ವಿಷಯಕ್ಕೆ ಹೋಗು

ಗುಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೃಂಗವೇರಪುರದ ರಾಜ. ದಶರಥನ ಆಪ್ತಮಿತ್ರ. ಶ್ರೀರಾಮ ಅಯೋಧ್ಯೆಯಿಂದ ಅರಣ್ಯಕ್ಕೆ ಹೋಗುವಾಗ ಈತನಿಂದ ಸತ್ಕೃತನಾಗಿ ಒಂದು ರಾತ್ರಿ ಈತನಲ್ಲಿ ತಂಗಿದ್ದ. ನಾರುಬಟ್ಟೆಯನ್ನುಟ್ಟು ವನವಾಸಿಯಾಗಿದ್ದ ರಾಜಕುಮಾರ ರಾಮನನ್ನು ಕಂಡು ಗುಹನಿಗೆ ಆದ ದುಃಖ ಹೇಳತೀರದು. ತನ್ನ ಸರ್ವಸ್ವವನ್ನೂ ರಾಮನಿಗೆ ಒಪ್ಪಿಸಲು ಗುಹ ಸಿದ್ಧನಾಗಿದ್ದ. ಗುಹನನ್ನು ಅಪ್ಪಿ ಆಲಂಗಿಸಿದ ವಚನಬದ್ಧ ರಾಮನಿಗೆ ಯಾವುದೂ ಬೇಡ. ರಾಜೋಚಿತ ಭೋಜನ, ಸುಖಕರ ಶಯನ ಎಲ್ಲವನ್ನೂ ನಸುನಗುತ್ತಲೇ ನಿರಾಕರಿಸಿದ. ತಮ್ಮನ್ನು ಹಿಂಬಾಲಿಸುತ್ತಿದ್ದ ಜನರಿಂದ ಪಾರಾಗಲು ರಾಮನಿಗೆ ಗಂಗಾನದಿ ದಾಟಬೇಕಿತ್ತು. ಹಾಗಾಗಿ ರಾಮ, ಗುಹನ ನೆರವನ್ನು ಕೋರಿದ. ಮಾರನೆಯ ದಿನ ಗುಹ ತನ್ನ ಪರಿವಾರದವರ ಮೂಲಕ ದೋಣಿಗಳಲ್ಲಿ ಸೀತಾರಾಮಲಕ್ಷ್ಮಣರನ್ನು ಗಂಗೆಯ ದಕ್ಷಿಣತೀರಕ್ಕೆ ದಾಟಿಸಿದ. ಶ್ರೀರಾಮ ಚಿತ್ರಕೂಟ ಪರ್ವತದಲ್ಲಿದ್ದಾಗ ಭರತ ಅಣ್ಣನನ್ನು ಹಿಂದಕ್ಕೆ ಕರೆತರಲು ಸೇನಾಸಮೇತನಾಗಿ ಬಂದನಷ್ಟೆ. ಭರತನ ಉದ್ದೇಶದ ವಿಷಯವಾಗಿ ಸಂಶಯಗೊಂಡ ಗುಹ ಭರತನನ್ನು ಎದುರಿಸಲು ಸಿದ್ಧನಾದ. ಭರತನ ಆಂತರ್ಯ ಏನೆಂಬುದು ಸ್ಪಷ್ಟವಾದ ಮೇಲೆ ಗುಹ ಆತನನ್ನು ಉಪಚರಿಸಿ ಅವನನ್ನೂ ಅವನ ಪರಿವಾರವನ್ನೂ ಗಂಗೆಯ ಆಚೆಯ ದಡಕ್ಕೆ ಸೇರಿಸಿದ. ಈ ವೃತ್ತಾಂತ ರಾಮಾಯಣದ ಅಯೋಧ್ಯಾಕಾಂಡದಲ್ಲಿದೆ.

"https://kn.wikipedia.org/w/index.php?title=ಗುಹ&oldid=718729" ಇಂದ ಪಡೆಯಲ್ಪಟ್ಟಿದೆ