ವಿಷಯಕ್ಕೆ ಹೋಗು

ಗಾಂಧೀಗ್ರಾಮ(ತಮಿಳುನಾಡು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಾಂಧೀಗ್ರಾಮ ಇಂದ ಪುನರ್ನಿರ್ದೇಶಿತ)

ಗಾಂಧೀಗ್ರಾಮ : ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇರುವ ಒಂದು ಆಶ್ರಮ, ವಸತಿ.

ಸ್ಥಾಪನೆ ಮತ್ತು ಬೆಳವಣಿಗೆ

[ಬದಲಾಯಿಸಿ]

ಇದರ ಪೂರ್ವದಲ್ಲಿ ಶಿರುಮಲೈ ಬೆಟ್ಟವೂ ಪಶ್ಚಿಮಕ್ಕೆ ಕೊಡೈ ಬೆಟ್ಟವೂ ಹಬ್ಬಿವೆ. ಇವುಗಳ ನಡುವೆ ಸು. 400 ಎಕರೆ ಪ್ರದೇಶದಲ್ಲಿರುವ ಗಾಂಧೀಗ್ರಾಮ 1947ರ ಅಕ್ಟೋಬರ್ 7ರಂದು ಸ್ಥಾಪಿತವಾಯಿತು. ಗಾಂಧೀ ತತ್ತ್ವಗಳ ಪ್ರಚಾರ, ಗಾಂಧಿಯವರ ಜೀವನಮಾರ್ಗದ ಅನುಷ್ಠಾನ-ಈ ಉದ್ದೇಶದಿಂದ ಶ್ರೀಮತಿ ಸೌಂದರಂ ರಾಮಚಂದ್ರನ್ ಇದನ್ನು ಸ್ಥಾಪಿಸಿದರು. ಜಿ. ರಾಮಚಂದ್ರನ್ ಇದರ ನಿರ್ದೇಶಕರು.

ಆರಂಭದಲ್ಲಿ ಇಲ್ಲಿ ಎರಡು ಕಟ್ಟಡಗಳು ಮಾತ್ರ ಇದ್ದುವು. ಕೆಲವು ಅಧ್ಯಾಪಕರು ಮತ್ತು ನೂರಕ್ಕೂ ಕಡಮೆ ವಿದ್ಯಾರ್ಥಿಗಳಿದ್ದರು. ಮೂಲಶಿಕ್ಷಣ ಶಾಲೆ, ಮೂಲ ಶಿಕ್ಷಕ ಶಿಕ್ಷಣ ಶಾಲೆ, ಸಣ್ಣ ವೈದ್ಯಶಾಲೆ ಇವು ಮಾತ್ರ ಇದ್ದ ಈ ಎಡೆಯಲ್ಲಿ ಈಗ ಅನೇಕ ಶಾಲೆಗಳೂ ಉತ್ಪಾದನ ಸಂಸ್ಥೆಗಳೂ ಸಹಕಾರ ಸಂಸ್ಥೆಗಳೂ ಸಂಶೋಧನಾಲಯಗಳೂ ಇವೆ. ಶಿಶುಮಂದಿರ, ಮೂಲಶಿಕ್ಷಣ ಶಾಲೆ, ಕಸ್ತೂರಬಾ ಸೇವಿಕಾಶ್ರಮ, ಗ್ರಾಮ ಪ್ರೌಢವಿದ್ಯಾ ಶಾಲೆ, ಲಕ್ಷ್ಮೀ ಶಿಕ್ಷಣ ಕಾಲೇಜ್, ಗಾಂಧೀ ಶತಾಬ್ದಿ ಕುಶಲಕಲಾ ಶಾಲೆ, ಕುಮಾರಪ್ಪ ಗ್ರಾಮ ಕೈಗಾರಿಕಾ ಕೇಂದ್ರ, ಕಸ್ತೂರಬಾ ಆಸ್ಪತ್ರೆ, ಗ್ರಾಮ ಆರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರ, ಮಕ್ಕಳ ಕ್ಷೇಮಾಭಿವೃದ್ಧಿ ತರಬೇತು ಕೇಂದ್ರ, ಖಾದಿ ಭವನ, ಕಲಾ ಭವನ, ಸತ್ಯಮಿತ್ರರ ಸಹಯೋಗ ಸಂಸ್ಥೆ, ಶಾಂತಿಸೇನೆ ಮುಂತಾದ 30 ಸಂಸ್ಥೆಗಳಿವೆ. 2,500 ವಿದ್ಯಾರ್ಥಿಗಳೂ 500 ಮಂದಿ ಶಿಕ್ಷಕರೂ ಇದ್ದಾರೆ.

