ವಿಷಯಕ್ಕೆ ಹೋಗು

ಆದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಳಿಕೆ ಇಂದ ಪುನರ್ನಿರ್ದೇಶಿತ)

ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಒಂದು ಘಟಕ ಅಥವಾ ವ್ಯಕ್ತಿಯು ಗಳಿಸುವ ಬಳಕೆ ಮತ್ತು ಉಳಿತಾಯದ ಅವಕಾಶ. ಇದನ್ನು ಸಾಮಾನ್ಯವಾಗಿ ವಿತ್ತೀಯ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗುತ್ತದೆ.[] ಆದರೆ, ಮನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲಿ, ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲ ವೇತನಗಳು, ಸಂಬಳಗಳು, ಲಾಭಗಳು, ಬಡ್ಡಿ ಪಾವತಿಗಳು, ಬಾಡಿಗೆಗಳು ಮತ್ತು ಪಡೆದ ಗಳಿಕೆಗಳ ಇತರ ರೂಪಗಳ ಮೊತ್ತ. ಸಾರ್ವಜನಿಕ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ, ಈ ಪದವು ವಿತ್ತೀಯ ಮತ್ತು ವಿತ್ತೀಯವಲ್ಲದ ಉಪಯೋಗ ಸಾಮರ್ಥ್ಯದ ಶೇಖರಣೆಯನ್ನು ಸೂಚಿಸಬಹುದು. ವಿತ್ತೀಯ ಉಪಯೋಗ ಸಾಮರ್ಥ್ಯವನ್ನು ಒಟ್ಟು ಆದಾಯದ ಪ್ರತಿನಿಧಿಯಾಗಿ ಬಳಸಲಾಗುತ್ತದೆ.

ಬಹುತೇಕ ಪ್ರತಿ ದೇಶದಲ್ಲಿ ತಲಾವಾರು ಆದಾಯವು ಸ್ಥಿರವಾಗಿ ಹೆಚ್ಚಾಗುತ್ತಿದೆ. ಜನರು ಅಧಿಕ ಆದಾಯವನ್ನು ಹೊಂದಿರುವುದಕ್ಕೆ ಅನೇಕ ಅಂಶಗಳು ಕೊಡುಗೆ ನೀಡುತ್ತವೆ ಉದಾಹರಣೆಗೆ ಶಿಕ್ಷಣ, ಜಾಗತೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ಶಾಂತಿಯಂತಹ ಅನುಕೂಲಕರ ರಾಜಕೀಯ ಪರಿಸ್ಥಿತಿಗಳು. ಆದಾಯದಲ್ಲಿ ಹೆಚ್ಚಳವು ಜನರು ಕಡಿಮೆ ಗಂಟೆಗಳು ಕೆಲಸಮಾಡಲು ಆಯ್ದುಕೊಳ್ಳಲು ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಅಭಿವೃದ್ಧಿಹೊಂದಿದ ದೇಶಗಳು ಅಧಿಕ ಆದಾಯಗಳನ್ನು ಹೊಂದಿರುತ್ತವೆ ಮತ್ತು ಅಭಿವೃದ್ಧಿಶೀಲ ದೇಶಗಳು ಕಡಿಮೆ ಆದಾಯಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ.

ಆದಾಯ ಅಸಮಾನತೆಯು ಅಸಮಾನ ರೀತಿಯಲ್ಲಿ ಆದಾಯವು ಹಂಚಿಕೆಯಾಗಿರುವ ಮಟ್ಟವನ್ನು ಸೂಚಿಸುತ್ತದೆ. ಇದನ್ನು ಲೊರೆಂಜ಼್ ವಕ್ರರೇಖೆ ಮತ್ತು ಜಿನಿ ಗುಣಾಂಕ ಸೇರಿದಂತೆ ವಿವಿಧ ವಿಧಾನಗಳಿಂದ ಅಳೆಯಬಹುದು. ಸ್ವಲ್ಪ ಪ್ರಮಾಣದ ಅಸಮಾನತೆಯು ಅಗತ್ಯ ಮತ್ತು ಅಪೇಕ್ಷಣೀಯ, ಆದರೆ ಅತ್ಯಧಿಕ ಅಸಮಾನತೆಯು ದಕ್ಷತೆಯ ಸಮಸ್ಯೆಗಳು ಮತ್ತು ಸಾಮಾಜಿಕ ಅನ್ಯಾಯವನ್ನು ಉಂಟುಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಒಪ್ಪುತ್ತಾರೆ. ನಿವ್ವಳ ರಾಷ್ಟ್ರೀಯ ಆದಾಯದಂತಹ ಅಂಕಿಅಂಶಗಳಿಂದ ಅಳೆಯಲಾದ ರಾಷ್ಟ್ರೀಯ ಆದಾಯವು ಅರ್ಥವ್ಯವಸ್ಥೆಯಲ್ಲಿನ ಜನರು, ಸಂಸ್ಥೆಗಳು ಮತ್ತು ಸರ್ಕಾರದ ಒಟ್ಟು ಆದಾಯವನ್ನು ಅಳೆಯುತ್ತದೆ.

ಇತಿಹಾಸದಾದ್ಯಂತ, ಅನೇಕರು ನೈತಿಕತೆ ಮತ್ತು ಸಮಾಜದ ಮೇಲೆ ಆದಾಯದ ಪ್ರಭಾವದ ಬಗ್ಗೆ ಬರೆದಿದ್ದಾರೆ. ವೈಯಕ್ತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ನಿರಂತರ ಆದಾಯದ ಬೆಳವಣಿಗೆಯಲ್ಲಿ ವ್ಯಕ್ತವಾದ ವಸ್ತುದ್ರವ್ಯದ ಪ್ರಗತಿ ಮತ್ತು ಸಮೃದ್ಧಿಯು ಯಾವುದೇ ಬಗೆಯ ನೈತಿಕತೆಯನ್ನು ಜೀವಂತವಾಗಿರಿಸುವುದಕ್ಕೆ ಅನಿವಾರ್ಯ ಅಡಿಪಾಯವನ್ನು ಒದಗಿಸುತ್ತದೆ ಎಂದು ಕೆಲವು ವಿದ್ವಾಂಸರು ತೀರ್ಮಾನಕ್ಕೆ ಬಂದಿದ್ದಾರೆ. ಈ ವಾದವನ್ನು ಆ್ಯಡಮ್ ಸ್ಮಿತ್ ಸ್ಪಷ್ಟವಾಗಿ ನೀಡಿದನು.

ಉಲ್ಲೇಖಗಳು

[ಬದಲಾಯಿಸಿ]
  1. Smith's financial dictionary. Smith, Howard Irving. 1908. Income is defined as, "Revenue; the amount of money coming to a person or a corporation (usually interpreted as meaning annually) whether as payment for services or as interest or other profit from investment."


"https://kn.wikipedia.org/w/index.php?title=ಆದಾಯ&oldid=1118431" ಇಂದ ಪಡೆಯಲ್ಪಟ್ಟಿದೆ