ಗಾಣದ ಕನ್ನಪ್ಪ

ವಿಕಿಪೀಡಿಯ ಇಂದ
Jump to navigation Jump to search

ಬಸವೇಶ್ವರನ ಸಮಕಾಲೀನನೆನ್ನಲಾದ ಒಬ್ಬ ಶಿವಶರಣ, ವಚನಕಾರ, ಕನ್ನಯ್ಯಪ್ರಿಯ ಗುಹೇಶ್ವರನ ಶರಣ, ಗುಹೇಶ್ವರನಲ್ಲಯ್ಯ ಎಂಬ ಅಂಕಿತಗಳಲ್ಲಿ ವಚನಗಳನ್ನು ರಚಿಸಿದ್ದಾನೆ. ವೃತ್ತಿಯಿಂದ ಈತ ಮೀನುಗಾರ. ಗುರುರಾಜಚಾರಿತ್ರ ಹಾಗೂ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಗ್ರಂಥಗಳಲ್ಲಿ ಈತನ ಪ್ರಸ್ತಾಪವಿದೆ.[೧]

ಕಲ್ಯಾಣಪಟ್ಟಣದ ತ್ರಿಪುರಾಂತಕ ಕೆರೆಯಲ್ಲಿ ಗಾಳಹಾಕಿ ಮೀನು ಹಿಡಿಯುವ ಕಾಯಕದಲ್ಲಿ ಪ್ರವೃತ್ತನಾದ ಕನ್ನಪ್ಪ ಹಾಗೂ ಆತನ ಧರ್ಮಪತ್ನಿ ರೇಚವ್ವೆ ಶಿವಭಕ್ತಿ ಸಂಪನ್ನರು. ಇವರು ಶಿವಾನುಭವ ಸದ್ಗೋಷ್ಠಿಗಳಲ್ಲಿ ಭಾಗವಹಿಸಿ ಲಿಂಗಭಕ್ತಿಯಲ್ಲಿ ನಿರತರಾಗಿ ಗುಪ್ತಭಕ್ತಿಯುಳ್ಳವರಾಗಿದ್ದರು. ಕನ್ನಪ್ಪ ಅಂದಂದಿಗೆ ಹಿಡಿದ ಮೀನುಗಳನ್ನು ಅಂದಂದೇ ಮಾರಿ ಬಂದ ಹಣದಿಂದ ಜಂಗಮ ಸೇವೆ ಮಾಡುತ್ತಿದ್ದ. ಒಮ್ಮೆ ಈತನಿಗೆ ಗಣಾರಾಧನೆ ಮಾಡಬೇಕೆಂಬ ಅಭಿಲಾಷೆಯಾಯಿತು. ಅಂದು ಲಿಂಗಪುಜೆಗೆ ಕುಳಿತಾಗ ಅಗೋಚರವಾಗಿ ಒಂದು ದನಿ ನಿನಗೇನು ಬೇಕು - ಎಂದಂತಾಯಿತು. ಕೂಡಲೆ ಕನ್ನಪ್ಪ ಸ್ವರ್ಣಮತ್ಸ್ಯ - ಎನ್ನಲಾಗಿ, ಹಾಗೆಯೇ ಆಗಲಿ ಎಂದು ಉತ್ತರವೂ ಬಂತು.

ನಿತ್ಯದ ಕಾಯಕದಂತೆ ಕನ್ನಪ್ಪ ಅಂದು ತ್ರಿಪುರಾಂತಕ ಕೆರೆಯಲ್ಲಿ ಗಾಳ ಹಾಕಿದ್ದಾಗ ಚಿನ್ನದ ಮೀನೇ ಅದಕ್ಕೆ ತಗಲಿಕೊಂಡಿತು. ಸಂತೋಷಗೊಂಡ ಕನ್ನಪ್ಪ ಅದನ್ನು ಮಾರಿ ಹೆಚ್ಚು ಹಣ ಪಡೆದು ಶಿವಾನುಭವ ಮಂಟಪಕ್ಕೆ ಹೋಗಿ ಜಂಗಮಮೂರ್ತಿಗಳನ್ನು ತನ್ನ ಮನೆಗೆ ದಾಸೋಹಕ್ಕೆ ಬರಬೇಕೆಂದು ಪ್ರಾರ್ಥಿಸಿದ. ಬಿನ್ನಹದಂತೆ ಜಂಗಮರು ಸಕಾಲಕ್ಕೆ ಈತನ ಮನೆಗೆ ಬರಲಾಗಿ ಅಲ್ಲಿದ್ದ ಸತ್ತ ಮೀನುಗಳು ಹಾಗೂ ಅಲ್ಲಿಯ ವಾಸನೆಯನ್ನು ಸಹಿಸಲಾರದೆ ಅಸಹ್ಯಪಟ್ಟು ಹಿಂದಿರುಗಿದರು. ಅವರನ್ನು ಮತ್ತೆ ಕರೆತರಲು ಬಸವಸದನಕ್ಕೆ ಹೋದಾಗ ಅವರೆಲ್ಲ ಕನ್ನಪ್ಪನಿಗೆ ಛೀಮಾರಿಹಾಕಿ ಕಳುಹಿಸಿದರು.

ಇತ್ತ, ಜಂಗಮರು ಬಸವಸದನದಲ್ಲಿ ಭೋಜನಕ್ಕೆ ಮುನ್ನ ಲಿಂಗಪುಜೆಗಾಗಿ ತಮ್ಮ ಕರಡಿಗೆಗಳನ್ನು ಬಿಚ್ಚಿದಾಗ ಸೆಜ್ಜೆಯಲ್ಲಿ ಯಾರ ಲಿಂಗವೂ ಕಾಣಲಿಲ್ಲ. ಅವರೆಲ್ಲ ನಡುಗಿಹೋದರು. ಇದನ್ನು ಕಂಡ ಬಸವೇಶ ಅವರಿಂದ ವಿಚಾರ ತಿಳಿದು ತಾನೇ ಕನ್ನಪ್ಪನ ಮನೆಗೆ ಬಂದು, ಜಂಗಮರ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡು, ಜಂಗಮರ ಇಷ್ಟಲಿಂಗಗಳನ್ನು ಕರಣೆಯಿಟ್ಟು ಹಿಂದಿರುಗಿಸಬೇಕೆಂದು ಪ್ರಾರ್ಥಿಸಿದ.

ಬಸವೇಶನಿಂದ ವಿಚಾರ ತಿಳಿದ ಕನ್ನಪ್ಪ ಅವರನ್ನೆಲ್ಲ ತ್ರಿಪುರಾಂತಕ ಕೆರೆಯ ಬಳಿಗೆ ಬರಹೇಳಿ, ಅಲ್ಲಿ ಕುಳಿತು ಧ್ಯಾನಾಸಕ್ತನಾದ. ಆಗ ಕಳೆದುಹೋದ ಇಷ್ಟಲಿಂಗಗಳು ನೀರಿನಲ್ಲಿ ತೇಲಿಬಂದವು. ಜಂಗಮರು ತಂತಮ್ಮ ಇಷ್ಟಲಿಂಗಗಳನ್ನು ಪಡೆದು ಕನ್ನಪ್ಪನನ್ನು ಸ್ತುತಿಸಿ ಹಿಂತಿರುಗಿದರು. ಕನ್ನಪ್ಪನ ವಚನಗಳಿಗೆ ಒಂದು ಉದಾ :

ಪುಣ್ಯ ಪಾಪವಿಲ್ಲಾಗಿ ಯಮನ ಹಂಗಿಲ್ಲ
ಬಂದುದನುಂಬನಾಗಿ ಮಾನವರ ಹಂಗಿಲ್ಲ
ಭವಗೆಟ್ಟವನಾಗಿ ದೈವದ ಹಂಗಿಲ್ಲ
ಸತ್ಯಜ್ಞಾನಾನಂದವೆ ತಾನಾಗಿ ಇನ್ನಾರ ಹಂಗಿಲ್ಲ
ಇನ್ನಾರ ಹಂಗಿಲ್ಲದಾತ ಗುಹೇಶ್ವರನಲ್ಲಯ್ಯನೊಬ್ಬನೆ.

ಉಲ್ಲೇಖಗಳು[ಬದಲಾಯಿಸಿ]