ವಿಷಯಕ್ಕೆ ಹೋಗು

ಗಿಬ್ಬನ್, ಎಡ್ವರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1737-94. ಆಂಗ್ಲ ಇತಿಹಾಸಕಾರ. ದಿ ಡಿಕ್ಲೈನ್ ಅಂಡ್ ಫಾಲ್ ಆಫ್ ರೋಮನ್ ಎಂಪೈರ್ (ರೋಮ್ ಚಕ್ರಾಧಿಪತ್ಯದ ಅವನತಿ ಮತ್ತು ಪತನ) ಎಂಬ ಆರು ಸಂಪುಟಗಳ ಇತಿಹಾಸ ಗ್ರಂಥದ ಕರ್ತೃ.

ಬದುಕು

[ಬದಲಾಯಿಸಿ]

ಈತ ಜನಿಸಿದುದು 1737ರ ಮೇ 8 ರಂದು ಸರ್ರೆ ಕೌಂಟಿಯ ಪುಟ್ನಿಯಲ್ಲಿ. ಇವನ ತಂದೆ ಎಡ್ವರ್ಡ್, ತಾಯಿ ಜೂಡಿತ್ ಪೋರ್ಟಿನ್. ಈತ 10 ವರ್ಷದವನಾಗಿದ್ದಾಗ ತಾಯಿ ನಿಧನ ಹೊಂದಿದಳು (1747). ಇವನನ್ನು ಚಿಕ್ಕಮ್ಮ ಕ್ಯಾಥರೀನ್ ಪೋರ್ಟಿನ್ ಸಾಕಿ ವಿದ್ಯಾಭ್ಯಾಸಕ್ಕೆ ತೊಡಗಿಸಿದಳು. ಮುಂದೆ ತಾನು ಬುದ್ಧಿಜೀವಿ ಯಾಗಲು ಈಕೆಯ ಪ್ರೋತ್ಸಾಹವೇ ಕಾರಣವೆಂದು ತನ್ನ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾನೆ. ಈತ ತನ್ನ 14ನೆಯ ವಯಸ್ಸಿಗೆ ಕೆಲವು ವಿಷಯಗಳಲ್ಲಿ ಅಸಾಧಾರಣ ಪಾಂಡಿತ್ಯ ಸಂಪಾದಿಸಿ ಕೊಂಡಿದ್ದರೂ ಇತರ ವಿಷಯಗಳಲ್ಲಿ ಸಣ್ಣ ಶಾಲಾ ಬಾಲಕನೂ ನಾಚುವಂಥ ಅಜ್ಞಾನಿ ಯಾಗಿದ್ದನೆಂದು ಇವನೇ ಹೇಳಿ ಕೊಂಡಿದ್ದಾನೆ. ಈತ 15ನೆಯ ವಯಸ್ಸಿನಲ್ಲಿ ಆಕ್ಸ್ ಫರ್ಡಿನ ಮ್ಯಾಗ್ಡಲೀನ್ ಕಾಲೇಜು ಸೇರಿದ. ಆದರೆ ಅಲ್ಲಿ ಈತ ಇದ್ದದ್ದು ಕೇವಲ 14 ತಿಂಗಳು. ಆ ಸಮಯದಲ್ಲಿ ಈತ ಕ್ರೈಸ್ತಧರ್ಮವನ್ನು ಕುರಿತು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿದ್ದ; ಅದರ ಪರಿಣಾಮವೆಂಬಂತೆ 1753ರ ರೋಮನ್ ಕೆಥೊಲಿಕ್ ಚರ್ಚಿನ ಸದಸ್ಯನಾಗಿ ಜೂನ್ 8ರಂದು ಲಂಡನ್ ನಗರದ ಒಂದು ಚರ್ಚಿನಲ್ಲಿ ಪುರೋಹಿತನಾದ. ಆದರೆ ಇದು ಇವನ ತಂದೆಗೆ ಸರಿಬರಲಿಲ್ಲ. ಕುಪಿತನಾದ ತಂದೆ ಇವನನ್ನು ಲಾಸ್ಯಾನ್ ನಗರದಲ್ಲಿ ಕಾಲ್ವಿನ್ ಪಂಗಡಕ್ಕೆ ಸೇರಿದ ಪೆವಿಲಿಯಾನ ಬಳಿ ಬಿಟ್ಟ. ಇಲ್ಲಿ ಇವನು ಸುಮಾರು ಐದು ವರ್ಷಗಳನ್ನು ಕಳೆದ. ಆಗ ಇವನಿಗೆ ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆ ಸಾಹಿತ್ಯಗಳಲ್ಲೂ ಗಣಿತ ತರ್ಕಶಾಸ್ತ್ರಗಳಲ್ಲೂ ಕ್ರಮಬದ್ಧವಾದ ಶಿಕ್ಷಣ ದೊರಕಿತು. ಪೆವಿಲಿಯಾನ ಪ್ರಭಾವದಿಂದ 1754ರಲ್ಲಿ ಇವನು ಕೆಥೊಲಿಕ್ ಪಂಗಡವನ್ನು ತ್ಯಜಿಸಿ ಪ್ರಾಟೆಸ್ಟಂಟ್ ಆಗಿ ಮತಾಂತರಗೊಂಡ. ಕ್ರಮೇಣ ಇವನು ಸಾಮಾಜಿಕ ಚಟುವಟಿಕೆಗಳಲ್ಲೆಲ್ಲ ಭಾಗವಹಿಸಲಾರಂಭಿಸಿದ. ಇವನ ಹಿರಿಯ ಸಮಕಾಲೀನನಾಗಿದ್ದ ವಾಲ್ಟೇರ್ ಏರ್ಪಡಿಸುತ್ತಿದ್ದ ಸತ್ಕಾರ ಸಮಾರಂಭಗಳಲ್ಲಿಯೂ ಲಾಸ್ಯಾನ್ ನಗರದ ಪ್ರತಿಷ್ಠಿತ ಸಮಾಜದಲ್ಲಿಯೂ ಈತ ಕಾಣಿಸಿಕೊಳ್ಳತೊಡಗಿದ.


ಪ್ರಾಪ್ತವಯಸ್ಕನಾದಾಗ ಇವನ ತಂದೆ ಈತನಿಗೆ ವಾರ್ಷಿಕವಾಗಿ 300 ಪೌಂಡುಗಳ ಆದಾಯ ಬರುವಂತೆ ವ್ಯವಸ್ಥೆ ಮಾಡಿದ (1758). ಇದು ಇವನಿಗೆ ಹೆಚ್ಚು ಸ್ವಾತಂತ್ರ್ಯ ದೊರಕಿಸಿಕೊಟ್ಟಿತು. ಸುಸೇನ್ ಚರ್ಚೋಡಳೊಂದಿಗೆ ಇವನ ಸ್ನೇಹ ಬೆಳೆಯಿತು. ಅವಳನ್ನು ಮದುವೆಯಾಗಬೇಕೆಂಬುದು ಇವನ ಅಪೇಕ್ಷೆಯಾಗಿತ್ತು. ಆದರೆ ಈತನ ತಂದೆ ಇವರ ಮದುವೆಗೆ ಅನುಮತಿ ನೀಡಲಿಲ್ಲವಾದ ಕಾರಣ ಇವರ ಸಂಬಂಧ ಮುರಿಯಿತು. ಈ ಕಹಿ ಪ್ರಸಂಗದ ಫಲವಾಗಿ ಇವನು ಮುಂದೆ ಅವಿವಾಹಿತನಾಗಿಯೇ ಉಳಿಯು ವಂತಾಯಿತು. ಇದನ್ನು ಮರೆಯಲೋಸುಗ ಮುಂದಿನ ಐದು ವರ್ಷಗಳ ಕಾಲ ಪುನಃ ಅಧ್ಯಯನದಲ್ಲಿ ನಿರತನಾದ. ಇವನ ಮೊದಲ ಪ್ರಬಂಧ 1761ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಯಿತು. ಅನಂತರ ಇದನ್ನೇ ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ. ಅಷ್ಟರಲ್ಲಿ ಏಳು ವರ್ಷಗಳ ಯುದ್ಧ ಆರಂಭವಾಯಿತು (1757-64). ಈ ಕದನದಲ್ಲಿ ಇವನೂ ಪಾಲ್ಗೊಂಡು ಕ್ಯಾಪ್ಟನ್ ಆಗಿ ನಾಡಿಗೆ ಸೇವೆ ಸಲ್ಲಿಸಿದ (1760-62). ಸೇನೆಯಿಂದ ನಿವೃತ್ತಿ ಹೊಂದಿದ ಮೇಲೆ 1763ರ ಅನಂತರ ಪುನಃ ಲಾಸ್ಯಾನ್ ನಗರಕ್ಕೆ ಹಿಂದಿರುಗಿದಾಗ ಇವನಿಗೆ ಜಾನ್ಬೇಕರ್ ಹಾಲ್ರಾಯ್ (ಮುಂದೆ ಲಾರ್ಡ್ ಷೆಫೀಲ್ಡ್) ಎಂಬವನ ಸ್ನೇಹ ದೊರಕಿತು. ಆತನೇ ಇವನ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ.


1764ರಲ್ಲಿ ಇಟಲಿಗೆ ಹೋಗಿ ಅಲ್ಲಿಯ ಪುರಾತನ ಅವಶೇಷಗಳನ್ನು ಕೂಲಂಕಷವಾಗಿ ಪರಿಶೀಲಿಸಿದ. ಅವನತಿಗೀಡಾದ ರೋಮ್ ಚಕ್ರಾಧಿಪತ್ಯದ ಇತಿಹಾಸ ಇವನು ಲ್ಯಾಟಿನ್ ಸಾಹಿತ್ಯದ ಪರಿಚಯ ಪಡೆದಾಗಲೇ ಮನಸೆಳೆದಿತ್ತು. ಮರುವರ್ಷವೇ ನೇಪಲ್ಸ್ ಮುಖಾಂತರ ಮನೆಗೆ ಹಿಂದಿರುಗಿದ. ಮುಂದಿನ ಐದು ವರ್ಷಗಳನ್ನು ವ್ಯರ್ಥವಾಗಿ ಕಳೆದ. ಫ್ರಾನ್ಸಿನಲ್ಲಿದ್ದಾಗ ಅಲ್ಲಿ ಇವನ ಮಿತ್ರರಲ್ಲೊಬ್ಬನಾದ ಜಾರ್ಜಿಸ್ ಡೇವೆರ್ಡನ್ನೊಡಗೂಡಿ ಮೆಮ್ವಾರ್್ಸ ಲಿಟರೇರಿಸ್ ದ ಲಾ ಗ್ರಾಂಡ್ ಬ್ರೆಟಾನೆ ಎಂಬ ಗ್ರಂಥವನ್ನು ಬರೆದ (1768-69). 1770ರಲ್ಲಿ ಕ್ರಿಟಿಕಲ್ ಆಬ್ಸರ್ವೇಷನ್ಸ್ ಆನ್ ದಿ ಸಿಕ್ಸ್‌ತ್ ಬುಕ್ ಆಫ್ ದಿ ಏನೀಡನ್ನು ಪ್ರಕಟಿಸಿದ.


