ಗಾತಿಕ್ ವಾಸ್ತು ಶೈಲಿ

ವಿಕಿಪೀಡಿಯ ಇಂದ
Jump to navigation Jump to search

ಗಾತಿಕ್ ವಾಸ್ತು ಶೈಲಿ[ಬದಲಾಯಿಸಿ]

ಈ ಶೈಲಿ ಎಲ್ಲಿ ಮತ್ತು ಹೇಗೆ ಉಗಮವಾಯಿತು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇಂಗ್ಲಿಷ್ ಚರಿತ್ರಕಾರರು ಇದು ಇಂಗ್ಲಿಷ್ ಜನಾಂಗದ ಕೊಡುಗೆಯೆಂದೂ ಜರ್ಮನ್ನರು ತಮ್ಮ ಕೊಡುಗೆಯೆಂದು ವಾದಿಸುವ ರಾದರೂ ಇತ್ತೀಚಿನ ಸಂಶೋಧನೆಗಳಿಂದ ಇದು ಫ್ರಾನ್ಸಿನ ಕೊಡುಗೆಯೆಂದೂ ಮೊಟ್ಟ ಮೊದಲು ಪ್ಯಾರಿಸ್ಸಿನ ಸಮೀಪದಲ್ಲಿ ಪ್ರಾರಂಭವಾಯಿತೆಂದೂ ತಿಳಿದುಬಂದಿದೆ. ಪ್ರ.ಶ. 1144ರಲ್ಲಿ ದೊರೆ ಏಳನೆಯ ಲೂಯಿ, ಅವನ ರಾಣಿ, ಐವರು ಆರ್ಚ್ಬಿಷಪ್ಪರು ಹದಿನಾಲ್ಕು ಬಿಷಪ್ಪರು ಮತ್ತು ಅನೇಕ ಜನಗಳು ಸೇಂಟ್ ಡೇನಿಸ್ ಕ್ರೈಸ್ತಮಠದಲ್ಲಿ ಸೇರಿ, ಆರಾಧನಾಗೀತೆಯನ್ನು ಹಾಡಲು ಅನುಕೂಲವಾಗಿರುವಂಥ ಪ್ರತ್ಯೇಕ ಕಟ್ಟಡ ಒಂದನ್ನು ರೂಪಿಸಿದರು. ಅದು ಉದ್ದನೆಯ ಗೋಪುರ, ಬಣ್ಣದ ಗಾಜಿನ ಕಿಟಕಿ ಮುಂತಾದವುಗಳಿಂದ ಕೂಡಿದ್ದು, ಪ್ಯಾರಿಸ್ಸಿನ ಸಮೀಪದಲ್ಲಿ ಮುಂದೆ ಕಟ್ಟಲಾದ ಚರ್ಚುಗಳಿಗೆಲ್ಲ ಒಂದು ಮಾದರಿಯಾಯಿತು. ಆದ್ದರಿಂದ ಆ ಚರ್ಚನ್ನೇ ಗಾತಿಕ್ ವಾಸ್ತುಶೈಲಿಯ ತೊಟ್ಟಿಲು ಎಂದು ವಿದ್ವಾಂಸರು ಭಾವಿಸಿದ್ದಾರೆ. ಗಾತಿಕ್ ವಾಸ್ತುಶೈಲಿಯ ಸಮರ್ಥನೆ ಮಾಡಿ ಅದರ ಬೆಳೆವಣಿಗೆಗೆ ಕಾರಣರಾದವರೆಂದರೆ ಸಂತ ಬರ್ನಾರ್ಡ್ ಮತ್ತು ಸಂತ ಸುಗೇರ್. ಧರ್ಮ ರಹಸ್ಯಗರ್ಭಿತವೂ ಭಯಭಕ್ತಿ ಪ್ರಚೋದಕವೂ ಆದುದೆಂದೂ ಆದ್ದರಿಂದ ಧಾರ್ಮಿಕ ಕಟ್ಟಡಗಳು ಅದಕ್ಕೆ ಅನುಗುಣವಾಗಿರಬೇಕೆಂದೂ ಸಂತ ಬರ್ನಾರ್ಡ್ ವಾದಿಸಿದ. ಆದ್ದರಿಂದ ಗಾತಿಕ್ ಕಟ್ಟಡಗಳಲ್ಲಿ ವಿಲಕ್ಷಣವೂ ಭಯಭಕ್ತಿಯನ್ನು ಪ್ರಚೋದಿಸುವಂಥವೂ ಆದ ಅನೇಕ ವಿನ್ಯಾಸಗಳು ಪ್ರಾರಂಭವಾದುವು. ಈತ ಸೇಂಟ್ ಡೆನಿಸ್ ಚರ್ಚಿನ ಮುಖ್ಯ ಪಾದ್ರಿಯಾದ ಮೇಲೆ (1122) ಮುನ್ನೂರು ವರ್ಷಗಳಿಂದಲೂ ಇದ್ದ ಈ ಕಟ್ಟಡಕ್ಕೆ ತಾನೇ ಹೊಸ ರೂಪು ಕೊಟ್ಟು ಅದನ್ನು ಹೊಸದಾಗಿ ಕಟ್ಟಿಸಿದ. ಅಲ್ಲಿಂದ ಮುಂದೆ ಇದೇ ಗಾತಿಕ್ ವಾಸ್ತುಶೈಲಿಯ ಮಾದರಿಯಾಗಿ ಬೆಳೆವಣಿಗೆ ಹೊಂದುತ್ತ ಹೋಯಿತು.

ಬರ್ನಾರ್ಡನ ಅಭಿಪ್ರಾಯದಂತೆ ಗಣಿತ ಮತ್ತು ಜ್ಯಾಮಿತಿಯ ಸಾಧನೆಗಳ ನೆರವಿನಿಂದ ಹೊಸ ವಿನ್ಯಾಸ ರೂಪುಗೊಂಡಿತು. ಸುಂದರವಾದ ಆರಾಧನಾಗೃಹಗಳ ಸಾಲುಸಾಲುಗಳು ಸೇರಿದುವು. ಅವುಗಳ ಕಿಟಕಿಗಳಿಗೆ ಬಣ್ಣದ ಗಾಜುಗಳು ಅಳವಡಿಸಿದರು. ಸೇಂಟ್ ಡೆನಿಸ್ ಚರ್ಚಿನಲ್ಲಿ ನೆಲಮಾಳಿಗೆ ದೇವಾಲಯಕ್ಕೆ ತಳಪಾಯದಂತಿದ್ದರೂ ರೋಮನೆಸ್ಕ ಶೈಲಿಗೂ ಗಾತಿಕ್ ಶೈಲಿಗೂ ಇಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ನೆಲಮಾಳಿಗೆಯ (ಹೆಣಗಳನ್ನು ಹೂಳುವ ಜಾಗ) ದಪ್ಪ ಗೋಡೆಗಳು ಸಣ್ಣ ಸಣ್ಣ ಕೊಠಡಿಯಾಕಾರದ ಜಾಗವನ್ನು ಒದಗಿಸಿದರೆ ಅದರ ಮೇಲಿನ ದೇವಾಲಯ ವಿಶಾಲವಾದ ಹಜಾರವನ್ನು ಒದಗಿಸುತ್ತದೆ. ನೆಲಮಾಲಿಗೆಯ ಛಾವಣಿ ಕೂಡು ಕಮಾನುಗಳನ್ನಿಟ್ಟು ನಿರ್ಮಿಸಿದ ಛಾವಣಿಕಟ್ಟಾಗಿದ್ದರೆ, ಮೇಲಿನ ದೇವಾಲಯದ ಛಾವಣಿ ಪಕ್ಕೆಲುಬಿನಾಕರದ ಕಮಾನುಗಳನ್ನು ಹೊಂದಿದ್ದಾಗಿದೆ. ಒಂದು ವಿಧದಲ್ಲಿ ಪಕ್ಕೆಲುಬಿನಾ ಕಾರದ ಛಾವಣಿ ಗಾತಿಕ್ ವಾಸ್ತುಶೈಲಿಯ ಪ್ರಧಾನ ಲಕ್ಷಣವಾಗಿಯೇ ಪರಿಣಮಿಸಿತು. ಈ ರೀತಿಯ ಛಾವಣಿಯನ್ನು ಅಳವಡಿಸುವುದರಲ್ಲಿಯೂ ಹತ್ತಾರು ಬಗೆಗಳನ್ನು ಗುರುತಿಸಬಹುದು. ಇದು ಆಗಿನ ಕಾಲದ ಶಿಲ್ಪಿಗಳ ನಿಪುಣತೆಗೂ ಸಾಕ್ಷಿಯಾಗಿದೆ. ಈ ರೀತಿಯ ಛಾವಣಿಯನ್ನು ಅಳವಡಿಸಿದ್ದರಿಂದ ಇಡೀ ಕಟ್ಟಡ ವಿಸ್ಮಯವನ್ನುಂಟು ಮಾಡುವಂತೆ ಅವ್ಯಾಹತವಾದ ಬೆಳಕಿನಿಂದ ಹೊಳೆಯುವುದೆಂದು ಅದರ ನಿರ್ಮಾತ ಸಂತ ಸುಗೇರ್ ಹೇಳಿದ್ದಾರೆ.

ಪ್ರ.ಶ. 1145-50ರಲ್ಲಿ ಕಟ್ಟಲಾದ ನೊಯೊನ್ ಕೆತೀಡ್ರಲ್ನಲ್ಲಿ ಡೆನಿಸ್ ಚರ್ಚಿನ ಮಾದರಿಯನ್ನೇ ಅನುಸರಿಸಲಾಗಿದೆ. ನೋಟರ್ಡೇಮ್ ಕೆತೀಡ್ರಲ್ನಲ್ಲಿಯೂ ಇದೇ ಮಾದರಿಯನ್ನು ಕಾಣಬಹುದು. ಕಿರಿದಾದ, ಕಂಬಗಳ ನಡುವಣ ಅಂಗಳದಲ್ಲಿ ಎರಡು ಕಡೆಗಳಲ್ಲಿಯೂ ಚೂಪು ಕಮಾನುಗಳು ಅವುಗಳ ಮೇಲೆ ಅದೇ ರೀತಿಯ ಎರಡು ಮಹಡಿಗಳೂ ಬಂದು ಈ ಕಟ್ಟಡಕ್ಕೆ ಒಂದು ಭವ್ಯತೆಯನ್ನು ಕೊಡುತ್ತವೆ. ಮುಂಭಾಗದ ಬಾಗಿಲಿನಿಂದ ನೋಡಿದರೆ ನಾಲ್ಕಾರು ಮಹಡಿಗಳನ್ನುಳ್ಳ ಕಟ್ಟಡದಂತೆ ಭಾಸವಾಗುವ ಬೃಹತ್ಪ್ರಮಾಣದ ಈ ಕಟ್ಟಡ 1160-1205ರ ಸಮಯದಲ್ಲಿ ಪುರ್ಣಗೊಂಡಿತು. ಆರಂಭದ ಗಾತಿಕ್ ವಾಸ್ತುಶೈಲಿಗೆ ನೋಟರ್ ಡೇಮ್ ಕೆತೀಡ್ರಲ್ ಒಂದು ಒಳ್ಳೆಯ ಉದಾಹರಣೆ. ಶಿಲ್ಪವೂ ವಾಸ್ತುವಿನ ಹೊಸ ನಮೂನೆಗೆ ತಕ್ಕಂತೆ ಹೊಂದಿಕೊಂಡಿರುವುದು ಅಲ್ಲಿನ ವೈಶಿಷ್ಟ್ಯ. ವಿಶಾಲವೂ ಎತ್ತರವೂ ಆದ ಬಾಗಿಲುಗಳು, ಕಿಟಕಿಗಳ ಮೇಲ್ಭಾಗ, ಅರೆಗಂಬಗಳು