ಗಿಳಿಮೀನು

ವಿಕಿಪೀಡಿಯ ಇಂದ
Jump to navigation Jump to search
ಗಿಳಿಮೀನು

ಪರ್ಸಿಫಾರ್ಮೀಸ್ ಗಣದ ಸ್ಕಾರಿಡೀ ಕುಟುಂಬಕ್ಕೆ ಸೇರಿದ ಸ್ಕಾರಸ್ ಜಾತಿಯ ಮೀನಗಳಿಗೆ ಇರುವ ಸಾಮಾನ್ಯ ಹೆಸರು (ಪ್ಯಾರಟ್ ಫಿಶ್). ಅಟ್ಲಾಂಟಿಕ್, ಫೆಸಿಫಿಕ್, ಹಿಂದೂ ಮಹಾಸಾಗರ, ಮೆಡಿಟರೇನಿಯನ್ ಸಮುದ್ರಗಳಲ್ಲೆಲ್ಲ ಇವೆ. ಇವುಗಳ ದೇಹ ವರ್ಣ ರಂಜಿತವಾಗಿರುವುದರಿಂದ ಹಾಗೂ ಮೂತಿಯು ಗಿಳಿಯ ಕೊಕ್ಕಿನಂತೆ ಇರುವುದರಿಂದ ಇವಕ್ಕೆ ಗಿಳಿಮೀನುಗಳೆಂಬ ಹೆಸರು ಬಂದಿದೆ. ಈ ಮೀನುಗಳ ದೇಹದ ಉದ್ದ ಸುಮಾರು 30.5-71ಸೆಂಮೀ ಕೆಲವು ಪ್ರಭೇದಗಳು 2 ಮೀ ಗಳವರೆಗೆ ಬೆಳೆಯುವುದುಂಟು. ಕೆಲವು ಗಂಡು ಮೀನುಗಳಲ್ಲಿ ವಯಸ್ಸು ಮತ್ತು ಗಾತ್ರ ಹೆಚ್ಚಿದಂತೆ ಅವುಗಳ ತಲೆಯ ಮೇಲೆ ಎಲುಬಿನ ಒಂದು ಗುಬುಟು ಬೆಳೆಯುತ್ತದೆ. ಗಿಳಿಮೀನುಗಳ ದವಡೆಗಳಲ್ಲಿ ಒಂದೊಂದು ಜೊತೆ ಬಹಳ ಗಡುಸಾದ ಹಲ್ಲುಗಳಿವೆ. ಬಾಯಿ ಗಿಳಿಯ ಕೊಕ್ಕಿನಂತಿರುವುದಕ್ಕೆ ಅದೇ ಕಾರಣ. ಗಿಳಿಮೀನಿನ ಗಂಟಲಿನಲ್ಲಿರುವ ಹಲ್ಲುಗಳೂ ಬಹಳ ಗಟ್ಟಿಯಾಗಿವೆ. ಇವು ಲಗೂನ್ ಗಳಲ್ಲಿ ಹವಳ ದಿಬ್ಬಗಳಲ್ಲಿ ಇತರೆ ರಾಸ್, ಮತ್ತು ಚಿಟ್ಟೆ ಮೀನುಗಳ ಜೊತೆ ಇರುತ್ತವೆ. ವಯಸ್ಕ ಮೀನುಗಳು ಒಂಟಿಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಕಂಡುಬರುತ್ತವೆ. ಬಂಡೆಗಳ ಮೇಲಿನ ಹವಳ ದಿಬ್ಬದ ಮೇಲೆ ಬೆಳೆಯುವ ವಿವಿಧ ರೀತಿಯ ಪಾಚಿ (ಆಲ್ಜೀ) ಗಳನ್ನು ತಮ್ಮ ಗಟ್ಟಿಯಾದ ಹಲ್ಲುಗಳಿಂದ ಕೆರೆದು ತಿನ್ನುತ್ತವೆ. ರಾಸ್ ಮೀನುಗಳಂತೆಯೇ ಇವು ರಾತ್ರಿ ವೇಳೆ ಸಮುದ್ರದ ತಳದಲ್ಲಿ ನಿದ್ರಿಸುತ್ತವೆ. ಹೀಗೆ ವಿಶ್ರಮಿಸುವಾಗ ತಮ್ಮ ಸುತ್ತ ಲೋಳೆವಸ್ತುವಿನ ಹೊದಿಕೆಯನ್ನು ನಿರ್ಮಿಸಿಕೊಳ್ಳುವುದುಂಟು. ಗಿಳಿಮೀನುಗಳಲ್ಲಿ ಮುಖ್ಯವಾದವು ಮೆಡಿಟರೇನಿಯನ್ ಸಮುದ್ರದ ಸ್ಕಾರಸ್ ಕ್ರಟೆನ್ಸಿಸ್, ಅಟ್ಲಾಂಟಿಕ್ ಸಾಗರದ ಸ್ಕಾರಸ್ ಟೀನಿಯಾಪ್ಟರಸ್ ಮತ್ತು ಹಿಂದೂ ಮತ್ತು ಫೆಸಿಫಿಕ್ ಸಾಗರಗಳಲ್ಲಿ ಕಂಡು ಬರುವ ಕ್ಲೋರಸ್ ಪ್ರಭೇದ.