ಗಳಿಸಿದ ವರಮಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡುಗೆಗಳು ಮತ್ತು ಇತರ ಆಕಸ್ಮಿಕ ಲಾಭಗಳನ್ನು ಬಿಟ್ಟು ಉಳಿದ ಎಲ್ಲ ವರಮಾನವೂ ಸ್ಥೂಲವಾಗಿ ಗಳಿಸಿದ ವರಮಾನ (ಇನ್ಕಮ್ ಅರ್ನ್ಡ್) ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಏಕೆಂದರೆ ಉಳಿದೆಲ್ಲ ಯಾವುದಾದರೊಂದು ಆರ್ಥಿಕ ಸೇವೆಗೆ ಪ್ರತಿಯಾಗಿ ಸಂಪಾದಿಸಿದ್ದು. ಸರ್ಕಾರಿ ಸಾಲಪತ್ರದ ಮೇಲೆ ಪಡೆದ ಬಡ್ಡಿಯೂ ಈ ದೃಷ್ಟಿಯಲ್ಲಿ ಗಳಿಸಿದ ವರಮಾನವೇ. ಏಕೆಂದರೆ ಸರ್ಕಾರಕ್ಕೆ ಸಾಲ ನೀಡುವ ಸೇವೆಗೆ ಪ್ರತಿಯಾಗಿ ಪಡೆದ ಸಂಪಾದನೆಯಿದು. ಆದರೆ ದುಡಿಮೆಯಿಂದ ಬರುವ ವರಮಾನವನ್ನು ಗಳಿಸಿದ ಆದಾಯವೆಂದೂ ಸ್ವತ್ತಿನಿಂದ ಬರುವ ಆದಾಯವನ್ನು ಗಳಿಕೆಯಾಗದ ವರಮಾನವೆಂದೂ ತಜ್ಞರು ಕರೆದಿದ್ದಾರೆ. ಉದಾಹರಣೆಗೆ ಕಟ್ಟಡಗಳು, ಸರ್ಕಾರಿ ಪ್ರತಿಭೂತಗಳು (ಸೆಕ್ಯೂರಿಟೀಸ್), ಷೇರುಗಳು ಮುಂತಾದವುಗಳ ಮೇಲೆ ಪಡೆಯುವ ವರಮಾನ, ಉತ್ತರಾಧಿಕಾರದಿಂದಾಗಿ ಪಡೆದ ಸ್ವತ್ತಿನಿಂದ ದೊರಕುವ ವರಮಾನ ಮುಂತಾದವನ್ನು ಗಳಿಕೆಯಾಗದ ವರಮಾನವೆಂದು ಕರೆಯಲಾಗಿದೆ. ಗಳಿಸಿದ ಆದಾಯ ದುಡಿಮೆಯ ಫಲವಾದ್ದರಿಂದ ಅದಕ್ಕೆ ಸ್ವಾಭಾವಿಕವಾಗಿಯೇ ಮಾನ್ಯತೆ ಹೆಚ್ಚು. ಅಂತೂ ವರಮಾನದ ಮೂಲ ಯಾವುದು ಎಂಬುದರ ಮೇಲಿಂದ ಅದನ್ನು ಗಳಿಸಿದ್ದೇ ಗಳಿಸದ್ದೇ ಎಂಬುದಾಗಿ ವಿಂಗಡಿಸಲಾಗುತ್ತದೆ. ಆದರೆ ಈ ಬಗೆಯ ವಿಂಗಡಣೆ ಅನೇಕ ವೇಳೆ ತುಂಬ ಸಂಕೀರ್ಣ. ಅನೇಕ ದೇಶಗಳಲ್ಲಿ ವರಮಾನ ವಿಧಿಸುವಾಗ ಗಳಿಸಿದ ಮತ್ತು ಗಳಿಸದ ವರಮಾನಗಳೆಂದು ವಿಂಗಡಣೆ ಮಾಡಲಾಗುತ್ತದೆ. ಬ್ರಿಟನ್ನಲ್ಲಿ 