ಮೊದಲಾದುವು ಶಿಲ್ಪಗಳಿಂದ ಕೂಡಿದ್ದು ಧಾರ್ಮಿಕ ಭಾವನೆಗೆ ಪುಷ್ಟಿಕೊಡುವಂತಿದೆ. ಅದರಲ್ಲಿಯೂ ಪಶ್ಚಿಮ ದ್ವಾರ ಶಿಲ್ಪಗಳಿಂದ ಆವೃತ್ತವಾಗಿ, ಸಾಂಕೇತಿಕವಾಗಿ ಅದು ದೇವಲೋಕದ ಜೆರೂಸಲೆಂಗೆ ಹೆಬ್ಬಾಗಿಲೋ ಎನ್ನುವಂತೆ ಕೆತ್ತಲಾಗಿದೆ. ಅಲ್ಲಿಯೇ ಇರುವ ಷಾಟರ್್ರ ಕೆತೀಡ್ರಲ್ನಲ್ಲಿರುವ ಒಳಾಂಗಣದಲ್ಲಿ ರಾಜರಾಣಿಯರಿಗೆ ಸಂಬಂಧಿಸಿದ ಶಿಲ್ಪಗಳು ವಿಶೇಷವಾಗಿರುವುದರಿಂದ ಅದನ್ನು ರಾಜವಂಶದ ಮಹಾದ್ವಾರವೆಂದು ಕರೆಯಲಾಗಿದೆ. 1145-50ರಲ್ಲಿ ರಚನೆಗೊಂಡ ಪಶ್ಚಿಮದ ಮೂರು ಮಹಾದ್ವಾರಗಳನ್ನೂ ಒಂದೇ ಹೆಬ್ಬಾಗಿಲಂತೆ ಕೆತ್ತಲಾಗಿದೆ. ಕ್ರಿಸ್ತನ ಜನನ, ದೇವಾಲಯಕ್ಕೆ ಆತನನ್ನು ಒಯ್ಯುವುದು, ವರ್ಜಿನ್ ಮಾತೆಯೊಂದಿಗೆ ಕ್ರಿಸ್ತ - ಈ ಶಿಲ್ಪಫಲಕಗಳು ಬಲದ್ವಾರದ ಮೇಲಿವೆ. ಕ್ರಿಸ್ತ ಸ್ವರ್ಗವನ್ನು ಏರುತ್ತಿರುವುದು ಎಡ ದ್ವಾರದಲ್ಲಿದೆ. ಮಧ್ಯದ ದ್ವಾರದಲ್ಲಿ ಆತ ಎರಡನೆಯ ಸಾರಿ ಹಿಂದಿರುಗುವ ಕಥೆ ಬಂದಿದೆ. ಇವುಗಳ ಕೆಳಗೆ ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ವಿವಿಧ ಕಥೆಗಳು ರೂಪುಗೊಂಡಿವೆ. ಕಮಾನಿನ ಕೆಳಭಾಗದಲ್ಲಿ ಮಾಡಿರುವ ಕೆತ್ತನೆಯ ಕೆಲಸವೂ ಗಮನಾರ್ಹವಾಗಿದೆ. ಬಲಭಾಗದಲ್ಲಿ ಜ್ಞಾನವನ್ನು ಸಾಂಕೇತಿಕವಾಗಿಯೂ ವರ್ಷದ ಹನ್ನೆರಡು ತಿಂಗಳನ್ನು ಎಡಭಾಗದಲ್ಲಿಯೂ ಕೆತ್ತಲಾಗಿದೆ. ದ್ವಾರಗಳ ಇಕ್ಕೆಡೆಗಳಲ್ಲಿರುವ ಕಂಬಗಳಲ್ಲಿ ಹಳೆಯ ಒಡಂಬಡಿಕೆಯಲ್ಲಿ ಹೇಳಿರುವ ರಾಜರಾಣಿಯರ ಶಿಲ್ಪಗಳಿವೆ. ಇವುಗಳೆಲ್ಲವೂ ಪ್ರಾರಂಭ ಗಾತಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಗಳು.

1194ರಲ್ಲಿ ಷಾಟರ್ರ ಕತೀಡ್ರಲ್ ಬೆಂಕಿಗೆ ಆಹುತಿಯಾಯಿತು. ನೆಲಮಾಳಿಗೆ, ಪಶ್ಚಿಮದ ಗೋಪುರಗಳನ್ನು ಬಿಟ್ಟರೆ, ಕಟ್ಟಡದ ಇತರ ಭಾಗಗಳೆಲ್ಲವೂ ನಾಶವಾದುವು. ಕೂಡಲೇ ಈ ಕಟ್ಟಡವನ್ನು ಹೊಸದಾಗಿ ಕಟ್ಟುವ ಕೆಲಸ ಪ್ರಾರಂಭವಾಯಿತು. ಆ ಕೆಲಸ ಮುಗಿದದ್ದು 1220ರಲ್ಲಿ. ಇಲ್ಲಿಂದ ಗಾತಿಕ್ ವಾಸ್ತುಶೈಲಿಯಲ್ಲಿ ಮುಂದಿನ ಹೆಜ್ಜೆ ಪ್ರಾರಂಭವಾಯಿತೆನ್ನ ಬಹುದು. 1194 ರಿಂದ 1248ರ ವರೆಗಿನ ಅವಧಿಯಲ್ಲಿ ನಿರ್ಮಾಣವಾದ ಕತೀಡ್ರಲ್ಗಳನ್ನು ಪ್ರೌಢ ಗಾತಿಕ್ ಎಂದು ವ್ಯವಹರಿಸುತ್ತಾರೆ. ಪುನರುಜ್ಜೀವನಗೊಂಡ ಈ ಷಾಟರ್್ರ ಕತೀಡ್ರಲ್ ಪ್ರೌಢ ಗಾತಿಕ್ ಶೈಲಿಯ ಮೊದಲ ಕಟ್ಟಡ. ಬೆಂಕಿಯಲ್ಲಿ ಹಾಳಾಗದೇ ಉಳಿದಿದ್ದ ಪಶ್ಚಿಮದ ಗೋಪುರ ಮತ್ತು ನೆಲಮಾಳಿಗೆಯನ್ನು ಅನುಸರಿಸಿ ಅದಕ್ಕೆ ತಕ್ಕ ಪ್ರಮಾಣದ ಪುನರ್ನಿರ್ಮಾಣ ಕಾರ್ಯ ಆರಂಭವಾಯಿತು. ಈ ಕಟ್ಟಡದಲ್ಲಿ ಕಾಣಬರುವ ಮುಖ್ಯ ವೈಶಿಷ್ಟ್ಯವೆಂದರೆ ಹಾಡುವ ಸ್ಥಳ. ಶಿಲುಬೆಯಾಕಾರದ ದೇವಾಲಯದ ಅಡ್ಡಭಾಗ ಮತ್ತು ಮಧ್ಯಾಂಗಣ - ಈ ಮೂರು ಭಾಗಗಳಲ್ಲಿನ ಸಮತೋಲನ. ಅನಂತರ ಬೋರ್ಗೆಸ್ ಎಂಬಲ್ಲಿ ಮತ್ತೊಂದು ಕತೀಡ್ರಲ್ ನಿರ್ಮಿತವಾಯಿತು. ಇಲ್ಲಿ ದೇವಾಲಯದ ಶಿಲುಬೆಯಾಕಾರದ ಅಡ್ಡಭಾಗವನ್ನು ಪುರ್ಣವಾಗಿ ಕೈಬಿಟ್ಟಿದ್ದರಿಂದ ಒಳಾಂಗಣ ವಿಶಾಲವಾಯಿತು. ಈ ಕಟ್ಟಡದಲ್ಲಿ ಒಂದರ ಮೇಲೆ ಒಂದರಂತೆ ಮೂರು ಕಿಟಕಿಗಳನ್ನು ಅಳವಡಿಸಲಾಯಿತು. ಮೂರೂ ಮಹಡಿಗಳ ಮುಂಭಾಗ ಈ ಕತೀಡ್ರಲ್ಗೆ ಒಂದು ಭವ್ಯತೆಯನ್ನು ಕೊಟ್ಟಿತು. ಷಾಟರ್್ರನಲ್ಲಿ ಪ್ರಾರಂಭವಾದ ಬೆಳೆವಣಿಗೆಗಳು ರೀಮ್ಸ ಮತ್ತು ಆಮ್ಯನ್ಸ ಕತೀಡ್ರಲ್ಗಳಲ್ಲಿ ಪುರ್ಣಗೊಂಡುವು. ಪ್ರೌಢ ಗಾತಿಕ್ ಶೈಲಿಯ ಕಟ್ಟಡಗಳಿಗೆ ಇವೆರಡೂ ಉತ್ತಮ ಉದಾಹರಣೆಗಳು. ನೆಲದಿಂದ ಸು. 42ಮೀ ಎತ್ತರದ ಛಾವಣಿ ಚೂಪು ಕಮಾನುಗಳಿಂದ ಮಧ್ಯದಲ್ಲಿರುವ ಕಂಬಗಳಿಂದ ಇನ್ನೂ ಎತ್ತರವಿರುವಂತೆ ಭಾಸವಾಗುತ್ತದೆ.

ಈ ಕತೀಡ್ರಲ್ಗಳ ಮಹಾದ್ವಾರಗಳ ಶಿಲ್ಪಗಳು ಗಾತಿಕ್ ಶೈಲಿಯಲ್ಲೇ ಅತ್ಯುತ್ತಮ ಶಿಲ್ಪಗಳೆಂದು ಪರಿಗಣಿತವಾಗಿವೆ. ಇಲ್ಲಿನ ಶಿಲ್ಪಗಳು ಸಾಮಾನ್ಯವಾಗಿ ಸರಳವಾಗಿಲ್ಲ. ಅವುಗಳ ಪ್ರತಿಮಾ ವಿವರಣೆಗಳು ಬಹು ಜಟಿಲವಾಗಿವೆ. ಭೂತಗಳು, ದೇವತೆಗಳು ಮುಂತಾದ ಶಿಲ್ಪಗಳು ಬಹು ಸುಂದರವಾಗಿದ್ದು ಆ ಕಾಲದ ಧಾರ್ಮಿಕ ಜೀವನದ ಸುಂದರ ಪ್ರತೀಕಗಳೂ ಆಗಿವೆ. ಷಾಟರ್್ರ ಮತ್ತು ಆಮ್ಯನ್ಸ ಕತೀಡ್ರಲ್ಗಳ (1220-30) ಶಿಲ್ಪಗಳು ದೇವಲೋಕವನ್ನೇ ನಮ್ಮ ಮುಂದೆ ತೆರೆಯುತ್ತವೆ. ‘ಕೊನೆಯ ತೀರ್ಪಿನ’ ಶಿಲ್ಪ ಆಮ್ಯನ್ಸನ ಮಧ್ಯ ದ್ವಾರದಲ್ಲೂ ವರ್ಜಿನ್ ಮೇರಿಯ ಶಿಲ್ಪ ಉತ್ತರದ ದ್ವಾರದಲ್ಲೂ ಆಮ್ಯನ್ಸ ಕತೀಡ್ರಲ್ನ ಪ್ರಧಾನ ದೇವತೆ ಸಂತ ಫಿರ್ಮಿನನ ಶಿಲ್ಪ ದಕ್ಷಿಣದಲ್ಲೂ ಇವೆ. ಕತೀಡ್ರಲ್ನ ಉತ್ತರದ ಗೋಡೆಗಳಲ್ಲಿ ಹಳೆ ಒಡಂಬಡಿಕೆಯ ಶಿಲ್ಪ ಫಲಕಗಳಿದ್ದರೆ, ದಕ್ಷಿಣದಲ್ಲಿ ಹೊಸ ಒಡಂಬಡಿಕೆಯ ಚಿತ್ರ ಫಲಕಗಳಿವೆ. ಇಲ್ಲಿಯೇ ಪಶ್ಚಿಮ ದ್ವಾರದಲ್ಲಿರುವ ಬೋಧನೆ ಮಾಡುತ್ತಿರುವ ಕ್ರಿಸ್ತನ ಶಿಲ್ಪ ಪ್ರೌಢ ಗಾತಿಕ್ ಶೈಲಿಯಲ್ಲಿಯೇ ಅತ್ಯುತ್ತಮ ವಿಗ್ರಹ. ದಯಾಮಯನಾದ ಕ್ರಿಸ್ತನ ಭಾವನೆಗಳು ಬಹು ಸುಂದರವಾಗಿ ಇಲ್ಲಿ ರೂಪುಗೊಂಡಿವೆ. ಮಡಿಕೆಗಳಿಂದ ಆವೃತ್ತವಾದ ಬಟ್ಟೆಯ ವಿನ್ಯಾಸ, ನೆಟ್ಟಗೆ ನಿಂತಿರುವ ಭಂಗಿ, ಮೊದಲಾದವು ಈ ಶಿಲ್ಪದ ವೈಶಿಷ್ಟ್ಯಗಳು.

ಈ ಕತೀಡ್ರಲ್ಗಳ ಕಿಟಕಿಗಳಲ್ಲಿ ಬಣ್ಣದ ಗಾಜುಗಳು ಹೇರಳವಾಗಿವೆ. ಆಮ್ಯನ್್ಸ ಮತ್ತು ರೀಮ್ಸಗಳಲ್ಲಿ ಆ ಕಾಲದ ಬಣ್ಣದ ಗಾಜುಗಳು ಹೆಚ್ಚಾಗಿ ಉಳಿದಿಲ್ಲವಾದರೂ ಷಾಟರ್್ರ ಮತ್ತು ಬೋರ್ಗೆಸ್ಗಳಲ್ಲಿ ಅವು ವಿಶೇಷವಾಗಿ ಉಳಿದುಬಂದಿವೆ. ಬಣ್ಣದ ಗಾಜುಗಳ ಬಳಕೆ ಹೆಚ್ಚಿದಂತೆ, ಬಣ್ಣದ ವೈವಿಧ್ಯವೂ ಹೆಚ್ಚಿದುದು ಸಹಜವೇ ಆಗಿದೆ. 12ನೆಯ ಶತಮಾನದಲ್ಲಿ ನೀಲಿ ಬಣ್ಣ ವಿಶೇಷವಾಗಿ ತಿಳಿಯಾಗಿದ್ದಿತು. 13ನೆಯ ಶತಮಾನದಲ್ಲಿ ಅದು ಗಾಢವಾಯಿತು. ಈ ಕಟ್ಟಡಗಳನ್ನು ಕಟ್ಟಲು ಧನಸಹಾಯ ಮಾಡಿದವರ ಚಿತ್ರಗಳನ್ನು ಷಾಟರ್ರದ ಈ ಗಾಜುಗಳ ಮೇಲೆ ಕೆತ್ತಲಾಗಿದೆಯೆಂದು ಅನೇಕರು ಅಭಿಪ್ರಾಯಪಡುತ್ತಾರೆ. 13ನೆಯ ಶತಮಾನದ ಮಧ್ಯಭಾಗದಿಂದ 14ನೆಯ ಶತಮಾನದ ಅಂತ್ಯದವರೆಗೆ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಲ್ಲಿ ಸರ್ವತೋಮುಖವಾದ ಬೆಳೆವಣಿಗೆಯುಂಟಾಯಿತು. ಅದರಲ್ಲಿಯೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಎರಡು ದೇಶಗಳೂ ತಮ್ಮದೇ ಆದ ಸಂಸ್ಕೃತಿಯನ್ನು ರೂಢಿಸಿಕೊಂಡವು. ಇದರ ಜೊತೆಗೆ ಸೂಕ್ಷ್ಮಾಭಿರುಚಿ ಬೆಳೆಯಿತು. ಇವುಗಳೆಲ್ಲವೂ ಆ ಕಾಲದ ವಾಸ್ತುಶಿಲ್ಪದ ಮೇಲೂ ಪರಿಣಾಮವನ್ನು ಬೀರಿದುವು. 13ನೆಯ ಶತಮಾನದ ಮಧ್ಯಭಾಗದಿಂದ 14ನೆಯ ಶತಮಾನದ ಕೊನೆಯವರೆಗಿನ ವಾಸ್ತುಶಿಲ್ಪವನ್ನು ರಿಫೈನ್ಸ್ಡ ಗಾತಿಕ್ ಎಂದು ಕರೆಯುತ್ತಾರೆ. ಗಾತಿಕ್ ವಾಸ್ತು ಶೈಲಿಯಲ್ಲೇ ಇದು ಅತ್ಯುತ್ತಮ ಮಟ್ಟದ್ದು ಎಂದು ವಿದ್ವಾಂಸರ ಮತ.

ಅರೇಕಾಲಿನಂತ ತ್ರಿಜ್ಯ ಪಟ್ಟಿಗಳುಳ್ಳ ಗುಂಡು ಕಿಟಕಿಗಳು ಪ್ರಾರಂಭವಾದದ್ದು ಈ ಕಾಲದಲ್ಲಿ. ಕಿಟಕಿಯ ಮಧ್ಯದ ಬಿಂದುವಿನಿಂದ ಸೂರ್ಯನ ಕಿರಣಗಳಂತೆ ತ್ರಿಜ್ಯಪಟ್ಟಿಗಳು ಹೊರಹೊಮ್ಮಿ, ಈ ಶೈಲಿಗೆ ರೇಯನಂಟ್ ಎಂಬ ಹೆಸರನ್ನು ತಂದುಕೊಟ್ಟಿವೆ. ಒಂಬತ್ತನೆಯ ಲೂಯಿ ಪ್ಯಾರಿಸ್ನಲ್ಲಿ 1248ರಲ್ಲಿ ಕಟ್ಟಲಾದ ಸೇಂಟ್ ಚ್ಯಾಪೆಲ್ನಲ್ಲಿ ಈ ರೀತಿಯ ಗುಂಡು ಕಿಟಕಿಗಳು ಮೊದಲ ಬಾರಿಗೆ ಬಳಕೆಗೆ ಬಂದುವು. ಇಲ್ಲಿ ಊರೆಗಾಗಿ ಬಳಸಿರುವ ಕಲ್ಲನ್ನೂ ಬಿಟ್ಟರೆ ಮಿಕ್ಕೆಲ್ಲ ಕಡೆಗಳಲ್ಲಿಯೂ ಬಣ್ಣದ ಗಾಜು ವಿಶೇಷವಾಗಿದೆ. 19ನೆಯ ಶತಮಾನದಲ್ಲಿ ಈ ಕಟ್ಟಡವು ಪುನರುಜ್ಜೀವನಗೊಂಡಿದ್ದರೂ 13ನೆಯ ಶತಮಾನಕ್ಕೆ ಸೇರಿದ ಒಳಗಿನ ಅಲಂಕಾರಗಳು ಈ ಕಿಟಕಿಗಳಿಗೆ ಮಾಡಿರುವ ಹತ್ತಾರು ವರ್ಣಚಿತ್ರಗಳ ಅಲಂಕಾರಗಳು ಇಂದಿಗೂ ಅಚ್ಚಳಿಯದೆ ಉಳಿದು ಬಂದಿವೆ. ಒಳಭಾಗದಲ್ಲಿ ಕ್ರೈಸ್ತಗುರುಗಳ ವಿಗ್ರಹಗಳಿವೆ. ಇದಕ್ಕಿಂತಲೂ ಹೆಚ್ಚು ಆಕರ್ಷಕವಾದದ್ದು ಶೈಲಿಯ ದೃಷ್ಟಿಯಿಂದ ಹೆಚ್ಚು ಬೆಳೆವಣಿಗೆಯನ್ನು ತೋರ್ಪಡಿಸುವ ಕಟ್ಟಡವೆಂದರೆ ಬೋವೇ ಕತೀಡ್ರಲ್ 1247ರಲ್ಲಿ ಪ್ರಾರಂಭಿಸಲಾದ ಈ ಕಟ್ಟಡದ ಗೋಪುರ ಸು. 47ಮೀ. ಎತ್ತರದಾಗಿತ್ತು. 1272ರಲ್ಲಿ ಇದನ್ನು ಪುರ್ಣಗೊಳಿಸಲಾಯಿತು. ಆದರೆ ಬಹು ಎತ್ತರವೂ ವಿಶಾಲವೂ ಆದ ಈ ಕಟ್ಟಡದ ತಳಪಾಯ ಭದ್ರವಿಲ್ಲದ್ದರಿಂದ 1284ರಲ್ಲಿ ಇಡೀ ಕಟ್ಟಡ ಕುಸಿದುಬಿತ್ತು. ಇದರ ಪುನರುಜ್ಜೀವನವಾದದ್ದು 16ನೆಯ ಶತಮಾನದಲ್ಲಿ. ವಿಲ್ಲರ್್ಡ ಡಿ ಹೊನ್ಕೋರ್ಟ್ ಎಂಬ ಫ್ರೆಂಚ್ ಶಿಲ್ಪಿ ಸುಮಾರು ಇದೇ ಕಾಲದಲ್ಲಿ ಯುರೋಪಿನಲ್ಲೆಲ್ಲ ಸಂಚರಿಸಿ ತಾನೂ ನೋಡಿದ ಪುರ್ಣಗೊಂಡಿದ್ದ, ಅಪುರ್ಣವಾಗಿದ್ದ ಎಲ್ಲ ಕತೀಡ್ರಲ್ಗಳ ಚಿತ್ರಗಳನ್ನು ಸುಂದರವಾಗಿ ಬರೆದಿಟ್ಟಿದ್ದಾನೆ. ಈ ಚಿತ್ರಗಳಿಂದ ಆಗಿನ ಕಾಲದಲ್ಲಿ ಕಟ್ಟಡಗಳನ್ನು ಕಟ್ಟುತ್ತಿದ್ದ ಕ್ರಮ, ಶಿಲ್ಪಿಗಳು ಬಳಸುತ್ತಿದ್ದ ಸಲಕರಣೆಗಳು ಮುಂತಾದವುಗಳ ಬಗ್ಗೆ ವಿಶೇಷ ಮಾಹಿತಿ ದೊರಕುತ್ತವೆ. ಈ ಕಾಲದ ಶಿಲ್ಪಕ್ಕೆ ಉದಾಹರಣೆಯಾಗಿ ರೀಮ್್ಸ ಕತೀಡ್ರಲ್ನ ಪಶ್ಚಿಮ ಮಹಾದ್ವಾರವನ್ನು ನೋಡಬಹುದು. ಕ್ರಿಸ್ತ ಅವತಾರ ಮಾಡುವನೆಂದು ಗೇಬ್ರಿಯಲ್ ಮೇರಿ ಕನ್ಯೆಗೆ ಮುನ್ಸೂಚನೆ ಕೊಡುವ ಮತ್ತು ಮೇರಿ ಎಲಿಜ಼ಬೆತಳನ್ನು ಸಂದರ್ಶಿಸಿದ - ಈ ಎರಡು ಶಿಲ್ಪ ಫಲಕಗಳು ಬಹು ಸುಂದರವಾದವು.

ಗಾತಿಕ್ ಕಲೆ ಯುರೋಪಿನ ಎಲ್ಲ ಭಾಗಗಳಲ್ಲಿಯೂ ಕಂಡು ಬಂದರೂ ಇಂಗ್ಲೆಂಡ್, ಫ್ರಾನ್್ಸ, ಜರ್ಮನಿ ಮತ್ತು ಇಟಲಿಗಳಲ್ಲಿ ಇದರ ಪ್ರಾಬಲ್ಯ ಹೆಚ್ಚು. ಇಲ್ಲೆಲ್ಲ ಶುದ್ಧ ಗಾತಿಕ್ ಶೈಲಿಯೊಂದಿಗೆ ಸ್ಥಳೀಯ ಶೈಲಿ ಬೆರೆತಿರುವುದನ್ನು ಕಾಣಬಹುದು. ಕ್ಯಾಂಟರ್ಬರಿ ಕತೀಡ್ರಲ್ನ ಪುರ್ವಭಾಗ 1174ರಲ್ಲಿ ಬೆಂಕಿಗೆ ಆಹುತಿಯಾಗಿ, ಅದರ ಪುನರ್ನಿರ್ಮಾಣ ಕಾರ್ಯ ಈ ಕಾಲದಲ್ಲಿ ಪ್ರಾರಂಭವಾಯಿತು. ಇದರಲ್ಲಿ ಇಂಗ್ಲೆಂಡಿನ ಸ್ಥಳೀಯ ಲಕ್ಷಣಗಳು ವಿಶೇಷವಾಗಿ ಕಾಣಬರುತ್ತವೆ. 1220ರಲ್ಲಿ ಪ್ರಾರಂಭವಾಗಿ 1240ರಲ್ಲಿ ಪುರ್ಣಗೊಳಿಸಲ್ಪಟ್ಟ ಸ್ಯಾಲಿಸ್ಬರಿ ಕತೀಡ್ರಲ್ ಇಂಗ್ಲಿಷ್ ಗಾತಿಕ್ ಶೈಲಿಗೆ ಉತ್ತಮ ಉದಾಹರಣೆ. ಇದರಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಟ್ಟಿರುವುದು ಕಾಣಬರುತ್ತದೆ. ಇದೇ ಪ್ರವೃತ್ತಿ ಇಂಗ್ಲಿಷ್ ಗಾತಿಕ್ ಶೈಲಿಯಲ್ಲಿ ಎದ್ದು ಕಾಣುತ್ತದೆ. ಜರ್ಮನಿಯಲ್ಲಿ ಮೊದಮೊದಲು ರೋಮನೆಕ್ಸ್ ಶೈಲಿಯೇ ವಿಶೇಷವಾಗಿ ಅಭಿವೃದ್ಧಿ ಹೊಂದಿದ್ದು, ಗಾತಿಕ್ ಶೈಲಿಯ ಕಟ್ಟಡಗಳಲ್ಲೂ ಇದನ್ನೇ ಅಳವಡಿಸಲಾಗಿತ್ತು. ಕಲೋನ್ನ ಕತೀಡ್ರಲ್ನ್ನು ಕಟ್ಟಿದ (1248) ಶಿಲ್ಪಿ ಫ್ರಾನ್ಸ್ ದೇಶದಲ್ಲಿ ಶಿಕ್ಷಣ ಪಡೆದವನಾದುದರಿಂದ ಇಲ್ಲಿ ಫ್ರೆಂಚ್ ಶೈಲಿಯೇ ವಿಶೇಷವಾಗಿ ಕಾಣುತ್ತದೆ. ಹಲೆನ್ಕಿರ್ಚ್ ಎಲಿಜಬೆತ್ಕಿರ್ಚ್ಗಳ ಅಂಗಳ, ಪುಜಾಗೃಹಗಳಲ್ಲಿ ರಿಫೈನ್ಡ್ ಗಾತಿಕ್ ಶೈಲಿಯನ್ನು ಗಮನಿಸಬಹುದು. ಈ ಕಾಲದ ಜರ್ಮನ್ ಗಾತಿಕ್ ಶಿಲ್ಪಗಳಲ್ಲಿ ಕಾಣಬರುವ ಮುಖ್ಯ ಲಕ್ಷಣವೆಂದರೆ ಚಲನೆ. ಶಿಲ್ಪಗಳು ಚಲಿಸುತ್ತಿವೆಯೊ ಎನ್ನುವ ರೀತಿಯಲ್ಲಿ ಅವನ್ನು ಕೆತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಸ್ಪೇನಿನಲ್ಲಿ ಅವಿಲ ಕತೀಡ್ರಲ್ನಿಂದ ಪ್ರಾರಂಭವಾಗಿ ಗಾತಿಕ್ ಶೈಲಿ ಬೆಳೆದುಬಂತು. ಇಲ್ಲಿನ ಕಮಾನು ಛಾವಣಿ ಪ್ರಾರಂಭದೆಶೆಯೆ ಗಾತಿಕ್ ಶೈಲಿಗೆ ಸೇರಿದುದು. ಅಲ್ಲಿಂದ ಮುಂದೆ ಇದೇ ಶೈಲಿ ಬೆಳೆಯಿತು. ಟೊಲೆಡೊ ಮತ್ತು ಬರ್ಗೋಸ್ ಕೆತೀಡ್ರಲ್ಗಳಲ್ಲಿ ಎತ್ತರಕ್ಕಿಂತ ವಿಶಾಲತೆಗೆ ಹೆಚ್ಚು ಪ್ರಾಮುಖ್ಯ ಕೊಟ್ಟಿರುವುದು ಕಂಡು ಬರುತ್ತದೆ. ಪಲ್ಮಿ, ಸೆವಿಲ್ ಕತೀಡ್ರಲ್ಗಳು ಹೊರನೋಟದಿಂದ ಭಿನ್ನ ರೀತಿಯವೆಂದೂ ಕಂಡುಬಂದರೂ ಅವು ಗಾತಿಕ್ ಶೈಲಿಯ ಕಟ್ಟಡಗಳೆನ್ನುವುದರಲ್ಲಿ ಸಂದೇಹವೇ ಇಲ್ಲ. ಗಾತಿಕ್ ಶಿಲ್ಪಶೈಲಿ ಸ್ಪೇನಿನಲ್ಲಿ ಸುಮಾರು 18ನೆಯ ಶತಮಾನದವರೆಗೂ ಬಳಕೆಯಲ್ಲಿತ್ತು.

ಗಾತಿಕ್ ಶಿಲ್ಪ ಶೈಲಿಯನ್ನು ತನ್ನ ಹೆಚ್ಚಿನ ಅನುಕೂಲಕ್ಕೆ ಅಳವಡಿಸಿಕೊಂಡ ದೇಶಗಳಲ್ಲಿ ಇಟಲಿ ಬಹು ಪ್ರಮುಖವಾದುದು. ಸ್ಥಳೀಯ ಲಕ್ಷಣಗಳೂ ಗಾತಿಕ್ ಶಿಲ್ಪಲಕ್ಷಣಗಳೂ ಮಿಳಿತಗೊಂಡು ಪುನರುಜ್ಜೀವನ ಶೈಲಿಯ ಉದಯಕ್ಕೆ ಕಾರಣವಾದ ಇಟಾಲಿಯನ್ ಗಾತಿಕ್ನಲ್ಲಿ ವೈವಿಧ್ಯ ವಿಶೇಷವಾಗಿ ಕಂಡುಬರುತ್ತದೆ. ವಾಸ್ತು ಮತ್ತು ಶಿಲ್ಪಕಲೆಗಳಿಗಿಂತ ವರ್ಣಚಿತ್ರಗಳಿಗೆ ಇಲ್ಲಿ ಪ್ರಾಧಾನ್ಯ ಬಂದಿದೆ. 14 ಮತ್ತು 15ನೆಯ ಶತಮಾನದ ವಾಸ್ತುಶಿಲ್ಪ ಕಲೆ ಅದರ ಹಿಂದೆ ಇದ್ದ ಕಲೆಗಿಂತ ಭಿನ್ನವಾಗಿದ್ದು, ಒಂದು ಹೊಸ ಪ್ರವೃತ್ತಿಯನ್ನೇ ವ್ಯಕ್ತಪಡಿಸುತ್ತದೆ. ಆದುದರಿಂದ ಈ ಕಾಲದ ಕಲೆಯನ್ನು ಲೇಟ್ ಗಾತಿಕ್ (ಅಂತ್ಯ ಗಾತಿಕ್) ಎಂದು ಕರೆಯಬಹುದು. 14ನೆಯ ಶತಮಾನದ ಆರಂಭದಲ್ಲಿ ಯುರೋಪು ಉಚ್ಛ್ರಾಯಸ್ಥಿತಿಯಲ್ಲಿದ್ದರೂ ಕೆಲವೇ ವರ್ಷಗಳಲ್ಲಿ ನಡೆದ ಯುದ್ಧಗಳು ಬಂದೊದಗಿದ ಕ್ಷಾಮ ಮುಂತಾದ ಪರಿಸ್ಥಿತಿಗಳಿಂದ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿ ಹದಗೆಟ್ಟಿತು. ಈ ರೀತಿಯ ಪರಿಸ್ಥಿತಿಯಲ್ಲಿ ಲೇಟ್ ಗಾತಿಕ್ ಶೈಲಿ ಹುಟ್ಟಿ ಬೆಳೆಯಿತು. ಇದರಲ್ಲಿ ಎರಡು ಭೇದಗಳನ್ನು ಗುರುತಿಸಬಹುದು. ಲಂಬತ್ವವನ್ನು ಉಳಿಸಿಕೊಂಡ ಇಂಗ್ಲಿಷ್ ಶೈಲಿ ಮತ್ತು ಫ್ರಾನ್ಸಿನ ಫ್ಲಾಂಬಾಯಂಟ್ ಶೈಲಿ. 13ನೆಯ ಶತಮಾನದಲ್ಲಿಯೇ ಉದ್ದುದ್ದನೆಯ ಗೋಪುರಗಳ ಬಳಕೆ ಕಂಡುಬಂದಿತ್ತು. ಈಗ ಇದಕ್ಕೆ ಅಲಂಕಾರಗಳೂ ಸೇರಿದವು. ಕಮಾನು ಚಾವಣಿ ಆಗಿನ ಕಾಲದಲ್ಲಿ ಎಷ್ಟು ಸರಳವಾಗಿತ್ತೋ ಈಗ ಅಷ್ಟೂ ಅಲಂಕಾರಯುಕ್ತವಾಯಿತು. ಫ್ಲಾಂಬಾಯಟ್ ಶೈಲಿಯಲ್ಲಿ ಚರ್ಚುಗಳಿಗಿಂತ ಜಾಸ್ತಿಯಾಗಿ ಇತರ ಕಟ್ಟಡಗಳು ಬೆಳೆದುಬಂದವು. ಈ ಶೈಲಿಯಲ್ಲಿ ಶಿಲ್ಪಕ್ಕಿಂತ ವರ್ಣಚಿತ್ರಗಳಿಗೆ ವಿಶೇಷ ಗಮನವನ್ನು ಕೊಡಲಾಯಿತು. ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಶಿಲ್ಪ ಅಥವಾ ವರ್ಣಚಿತ್ರಗಳ ಜೊತೆಗೆ ಅರಮನೆಯ ರಾಜ ರಾಣಿಯರ, ಮಂತ್ರಿಗಳ ಜೀವನಕ್ಕೆ ಸಂಬಂಧಿಸಿದ ವರ್ಣಚಿತ್ರಗಳೂ ಬೆಳೆದು ಬಂದವು.

ಸುಮಾರು ಇದೇ ಕಾಲಕ್ಕೆ ಇಟಲಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಪುನರುಜ್ಜೀವನ ಶೈಲಿಯ ಉಗಮವಾಗುತ್ತಿತ್ತಾಗಿ ಗಾತಿಕ್ ಶೈಲಿ ಮಂಕಾಗಿ ಹೊಸ ಶೈಲಿಯ ಉಗಮಕ್ಕೆ ದಾರಿ ಮಾಡಿಕೊಟ್ಟಿತು.