ವಿಷಯಕ್ಕೆ ಹೋಗು

ಗಾಟ್ಹೆಲ್ಫ್, ಯೆರೆಮೀಯಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೆರೆಮೀಯಾಸ್ ಗಾಟ್ಹೆಲ್ಫ್, 1797-1854. ಸ್ವಿಟ್ಜರ್ಲೆಂಡ್ನ ಪ್ರಾಟೆಸ್ಟಂಟ್ ಪಾದ್ರಿ, ಕಾದಂಬರಿಕಾರ.

ಬದುಕು[ಬದಲಾಯಿಸಿ]

ಇವನ ನಿಜನಾಮ ಆಲ್ಬರ್ಟ್ ಬಿಟ್ಜಿಯಸ್. ತಂದೆ ಪಾದ್ರಿಯಾಗಿದ್ದ. ಗಾಟ್ಹೆಲ್ಫ್ ತನ್ನ ಶಾಲಾ ದಿನಗಳಲ್ಲಿ ಹಾಗೂ ಜರ್ಮನಿಯ ಬರ್ನ್ ಮತ್ತು ಗಾಟಿಂಗೆನ್ಗಳಲ್ಲಿ ವೇದಾಂತದ ವಿದ್ಯಾರ್ಥಿಯಾಗಿದ್ದಾಗ ಪ್ರಗತಿಪರ ಧೋರಣೆಗಳನ್ನು ಎತ್ತಿಹಿಡಿದ. ಬರ್ನ್ನಲ್ಲಿ ಶ್ರೀಮಂತ ಪ್ರಭುತ್ವವನ್ನು ಮಟ್ಟಹಾಕಿದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ. 1832ರಲ್ಲಿ ಪಾದ್ರಿಯಾದ ಮೇಲೆ ತನ್ನ ದೇಶದ ಜನರಲ್ಲಿ ತಿಳಿವಳಿಕೆಯನ್ನುಂಟುಮಾಡಲು ತುಂಬ ಶ್ರಮವಹಿಸಿದ ಸಾರ್ವತ್ರಿಕ ವಿದ್ಯಾಭ್ಯಾಸವನ್ನು ತರಲು ಪ್ರಯತ್ನಿಸಿದ. ಜೀವನದಲ್ಲಿ ಉಪೇಕ್ಷಿಸಲ್ಪಟ್ಟವರಿಗಾಗಿ ಒಂದು ಸಂಸ್ಥೆಯನ್ನು ಕೂಡ ಸ್ಥಾಪಿಸಿದ.

ಸ್ವಿಟ್ಜರ್ಲೆಂಡಿನಲ್ಲಿ ಸ್ವತಂತ್ರ್ಯ ವಿಚಾರಗಳ ತತ್ತ್ವದಲ್ಲಿ ತೀವ್ರ ಸುಧಾರಣಾ ಪ್ರವೃತ್ತಿಗಳು ಕಾಣಿಸಿಕೊಂಡಾಗ ಈತ ಹೆಚ್ಚು ಹೆಚ್ಚಾಗಿ ಸಂಪ್ರದಾಯಗಳನ್ನು ಎತ್ತಿ ಹಿಡಿದ. ದಿಗಿಲು ಹುಟ್ಟಿಸುವ ಲೌಕಿಕವಾದದಿಂದ ಕ್ರೈಸ್ತಧರ್ಮದ ನಂಬಿಕೆಗಳನ್ನು ಜೀವಂತವಾಗಿಡುವ ಆಸೆ ಇವನನ್ನು ಬರೆಯಲು ಪ್ರೇರೇಪಿಸಿತು.

ಬರಹ[ಬದಲಾಯಿಸಿ]

ಹಳ್ಳಿಗರ ಜನ ಜೀವನವನ್ನು ಚಿತ್ರಿಸುವ ಇವನ ಕಾದಂಬರಿ ಡೆರ್ ಬ್ಯಾನರ್ನ್ಸ್ಪಿಗೆಲ್ 1837ರಲ್ಲಿ ಪ್ರಕಟವಾಯಿತು. 1838ರಲ್ಲಿ ಇನ್ನೊಂದು ಕಾದಂಬರಿ ದಿ ಜಾಯ್ಸ್ ಅಂಡ್ ಸಫರಿಂಗ್ಸ್ ಆಫ್ ಎ ಸ್ಕೂಲ್ ಮಾಸ್ಟರ್ ಎರಡು ಸಂಪುಟಗಳಲ್ಲಿ ಹೊರಬಿತ್ತು. ಉಲ್ರಿಕ್ ದಿ ಫಾರಮ್ಹ್ಯಾಂಡ್ (1840), ಉಲ್ರಿಕ್ ದಿ ಟೆನೆಂಟ್ (1849) ಎಂಬೆರಡು ಕಾದಂಬರಿಗಳಲ್ಲಿ ಈತ ತನ್ನ ಕಾಲದಲ್ಲಿ ಪ್ರಬಲವಾಗಿದ್ದ ಐಹಿಕ ಸುಖ ಪ್ರವೃತ್ತಿಗಳನ್ನು ವಿರೋಧಿಸಿದ್ದಾನೆ. ಈತನ ಗುರಿ ನೀತಿ ಬೋಧೆಯಾದರೂ ತನ್ನ ಎಲ್ಲ ಬರೆಹಗಳಲ್ಲಿ ಈತ ಅಸಾಧಾರಣ ಸಾಹಿತ್ಯಕ ಸಾಮರ್ಥ್ಯವನ್ನು ಮೆರೆದಿದ್ದಾನೆ. ಇವನ ಹದಿಮೂರು ಕಾದಂಬರಿಗಳು, ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು ಈತನ ಅಸಾಧಾರಣ ಪ್ರತಿಭೆಯನ್ನು ಪ್ರಕಾಶಪಡಿಸುವುದಲ್ಲದೆ ಜನರಲ್ಲಿ ಇವನಿಗೆ ಎಂಥ ತೀವ್ರ ಆಸಕ್ತಿ ಇತ್ತೆಂಬುದನ್ನು ಸಾಬೀತುಗೊಳಿಸುತ್ತವೆ. ಮಾನಸಿಕ ಪರಿವೀಕ್ಷಣೆ, ವಿಭಾವನಾಶಕ್ತಿ ಮತ್ತು ಭಾಷೆಯನ್ನು ಸೃಷ್ಟ್ಯಾತ್ಮಕವಾಗಿ ಬಳಸುವ ಚೈತನ್ಯ-ಇವು ಅತ್ಯಂತ ಜೀವಂತ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಇವನಿಗೆ ಬಹಳ ಸಹಾಯಕವಾದುವು. ಬನ್ನೀಸ್ ಗ್ರಾಮಾಂತರ ಪ್ರದೇಶದ ಜನಜೀವನವೇ ಈತನ ಕಥನ ಸಾಮಗ್ರಿ. ಮಾನವತೆಯ ರಚನಾತ್ಮಕ ಬಲಗಳನ್ನು ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ಕೇಂದ್ರಿಕೃತವಾಗಿರುವ ಧರ್ಮವಲ್ಲದ ಕ್ರೈಸ್ತಧರ್ಮದಲ್ಲಿ ಕಾಣಬಹುದೆಂದು ಈತ ನಂಬಿದ್ದ.

ಜರ್ಮನ್ ಸಾಹಿತ್ಯದಲ್ಲಿನ ಸಹಜತಾ ಪಂಥಕ್ಕೆ (ನ್ಯಾಚುರಲಿಸಂ) ಈತ ಮೊದಲಿಗನೆಂದು ಹೆಸರಾಗಿದ್ದಾನೆ.