ಮಕ್ಕಳ ಕಲ್ಯಾಣ ಕೇಂದ್ರದ ಹೆಸರು ಸೌಭಾಗ್ಯಂ. ಇದು ಅನಾಥ ಶಿಶುಗಳ ಗೃಹ, ಮಕ್ಕಳ ಮನಸ್ಸಿನಲ್ಲಿ ತಾವು ಅನಾಥರೆಂಬ ಭಾವನೆಯೇ ಬೆಳೆಯದಂತೆ ಅವುಗಳ ರಕ್ಷಣೆ, ಶಿಕ್ಷಣ ನಡೆಯುತ್ತಿವೆ. ಮಕ್ಕಳ ಮನವರಿತು, ಅವರ ಸಾಮಥರ್್ಯಕ್ಕೂ, ಇಚ್ಛೆಗೂ ತಕ್ಕಂತೆ ಶಿಕ್ಷಣದ ಜೊತೆಗೆ ಕೈಕಸುಬನ್ನು ಕಲಿಸಲಾಗುವುದು. ಕಸ್ತೂರಬಾ ಸೇವಿಕಾಶ್ರಮ ವಿಧವೆಯರ, ಪರಿತ್ಯಕ್ತೆಯರ, ಸಮಾಜದ ದಬ್ಬಾಳಿಕೆಗೆ ಒಳಗಾದ ನತದೃಷ್ಟ ಅನಾಥಸ್ತ್ರೀಯರ ರಕ್ಷಣೆಯ ಕೇಂದ್ರವಾಗಿದೆ. ಇಲ್ಲಿ ಬಂದು ಸೇರುವ ಮಹಿಳೆಯರಿಗೆ ಪ್ರೌಢಶಾಲೆಯ ವರೆಗೆ ಶಿಕ್ಷಣ ನೀಡಿ ಅನಂತರ ಅವರ ಇಚ್ಛೆಯಂತೆ ಶಿಕ್ಷಕಿಯರೋ ದಾದಿಯರೋ ಕುಶಲ ಕಲಾ ಶಿಕ್ಷಕಿಯರೋ ಆಗಲು ಅಗತ್ಯವಾದ ತರಬೇತು ನೀಡಲಾಗುತ್ತದೆ.

ಗ್ರಾಮೀಣ ಉನ್ನತ ಶಿಕ್ಷಣ ಸಂಸ್ಥೆಗಳೂ ಇಲ್ಲುಂಟು. ಗ್ರಾಮಸೇವಾ ಕಾಲೇಜು, ಗ್ರಾಮಸಮಾಜಶಾಸ್ತ್ರ ಮತ್ತು ಸಮುದಾಯ ಅಭಿವೃದ್ಧಿ ಡಿಪ್ಲೊಮ ನೀಡುವ ಸ್ನಾತಕೋತ್ತರ ಶಿಕ್ಷಣ ಕಾಲೇಜು, ಕೃಷಿವಿಜ್ಞಾನ ಕಾಲೇಜು ಇವು ಇಂಥವು. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಧೀಗ್ರಾಮದ ಸುತ್ತಣ ಹಳ್ಳಿಗಳೇ ಜೀವಂತ ಪ್ರಯೋಗಶಾಲೆಗಳಾಗಿವೆ. ಇದರಿಂದ ಸುತ್ತಣ ಗ್ರಾಮದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ವಿದ್ಯಾರ್ಥಿಗಳು ಗ್ರಾಮ ಸಮಸ್ಯೆಗಳನ್ನು ಅಭ್ಯಸಿಸಲು ಆ ಗ್ರಾಮಗಳಲ್ಲೆ ಕೆಲವು ದಿನಗಳನ್ನು ಕಳೆಯುತ್ತಾರೆ. ಗ್ರಾಮ ಸೇವಕರೊಡನೆ ಕೆಲವು ಕಾಲ ಇದ್ದು ತಮ್ಮ ಇಚ್ಛೆಯಂತೆ ಗ್ರಾಮಕ್ಕೆ ಸಂಬಂಧಪಟ್ಟ ಯಾವುದಾದರೂ ವಿಷಯವನ್ನು ಅಭ್ಯಾಸಮಾಡಿ ಪರಿಣತಿಗಳಿಸಿಕೊಳ್ಳುತ್ತಾರೆ.

ಚಟುವಟಿಕೆಗಳು

[ಬದಲಾಯಿಸಿ]

ಗಾಂಧೀಗ್ರಾಮದ ವಿದ್ಯಾರ್ಥಿಗಳು ತಮ್ಮ ತರಬೇತಿಗೆ ಪೂರಕವಾಗಿ ಸಮಾಜಕಲ್ಯಾಣ ಕಾರ್ಯಗಳನ್ನು ಸ್ವಯಂಸೇವಕರಂತೆ ನಿರ್ವಹಿಸುತ್ತಾರೆ. ಬಡವರಿಗೆ ಮನೆಕಟ್ಟಿಕೊಳ್ಳಲು ಸಹಾಯಮಾಡುವುದು, ಉಚಿತವಾಗಿ ಶಾಲೆಗಳನ್ನು ನಡೆಸಿ ವಿದ್ಯಾದಾನ ಮಾಡುವುದು, ವಯಸ್ಕರ ಶಿಕ್ಷಣ, ಕೃಷಿ ಅಭಿವೃದ್ಧಿ, ನೀರಿನ ಸೌಕರ್ಯ ಹೆಚ್ಚಿಸುವುದು, ಆರೋಗ್ಯ ರಕ್ಷಣೆಯ ವಿಚಾರ ತಿಳಿಸುವುದು, ಮಕ್ಕಳಿಗೆ ಸಿಡುಬು ಮತ್ತು ಕಾಲರ ನಿರೋಧಕ ಸೂಜಿಮದ್ದನ್ನು ಹಾಕುವುದು ಮುಂತಾದ ಕಾರ್ಯಕ್ರಮಗಳನ್ನು ಪ್ರತಿವರ್ಷವೂ ಕೈಗೊಂಡು ಗ್ರಾಮಸ್ಥರಿಗೆ ಉಪಕಾರ ಮಾಡುತ್ತಿದ್ದಾರೆ. ಸುತ್ತಣ 25 ಗ್ರಾಮಗಳನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿದೆ. ದಿಂಡಿಗಲ್ ಮತ್ತು ರೆಡ್ಡಿಯಾರ್ ಚತ್ರಂ ಪಂಚಾಯತಿಯ ವ್ಯಾಪ್ತಿಯಲ್ಲಿರುವ 13 ಹಳ್ಳಿಗಳನ್ನು ಸಾಂದ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಆರಿಸಿಕೊಳ್ಳಲಾಗಿದೆ. ಇದಕ್ಕೆ ಜರ್ಮನ್ ಸಂಸ್ಥೆಯೊಂದು ಆರ್ಥಿಕ ನೆರವು ನೀಡಿದೆ.

ಕುಶಲ ಕಲಾ ಶಿಕ್ಷಣ ಶಾಲೆಯಲ್ಲಿ ಕುಶಲ ಕಲೆಗಳ ಬಗ್ಗೆ ತರಬೇತಿ ನೀಡಿ ಜೊತೆಗೆ ಸುತ್ತಣ ರೈತಜನಕ್ಕೆ ಕೃಷಿ ಉಪಕರಣಗಳ ಸೌಲಭ್ಯ ಒದಗಿಸಲಾಗುತ್ತದೆ. ಗಾಂಧೀಗ್ರಾಮದ ಕುಟುಂಬಯೋಜನಾ ಕೇಂದ್ರವೂ ಕಸ್ತೂರಬಾ ಆಸ್ಪತ್ರೆಯೂ ಅತ್ಯಂತ ಅಮೂಲ್ಯವಾದ ಸೇವೆ ನೀಡುತ್ತಿವೆ. ಗಾಂಧೀಗ್ರಾಮದ ಶಾಂತಿಸೇನೆಯ ಸೇವೆ ವಿಶಿಷ್ಟವಾದ್ದು, ಸಾಮೂಹಿಕ ಶಿಸ್ತನ್ನು ಬೆಳೆಯಿಸುವುದು ಇದರ ಉದ್ದೇಶ. ಗಾಂಧೀಗ್ರಾಮದ ಸುತ್ತ ಪೌಳಿಗೋಡೆಗಳಿಲ್ಲ. ಶಾಂತಿ ಸೇನೆಯ ಸದಸ್ಯರು ಸಣ್ಣ ಸಣ್ಣ ತಂಡಗಳಲ್ಲಿ ಅಹರ್ನಿಶಿ ಅದಕ್ಕೆ ಕಾವಲಾಗಿರುತ್ತಾರೆ. 1956ರಲ್ಲಿ ಸಂಭವಿಸಿದ ಚಂಡಮಾರುತದಿಂದ ನೊಂದವರಿಗೆ ಪರಿಹಾರ ನೀಡುವ ಕಾರ್ಯದಲ್ಲೂ ಸ್ವಲ್ಪ ಕಾಲಾನಂತರ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದ ಕೋಮುವಾರು ಗಲಭೆಗಳ ಸಮಯದಲ್ಲೂ ಗಾಂಧೀಗ್ರಾಮದ ಶಾಂತಿಸೇನೆ ನೀಡಿದ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಗಾಂಧೀಗ್ರಾಮದ ಕಲಾಭವನದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಗೀತ, ನೃತ್ಯ, ನಾಟಕ, ಚಿತ್ರಕಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಗಾಂಧೀಗ್ರಾಮದ ಆಶ್ರಮವಾಸಿಗಳು ಸಂಪುರ್ಣವಾಗಿ ವಿಕಾಸಗೊಂಡು ತಮ್ಮ ಹೊಣೆಗಳನ್ನು ನಿರ್ವಹಿಸುವಂತೆ ಅವರಿಗೆ ವಿಶೇಷ ಅನುಭವ ದೊರಕಿಸಿ ಕೊಡಲಾಗುತ್ತದೆ. ಅದೇ ರೀತಿ ಅಲ್ಲಿಯ ಜೀವನವನ್ನು ಸಂಘಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಂಘಜೀವನ ವನ್ನು ಕಲಿಸಲಾಗುತ್ತದೆ. ಆಡಳಿತ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಗಳನ್ನು ವ್ಯವಸ್ಥಾಪಕರಿಗೆ ತಿಳಿಸಲು ಆಂ ಸಭಾ ಎಂಬ ವಿಧಾನಸಭೆಯೊಂದುಂಟು. ಗಾಂಧೀಗ್ರಾಮದ ಆಡಳಿತ ಮಂಡಳಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೂ ಸ್ಥಾನವುಂಟು. ಧರ್ಮಸಮನ್ವಯ ದೃಷ್ಟಿಯಿಂದ ಆಶ್ರಮದ ಸಾಮೂಹಿಕ ಪ್ರಾರ್ಥನೆಯನ್ನು ರೂಪಿಸಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: