ಗಾಂಧೀ ಸಾಹಿತ್ಯ
ಗಾಂಧೀಜಿ ತಮ್ಮ ಜೀವನದಲ್ಲಿ ಸುಮಾರು ಆರು ದಶಕಗಳ ಕಾಲವನ್ನು (1880-1948) ಒಂದಲ್ಲ ಒಂದು ಬಗೆಯ ಲೋಕಹಿತಕಾರ್ಯಕ್ಕೆ ವಿನಿಯೋಗಿಸಿದರು. ಅಂಥ ಸಮಯಗಳಲ್ಲಿ ಅವರು ಆಡಿದ ಮಾತು, ಬರೆದ ಪತ್ರ, ಮಾಡಿದ ಭಾಷಣ-ಇವೆಲ್ಲವನ್ನೂ ಒಟ್ಟಾಗಿ ಗಾಂಧೀ ಸಾಹಿತ್ಯವೆಂದು ಕರೆಯಬಹುದು.
ಅವರ ಬರೆಹಗಳ ರಾಶಿ ಬೆರಗುಪಡಿಸುವಷ್ಟಿದ್ದರೂ ಅದಾವುದನ್ನೂ ಅವರು ಬರೆಯಬೇಕೆಂದೇ ಬರೆದವರಲ್ಲ. ಅವರು ನಿಜಕ್ಕೂ ಯಾವ ಒಂದು ತತ್ತ್ವಪಂಥ ವನ್ನಾಗಲೀ ಜೀವನದರ್ಶನವನ್ನಾಗಲೀ ಸ್ಥಾಪಿಸ ಹೊರಟವರೂ ಅಲ್ಲ. ಹಾಗೆ ಮಾಡಲು ಅವರಿಗೆ ಸಾಕಷ್ಟು ಕಾಲಾವಕಾಶವಾಗಲೀ ಮಾಡುವ ಮನೋಧರ್ಮವಾಗಲೀ ಇರಲಿಲ್ಲ. ಅವರಿಗೆ ಸತ್ಯ ಮತ್ತು ಅಹಿಂಸೆಯಲ್ಲಿ ಅಪಾರ ಶ್ರದ್ಧೆ ಇತ್ತಾಗಿ ಅವು ತೋರಿದ ಮಾರ್ಗದಲ್ಲಿ ಅವರು ನಡೆಯಲು ಯತ್ನಿಸಿದರು; ತಮ್ಮ ಸುತ್ತಣ ಜನತೆಯನ್ನೂ ನಡೆಯುವಂತೆ ಪ್ರೇರಿಸಿದರು. ಹೀಗೆ ಮಾಡುವಾಗ ತಮಗೆ ಸತ್ಯವೆಂದು ಕಂಡದ್ದನ್ನು ಹೇಳಿದರು. ಇದೇ ಗಾಂಧೀ ತತ್ತ್ವ, ಗಾಂಧೀ ಸಾಹಿತ್ಯ.
ಗಾಂಧೀಜಿ ಜೀವನದ ಎಲ್ಲ ಕ್ಷೇತ್ರಗಳನ್ನು ಹೊಕ್ಕು ನೋಡಿದ್ದಾರೆ. ರಾಜಕೀಯ ಸಾಮಾಜಿಕ, ಧಾರ್ಮಿಕ, ಸಾಂಸಾರಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಸ್ಯೆಗಳನ್ನವರು ಎದುರಿಸಿದ್ದಾರೆ. ಭಾಷೆ, ಸಾಹಿತ್ಯ, ವಿದ್ಯಾಭ್ಯಾಸ, ವ್ಯವಸಾಯ, ಕೈಗಾರಿಕೆ, ಕಾರ್ಮಿಕರು-ಈ ಎಲ್ಲ ಕ್ಷೇತ್ರಗಳಲ್ಲೂ ಅವರು ಸತ್ಯಾನ್ವೇಷಕರಾಗಿ ಪ್ರವೇಶಿಸಿದ್ದುಂಟು. ಕೊನೆಗೆ ವ್ಯಕ್ತಿಜೀವನದಲ್ಲಿ ಆಹಾರ, ಉಡುಪು, ನಡೆವಳಿಕೆ ಹೇಗಿರಬೇಕೆಂಬುದರ ಬಗೆಗೂ ಅವರು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ ಸಾಮಾಜಿಕವಾಗಿ ಶತಮಾನಗಳಿಂದ ಕಂಡು ಬರುತ್ತಿದ್ದ ಸಮಸ್ಯೆಗಳಿಗೆ ಸಮಂಜಸವಾದ ಉತ್ತರಗಳನ್ನು ಹುಡುಕಲು ಅವರು ಪ್ರಯತ್ನಿಸಿದ್ದಾರಾದರೂ ಅವರ ಅಭಿಪ್ರಾಯಗಳು ಯಾವ ಸಂಪ್ರದಾಯದ ಕಟ್ಟಿಗೂ ಒಳಗಾಗಿಲ್ಲ.
ಅವರ ಮಾರ್ಗವೂ ಅಷ್ಟೆ. ಸಮಸ್ಯೆ ದೊಡ್ಡದಾಗಿರಲಿ, ಸಣ್ಣದಾಗಿರಲಿ, ಪರಿಣಾಮ ಕಾರಿಯೂ ನೂತನವೂ ಆಗಿರುತ್ತಿತ್ತು. ಹೊಸ ಪ್ರಯೋಗಗಳಿಂದ ಹೊಳೆಯುತ್ತಿದ್ದ ಸತ್ಯಾಂಶಗಳಿಗೆ ಅವರೆಂದು ಕಣ್ಣು ಮುಚ್ಚಿಕೊಂಡವರಲ್ಲ.
ತೋರಿಕೆಯ ಸಾಮಂಜಸ್ಯಕ್ಕೆ ಅವರೆಂದೂ ಬೆಲೆ ಕೊಟ್ಟವರಲ್ಲ. ಆದ್ದರಿಂದ, ಮೇಲೆ ಮೇಲೆ ನೋಡುವವರಿಗೆ ಅವರಲ್ಲಿ ಅಸಮಂಜಸತೆ ಕಾಣಬರಬಹುದು. ತಮ್ಮದು ತಪ್ಪು ದಾರಿ ಎಂದು ಕಂಡುಬಂದಾಗ ಅವರು ನಾಚದೆ ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಂಡು ಬೇರೆ ಮಾರ್ಗವನ್ನು ಅನುಸರಿಸುತ್ತಿದ್ದರು. ಅದೇ, ತಮ್ಮ ಮಾರ್ಗಸರಿಯೆನಿಸಿದಾಗ ಎಂಥ ಒತ್ತಾಯಕ್ಕೂ ಅವರು ಮಣಿದು ತಮ್ಮ ದಾರಿಯನ್ನು ಬದಲಿಸುತ್ತಿರಲಿಲ್ಲ. ಇದರಿಂದಾಗಿ ಅವರ ಅನೇಕ ಧೋರಣೆಗಳು ಬಹುವೇಳೆ ಅವರ ಟೀಕಾಕಾರರನ್ನು ಬೆರಗುಗೊಳಿಸುತ್ತಿದ್ದುವು. ಆದ್ದರಿಂದ ಗಾಂಧಿಯವರ ಜೀವನದ ನಿಲುವು, ತತ್ತ್ವಗಳನ್ನು ಅರಿಯಲು ಅವೆಲ್ಲವನ್ನೂ ಸಮಗ್ರವಾಗಿ ನೋಡಬೇಕಾಗುತ್ತದೆ. ಆಂಶಿಕವಾದ ಯಾವ ಅಧ್ಯಯನವೂ ಅವರ ಬೃಹದ್ ಜೀವನ, ಸಾಧನೆಗಳಿಗೆ ಸರಿಯಾದ ತಾತ್ಪರ್ಯವನ್ನು ಸೂಚಿಸವು.
ಗಾಂಧೀ ಸಾಹಿತ್ಯ ಪ್ರಕಟಣೆ
[ಬದಲಾಯಿಸಿ]ಗಾಂಧೀಜಿ ಬರೆದ, ಆಡಿದ ಮಾತು ಅಪಾರ. ಅವು ಸತ್ಯದ ಜ್ಯೋತಿಯಲ್ಲಿ ಅಹಿಂಸೆಯ ಮೂಸೆಯಿಂದ ಉದ್ಭವಿಸಿ ಬಂದವು. ಅವು ಬದುಕಿನ ಅಂತರಾಳವನ್ನು ಸ್ಪರ್ಶಿಸಿ, ಜನಮಾನಸವನ್ನು ಮೀಟಿ ಎಬ್ಬುತ್ತಿದ್ದಂಥವು. ಐಹಿಕದ ಸಮಸ್ತ ವಿಷಯಗಳನ್ನು ಒಳಗೊಂಡು ಪರಮಾರ್ಥದ ಕಡೆಗೆ ಬಿಡದೆ ಸಾಗುತ್ತಿದ್ದ ಅವರ ವಿಚಾರವ್ಯಾಪ್ತಿ ಆಕಾಶದಂತೆ ಅನಂತ. ಅವರು ತಮ್ಮ ಚಿಂತನ ಮತ್ತು ವಿಚಾರಗಳನ್ನು ಸಂಯಮಕ್ಕೆ ಒಳಪಡಿಸಿಕೊಂಡು ಅವನ್ನು ಸಂಯಮದಿಂದಲೇ ಅಭಿವ್ಯಕ್ತಿಗಳಿಸಿದ ಮಾತು ಎಣೆಯಿಲ್ಲದ ಶಕ್ತಿಯಿಂದ ಹೊಮ್ಮಿಬಂದಂತೆಯೇ ಪ್ರಮಾಣದಲ್ಲಿಯೂ ಅಪಾರವಾಯಿತು. ಅವರ ಜೀವಮಾನ ಕಾಲದಲ್ಲಿ ಸೃಷ್ಟಿಯಾದ ಈ ಸಾಹಿತ್ಯರಾಶಿ ಯಾವ ಒಬ್ಬ ಸಾಹಿತಿಯ ಜೀವಮಾನಕಾಲದಲ್ಲಿ ಸೃಷ್ಟಿಯಾದ, ಯಾವ ಒಬ್ಬನೂ ಸೃಷ್ಟಿಸಬಹುದಾದ ಸಾಹಿತ್ಯದ ಪ್ರಮಾಣಕ್ಕಿಂತ ಯಾವ ವಿಧದಲ್ಲಿಯೂ ಕಡಿಮೆಯಿಲ್ಲ.
ಗಾಂಧಿಯವರೇ ಸ್ಥಾಪಿಸಿದ ನವಜೀವನ ನ್ಯಾಸದವರು ಅವರ ಬರೆಹಗಳನ್ನು ಅಚ್ಚುಹಾಕಿದ್ದಾರೆ. ಅವುಗಳೆಲ್ಲ ಗಾಂಧಿಯವರು ಭಾರತದಲ್ಲಿ ಕೈಗೊಂಡ ಕಾರ್ಯ ಕ್ರಮಗಳನ್ನು ಕುರಿತವಾಗಿವೆ. ನವಜೀವನ, ಯಂಗ್ ಇಂಡಿಯ, ಹರಿಜನ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾದ ಮತ್ತು ಮಿಕ್ಕಂತೆ ಅನೇಕ ಕಡೆ ಹಂಚಿಹೋಗಿರುವ ಗಾಂಧೀ ಸಾಹಿತ್ಯವನ್ನು ಈ ಸಂಸ್ಥೆ ಒಂದೆಡೆ ಸಂಗ್ರಹಿಸಿ ಅಚ್ಚು ಮಾಡಿದೆ. ಹೀಗೆ ಮಾಡುವಾಗ ಸತ್ಯ, ದೇವರು, ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ-ಹೀಗೆ ವಿಷಯಕ್ಕೆ ತಕ್ಕಂತೆ ಬರೆಹಗಳನ್ನು ಕೂಡಿಸಿ ಅಚ್ಚುಮಾಡಲಾಗಿದೆ. ಹೀಗೆ ಕೂಡಿಸುವಾಗ ಇಡೀ ಬರೆವಣಿಗೆಯ ಉಚಿತ ಭಾಗವನ್ನು ಮಾತ್ರ ಉದ್ಧರಿಸಿರುವುದರಿಂದ ಎಷ್ಟೋ ಕಡೆ ಗಾಂಧಿಯವರ ಸಮಗ್ರ ಬರೆವಣಿಗೆ ಒಂದು ಕಡೆ ಸಿಗುವಂತಾಗಿಲ್ಲ.
ಇನ್ನೂ ಗಾಂಧೀ ಸ್ಮಾರಕ ನಿಧಿಯವರು ಅವರ ಪತ್ರಗಳಲ್ಲಿ ಬಹುಪಾಲನ್ನು ಅಚ್ಚುಮಾಡಿದ್ದಾರೆ. ಇಲ್ಲಿಯೂ ಅವರ ಎಲ್ಲ ಪತ್ರಗಳು ಸಿಗುವುದಿಲ್ಲ.
ಗಾಂಧಿಯವರ ಎಲ್ಲ ಬರೆಹಗಳನ್ನೂ ಅಚ್ಚುಮಾಡುವ ದೊಡ್ಡ ಕೆಲಸವನ್ನು ಭಾರತ ಸರ್ಕಾರ ಕೈಗೆತ್ತಿಕೊಂಡು, ನವಜೀವನ ನ್ಯಾಸದ ಸಹಾಯದಿಂದಲೂ ಒಂದು ಪರಿಣತ ಸಂಪಾದಕ ಮಂಡಳಿಯ ಸಹಾಯದಿಂದಲೂ ಪ್ರಕಟಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಮಾಲೆಯ ಮೊದಲ ಸಂಪುಟ ಅಚ್ಚಾದದ್ದು 1958ರ ಜನವರಿ 26ರಂದು. ಅದರಲ್ಲಿ 1884-1896ರ ವರೆಗಿನ ಗಾಂಧೀ ಬರೆಹಗಳು ಅಚ್ಚಾಗಿವೆ. ಮೊದಲ ಎಣಿಕೆಯಂತೆ ಗಾಂಧೀ ಸಾಹಿತ್ಯ 50 ಸಂಪುಟಗಳಾಗಬಹುದೆಂಬ ನಿರೀಕ್ಷೆ ಇತ್ತು. ಈಗ ಅವುಗಳ ಸಂಖ್ಯೆ 75ಕ್ಕೆ ಏರಿದೆ. 1971ರ ಜುಲೈ ತಿಂಗಳಲ್ಲಿ ಈ ಸರಣಿಯಲ್ಲಿ 45 ಸಂಪುಟಗಳು ಅಚ್ಚಾಗಿವೆ.
ಇಲ್ಲಿನ ಕ್ರಮ ಹೀಗಿದೆ. ಸಾಹಿತ್ಯ ಎಂದೆಂದು ಹುಟ್ಟಿತೋ ಅಂದಂದಿನ ಎಣಿಕೆಯಲ್ಲಿ, ಕಾಲಾನುಕ್ರಮವಾಗಿ, ಗಾಂಧಿಯವರ ಬರೆಹಗಳನ್ನು ಇಲ್ಲಿ ಅಚ್ಚುಹಾಕಲಾಗಿದೆ. ಅವರ ಕಾಗದಪತ್ರಗಳು, ಭಾಷಣಗಳು, ದಿನಚರಿ, ಪತ್ರಿಕೆಗೆ ಬರೆದ ಲೇಖನಗಳು, ಅಹವಾಲುಗಳು, ತಂತಿಗಳು, ಪ್ರವಚನಗಳು-ಹೀಗೆ ಗಾಂಧಿಯವರ ಎಲ್ಲ ಲೇಖಗಳನ್ನೂ ಈ ಸಂಪುಟಗಳು ಒಳಗೊಂಡಿವೆ. ಈ ಸರಣಿ ಪುರ್ಣವಾಗಿ ಅಚ್ಚಾದಾಗ ಗಾಂಧೀ ದರ್ಶನವೇನೆಂಬುದನ್ನು ನಿರ್ಣಯಿಸುವ ಸಂಶೋಧಕರಿಗೆ ತುಂಬ ಸಹಾಯವಾಗುತ್ತದೆ.
ಕನ್ನಡದಲ್ಲಿ ಗಾಂಧೀ ಸಾಹಿತ್ಯ
[ಬದಲಾಯಿಸಿ]ಕನ್ನಡದಲ್ಲೂ ಗಾಂಧೀ ಸಾಹಿತ್ಯವನ್ನು ಪ್ರಕಟಿಸುವ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತದೆ. ಗಾಂಧೀ ಸ್ಮಾರಕ ನಿಧಿಯವರು ಕನ್ನಡ ಗಾಂಧೀ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಈಗಾಗಲೆ 15ಕ್ಕೂ ಮೇಲ್ಪಟ್ಟು ಗ್ರಂಥಗಳನ್ನು ಹೊರ ತಂದಿದ್ದಾರೆ.
1. ಸಂಕ್ಷಿಪ್ತ ಆತ್ಮಕಥೆ ಮತ್ತು ಹಿಂದ್ ಸ್ವರಾಜ್
2. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ
3. ಗೀತಾಮಾತೆ
4. ಸತ್ಯ-ಅಹಿಂಸೆ
5. ಧರ್ಮ-ನೀತಿ
6. ಸಮಾಜ ಧರ್ಮ
7. ಜೀವನ ಶಿಕ್ಷಣ
8. ಅರ್ಥವಿಚಾರ
9. ಸತ್ಯಾಗ್ರಹ
10. ಮಹಿಳೆಯರು
11. ಪತ್ರಗುಚ್ಛ-1
12. ಪತ್ರಗುಚ್ಛ-2
13. ನನ್ನ ಸಮಕಾಲೀನರು
14. ರಾಜನೀತಿ
15. ಪತ್ರಗುಚ್ಛ-3
ಈ ಶೀರ್ಷಿಕೆಗಳನ್ನು ನೋಡಿದರೆ ಕನ್ನಡದ ಈ ಗ್ರಂಥಗಳಿಗೆ ಮಾದರಿ ನವಜೀವನ ನ್ಯಾಸದವರ ಗ್ರಂಥಗಳು ಎಂಬುದು ಸ್ಪಷ್ಟವಾಗುತ್ತದೆ.
ಗಾಂಧೀ ಸಾಹಿತ್ಯದ ಪ್ರಕಾರಗಳು
[ಬದಲಾಯಿಸಿ]ಗಾಂಧೀ ಸಾಹಿತ್ಯವನ್ನು, ಸಹಜವಾಗಿಯೇ, ಗಾಂಧೀಜಿ ಸ್ವತಃ ಬರೆದುವು ಮತ್ತು ಅವರು ಆಡಿದ ಮಾತಿನ ಮೂಲಕ ವ್ಯಕ್ತವಾಗಿ ಗ್ರಂಥರೂಪ ಪಡೆದುವು. ಹಾಗೂ ಗಾಂಧೀಜೀವನ-ಚಿಂತನ ಇವುಗಳ ಬಗೆಗೆ ಇತರರು ಬರೆದುವು ಎಂದು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಇಲ್ಲಿ ಗಾಂಧೀಯವರೇ ಬರೆದು ಗ್ರಂಥರೂಪಕ್ಕೆ ಬಂದುವುಗಳ ಸಂಗ್ರಹ ಪರಿಚಯವನ್ನು ಕೊಡಲಾಗಿದೆ. ಅವುಗಳಲ್ಲಿ 1. ಹಿಂದ್ ಸ್ವರಾಜ್ಯ, 2. ಸರ್ವೋದಯ, 3. ನೀತಿ ಧರ್ಮ, 4. ಆರೋಗ್ಯ ಮಾರ್ಗದರ್ಶಿನೀ, 5. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ, 6. ನನ್ನ ಸತ್ಯಾನ್ವೇಷಣೆ ಅಥವಾ ಆತ್ಮಕಥೆ, 7. ಅನಾಸಕ್ತಿಯೋಗ, 8. ಮಂಗಳ ಪ್ರಭಾತ, 9. ರಚನಾತ್ಮಕ ಕಾರ್ಯಕ್ರಮ ಅಥವಾ ನಿರ್ಮಾಣ ಕಾರ್ಯಕ್ರಮ-ಇವುಗಳು ಪ್ರಧಾನವಾದುವು.
ಹಿಂದ್ ಸ್ವರಾಜ್ಯ
[ಬದಲಾಯಿಸಿ]ಗಾಂಧೀ ವಿಚಾರಕ್ಕೆ ಮೂಲಗ್ರಂಥವಿದು. ಅವರು 1909ರಲ್ಲಿ ಲಂಡನ್ನಿನಿಂದ ದಕ್ಷಿಣ ಆಫ್ರಿಕಕ್ಕೆ ಹಿಂದಿರುಗುವಾಗ, ನವೆಂಬರ್ 13 ರಿಂದ 22ರ ವರೆಗೆ ಹಗಲೂರಾತ್ರಿ ಹಡಗಿನಲ್ಲಿ ಕುಳಿತು ಬರೆದ ಗ್ರಂಥ. ಇದರ ಕರಡುಪ್ರತಿಯ ಕೆಲವು ಪುಟಗಳನ್ನು ಅವರು ಎಡಗೈಯಲ್ಲೂ ಬರೆದರು. ಈ ಪುಸ್ತಕ ಆಧುನಿಕ ನಾಗರಿಕತೆಯ ತೀವ್ರಖಂಡನೆಯಾಗಿದೆ. ಇದು ಸಂವಾದರೂಪದಲ್ಲಿದ್ದು ಅಂದು ಹಿಂದೂಸ್ಥಾನದಲ್ಲಿ ಹೆಚ್ಚುತ್ತಿದ್ದ ಹಿಂಸಾವಾದಕ್ಕೆ ಯುಕ್ತ ಉತ್ತರವಾಗಿದೆ. ದ್ವೇಷಕ್ಕೆ ಪ್ರತಿಯಾಗಿ ಆತ್ಮತ್ಯಾಗವನ್ನಿದು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ-ಎಂದು ಅವರು ವಿವರಿಸಿದ್ದಾರೆ. ಇದನ್ನು ಗಾಂಧೀಜಿ ಮೊದಲು ಗುಜರಾತೀ ಭಾಷೆಯಲ್ಲಿ ಬರೆದರು. ಅವರೇ ಇಂಗ್ಲಿಷಿಗೂ ಭಾಷಾಂತರಿಸಿದರು. ಈ ಗ್ರಂಥದಲ್ಲಿ ಪ್ರತಿಪಾದಿಸಿದ ಆದರ್ಶಕ್ಕೆ ಅವರ ಬದುಕು ವೈಯಕ್ತಿಕವಾಗಿ ಮೀಸಲಾಗಿತ್ತು. ಹಿಂದೂಸ್ತಾನ ಆ ಆದರ್ಶವನ್ನು ಸಾಧಿಸಲು ಕಾಲ ಮಾಗಿ ಬಂದಿರಲಿಲ್ಲವೆಂದು ಅವರು ಚೆನ್ನಾಗಿ ಅರಿತಿದ್ದರು. ಆದರೆ, ನನ್ನ ಸಾಮೂಹಿಕ ಪ್ರಯತ್ನ, ಭಾರತೀಯ ಅಭಿಮತದಂತೆ ಶಾಸನಸಮ್ಮತ ಪ್ರಜಾಪ್ರಭುತ್ವಕ್ಕಾಗಿ ನಡೆದಿದೆ-ಎಂದು ಅವರೇ ವ್ಯಕ್ತಪಡಿಸಿದ್ದರು.
ಹಿಂದ್ ಸ್ವರಾಜ್ಯವನ್ನು ಓದಿದವರು ಗಾಂಧೀಜಿ ನ್ಯಾಯಾಲಯಗಳು, ಗಿರಣಿ, ಯಂತ್ರ, ಸಂಸದಾತ್ಮಕ ಪ್ರಜಾಪ್ರಭುತ್ವ, ಇವೆಲ್ಲವುಗಳ ವಿರೋಧಿಯೆಂದು ಭಾವಿಸುವುದುಂಟು. ಆದರೆ, ವ್ಯಾವಹಾರಿಕ ಆದರ್ಶವಾದಿಯಾಗಿದ್ದ ಅವರು, ತಮ್ಮ ನಿಲುವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ವ್ಯಕ್ತಪಡಿಸಿದ್ದಾರೆ. ಇವು ಯಾವುವೂ ನಿಜ ನಾಗರಿಕತೆಯ ಲಕ್ಷಣಗಳಲ್ಲವೆಂದೂ ಸಹಜವಾಗಿಯೇ ಇವು ನಾಶವಾದರೆ ಲೋಕಕ್ಕೆ ಕ್ಷೇಮವೆಂದೂ ಆದರೆ ಆ ರೀತಿ ಆಗಬೇಕಾದರೆ ಮನುಜವರ್ಗ ಅಪಾರತ್ಯಾಗಕ್ಕೂ ಸರಳಜೀವನಕ್ಕೂ ಸಿದ್ಧವಾಗಿರಬೇಕೆಂದೂ ಅವರ ಅಭಿಪ್ರಾಯ. ಬ್ರಿಟಿಷ್ ಸಾಮ್ರಾಜ್ಯವಾದಿಯಾಗಿದ್ದ ಲಾರ್ಡ್ ಲೋದಿಯನ್ 1938ರಲ್ಲಿ ಸೇವಾಗ್ರಾಮದಲ್ಲಿ ಕೆಲವು ದಿನ ತಂಗಿದ್ದಾಗ ಹಿಂದ್ ಸ್ವರಾಜ್ಯದ ಪ್ರತಿ ಇದ್ದರೆ ಕೊಡಿ, ಗಾಂಧೀಜಿ ಹೇಳುವುದೆಲ್ಲ ಅದರಲ್ಲಿ ಬೀಜರೂಪದಲ್ಲಿದೆ, ಗಾಂಧೀಜಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕವನ್ನು ಎಷ್ಟು ಸಲ ಓದಿದರೂ ಸಾಲದು-ಎಂದು ನುಡಿದಿದ್ದರು. ಈ ಮಾತು ಪುಸ್ತಕದ ಮಹತ್ತ್ವವನ್ನು ತೋರಿಸುತ್ತದೆ.
ಸರ್ವೋದಯ
[ಬದಲಾಯಿಸಿ]ಇದು ಇಂಗ್ಲೆಂಡಿನ ಪ್ರಸಿದ್ಧ ಲೇಖಕ ಜಾನ್ ರಸ್ಕಿನ್ನನ ‘ಅಂಟು ದಿಸ್ ಲ್ಯಾಸ್ಟ’ ಎಂಬ ಪುಸ್ತಕದ ಸಾರಸಂಗ್ರಹ, ಇದಕ್ಕೆ ಗಾಂಧೀಜಿಯೇ ಇಟ್ಟ ಹೆಸರು-ಸರ್ವೋದಯ. ಇದರಲ್ಲಿ ಗಾಂಧೀಜಿ ಕಂಡುಕೊಂಡ ತತ್ತ್ವಗಳೂ ಮೂರು: (ಅ) ವ್ಯಕ್ತಿಯ ಒಳಿತು ಸಮಾಜದ ಒಳಿತಿನಲ್ಲಿ ಅಡಗಿದೆ. (ಆ) ನ್ಯಾಯ ವಾದಿಯ ಕೆಲಸ, ನಾಯಿಂದನ ಕೆಲಸ ಎರಡಕ್ಕೂ ಸಮಾನ ಬೆಲೆ; ಏಕೆಂದರೆ ಇಬ್ಬರಿಗೂ ತಮ್ಮ ಕೆಲಸದಿಂದ ಉದರಂಭರಣ ಮಾಡುವ ಸಮಾನ ಹಕ್ಕಿದೆ. (ಇ) ಶ್ರಮ ಜೀವಿಯ ಎಂದರೆ ಕೃಷಿಕನ ಮತ್ತು ಕೈಕಸಬುದಾರನ ಜೀವನವೇ ಯೋಗ್ಯಜೀವನ. ಈ ಮೂರು ಅಧ್ಯಾತ್ಮ ಅಥವಾ ತ್ಯಾಗತತ್ತ್ವ, ಆರ್ಥಿಕ ಸಮಾನತೆಯ ತತ್ತ್ವ. ಶ್ರಮಗೌರವ ಅಥವಾ ಶ್ರಮನಿಷ್ಠೆ ಇವನ್ನು ತಿಳಿಸುತ್ತದೆ. ಭಾರತದ ಅಷ್ಟೇ ಏನು ಜಗತ್ತಿನ ಸಮಾಜಗಳು ಈ ತತ್ತ್ವಗಳ ಆಧಾರದ ಮೇಲೆ ಪುನರ್ರಚಿತವಾಗಬೇಕೆಂಬುದು ಗಾಂಧೀಜಿಯ ಆಕಾಂಕ್ಷೆಯಾಗಿತ್ತು. ಸರ್ವೋದಯ ಅವರ ಬೋಧೆಯ ಸಾರ, ಅದಕ್ಕಾಗಿಯೇ ಅವರು ದುಡಿದು ಮಡಿದರು.
ನೀತಿತತ್ತ್ವ
[ಬದಲಾಯಿಸಿ]ಈ ಗ್ರಂಥ ನೀತಿ ಜೀವನವೇ ಧಾರ್ಮಿಕ ಜೀವನದ ತಿರುಳು ಎಂಬುದನ್ನು ಪ್ರತಿಪಾದಿಸುತ್ತದೆ. ನೀತಿಯೆಂದರೆ ಆಚಾರ, ಸದಾಚಾರ, ಅದಿಲ್ಲದೆ ಯಾವ ಧರ್ಮವೂ ಸಾಧಿತವಾಗಲಾರದು. ನಿಜವಾಗಿ ನೋಡಿದರೆ ನೀತಿನಿಯಮಗಳಿಗೆ ವಿಧೇಯನಾಗಿ ನಡೆಯದವನು ಪುರ್ಣಾರ್ಥದಲ್ಲಿ ಮನುಷ್ಯನೇ ಅಲ್ಲ ಎಷ್ಟೇ ಕಷ್ಟ ಬರಲಿ, ನಷ್ಟವಾಗಲಿ ಸತ್ಯಶೀಲಗಳಲ್ಲೇ ಸುಖವನ್ನು ಅನುಭವಿಸುವಂತೆ ಆಗಬೇಕು ಎಂಬುದು ನೀತಿಧರ್ಮದ ಮಥಿತಾರ್ಥ. ವೈಯಕ್ತಿಕ ಜೀವನದಲ್ಲಿಯೂ ವೃತ್ತಿಜೀವನ ದಲ್ಲಿಯು ಸಾರ್ವಜನಿಕ ಜೀವನದಲ್ಲಿಯೂ ನೀತಿಧರ್ಮವೇ ಪ್ರಧಾನ ಅಂಶವಾಗಬೇಕು. ನೀತಿಧರ್ಮದ ಬೆಲೆಯಿಲ್ಲದ ಕರ್ಮಗಳೆಲ್ಲ ಉಸುಬಿನ ಮೇಲೆ ಕಟ್ಟಿದ ಸೌಧಗಳಂತೆ.
ಆರೋಗ್ಯಮಾರ್ಗದರ್ಶಿನೀ :
[ಬದಲಾಯಿಸಿ]ಸ್ತ್ರೀಪುರುಷರು ಆರೋಗ್ಯದೃಢಕಾಯರಾಗಿ ಅನುಸರಿಸಬೇಕಾದ ನಿಯಮಗಳನ್ನು ಈ ಪುಸ್ತಕ ತಿಳಿಸುತ್ತದೆ. ಇವೆಲ್ಲ ಗಾಂಧೀಜಿಯೇ ಪ್ರಯೋಗಿಸಿದ ವಿಧಾನಗಳ ವಿವರಣೆ. ಗಾಳಿ, ಬೆಳಕು, ನೀರು, ಮೃತ್ತಿಕೆ ಇವುಗಳ ಉಪಯೋಗವೇ, ಇದರ ತಿರುಳು, ಇದನ್ನು ಗಾಂಧೀಜಿ ಪ್ರಕೃತಿಚಿಕಿತ್ಸೆ, ನಿಸರ್ಗಚಿಕಿತ್ಸೆ ಎನ್ನುತ್ತಾರೆ. ಮಾನವ ಪ್ರಕೃತಿಯಿಂದ ದೂರವಾದಷ್ಟೂ ರೋಗಗಳಿಗೆ ತುತ್ತಾಗುವುದು ಸಹಜ. ಹಾಗೆಯೇ ಪ್ರಕೃತಿಯೇ ಅವುಗಳಿಗೆ ನಿಜವಾದ ಚಿಕಿತ್ಸೆಯ ಮಾರ್ಗವನ್ನು ತೋರಿಸುತ್ತದೆಂದು ಗಾಂಧೀಜಿಯ ನಂಬಿಕೆಯಾಗಿತ್ತು.
ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ
[ಬದಲಾಯಿಸಿ]ಗಾಂಧೀಜಿ ಸತ್ಯ ಅಹಿಂಸೆಗಳ ಮಾರ್ಗದಲ್ಲಿ ಪ್ರಥಮವಾಗಿ ನಡೆಸಿದ ಸವಿನಯ ಪ್ರತೀಕಾರದ, ಸವಿನಯ ಶಾಸನೋಲ್ಲಂಘನದ, ಪಾಶವೀ ಶಕ್ತಿಗೆ ವಿರುದ್ದವಾಗಿ ನಿಲ್ಲಿಸಿದ ಸಾತ್ತ್ವಿಕ ಶಕ್ತಿಯ ಅಥವಾ ಪ್ರೇಮ ಶಕ್ತಿಯ ಹೋರಾಟದ ಇತಿಹಾಸವಿದು. ಈ ಹೋರಾಟ ಸತ್ಯಾಗ್ರಹ ಎಂಬ ಹೆಸರಿನಿಂದ ಜಗತ್ತಿನಲ್ಲೆಲ್ಲ ಪ್ರಸಿದ್ದವಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಇದು ಸ್ಫೂರ್ತಿ ನೀಡಿತು.
ಮಂಗಳ ಪ್ರಭಾತ
[ಬದಲಾಯಿಸಿ]ಇದೊಂದು ಪುಟ್ಟ ಪುಸ್ತಕವಾದರೂ ಸರ್ವೋದಯಕ್ಕೆ ನೆರವಾಗುವ ವ್ಯಕ್ತಿಜೀವನ ಹಾಗೂ ಸಾಮಾಜಿಕ ಜೀವನಗಳನ್ನು ಬೆಳೆಸಿಕೊಳ್ಳಲು ಶಕ್ತಿ ನೀಡುವ ವ್ರತಗಳ ವಿವರಣೆಯನ್ನು ನೀಡುತ್ತದೆ. ಸತ್ಯ, ಅಹಿಂಸೆ, ಅಸ್ತೇಯ ಬ್ರಹ್ಮಚರ್ಯ ಅಸಂಗ್ರಹ, ಶರೀರಶ್ರಮ, ಅಸ್ವಾದ, ಭಯಮುಕ್ತಿ, ಸರ್ವಧರ್ಮಸಮಭಾವ, ಸ್ವದೇಶೀ ಸ್ಪರ್ಶಭಾವನೆ (ಅಸೃಶ್ಯತಾ ನಿವಾರಣೆ) ಇವನ್ನು ಸಾಧಿಸಲು ನಮ್ರತೆಯಿಂದ ಪ್ರಯತ್ನ ಮಾಡುವುದರ ಮಹತ್ತ್ವವನ್ನು ಇದು ವಿವರಿಸುತ್ತದೆ. ಈ ಪುಸ್ತಕ ಗಾಂಧಿ ಜೀವನವಿಧಾನದ ಕೈಪಿಡಿ ಎನ್ನಬಹುದು.
ಆತ್ಮಕಥೆ
[ಬದಲಾಯಿಸಿ]ಗಾಂಧೀ ಸಾಹಿತ್ಯದಲ್ಲಿ ಎಂದೆಂದಿಗೂ ಶಿಖರಪ್ರಾಯವಾಗಿ ನಿಲ್ಲುವ ಕೃತಿ ಇದು. ಇದನ್ನು ಓದಿ ಅದೆಷ್ಟೋ ಮಂದಿ ಸ್ಫೂರ್ತಿ ಪಡೆದಿದ್ದಾರೆ ಗಾಂಧೀಜಿಯಂತೆಯೇ ಈಚೆಗೆ ಹಂತಕನ ಗುಂಡಿಗೆ ತುತ್ತಾಗಿ, ಹುತಾತ್ಮನಾದ ಅಮೆರಿಕದ ನೀಗ್ರೋನಾಯಕ ಮಾರ್ಟಿನ್ ಲೂಥರ್ ಕಿಂಗ್ ಇದನ್ನು ಓದಿ ಸ್ಫೂರ್ತಿ ಪಡೆದುದಲ್ಲದೆ ಸವಿನಯ ಪ್ರತೀಕಾರ ಚಳವಳಿಯನ್ನು ಬಿಳಿಯರ ದಬ್ಬಾಳಿಕೆಯ ವಿರುದ್ಧವಾಗಿ ನಡೆಸಿದ. ಜಗತ್ತಿನ ಮಹನೀಯರ ಆತ್ಮಕಥನ ಗ್ರಂಥಗಳಲ್ಲಿ ಇದಕ್ಕೆ ಅಗ್ರಸ್ಥಾನ ದೊರಕಿದೆ.
ಅನಾಸಕ್ತಿಯೋಗ
[ಬದಲಾಯಿಸಿ]ಗಾಂಧೀಜಿ ಭಗವದ್ಗೀತೆಯನ್ನು ನನ್ನ ತಾಯಿ ಎಂದು ಕರೆದರು. ಅದರಲ್ಲಿ ಅವರು ಕಂಡ ಸತ್ಯವೇ ಅನಾಸಕ್ತಿಯೋಗ, ಅವರು ತಮ್ಮ ಜೀವನವನ್ನೂ ಅನಾಸಕ್ತಿಯೋಗದಿಂದಲೇ ನಡೆಸಿದರು. ಎಲ್ಲವನ್ನೂ ಭಗವಂತನಿಗೇ ಅರ್ಪಿಸಿ, ಸುಖ-ದುಃಖಗಳಿಂದ ಉದ್ವಿಗ್ನರಾಗದೆ, ಸೋಲು-ಗೆಲವುಗಳನ್ನು ಸಮನಾಗಿ ಕಂಡು, ಬಾಳಬೇಕಾದ ಪರಿ, ಜೀವನದ ವಿವೇಕ, ಇದರಲ್ಲಿ ಉಲ್ಲೇಖವಾಗಿದೆ. ಗೀತಾಮಾತೆಯ ಪೀಯೂಷಪಾನದಿಂದಲೇ ಗಾಂಧೀಜಿಯ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಯಿತು. ಅದು ಅವರ ಎಲ್ಲ ಲೌಕಿಕ ಕರ್ಮಗಳಿಗೂ ಪುಷ್ಟಿ ನೀಡಿತು.
ನಿರ್ಮಾಣ ಕಾರ್ಯಕ್ರಮ
[ಬದಲಾಯಿಸಿ]ಸರ್ವೋದಯ ದರ್ಶನದ ಆಧಾರದ ಮೇಲೆ ಶಾಂತಿ ಸಮೃದ್ಧವಾದ, ಯುದ್ದಭೀತಿಮುಕ್ತವಾದ ಸ್ವತಂತ್ರ ಭಾರತವನ್ನು ಸೃಷ್ಟಿಸುವುದಕ್ಕೂ ವಿಕೇಂದ್ರೀಕರಣ ಪ್ರಧಾನವಾದ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಸಮತೆ, ಮಾನವ ಸೋದರಭಾವ ಇವನ್ನು ಕಾರ್ಯರೂಪಕ್ಕೆ ತರುವುದಕ್ಕೂ ಕಾಲ ಕಾಲಕ್ಕೆ ಗಾಂಧೀಜಿ ರೂಪಿಸಿದ ಕಾರ್ಯಕ್ರಮಗಳ ವಿವರಣೆ ಈ ಪುಟ್ಟ ಪುಸ್ತಕದಲ್ಲಿದೆ. ನಿರ್ಮಾಣ ಕಾರ್ಯಕ್ರಮದ ಶ್ರದ್ಧಾಭರಿತ ಅನುಷ್ಠಾನದಿಂದ ನಿಜಸ್ವರಾಜ್ಯವನ್ನು ಸಾಧಿಸಬಹುದೆಂಬ ನಂಬಿಕೆ ಅವರಲ್ಲಿತ್ತು.
ಗಾಂಧೀ ಸಾಹಿತ್ಯದ ಗುಣಲಕ್ಷಣಗಳು
[ಬದಲಾಯಿಸಿ]ಜೀವನದ ಸಮಗ್ರ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ನ್ಯಾಯಸಮ್ಮತವೂ ಫಲಕಾರಿಯೂ ಆದ ಮಾತುಗಳನ್ನು ಗಾಂಧಿಯವರಂತೆ ಸೂಚಿಸಿದವರು ಅಪರೂಪ, 60 ವರ್ಷಗಳ ತುಂಬು ಜೀವನದಲ್ಲಿ ಅವರು ಎಂದಿಗೂ ಸಮಯಸಾಧಕರಾಗಿ ವರ್ತಿಸಿದವರಲ್ಲ. ದಾರಿ ಯಾವುದಾದರೂ ಸರಿ ಗುರಿ ಮುಟ್ಟಿದರಾಯಿತು, ಎಂದವರಲ್ಲ. ಜನತೆಯನ್ನು ಒಟ್ಟಾಗಿ ಬಿಡಿಬಿಡಿಯಾಗಿ ತಿದ್ದುವಲ್ಲಿ, ಪ್ರೋತ್ಸಾಹಿಸಿ ಹುರಿದುಂಬಿಸುವಲ್ಲಿ ಕಾರ್ಯೋನ್ಮುಖರನ್ನಾಗಿ ಮಾಡುವಲ್ಲಿ ಹೊಸ ಜೀವನ ಮಾರ್ಗವನ್ನು ತೋರುವಲ್ಲಿ, ಎಲ್ಲ ಕಾಲಕ್ಕೂ ಎಲ್ಲ ದೇಶಗಳೂ ಅನ್ವಯವಾಗುವಂಥ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿವಲ್ಲಿ-ಈ ಎಲ್ಲವನ್ನೂ ಗಾಂಧೀಜಿಗೆ ಇದ್ದ ಮಾನವೀಯ ಧೋರಣೆ ಅವರ ಎಲ್ಲ ಬರೆಹಗಳಲ್ಲೂ ಎದ್ದುಕಾಣುತ್ತದೆ.
ಮಾನವನ ಹೃದಯಾಂತರಾಳದಲ್ಲಿ ಹುದುಗಿರುವ ಪ್ರೇಮ, ಪ್ರೀತಿ, ವಿಶ್ವಾಸಗಳ ಬಗ್ಗೆ ಗಾಂಧೀಯವರಿಗೆ ಅಪಾರ ಭರವಸೆ ಇತ್ತು. ಅದರ ವಿಕಸನದಿಂದ ಬಂದ ಸ್ವಾತಂತ್ರ್ಯ ನಿಲ್ಲುವಷ್ಟು ಕಾಲ ಕೇವಲ ರಾಜಕೀಯ ಆಂದೋಳನದಿಂದ ಬಂದ ಸ್ವಾತಂತ್ರ್ಯ ನಿಲ್ಲಲಾರದು ಎಂದು ಅವರು ಅರಿತಿದ್ದರು. ಅವರ ಈ ಮನೋಧರ್ಮ ಅವರ ಮಾತಿನಲ್ಲೂ ನೀತಿ ಬರೆಹದಲ್ಲೂ ಎದ್ದುಕಾಣುತ್ತದೆ.
ಅವರ ಆರ್ಥಿಕ ನೀತಿ ಕೇವಲ ಬಡತನದ ನೀತಿಯಲ್ಲ. ಅವರ ಜೀವನವಿವೇಕ ಕೇವಲ ಅಭಾವ ವೈರಾಗ್ಯದಿಂದ ಬಂದ ಸಪ್ಪೆಸರಕಲ್ಲ. ಆಶ್ರಮಜೀವನ ಬ್ರಹ್ಮಚರ್ಯ, ಸ್ವದೇಶಿ, ಸತ್ಯಾಗ್ರಹ, ಉಪವಾಸ, ಶಾಂತಿಯುತ ಅಸಹಕಾರ, ಇವೆಲ್ಲ ಜೀವನವನ್ನು ಒಣಗಿಸುವುದಕ್ಕಲ್ಲ. ಅದನ್ನು ವಿಕಸಿಸಿ ಬೆಳೆಸುವುದಕ್ಕೆ-ಎಂಬುದು ಅವರ ಧೋರಣೆ.
ಗಾಂಧಿ ಇಂಗ್ಲಿಷ್ ಮತ್ತು ಗುಜರಾತಿ -ಎರಡು ಭಾಷೆಗಳಲ್ಲೂ ಬರೆದರು. ಗುಜರಾತಿ ಅವರ ಮಾತೃಭಾಷೆ. ಅವರನ್ನು ಗುಜರಾತಿ ನವ್ಯ ಗದ್ಯದ ನಿರ್ಮಾಪಕರಲ್ಲೊಬ್ಬ ರೆಂದು ವಿದ್ವಾಂಸರು ಕೊಂಡಾಡಿದ್ದಾರೆ. ಇಂಗ್ಲಿಷಿನಲ್ಲೂ ಗಾಂಧೀಯವರದು ಅಂಥದೇ ಎತ್ತಿದ ಕೈ.
ಸರಳವಾಗಿ, ಸುಲಭವಾಗಿ, ನೇರವಾಗಿ ಹೇಳುವುದು ಅವರ ಮಾರ್ಗ ಅವರ ಬರೆವಣಿಗೆಯಲ್ಲಿ ಅನಾವಶ್ಯಕ ವಿವರಗಳಾಗಲಿ, ಚರ್ವಿತಚರ್ವಣವಾಗಲಿ ಎಲ್ಲಿಯೂ ಕಾಣದು, ಬೈಬಲ್, ಭಗವದ್ಗೀತೆ, ಪಿಲ್ಗ್ರಿಮ್ಸ್ ಪ್ರಾಗ್ರೆಸ್, ಪಾಸ್ಟ ಅಂಡ್ ಪ್ರೆಸೆಂಟ್, ಅಂಟು ದಿಸ್ ಲ್ಯಾಸ್್ಟ ಮೊದಲಾದ ಉದ್ಗ್ರಂಥಗಳಲ್ಲಿನ ಸುಲಭತೆಯನ್ನು ಗಾಂಧಿಯವರಲ್ಲಿ ನಾವು ಗುರುತಿಸಬಹುದು. ಮಾತು ಯವಾಗಲೂ ತರ್ಕಬದ್ದ, ನ್ಯಾಯಸಮ್ಮತ ಹಾಗೆಂದ ಮಾತ್ರಕ್ಕೆ ವ್ಯಂಗ್ಯ, ವಿಡಂಬನ, ಹಾಸ್ಯ, ಸರಸ ಇಲ್ಲವೆಂದಲ್ಲ. ಅನೇಕ ಕಡೆ ಕವಿಯ ಮನೋಧರ್ಮ ಕೂಡ ಕಾಣುವುದುಂಟು.
ಗಾಂಧೀ ಸಾಹಿತ್ಯದ ಪ್ರಭಾವ
[ಬದಲಾಯಿಸಿ]‘ನನ್ನ ಬರೆಹಗಳನ್ನು ನನ್ನ ದೇಹದ ಜೊತೆಯಲ್ಲೆ ಸುಟ್ಟುಬಿಡಬೇಕು. ನಾನು ಮಾಡಿರುವ ಕೆಲಸ ಉಳಿಯುತ್ತದೇ ಹೊರತು ನಾನು ಆಡಿದ್ದೂ ಬರೆದದ್ದೂ ಅಲ್ಲ’ ಎಂದು ಗಾಂಧೀ ಹೇಳಿಕೊಂಡಿದ್ದಾರಾದದರೂ ಅವರ ಬರೆಹಗಳ ಪ್ರಭಾವ ಬಹು ವ್ಯಾಪಕವಾಗಿದೆ. ಪಾರ್ಥಿವವಾಗಿ ಅವರು ಇಲ್ಲವಾದರೂ ಸೂಕ್ಷ್ಮರೂಪಿಯಾಗಿ ಅವರು ತಮ್ಮ ಬರೆಹಗಳಲ್ಲಿ ಉಳಿದು ಬಂದಿದ್ದಾರೆ.
ಗಾಂಧೀಜಿಯ ವ್ಯಕ್ತಿತ್ವ ಹೇಗೆ ಜಗತ್ತಿನ ಮತ್ತು ಭಾರತದ ವಿಚಾರವಂತರ ಗಮನ ವನ್ನು ಸೆಳೆಯಿತೋ ಹಾಗೆಯೇ ಭಾರತೀಯ ಭಾಷೆಗಳು ಮತ್ತು ಸಾಹಿತ್ಯಗಳ ಮೇಲೂ ಪ್ರಭಾವ ಬೀರಿದೆ. ಅವರ ಆತ್ಮಕಥೆ ಭಾರತದ ಎಲ್ಲ ಭಾಷೆಗಳಲ್ಲೂ ಅನುವಾದವಾಗಿರು ವಂತೆಯೇ ವಿವಿಧ ರಾಷ್ಟ್ರಗಳ ಭಾಷೆಗಳಲ್ಲಿಯೂ ಅನುವಾದವಾಗಿರುವುದನ್ನು ಗಮನಿಸ ಬಹುದು. ಗಾಂಧೀ ವಿಚಾರ ಜೀವನತತ್ತ್ವ ಸತ್ಯಾಗ್ರಹ ಇವು ಭಾರತೀಯ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾದಂಬರಿ, ಕವನ, ನಾಟಕ ಇವುಗಳಲ್ಲೆಲ್ಲ ಪ್ರತಿಧ್ವನಿ ಗೊಂಡಿರುವುದನ್ನೂ ಕಾಣಬಹುದು. ಗಾಂಧೀ ಯುಗದ (1920-48) ವಿವಿಧ ಸತ್ಯಾಗ್ರಹ ಸಂಗ್ರಾಮಗಳು ಲೇಖಕರ, ಕವಿಗಳ ವಿಚಾರರಂಗಗಳನ್ನು ಕೆರಳಿಸಿದ್ದುಂಟು: ಭಾವೋತ್ಕರ್ಷ ಮಾಡಿದ್ದುಂಟು. ಕನ್ನಡದ ಕವಿಗಳಾದ ಕುವೆಂಪು, ಬೇಂದ್ರೆ ಆದಿಯಾಗಿ ಈವರೆಗೆ ಮೂರು ತಲೆಮಾರಿನ ಕವಿಗಳು ಗಾಂಧೀಜೀವನ, ವಿಚಾರ, ಚಿಂತನ, ಇವನ್ನೆಲ್ಲ ಕುರಿತು ಕವನಗಳನ್ನು ರಚಿಸಿದ್ದಾರೆಂಬುದು ಉಲ್ಲೇಖನೀಯ, ಗಾಂಧೀ ಸಾಹಿತ್ಯ ಸಾರಸರ್ವಸ್ವವನ್ನು ಕನ್ನಡದಲ್ಲೂ ಭಾರತದ ವಿವಿಧ ಭಾಷೆಗಳಲ್ಲೂ ಅನುವಾದ ಮಾಡಲಾಗಿದೆ. ಇವೆನ್ನೆಲ್ಲ ಗಮನಿಸಿದಾಗ, ಪ್ರಮಾಣದಲ್ಲಿಯೂ ಪ್ರಕಾರದಲ್ಲಿಯೂ ವಿಪುಲವಾಗಿರುವ ಗಾಂಧೀ ಸಾಹಿತ್ಯಕ್ಕೆ ಜಗತ್ತಿನ ವಿಚಾರ ಸಾಹಿತ್ಯ ಕ್ಷೇತ್ರದಲ್ಲಿ ಚಿರಂತನ ಸ್ಥಾನವಿದೆ. ಎಂಬುದು ಗೋಚರಿಸುತ್ತದೆ.