ಗಾಂಧೀ ಆಶ್ರಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಂಧೀ ಆಶ್ರಮಗಳು[ಬದಲಾಯಿಸಿ]

ಮಹಾತ್ಮ ಗಾಂಧೀಜಿಯವರು ತಮ್ಮ ಧ್ಯೇಯ ಸಾಧನೆಗಾಗಿ ಅಗತ್ಯ ಕಂಡಾಗಲೆಲ್ಲ ಕೆಲವು ಆಶ್ರಮಗಳನ್ನು ಸ್ಥಾಪಿಸಿ, ಅಲ್ಲಿ ತಮ್ಮ ಸಹಚರರೊಂದಿಗೆೆ ಇದ್ದು ನಿಯಮಬದ್ಧವಾದ ಸಾತ್ತ್ವಿಕ ಜೀವನವನ್ನು ನಡೆಸುತ್ತ ಇಹಪರಗಳೆರಡರ ಸಾಧನೆಗೆ ತೊಡಗಿದ್ದು ಅವರ ಸಮಾಜೋದ್ಧಾರ ಕಾರ್ಯದ ಒಂದು ಮುಖ್ಯ ವಿಷಯ. ಕ್ರಮೇಣ ತಾವು ಕೈಗೊಂಡ ಸಾರ್ವಜನಿಕ ಕಾರ್ಯಗಳಿಗೂ ಸತ್ಯಾಗ್ರಹ ಆಂದೋಲನಗಳಿಗೂ ಈ ಆಶ್ರಮಗಳೇ ಶಿಕ್ಷಣ ಕ್ಷೇತ್ರಗಳಾಗಿಯೂ ಪರಿಣಮಿಸಿದವು. ಅವರಿಗೆ ಪ್ರತ್ಯೇಕವಾದ ಸ್ವಂತ ಮನೆ ಎಂಬುದು ಎಲ್ಲಿಯೂ ಇರಲಿಲ್ಲ. ಅವರ 36 ನೆಯ ವಯಸ್ಸಿನಿಂದ ಅಂತ್ಯಕಾಲದ ವರೆಗೂ ಈ ಆಶ್ರಮಗಳೇ ಅವರ ವಸತಿಗಳಾಗಿದ್ದುವು.

ಫೀನಿಕ್ಸ್ ವಸತಿ[ಬದಲಾಯಿಸಿ]

ಹೀಗೆ ಅವರು ಸ್ಥಾಪಿಸಿದ. ಆಶ್ರಮಗಳಲ್ಲಿ ಮೊದಲನೆಯದು ದಕ್ಷಿಣ ಅಫ್ರಿಕದ ನಟಾಲಿನಲ್ಲಿ 1904ರಲ್ಲಿ ಅವರು ಏರ್ಪಾಡು ಮಾಡಿದ ಫೀನಿಕ್ಸ್ ವಸತಿ. ಆ ವರ್ಷ ಜೋಹ್ಯಾನಿಸ್ಬರ್ಗಿನಿಂದ ಡರ್ಬನಿಗೆ ಕೈಗೊಂಡ 24 ಗಂಟೆಯ ರೈಲು ಪ್ರಯಾಣದಲ್ಲಿ ಹೊತ್ತು ಕಳೆಯಲು ಅವರ ಮಿತ್ರರಾದ ಪೋಲಕ್ ಅವರು ಕೊಟ್ಟ ಅಂಟು ದಿಸ್ ಲ್ಯಾಸ್ಟ್ ಎಂಬ ರಸ್ಕಿನ್ನನ ಪುಸ್ತಕ ಅವರ ಮೇಲೆ ಉಂಟುಮಾಡಿದ ಅದ್ಭುತ ಪ್ರಭಾವವೇ ಈ ಫೀನಿಕ್ಸ್ ವಸತಿ ನಿರ್ಮಾಣಕ್ಕೆ ಮುಖ್ಯ ಕಾರಣವಾಯಿತು. ಈ ಮೊದಲೇ ಅವರು ಅಂತರ್ಮುಖಿಗಳಾಗಿ ಜೀವನದ ಧ್ಯೇಯಗಳ ಬಗೆಗೆ ವಿಚಾರ ನಡೆಸಿ ಆದಷ್ಟು ಸರಳವೂ ನಿಯಮಿತವೂ ಆದ ಜೀವನವನ್ನು ನಡೆಸುತ್ತಿದ್ದರಾಗಿ ಅವರ ಚಿತ್ತ ಹದಗೊಂಡಿತ್ತು. ರಸ್ಕಿನ್ನನ ಪುಸ್ತಕದಲ್ಲಿ ಪ್ರತಿಪಾದಿಸಿರುವ ತತ್ತ್ವಗಳು ಅವರ ಮನಸ್ಸನ್ನು ಸೂರೆಗೊಂಡವು. ಎಲ್ಲ ಕಸುಬುಗಳೂ ಸಮಾನವಾದ ಆದರವನ್ನು ಪಡೆಯಬೇಕು ಮತ್ತು ಶ್ರಮಜೀವನ ಅಥವಾ ಕಾಯಕ ಎಲ್ಲಕ್ಕಿಂತಲೂ ಯೋಗ್ಯವಾದ ಜೀವನ ವಿಧಾನ - ಈ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಅವರು ಈಗ ಸ್ಥಿರ ಸಂಕಲ್ಪವನ್ನು ಕೈಗೊಂಡರು.

ಈ ಫೀನಿಕ್ಸ್ ವಸತಿಯನ್ನು ವಿಳಂಬವಿಲ್ಲದೆ ಆರಂಭಿಸಲು ಮತ್ತೊಂದು ಕಾರಣವೂ ಇತ್ತು. ಕೆಲವು ತಿಂಗಳುಗಳ ಹಿಂದೆ, ಭಾರತೀಯ ಸೇವೆಗಾಗಿ ಇಂಡಿಯನ್ ಒಪಿನಿಯನ್ ಎಂಬ ವಾರಪತ್ರಿಕೆಯನ್ನು ಡರ್ಬನ್ನಿನಲ್ಲಿ ಅವರು ಸ್ಥಾಪಿಸಿದ್ದರು. ಅಲ್ಬರ್ಟ್ ವೆಸ್ಟ್ ಎಂಬ ಆಂಗ್ಲೇಯ ಮಿತ್ರ ಅದನ್ನು ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಹಳ ನಷ್ಟದಲ್ಲಿ ನಡೆಯುತ್ತಿತ್ತು. ಈ ಪತ್ರಿಕೆಯನ್ನು ಫೀನಿಕ್ಸ್ ವಸತಿಗೆ ಬದಲಾಯಿಸಿ ಇದರ ವ್ಯಯವನ್ನು ಅಲ್ಲಿನ ನಿವಾಸಿಗಳ ನೆರವಿನಿಂದ ಕಡಿಮೆ ಮಾಡಬಹು ದೆಂಬುದು ಗಾಂಧೀಜಿಯವರ ತೀರ್ಮಾನವಾಗಿತ್ತು. ಅದು ಹಾಗೆಯೇ ಆಯಿತು.

ಈ ವಸತಿ ಫೀನಿಕ್ಸ ರೈಲ್ವೆ ನಿಲ್ದಾಣದಿಂದ 4 ಕಿಮೀ (ಇದೇ ಅದರ ಹೆಸರಿಗೆ ಕಾರಣ) ಮತ್ತು ಡರ್ಬನಿನಿಂದ 21 ಕಿಮೀ ದೂರದಲ್ಲಿತ್ತು. ಇಲ್ಲಿ ವಾಸಕ್ಕೆ ಬಂದವರಲ್ಲಿ ಆಲ್ಬರ್ಟ್ ವೆಸ್ಟ್, ಪೋಲಕ್, ಗಾಂಧಿಯವರ ಚಿಕ್ಕಪ್ಪನ ಮಗ ಛಗನಲಾಲ್ ಗಾಂಧಿ ಮತ್ತು ಆತನ ಕುಟುಂಬ, ಹಾಗೂ ಗಾಂಧಿಯವರಿಗೆ ಬಲಗೈಯಂತಿದ್ದ ಅವರ ಸೋದರಳಿಯ ಮದನ್ಲಾಲ್ ಗಾಂಧೀ ಉಲ್ಲೇಖನೀಯರು. ಹೆಂಗಸರೂ ಮಕ್ಕಳೂ ಇದ್ದರು. ಎಲ್ಲರೂ ಶಕ್ತ್ಯನುಸಾರ ಶ್ರಮಜೀವನ ನಡೆಸಬೇಕು. ಪ್ರತಿಯೊಬ್ಬರಿಗೂ ತಿಂಗಳಿಗೆ 3 ಪೌಂಡು ಸಮಾನವಾದ ವೇತನ. ವ್ಯವಸಾಯ ಮಾಡಲು ಪ್ರತಿಯೊಬ್ಬರಿಗೂ 1.5 ಹೆಕ್ಟೇರು ಹಂಚಲಾಗಿತ್ತು. ಒಟ್ಟು ಇಲ್ಲಿ ಇದ್ದ 40 ಹೆಕ್ಟೇರುಗಳನ್ನು 1000 ಪೌಂಡುಗಳಿಗೆ ಕೊಳ್ಳಲಾಗಿತ್ತು. ಸತ್ಯಾಗ್ರಹ ಆಂದೋಲನ ನಡೆದಾಗ ಸೆರೆಮನೆಗೆ ಹೋಗಿ ಬಂದವರು ಬೇರೆ ಮನೆಗಳಿಲ್ಲದ್ದಿದ್ದರೆ ಇಲ್ಲಿಗೆ ಬಂದು ತಂಗುತ್ತಿದ್ದರು. ಬೇರೆ ಬೇರೆ ಮತಧರ್ಮಗಳಿಗೆ ಸೇರಿದವರು ಇಲ್ಲಿ ಸಾಮೂಹಿಕ ಜೀವನವನ್ನು ನಡೆಸುತ್ತಿದ್ದರು. ಅಲ್ಲಿದ್ದ ಮಕ್ಕಳಿಗೆ ಗಾಂಧಿಯವರೇ ಮುಖ್ಯ ಶಿಕ್ಷಕರು. ಅಚ್ಚಾದ ಇಂಡಿಯನ್ ಒಪಿನಿಯನ್ ಪತ್ರಿಕೆಗಳನ್ನು ಚಂದಾದಾರರಿಗೆ ರವಾನಿಸುವ ಕಾರ್ಯದಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ನೆರವಾಗುತ್ತಿದ್ದರು.

ಗಾಂಧೀಯವರಿಗೆ ಮಾತ್ರ ತಮ್ಮ ವಕೀಲಿ ವೃತ್ತಿಯ ಕಾರಣದಿಂದಾಗಿ ಯಾವಾಗಲೂ ಈ ವಸತಿಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ.

ಟಾಲ್ಸ್ ಟಾಯ್ ಆಶ್ರಮ[ಬದಲಾಯಿಸಿ]

ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಎರಡನೆಯ ಆಶ್ರಮ ಟ್ರಾನ್ಸ್ಸವಾಲ್ ಪ್ರಾಂತ್ಯದಲ್ಲಿ ಲಾಲಿ ಎಂಬ ರೈಲ್ವೆ ನಿಲ್ದಾಣದಿಂದ 1.5 ಕಿಮೀ, ಜೊಹ್ಯಾನಿಸ್ಬರ್ಗ್ ಪಟ್ಟಣದಿಂದ ಸು. 32 ಕಿಮೀ ದೂರದಲ್ಲಿದ್ದ ಟಾಲ್ಸ್ಟಾಯ್ ಆಶ್ರಮ. ಟಾಲ್ಸ್ ಟಾಯ್ ಅವರ ಬರೆಹಗಳನ್ನು ಓದಿ ಗಾಂಧಿ ಪ್ರಭಾವಿತರಾಗಿದ್ದರು. ತಮ್ಮ ಆಂದೋಲನದ ಬಗೆಗೆ ಅವರೊಂದಿಗೆ ಪತ್ರವ್ಯವಹಾರ ನಡೆಸಿದ್ದರು. ಅವರ ಆಶೀರ್ವಾದÀವನ್ನೂ ಪಡೆದಿದ್ದರು. ಟ್ರಾನ್ಸ್ ವಾಲಿನಲ್ಲಿ ಭಾರತೀಯರ ಮೇಲೆ ವಿಧಿಸಿದ್ದ ಮೂರು ಪೌಂಡ್ ತಲೆಕಂದಾಯದ ವಿರುದ್ಧ ಗಾಂಧಿಯವರು ಹೂಡಿದ ಸತ್ಯಾಗ್ರಹ ಚಳವಳಿಯ ಕಾಲದಲ್ಲಿ ಸ್ಥಾಪಿಸಿದ ಆಶ್ರಮವಿದು (30 ಮೇ 1910). ಸೆರೆಮನೆ ಸೇರಿದ ಕುಟುಂಬದವರ ವಸತಿಗೆಂದು ಮುಖ್ಯವಾಗಿ ಇದು ಸ್ಥಾಪಿತವಾಯಿತು. ಇದಕ್ಕೆ 440 ಹೆಕ್ಟೇರು ಜಮೀನು ಮತ್ತು ತೋಟವಿದ್ದು ಅದರಲ್ಲಿ ಸುಮಾರು 1000 ಹಣ್ಣಿನ ಗಿಡಗಳಿದ್ದವು. ಇದರ ಮಾಲೀಕ ಗಾಂಧಿಯವರ ಮಿತ್ರನೂ ಅನುಯಾಯಿಯೂ ಆದ ಕ್ಯಾಲೆನ್ ಬ್ಯಾಕ್ ಎಂಬ ಜರ್ಮನ್ ಗ್ರಹಸ್ಥ (ಬಾಡಿಗೆ ಇಲ್ಲದೆ ಈ ಕ್ಷೇತ್ರವನ್ನು ಭಾರತೀಯರಿಗಾಗಿ ಆತ ಬಿಟ್ಟು ಕೊಟ್ಟ.) ಗೃಹಶಿಲ್ಪ ಮತ್ತು ಅದಕ್ಕೆ ಸಂಬಂಧಿಸಿದ ಕಸಬುಗಳಲ್ಲಿ ಪರಿಣತನಾದ ಆತ ಪಾದರಕ್ಷೆಗಳನ್ನು ಹೊಲಿಯುವದನ್ನು ತಾನು ಕಲಿತು ಗಾಂಧಿಯವರಿಗೂ ಕಲಿಸಿದ. ಈ ಆಶ್ರಮದಲ್ಲಿ ಆರಂಭದಲ್ಲಿಯೇ ಸುಮಾರು 70 ಜನರಿದ್ದರು. ಸದಸ್ಯತ್ವಕ್ಕೆ ವಯಸ್ಸಿನ, ಮತಧರ್ಮದ ಯಾವ ಮಿತಿಯೂ ಇರಲಿಲ್ಲ. ವಾಸಕ್ಕಾಗಿ ಕಟ್ಟಡಗಳು ಅಲ್ಲಿನ ನಿವಾಸಿಗಳ ಶ್ರಮದಾನದಿಂದಲೇ ಬಹುಮಟ್ಟಿಗೆ ಸಿದ್ಧವಾದಂಥವು. ಇದರ ಮೇಲ್ವಿಚಾರಣೆಯೆಲ್ಲ ಕ್ಯಾಲೆನ್ ಬ್ಯಾಕನದೇ. ಒಂದೇ ಅಡಿಗೆಯ ಮನೆ ಇತ್ತು. ಅದರ ನಿರ್ವಹಣೆ ಅಲ್ಲಿದ್ದ ಮಹಿಳೆಯರದಾಗಿತ್ತು. ಸಸ್ಯಾಹಾರ ಸೇವನೆಯೇ ಅಲ್ಲಿನ ಪದ್ಧತಿ. ಧೂಮ ಮತ್ತು ಸುರಾಪಾನಗಳು ನಿಷೇಧಿಸಲ್ಪಟ್ಟಿದ್ದವು. ಸಾಮೂಹಿಕ ಪ್ರಾರ್ಥನೆ ಮತ್ತು ಭೋಜನ ರೂಢಿಯಲ್ಲಿದ್ದುವು. ನೈರ್ಮಲ್ಯ ರಕ್ಷಣೆಗೆ ಒಳ್ಳೆಯ ಏರ್ಪಾಡಿತ್ತು. ಜಲಮಲಗಳ ವಿಸರ್ಜನೆಗಾಗಿ ಮಾಡಿದ ಗುಂಡಿಗಳು ಕಾಲಾನಂತರ ಉತ್ತಮ ಗೊಬ್ಬರವನ್ನೊದಗಿಸುತ್ತಿದ್ದವು. ಖಾಸಗಿ ಕೆಲಸಕ್ಕಾಗಿ ಜೊಹ್ಯಾನಿಸ್ಬರ್ಗಿಗೆ ಹೋಗುವವರು 32 ಕಿಮೀ ದೂರವನ್ನು ಕಾಲುನಡಿಗೆಯಲ್ಲೇ ನಿರ್ವಹಿಸುತ್ತಿದ್ದರು. ಸತ್ಯಾಗ್ರಹಾಶ್ರಮ,

ಸಾಬರಮತಿ[ಬದಲಾಯಿಸಿ]

1915 ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಇಲ್ಲಿಯೂ ಆಶ್ರಮ ವಾಸವನ್ನು ಕೈಗೊಳ್ಳಬೇಕೆಂದು ಅವರಿಗೆ ತೋರಿತು. ಅಂತೆಯೇ ಮೇ ತಿಂಗಳಲ್ಲಿ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿದರು. ಅವರೊಂದಿಗೆ ಹಿಂತಿರುಗಿದ ಅವರ ಬಂಧುವರ್ಗದವರು ಮತ್ತು ಅನುಯಾಯಿಗಳು ಸುಮಾರು 25 ಮಂದಿ ಆಶ್ರಮವಾಸಿಗಳಾದರು. ಆಶ್ರಮ ಆರಂಭವಾದದ್ದು ಅಹಮದಾಬಾದಿಗೆ ಸೇರಿದ ಕೊಚರಾಬ್ ಹಳ್ಳಿಯಲ್ಲಿ. ಒಂದು ಬಾಡಿಗೆ ಬಂಗಲೆಯಲ್ಲಿ. ಸ್ವಲ್ಪ ಕಾಲವಾದ ಮೇಲೆ ಸಾಬರಮತಿ ನದೀತೀರಕ್ಕೆ ಆಚೆ ಸುಮಾರು 60 ಹೆಕ್ಟೇರು ನಿವೇಶನಕ್ಕೆ ಆಶ್ರಮವನ್ನು ಬದಲಾಯಿಸಲಾಯಿತು. ಹಳ್ಳಿಯ ಮಾದರಿಯ ಮನೆಗಳೂ ಕಟ್ಟಡಗಳೂ ಸಿದ್ಧವಾದವು. ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆಗೆ ಅವಕಾಶ ಮಾಡಲಾಯಿತು. ಆಶ್ರಮವಾಸಿಗಳು ಕೆಲವು ನಿಯಮಗಳನ್ನು ಪಾಲಿಸಿ ಸಾಮೂಹಿಕವಾದ ಧಾರ್ಮಿಕ ಜೀವನವನ್ನು ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು. ಸತ್ಯ, ಅಹಿಂಸೆ, ಬ್ರಹ್ಮಚರ್ಯೆ, ನಾಲಗೆಯ ರುಚಿಯ ಮೇಲೆ ಹತೋಟಿ, ಅಸ್ತೇಯ, ಅಸಂಗ್ರಹ ಇವು ಮೂಲಭೂತವಾದ ನಿಯಮಗಳು. ಇವೇ ಅಲ್ಲದೆ ಸ್ವದೇಶಿ, ನಿರ್ಭಯತ್ವ, ಕಾಯಕ, ಅಸ್ಪೃಶ್ಯತಾ ನಿವಾರಣೆ - ಇವನ್ನೂ ವ್ಯಾವಹಾರಿಕ ಜೀವನದಲ್ಲಿ ಪಾಲಿಸಬೇಕು. ನಿತ್ಯ ಪ್ರಾರ್ಥನೆಯೊಂದಿಗೆ ಈ ಏಕಾದಶವ್ರತಗಳ ಹೆಸರನ್ನೊಳಗೊಂಡ ಒಂದು ಶ್ಲೋಕವನ್ನು ಹೇಳುವುದು ರೂಢಿಯಾಗಿತ್ತು. ಆಶ್ರಮದ ನಿತ್ಯಜೀವನದಲ್ಲಿ ಬೆಳಗ್ಗೆ 4 1/2 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಪ್ರಾರ್ಥನೆಯಲ್ಲಿ ಕೆಲವು ಉಪನಿಷತ್ತಿನ ಮಂತ್ರಗಳು. ಸ್ತ್ರೋತ್ರಗಳು. ಭಗವದ್ಗೀತೆಯ ಶ್ಲೋಕಗಳು. ತುಲಸೀದಾಸ ರಾಮಾಯಣ, ಇವೇ ಅಲ್ಲದೆ ಅನ್ಯ ಧರ್ಮಾವಲಂಬಿ ಗಳಿದ್ದಾಗ ಅವರ ಧರ್ಮಗಳಿಂದ ಆಯ್ದ ಭಾಗಗಳೂ ಸಾಮೂಹಿಕ ಭಜನೆ, ರಾಮನಾಮ- ಇವು ರೂಢಿಯಲ್ಲಿದ್ದವು. ಮಸಾಲೆ ಪದಾರ್ಥಗಳನ್ನು ದೂರಮಾಡಿ ಭೋಜನಕ್ಕೆ ಕೇವಲ ಸಾತ್ತ್ವಿಕ ಆಹಾರ ಬಳಸಲಾಗುತ್ತಿತ್ತು. ಸಂಜೆಯ ಭೋಜನ ಸೂರ್ಯಾಸ್ತಮದೊಳಗಾಗಿ ಮುಗಿಯಬೇಕು ಮತ್ತು ರಾತ್ರಿ 9 ಗಂಟೆಗೆ ಎಲ್ಲರೂ ವಿಶ್ರಮಿಸಬೇಕು- ಎಂಬುದು ಒಂದು ಮುಖ್ಯ ಕಟ್ಟಳೆ. ಎಲ್ಲ ಆಶ್ರಮವಾಸಿಗಳೂ ಸಫಾಯಿ- ಝಾಡಮಾಲಿಯ ಮತ್ತು ಭಂಗಿಯ- ಕೆಲಸಗಳನ್ನು ಮಾಡಲು ಮೊದಲು ಶಿಕ್ಷಣ ಪಡೆಯುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ಕಾಯಕವನ್ನು ಕೈಗೊಳ್ಳಬೇಕಾಗಿತ್ತು (ಅವುಗಳಲ್ಲಿ ರಾಟೆಯಿಂದ ನೂಲುವುದು ಅನಿವಾರ್ಯ) ಕೃಷಿ, ತೋಟಗಾರಿಕೆ, ಬಡಗಿ ಕೆಲಸ, ನೇಯ್ಗೆ, ಗೋಪಾಲನೆ ಇತ್ಯಾದಿ ಆಶ್ರಮ ವಾಸಿಗಳಲ್ಲಿ ಉಚ್ಚ ನೀಚವೆಂಬ ಭಾವನೆಯನ್ನು ತೊಡೆದು ಹಾಕಲಾಗಿತ್ತು.

ಸತ್ಯಾಗ್ರಹ ಆಶ್ರಮದ ಆರಂಭದ ದಿನಗಳಲ್ಲಿಯೇ ಹರಿಜನ ಕುಟುಂಬ ಒಂದನ್ನು ಆಶ್ರಮಕ್ಕೆ ಸೇರಿಸಿ ಕೊಂಡದ್ದರಿಂದ ದಾನಿಗಳು ತಮ್ಮ ಸಹಾಯವನ್ನು ನಿಲ್ಲಿಸಿದರು. ಆಶ್ರಮ ಉಳಿಯುವುದೇ ಒಂದು ಸಮಸ್ಯೆಯಾಯಿತು. ಅಹಮದಾಬಾದಿನ ಪ್ರಸಿದ್ಧ ಗಿರಣಿ ಮಾಲೀಕರಾದ ಅಂಬಾಲಾಲ್ ಸಾರಾಭಾಯಿ ಅವರು ಅಪ್ರಾರ್ಥಿತವಾಗಿ ಆಶ್ರಮಕ್ಕೆ ಮಾಡಿದ 1300 ರೂಪಾಯಿಗಳ ಉದಾರ ದಾನದಿಂದ ಆಶ್ರಮದ ಕೆಲಸ ಕಾರ್ಯಗಳು ಮುಂದೆ ಸಾಗಿದವು.

1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಆಶ್ರಮದ ಚಟುವಟಿಕೆಗಳೂ ಅಲ್ಲಿದ್ದವರ ಸಂಖ್ಯೆಯೂ ಹಿಂದೆ ಎಂದೂ ಇಲ್ಲದ ಪ್ರಮಾಣದಲ್ಲಿದ್ದವು. ತರಪೇತನ್ನು ಪಡೆದ 87 ಮಂದಿ ಸತ್ಯಾಗ್ರಹಿಗಳೊಡನೆ ಭಜನೆಯೊಂದಿಗೆ ಗಾಂಧಿಯವರು ಸುಮಾರು 386 ಕಿಮೀ ದಕ್ಷಿಣದಲ್ಲಿ ಸಮುದ್ರತೀರದಲ್ಲಿರುವ ದಂಡಿ ಎಂಬ ಗ್ರಾಮಕ್ಕೆ ಕಾಲು ನಡಿಗೆಯಿಂದ ಹೋಗಲು ಆಶ್ರಮದಿಂದ ಹೊರಬಿದ್ದರು. ಸ್ವರಾಜ್ಯಪ್ರಾಪ್ತಿಯಾಗದೆ ಆಶ್ರಮಕ್ಕೆ ಹಿಂತಿರುಗುವುದಿಲ್ಲವೆಂದು ಪ್ರತಿಜ್ಞೆ ತೊಟ್ಟರು. ಹೀಗವರು ದೂರವಾದ್ದರಿಂದ ಸಾಬರಮತಿ ಆಶ್ರಮದ ವರ್ಚಸ್ಸು ಕಳೆಗುಂದಿತು.

ಸೇವಾಗ್ರಾಮ[ಬದಲಾಯಿಸಿ]

ವರ್ಧಾ ನಗರಕ್ಕೆ ಸುಮಾರು ಎಂಟು ಕಿಮೀ ದೂರದಲ್ಲಿ ಶೇಗಾಂವ್ ಎಂಬ ಹಳ್ಳಿಯ ಬಳಿಯಲ್ಲಿ ಗಾಂಧಿಯವರ ಪ್ರಿಯ ಶಿಷ್ಯರಾದ ಸೇಠ್ ಜಮನಾಲಾಲ್ ಬಜಾಜ್ ಅವರ ಜಮೀನಿನಲ್ಲಿ ಹಾಕಿದ ಒಂದು ಗುಡಿಸಲಿನಲ್ಲಿ 1936ರಲ್ಲಿ ಗಾಂಧಿಯವರು ನೆಲೆಸಿದರು. ಅನಂತರ ಇದನ್ನು ಸೇವಾಗ್ರಾಮವೆಂದು ಕರೆಯಲಾಯಿತು. ಸಕ್ರಿಯ ರಾಜಕೀಯದಿಂದ ಈ ವೇಳೆಗೆ ಗಾಂಧಿಯವರು ನಿವೃತ್ತರಾಗಿ ಹರಿಜನೋದ್ಧಾರ, ಗ್ರಾಮೋದ್ಯೋಗ, ನೂತನ ಶಿಕ್ಷಣ, ಗೋಸೇವಾ ಮುಂತಾದ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಅನಂತರ ಇತರ ಕಾರ್ಯಕರ್ತರೂ ಅಲ್ಲಿಗೆ ತರಬೇತಿಗೆ ಬಂದ ವಿದ್ಯಾರ್ಥಿಗಳೂ ಸಾಬರಮತಿ ಆಶ್ರಮದಂತೆ ಅಲ್ಲದಿದ್ದರೂ ಸರಳವೂ ನಿಯಮಿತವೂ ಸಾಮೂಹಿಕವೂ ಆದ ಜೀವನವನ್ನು ಇಲ್ಲಿ ನಡೆಸಿದರು. ಸೇವಾಗ್ರಾಮದಲ್ಲಿ ಗಾಂಧಿಯವರು ವಾಸವಾಗಿದ್ದ ಗುಡಿಸಲು ಈಗ ಅವರ ಸ್ಮಾರಕವಾಗಿ ಕಾಪಾಡಲ್ಪಟ್ಟಿದ್ದು ಒಂದು ಯಾತ್ರಾಸ್ಥಳವಾಗಿ ಪರಿಣಮಿಸಿದೆ. ಹೀಗೆ ಗಾಂಧಿಯವರು ಸ್ಥಾಪಿಸಿದ ಆಶ್ರಮಗಳು ಆತ್ಮೋನ್ನತಿಗೂ ಸಮಾಜ ಸೇವೆಗೂ ಕೇಂದ್ರಗಳಾದುವು. ಆಶ್ರಮವಾಸಿಗಳಿಗೆ ಈ ಹೊಸ ಬಗೆಯ ತಪೋ ಜೀವನವನ್ನು ನೇಮಿಸಿ ಮಹಾತ್ಮಾಗಾಂಧಿಯವರು ವ್ಯಕ್ತಿ ಜೀವನವನ್ನು ಚೊಕ್ಕಟ ಮಾಡುವುದು ಹೇಗೆಂಬುದನ್ನು ಕಲಿಸಿದರು.

ಗಾಂಧಿಯವರ ಸ್ಫೂರ್ತಿಯಿಂದ ಅವರು ಸ್ಥಾಪಿಸಿದ ಆಶ್ರಮಗಳ ಮಾದರಿ ಯಲ್ಲಿಯೇ ಅನೇಕ ಆಶ್ರಮಗಳು ಸ್ಥಾಪಿತವಾದುವು. ಇವು ಸಮಾಜ ಸೇವಕರನ್ನು ಸಿದ್ಧಮಾಡಿವೆ ಮತ್ತು ಮಾಡುತ್ತಲಿವೆ.