1770ರಲ್ಲಿ ಈತ ತಂದೆಯ ನಿಧನಾನಂತರ ಲಂಡನ್ ನಗರಕ್ಕೆ ಬಂದು ನೆಲಸಿದ. ನಗರ ಜೀವನದಲ್ಲಿ ಮೈಮರೆತು ವೈಭವೋಪೇತ ಕ್ಲಬ್ಗಳ ಸದಸ್ಯನಾದ. ಜಾನ್ಸನ್ ಕ್ಲಬ್ ಸದಸ್ಯನಾಗಿ ಚುನಾಯಿತನಾದ. ಸಾಹಿತಿ ಜಾನ್ಸನನ ಹಾಗೂ ಬಾಸ್ವೆಲನ ಟೀಕೆಗಳಿಗೆ ಗುರಿಯಾದ. ಇವನು 1774ರಲ್ಲಿ ಪಾರ್ಲಿಮೆಂಟಿನ ಸದಸ್ಯನಾದ. ಆ ವೇಳೆಗೆ ನಿಧಾನವಾಗಿ ತನ್ನ ಮುಖ್ಯಗ್ರಂಥವನ್ನು ಬರೆಯಲು ತೊಡಗಿದ. ಇವನ ಆ ಗ್ರಂಥದ ಮೊದಲ ಸಂಪುಟ 1776ರ ಫೆಬ್ರುವರಿ 16ರಂದು ಪ್ರಕಟವಾಯಿತು. ಇದು ಇವನಿಗೆ ಹೆಸರನ್ನೂ ಪ್ರಸಿದ್ಧಿಯನ್ನೂ ತಂದಿತು. ಈ ಗ್ರಂಥ ಅನೇಕರ ಶ್ಲಾಘನೆಗೂ ಕಟುಟೀಕೆಗೂ ಒಳಗಾಯಿತು. ಇದರ 15, 16ನೆಯ ಅಧ್ಯಾಯಗಳು ಕ್ರೈಸ್ತಧರ್ಮದ ಉಗಮವನ್ನು ಕುರಿತವು. ಇವನ ಗ್ರಂಥದ ಪ್ರಚಾರಕ್ಕೆ ಇದೂ ಒಂದು ಕಾರಣ.


ಲಾರ್ಡ್ ನಾರ್ತ್ ಇಂಗ್ಲೆಂಡಿನ ಪ್ರಧಾನಿಯಾದಾಗ 1779 ಇವನಿಗೆ ಲಾಭದಾಯಕವಾದ ಹುದ್ದೆ ದೊರಕಿತು. ಅನ್ ಮೆಮ್ವಾರ್ ಜಸ್ಟಿಫಿಕೇಟಿವ್ ಎಂಬ ಶೀರ್ಷಿಕೆಯಲ್ಲಿ ಒಂದು ರಾಜ್ಯಪತ್ರವನ್ನು ಹೊರಡಿಸಿ ಬ್ರಿಟಿಷ್ ಸರ್ಕಾರದ ಅಮೆರಿಕ ನೀತಿಯನ್ನು ಸಮರ್ಥಿಸಿದ. 1782ರಲ್ಲಿ ನಾರ್ತ್ನ ಸರ್ಕಾರ ಬಿದ್ದಾಗ ಈತನೂ ತನ್ನ ಹುದ್ದೆ ಕಳೆದುಕೊಂಡ. ಅನಂತರ ಈತ ಲಾಸ್ಯಾನ್ ನಗರಕ್ಕೆ ಹಿಂತಿರುಗಿ ಇವನ ಇತಿಹಾಸದ 2, 3ನೆಯ ಸಂಪುಟಗಳು 1781ರಲ್ಲೂ 4, 5 ಮತ್ತು 6ನೆಯ ಸಂಪುಟಗಳು 1787ರಲ್ಲೂ ಬಂದುವು. ಕೊನೆಯ 6ನೆಯ ಸಂಪುಟ ಪ್ರಕಟವಾದ್ದು ಇವನ 51ನೆಯ ಹುಟ್ಟುಹಬ್ಬದಂದು. ಇವನ ಆಪ್ತಮಿತ್ರ ಜಾರ್ಜಿಸ್ 1789ರಲ್ಲಿ ನಿಧನನಾದ. ಅವನ ಅಗಲಿಕೆ ಇವನಿಗೆ ತೀವ್ರ ಆಘಾತವಾಯಿತು. ಈ ಘಟನೆಯಿಂದ ಇವನು ಅನಾರೋಗ್ಯಕ್ಕೀಡಾಗಿ 1794 ಜನವರಿ 16ರಂದು ಲಂಡನ್ನಲ್ಲಿ ನಿಧನನಾದ.