1907-20ರ ವರೆಗೆ ವರಮಾನವನ್ನು ಗಳಿಸಿದ ಮತ್ತು ಗಳಿಸದ ವರಮಾನಗಳೆಂದು ವಿಂಗಡಿಸಿ, ಗಳಿಸಿದ ವರಮಾನದ ಮೇಲೆ ಕಡಿಮೆ ದರದ ತೆರಿಗೆಯನ್ನೂ ಗಳಿಸದ ವರಮಾನದ ಮೇಲೆ ಹೆಚ್ಚಿನ ದರದ ತೆರಿಗೆಯನ್ನೂ ವಿಧಿಸಲಾಗುತ್ತಿತ್ತು. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 1924ರ ಹಣಕಾಸು ಕಾಯಿದೆಯ ಪ್ರಕಾರ ಗಳಿಸಿದ ವರಮಾನದ ಮೇಲಿನ ತೆರಿಗೆಗೆ ರಿಯಾಯತಿ ಕೊಡುವ ಪದ್ಧತಿ ಪ್ರಾರಂಭವಾಯಿತು. 1924-43ರ ವರೆಗೆ ಈ ಕ್ರಮ ಜಾರಿಯಲ್ಲಿತ್ತು. ಭಾರತದಲ್ಲಿ ಗಳಿಸಿದ ವರಮಾನಕ್ಕೆ ರಿಯಾಯಿತಿ ನೀಡುವ ಪದ್ಧತಿ ಆರಂಭವಾದ್ದು 1945-46ರಲ್ಲಿ. ಇದಕ್ಕೆ ಸಂಬಂಧಿಸಿದಂತೆ ತೆರಿಗೆ ನೀತಿಯಲ್ಲಿ ಪದೇಪದೇ ಬದಲಾವಣೆಗಳಾಗುತ್ತಿದ್ದುವು. 1969-70ರಿಂದ ಈ ವಿಂಗಡಣೆಯನ್ನು ಭಾರತದಲ್ಲಿ ಕೈಬಿಡಲಾಯಿತು. ಗಳಿಸಿದ ವರಮಾನಕ್ಕೆ ತೆರಿಗೆ ರಿಯಾಯಿತಿ ಅಗತ್ಯವೆಂಬುದಕ್ಕೆ ಕೆಲವು ಮುಖ್ಯವಾದ ಗಳನ್ನು ಮುಂದೊಡ್ಡಲಾಗಿದೆ:

  1. ಗಳಿಸಿದ ವರಮಾನ ಅಥವಾ ದುಡಿಮೆಯಿಂದ ಬರುವ ವರಮಾನ ಶಾಶ್ವತವಾದ್ದಲ್ಲ. ದುಡಿಯುವ ಶಕ್ತಿ ಮತ್ತು ಅವಕಾಶಗಳಿರುವವರೆಗೆ ಮಾತ್ರ ವರಮಾನ ದೊರಕುತ್ತಿರುತ್ತದೆ. ಅಂದರೆ, ಗಳಿಸಿದ ವರಮಾನದಲ್ಲಿ ಸ್ಥಿರತೆ ಇರುವುದಿಲ್ಲ. ಆದರೆ ಸ್ವತ್ತಿನಿಂದ ಬರುವ ವರಮಾನ ಹೆಚ್ಚು ಶಾಶ್ವತ, ಸ್ಥಿರ. ದುಡಿದು ಸಂಪಾದಿಸುವವನು ಉಳಿತಾಯಮಾಡಿ ವೃದ್ಧಾಪ್ಯ ಕಾಲದ ಜೀವನಕ್ಕೆ ಕೂಡಿಡ ಬೇಕಾಗುತ್ತದೆ. ಸ್ವತ್ತಿನಿಂದ ವರಮಾನ ಪಡೆಯುವವನು ಈಗಾಗಲೇ ಕೂಡಿಟ್ಟಿರು ವುದರಿಂದ ಅವನು ಹೊಸದಾಗಿ ಉಳಿಸಿಡಬೇಕಾದ ಅಗತ್ಯವಿರುವುದಿಲ್ಲ.
