ವಿಷಯಕ್ಕೆ ಹೋಗು

ಗಾಮಿತ್ ಜನಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಮಿತ್ ಜನಾಂಗದವರು ಸೂರ್ಯ ರಾಜವಂಶದ ಮರಾಠ ಸಮುದಾಯಕ್ಕೆ ಸೇರಿದವರು ಎನ್ನುವ ನಂಬಿಕೆಯಿದೆ. ಅವರು ಭಾರತದ ಗುಜರಾತ್‌ನ ಮೂಲನಿವಾಸಿಗಳು. ಅವರು ಮುಖ್ಯವಾಗಿ ಗುಜರಾತ್‍ನ ತಾಪಿ, ಸೂರತ್, ದಾಂಗ್, ಭರೂಚ್, ವಲ್ಸಾದ್, ನವಸಾರಿ ಜಿಲ್ಲೆಗಳಲ್ಲಿ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ವಾಸಿಸುವುದು. ಕಂಡುಬಂದಿದೆ. ಅವರನ್ನು ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. [೧] [೨] [೩]

ತಾವು ಮರಾಠಾ ಸಾಮ್ರಾಜ್ಯದ ಸೂರ್ಯ ವಂಶದ ಮರಾಠ ಸಮುದಾಯಕ್ಕೆ ಸೇರಿದವರೆಂದೂ , ಛತ್ರಪತಿ ಶಿವಾಜಿ ಮಹಾರಾಜ್, ಸಂಭಾಜಿ ಮಹಾರಾಜ್, ಸಾಹು ಮಹಾರಾಜ್ ಮತ್ತು ಇತರ ರಾಜರುಗಳ ಆಳ್ವಿಕೆಯ ಕಾಲದಲ್ಲಿ ಮರಾಠ ಸಾಮ್ರಾಜ್ಯದ ಅಶ್ವಸೈನ್ಯದ ಭಾಗವಾಗಿದ್ದರೆಂದೂ ಗಾಮಿತ್ ಜನಾಂಗದವರ ನಂಬಿಕೆ. ಅವರು ಸಿಂಧ್ ಪ್ರದೇಶದ ಖೈಬರ್ ಘಾಟ್ ಮತ್ತು ಬೋಲಾನ್ ಘಾಟ್ ಮೂಲಕ ಭಾರತಕ್ಕೆ ವಲಸೆ ಬಂದು, ನಂತರ ಮಾರ್ವಾಡ್ ಪ್ರದೇಶಗಳಿಗೆ ಹೋಗಿರಬಹುದು ಎಂದು ನಂಬಲಾಗಿದೆ. ಹೋಳಿ ಹಬ್ಬದ ಸಮಯದಲ್ಲಿ ವೃದ್ಧ ಗಾಮಿತ್ ಮಹಿಳೆಯರು ಹಾಡುವ ಲೀಲ್ ಹಾಡುಗಳಲ್ಲಿ ಇದರ ಉಲ್ಲೇಖವಿದೆ. ಅವರು ಸಾಮಾಜಿಕ ಅಥವಾ ಧಾರ್ಮಿಕ ಸಂದರ್ಭಗಳಲ್ಲಿ 'ಪೂಜೆ' ಮಾಡುತ್ತಾರೆ. ಅವರು ಪೂಜಿಸುವ ಮುಖ್ಯ ದೇವತೆ ಸೂರ್ಯ. ಇತರ ದೇವತೆಗಳಿಗೆ ಸೂರ್ಯನ ನಂತರದ ಸ್ಥಾನವಿರುತ್ತದೆ. 'ಗಾಮಿತ್' ಪದವು ಗ್ರಾಮ ಎನ್ನುವುದನ್ನು ಸೂಚಿಸುವ 'ಗಾಮ್ ' ಎಂಬ ಪದದಿಂದ ಬಂದಿದೆ ಎನ್ನುವುದು ಇನ್ನೊಂದು ಅಭಿಪ್ರಾಯ. ಗ್ರಾಮ ಅಥವಾ ಗಾಮ್‍ನಲ್ಲಿ ನೆಲೆಸಿದವರು ಗಾಮಿತ್‍ಗಳು . ಅವರನ್ನು ವಸಾವ (ನೆಲೆಸಿದವರು) ಎಂದೂ ಕರೆಯುತ್ತಾರೆ. [೨]

ಭೌಗೋಳಿಕ ಹಂಚಿಕೆ

[ಬದಲಾಯಿಸಿ]

ಗಾಮಿತ್‍ಗಳು ಸೂರತ್, ಭರೂಚ್, ವಲ್ಸಾದ್ ಮತ್ತು ದಾಂಗ್ ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಸೂರತ್ ಜಿಲ್ಲೆಯಲ್ಲಿ, ಅವರು ವ್ಯಾರಾ, ಸೋನ್‍ಗಢ್, ಉಚ್ಛಲ್ ಮತ್ತು ನಿಜ಼ಾರ್ ತಾಲೂಕುಗಳಲ್ಲಿ ವಾಸಮಾಡುತ್ತಾರೆ. ಅವರನ್ನು ಗಾಮಿತ್ ಅಥವಾ ಮಾವಾಚಿ ಎಂದು ಕರೆಯಲಾಗುತ್ತದೆ. ಪಡ್ವಿ, ವಲವಿ ಹಾಗೂ ವಸಾವ ಅವರ ಉಪಪಂಗಡಗಳು. ಗ್ರಾಮದಲ್ಲಿ ನೆಲೆಯೂರಿದ ಭೀಲ್‌ ಜನಾಂಗದ ಉಪ-ಪಂಗಡವೇ ಗಾಮಿತ್ ಜನಾಂಗ ಎನ್ನುವ ನಂಬಿಕೆಯಿದೆ. ೨೦೦೧ ರ ಜನಗಣತಿಯ ಪ್ರಕಾರ, ಗಾಮಿತ್‍ಗಳ ಒಟ್ಟು ಜನಸಂಖ್ಯೆ ೩,೫೪,೩೬೨. ಇದರಲ್ಲಿ ೧,೭೬,೭೮೦ ಪುರುಷರು ಮತ್ತು ೧,೭೭,೫೮೨ ಮಹಿಳೆಯರು. ಒಟ್ಟು ಬುಡಕಟ್ಟು ಜನಸಂಖ್ಯೆಯಲ್ಲಿ ಗಾಮಿತ್‍ಗಳ ಶೇಕಡಾವಾರು ಜನಸಂಖ್ಯೆ ೪.೭೪% .

ಆವಾಸಸ್ಥಾನಗಳು ಮತ್ತು ಪೀಠೋಪಕರಣಗಳು

[ಬದಲಾಯಿಸಿ]

ಗಾಮಿತ್‍ಗಳು ಗ್ರಾಮಗಳಲ್ಲಿ ವಾಸಿಸುತ್ತಾರೆ. ಅವರ ಮನೆಗಳು ನಗರದಲ್ಲಿನ ವಠಾರಗಳಂತೆ ನೇರವಾಗಿ ಒಂದೇ ಸಾಲಿನಲ್ಲಿಲ್ಲ. ಅವು ಹತ್ತಿರದಲ್ಲಿಯೇ ಇದ್ದರೂ, ಒಂದಕ್ಕೊಂದು ಸ್ವತಂತ್ರವಾಗಿವೆ. ಎಲ್ಲ ಮನೆಗಳ ನಾಲ್ಕು ಗೋಡೆಗಳ ಸುತ್ತಲೂ ವಿಶಾಲವಾದ ಜಾಗವಿದೆ. ಕೆಲವೊಮ್ಮೆ ಮನೆಗಳನ್ನು ಸಣ್ಣ ಬೆಟ್ಟಗಳ ಮೇಲೆ ನಿರ್ಮಿಸಲಾಗುತ್ತದೆ. ಇನ್ನು ಕೆಲವು ಬೆಟ್ಟಗಳ ಬುಡದಲ್ಲಿರುತ್ತವೆ. ಮಣ್ಣು, ಹಸುವಿನ ಸಗಣಿ ಮತ್ತು ಭತ್ತದ ಹುಲ್ಲುಗಳು ಮನೆಯನ್ನು ನಿರ್ಮಿಸಲು ಬಳಸುವ ಸಾಮಗ್ರಿಗಳು. ಗೋಡೆಗಳನ್ನು ಬಿದಿರಿನಿಂದ ನಿರ್ಮಿಸುತ್ತಾರೆ. ಛಾವಣಿಗಳನ್ನು ಹವಾಮಾನಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ಛಾವಣಿಗಳನ್ನು ಮುಚ್ಚಲು ಸ್ಥಳೀಯ ಅಥವಾ ಮಂಗಲೋರಿ ಹಾಸುಗಳನ್ನು ಬಳಸಲಾಗುತ್ತದೆ. ಆಧುನಿಕ ಕಾಲದಲ್ಲಿ, ಕೆಲವು ಮನೆಗಳು ಆರ್.ಸಿ.ಸಿ ಛಾವಣಿಗಳನ್ನು ಹೊಂದಿವೆ. ಗಾಮಿತ್‍ಗಳು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಾರೆ. ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಉಕ್ಕು, ಮಣ್ಣು ಅಥವಾ ಗಾಜಿನಿಂದ ಮಾಡಿದ ಪಾತ್ರೆಗಳನ್ನು ಬಳಸುತ್ತಾರೆ. ಇದಲ್ಲದೆ ಹಾಸಿಗೆಗಳು, ಮಂಚಗಳು, ಸೀಮೆಎಣ್ಣೆ ದೀಪ ಮತ್ತು ಮರದ ಬಡು , ಆಹಾರ-ಧಾನ್ಯವನ್ನು ಸಂಗ್ರಹಿಸಲು ಡ್ರಮ್, ರೇಡಿಯೋ, ಟಿವಿ, ಟೇಪ್ ರೆಕಾರ್ಡರ್, ಟಿನ್ ಡಬ್ಬಿ, ಸ್ಟೀಲ್ ಬೀರು ಇತ್ಯಾದಿಗಳನ್ನು ಬಳಸುತ್ತಾರೆ.

ಸಂಗೀತ ವಾದ್ಯಗಳು

[ಬದಲಾಯಿಸಿ]

ಚರ್ಮದಿಂದ ಮಾಡಿದ ಸಂಗೀತದ ಉಪಕರಣಗಳ ಜೊತೆಗೆ, ಲೋಹದ ತಂತಿಗಳು, ಶಂಖ, ಧನ್, ಪೈಪ್, ನೋಲಿ, ಪವಾರಿ, ಡೊಬ್ರು, ಘೋಂಗಾಲಿ ಇತ್ಯಾದಿಗಳನ್ನು ಬಳಸುತ್ತಾರೆ.

ಉಡುಗೆ

[ಬದಲಾಯಿಸಿ]

ಹಳೆಯ ಪೀಳಿಗೆಯವರು ಸಾಂಪ್ರದಾಯಿಕ ಉಡುಗೆಗಳನ್ನೇ ಈಗಲೂ ತೊಡುತ್ತಾರೆ. ಮಕ್ಕಳು ಬುಷ್-ಶರ್ಟ್ ಮತ್ತು ಅರ್ಧ ಪ್ಯಾಂಟ್, ಯುವಕರು ಶರ್ಟ್ ಮತ್ತು ಪ್ಯಾಂಟ್ ಧರಿಸುತ್ತಾರೆ. ಹುಡುಗಿಯರು ಹಳೆಯ-ಶೈಲಿಯ ಫ್ರಾಕ್ ಅಥವಾ ಆಧುನಿಕ ಪಂಜಾಬಿ ಉಡುಪುಗಳನ್ನು ಬಯಸುತ್ತಾರೆ. ಪುರುಷರು ಪ್ಯಾಂಟ್-ಶರ್ಟ್ ಮತ್ತು ಮಹಿಳೆಯರು ಪಂಜಾಬಿ ಉಡುಗೆ ಅಥವಾ ಸೀರೆ, ಬ್ಲೌಸ್ ಮತ್ತು ಪೆಟಿ-ಕೋಟ್/ಚನಿಯ ಧರಿಸುತ್ತಾರೆ. ವಯಸ್ಕರು ಕಡ್ಡಾಯವಾಗಿ ಟೋಪಿ ಧರಿಸುತ್ತಾರೆ. ಹಿರಿಯ ಮಹಿಳೆಯರು ಮಹಾರಾಷ್ಟ್ರ ಶೈಲಿಯಲ್ಲಿ ಕಚ್ಚೆ ಸೀರೆಯನ್ನು ಉಡುತ್ತಾರೆ .

ಆಭರಣಗಳು

[ಬದಲಾಯಿಸಿ]

ಗಾಮಿತ್ ಮಹಿಳೆಯರು ಆಭರಣಗಳನ್ನು ಇಷ್ಟಪಡುತ್ತಾರೆ. ಕುತ್ತಿಗೆಯಲ್ಲಿ ಕಂಠಿ (ವೃತ್ತಾಕಾರದ , ಘನವಾದ ಹಾರ) ಅಥವಾ ಸರ ( ಆಛೋಡೋ)ವನ್ನು ಧರಿಸುತ್ತಾರೆ . ಮೂಗಿಗೆ ಡೊಂಟೋ, ಕಿವಿಗೆ ವೃತ್ತಾಕಾರದ ಓಲೆ , ಕೈಯಲ್ಲಿ ಬಳೆಗಳು, ಕಂಕು ಅಥವಾ ಕಂಕಣ, ಕಾಲುಗಳಿಗೆ ಕಡಲಾ (ವೃತ್ತಾಕಾರದ ಕಾಲ್ಬಳೆ), ಅಥವಾ ಸಣ್ಣ ಗೆಜ್ಜೆಗಳನ್ನು ಹೊಂದಿರುವ ಅಂಕ್ಲಾ ಧರಿಸುತ್ತಾರೆ. ಪುರುಷರು ಸೊಂಟದ ಸುತ್ತ ಬೆಳ್ಳಿಯ ಉಡುದಾರ, ಕೈಬೆರಳುಗಳಿಗೆ ಉಂಗುರ ಹಾಗೂ ಕಾಲ್ಬೆರಳುಗಳಿಗೆ ಡೋಲೋ ಧರಿಸುತ್ತಾರೆ. ಇವುಗಳ ಜೊತೆಗೆ ಇನ್ನೂ ಹಲವಾರು ಆಭರಣಗಳು ಬಳಸಲಾಗುತ್ತವೆ.

ಆಡುಭಾಷೆ

[ಬದಲಾಯಿಸಿ]

ಗಾಮಿತ್‍ಗಳು ತಮ್ಮದೇ ವಿಶಿಷ್ಟ ಆಡುಭಾಷೆಯನ್ನು ಮಾತ್ರ ಬಳಸುತ್ತಾರೆ . ಅದನ್ನು '೫೨ ಕುಟುಂಬಗಳ ಗಾಮಿತ್' ಎಂದು ಕರೆಯಲಾಗುತ್ತದೆ. ಅವರು ಮಾತನಾಡುವ ಭಾಷೆಗೆ ನಿರ್ದಿಷ್ಟ ಸ್ವರೂಪ ಎಂಬುದಿಲ್ಲ. [೪]

ಆಹಾರ ಮತ್ತು ಪಾನೀಯ

[ಬದಲಾಯಿಸಿ]

ಆಹಾರ ಧಾನ್ಯಗಳಾದ ನಾಗಲಿ, ಜೋಳ , ಅಕ್ಕಿ, ಮೆಕ್ಕೆಜೋಳ (ರೊಟ್ಟಿ ತಯಾರಿಸಲು), ಉದ್ದು, ತೊಗರಿ, ಇವುಗಳ ಜೊತೆಗೆ ಆಯಾ ಕಾಲದಲ್ಲಿ ದೊರೆಯುವ ತರಕಾರಿ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಬಳಸುತ್ತಾರೆ. ಚಪಾತಿ ಮತ್ತು ಬೇಳೆಕಾಳುಗಳನ್ನು ಸೇವಿಸುತ್ತಾರೆ. ಸಾಮಾನ್ಯವಾಗಿ ಅವರು ಮಾಂಸ, ಮೀನು, ವೈನ್ ಮತ್ತು ಹೆಂಡವನ್ನು ಸೇವಿಸುತ್ತಾರೆ. ಆದರೆ ಭಕ್ತಿ ಪಂಥಕ್ಕೆ ಸೇರಿದವರು ಈ ವಸ್ತುಗಳಿಂದ ದೂರವಿರುತ್ತಾರೆ.

ಶಿಕ್ಷಣ

[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ, ಗಾಮಿತ್‍ ಜನರ ಸಾಕ್ಷರತೆಯ ಮಟ್ಟ ೫೨.೯೧%. ಗಾಮಿತ್‍ಗಳು ಈಗೆಲ್ಲ ಗ್ರಾಮ ಹಾಗೂ ನಗರ ನಿವಾಸಿಗಳಾಗಿದ್ದಾರೆ. ಹೀಗಾಗಿ ಶಿಕ್ಷಣದಲ್ಲಿ ಮೀಸಲಾತಿ ಮುಂತಾದ ಸರ್ಕಾರಿ ಸೌಲಭ್ಯಗಳನ್ನು ಅವರು ಬಳಸಿಕೊಳ್ಳಬಹುದಾಗಿದೆ.

ಗಾಮಿತ್‍ಗಳಲ್ಲಿ ಸುಮಾರು ೮೯% ಹಿಂದುಗಳು ಮತ್ತು ೧೧% ಕ್ರಿಶ್ಚಿಯನ್ನರಿದ್ದಾರೆ [೫] ಅವರು ಹಿಂದೂ ದೇವತೆಗಳನ್ನು ನಂಬುತ್ತಾರೆ. ಸಾಂಪ್ರದಾಯಿಕ ದೇವತೆಗಳು ದೇವ್ಲಿ, ಮಾಡಿ, ಗೌಮುಖ್, ಡುಂಗರ್ ದೇವ್, ಗೋವಾಲ್ ದೇವ್ ಹಾಗೂ ಅನಾಜ್ ದೇವ್. ಅವರು ಕೆಲವು ಉದ್ದೇಶಗಳಿಗಾಗಿ ಹರಕೆ ಹೊತ್ತು ತೀರ್ಥಯಾತ್ರೆಗಳನ್ನು ಮಾಡುತ್ತಾರೆ. ಗಾಮ್ ದೇವ್ ಹಬ್ಬ, ಹೋಳಿ, ಗೋವಾಲ್ ದೇವ್ ಹಬ್ಬ, ವಾಘದೇವ್ ಮಹಾದೇವ್, ದಸರಾ, ದೀಪಾವಳಿ, ಮತ್ತು ನಾನೊ ದೇವ್-ಮೋಟೋ ದೇವ್ ಹಬ್ಬಗಳನ್ನು ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಗಾಮಿತ್‍ಗಳು ಕ್ರಿಸ್‌ಮಸ್ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ.

ಉದ್ಯೋಗ

[ಬದಲಾಯಿಸಿ]

ಗಾಮಿತ್‍ಗಳು ಸಾಮಾನ್ಯವಾಗಿ ಕೃಷಿಕರು. ಭೂಸ್ವಾಮ್ಯವನ್ನು ಕಳೆದುಕೊಂಡ ಕೆಲವರು, ಕೃಷಿ ಕಾರ್ಮಿಕರಾಗಿ ಅಥವಾ ಇತರ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ವಿದ್ಯಾವಂತ ಗಾಮಿತ್‍ಗಳು ಪಶು ಸಂಗೋಪನೆ, ಇಲ್ಲವೇ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಬಯಸುತ್ತಾರೆ.

ಜಾತಿ-ಪಂಚ್

[ಬದಲಾಯಿಸಿ]

ಸಾಮಾಜಿಕ ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ನಿಬಂಧನೆಗೆ ಒಳಪಡಿಸಲು ಗಾಮಿತ್ ಸಮುದಾಯದಲ್ಲಿ, ಔಪಚಾರಿಕ ಅಥವಾ ಅನೌಪಚಾರಿಕವಾದ ಜಾತಿ-ಪಂಚ್ ವ್ಯವಸ್ಥೆಯಿದೆ. ತಮ್ಮ ಸಮುದಾಯದವರು ನಿಯಮ ಮತ್ತು ನಿಬಂಧನೆಗಳಿಗೆ ಬದ್ಧರಾಗಿರುವಂತೆ ಗಾಮಿತ್‍ಗಳು ಒಟ್ಟಾಗಿ ಸೇರಿ ಜಾತಿ-ಪಂಚ್‍ಅನ್ನು ನಿಯೋಜಿಸುತ್ತಾರೆ . ಅವರಿಗೆ ತಮ್ಮದೇ ಆದ ಲಿಖಿತ ಸಂವಿಧಾನವಿದೆ. ಮದುವೆ, ಮರುಮದುವೆ, ವಿಚ್ಛೇದನ, ಶಿಕ್ಷಣ ಇತ್ಯಾದಿಗಳ ಮೇಲ್ವಿಚಾರಣೆಯನ್ನು ಜಾತಿ-ಪಂಚ್ ವ್ಯವಸ್ಥೆಯೆ ಮೂಲಕ ಮಾಡಲಾಗುತ್ತದೆ.

ಜೀವನ ಚಕ್ರ

[ಬದಲಾಯಿಸಿ]

ಗಾಮಿತ್‍ ಸಮುದಾಯದ ಜೀವನ ಚಕ್ರವು ಮೂರು ಮುಖ್ಯ ಆಯಾಮಗಳನ್ನು ಒಳಗೊಂಡಿದೆ: ಜನನ, ಮದುವೆ ಮತ್ತು ಮರಣ.

ಮಗುವಿನ ಜನನ

[ಬದಲಾಯಿಸಿ]

ಗಾಮಿತ್ ಹುಡುಗಿಯ ಮೊದಲ ಹೆರಿಗೆ ಹೆತ್ತವರ ಮನೆಯಲ್ಲಿಯೇ ಆಗಬೇಕು ಎನ್ನುವ ನಿಯಮವಿಲ್ಲ. ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಸ್ಥಳಕ್ಕೆ ಆದ್ಯತೆ ನೀಡಲಾಗುತ್ತದೆ. ನವಜಾತ ಶಿಶುವಿಗೆ ಸ್ನಾನ ಮಾಡಿಸಲು ಐದು ದಿನಗಳವರೆಗೆ ಮನೆಗೆ 'ದಾಯಿ' ಬರುತ್ತಾರೆ. ಮಗು ಜನಿಸಿದ ಐದನೇ ದಿನ 'ಪಂಚಾರೋ' ಅಥವಾ ಆರನೇ ದಿನ 'ಛಾತಿ' ಆಚರಿಸಲಾಗುತ್ತದೆ.

ನಿಶ್ಚಿತಾರ್ಥ

[ಬದಲಾಯಿಸಿ]

ನಿಶ್ಚಿತಾರ್ಥಕ್ಕಾಗಿ ಹುಡುಗನ ಕಡೆಯವರು ಹುಡುಗಿಯ ಮನೆಗೆ ಹೋಗುತ್ತಾರೆ. ಅವರು ಸಂಬಂಧ ಸೂಕ್ತವೆಂದು ಕಂಡುಬಂದರೆ, 'ಪಿಯಾನ್' ಅಂದರೆ ಭರವಸೆಯನ್ನು ನೀಡಲು ನಿರ್ಧರಿಸುತ್ತಾರೆ. ಆತ್ಮೀಯತೆಯನ್ನು ಬೆಳೆಸುವ ಸಲುವಾಗಿ ಪರಸ್ಪರ ಮನೆಗಳಿಗೆ ಭೇಟಿ ನೀಡಬಹುದು.

ಮದುವೆ

[ಬದಲಾಯಿಸಿ]

ಸಾಮಾನ್ಯವಾಗಿ ಮಂಗಳವಾರ ಅಥವಾ ಗುರುವಾರ ಮದುವೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮದುವೆಗಾಗಿ ಮನೆಯ ಮುಂದೆ ಪಂಡಾಲ್‍ ಅಥವಾ ಚಪ್ಪರವನ್ನು ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಸಮುದಾಯದ ಜನರು ಅಥವಾ ನೆರೆಹೊರೆಯವರು ಇದಕ್ಕೆ ಸಹಾಯ ಮಾಡುತ್ತಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವವರನ್ನು ಆಹ್ವಾನಿಸಲು, ಆರಿಶಿನ ಅಥವಾ ಕುಂಕುಮದ ಜೊತೆ ಅಕ್ಕಿಯನ್ನು ಮನೆಯ ಹೊಸ್ತಿಲಲ್ಲಿ ಇರಿಸಲಾಗುತ್ತದೆ. ಇದು ಒಂದು ಸಂಕೇತ. ಇತ್ತೀಚಿನ ದಿನಗಳಲ್ಲಿ, ಇದರೊಂದಿಗೆ ಮುದ್ರಿತ ಆಹ್ವಾನ ಪತ್ರಿಕೆಯನ್ನು ನೀಡಲಾಗುತ್ತದೆ. ಮದುವೆಯನ್ನು ಸಾಂಪ್ರದಾಯಿಕವಾಗಿಯೂ ಹಿಂದೂ ಸಂಪ್ರದಾಯಗಳ ಪ್ರಕಾರವಾಗಿಯೂ ಬ್ರಾಹ್ಮಣರು ನಡೆಸುತ್ತಾರೆ. ಮದುವೆಯ ಅಂಗವಾಗಿ ಭೋಜನ ಇರುತ್ತದೆ. ಈ ಸಮುದಾಯದವರು ಆನಾ, ಖಾಂಡಾದ್ ವಿವಾಹ, ಪ್ರೇಮ ವಿವಾಹ, ಹೆಂಡತಿಯ ಮರಣದ ನಂತರ ಹೆಂಡತಿಯ ಸಹೋದರಿಯನ್ನು ಮದುವೆಯಾಗುವುದು (ಸಾಲೀವತು) ಅಥವಾ ಗಂಡ ಮರಣ ಹೊಂದಿದಾಗ ಗಂಡನ ಕಿರಿಯ ಸಹೋದರನನ್ನು ಮದುವೆಯಾಗುವುದು, (ದಿಯಾರ್ವತು), ಬಹುಪತ್ನಿತ್ವ ಮತ್ತು ವಿಚ್ಛೇದನದ ನಂತರ ಮರುಮದುವೆ - ಈ ಎಲ್ಲ ಪದ್ಧತಿಗಳನ್ನು ಅನುಸರಿತ್ತಾರೆ.

ವಿಚ್ಛೇದನ

[ಬದಲಾಯಿಸಿ]

ಮದುವೆಯಾದ ಮೂರು ವರ್ಷಗಳೊಳಗೆ ಈ ಸಮುದಾಯದಲ್ಲಿ ಯಾವುದೇ ವಿಚ್ಛೇದನ ನೀಡಲಾಗುವುದಿಲ್ಲ. ಸಂಗಾತಿಯು ಜೀವಿಸುತ್ತಿರುವಾಗ ಯಾವುದೇ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳಲಾಗುವುದಿಲ್ಲ, ಅಥವಾ ಯಾರೊಂದಿಗೂ ಮದುವೆಗೆ ಅನುಮತಿ ಇಲ್ಲ. ಈ ನಿಯಮವನ್ನು ಪಾಲಿಸದೇ ಇರುವವರಿಗೆ ರೂ. ೩೫೧/- ದಂಡ ವಿಧಿಸಲಾಗುತ್ತದೆ. ವಿವಾದ ಬಗೆಹರಿಯದಿದ್ದಲ್ಲಿ, ನ್ಯಾಯಾಲಯದ ಮೊರೆ ಹೋಗಬಹುದು.

ಮರುಮದುವೆ

[ಬದಲಾಯಿಸಿ]

ವಿಧವೆಗೆ ಮಗುವಿದ್ದರೆ ಮರುಮದುವೆಯಾಗಲು ಅನುಮತಿಯಿದೆ. ರೂ. ೩೨/- ನೀಡುವ ನಿಯಮವಿದೆ. ಎಲ್ಲ ಮದುವೆಗಳನ್ನು ವಧು-ವರರ ಸಹಿಯೊಂದಿಗೆ ಪುಸ್ತಕದಲ್ಲಿ ನೋಂದಾಯಿಸಲಾಗುತ್ತದೆ.

ಗಮಿತ್ ಕುಟುಂಬದಲ್ಲಿ ಸಾವು ಸಂಭವಿಸಿದಲ್ಲಿ, ತಲೆ ಉತ್ತರಕ್ಕೆ ಹಾಗೂ ಕಾಲುಗಳು ದಕ್ಷಿಣಕ್ಕೆ ಬರುವಂತೆ ದೇಹವನ್ನು ರುಬ್ಬುವ ಕಲ್ಲಿನ ಬಳಿ ಇರಿಸಲಾಗುತ್ತದೆ. ಮೃತ್ಯುವನ್ನು ಘೋಷಿಸಲು ಡ್ರಮ್ ವಾದ್ಯವನ್ನು ವಿಶಿಷ್ಟ ರೀತಿಯಲ್ಲಿ ಬಾರಿಸಲಾಗುತ್ತದೆ. ಜನರು ಬಂದು ಅಳುತ್ತಾರೆ. ಮೃತ ದೇಹವನ್ನು ದಹನ ಮಾಡಬಹುದು ಅಥವಾ ಹೂಳಬಹುದು. ಮಗುವಿನ ದೇಹವನ್ನು ಹೂಳಲಾಗುತ್ತದೆ. ಅಂಬ್ಲಿ, ಬಬೂಲ್ ಮತ್ತು ಟಿಕ್ ಮರಗಳನ್ನು ಶವ ಸಂಸ್ಕಾರಕ್ಕೆ ಬಳಸಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಚಿತಾಗ್ನಿಯ ಮುಂದೆ ಅಗ್ನಿ ತುಂಬಿದ ಮಡಕೆಯನ್ನು ಹೊರುವ ವ್ಯಕ್ತಿ ಗ್ರಾಮದ ವಿಶೇಷ ವ್ಯಕ್ತಿಯಾಗಿರುತ್ತಾನೆ. ಮೃತ ವ್ಯಕ್ತಿಯ ದೇಹದಲ್ಲಿರುವ ಆಭರಣಗಳನ್ನು ತೆಗೆದು ಮೃತ ದೇಹವನ್ನು ನದಿಯ ತೀರಕ್ಕೆ ಕೊಂಡೊಯ್ಯಲಾಗುತ್ತದೆ. ಕುಟುಂಬದ ಸದಸ್ಯರು ಏಳು ಬಾರಿ ಮೃತ ದೇಹವನ್ನು ಸುತ್ತಿ ಬರುತ್ತಾರೆ. ಮೃತ ದೇಹದ ಬಾಯಿಯನ್ನು ಖಾಖ್ರಾ ಬ್ರಷ್‌ನಿಂದ ಸ್ವಚ್ಛಗೊಳಿಸಿ ಮೊಸರು, ಖಿಚಡಿ, ವೈನ್ ಇತ್ಯಾದಿಗಳನ್ನು ಬಾಯಲ್ಲಿಡುತ್ತಾರೆ. ನಂತರ ದೇಹವನ್ನು ಚಿತೆಯ ಮೇಲಿರಿಸಿ ಸಂಬಂಧಿಕರು ಚಿತೆಗೆ ಬೆಂಕಿಯಿಡುತ್ತಾರೆ. ನಂತರ, ನದಿ ಅಥವಾ ಬಾವಿಯಲ್ಲಿ ಸ್ನಾನ ಮಾಡಿ ಶ್ಮಶಾನದಿಂದ ಮನೆಗೆ ಮರಳಿ, ಮೃತರ ಮನೆಯಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಂಡು 'ಟೂರ್' ವಾದ್ಯವನ್ನು ನುಡಿಸುತ್ತಾರೆ. ಶ್ಮಶಾನಕ್ಕೆ ಹೋಗಿಬಂದವರಿಗೆ ಸಕ್ಕರೆ ಮತ್ತು ಬೆಲ್ಲವನ್ನು ನೀಡಲಾಗುತ್ತದೆ. ದಹೋದೊ-ಪಾರಿ, ಖತ್ರು, ಬರ್ಮಾ (ಸಾವಿನ ನಂತರ ಊಟವನ್ನು ನೀಡುವುದು), ಪೂಜೆಯನ್ನು ಮಾಡುವುದು ಮುಂತಾದ ಪದ್ಧತಿಗಳೂ ಇವೆ.

ವಿಶೇಷತೆ

[ಬದಲಾಯಿಸಿ]

ಗಾಮಿತ್ ಜನಾಂಗದಲ್ಲಿ ಮದುವೆಗಳು ಹೆಚ್ಚಾಗಿ ಒಂದೇ ಗೋತ್ರದವರ ಮಧ್ಯೆ ನಡೆಯುತ್ತದೆ . ಸಾಮಾನ್ಯವಾಗಿ ಪರಿಚಿತ ಕುಟುಂಬದಲ್ಲಿ ವಧು/ವರಾನ್ವೇಷಣೆ ನಡೆಯುತ್ತದೆ. ಅಸ್ತಲಾ, ಮಾವ್ಲಿ ಮತ್ತು ವಾಘದೇವ್ ಅವರು ಆರಧಿಸುವ ದೇವತೆಗಳು. ಆಗಾಗ, ಆ ದೇವತಗಳ ಕ್ಷೇತ್ರಕ್ಕೆ ಭೇಟಿ ನೀಡಿ, ನೃತ್ಯ, ಸಂಗೀತಗಳೊಂದಿಗೆ ಹಬ್ಬಗಳನ್ನು ಆಚರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://tribal.nic.in/ST/LatestListofScheduledtribes.pdf
  2. ೨.೦ ೨.೧ "ಆರ್ಕೈವ್ ನಕಲು". Archived from the original on 2021-12-29. Retrieved 2021-10-03.
  3. "ಆರ್ಕೈವ್ ನಕಲು". Archived from the original on 2021-10-03. Retrieved 2021-10-03.
  4. https://indiantribalheritage.org/?p=25003
  5. https://joshuaproject.net/people_groups/16781/IN