ಗೀಟ್ರೀ, ಸಾಚಾ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸಾಚಾ ಗೀಟ್ರೀ, ೧೮೮೫-೧೯೫೭. ಫ್ರೆಂಚ್ ನಟ, ನಾಟಕಕಾರ, ಚಲನಚಿತ್ರ ನಿರ್ಮಾಪಕ ಹಾಗು ನಿರ್ದೇಶಕ.
ಹುಟ್ಟಿದುದು ರಷ್ಯದ ಸೇಂಟ್ ಪೀಟರ್ಸಬರ್ಗಿನಲ್ಲಿ. ತಂದೆ ಲೂಸಿಯನ್ ಗೀಟ್ರೀ ರಂಗಭೂಮಿಯ ನಟ.
೧೯೩೫ರಲ್ಲಿ ಈತನ ಆತ್ಮಕಥೆ ಮೆಮಾಯಿರ್ಸ ಡಿ ಉನ್ ಟ್ರಿಚ್ಯೂರ್ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇಫ್ ಐ ರಿಮೆಂಬರ್ ರೈಟ್ ಎಂದು ಈ ಪುಸ್ತಕ ಇಂಗ್ಲಿಷಿಗೂ ಭಾಷಾಂತರವಾಗಿದೆ. ಗೀಟ್ರೀಯ ಜೀವನ ಅವನ ನಾಟಕಗಳ ವಸ್ತುವಿನಂತೆಯೇ ಚತುರ, ಅದ್ಭುತ ಹಾಗೂ ಅಸಂಭಾವ್ಯ; ಅವನ ವ್ಯಕ್ತಿತ್ವ ಸದಾ ಆಕರ್ಷಕ, ಸಂಕೀರ್ಣ-ಎಂದು ವಿಮರ್ಶಕರ ಅಭಿಪ್ರಾಯ.
ನಾಟಕಕಾರನಾಗಿ
[ಬದಲಾಯಿಸಿ]ವಂಶಾನುಗುಣವಾಗಿ ಬಂದ ಅಭಿನಯಕಲೆಯ ಜೊತೆಗೆ ಸ್ವಪ್ರತಿಭೆಯೂ ಸೇರಿ ೨೧ರ ಕಿರಿಯ ಪ್ರಾಯದಲ್ಲೇ ನೋನೊ ಎಂಬ ನಾಟಕವನ್ನು ಬರೆದು ಪ್ರಯೋಗ ಮಾಡಿ ಯಶಸ್ಸನ್ನು ಸಂಪಾದಿಸಿದ. ಪ್ರೋತ್ಸಾಹಿತ ನಾಗಿ ಚೆಜ಼್ ಲೆ ಜ಼ೋವಾಕ್ವೆಸ್ (೧೯೦೬) ಎಂಬ ಮತ್ತೊಂದು ನಾಟಕವನ್ನು ಬರೆದು ಪ್ರದರ್ಶಿಸಿದ. ಹೀಗೆಯೇ ೧೯೦೮ರಲ್ಲಿ ಪೆಟೀಟ್ ಹಾಲ್ಲಂಡ್ ಮತ್ತು ಲೆ ಸ್ಕ್ಯಾಂಡಲ್ ಡಿ ಮಾಂಟ್ ಕಾರ್ಲೋ ಎಂಬ ಮತ್ತೆರಡು ನಾಟಕಗಳನ್ನು ರಂಗಭೂಮಿಯ ಮೇಲೆ ತಂದ. ೧೯೧೧ರಲ್ಲಿ ಇವನ ಅತ್ಯುತ್ಕೃಷ್ಟ ನಾಟಕಗಳಲ್ಲಿ ಒಂದಾದ ಲೆ ವೀಲ್ಯೂರ್ ಡಿ ನ್ಯೂಟ್ ಮತ್ತು ಉನ್ ಬೊ ಮ್ಯಾರಿಯೇಜ್ ಎಂಬ ನಾಟಕಗಳೂ ಪ್ರಕಾಶಗೊಂಡವು.
ಲಘು ಪ್ರಹಸನಗಳಲ್ಲಿ ಸಾಚಾ ಗೀಟ್ರೀ ಎತ್ತಿದ ಕೈ ಎಂದೆನಿಸಿ ಬಹುಜನರ ಮೆಚ್ಚುಗೆಯನ್ನು ಪಡೆದ. ಮೊಲ್ಯೇರನ ಹರ್ಷಕಗಳಿಗೆ ಸಮನಾದ ಶ್ರೇಷ್ಠ ಪ್ರಹಸನಗಳನ್ನು ಈತ ಬರೆದಿದ್ದಾನೆ. ರಂಗದ ಮೇಲೆ ಪ್ರದರ್ಶಿತವಾದಾಗ ಮನ ಸೆಳೆಯುವಂತಿದ್ದರೂ ಈ ನಾಟಕಗಳು ಓದಿದಾಗ ತೀರ ಸಾಧಾರಣ ಎನಿಸುತ್ತವೆ. ನಾಟಕ ಪ್ರಯೋಗ ತಂತ್ರ ಪರಿಣಿತನೂ ಅಭಿನಯ ವಿಶಾರದನೂ ಆಗಿದ್ದ ಗೀಟ್ರೀಯ ನಿರ್ದೇಶನ ಕೌಶಲದಿಂದ ಅವು ರಂಗದ ಮೇಲೆ ರಂಜಿಸುತ್ತಿದ್ದವು. ಅವು ಎಂದಿಗೂ ಅಲ್ಪತೆಗಿಳಿಯದೆ ಸದಾ ಜನಮನೋರಂಜನೆ ಮಾಡುತ್ತಿದ್ದುದರಿಂದ ಜಾರ್ಜ್ ಬರ್ನಾಡ್ ಷಾ ಇವನ್ನು ಬಹುವಾಗಿ ಪ್ರಶಂಸಿಸಿದ್ದಾನೆ.
ಈತ ಸುಮಾರು ೯೦ ನಾಟಕಗಳನ್ನು ಬರೆದು ಆಡಿಸಿದ. ತನ್ನ ತಂದೆಯ ಅಭಿನಯಕ್ಕೆಂದು ವಿಶೇಷವಾಗಿ ಬರೆದ ನಾಟಕಗಳಾದ ಡಿ ಬ್ಯೂರೊ (೧೯೧೮), ಬಿರೇಂಜರ್ (೧೯೨೦), ಪ್ಯಾಶ್ಚರ್ (೧೯೧೯) ನಿಜವಾಗಿಯೂ ಪ್ರತಿಭಾಪುರ್ಣವಾಗಿವೆ
ಚಲನಚಿತ್ರ ರಂಗದಲ್ಲಿ
[ಬದಲಾಯಿಸಿ]ಗೀಟ್ರೀ ಚಲನಚಿತ್ರ ಪ್ರಪಂಚವನ್ನೂ ಪ್ರವೇಶಿಸಿ ಹಲವಾರು ಚಿತ್ರಗಳ ನಿರ್ಮಾಪಕನೂ ನಿರ್ದೇಶಕನೂ ಆಗಿ ಹೆಸರುಗಳಿಸಿದ. ೧೯೩೫ರ ಅನಂತರ ಈತನ ದಿಗ್ದರ್ಶನದಲ್ಲಿ ನಿರ್ಮಿತವಾದ ಚಿತ್ರಗಳಲ್ಲಿ ರೋಮನ್ ಡಿ’ ಉನ್ ಟ್ರಿಚ್ಯೂರ್ ಮತ್ತು ನೆಪೋಲಿಯನ್ ಎಂಬ ಚಿತ್ರಗಳು ಬಹು ಪ್ರಸಿದ್ಧವಾದವು.