ರೋಮ್ ಚಕ್ರಾಧಿಪತ್ಯದ ಅವನತಿ ಕುರಿತು ಬರೆದ ಗ್ರಂಥ ಇಂದಿಗೂ ಮೇರು ಕೃತಿಯಾಗಿದೆ. ಇತಿಹಾಸಕ್ಕೆ-ಅದರ ನಿರೂಪಣೆಗೆ-ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಇತಿಹಾಸಕಾರರ ಮುಂದೆ ಇಡುವುದರ ಮೂಲಕ ಇವನು ಇತಿಹಾಸದ ಅಧ್ಯಯನಕ್ಕೆ ವಿಶಿಷ್ಟವಾದ ಕಾಣಿಕೆ ನೀಡಿದ್ದಾನೆ. ಇತಿಹಾಸಕ್ಕೆ ಇವನು ನೀಡುವ ಅರ್ಥ ನಿಷ್ಠುರವಾದ್ದು. ಮಾನವ ಎಸಗಿದ ಘೋರ ಅನ್ಯಾಯಗಳ, ಪಾತಕಗಳ ದುರದೃಷ್ಟದ ವರದಿಯೇ ಇತಿಹಾಸ ಎಂದಿದ್ದಾನೆ.


ಅನೇಕ ಪರಿಮಿತಿಗಳಿದ್ದರೂ ಇವನ ಬರೆವಣಿಗೆಯ ಶೈಲಿ ಉತ್ತಮವಾದುದು. ಇವನು ಕೆಲವು ಘಟನೆಗಳನ್ನು ಕುರಿತು ಮಾಡಿರುವ ಅನೇಕ ನಿರ್ಣಯಗಳು ಇತ್ತೀಚಿನ ಶೋಧನೆಗಳಿಂದ ಖಚಿತಗೊಂಡಿವೆ. ತನ್ನ ಗ್ರಂಥವನ್ನು ಬರ್ಬರತೆ ಹಾಗೂ ಮತದ ವಿಜಯೋತ್ಸವದ ದಾಖಲೆ ಎಂದು ಹೇಳಿಕೊಂಡಿದ್ದಾನೆ. ಪ್ರ. ಶ. ಎರಡನೆಯ ಶತಮಾನದಿಂದ ಆರಂಭವಾಗುವ ರೋಮ್ ನ ಚಕ್ರಾಧಿಪತ್ಯದ ಇತಿಹಾಸದ ಮೊದಲನೆಯ ಅರ್ಧ 480ರ ವರೆಗಿನ ಘಟನೆಗಳಿಗೆ ಮೀಸಲಾಗಿದೆ. ಉಳಿದರ್ಧದಲ್ಲಿ 1453ರಲ್ಲಿ ಸಂಭವಿಸಿದ ಕಾನ್ಸ್‌ಟಾಂಟಿನೋಪಲ್ ಪತನದವರೆಗಿನ ಕಥೆ ಇದೆ. ಉತ್ತಮ ನಾಗರಿಕ ಸಂಸ್ಕೃತಿಯನ್ನು ಹೊಂದಿದ್ದ ರೋಮ್ ನ ನೈತಿಕ ಪತನವೇ ಆ ಚಕ್ರಾಧಿಪತ್ಯದ ಅಳಿವಿಗೆ ಮೂಲ ಕಾರಣ ಎಂದು ಹೇಳಿದ್ದಾನೆ. ಆಂಟೊನೈನ್ ಯುಗ ರೋಮ್ ಇತಿಹಾಸದ ಸುವರ್ಣಯುಗ. ಅನಂತರ ಕಾಣುವುದು ಅದರ ಪತನ ಎಂಬುದು ಇವನ ವಾದದ ರೀತಿ. ಇವನ ಆತ್ಮಕಥೆ ಈತನ ನಿಧನಾನಂತರ ಪ್ರಕಟವಾಯಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: