ವಿಷಯಕ್ಕೆ ಹೋಗು

ಗುಪ್ತಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಧಾನಸಭೆಗಳಿಗೆ ಮತ್ತು ಚುನಾವಣೆ ಮಾಡಬೇಕಾದ ರಾಜಕೀಯ ಹುದ್ದೆಗಳಿಗೆ ಸ್ಪರ್ಧಿಗಳನ್ನು ಗೊತ್ತುಮಾಡಲೂ ಪಕ್ಷದ ಉದ್ದೇಶ, ರೀತಿ, ನೀತಿ ಇತ್ಯಾದಿಗಳನ್ನು ನಿರ್ಧರಿಸಲೂ ಗುಪ್ತವಾಗಿ ಸೇರುವ ಮುಖಂಡರ ಇಲ್ಲವೆ ಆಸಕ್ತರ ಕೂಟ (ಕಾಕಸ್).

ಇದಕ್ಕೆ ನಿರ್ಧರಿಸಲ್ಪಟ್ಟ ಸದಸ್ಯರಾಗಲಿ ನಿಯಮಾವಳಿಯಾಗಲಿ ಇರುವುದಿಲ್ಲ. ಇದರ ವ್ಯವಹಾರಗಳು ಯಾವ ಕಟ್ಟುಪಾಡಿಗೂ ಒಳಪಟ್ಟಿರುವುದಿಲ್ಲ. ಇದರಲ್ಲಿ ಸೇರಿರುವ ಮುಖಂಡರ ಪ್ರಭಾವದಿಂದಾಗಿ, ಇಲ್ಲವೆ ಪಕ್ಷದ ಹೆಚ್ಚು ಸಂಖ್ಯೆಯ ಸದಸ್ಯರು ಇದರಲ್ಲಿ ಆಸಕ್ತರಾಗಿಲ್ಲದಿರುವುದರಿಂದ. ಇದರ ನಿರ್ಣಯಗಳನ್ನು ನಿರಾತಂಕವಾಗಿ ಪಕ್ಷ ಅನುಮೋದಿಸುವುದು.

ಇತಿಹಾಸ[ಬದಲಾಯಿಸಿ]

ಇಂಗ್ಲಿಷಿನ ಕಾಕಸ್ ಎಂಬ ಶಬ್ದ ಉದ್ಭವವಾದ್ದು ಅಮೆರಿಕ ಸಂಯುಕ್ತ ಸಂಸ್ಥಾನದ ಬಾಸ್ಟನಿನಲ್ಲಿ, 18ನೆಯ ಶತಮಾನದ ಆರಂಭಕಾಲದಲ್ಲಿ. ಸಾರ್ವಜನಿಕ ವಿಚಾರಗಳನ್ನು ಚರ್ಚಿಸುವ, ಸ್ಥಳೀಯ ಚುನಾವಣೆಗಳಿಗೆ ವ್ಯವಸ್ಥೆ ಮಾಡುವ, ಅಧಿಕಾರಿಗಳಿಗೆ ಅಭ್ಯರ್ಥಿಗಳನ್ನು ಆರಿಸುವ ರಾಜಕೀಯ ಸಂಘವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. 1800ರಿಂದ 1824ರ ವರೆಗೆ ಅಲ್ಲಿಯ ಕಾಂಗ್ರೆಸಿನೊಳಗಿನ ಪಕ್ಷದ ಗುಪ್ತಕೂಟ ದೇಶದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಉಮೇದುವಾರರನ್ನು ನಾಮಕರಣ ಮಾಡುತ್ತಿತ್ತು. ನಾಮಕರಣಕ್ಕಾಗಿ ಸಭೆ ಸೇರುವ ಪದ್ಧತಿ ಆಮೇಲೆ ಬಂತು. ಗವರ್ನರ್ ಮತ್ತು ಲೆಫ್ಟೆನಂಟ್ ಗವರ್ನರ್ಗಳನ್ನು ಚುನಾಯಿಸಲೂ ಪಕ್ಷದ ವಿಧಾನಮಂಡಲದ ಸದಸ್ಯರು ಸಭೆ ಸೇರುತ್ತಿದ್ದರು. ಕಾಂಗ್ರೆಸ್, ರಾಜ್ಯ ವಿಧಾನಮಂಡಲ ಅಥವಾ ನಗರ ಸಭೆಯ ಒಂದು ಪಕ್ಷದ ಸದಸ್ಯರು ಯಾವೊಂದು ವಿಧೇಯಕದ ಬಗ್ಗೆ ಅಥವಾ ಅಧಿಕಾರಸ್ಥಾನದ ಬಗ್ಗೆ ತಮ್ಮ ಪಕ್ಷದ ನೀತಿಯೇನೆಂಬುದನ್ನು ನಿರ್ಧರಿಸಲು ಸೇರುವ ಸಭೆ-ಎಂಬ ವ್ಯಾಪಕಾರ್ಥದಲ್ಲಿ ಈ ಶಬ್ದ ಅಮೆರಿಕದಲ್ಲಿ ಬಳಕೆಯಲ್ಲಿದೆ.

ಆದರೆ ಒಂದು ಪಕ್ಷದಲ್ಲಿರುವ, ಅತ್ಯಂತ ಶಿಸ್ತಿನ ಮನೋಭಾವದಿಂದ ವರ್ತಿಸುವ ಸಂವೃತ ಕೂಟವೆಂಬ ಅರ್ಥದಲ್ಲಿ ಇದು ಬಳಕೆಗೆ ಬಂದದ್ದು ಇಂಗ್ಲೆಂಡಿನಲ್ಲಿ.

ಭಾರತದಲ್ಲೂ ರಾಜಕೀಯ ಪಕ್ಷಗಳ ಮುಖಂಡರೆನಿಸಿಕೊಂಡವರ ಒಳಕೂಟಗಳನ್ನು ಈ ರೀತಿ ಸಂಬೋಧಿಸುವುದುಂಟು. ಮಧ್ಯಮವರ್ಗದ ಸಹಾನುಭೂತಿಯೇ ಆಧಾರವಾಗಿ ಉಳ್ಳ ಸಂಪ್ರದಾಯವಾದಿ ಪಕ್ಷಗಳಲ್ಲಿ ಗುಪ್ತಕೂಟಗಳ ಪ್ರಭಾವ ಹೆಚ್ಚು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: