಂತೆ, ಗೇಷ ಪದ್ಧತಿಯೂ ಬಹುಕಾಲ ಜಪಾನಿನ ಜನಜೀವನದಲ್ಲಿ ಉಳಿದುಕೊಳ್ಳಬಹುದಾಗಿದೆ. ಕೆಲವು ಪ್ರಸಿದ್ಧ ಗೇಷ ಮಹಿಳೆಯರ ಆತ್ಮಕಥೆಗಳು ಕಳೆದೆರಡು ದಶಕಗಳಲ್ಲಿ ಪ್ರಕಟಗೊಂಡಿದ್ದು, ಈ ಪೈಕಿ ಮೆಮೊಯರ್ಸ್‌ ಆಫ್ ಎ ಗೇಷ (1997) ಹಾಗೂ ಗೇಷ ಆಫ್ ಗಿಯಾನ್ (2002) ಇವನ್ನು ಹೆಸರಿಸಬಹುದು.

"https://kn.wikipedia.org/w/index.php?title=ಗೇಷ&oldid=528738" ಇಂದ ಪಡೆಯಲ್ಪಟ್ಟಿದೆ