ಗಾಡ್ವಿನ್, ಮೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇರಿ ಗಾಡ್ವಿನ್ (1759-97) ಸ್ತ್ರೀಸುಧಾರಣೆಗಾಗಿ ದುಡಿದ ಆಂಗ್ಲ ಲೇಖಕಿ.

ಬದುಕು[ಬದಲಾಯಿಸಿ]

Mary Wollstonecraft by John Opie (c. 1797).jpg

ಐರಿಷ್ ಕುಟುಂಬದಿಂದ ಬಂದವಳು. ತಂದೆಯ ದುಂದಿನ ಪರಿಣಾಮವಾಗಿ, ತಾಯಿಯ ಮರಣಾನಂತರ 19ರ ತರುಣದಲ್ಲೇ ಈಕೆ ಸ್ವಾವಲಂಬಿಯಾಗಿ ಬಾಳಬೇಕಾಯಿತು. ಪ್ರಾರಂಭದಲ್ಲಿ ಕಸೂತಿ ಕೆಲಸ ಮಾಡಿ ಅನಂತರ ತಾನೇ ಪ್ರಾರಂಭಿಸಿದ ಶಾಲೆಯಲ್ಲಿ ಶಿಕ್ಷಕಿಯಾಗಿ ಸ್ವಲ್ಪ ಕಾಲ ದುಡಿದು ಶಾಲೆನಡೆಸುವುದು ಅಶಕ್ಯವಾದಾಗ ಬರೆವಣಿಗೆಗೆ ಕೈಹಾಕಿದಳು. ಈಕೆಯ ಮೊದಲ ಕಾದಂಬರಿ ಮೇರಿ ಎಂಬುದು ಒಂದು ಕಲ್ಪಿತ ಕಥನ. ಈಕೆ ಐರ್ಲೆಂಡ್ನಲ್ಲಿ ಲಾರ್ಡ್ ಕಿಂಗ್್ಸಬರಾನ ಮನೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ಶಿಕ್ಷಕಿಯಾಗಿ ಸ್ವಲ್ಪಕಾಲ ಕೆಲಸ ಮಾಡಿದ್ದೂ ಉಂಟು. ಆ ಕೆಲಸವೂ ಹೋದಮೇಲೆ ಈಕೆಯ ಒಲವು ಪುರ್ಣವಾಗಿ ಸಾಹಿತ್ಯದ ಕಡೆ ತಿರುಗಿತು.

1792 ರಲ್ಲಿ ಫ್ರಾನ್ಸಿನ ಕ್ರಾಂತಿಯ ಪ್ರಗತಿಯನ್ನು ವೀಕ್ಷಿಸಲು ಹೋದಾಗ ಕ್ಯಾಪ್ಟನ್ ಗಿಲ್ಬರ್ಟ್ ಇಮ್ಲಿ ಎಂಬುವನನ್ನು ಪ್ಯಾರಿಸಿನಲ್ಲಿ ಭೇಟಿಯಾದಳು. ಇಬ್ಬರಿಗೂ ವಿವಾಹವಾಯಿತು. ಒಬ್ಬ ಮಗಳು ಹುಟ್ಟಿದ ಅನಂತರ 1794ರಲ್ಲಿ ವಿವಾಹ ವಿಚ್ಛೇದವಾಯಿತು.

1796ರಲ್ಲಿ ಈಕೆ ಲಂಡನ್ನಿಗೆ ಬಂದು ಇಂಗ್ಲಿಷ್ ಲೇಖಕ, ತತ್ತ್ವಶಾಸ್ತ್ರನಿಪುಣ ವಿಲಿಯಂ ಗಾಡ್ವಿನ್ ಎಂಬಾತನನ್ನು ಸಂಧಿಸಿದಳು. ಮಾರನೆಯ ವರ್ಷವೇ ಇವರಿಬ್ಬರೂ ವಿವಾಹವಾದರು. ಅದೇ ವರ್ಷ ಮೇರಿ ಎಂಬ ಹೆಣ್ಣು ಮಗುವಿಗೆ ಜನ್ಮವಿತ್ತು ಗಾಡ್ವಿನ್ ತೀರಿಕೊಂಡಳು. ಮುಂದೆ ಕವಿ ಷೆಲ್ಲಿ ಇದೇ ಮೇರಿಯನ್ನು ಮದುವೆಯಾದ.

ಗಾಡ್ವಿನ್ ಮೇರಿಯ ಜೀವನ ಚರಿತ್ರೆಯನ್ನು ಗಂಡ ವಿಲಿಯಂ ಗಾಡ್ವಿನ್ ಬರೆದಿದ್ದಾನೆ.

ಬರಹ[ಬದಲಾಯಿಸಿ]

ಮೊದಲು ದಿ ಎಲಿಮೆಂಟ್ಸ್ ಆಫ್ ಮೊರ್ಯಾಲಿಟಿ ಮತ್ತು ಫಿಸಿಯಾನಮಿ ಎಂಬ ಎರಡು ಹೊತ್ತಿಗೆಗಳನ್ನು ಭಾಷಾಂತರಿಸಿದಳು. ಒರಿಜಿನಲ್ ಸ್ಟೋರೀಸ್ ಫ್ರಾಮ್ ರಿಯಲ್ ಲೈಫ್ (1791) ಎಂಬ ಈಕೆಯ ಪುಸ್ತಕಕ್ಕೆ ಕವಿ ವಿಲಿಯಂ ಬ್ಲೇಕ್ ಚಿತ್ರಗಳನ್ನು ಬರೆದಿದ್ದಾನೆ. ಮಾರನೆಯ ವರ್ಷವೇ ಸ್ತ್ರೀಯ ಹಕ್ಕುಗಳನ್ನು ಸಮರ್ಥಿಸಿ ಈಕೆ ಬರೆದ ಪ್ರಸಿದ್ಧ ಗ್ರಂಥ ವಿಂಡಿಕೇಷನ್ ಆಫ್ ದಿ ರೈಟ್ಸ್ ಆಫ್ ವಿಮೆನ್ ಎಂಬುದು ಹೊರಬಂತು. ಆಗಿನ ಸಮಾಜದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ಈ ಗ್ರಂಥದಲ್ಲಿ ಸ್ತ್ರೀಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಲಾಗಿದೆ.

೧೭೯೨-೧೭೯೪ ರ ಅವಧಿಯಲ್ಲಿ ಈಕೆ ಫ್ರಾನ್ಸಿನ ಮಹಾಕ್ರಾಂತಿಯನ್ನು ಕುರಿತು ಒಂದು ಗ್ರಂಥ ಬರೆದಳು.

ಗಾಡ್ವಿನ್ ಬರೆದಿರುವ ಗ್ರಂಥಗಳಲ್ಲಿ ಮುಖ್ಯವಾದ ಇನ್ನೆರಡು ಗ್ರಂಥಗಳು ಇವು: ಥಾಟ್ಸ್ ಆನ್ ದಿ ಎಜುಕೇಷನ್ ಆಫ್ ಡಾಟರ್ಸ್; ವಿಂಡಿಕೇಷನ್ ಆಫ್ ದಿ ರೈಟ್ಸ ಆಫ್ ಮ್ಯಾನ್.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: