ಗೃಹನಿರ್ಮಾಣ ಸಹಕಾರ ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಗರಾಭಿವೃದ್ಡಿ ಮಂಡಳಿ ನಿರ್ಮಿಸಿದ ನವೀನ ಮಾದರಿ ಮನೆಗಳ ಸಾಲು

ಪರಸ್ಪರ ಸಹಾಯದ ಮೂಲಕ ಸ್ವಸಹಾಯ - ಎಂಬ ತತ್ತ್ವದ ತಳಹದಿಯ ಮೇಲೆ ರಚಿತವಾದ ಸಹಕಾರ ವ್ಯವಸ್ಥೆಯ ಚೌಕಟ್ಟಿನೊಳಗೆ ಜನಕ್ಕೆ ವಸತಿಸೌಲಭ್ಯವನ್ನೊದಗಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಘ (ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ). ಅಲ್ಪ ವರಮಾನವಿರುವವರು ಸಹಕಾರಿ ಗೃಹನಿರ್ಮಾಣ ಯೋಜನೆಯ ಅಡಿಯಲ್ಲಿ ಸಂಘಟಿತರಾಗಿ, ತಮಗೆ ಬೇಕಾದ ನಿವೇಶನಗಳನ್ನೋ ಮನೆಗಳನ್ನೋ ಪಡೆಯುತ್ತಾರೆ. ಸಹಕಾರ ಸಂಘದ ಮೂಲಕ ಸಂಘಟಿತರಾದ ಅವರು ಸಂಘದ ಮೂಲಕ ಸದಸ್ಯರಿಗಾಗಿ ಮನೆಗಳನ್ನು ಕಟ್ಟಬಹುದು, ಸದಸ್ಯರಿಗೆ ಸಾಲ ಕೊಡಬಹುದು, ನಿವೇಶನಕ್ಕಾಗಿ ಹಣ ಒದಗಿಸಬಹುದು. ವೈಯಕ್ತಿಕವಾಗಿ ಸಾಧಿಸಲು ಕಷ್ಟವಾದ ಒಳಚರಂಡಿ, ಉಪರಸ್ತೆ, ಉದ್ಯಾನ ಇತ್ಯಾದಿಗಳನ್ನು ಸಂಘದ ಮೂಲಕ ಸದಸ್ಯರು ತಮ್ಮ ವಸತಿ ಸ್ಥಳದಲ್ಲಿ ಸಾಧಿಸಬಹುದು. ಆರ್ಥಿಕವಾಗಿ ಅಶಕ್ತರಾದವರಿಗೆ, ಈ ಶಕ್ತಿ ನೀಡಬಲ್ಲ ಸಾಧನ ಸಹಕಾರ.


ಜೊತೆಗೂಡುವುದರಿಂದ ಜನರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಬೆಳೆದು, ಸಹಕಾರ ಮನೋಭಾವ ಮೂಡುತ್ತದೆ; ತಮ್ಮ ಸಂಸ್ಥೆಯ ಹೊಣೆಗಾರಿಕೆ ನಿರ್ವಹಿಸಿ, ತಮಗೆ ಅಗತ್ಯವಾದ ವಸತಿ ಮುಂತಾದ ಸೌಲಭ್ಯಗಳನ್ನು ಪಡೆಯುವ ಆತ್ಮವಿಶ್ವಾಸ ಉದಯಿಸುತ್ತದೆ. ಸಹಕಾರಿ ಗೃಹನಿರ್ಮಾಣ ಸಂಸ್ಥೆಗಳು ಸ್ವೈಚ್ಛಿಕ ಸಂಸ್ಥೆಗಳಾದ್ದರಿಂದ, ಸಮಾನ ಅಧಿಕಾರವುಳ್ಳ ಸದಸ್ಯರ ಆಡಳಿತಕ್ಕೆ ಒಳಪಟ್ಟಿರುವುದರಿಂದ ಹೆಚ್ಚು ಪರಿಣಾಮಕಾರಿಯೂ ವಸತಿ ಸಮಸ್ಯೆಗಳನ್ನು ಬಗೆಹರಿಸಬಲ್ಲವು. ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳ ಸಾಧನೆಯ ಪರಿಮಿತಿಯಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಗೃಹನಿರ್ಮಾಣ ಕಾರ್ಪೊರೇಷನ್ಗಳು ಸ್ಥಾಪಿತವಾಗಿ, ವಸತಿ ಸಮಸ್ಯೆಯನ್ನು ನಿವಾರಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿವೆ. ಲಾಭದ ಉದ್ದೇಶ ಇಲ್ಲದೆ ಕನಿಷ್ಠವೆಚ್ಚದಲ್ಲಿ ಅತ್ಯಲ್ಪ ಆಡಳಿತ ಖರ್ಚಿನಿಂದ ಕಾರ್ಯಸಾಧಿಸುವ ಸಹಕಾರಿ ಗೃಹನಿರ್ಮಾಣ ಸಂಘಗಳು ಬೃಹತ್ ಗಾತ್ರದಲ್ಲಿ ನಿವೇಶನಗಳಿಗಾಗಿ ಭೂಮಿಯನ್ನು ಕೊಳ್ಳುವುದರ ಜೊತೆಗೆ ಮರಮುಟ್ಟು ಮತ್ತಿತರ ಸಾಮಗ್ರಿಗಳನ್ನು ಒಟ್ಟೊಟ್ಟಿಗೆ ಕಡಿಮೆ ವೆಚ್ಚದಲ್ಲಿ ಪಡೆಯಬಲ್ಲುವು.[೧]


ಖಾಸಗಿ ಸಂಸ್ಥೆಗಳು ಅಲ್ಪ ಅಥವಾ ಮಧ್ಯಮ ಆದಾಯದವರಿಗಾಗಿ ಸೂಕ್ತ ವಸತಿಗಳನ್ನು ಒದಗಿಸಲು ಅಸಮರ್ಥವಾಗಿರುವಾಗ, ಸಹಕಾರ ಸಂಘ ಈ ನಿಟ್ಟಿನಲ್ಲಿ ಸಫಲತೆಗಳಿಸಬೇಕೆಂದು ನಿರೀಕ್ಷಿಸುವುದು ಸಹಜ. ಆರ್ಥಿಕ ಯೋಜನೆಯಲ್ಲಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಸಾಧಿಸಿ ಜನತೆಯಲ್ಲಿ ಅರಿವು ಮೂಡಿಸಿ ನೆರವು ನೀಡಬಲ್ಲ ಸೂಕ್ತ ಸಾಧನ ಕೂಡ ಇದಾಗಿದೆ. ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಹಕಾರಿ ಗೃಹನಿರ್ಮಾಣ ಚಳವಳಿ ಅದ್ಭುತ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ ಮತ್ತು ಬಲ್ಗೇರಿಯ, ಜರ್ಮನಿ, ಸ್ವಿಟ್ಜರ್ಲೆಂಡ್ಗಳಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳ ಸಾಧನೆಗಳು ಮಹತ್ತ್ವದ್ದಾಗಿವೆ. ಬ್ರಿಟನ್‍ನಲ್ಲಿ ಗೃಹನಿರ್ಮಾಣ ಸಂಘಗಳು ಸಾಲ ನೀಡುವುದರ ಜೊತೆಗೆ ಕಟ್ಟಡ ರಚನೆಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಿ ಹಂಚುತ್ತವೆ. ತಜ್ಞ ವಾಸ್ತುಶಿಲ್ಪಿಗಳ ನೆರವನ್ನು ಒದಗಿಸುತ್ತವೆ.

ಭಾರತ[ಬದಲಾಯಿಸಿ]

ಭಾರತದಲ್ಲಿ 1915 ರಿಂದ ಈ ಚಳವಳಿ ಕ್ರಮವಾಗಿ ಬೆಳೆದಿದೆ. ರಾಜ್ಯ ಸರ್ಕಾರಗಳು ಸುಲಭ ಬಡ್ಡಿದರದಲ್ಲಿ ಸಾಲ ನೀಡಿ, ನಿವೇಶನಗಳನ್ನು ಒದಗಿಸಿ ಕಟ್ಟಡ ಸಾಮಗ್ರಿಗಳನ್ನು ಪುರೈಸಿ ನೆರವಾಗುತ್ತಿವೆ.

ಇಂದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ತಾನ, ಮತ್ತು ಪಶ್ಚಿಮ ಬಂಗಾಳದಲ್ಲಿ ರಾಜ್ಯಮಟ್ಟದ ಗೃಹ ನಿರ್ಮಾಣ ಸಂಘಗಳು ಕೆಲಸ ಮಾಡುತ್ತಿವೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಹಕಾರಿ ಗೃಹ ಹಣಕಾಸು ಸಂಸ್ಥೆಗಳು ಹಲವು ಮಹಡಿಗಳ ಮನೆ ಕಟ್ಟಿಸಲು ಗೃಹ ನಿರ್ಮಾಣ ಸಂಘಗಳಿಗೆ ಹಣ ಒದಗಿಸುತ್ತವೆ. ತಮಿಳುನಾಡಿನಲ್ಲಿ ಗೃಹಅಡಮಾನ ಸಂಘಗಳು ಪ್ರಾಥಮಿಕ ಗೃಹಅಡಮಾನ ಸಂಘಗಳ ಸದಸ್ಯರಿಗೆ ಹೊಸ ಮನೆಗಳನ್ನು ಕಟ್ಟಲು ಅಥವಾ ಹಳೆಯವನ್ನು ರಿಪೇರಿ ಮಾಡಲು ಹಣ ಒದಗಿಸುತ್ತಿವೆ. ಕರ್ನಾಟಕದಲ್ಲಿ ಗೃಹನಿರ್ಮಾಣ ಕಾರ್ಪೊರೇಷನ್ ತನ್ನ ಸದಸ್ಯ ಗೃಹನಿರ್ಮಾಣ ಸಂಘಗಳಿಗೆ ಅಥವಾ ಅದರ ಸದಸ್ಯರಿಗೆ ಗೃಹನಿರ್ಮಾಣಕ್ಕಾಗಿ ಹಣ ಕೊಡುತ್ತದೆ. ಇದ್ದ ಮನೆಯ ಬಡಾವಣೆ ಅಥವಾ ರಿಪೇರಿಗಾಗಿಯೂ ಪ್ರಾಥಮಿಕ ಸಂಘಗಳ ಸದಸ್ಯರಿಗೆ ಸಾಲ ಒದಗಿಸಲಾಗುತ್ತದೆ. ಅಲ್ಲದೆ ನಿವೇಶನಗಳನ್ನು ಅಥವಾ ಭೂಮಿಯನ್ನು ಕೊಳ್ಳಲು ಈ ಸಂಘಗಳಿಗೆ ಅಲ್ಪಾವಧಿ ಸಾಲವನ್ನು ಕಾರ್ಪೊರೇಷನ್ ಒದಗಿಸುತ್ತದೆ.


ಕೈಗಾರಿಕೆಯ ಅಭಿವೃದ್ಧಿ, ಜನಸಂಖ್ಯೆಯ ಹೆಚ್ಚಳ ಹಾಗೂ ನಗರಗಳ ಬೆಳೆವಣಿಗೆಯೊಂದಿಗೆ ವಸತಿಗಳ ಬೇಡಿಕೆಯೂ ತೀವ್ರ ಹೆಚ್ಚಿ, ಅದರ ಪುರೈಕೆ ಅತ್ಯಂತ ಜಟಿಲವೆನಿಸುವುದು ಸಹಜ. ಖಾಸಗಿ ಕ್ಷೇತ್ರದಲ್ಲಿ ಲಾಭೋದ್ದೇಶದಿಂದ ವಸತಿಗಳನ್ನು ನಿರ್ಮಿಸಬಹುದಾದರೂ, ಅವು ಅಸ್ತವ್ಯಸ್ತವಾಗಿದ್ದು, ಒಂದೆಡೆ ಭವ್ಯ ಸೌಧಗಳಿಗೂ ಇನ್ನೊಂದೆಡೆ ಕೊಳಚೆಪ್ರದೇಶಗಳಿಗೂ ಎಡೆ ಮಾಡಿಕೊಡಬಹುದು. ಸಹಕಾರ ಸಂಘಟನೆ ಮಾತ್ರವೇ ವ್ಯವಸ್ಥಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಬಲ್ಲುದು.

ಭಾರತದಲ್ಲಿ ಪ್ರಥಮ ಗೃಹನಿರ್ಮಾಣ ಸಹಕಾರ ಸಂಘ [[[ಮದ್ರಾಸ್]] ಪ್ರ್ರಾಂತದಲ್ಲಿ 1913-14ರಲ್ಲಿ ಸ್ಥಾಪಿತವಾಯಿತು. ಮುಂಬಯಿ ಆ ಬಳಿಕ ಹೆಜ್ಜೆಯಿಟ್ಟು ಪ್ರಖ್ಯಾತವಾದ ಸಾರಸ್ವತ ಸಹಕಾರ ವಸತಿ ಸಂಘವನ್ನು 1915ರಲ್ಲಿ ಸ್ಥಾಪಿಸಿತು. ಮುಂದೆ ಇತರ ರಾಜ್ಯಗಳೂ ಈ ದಿಸೆಯಲ್ಲಿ ಮುನ್ನಡೆದುವು.

ಆದರೂ ಈ ಕ್ಷೇತ್ರದಲ್ಲಿ ಸಹಕಾರ ಚಳವಳಿ ಸಾಧಿಸಿರುವ ಪ್ರಗತಿ 1954-55ರ ವರೆಗೂ ಗಣನೀಯವಾಗಿರಲಿಲ್ಲ. ಇಡೀ ದೇಶದಲ್ಲಿ ಈ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಿರ್ಮಿತವಾದ ವಸತಿಗಳು ಪಟ್ಟಣಗಳಲ್ಲಿ ಸುಮಾರು 24.327 ಹಾಗೂ ಗ್ರಾಮ ಪ್ರದೇಶದಲ್ಲಿ 2.345. ಮುಂದಿನ ಐದು ವರ್ಷಗಳಲ್ಲಿ ಸಾಧಿಸಲಾದ ಪ್ರಗತಿ ಹೀಗಿದೆ:


ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ವಸತಿ ನಿರ್ಮಾಣಕ್ಕಾಗಿ ರೂ. 38.5 ಕೋಟಿ ಒದಗಿಸಲಾಯಿತು. ಇದು ಎರಡನೆಯ ಯೋಜನೆಯಲ್ಲಿ ರೂ. 84 ಕೋಟಿಗೂ ಮೂರನೆಯ ಯೋಜನೆಯಲ್ಲಿ ರೂ. 122 ಕೋಟಿಗೂ ಏರಿತು. ನಾಲ್ಕನೆಯ ಯೋಜನೆಯಲ್ಲಿ ರೂ. 96.70 ಕೋಟಿ ಅಂದಾಜು ಮಾಡಲಾಗಿದೆ.

ಹಿಂದಿನ ಮೈಸೂರು ರಾಜ್ಯದಲ್ಲಿ ಗೃಹನಿರ್ಮಾಣವನ್ನು ತ್ವರಿತಗೊಳಿಸಲು 1950ರಲ್ಲಿ ಮೈಸೂರು ರಾಜ್ಯ ಸಹಕಾರಿ ಗೃಹನಿರ್ಮಾಣ ಕಾರ್ಪೊರೇಷನನ್ನು ಸ್ಥಾಪಿಸಲಾಯಿತು. ಅದು ಇತರ ವಸತಿ ನಿರ್ಮಾಣ ಸಹಕಾರ ಸಂಘಗಳಿಗೆ ಹಣ ಒದಗಿಸುವ ಕೇಂದ್ರಸಂಸ್ಥೆಯಾಗಿದೆ. ಈ ಸಂಸ್ಥೆಗೆ ಸರ್ಕಾರದಿಂದ ಹಣ ದೊರೆಯುತ್ತದೆ. ಸರ್ಕಾರ ಅಲ್ಪ ವರಮಾನ ಮತ್ತು ಮಧ್ಯಮ ವರಮಾನದವರ ವಸತಿ ಯೋಜನೆಯನ್ನು ಆರಂಭಿಸಿದಾಗ ಸಹಕಾರ ಕ್ಷೇತ್ರಗಳಲ್ಲಿ ಈ ಕಾರ್ಯ ನಿರ್ವಹಿಸುವ ಹೊಣೆಯನ್ನು ಈ ಕಾರ್ಪೊರೇಷನ್ಗೆ ವಹಿಸಿಕೊಡಲಾಯಿತು.

ಇವಲ್ಲದೆ ರಾಜ್ಯದಲ್ಲಿ ಹರಿಜನ-ಗಿರಿಜನ ವಸತಿ ನಿರ್ಮಾಣ ಕಾರ್ಪೊರೇಷನ್ ಕೂಡ ಇದೆ. ಅದು ಹರಿಜನ-ಗಿರಿಜನ ಗೃಹನಿರ್ಮಾಣ ಸಹಕಾರ ಸಂಘಗಳಿಗೆ ಹಣ ಒದಗಿಸುತ್ತದೆ.

ಕಳೆದರೆಡು ದಶಕಗಳಿಂದ ಹಲವಾರು ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು, ವಿಶ್ವವಿದ್ಯಾನಿಲಯಗಳು ತಮ್ಮ ಉದ್ಯೋಗಿಗಳಿಗೆ ಗೃಹಾವಕಾಶ ಕಲ್ಪಿಸಿಕೊಡುವ ಉದ್ದೇಶ ದಿಂದ ತಮ್ಮದೇ ಆದ ಗೃಹ ನಿರ್ಮಾಣ ಸಂಘಗಳನ್ನು ಸ್ಥಾಪಿಸಿಕೊಂಡು ಬಡಾವಣೆ ಗಳನ್ನು ನಿರ್ಮಿಸುತ್ತಿವೆ. ಅಲ್ಲದೆ ಖಾಸಗಿ ಗೃಹನಿರ್ಮಾಣ ಸಂಸ್ಥೆಗಳೂ ಇಂದು ಭಾರತಾ ದ್ಯಂತ ವ್ಯಾಪಿಸಿದ್ದು ಬಡಾವಣೆಗಳ ನಿರ್ಮಾಣದಲ್ಲಿ ನಿರತವಾಗಿವೆ.

ಉಲ್ಲೇಖಗಳು[ಬದಲಾಯಿಸಿ]