ಗುಡಿಕೋಟೆ

ವಿಕಿಪೀಡಿಯ ಇಂದ
Jump to navigation Jump to search

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ಕಸಬೆಯಿಂದ 28ಕಿಮೀ ಪೂರ್ವಕ್ಕಿರುವ ಗ್ರಾಮ, ಹೋಬಳಿ ಕೇಂದ್ರ.


ಇದು ಹಿಂದೆ ಒಂದು ಪಾಳೆಯಪಟ್ಟಿನ ಕೇಂದ್ರವಾಗಿದ್ದು ಪಾಳೆಯಗಾರರ ಕಾಲದಲ್ಲಿ ಕಟ್ಟಿದ ಕೋಟೆ ಊರಿಗೆ ತಾಗಿ ನಿಂತ ಬೆಟ್ಟದ ಮೇಲೆ ಇದೆ. ಆ ಕೋಟೆಗೆ ಹೊಂದಿಸಿರುವ ಬಂಡೆಗಳ ಗಾತ್ರ ಬೆರಗುಗೊಳಿಸುತವಂತಹುದು. ಬ್ರೂಸ್ಫೂಟ್ ಎಂಬಾತ ಇದರ ವಿಷಯವಾಗಿ ಬರೆಯುತ್ತ ದಕ್ಷಿಣ ಭಾರತದ ಯಾವ ಕೋಟೆಯಲ್ಲಿಯೂ ಇಷ್ಟು ಭಾರಿ ಬಂಡೆಗಳನ್ನು ತಾನು ಕಂಡಿಲ್ಲವೆನ್ನುತ್ತಾನೆ. ಈ ಬೆಟ್ಟವೇರಲು ಅನೇಕ ಕಡಿದಾದ ಒಳದಾರಿಗಳಿವೆ. ಬೆಟ್ಟದ ಮೇಲೆ ಎರಡು ಭಿನ್ನ ರೀತಿಯ ಬಾವಿಗಳಿವೆ. ತೊಟ್ಟಿಲುಬಾವಿ ಎಂದು ಕರೆಯುವ ಒಂದರ ಬಾಯಿ ದೋಣಿಯಂತಿದೆ. ಇನ್ನೊಂದು 35' ಚದುರದ ಚೌಕನೆಯದು. ಇದರ ಒಳಮೈ ಸೈಜುಗಲ್ಲುಗಳಿಂದ ನಿರ್ಮಿತವಾಗಿದೆ. ಅದನ್ನು ನಿರ್ಮಿಸಿರುವ ತಾಣ ಸ್ವಾರಸ್ಯಕರವಾಗಿದೆ. ನೋಡಿದಾಗ ಗೂಡಿನೊಳಗೆ ಬಾವಿ ತೋಡಿಸಿದಂತೆ ಭಾಸವಾಗುತ್ತದೆ. ಏಕೆಂದರೆ ಬಾವಿಯ ಮೇಲೆ ಮುಂಚಾವಣಿಯಂತೆ ಚಾಚಿ ನಿಂತಿರುವ ಬಂಡೆಗಳ ಕೂಡುವಿಕೆ ಹಾಗೆ ಇದೆ. ಈ ಚಾಚುಬಂಡೆಗಳು ತೂಗುಬಂಡೆಗಳಂತೆ ಗೋಚರಿಸುತ್ತವೆ. ಗ್ರಾಮದಲ್ಲಿ ಕೆಲವು ಚಿಕ್ಕ ದೇವಸ್ಥಾನಗಳಿವೆ. ಇಲ್ಲಿಯ ಪಾಳೆಯಗಾರ ಕಟ್ಟಿಸಿದನೆನ್ನಲಾದ ಬೊಮ್ಮಲಿಂಗನ ಕೆರೆಯ ಬಳಿ ಅನೇಕ ನಾಗರಕಲ್ಲುಗಳೂ ಇವೆ. ಕೆಲವು ನಾಗರಕಲ್ಲುಗಳು 6' ಎತ್ತರ ಇವೆ.


ಗುಡಿಕೋಟೆಯ ಪಾಳೆಯಗಾರರು ಬೇಡ ಕುಲದವರು. ಇವರು ಅಸ್ತಿತ್ವಕ್ಕೆ ಬಂದ ತರುಣದಲ್ಲಿಯೇ (ಸು.16ನೆಯ ಶತಮಾನ) ಗುಡಿಕೋಟೆಗೆ ಹೊಂದಿದ ಸುತ್ತಮುತ್ತಲಿನ ಗ್ರಾಮಗಳನ್ನು ಅಧೀನಕ್ಕೆ ತಂದುಕೊಂಡು ಪಾಳೆಯಪಟ್ಟನ್ನು ವಿಸ್ತರಿಸಿದರು. ಇವರು ಚಿತ್ರದುರ್ಗದ ಪಾಳೆಯಗಾರರಿಗೆ ಅಧೀನರಾಗಿದ್ದರೆಂದು ತಿಳಿದುಬರುತ್ತದೆ. ಬಿಳಿಚೋಡು ಮನೆತನಕ್ಕೆ ಸೇರಿದ ಚಿತ್ರದುರ್ಗದ ಪಾಳೆಯಗಾರ 1ನೆಯ ಭರಮಪ್ಪನಾಯಕನ ಹೆಂಡತಿ ಬಂಗಾರವ್ವ ನಾಗಿತಿ ಗುಡಿಕೋಟೆ ಪಾಳೆಯಗಾರರ ಸಂತತಿಯವಳು. ಕೈಬಿಟ್ಟುಹೋಗಿದ್ದ ಅಣಜಿ ಕೋಟೆಯನ್ನು ಹರಪನಹಳ್ಳಿ ಪಾಳೆಯಗಾರರಿಂದ ಗೆದ್ದುಕೊಳ್ಳಲು ಗುಡಿಕೋಟೆ ಪಾಳೆಯಗಾರರು ಭರಮಪ್ಪನಾಯಕನಿಗೆ ನೆರವಾಗಿದ್ದರು. ಈ ಪಾಳೆಯಪಟ್ಟು 1777ರಲ್ಲಿ ಹೈದರ್ ಅಲಿಯಿಂದ ನಾಶವಾಯಿತು. ಎರಡು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದರೂ ಅವರ ಪೀಳಿಗೆಯ ಬಗೆಗಿನ ಹೆಚ್ಚಿನ ದಾಖಲೆಗಳು ಉಪಲಬ್ಧವಾಗಿಲ್ಲ. ಚೇರನೂರು ಗ್ರಾಮದಲ್ಲಿ ದೊರೆತ ಎರಡು ಶಾಸನಗಳಿಂದ ಒಂದಿಬ್ಬರು ಪಾಳೆಯಗಾರರ ಹೆಸರು ಅವರು ಆಳಿದ ಕಾಲ ತಿಳಿದುಬರುತ್ತದೆ. 1676ರಲ್ಲಿ ಸೊಂಡೂರು ರಾಜಪ್ಪನಾಯಕ ಪಾಳೆಯಗಾರನಾಗಿದ್ದ. ಚೆಲಿಮಿನಾಯಕ ವಿಧಿಸಿದ್ದ ತಲೆಹೊರೆ, ಗಾಡಿಹೊರೆ, ಮಿತಸಂತಾನ ಮತ್ತು ನಾಯಿಂದ ತೆರಿಗೆಗಳಿಗೆ ಈ ರಾಜಪ್ಪ ನಾಯಕ ಚೇಕದಕೆರೆ, ಚಿಕೇರು ವಿಭಾಗದಲ್ಲಿ ಶಾಶ್ವತವಾದ ವಿನಾಯಿತಿ ಕೊಟ್ಟ. ಇವನ ಮಗ ಇಮ್ಮಡಿ ರಾಜಪ್ಪನಾಯಕ 1690ರಲ್ಲಿ ಪಾಳೆಯಗಾರನಾಗಿದ್ದನೆಂದೂ ಅವನಿಗೊಬ್ಬ ಸೋದರನಿದ್ದನೆಂದೂ ತಿಳಿದುಬರುತ್ತದೆ. ಈ ಪಾಳೆಯಗಾರರ ಹೆಸರಿನೊಂದಿಗೆ ಸಂಡೂರು ಎಂದು ಸೇರಿರುವುದರಿಂದ ಮೂಲತಃ ಇವರು ಸಂಡೂರಿನವರಿರಬಹುದು ಎಂದು ಊಹಿಸುವ ಅವಕಾಶವಿದೆ.