ವಿಷಯಕ್ಕೆ ಹೋಗು

ಗಾಳಿಗೂಡೊಡೆದ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಳಿಗೂಡೊಡೆದ ರೋಗ

[ಬದಲಾಯಿಸಿ]

ಕುದುರೆಗಳಲ್ಲಿ ಮಾತ್ರ ಕಾಣಬರುವ ಉಸಿರಾಟ ಸಂಬಂಧಿರೋಗ. ಕಟ್ಟುಸಿರು (ಹೀವ್ಸ), ಗಾಳಿಗೂಡಿನ ಬಿರಿತ (ಅಲ್ವಿಯೋಲಾರ್ ಎಂಫೈಸೀಮ) ಪರ್ಯಾಯನಾಮಗಳು. ಪುಪ್ಪಸದ ಗಾಳಿ ಗೂಡುಗಳ ಹಿಗ್ಗುವಿಕೆ, ಪುಪ್ಪಸಗಳಲ್ಲಿ ದೊಡ್ಡ ಪೊಳ್ಳುಗಳುಂಟಾಗುವುದು-ಇವು ಇದರ ಲಕ್ಷಣಗಳು. ಇವುಗಳಿಂದಾಗಿ ಪುಪ್ಪಸದ ಗಾತ್ರ ಕಡಿಮೆಯಾಗಿ ಉಸಿರಾಟದಲ್ಲಿ ಅಸಮರ್ಪಕತೆ ತಲೆದೋರುತ್ತದೆ. ವಾಯುವಿನಿಮಯವೂ ಸರಿಯಾಗಿ ಸಾಗದು. ರೋಗಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಪುಪ್ಪಸದ ಉರಿತ, ಕೂರಾದ ಪಂಗುಸಿರ್ನಾಳದ ಉರಿಯೂತ, ದೀರ್ಘಕಾಲದ ಕೆಮ್ಮು, ಬೇರೂರಿದ ಪಂಗುಸಿರ್ನಾಳದ ಉರಿಯೂತ ಮುಂತಾದವೂ ಕೆಲವು ಕಾರಣಗಳು. ಸೇವನೆಯ ಏರುಪೇರುಗಳಿಂದಲೂ ಇದು ಬರಬಹುದು. ತೇವಪುರಿತ ವಾತಾವರಣ, ಹೆಚ್ಚಿನ ಕೆಲಸ, ಹೆಚ್ಚಾದ ಆಹಾರ, ಶೀತ ಹಾಗೂ ಬಿರುಗಾಳಿ ಪರಿಸ್ಥಿತಿಗಳಲ್ಲಿ ಕುದುರೆಗಳು ಈ ಬೇನೆಗೆ ಒಳಗಾಗುತ್ತವೆ. ದೂಳಿನಿಂದ ಅವೃತವಾದ ಪರಿಸರದಲ್ಲಿ ಇಬ್ಬನಿ ಇರುವ ಹುಲ್ಲನ್ನು ಮೇಯುವುದರಿಂದಲೂ ಹಸಿಯಾದ ಹಾಗೂ ಬೂಷ್ಟು ಬೆಳೆದಿರುವ ಆಹಾರವನ್ನು ತಿನ್ನುವುದರಿಂದಲೂ ಈ ರೋಗ ಬರುತ್ತದೆ. ತಿಮೋಥಿ ಕೆಂಪು ಕ್ಲೋವರ್, ಕುದುರೆ ಮಸಾಲೆ ಸೊಪ್ಪು ಹಾಗೂ ಇತರ ಜಾತಿಯ ಬೆಳೆಸಿದ ಮೇವನ್ನು ಕೊಡುವುದರಿಂದಲೂ ಈ ಬೇನೆ ಕಾಣಿಸಿಕೊಳ್ಳುತ್ತದೆ. ಡಿಕ್ಟಿಯೊಕೆವೊಲಸ್ ಆರ್ನಫೆಲ್ಡಿ ಜಾತಿಯ ಹುಳುಗಳು ಪುಪ್ಪಸದಲ್ಲಿ ಇರುವುದರಿಂದಲೂ ಗಾಳಿಗೂಡೊಡೆದ ರೋಗ ಬರುವುದೆಂಬ ನಂಬಿಕೆ ಉಂಟು. ಹೆಚ್ಚು ಕಾಲ ಲಾಯದಲ್ಲಿರುವ ಕುದುರೆಗಳಲ್ಲಿ ಈ ರೋಗ ಹೆಚ್ಚು. ಹುಲ್ಲುಗಾವಲಿನಲ್ಲಿ ಸ್ವತಂತ್ರವಾಗಿ ಮೇಯುವ ಕುದುರೆಗಳಲ್ಲಿ ಇದು ಅಷ್ಟಾಗಿ ಕಾಣದು. ಒಣಹುಲ್ಲು ಹಾಗೂ ಬಾರ್ಲಿಯನ್ನು ಮೇಯುವ ಕುದುರೆಗಳಲ್ಲಂತೂ ಈ ಬೇನೆ ಬರುವುದೇ ಇಲ್ಲ. ಒಂದು ರೀತಿಯ ಆಸ್ತಮಾದಿಂದಲೂ ಈ ರೋಗ ಉಂಟಾಗುತ್ತದೆ. ಚೆನ್ನಾಗಿ ಬೆಳೆಸಿದ ಒಳ್ಳೆಯ ತಳಿಗಳಲ್ಲಿ ಅಷ್ಟಾಗಿ ಕಾಣಬರದು. ಆದರೆ ಸ್ಥೂಲಕಾಯದ, ಗಿಡ್ಡಕಾಲಿನ, ದೊಡ್ಡಹೊಟ್ಟೆಯ ಕುದುರೆಗಳು ಈ ರೋಗಕ್ಕೆ ಸುಲಭವಾಗಿ ತುತ್ತಾಗುತ್ತವೆ. ವಿಪರೀತ ಕೆಲಸ ಮಾಡುವ ಕುದುರೆಗಳಿಗೆ ಸರಿಯಾದ ಆಹಾರ ಸಿಗದೆ ಹೋದರೆ ಅವುಗಳ ಪುಪ್ಪಸ ತನ್ನ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ರೋಗಪೀಡಿತವಾಗುತ್ತದೆ.

ಈ ಬೇನೆ ಭಾರತದಲ್ಲಿ ಅಷ್ಟಾಗಿಲ್ಲ. ಅರಬ್ ದೇಶದಲ್ಲಿ ಇಲ್ಲವೇ ಇಲ್ಲ. ಯೂರೋಪಿನ ವಿವಿಧ ದೇಶಗಳಲ್ಲೂ ಬಹು ವಿರಳ. ಅಮೆರಿಕ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿದೆ. ಮಾತ್ರವಲ್ಲ ಅಲ್ಲಿ ಈ ರೋಗ ವರ್ಷವರ್ಷವೂ ಹೆಚ್ಚುತ್ತಿದೆ. ರೋಗಲಕ್ಷಣಗಳು: ಬಹಳ ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಮೊದಲು ಕಾಣಿಸಿಕೊಳ್ಳುವುದು ಕೆಮ್ಮು. ಎಡೆಬಿಡದೆ ಬರುವ ಕೆಮ್ಮನ್ನು ತಾಳಲಾರದೆ ಕುದುರೆ ನರಳುತ್ತದೆ. ಅನಂತರ ಮೂಗಿನಲ್ಲಿ ನೀರು ಸುರಿಯಲು ಆರಂಭವಾಗುತ್ತದೆ. ಕುದುರೆಗೆ ವಿಶ್ರಾಂತಿ ಕೊಡದೆ ಓಡಾಡಿಸಿದರೆ ಆಗ ಅದು ಉಸಿರಾಡಲು ತೊಳಲಾಡುತ್ತದೆ. ರೋಗದ ಮೊದಲ ದಿನಗಳಲ್ಲಿ ಕುದುರೆ ವಿಶ್ರಾಂತಿ ಪಡೆಯುತ್ತಿರುವಾಗ ಅದರ ಉಸಿರಾಟ ಸರಾಗವಾಗಿ ಇರುತ್ತದೆ. ಮುಂದೆ ರೋಗ ಉಲ್ಭಣವಾಗುತ್ತ ಹೋದಹಾಗೆ ಉಸಿರಾಡುವುದು ಕಷ್ಟವಾಗುತ್ತ ಬರುತ್ತದೆ. ಇದರಿಂದ ರೋಗಸ್ಥಿತಿಯನ್ನು ಬಹಳ ಸುಲಭವಾಗಿ ಗುರುತಿಸಬಹುದು. ಕೆಮ್ಮುವಾಗ ಸೀನು ಇರುವುದಿಲ್ಲ. ಕುದುರೆಯಿಂದ ಶ್ರಮದಾಯಕ ಕೆಲಸಮಾಡಿಸಿದರೆ ಕೆಮ್ಮು ಹೆಚ್ಚಾಗುತ್ತದೆ. ಎಲ್ಲಿಯೊ ದೂರದಲ್ಲಿ ಕೆಮ್ಮಿದ ಹಾಗೆ ಸದ್ದು ಉಂಟಾಗುತ್ತದೆ. ಸಾಮಾನ್ಯವಾಗಿ ಉಸಿರಾಟದ ವೇಗ ಹೆಚ್ಚುತ್ತದೆ. ಉಸಿರೆಳೆದುಕೊಳ್ಳುವುದರಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ಉಸಿರು ಬಿಡುವಾಗ ಕುದುರೆಗೆ ಕಷ್ಟವಾಗುತ್ತದೆ. ಅಲ್ಲದೆ ನಿಃಶ್ವಾಸದಲ್ಲಿ ಎರಡು ಹಂತಗಳನ್ನು ಕಾಣಬಹುದು. ಜೊತೆಗೆ ಒಡಕು ಇಲ್ಲವೆ ಶಿಳ್ಳೆಯ ಶಬ್ದವೂ ಬರುತ್ತದೆ. ಅಲ್ಲದೆ ಹಿಸ್ ಹಿಸ್ ಎಂಬ ಸದ್ದೂ ಉಂಟಾಗುತ್ತದೆ. ಎದೆಗೂಡು ವಿಶಾಲವಾದಂತಾಗಿ ಪುಪ್ಪಸದ ಅಂಗಾಂಶಗಳು ತನ್ನ ಪುಟಿತತೆಯನ್ನು ಕಳೆದುಕೊಳ್ಳುತ್ತವೆ. ಪುಪ್ಪುಸದ ಪರೆ ಬಿಳಿಚಿಕೊಳ್ಳುತ್ತದೆ. ಪಕ್ಕೆಲಬುಗಳ ಹಿಂದಿನ ಭಾಗದಲ್ಲಿ ಗುಳಿ ಬೀಳುತ್ತದೆ. ಅಲ್ಲಿನ ಸ್ನಾಯುಗಳು ಇಳಿಬೀಳುತ್ತವೆ. ಪುಪ್ಪುಸದ ಒಳಶಬ್ದವನ್ನು ಸ್ಟೆತೋಸ್ಕೋಪಿನ ಸಹಾಯದಿಂದ ಕೇಳಬಹುದು. ಪುಪ್ಪುಸದಲ್ಲಿ ಚಿಟಗುಟ್ಟುವ ಶಬ್ದದ ಅಲೆಗಳು ಸ್ಪುಟವಾಗಿ ಕೇಳುವುದರ ಜೊತೆಗೆ ರಕ್ತನಾಳಗಳ ಮರ್ಮರ ಧ್ವನಿಯೂ ಕೇಳಿಬರುತ್ತದೆ.

ರೋಗನಿದಾನ

[ಬದಲಾಯಿಸಿ]

ರೋಗ ಚೆನ್ನಾಗಿ ಉಲ್ಬಣಸಿದ ಮೇಲೆಯೆ ಅದನ್ನು ಗುರುತಿಸಲು ಸಾಧ್ಯವಾಗುವುದರಿಂದ ಕುದುರೆಗಳನ್ನು ಕೊಳ್ಳುವಾಗ ಪರಿಣಿತ ಪಶು ವೈದ್ಯರಿಂದ ಪರೀಕ್ಷೆ ಮಾಡಿಸಿ ರೋಗ ಇದೆಯೊ ಇಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೆನ್ಬೇನ್, ದತ್ತೂರಿ, ಬೆಲಡೊನ ಬೀಜ ಮುಂತಾದ ಮತ್ತು ಬರಿಸುವ ಔಷಧಿಗಳನ್ನು ಬಳಸಿ ಗಾಳಿಗೂಡೊಡೆದ ರೋಗವನ್ನು ಮರೆಮಾಡಬಹುದಾದ್ದರಿಂದ ಕುದುರೆಗಳನ್ನು ಕೊಳ್ಳುವಾಗ ಈ ವಿಷಯದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಗಾಳಿಗೂಡೊಡೆದ ರೋಗಕ್ಕೆ ಸರಿಯಾದ ಔಷಧಿಗಳಿಲ್ಲ. ಕುದುರೆಗಳು ಒಮ್ಮೆ ರೋಗಪೀಡಿತವಾದರೆ ಅವನ್ನು ಗುಣಪಡಿಸುವದು ಕಷ್ಟ. ಇದರಿಂದ ರೋಗಬಾರದಂತೆ ಮೊದಲೇ ಎಚ್ಚರ ವಹಿಸುವುದು ವಿಹಿತ. ಕುದುರೆಗಳಿಗೆ ಹಗುರಾದ ಕೆಲಸವನ್ನು ಕೊಡುವುದರಿಂದ, ಅವನ್ನು ಶೀತದಿಂದ ರಕ್ಷಿಸುವುದರಿಂದ, ಮಿತವಾದ ಪೌಷ್ಟಿಕ ಆಹಾರ ಕೊಡುವುದರಿಂದ, ಒಣಗಿದ ಮತ್ತು ಒಳ್ಳೆಯ ಹುಲ್ಲನ್ನು ತಿನ್ನಿಸುವುದರಿಂದ ರೋಗವನ್ನು ತಡೆಗಟ್ಟಬಹುದು. ಫೌಲರನ ಆರ್ಸೆನಿಕ್ ದ್ರಾವಣ ಹಾಗೂ ಶಾಮಕ ಔಷಧಗಳ (ಸಡೇಟಿವ್್ಸ) ಬಳಕೆಯಿಂದಲೂ ಇದನ್ನು ತಡೆಯಬಹುದು.

ಗಾಳಿತುಂಬಿದೆದೆ

[ಬದಲಾಯಿಸಿ]

ಎದೆಗೂಡಿನ ಎರಡು ಪಕ್ಕಗಳಲ್ಲೂ ಇರುವ ಅಳ್ಳೆಪೊರೆಯ (ಪ್ಲುರಲ್) ಪೊಳ್ಳಿನಲ್ಲಿ ಗಾಳಿಯೋ ಅನಿಲವೋ ತುಂಬಿರುವಿಕೆ (ನ್ಯೂಮೋತೋರಾಕ್್ಸ). ರೋಗದಿಂದ ಇಲ್ಲವೇ ಆಕಸ್ಮಿಕಗಳಿಂದಾದ ಕಾಯಿಲೆಯನ್ನು ಸಹಜವಾಗಿ ಆದದ್ದೆಂದೂ ಫುಪ್ಪುಸಗಳ ರೋಗದ ಚಿಕಿತ್ಸೆಗಾಗಿ ವೈದ್ಯನೇ ಒಳಕ್ಕೆ ಗಾಳಿಯನ್ನು ಚುಚ್ಚಿ ಹೊಗಿಸಿ ಆದುದನ್ನು ಕೃತಕವಾದದ್ದೆಂದೂ ಹೇಳುತ್ತಾರೆ. ಸಹಜವಾಗಿ ಗಾಳಿತುಂಬಿದೆದೆ ಆದಾಗ ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ಸಾಧಾರಣವಾಗಿ ಫುಪ್ಪುಸದಿಂದ ವಾಯು ನುಗ್ಗುವುದು. ಫುಪ್ಪುಸದ ಮೇಲ್ಮೈಯ ಹತ್ತಿರ ಇರುವ ಕ್ಷಯದ ಗೂಡು ಒಡೆದುಕೊಂಡು ಉಸಿರ್ನಾಳದಲ್ಲಿರುವ ವಾಯು ಪೊಳ್ಳಿನೊಳಕ್ಕೆ ತೂರುವುದು ಸಾಮಾನ್ಯ. ಅಪರೂಪವಾಗಿ ಗೂರಲು ರೋಗಿಗಳಲ್ಲಿ ಆಗಿರುವಂತೆ ಹಿರಿಹಿಗ್ಗಿದ ಗಾಳಿಯುಬ್ಬಟೆಯ (ಎಂಫಿಸೀಮ್ಯಾಟಸ್) ಕಿರುಕೋಶ ಒಡೆದುಕೊಂಡರೂ ಹೀಗಾಗಬಹುದು. ಇನ್ನುಳಿದವರಲ್ಲಿ ಗಾಳಿತುಂಬೆದೆದೆ ಆಗಲು ಎದೆಗೆ ಬಿದ್ದ ಪೆಟ್ಟು, ಇಲ್ಲವೆ ಮುರಿತ ಮುಂತಾದವು ಕಾರಣ. ಆದರೆ ಸಹಜವಾಗಿ ಆಗುವ ಈ ಕಾಯಿಲೆಗೆ 90% ಮಂದಿಯಲ್ಲಿ ಫುಪ್ಪುಸದ ಕ್ಷಯವೇ ಕಾರಣ. ಸಾಮಾನ್ಯವಾಗಿ ಗಾಳಿತುಂಬಿದೆದೆ ಇದ್ದಕ್ಕಿದ್ದ ಹಾಗೆ ತಲೆದೋರುತ್ತದೆ. ರೋಗಿ ವಿರಮಿಸಿಕೊಳ್ಳುತ್ತಿರುವಾಗ ಕೂಡ ಇದು ತಲೆದೋರಬಹುದು. ಆಗ ಎದೆಯ ಪಕ್ಕೆಯಲ್ಲಿ ಇದ್ದಕ್ಕಿದ್ದ ಹಾಗೆ ಇರಿವಂಥ ಚಳುಕು, ಉರಿಯಾಗಿ ಉಸಿರಾಡಲು ಬಹುಮಟ್ಟಿಗೆ ಕಷ್ಟವಾಗುತ್ತದೆ. ಫುಪ್ಪುಸ ಒಡೆಬಿರಿದು ಅದರ ಹೊದಿಕೆಯಾಗಿರುವ ಅಳ್ಳೆಪೊರೆ ಹರಿದಿರುತ್ತದೆ. ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ಆಗ ಸಹಜವಾಗಿ ವಾಯು ನುಗ್ಗಿ ಅದೇ ಪಕ್ಕದ ಫುಪ್ಪುಸ ಚಿಕ್ಕದಾಗಿ ಮುದುರಿಕೊಳ್ಳುವುದು. ಎದೆಯ ನಡುವೆ ಇರುವ ಗುಂಡಿಗೆ ಆಗ ರೋಗವಿಲ್ಲದ ಪಕ್ಕಕ್ಕೆ ತಳ್ಳಿದಂತಾಗಿ ಸರಿಯುತ್ತದೆ. ರೋಗಿ ಹೆಜ್ಜೆಹಾಕಲಾರದೆ ಕುಸಿದುಬೀಳುತ್ತಾನೆ. ಹಾಸಿಗೆಯಲ್ಲಿ ಮಲಗಿಸಿದರೆ ರೋಗದ ಪಕ್ಕಕ್ಕೆ ಮಾಲಿಕೊಂಡು ದಿಂಬಿಗೆ ಒರಗಿಕೊಳ್ಳುತ್ತಾನೆ.

ಸಹಜವಾಗಿ ಆಗುವ ಗಾಳಿತುಂಬಿದೆದೆಯ ಕೆಲವು ಬಗೆಗಳಲ್ಲಿ ಫುಪ್ಪುಸಕ್ಕೂ ಅಳ್ಳೆಪೊರೆಗೂ ನಡುವೆ ಇರುವ ಕಂಡಿ ತೆರೆದೇ ಇರುವುದರಿಂದ ರೋಗಿ ಉಸಿರಾಡಿದಂತೆಲ್ಲ ಸಿಳ್ಳೆಹಾಕುವ ಸದ್ದಾಗುವುದು. ಆಗ ಅಳ್ಳೆಪೊರೆಯ ಪೊಳ್ಳಿನಲ್ಲಿ ಒತ್ತಡ ಶೂನ್ಯವಾಗಿದ್ದುದು ವಾಯುವಿನ ಒತ್ತಡದ ಸಮಕ್ಕೆ ಬರುತ್ತದೆ. ಇನ್ನು ಕೆಲವರಲ್ಲಿ ಅಳ್ಳೆಪೊರೆಯ ಹರಿದ ಚೂರು ಕವಾಟದಂತಾಗಿ ಫುಪ್ಪುಸದಿಂದ ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ವಾಯು ತೂರಲು ಬಿಟ್ಟು ವಾಯು ಹಿಂತಿರುಗಲು ಬಿಡದಂತಾಗುವುದು. ಆಗ ಪೊಳ್ಳಿನೊಳಗಿನ ಒತ್ತಡ ವಿಪರೀತ ಹೆಚ್ಚಿ ಉಸಿರಾಟಕ್ಕೆ ಬಲು ತೊಡಕಾಗುತ್ತದೆ. ಕೂಡಲೇ ಎದೆಗೆ ತೂತುಸೂಜಿ ಚುಚ್ಚಿ ವಾಯುವನ್ನು ಹೊರಕ್ಕೆ ಬಿಟ್ಟರೆ ಶಮನವಾಗುವುದು.

ಕೃತಕ ಗಾಳಿತುಂಬಿದೆದೆ

[ಬದಲಾಯಿಸಿ]

ಫುಪ್ಪುಸದ ಕೆಲವು ಬಗೆಗಳ ಕ್ಷಯ, ಗಾಳಿಯುಬ್ಬಟೆ ರೋಗಗಳಲ್ಲಿ ಬೇಕೆಂದೆ ಪಕ್ಕದ ಫುಪ್ಪುಸಕ್ಕೆ ವಿರಾಮಕೊಡಲು ಅದು ಮುದುರಿಕೊಳ್ಳುವಂತೆ ಮಾಡುವುದೂ ಒಂದು ಚಿಕಿತ್ಸೆ. ಎರಡು ಪಕ್ಕೆಲುಬುಗಳ ನಡುವೆ ಎದೆಗೂಡಿನ ಗೋಡೆಯಲ್ಲಿ ತೂತುಸೂಜಿ ಚುಚ್ಚಿ ಅಳ್ಳೆಪೊರೆ ಪೊಳ್ಳಿನೊಳಕ್ಕೆ ವಾಯುವನ್ನು ಬಿಡುವರು. ಒಂದಕ್ಕೊಂದು ಕೊಳವೆಗಳ ಮೂಲಕ ಸಂಬಂಧಿಸಿರುವ ನಂಜುರೋಧಕ ದ್ರವವಿರುವ ಎರಡು ದೊಡ್ಡ ಸೀಸೆಗಳಿಗೆ ರಬ್ಬರು ಕೊಳವೆ ಮೂಲಕ ತಗಲಿಸಿದ ತೂತುಸೂಜಿಯನ್ನು ಎದೆಯೊಳಕ್ಕೆ ಚುಚ್ಚಬೇಕು. ಒಂದು ಸೀಸೆಯನ್ನು ಮೇಲೆತ್ತಿ ಹಿಡಿದರೆ ಅದರಲ್ಲಿ ದ್ರವ ಅಳ್ಳೆಪೊರೆಯ ಪೊಳ್ಳಿನೊಳಗಣ ಒತ್ತಡವನ್ನು ಒತ್ತಡಮಾಪಿ ಗುರುತಿಸುತ್ತದೆ. ಒಂದೊಂದು ಬಾರಿಗೂ ಕೊಂಚವೇ ತುಂಬಿದಾಗ ವಾಯು ಹೀರಿಹೋಗುವುದರಿಂದ ಮತ್ತೆ ಮತ್ತೆ ಅದನ್ನು ತುಂಬುತ್ತಿರಬೇಕಾಗುವುದು. ಹೀಗೇ ಎದೆಯಲ್ಲಿ ತುಂಬಿದ್ದರೆ ಆ ಭಾಗದ ಫುಪ್ಪುಸ ಚಲಿಸದೆ ಮುದುರಿಕೊಂಡು ವಿರಮಿಸುವುದರಿಂದ ಅದರೊಳಗಿನ ರೋಗ ವಾಸಿಯಾಗಲು ಅವಕಾಶ ಕೊಟ್ಟಂತಾಗುವುದು (ನೋಡಿ- ಕ್ಷಯ-2). ಕ್ಷಯ ರೋಗಾಣುಮಾರಕವಾದ ಇಂದಿನ ಹೊಸ ಮದ್ದುಗಳು ಬರುವತನಕ ಕೃತಕ ಗಾಳಿತುಂಬಿದೆದೆ ರೋಗಿಗೆ ಕ್ಷಯರೋಗಿಗೆ ಮಾಡುವ ಮದ್ದನ್ನೇ ಮಾಡಲಾಗುತ್ತಿತ್ತು. ಒಂದು ಬಾರಿ ಇದನ್ನು ಆರಂಭಿಸಿದರೆ ಎರಡು ವರ್ಷಗಳ ವರೆಗಾದರೂ ಕೊಡಬೇಕಿತ್ತು. ಇದರಿಂದ ಹಲವು ತೊಡಕುಗಳು ಏಳುತ್ತಿದ್ದವು. ಎದೆಗೆ ಹಾಕಿದ ಸೂಜಿ ಅಳ್ಳೆಪೊರೆಗೆ ತಾಗಿದ ಕೂಡಲೇ ಕೆಲವರು ಸಾಯುತ್ತಿದ್ದರು. ಒಳಗೆ ಬಿಟ್ಟ ವಾಯು ರಕ್ತನಾಳದೊಳಕ್ಕೂ ಅಪರೂಪವಾಗಿ ಹೋಗಿಬಿಡುತ್ತಿತ್ತು. ಎದೆಯಲ್ಲಿ ಸೋಂಕುಹತ್ತಿ ಕೀವು ಸೇರಿಬಿಡುತ್ತಿತ್ತು. ಉಸಿರಾಟದ ಆಳವೂ ಕುಗ್ಗಿ ಫುಪ್ಪುಸ ಮತ್ತೆ ಎಂದಿನಂತೆ ಹಿಗ್ಗದೆ ನಾರುಗಟ್ಟುತ್ತಿತ್ತು. ಎಲ್ಲಕ್ಕೂ ಹೆಚ್ಚಿನದಾಗಿ ರೋಗಿ ಸಾಕಷ್ಟು ಕಳವಳಕ್ಕೀಡಾಗುತ್ತಿದ್ದ. 1950ರಿಂದ ಈಚೆಗೆ ಈ ಚಿಕೆತ್ಸೆ ಬಳಕೆಯಲ್ಲಿಲ್ಲ.