ಗಾರ್ಡನ್ ಚಾರ್ಲ್ಸ್ ವಿಲಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾರ್ಡನ್, ಚಾರ್ಲ್ಸ್ ವಿಲಿಯಮ್ ( 1860-1937). ಕೆನಡದ ಪಾದ್ರಿ, ಜನಪ್ರಿಯ ಕಾದಂಬರಿಕಾರ. ರಾಲ್ಫ ಕೊನಾರ್ ಎಂಬ ಗುಪ್ತನಾಮದಿಂದ ಈತ ತನ್ನ ಕಾದಂಬರಿಗಳನ್ನು ಪ್ರಚುರಪಡಿಸಿದ್ದಾನೆ.


ಬದುಕು[ಬದಲಾಯಿಸಿ]

ತಂದೆ ಹೈಲ್ಯಾಂಡ್ ಸ್ಕಾಟಿಷ್ ಪ್ರೇಸ್ಟೀಟೀರಿಯನ್ ಪಂಗಡದ ಪಾದ್ರಿಯಾಗಿದ್ದ. 1883ರಲ್ಲಿ ಟರಾಂಟೋ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅನಂತರ ನಾಕ್ಸ ಕಾಲೇಜಿನಲ್ಲೂ ಎಡಿನ್ಬರೊ ವಿಶ್ವವಿದ್ಯಾಲಯದಲ್ಲೂ ದೇವತಾಶಾಸ್ತ್ರವನ್ನು ವ್ಯಾಸಂಗ ಮಾಡಿದ. 30ನೆಯ ವಯಸ್ಸಿನಲ್ಲಿ ಕೆನಡದ ರಾಕೀಸ್ ಪ್ರದೇಶದಲ್ಲಿ ಗಣಿಕಾರ್ಮಿಕರ ಮತ್ತು ಮರ ಕಡಿಯುವವರ ಜೊತೆಯಲ್ಲಿ ಮೂರು ವರ್ಷ ಕ್ರೈಸ್ತಧರ್ಮ ಪ್ರಚಾರಕನಾಗಿ ದುಡಿದ. ಒಂದನೆಯ ಮಹಾಯುದ್ಧದಲ್ಲಿ ಪಾದ್ರಿಯಾಗಿ ಕೆನಡದ ಕಡಲಪಡೆಯಲ್ಲಿ ಸೇವೆ ಮಾಡಿದ. ಗ್ಲೆನ್ಗ್ಯಾರಿಯಲ್ಲಿ ಕಳೆದ ಬಾಲ್ಯದ ನೆನೆಪುಗಳೂ ಆಮೇಲೆ ಧರ್ಮಬೋಧಕನಾಗಿ ಪಡೆದ ಅನುಭವಗಳೂ ಈತನ ಕಾದಂಬರಿಗಳಿಗೆ ಸಾಮಗ್ರಿಯಾದವು.

ಇವನ ಇನ್ನೊಂದು ಸಾಧನೆಯೆಂದರೆ ಕೆನಡದ ಯುನೈಟೆಡ್ ಚರ್ಚಿನ ಸ್ಥಾಪನೆಗೆ ನೆರವಾಗಿದ್ದು. ವಿನಿಪೆಗ್ನ ಸೇಂಟ್ ಸ್ಟೀಫನ್ ಚರ್ಚಿನಲ್ಲಿ ನಲವತ್ತು ವರ್ಷಗಳಿಗೂ ಮೇಲ್ಪಟ್ಟು ಪಾದ್ರಿಯಾಗಿ ಈತ ಸೇವೆ ಸಲ್ಲಿಸಿದ.

ಬರಹ[ಬದಲಾಯಿಸಿ]

ಬಿಯಾಂಡ್ ದಿ ಮಾರ್ಷಸ್ ಎಂಬ ತನ್ನ ಮೊದಲ ಗ್ರಂಥದಲ್ಲಿ ಪ್ರಚಾರಕ ದಿನಗಳ ಕತೆಯನ್ನು ಈತ ಹೇಳಿದ್ದಾನೆ. ಇದಲ್ಲದೆ ತೀವ್ರ ಭಾವುಕತೆಯಿಂದ ತುಂಬಿದ ಬೋಧಪ್ರದವಾದ ಮೂವತ್ತು ಕಾದಂಬರಿಗಳನ್ನು ಈತ ರಚಿಸಿದ್ದಾನೆ. ಚುರುಕಾದ ಕಥನ, ಆಕರ್ಷಕ ಶೈಲಿಗಳಿಂದ ಈತನ ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದುವು. ಬ್ಲ್ಯಾಕ್ ರಾಕ್, ದಿ ಸ್ಕೈ ಪೈಲಟ್, ದಿ ಮ್ಯಾನ್ ಫ್ರಮ್ ಗ್ಲೆನ್ಗ್ಯಾರಿ, ದಿ ಪ್ರಾಸ್ಪೆಕ್ಟ್, ಗ್ಲೆನ್ಗ್ಯಾರಿ ಸ್ಕೂಲ್ ಡೇಸ್, ದಿ ಗರ್ಲ್ ಫ್ರಮ್ ಗ್ಲೆನ್ಗ್ಯಾರಿ - ಮುಂತಾದವು ಇವನ ಪ್ರಸಿದ್ಧ ಕಾದಂಬರಿಗಳು. ಈ ಕೃತಿಗಳಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಇವನ ಕತೆಗಳಲ್ಲಿ ಎದ್ದು ಕಾಣುವ ಸಾಹಸ ಪ್ರೇಮ ಹಾಗೂ ಮಾನವಸೇವಾಬುದ್ಧಿ. ಪೋಸ್ಟಸ್ಕ್ರಿಪ್ಟ್ ಅಡ್ವೆಂಚರ್ ಎಂಬ ಹೆಸರಿನ ಆತ್ಮಕಥೆ ಇವನ ಮರಣಾನಂತರ 1938ರಲ್ಲಿ ಪ್ರಕಟವಾಯಿತು.