ಗುಮ್ಮಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಜ್ ಮಹಲ್

ಗುಮ್ಮಟ ಎಂದರೆ ಗೋಳಾಕೃತಿಯ, ಶಂಕ್ವಾಕೃತಿಯ ಅಥವಾ ಅಂಡಾಕಾರದ ಮೇಲ್ಛಾವಣಿ (ಡೋಂ). ಈ ಆಕೃತಿಯ ಗುಮ್ಮಟಗಳನ್ನು ರಚಿಸಬೇಕಾದರೆ ಇವಕ್ಕೆ ಸರಿಹೊಂದುವ ನಕ್ಷೆಯಲ್ಲಿ ಗೋಡೆಯನ್ನು ಸಂವೃತಿಸುವಂತೆ ಕಟ್ಟಿ ಅದರ ಮೇಲೆ ಕಮಾನುರೂಪದ ಗೋಡೆಗಳನ್ನು ಆವರಿಸಿರುವಂತೆ ಎಬ್ಬಿಸಿ ಪೂರೈಸಬೇಕಾಗುತ್ತದೆ. ಹೀಗೆ ಸುತ್ತಲೂ ಆವರಿಸುವ ಗುಮ್ಮಟ ಬುಡದಲ್ಲಿ ಸಾಕಷ್ಟು ದಪ್ಪವಿದ್ದು ಕ್ರಮೇಣ ಕಮ್ಮಿಯಾಗುತ್ತ ತುದಿಯಲ್ಲಿ, ಎಂದರೆ ಗುಮ್ಮಟದ ನೆತ್ತಿಯ ಮಟ್ಟದಲ್ಲಿ ಕನಿಷ್ಠವಾಗಿರುತ್ತದೆ. ಚೌಕಾಕಾರದ ನಕ್ಷೆಯ ಕೋಣೆಗೆ ಗೋಳಾಕಾರದ ಗುಮ್ಮಟವನ್ನೊದಗಿಸಬೇಕಾದಾಗ ಆ ಕೋಣೆಯ ಗೋಡೆಗಳ ಮೇಲ್ಭಾಗವನ್ನು ಚೌಕದಿಂದ ಅಷ್ಟಕೋನಾಕೃತಿಗೂ, ಕ್ರಮೇಣ ವೃತ್ತಾಕೃತಿಗೂ ಮಾರ್ಪಡಿಸಬೇಕಾಗುತ್ತದೆ. ಹೀಗೆಯೇ ಇತರ ಆಕಾರದ ಗುಮ್ಮಟಗಳಿಗೋಸ್ಕರ ಅವುಗಳ ಕೆಳಭಾಗದ ಕೋನೆಗಳ ನಕ್ಷೆಯನ್ನು ಅನುಸಾರವಾಗಿ ಬದಲಾಯಿಸಬೇಕಾಗುತ್ತದೆ.

ಇತಿಹಾಸ[ಬದಲಾಯಿಸಿ]

ಗುಮ್ಮಟಗಳ ಬಳಕೆ ರೋಮನರ ಕಾಲದಲ್ಲಿ ಪ್ರಾರಂಭವಾಯಿತೆನ್ನಬಹುದು. ಪ್ರಾಚೀನ ಗುಮ್ಮಟಗಳು ರೋಮ್ ಸಾಮ್ರಾಜ್ಯದಲ್ಲಿ ಅಲ್ಲದೆ ಅದೇ ಕಾಲದ ಇತರ ರಾಜ್ಯಗಳಲ್ಲಿ ಕಂಡುಬರುವುದಿಲ್ಲ. ಭಾರತದಲ್ಲಿ ಗುಮ್ಮಟಾಕಾರದ ಸ್ತೂಪಗಳೇ ಮೊದಲಾದ ಕಟ್ಟಡಗಳು ಬೌದ್ಧಕಾಲದಲ್ಲಿ ರಚಿತವಾಗಿದ್ದರೂ ಇವೆಲ್ಲ ಘನ ಗೋಳಗಳಾಗಿದ್ದು ಟೊಳ್ಳು ಗೋಳಾಕಾರದ ಗುಮ್ಮಟಗಳೆಲ್ಲವೂ ರೋಮನರ ಕಾಲದಲ್ಲಿಯೇ ಜನಿತವಾದವು. ವೃತ್ತಕಮಾನುಗಳು ಆರಂಭವಾದದ್ದು ರೋಮನರ ಕಾಲದಲ್ಲಿ ಎಂಬುದು ಖಚಿತವಾಗಿರುವುದರಿಂದ ಕಮಾನಿನ ಆಧಾರದ ಮೇಲೆಯೇ ಗುಮ್ಮಟಗಳು ಜನನವಾದುವೆಂದು ಊಹಿಸಬಹುದು. ರೋಮನರ ಕಾಲದಿಂದೀಚೆಗೆ ರಚಿತವಾದ ಗುಮ್ಮಟಗಳೆಲ್ಲವೂ ಒಂದು ವಿಧದಲ್ಲಿ ಅಲ್ಲದಿದ್ದರೆ ಇನ್ನೊಂದು ವಿಧದಲ್ಲಿ ರೋಮನರ ಆದಿ ಗುಮ್ಮಟಗಳ ಅನುಕರಣಗಳೇ. ಯವನರು ಕೂಡ ಕ್ರಿಸ್ತಶಕದ ತರುಣದಲ್ಲಿ ರೋಮನ್ ಗುಮ್ಮಟಗಳಿಂದ ಪ್ರಭಾವಿತರಾಗಿ ಅವುಗಳ ಆಕೃತಿಯಲ್ಲಿ ಸ್ವಲ್ಪ ಮಾರ್ಪಡಿಸಿಕೊಂಡು ಯವನ ಗುಮ್ಮಟಗಳನ್ನು ತಮ್ಮ ಸಾಮ್ರಾಜ್ಯಗಳ ಎಲ್ಲ ಕಡೆಗಳಲ್ಲಿಯೂ ಹರಡಿದರು. ಯವನರು ಕಾಲಕ್ರಮೇಣ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದಮೇಲೆ ಯವನ ಗುಮ್ಮಟಗಳು ಇಲ್ಲಿಯೂ ರಚಿಸಲ್ಪಟ್ಟವು. ಬಹಮನಿ ರಾಜ್ಯದೊಂದಿಗೆ ಶುರುವಾದ ಗುಮ್ಮಟಗಳು ಕ್ರಮೇಣ ಹೆಚ್ಚಿ ಮೊಗಲರ ಕಾಲದ ವೇಳೆಗೆ ಅನೇಕ ರೀತಿಯಲ್ಲಿ ಅರಮನೆಗಳು, ಗೋರಿಗಳು, ಮಸೀದಿಗಳು, ಪ್ರವೇಶದ್ವಾರಗಳು ಮುಂತಾದವುಗಳ ಛಾವಣಿಯಲ್ಲಿ ಹೇರಳವಾಗಿ ಪ್ರಯೋಗಿಸಲ್ಪಟ್ಟಿವೆ. ದಕ್ಷಿಣ ಭಾರತದಲ್ಲಿ ಬಿಜಾಪುರದ ಗೋಲ್‍ಗುಂಬಜ್ ಎಂಬ ಅದಿಲ್ ಷಾಹಿ ಗುಮ್ಮಟ ಪ್ರಸಿದ್ಧವಾದುದು. ಆಧುನಿಕ ವಾಸ್ತುಶಿಲ್ಪದಲ್ಲಿ ಗುಮ್ಮಟಗಳ ಬಳಕೆ ಕ್ಷಯಿಸಿದೆ ಎನ್ನಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುಮ್ಮಟ&oldid=909516" ಇಂದ ಪಡೆಯಲ್ಪಟ್ಟಿದೆ