ವಿಷಯಕ್ಕೆ ಹೋಗು

ಗಾಂಡೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಂಡೈಟ್ : ಆರ್ಕೇಯನ್ ಮತ್ತು ಧಾರವಾಡ ಯುಗಕ್ಕೆ ಸೇರಿದ ಶಿಲಾ ಶ್ರೇಣಿಗಳಲ್ಲಿ ಹೆಚ್ಚಿನ ರೂಪಾಂತರಕ್ಕೊಳಗಾಗಿ ಮಾರ್ಪಟ್ಟ ಕೆಲವು ಶಿಲಾಸಮುದಾಯಗಳ ಹೆಸರು. ಇದನ್ನು ಮೊತ್ತ ಮೊದಲಿಗೆ ಸರ್. ಲೂಯಿ ಫರ್ಮರ್ ಮಧ್ಯ ಪ್ರದೇಶದಲ್ಲಿ ಗುರುತಿಸಿ ಅಲ್ಲಿನ ಮೂಲನಿವಾಸಿಗಳೆನಿಸಿದ ಗೋಂಡ್ ಪಂಗಡದ ಗಿರಿಜನರ ಹೆಸರನ್ನೇ ಈ ರೂಪಾಂತರಿತ ಶಿಲೆಗಳಿಗೆ ಇಟ್ಟ. ಧಾರವಾಡ ಯುಗದ ಮ್ಯಾಂಗನೀಸ್ ಅಂಶ ಇರುವ ಜೇಡು ಮತ್ತು ಮರಳು ಶಿಲೆಗಳು ತೀವ್ರವಾದ ಒತ್ತಡಕ್ಕೆ ಒಳಗಾದಾಗ ಈ ಶಿಲೆ ಉಂಟಾಯಿತೆಂದು ಅಭಿಪ್ರಾಯಪಡಲಾಗಿದೆ. ಇದರಲ್ಲಿ ಮುಖ್ಯವಾಗಿ ಕ್ವಾಟ್ರ್್ಸ, ಮ್ಯಾಂಗನೀಸ್, ಗಾರ್ನೆಟ್, ಮತ್ತು ರ್ಹೋಡೊನೈಟ್ ಎಂಬ ಖನಿಜಗಳನ್ನು ಕಾಣಬಹುದು. ಶಿಲೆ ಸಮಕಣವಿನ್ಯಾಸವನ್ನು ತೋರಿಸುತ್ತದೆ. ಗಾಂಡೈಟ್ ಶಿಲಾಸಮುದಾಯ ಮುಖ್ಯವಾಗಿ ಮಧ್ಯ ಪ್ರದೇಶದ ಜಬುವಾ, ಶಿವರಾಜಪುರ, ಚಿಂದ್ವಾರ, ಭಂಡಾರ, ಗಂಗಪುರ್, ಮತ್ತು ಮಹಾರಾಷ್ಟ್ರದ ನಾಗಪುರ ಈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಅದರಲ್ಲೂ ಸಾಸರ್ ಶ್ರೇಣಿಯ ಮ್ಯಾಂಗನೀಸ್ ಜಾಡಿನಲ್ಲಿ ಇವನ್ನು ಸಾಮಾನ್ಯವಾಗಿ ಕಾಣಬಹುದು. ಇವಲ್ಲದೆ ಮೇಲೆ ಹೇಳಿರುವ ಖನಿಜಗಳಲ್ಲದೆ ಬ್ರಾನೈಟ್, ಸೈಲಾಮಲೀನ್, ಪೈರೊಲ್ಯೂಸೈಟ್, ಸಿತಾಪರೈಟ್, ವೃಡನ್ಬರ್ಗೈಟ್, ಜಾಕಬ್ಸೈಟ್, ಹಾಸ್ಮನೈಟ್ ಮೊದಲಾದ ಮ್ಯಾಂಗನೀಸ್ ಖನಿಜಗಳೂ ಇವೆ. ಇವೇ ಮುಖ್ಯವಾದ ಮ್ಯಾಂಗನೀಸ್ ಅದಿರುಗಳು. ತಮ್ಮ ರಚನೆಯಲ್ಲಿ ಇವು ಪ್ರೀಕೇಂಬ್ರಿಯನ್ ಯುಗದ ಕಬ್ಬಿಣದ ಅದಿರಿನ ನಿಕ್ಷೇಪಗಳಾದ ಹಿಮಟೈಟ್-ಕ್ವಾರ್ಟ್ಸೈಟ್ ಸ್ತರಗಳನ್ನು ಹೋಲುತ್ತವೆ. ಅದಿರಿನ ಪ್ರಸ್ತರಗಳು ಸಾಮಾನ್ಯವಾಗಿ 1 1/2-2ಮೀ ಮಂದವಾಗಿರುತ್ತವೆ. ಹಲವು ಬಾರಿ 12-15 ಮೀಗಳಷ್ಟು ಮಂದವಾಗಿರುವುದೂ ಉಂಟು. ಇದೇ ಅಲ್ಲದೆ ಲೋಹಪ್ರಮಾಣದಲ್ಲಿ ಸಹ ಈ ಅದಿರುಗಳಲ್ಲಿ ವಿವಿಧ ದರ್ಜೆಗಳನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಇವು ಭಾರತದ ಮ್ಯಾಂಗನೀಸ್ ನಿಕ್ಷೇಪಗಳಿಗೆ ಮುಖ್ಯ ತವರು. ಮಧ್ಯ ಪ್ರದೇಶ ಒಂದರಲ್ಲೇ ಸುಮಾರು 80-100 ದಶಲಕ್ಷ ಟನ್ಗಳಷ್ಟು ಅದಿರು ಸಿಗಬಹುದೆಂದು ಅಂದಾಜು ಮಾಡಲಾಗಿದೆ.

"https://kn.wikipedia.org/w/index.php?title=ಗಾಂಡೈಟ್&oldid=658765" ಇಂದ ಪಡೆಯಲ್ಪಟ್ಟಿದೆ