  2. ವರಮಾನವನ್ನು ಗಳಿಸುವುದಕ್ಕೆ ದೈಹಿಕ ಮತ್ತು ಮಾನಸಿಕ ಶ್ರಮ ಅಗತ್ಯ. ಗಳಿಕೆಗಾಗಿ ದುಡಿಯುವವನು ತನ್ನ ಬಿಡುವನ್ನು ತ್ಯಾಗಮಾಡುತ್ತಾನೆ. ಆದರೆ ಸ್ವತ್ತಿನಿಂದ ವರಮಾನ ಪಡೆಯುವವನಿಗೆ ಶ್ರಮವಿರುವುದಿಲ್ಲ; ಅವನು ಬಿಡುವನ್ನು ಅನುಭವಿಸುತ್ತಾನೆ.
  3. ಸಾಮಾನ್ಯವಾಗಿ ಆಸ್ತಿಯಿಂದ ವರಮಾನ ಪಡೆಯುವವರಿಗೆ ಇರುವಷ್ಟು ವೆಚ್ಚಮಾಡುವ ಶಕ್ತಿ ದುಡಿಮೆಯಿಂದ ಗಳಿಸುವವರಿಗೆ ಇರುವುದಿಲ್ಲ. ಆದರೆ ಸ್ವತ್ತಿನಿಂದ ಬಂದ ಅಲ್ಪ ವರಮಾನದಿಂದಲೇ ಜೀವನ ನಡೆಸಬೇಕಾಗಿರುವವರೂ ಇಲ್ಲದಿಲ್ಲ.
  4. ದುಡಿಮೆಯಿಂದ ವರಮಾನ ಪಡೆಯುವವರು ಆ ಶಕ್ತಿಯನ್ನು ಗಳಿಸಲು ವಿದ್ಯಾಭ್ಯಾಸ ಮತ್ತು ತರಬೇತಿಗಾಗಿ ವೆಚ್ಚ ಮಾಡಿರುತ್ತಾರೆ. ಆದರೆ ಸ್ವತ್ತಿನಿಂದ ವರಮಾನ ಪಡೆಯಲು ಇಂಥ ವೆಚ್ಚದ ಅಗತ್ಯವಿರುವುದಿಲ್ಲ.
  5. ದುಡಿಮೆಯಿಂದ ವರಮಾನ ಪಡೆಯುವವರಿಗೆ, ಮುಖ್ಯವಾಗಿ ಸಂಬಳ ವರಮಾನಗಾರರಿಗೆ, ತೆರಿಗೆಯನ್ನು ತಪ್ಪಿಸಿಕೊಳ್ಳುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಈ ಮಾರ್ಗಗಳೆಲ್ಲವೂ ಬಹುಮಟ್ಟಿಗೆ ಲಭ್ಯವಿರುವುದು ಸ್ವತ್ತಿನಿಂದ ವರಮಾನ ಪಡೆಯುವವರಿಗೆ. ಈ ಕಾರಣಗಳಿಂದಾಗಿ ಗಳಿಸಿದ ವರಮಾನದ ಮೇಲೆ ತೆರಿಗೆ ಕೊಡುವ ಶಕ್ತಿ ಗಳಿಸದ ವರಮಾನದ ಮೇಲೆ ತೆರಿಗೆ ಕೊಡುವ ಶಕ್ತಿಗಿಂತ ಕಡಿಮೆಯಾಗಿರುತ್ತದೆಂದೂ ಆದ್ದರಿಂದ ಗಳಿಸಿದ ವರಮಾನಕ್ಕೆ ರಿಯಾಯಿತಿ ನೀಡ ಬೇಕೆಂದೂ ವಾದಿಸಲಾಗಿದೆ.


ಒಂದು ನಿರ್ದಿಷ್ಟ ಮೊತ್ತದ ರಾಜ್ಯಾದಾಯವನ್ನು ಸರ್ಕಾರ ಪಡೆಯಲೇ ಬೇಕಾಗಿರುವಾಗ, ಗಳಿಸಿದ ವರಮಾನಕ್ಕೆ ಅದು ತೆರಿಗೆಯಲ್ಲಿ ರಿಯಾಯಿತಿ ನೀಡುವುದ ರಿಂದ ಆಗುವ ನಷ್ಟ ತುಂಬಿಕೊಳ್ಳಲು ಗಳಿಸದ ವರಮಾನದ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಗಳಿಸದ ವರಮಾನದ ಮೇಲೆ ಹೆಚ್ಚಿನ ದರದ ತೆರಿಗೆ ವಿಧಿಸುವುದಕ್ಕೆ ಆರ್ಥಿಕ ಅಸಮತೆಯನ್ನು ಕಡಿಮೆಮಾಡುವ ದೃಷ್ಟಿಯಿಂದಲೂ ಸಮರ್ಥನೆಯುಂಟು. ಆದರೆ ಈ ನೀತಿಯಿಂದ ಉಳಿತಾಯ ಮಾಡಲು ಮತ್ತು ಸ್ವತ್ತನ್ನು ಸಂಪಾದಿಸಲು ಉತ್ತೇಜನವಿಲ್ಲದಂತಾಗುತ್ತದೆಂಬ ಮತ್ತು ನಷ್ಟ ಸಂಭವವುಳ್ಳ ಉದ್ಯಮಗಳಲ್ಲಿ ಬಂಡವಾಳ ಹೂಡಲು ಉತ್ತೇಜನವಿಲ್ಲದಂತಾಗುತ್ತದೆಂಬ ಭಯವುಂಟು. ಸ್ವತ್ತನ್ನು ಸಂಪಾದಿಸಿದಾಗಿ ನಿಂದ ಹಲವಾರು ವರ್ಷಗಳವರೆಗೆ ವಿನಾಯಿತಿ ಕೊಟ್ಟು, ಅನಂತರ ಅದರಿಂದ ಬರುವ ವರಮಾನದ ಮೇಲೆ ಹೆಚ್ಚಿನ ದರದ ತೆರಿಗೆ ವಿಧಿಸುವುದಾದರೆ ಉಳಿತಾಯ ಮಾಡಲೂ ಸ್ವತ್ತನ್ನು ಆರ್ಜಿಸಲೂ ಉತ್ತೇಜನ ತಪ್ಪದಂತೆ ಮಾಡಬಹುದೆಂಬ ಅಭಿಪ್ರಾಯವೂ ಉಂಟು.


ಒಂದು ಆದಾಯವನ್ನು ಇತಮಿತ್ಥಂ ಎಂದು ಗಳಿಸಿದ ವರಮಾನ ಹಾಗು ಗಳಿಸದ ವರಮಾನವೆಂದು ವರ್ಗೀಕರಿಸುವುದು ಅಷ್ಟೇನೂ ಸುಲಭವಲ್ಲ. ಒಂದೇ ಆದಾಯವು ಗಳಿಸಿದ್ದೂ ಆಗಬಹುದು; ಗಳಿಸದ್ದೂ ಆಗಬಹುದು. ಆ ಹಣದ ಮೂಲವು ವ್ಯಕ್ತಿಯ ದುಡಿಮೆಯಿಂದ ಬಂದುದೇ ಅಥವಾ ಬೇರೆಯವರಿಂದಲೋ/ಅಕಸ್ಮಿಕವಾಗಿ ಬಂದುದೋ ಎಂಬುದರ ಮೇಲೆ ಆಧಾರಿತವಾಗಿದೆ.


ತನ್ನ ಸ್ವಯಂ ದುಡಿಮೆಯಿಂದ ಉಳಿಸಿದ ಅಥವಾ ಕೂಡಿಟ್ಟ ಅಥವಾ ಸಾಲ ಮಾಡಿ ಹಣ ದೊರಕಿಸಿಕೊಂಡು ಆಮೇಲೆ ತನ್ನ ವರಮಾನದಿಂದ ತೀರಿಸಿದ ಹಣ ಅಥವಾ (ನಿವೃತ್ತಿ, ವೇತನ ಪರಿಷ್ಕರಣ ಮೊದಲಾದ ಕಾರಣಗಳಿಂದ) ಇಡು ಗಂಟಾಗಿ ಬಂದ ಹಣವನ್ನು ಹಲವಾರು ರೀತಿ ವಿನಿಯೋಗಿಸಿ ಅದರಿಂದ ಬರುವ ಆದಾಯವು ಗಳಿಸಿದ ವರಮಾನವಾಗುವುದು. ಉದಾಹರಣೆಗೆ ಈ ಕೆಳಗಿನವುಗಳು ಗಳಿಸಿದ ವರಮಾನಗಳು:


  1. ವೇತನ, ಬೋನಸ್ಸು, ತುಟ್ಟಿಭತ್ಯ, ವೇತನೇತರ ಸೌಲಭ್ಯಗಳು, ನಿವೃತ್ತಿವೇತನ, ನಿವೃತ್ತಿಕಾಲದ ಮೊತ್ತಗಳು.
  2. ಠೇವಣಿಗಳು, ಅಂಚೆ ಕಛೇರಿಯ ರಾಷ್ಟ್ರೀಯ ಉಳಿತಾಯ ಪತ್ರಗಳು, ಮಾಸಿಕ ಆದಾಯ ಯೋಜನೆ ಠೇವಣಿ, ನಿವೃತ್ತರ ಆದಾಯ ಯೋಜನೆ, ಸಾರ್ವಜನಿಕ ಭವಿಷ್ಯನಿಧಿ, ಐಡಿಬಿಐ ಮೊದಲಾದ ಬಾಂಡುಗಳು, ಡಿಬೆಂಚರ್ ಬಾಂಡುಗಳು, ಉಳಿತಾಯ ಖಾತೆ, ಪಾರಸ್ಪರಿಕ ನಿಧಿ ಮೊದಲಾದವುಗಳಿಂದ ಬರುವ ಬಡ್ಡಿ.
  3. ಮನೆ/ಕಟ್ಟಡದ ಬಾಡಿಗೆ, ಷೇರುಗಳು-ಬಂಡವಾಳ ಪತ್ರಗಳು ಮೊದಲಾದವುಗಳ ಮೇಲೆ ಬರುವ ಲಾಭಾಂಶ ಮೊದಲಾದವುಗಳು.


ಗಳಿಸದ ವರಮಾನವೆಂದರೆ ತನ್ನ ಸ್ವಂತ ದುಡಿಮೆಯ ಪ್ರತಿಫಲವಾಗದೆ ಬೇರೆಯವ ರಿಂದ ಹಲವಾರು ಕಾರಣಗಳಿಗಾಗಿ ಬರುವ ಆಸ್ತಿಯ ಅಥವಾ ಇಡುಗಂಟಿನ ಮೇಲಣ ಆದಾಯ ಅಥವಾ ಇತರೇ ಈ ರೀತಿಯ ಆದಾಯಗಳು ಗಳಿಸದ ವರಮಾನವಾಗುತ್ತವೆ.


  1. ಪಿತ್ರಾರ್ಜಿತವಾಗಿ ಬಂದ ಮನೆ, ನಿವೇಶನ, ಕಟ್ಟಡ, ಹಣ ಮೊದಲಾದವುಗಳಿಂದ ಬರುವ ಆದಾಯವು ಗಳಿಸದ ವರಮಾನ. ಇದರಿಂದ ಬರುವ ಬಾಡಿಗೆ, ಬಡ್ಡಿ, ಲಾಭಾಂಶಗಳೂ ಗಳಿಸದ ವರಮಾನವಾಗುತ್ತವೆ.
  2. ಲಾಟರಿ, ರಸಪ್ರಶ್ನೆಗಳಿಂದ ಬರುವ ಬಹುಮಾನ ಮೊದಲಾದವುಗಳು ಸಹ ಗಳಿಸದ ವರಮಾನ.
  3. ತಂದೆ ಮೊದಲಾದವರ ಮರಣಾನಂತರ ವಾರಸುದಾರನಾಗಿ ಪಡೆಯುವ ಆಸ್ತಿ, ಹಣ, ಷೇರುಗಳು, ಡಿಬೆಂಚರ್-ಬಂಡವಾಳ ಪತ್ರಗಳು ಮೊದಲಾದವುಗಳಿಂದ ಬರುವ ಆದಾಯವು ಗಳಿಸದ ವರಮಾನವಾಗುತ್ತವೆ.