ಗರ್ಭಧಾರಣೆ (ಪ್ರಾಣಿಗಳಲ್ಲಿ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮರಿಗಳಿಗೆ ಮೊಲೆ ಹಾಲೂಡಿಸುವ ಪ್ರಾಣಿಗಳನ್ನು, ಎಂದರೆ ಸಸ್ತನಿಗಳನ್ನು, ಕುರಿತು ಗರ್ಭಾವಸ್ಥೆ ಎಂಬ ಪದದ ಬಳಕೆ ಉಂಟು. ಇಂಥ ಪ್ರಾಣಿಗಳಲ್ಲಿ ಸಹ ಗರ್ಭಾವಸ್ಥೆಯ ಅವಧಿಯನ್ನು ಮನುಷ್ಯರಲ್ಲಿ ವ್ಯಾಖ್ಯಾನಿಸಿರುವಂತೆಯೇ ವ್ಯಾಖ್ಯಾನಿಸಲಾಗಿದೆ: ಗರ್ಭದಲ್ಲಿ ಭ್ರೂಣವುಂಟಾಗಿ ಪಿಂಡವಾಗಿ ಬೆಳೆದು ಅದು ಮರಿಯಾಗಿ ಹುಟ್ಟುವವರೆಗಿನ ಕಾಲ. ಯಾವುದೇ ಪ್ರಾಣಿಯಲ್ಲಿ ನಿಷೇಚನ ಯಾವಾಗ ನಡೆಯಿತು ಎಂಬುದನ್ನು ಕರಾರುವಾಕ್ಕಾಗಿ ಹೇಳುವುದು ಕಷ್ಟ. ಆದ್ದರಿಂದ ಇಂಥಲ್ಲಿ ಋತು ದಿನದಿಂದ ಲೆಕ್ಕಹಾಕಿ ಗರ್ಭಾವಧಿಯನ್ನು ನಿರ್ಧರಿಸಬೇಕು. ಒಂದೊಂದು ಪ್ರಾಣಿಯ ಗರ್ಭಾವಸ್ಥೆಯ ಕಾಲ ಒಂದೊಂದು ಎಂಬುದನ್ನು ಮುಂದಿನ ಯಾದಿಯಲ್ಲಿ ನೋಡಬಹುದು.
ಪ್ರಾಣಿಯ ಹೆಸರು .... ಗಬ್ಬದ ಅವಧಿ (ದಿನಗಳಲ್ಲಿ)
- ಕತ್ತೆಕಿರುಬ ... 110
- ಮೀನ್ಚುಳ್ಳಿ ... 338-358
- ಮುಳ್ಳು ಹಂದಿ- ...
- ಯುರೋಪಿನ 35-40
- ಹಂದಿ ಮೀನು ... 276
- ಎಮ್ಮೆ ... 275
- ಕಾಡೆಮ್ಮೆ ... 270
- ದನ ... 284 (260-300)
- ಕುರಿ ... 148 (143-159)
- ಮೇಕೆ ... 151 (145-157)
- ಕುದುರೆ ... 337 (320-356)
- ಕತ್ತೆ ... 365
- ಒಂಟೆ ... 410 (370-440)
- ಹಂದಿ ... 113 (110-120)
- ಖಡ್ಗಮೃಗ (ಆಫ್ರಿಕದ)... 530-550
- ಜಿರಾಫೆ ... 395-425
- ನೀರಾನೆ ... 237-250
- ಜಿಂಕೆ ... 197-220
- ಹಿಮ ಸಾರಂಗ ... 215-224
- ಬೆಕ್ಕು ... 63 (55-69)
- ನಾಯಿ ... 61 (58-63)
- ಕಾಡು ಬೆಕ್ಕು ... 92-95
- ಚಿರತೆ ... 90-93
- ಸಿಂಹ ... 108 (105-113)
- ಹುಲಿ ... 113-105
- ರಕೂನ್ ... 63
- ಸೀಲ್ ಪ್ರಾಣಿ (ಉತ್ತರದ ತುಪ್ಪುಳು ಪ್ರಾಣಿ) 350
- ಇಲಿ ... 22 (21.5-22)
- ನೀರು ನಾಯಿ-ಕೆನಡ ... 62
- ಕರಡಿ ... 210
- ಗಿನಿ ಹಂದಿ ... 68
- ಮೊಲ ... 38
- ತಿಮಿಂಗಿಲ ... 365 (360-480)
- ಆನೆ ... 600-660
- ಆನೆ-ಏಷ್ಯದ್ದು ... 645 (520-730)
- ಕೋತಿ ... 210
- ಕೋತಿ-ರ್ಹೀಸಸ್ ... 164 (146-180)
- ಚಿಂಪಾಂಜ಼ಿ ... 237 (216-261)
- ಬಾವಲಿ ... 50
- ಕಾಂಗರೂ-ದೊಡ್ಡದು ... 30-40
- ಒಪಾಸಮ್ (ವರ್ಜೀನಿಯದ) 181 (502-2.5)
ಸಸ್ತನಿಗಳಲ್ಲೆಲ್ಲ ಅತಿಕಡಿಮೆ ಗಬ್ಬದ ಅವಧಿ ವರ್ಜೀನಿಯದ ಒಪಾಸಮ್ನಲ್ಲಿ ಕಂಡು ಬಂದರೆ. ಅತಿ ದೀರ್ಘಾವಧಿ ಭಾರತದ ಆನೆಗಳಲ್ಲಿ (ಸುಮಾರು 22 ತಿಂಗಳುಗಳು) ಕಾಣಬಹುದು. ಈ ವ್ಯತ್ಯಾಸದ ಕಾರಣ ನಿಖರವಾಗಿ ಇನ್ನೂ ತಿಳಿದು ಬಂದಿಲ್ಲ. ಪ್ರಾಣಿಗಳು ವಿಕಾಸವಾದಂತೆಲ್ಲ ಅವುಗಳ ದೇಹಸ್ಥಿತಿಗೆ ಅನುಗುಣವಾಗಿ ಗರ್ಭಾವಸ್ಥೆ ಹೊಂದಿಕೊಂಡಿರ ಬಹುದು. ಪಿಂಡದ ಬೆಳೆವಣಿಗೆ ಹಾಗೂ ಅದರ ಗಾತ್ರ ಗಬ್ಬದ ಅವಧಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಚಿಕ್ಕ ಚಿಕ್ಕ ಪ್ರಾಣಿಗಳಲ್ಲಿ ಗಬ್ಬದ ಅವಧಿ ಕಡಿಮೆ: ದೈತ್ಯಾಕಾರದ ಪ್ರಾಣಿಗಳಲ್ಲಿ ಹೆಚ್ಚು. ಈ ನಿಯಮಕ್ಕೆ ಅಪವಾದದ ಪ್ರಾಣಿಗಳು-ಗಿನಿಹಂದಿ ಹಾಗೂ ಈ ಪ್ರಾಣಿಯ ಸಂಬಂಧಿಗಳಾದ ದಕ್ಷಿಣ ಅಮೆರಿಕದ ಮೂಷಕಗಳು. ಇವು ಗಾತ್ರದಲ್ಲಿ ಚಿಕ್ಕವಾದರೂ ಇವುಗಳ ಗರ್ಭಾವಸ್ಥೆ ಸಾಕಷ್ಟು ದೀರ್ಘವಾಗಿಯೇ ಇರುವುದು. ಹೆಚ್ಚು ದಿವಸ ಗರ್ಭದಲ್ಲಿದ್ದು ಹುಟ್ಟುವ ಮರಿಗಳು ಚೆನ್ನಾಗಿ ಬೆಳೆದಿರುತ್ತವೆ.
ಕಾರ್ಪಸ್ ಲೂಟಿಯಮಿನ ಪಾತ್ರ ಪ್ರಾಣಿ ಗಬ್ಬವಾದಾಗ ಅದರ ಗರ್ಭಕೋಶ, ಅಂಡಾಶಯ ಮತ್ತು ದೇಹದ ಅಂಗಾಂಶಗಳೆಲ್ಲ ಪ್ರಭಾವಿತವಾಗುತ್ತವೆ. ದೇಹದ ಹೊರಗೆ ಒಳಗೆ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಅಂಡಾಶಯದಲ್ಲಿ ಕಾರ್ಪಸ್ ಲೂಟಿಯಮ್ ಕಾಣಿಸಿಕೊಳ್ಳುತ್ತದೆ. ಇದು ಇರುವವರೆಗೂ ಗಬ್ಬ ಮುಂದುವರಿಯುವುದು. ಇದು ಒಂದು ಅಂತಃಸ್ರಾವ ಗ್ರಂಥಿಯ ರೀತಿಯಲ್ಲಿ ಕೆಲಸಮಾಡುವುದು. ಇದರಿಂದ ಪ್ರೋಜೆಸ್ಟಿರಾನ್ ಉತ್ಪತ್ತಿಯಾಗುತ್ತದೆ. ಇದು ಇರುವವರೆಗೂ ಪಿಂಡ ಗರ್ಭದಲ್ಲಿಯೇ ಇರುತ್ತದೆ. ಕಾರ್ಪಸ್ ಲೂಟಿಯಮ್ ಸಂಕುಚಿತವಾದಾಗ ಪ್ರೋಜೆಸ್ಟಿರಾನಿನ ಉತ್ಪಾದನೆ ನಿಂತುಹೋಗುವುದು. ಆಗ ಪ್ರಾಣಿ ಈಯುತ್ತದೆ (ಮರಿಹಾಕುತ್ತದೆ). ಆದ್ದರಿಂದ ಕಾರ್ಪಸ್ ಲೂಟಿಯಮಿನ ಕ್ರಿಯಾಶೀಲತೆಯ ವೇಳೆಯನ್ನು ಗರ್ಭಾವಧಿಯೆನ್ನಬಹುದು. ಒಂದು ವೇಳೆ ಕೃತಕ ರೀತಿಯಲ್ಲಿ ಪ್ರೋಜೆಸ್ಟಿರಾನನ್ನು ದೇಹದೊಳಗೆ ಸೇರಿಸುತ್ತಾ ಹೋದರೆ ಪ್ರಾಣಿಯ ಮರಿಹಾಕುವ ಕಾರ್ಯ ಮುಂದೆ ಹೋಗುವುದಲ್ಲದೆ ಪಿಂಡ ಬೆಳೆಯುತ್ತಲೇ ಹೋಗುತ್ತದೆ. ಕೆಲವು ದಿವಸಗಳು ಮಾತ್ರ ಈ ರೀತಿ ಮಾಡಿದರೆ ಪಿಂಡಕ್ಕೆ ಅಪಾಯವೇನೂ ಆಗುವುದಿಲ್ಲ. ಆದರೆ ಬಹಳ ದಿವಸಗಳವರೆಗೆ ಪ್ರೋಜೆಸ್ಟಿರಾನನ್ನು ಉಪಯೋಗಿಸುತ್ತ ಹೋದರೆ ಪಿಂಡ ಸತ್ತುಹೋಗುವುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕಾರ್ಪಸ್ ಲೂಟಿಯಮಿನ ಪಾತ್ರ ಬಹಳ ಪ್ರಧಾನವಾದುದು. ಆದರೆ ಎಲ್ಲ ಪ್ರಾಣಿಗಳಲ್ಲಿಯೂ ಕಾರ್ಪಸ್ ಲೂಟಿಯಮಿನ ಅವಶ್ಯಕತೆ ಅಷ್ಟಾಗಿರದು. ಪೂರ್ವ ಆಫ್ರಿಕದಲ್ಲಿ ಕಾಣಬರುವ ನಿಕ್ಟೀರಿಯಸ್ ಜಾತಿಯ ಬಾವಲಿಗಳಲ್ಲಿ ಪ್ರಾಣಿ ಗರ್ಭಾವಸ್ಥೆಯಲ್ಲಿರುವಾಗಲೆ ಕಾರ್ಪಸ್ ಲೂಟಿಯಮ್ ಸಂಕುಚಿತವಾಗುತ್ತದೆ. ಆದರೂ ಗಬ್ಬ ಮುಂದುವರಿಯುತ್ತದೆ. ಸಾಕುಪ್ರಾಣಿಗಳಾದ ಕುದುರೆಗಳಲ್ಲಿಯೂ ಇದೇ ಸ್ಥಿತಿ ಕಾಣಬರುತ್ತದೆ. ಕಾರ್ಪಸ್ ಲೂಟಿಯಮಿನ ಕಾರ್ಯವನ್ನು ಬೇರೆ ಅಂತಃಸ್ರಾವ ಗ್ರಂಥಿಗಳು ವಹಿಸಿಕೊಂಡು ಪ್ರೋಜೆಸ್ಟಿರಾನನ್ನು ಉತ್ಪತ್ತಿಮಾಡುವುದರಿಂದ ಗಬ್ಬ ಮುಂದುವರಿಯುತ್ತದೆ. ಕೆಲವು ಪ್ರಾಣಿಗಳ ಗರ್ಭಾವಸ್ಥೆಯಲ್ಲಿ ಕಾರ್ಪಸ್ ಲೂಟಿಯಮ್ ಇರಲೇಬೇಕು. ಇಲ್ಲದಿದ್ದರೆ ಅಥವಾ ಅದನ್ನು ತೆಗೆದುಹಾಕಿದರೆ ಚಿಟ್ಟಿಲಿ ಮತ್ತು ಮೇಕೆಗಳಲ್ಲಿ ಪಿಂಡವು ಇಂಗಿ ಹೋಗುವುದು. ಪಿಂಡ ತಳವೂರಿದ ಬಳಿಕ ಕೋತಿ ಮತ್ತು ಮನುಷ್ಯರಲ್ಲಿ ಕಾರ್ಪಸ್ ಲೂಟಿಯಮನ್ನು ತೆಗೆದುಹಾಕಿದರೂ ಯಾವ ಬಾಧಕವೂ ಆಗುವುದಿಲ್ಲ.
ಕಾಡಿನಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಗಬ್ಬದ ಸ್ಥಿತಿ ಇನ್ನೂ ವಿಚಿತ್ರ. ಅವು ಯಾವ ತಾಣದಲ್ಲಿಯೂ ನಿಲ್ಲದೆ ಕಾಡಿನಲ್ಲೆಲ್ಲ ಓಡಾಡುತ್ತವೆ. ಕೆಲವಾರು ಪ್ರಾಣಿಗಳು ಗುಹೆ ಮತ್ತು ಬಿಲಗಳಲ್ಲಿ ವಾಸಿಸುತ್ತವೆ. ಯಾವ ತಾಣದಲ್ಲಿಯೂ ಇರದ ಪ್ರಾಣಿಗಳಲ್ಲಿ ಗಬ್ಬದ ಅವಧಿ ದೀರ್ಘವಾದುದು. ಹುಟ್ಟಿದ ಮರಿಗಳು ಸಾಕಷ್ಟು ಬಲಿಷ್ಠವಾಗಿರುತ್ತವೆ. ಆದರೆ ಗುಹೆ, ಬಿಲಗಳಲ್ಲಿ ವಾಸಿಸುವ ಇಲಿ ಮುಂತಾದ ಮೂಷಕಗಳ ಮರಿಗಳು ಹುಟ್ಟಿದಾಗ ಬಹಳ ಎಳೆಯ ಸ್ಥಿತಿಯಲ್ಲಿಯೇ ಇರುತ್ತವೆ. ಕರಡಿ ಮರಿಗಳೂ ಹುಟ್ಟಿದಾಗ ಬಹಳ ಎಳಸಾಗಿರುತ್ತವೆ. ಗಬ್ಬದ ಅವಧಿ ಕಾಂಗರೂ ಮುಂತಾದ ಮಾರ್ಸ್ಯುಪಿಯಲ್ಗಳಲ್ಲಿ ಕಡಿಮೆ. ಇವುಗಳ ಮರಿಗಳು ಹುಟ್ಟಿದಾಗ ಬಹಳ ಎಳಸಾಗಿರುತ್ತವೆ. ಮರಿಗಳ ಬೆಳೆವಣಿಗೆ ಪುರ್ಣವಾಗಿರುವುದಿಲ್ಲ. ಆದ್ದರಿಂದ ಮರಿಗಳು ಹುಟ್ಟಿದಮೇಲೆ ಅವನ್ನು ತಾಯಿ ಪ್ರಾಣಿ ತನ್ನ ಒಡಲಿನ ಹೊರಭಾಗದಲ್ಲಿ ಕಾಣಬರುವ ಮರಿಚೀಲದಲ್ಲಿ ಸಾಕುತ್ತದೆ. ಈ ಚೀಲದಲ್ಲಿ ಮರಿಗಳ ಬೆಳೆವಣಿಗೆ ಮುಂದುವರಿದು ಅವು ಪೂರ್ಣಾವಸ್ಥೆಯನ್ನು ತಲಪುತ್ತವೆ. ಕೆಲವೊಂದು ಜಾತಿಯ ಪ್ರಾಣಿಗಳಲ್ಲಿ ಈ ರೀತಿಯ ಮರಿಚೀಲ ಕಂಡುಬರುವುದಿಲ್ಲ. ಇಂಥ ಪ್ರಾಣಿಗಳಲ್ಲಿ ಹುಟ್ಟಿದ ಎಳೆಮರಿಗಳು ತಮ್ಮ ಕಾಲುಗಳಿಂದ ತಾಯಿಯ ಎದೆಭಾಗವನ್ನು ತಬ್ಬಿಕೊಂಡಿದ್ದು ಯಾವಾಗಲೂ ಮೊಲೆತೊಟ್ಟನ್ನು ಬಾಯಿಂದ ಹಿಡಿದುಕೊಂಡಿರುತ್ತವೆ. ಉದಾ: ಒಪಾಸಮ್, ಮಾರ್ಮೊಸಾಟ್, ಅಮೆರಿಕೆಯ ಬಯಲಿನ ಇಲಿ ಮತ್ತು ಕಾಡಿನ ಇಲಿಗಳು.
ಭ್ರೂಣದ ಒಳನಾಟಿಕೆ ಹಾಗೂ ಗರ್ಭಾವಧಿ ಕೆಲವಾರು ಜಾತಿಯ ಪ್ರಾಣಿಗಳಲ್ಲಿ ಭ್ರೂಣದ ಬೆಳೆವಣಿಗೆ ಕೆಲಕಾಲ ನಿಂತುಹೋಗುತ್ತದೆ. ಇದರಿಂದ ಗಬ್ಬದ ಅವಧಿ ಹೆಚ್ಚಾಗುತ್ತದೆ. ಇದು ತುಪ್ಪಳಗೂದಲ ಹೊದಿಕೆಯುಳ್ಳ ಮಾಂಸಗಳಲ್ಲಿ ಸಾಮಾನ್ಯ. ಉದಾಹರಣೆಗೆ, ತುಪ್ಪಳಿಗ ಮತ್ತು ವೀಸಲ್. ಯುರೋಪಿನ ಬ್ಯಾಡ್ಜರ್ ಮತ್ತು ಅಮೆರಿಕದಲ್ಲಿನ ತುಪ್ಪಳಿಗ ಜುಲೈ ಮತ್ತು ಆಗಸ್ಟ್ ನಲ್ಲಿ ಗಬ್ಬವಾಗುತ್ತವೆ. ಭ್ರೂಣ ಕೆಲಕಾಲ ಮಾತ್ರ ಬೆಳೆದು ಮುಂದೆ ಜನವರಿ ತಿಂಗಳಿನವರೆಗೆ ತನ್ನ ಬೆಳೆವಣಿಗೆಯನ್ನು ಸ್ಥಗಿತಗೊಳಿಸುತ್ತದೆ. ಆಗ ಭ್ರೂಣ ಗರ್ಭಕೋಶದೊಳಗೆ ನಾಟುವುದಿಲ್ಲ. ಜನವರಿ ತಿಂಗಳಲ್ಲಿ ಭ್ರೂಣ ಒಳನಾಟಿಕೊಂಡು ಬೆಳೆದು ಮಾರ್ಚ್ ತಿಂಗಳಿನಲ್ಲಿ ಈ ಪ್ರಾಣಿಗಳು ಮರಿಹಾಕುವುವು. ಇಲ್ಲಿ ಗಬ್ಬದ ಅವಧಿ 250 ದಿನಗಳಾದರೂ ಭ್ರೂಣ/ಪಿಂಡ ಬೆಳೆಯಲು ಬೇಕಾಗುವ ಅವಧಿ ಮಾತ್ರ ಕೇವಲ 50 ದಿನಗಳು. ಈ ಪ್ರಾಣಿಗಳನ್ನು ಗಬ್ಬವಾದ ಮೇಲೆ ಪ್ರಾಯೋಗಿಕವಾಗಿ ಬಿಸಿಲಿನಲ್ಲಿ ಬಿಟ್ಟರೆ ಗಬ್ಬ ಮೂರು ತಿಂಗಳಿನಷ್ಟು ಕಡಿಮೆಯಾಗುತ್ತದೆ. ಬಿಸಿಲಿನ ಪ್ರಭಾವದಿಂದ ಚೇತನಗೊಂಡ ಕಾರ್ಪಸ್ ಲೂಟಿಯಮ್ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸಿ ಅದರಿಂದ ಹಾರ್ಮೋನ್ ಉತ್ಪತ್ತಿಯಾಗುವಂತೆ ಮಾಡುವುದು. ಇದೇ ರೀತಿಯ ಗಬ್ಬದ ಸ್ಥಿತಿ ಆರ್ಮಡಿಲೊ ಮತ್ತು ರೋ ಜಿಂಕೆಗಳಲ್ಲಿ ಸಹ ಕಾಣಬರುತ್ತದೆ. ಕರಡಿ ಮತ್ತು ಸೀಲ್ಗಳಲ್ಲಿಯೂ ಇದೇ ರೀತಿ ಇರಬಹುದೆಂದು ನಂಬಲಾಗಿದೆ. ಈ ಒಳನಾಟಿಕೆ ನಿಧಾನವಾಗುವುದರಿಂದ ಚಿಟ್ಟಿಲಿ ಮುಂತಾದ ಚಿಕ್ಕ ಮೂಷಕಗಳಲ್ಲಿ ಗಬ್ಬ ಮುಂದೆ ಹೋಗುತ್ತದೆ. ತಾಯಿ ಮರಿಗಳಿಗೆ ಹಾಲನ್ನುಣ್ಣಿಸುತ್ತಿದ್ದರೆ 10-20 ದಿವಸಗಳಷ್ಟು ಗಬ್ಬ ಮುಂದೆ ಹೋಗುವುದು. ತಾಯಿಯ ದೇಹದಿಂದ ಹಾಲು ಉತ್ಪತ್ತಿಯಾಗಿ ಉಪಯೋಗವಾಗುವುದರಿಂದ ಹಾಗೂ ತಾಯಿ ಹೆಚ್ಚಿನ ಮರಿಗಳಿಗೆ ಹಾಲನ್ನು ಕೊಡುತ್ತಿರುವ ಸ್ಥಿತಿಯಲ್ಲಿ ಗಬ್ಬವಾಗುವುದು ನಿಧಾನವಾಗುತ್ತದೆ. ಆದರೆ ದೊಡ್ಡ ಗಾತ್ರದ ಮೂಷಕಗಳಲ್ಲಿ ಒಳನಾಟಿಕೆ ನಿಧಾನವಾಗುವುದು ವಿರಳ. ಚಿಟ್ಟಿಲಿಗಿಂತ ಸಾಮಾನ್ಯ ಇಲಿಗಳಲ್ಲಿ ಸೂಲಿನ ಅವಧಿ 22 ದಿನಗಳು. ಅರಳೆ ಇಲಿಯಲ್ಲಿ 27 ದಿನಗಳು.
ಗಬ್ಬದ ಪರೀಕ್ಷೆಗಳು
[ಬದಲಾಯಿಸಿ]ಮನುಷ್ಯನಲ್ಲಿ ಮಾಡುವಂತೆಯೇ ಆಷಿಜ಼ಾಂಡೆಕ್ ಪರೀಕ್ಷೆಯ ತತ್ತ್ವವನ್ನು ಪಾಲಿಸಿಕೊಂಡು ಪ್ರಾಣಿಗಳಲ್ಲಿಯೂ ಈ ರೀತಿಯ ಪರೀಕ್ಷೆಗಳನ್ನು ಮಾಡುವ ವಿಧಾನ ಜಾರಿಯಲ್ಲಿದೆ. ಕುದುರೆ ಮತ್ತು ಹಸುಗಳಲ್ಲಿ ಅವು ಗಬ್ಬಗಟ್ಟಿದ ಬಳಿಕ ಈಸ್ಟಿನ್ ಅಥವಾ ಈಸ್ಟ್ರೋನ್ ಚೋದಕಗಳು ಉತ್ಪತ್ತಿಯಾಗುವುದು. ಇದನ್ನು ಸಹ ಇಲಿ ಹಾಗೂ ಚಿಟ್ಟಿಲಿಗಳನ್ನು ಉಪಯೋಗಿಸಿಕೊಂಡು ಗರ್ಭಾವಸ್ಥೆಯನ್ನು ಕಂಡುಹಿಡಿಯ ಬಹುದು. ಸ್ವಲ್ಪವೇ ಗಂಜಲವನ್ನು ಪ್ರಯೋಗದ ಹೆಣ್ಣು ಪ್ರಾಣಿಗಳಿಗೆ ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಇವುಗಳ ಯೋನಿದ್ವಾರದ ಮೇಲುಪೊರೆಯ ಕಣಗಳಲ್ಲಿ ವಿಶಿಷ್ಟವಾದ ಬದಲಾವಣೆಗಳುಂಟಾಗುವುದು. ಅದರ ಗಾಜುಫಲಕ ಮೇಲಿನ ಬಳಿತವನ್ನು (ಸ್ಮಿಯರ್) ಬಣ್ಣವೇರಿಸಿ ಸೂಕ್ಷ್ಮದರ್ಶಕದಡಿ ಈ ಬದಲಾವಣೆಗಳನ್ನು ನೋಡಬಹುದು. ಹೆಣ್ಗುದುರೆಯಲ್ಲಿ ಗಂಡಿನೊಡನೆ ಸಂಗಮವಾದ 42 ದಿವಸಗಳೊಳಗೆ ಈ ಪರಿಣಾಮ ಕಾಣಬರುವುದು. ಆದರೆ ಗರ್ಭನಿದಾನ ಪರೀಕ್ಷೆಯನ್ನು 60-65 ದಿನಗಳ ಬಳಿಕ ಮಾಡಿದರೆ ಕುದುರೆ ಗಂಜಲದಲ್ಲಿ ಈಸ್ಟ್ರಿನ್ ಅಂಶ ಹೆಚ್ಚಾಗಿರುವುದು. ಹಸುವಿನಲ್ಲಿ ಗಂಜಲದ ಮೂಲಕ ಹೊರ ಹೋಗುವ ಈಸ್ಟ್ರಿನ್ ತೀರ ಕಡಿಮೆ ಇರುವುದು. ಆದ್ದರಿಂದ 90 ದಿನಗಳವರೆಗೂ ಒಳ್ಳೆಯ ಪರಿಣಾಮ ಕಾಣಬರದು. ಮೇಲಾಗಿ ಒಂದೊಂದು ಹಸುವಿನಲ್ಲಿ 175 ದಿನಗಳವರೆಗೂ ಸರಿಯಾದ ಪರಿಣಾಮ ಕಾಣಿಸದು.
ಈ ರೀತಿಯಲ್ಲಿ ಈ ಗರ್ಭನಿದಾನ ಪರೀಕ್ಷೆಗಳು ಬಹಳ ಸೂಕ್ಷ್ಮತರವಾದವು. ನಾರ್ವೆಯಲ್ಲಿ ಇತ್ತೀಚೆಗೆ ಬಹಳ ಗುರುತರವಾದ ಪರೀಕ್ಷೆಯೊಂದನ್ನು ರೂಪಿಸಿರುವರು. ಹಂದಿಗಳ ಗಬ್ಬದ ಅವಸ್ಥೆಯನ್ನು ತಿಳಿಯಲು ಈ ಪರೀಕ್ಷೆಯನ್ನು ಮಾಡಬಹುದು. ಈ ಪರೀಕ್ಷೆಗೆ ಒಂದು ಗಂಟೆ ಹಿಡಿಯುವುದಲ್ಲದೇ ಬಹಳ ದುಬಾರಿ. ಇದಲ್ಲದೆ ಮಾಂಸಕ್ಕಾಗಿ ಬೀಜ ತೆಗೆದು ಬೆಳೆಸುವ ಕಂದುಬಣ್ಣದ ಕೆಪನ್ ಹುಂಜವನ್ನು ಗರ್ಭನಿದಾನಕ್ಕಾಗಿ ಉಪಯೋಗಿಸಿರುವರು. ಈ ಹಕ್ಕಿಯ ರೆಕ್ಕೆಗಳು ಸಾಮಾನ್ಯವಾಗಿ ಕಪ್ಪಾಗಿರುವುವು. ಈಸ್ಟ್ರಿನನ್ನು ಸೂಜಿಯ ಮೂಲಕ ದೇಹದೊಳಗೆ ಸೇರಿಸಿದರೆ ಬೆಳ್ಳಿಬಣ್ಣದ ಪಟ್ಟೆಗಳು ಬೆಳೆಯುವ ಪುಕ್ಕಗಳ ಮೇಲೆ ಕಾಣಿಸಿಕೊಳ್ಳುವುವು. ಗಂಜಲದಲ್ಲಿ ಈಸ್ಟ್ರಿನ್ ಅಂಶವಿದ್ದರೆ ಸೂಕ್ಷ್ಮದರ್ಶಕದಡಿ ನೋಡಿ ನಿರ್ಧಾರಮಾಡಬಹುದು. ಈ ಪರೀಕ್ಷೆಗೆ ಸುಮಾರು 48 ಗಂಟೆ ಹಿಡಿಯುವುದು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಅತಿಶಬ್ದದಿಂದ (ಅಲ್ಟ್ರಾಸಾನಿಕ್ಸ್) ಕುರಿಗಳ ಗರ್ಭನಿದಾನ ಪರೀಕ್ಷೆ ಮಾಡುವರು. ಈ ಪರೀಕ್ಷೆ ಮಾಡುವಾಗ ಉಂಟಾಗುವ ಎಕ್ಸ್ ಕಿರಣಗಳು ಪಿಂಡಕ್ಕೆ ಯಾವುದೇ ರೀತಿಯ ದುಷ್ಪರಿಣಾಮವನ್ನುಂಟು ಮಾಡುವುದಿಲ್ಲ.
ಗಬ್ಬದ ಪರೀಕ್ಷೆ ಗುದದ್ವಾರದ ಮೂಲಕ ಕೈಯಿಟ್ಟು ನೆಟ್ಟಗರುಳಿನ ಕೆಳಗಿರುವ ಗರ್ಭಕೋಶವನ್ನು ಕೈಬೆರಳುಗಳ ಮೂಲಕ ಮುಟ್ಟಿ ಪಿಂಡ ಬೆಳೆಯುತ್ತಿರುವ ಗರ್ಭದ ಶೃಂಗ, ಪಿಂಡದ ಬೆಳೆವಣಿಗೆಗಳನ್ನು ತಿಳಿಯಬಹುದು. ದೊಡ್ಡ ಗಾತ್ರದ ಸಾಕುಪ್ರಾಣಿಗಳಲ್ಲಿ ಈ ವಿಧಾನವನ್ನು ಅನುಸರಿಸಬಹುದು. ಉದಾಹರಣೆಗೆ, ಕುದುರೆ ಮತ್ತು ಹಸು. ಇದು ಅಷ್ಟು ಸುಲಭದ ಕೆಲಸವಲ್ಲ. ಗರ್ಭಕೋಶದ ಆಕಾರ, ರಚನೆ, ಗರ್ಭಧಾರಣೆ, ಪಿಂಡದ ಬೆಳೆವಣಿಗೆ ಹಾಗೂ ಪ್ರಸವಶಾಸ್ತ್ರತಜ್ಞರು ಮಾಡುವ ಕೆಲಸವಿದು. ಕುಶಲಿಗಳಲ್ಲದವರು ಈ ಪರೀಕ್ಷೆಯನ್ನು ತಾವೇ ಮಾಡಲು ಹೋದರೆ ಪ್ರಾಣಿಗೆ ಅನೇಕ ರೀತಿಯ ಹಾನಿಗಳುಂಟಾಗಬಹುದು. ಪಿಂಡದ ಗುಂಡಿಗೆ ಒಡೆದು ಪಿಂಡ ಸಾಯಬಹುದು. ನೆಟ್ಟಗರುಳಿನಲ್ಲಿ (ರೆಕ್ಟಂ) ತೂತು ಉಂಟಾಗಬಹುದು. ಹಸು ಕಂದು ಹಾಕುವುದು. ಇತರ ಚಿಕ್ಕಪ್ರಾಣಿಗಳಲ್ಲಿ ಉದರಭಾಗದಲ್ಲಿ ಪಿಂಡದ ಬೆಳೆವಣಿಗೆಯನ್ನು ಗಮನಿಸಿ ಗಬ್ಬದ ಅವಧಿಯನ್ನು ನಿರ್ಧರಿಸುವರು.
ಪ್ರಾಣಿ ಗಬ್ಬವಾದ ಮೇಲೆ ಅದರ ಗರ್ಭಕೋಶ, ಅಂಡಾಶಯಗಳು ಮತ್ತು ದೇಹದ ಅಂಗಾಂಶಗಳೆಲ್ಲ ಅನೇಕ ವಿಧದಲ್ಲಿ ಗಬ್ಬದ ಪ್ರಭಾವಕ್ಕೆ ಒಳಗಾಗುತ್ತವೆ. ಮರಿಹಾಕಿದ ಮೇಲೆ ಈ ಪ್ರಭಾವಗಳಿರುವುದಿಲ್ಲ. ಆದರೆ ಕೆಲವಾರು ಸೂಕ್ಷ್ಮ ಬದಲಾವಣೆಗಳು ಆಜೀವ ಪರ್ಯಂತ ಇರುತ್ತವೆ. ಉದಾಹರಣೆಗೆ ಕೆಚ್ಚಲು ದೊಡ್ಡದಾಗುವುದು ಮತ್ತು ಗರ್ಭಕೋಶ ವಿಶಾಲವಾಗುವುದು. ಆದರೂ ಮರಿ ಹಾಕಿದ ನಾಲ್ಕು ವಾರಗಳ ಅನಂತರ ಇವುಗಳೆಲ್ಲ ಸಾಮಾನ್ಯಸ್ಥಿತಿಗೆ ಬರುವುವು. ಕೆಚ್ಚಲುಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗದೆ ಹಾಲು ಉತ್ಪತ್ತಿಯಾಗುತ್ತಾ ಹೋಗುತ್ತದೆ. ಒಂದೇ ಮರಿ ಹಾಕುವ ಪ್ರಾಣಿಗಳಲ್ಲಿ ಗರ್ಭದ ಒಂದು ಕೋಡು ತನ್ನ ಸುರುಳಿಯಾಕಾರದಿಂದ ಬಿಡುಗಡೆಯಾಗಿ ನೆಟ್ಟಗಾಗುತ್ತದೆ. ಅಲ್ಲದೆ ಸಾಕಷ್ಟು ವಿಶಾಲವಾಗುತ್ತದೆ. ಉಳಿದ ಕೋಡಿನಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಹಲವಾರು ಮರಿಗಳನ್ನು ಹಾಕುವ ಪ್ರಾಣಿಗಳಲ್ಲಿ ಎರಡು ಕೋಡುಗಳೂ ವಿಶಾಲವಾಗಿ ಅವುಗಳಲ್ಲಿ ಪಿಂಡಗಳು ಬೆಳೆಯುವುವು. ಪಿಂಡ ಹೊತ್ತ ಕೋಡಿನಲ್ಲಿ ಅನೇಕ ಬದಲಾವಣೆಗಳು ಕಾಣಬರುತ್ತವೆ. ರಕ್ತಚಲನೆ ಹೆಚ್ಚಾಗುವುದು. ಗರ್ಭಕೋಶದ ಧಮನಿಯ ಗಾತ್ರ ಹೆಚ್ಚಿ ರಕ್ತದ ಮಿಡಿತ ಬಲವಾಗುವುದು. ಪಿಂಡ ಬೆಳೆಯುತ್ತ ಹೋದಂತೆ ಅದಕ್ಕೆ ಅನು ಮಾಡಿಕೊಡಲು ದೊಡ್ಡ ತಂತು (ಬ್ರಾಡ್ ಲಿಗಮೆಂಟ್) ಸಹ ಉದ್ದದಲ್ಲಿ ಬೆಳೆಯುತ್ತದೆ. ಇದರಿಂದ ಗರ್ಭಕೋಶ ಪಿಂಡದ ಭಾರವನ್ನು ಹೊತ್ತುಕೊಂಡು ಒಡಲಿನ ಮೇಲ್ಭಾಗದಲ್ಲಿರಲು ಅನುಕೂಲವಾಗುತ್ತದೆ. ಈ ರೀತಿ ಪಿಂಡ ಪ್ರವೃದ್ಧವಾಗುತ್ತಿರುವಂತೆ ಗರ್ಭಕೋಶದ ಮಾಂಸದ ಪೊರೆ ಬೆಳೆಯುವುದರಿಂದ ಶಕ್ತಿಯುತವಾಗುವುದಲ್ಲದೆ ದಪ್ಪವಾಗಿ ಗಟ್ಟಿಯಾಗುವುದು. ಇದರಿಂದ ಪಿಂಡದ ಭಾರವನ್ನು ಹೊರುವ ಶಕ್ತಿಯೂ ಇದಕ್ಕೆ ಬರುತ್ತದೆ. ಗರ್ಭಕೋಶದ ಲೋಳೆಪೊರೆಯಲ್ಲಿ ಗಮನೀಯ ಬದಲಾವಣೆ ಗಳಾಗುವುವು. ಹರಡಿದ ಜರಾಯುವನ್ನು ಪಡೆದಿರುವ ಪ್ರಾಣಿಗಳಾದ ಕುದುರೆ ಮತ್ತು ಹಂದಿಗಳಲ್ಲಿ ಲೋಳೆಪೊರೆ ದಪ್ಪವಾಗುವುದು; ಬಹಳ ರಕ್ತಪ್ರಸಾರ ಸಹ ಆಗುವುದು. ಮೆಲುಕು ಹಾಕುವ ಪ್ರಾಣಿಗಳ ಗರ್ಭಕೋಶದಲ್ಲಿ ಪಿಂಡದ ಚೀಲ ಗುಂಡಿಗಳಂಥ ರಚನೆಗಳಿಂದ ಬಂಧಿತವಾಗಿರುವುದು. ಪಿಂಡ ಬೆಳೆದ ಹಾಗೆಲ್ಲ ಗುಂಡಿಗಳ ಗಾತ್ರ ಮತ್ತು ಸಂಖ್ಯೆ ಹೆಚ್ಚಾಗುತ್ತದೆ. ಇವು ಅಣಬೆಯಾಕಾರದಲ್ಲಿ ಬೆಳೆದು ಹಸುವಿನಲ್ಲಿ ಹೊರ ಉಬ್ಬಿನ ರೂಪದಲ್ಲಿಯೂ ಕುರಿಗಳಲ್ಲಿ ಒಳತಗ್ಗಿನ ರೂಪದಲ್ಲಿಯೂ ಇರುವುವು. ನಾಯಿ ಮತ್ತು ಬೆಕ್ಕುಗಳಲ್ಲಿ ಪಿಂಡದ ಚೀಲ ಗರ್ಭಕೋಶದ ಲೋಳೆಪೊರೆಗೆ ಕೆಲವು ಭಾಗಗಳಲ್ಲಿ ಅಂಟಿಕೊಂಡಿರುವುದು.
ಗಬ್ಬದ ಲಕ್ಷಣಗಳು ಗಬ್ಬವಾದ ಮೇಲೆ ಮೊದಲೆರಡು ತಿಂಗಳು ಗರ್ಭಧಾರಣೆ ಆಗಿದೆಯೆ ಇಲ್ಲವೆ ಎಂದು ಗೊತ್ತಾಗುವುದಿಲ್ಲ. ಕಾಲಕಳೆದಂತೆ ಕೆಲವಾರು ಲಕ್ಷಣಗಳ ಸಹಾಯದಿಂದ ಗರ್ಭಧಾರಣೆಯನ್ನು ಗುರುತಿಸಬಹುದು. ಗರ್ಭಧರಿಸಿದ ಮೇಲೆ ಹೆಣ್ಣು ಗಂಡಿನೊಡನೆ ಕೂಡುವ ಬಯಕೆಯನ್ನು ತೋರಿಸುವುದಿಲ್ಲ. ಕೆಲವು ವೇಳೆ ಗಂಡಿನೊಂದಿಗೆ ಕೂಡುವ ಲಕ್ಷಣ ತೋರಿಸಬಹುದಾದರೂ ಆಗ ಹೋರಿಯಿಂದ ವೀರ್ಯ ಸಂಚಯನ ಮಾಡಿಸಿದರೆ ಹಸು ಕಂದು ಹಾಕುವುದು. ಬೆದರುವ, ಕಾಟಕೊಡುವ ಕುದುರೆಗಳು ಗಬ್ಬವಾದ ಮೇಲೆ ಸಾಧುವಾಗುವುವು. ಹಸುಗಳು ಸಹ ಸಾಧುವಾಗುವುವು. ಗಬ್ಬವಾದ ಮೇಲೆ ಪ್ರಾಣಿಗಳು ಮೈತುಂಬಿಕೊಳ್ಳುವುದು. ಕೆಲಸ ಮಾಡಲಾಗದೆ ಬೇಗನೆ ಬಳಲುವುವು. ಕುದುರೆಗಳು ಬೇಗನೆ ಬೆವರುವುವು. ಹಂದಿ ಮತ್ತು ನಾಯಿಗಳು ಆದಷ್ಟು ಆರಾಮವಾಗಿ ಇರಲು ಬಯಸುವುವು.
ಒಡಲು: ಒಡಲು ಮೈತುಂಬಿ ಗುಂಡಾಗುತ್ತದೆ. ಗಬ್ಬವಾದ ಮೇಲೆ ಕಾಣಿಸಿಕೊಳ್ಳುವ ಪ್ರಧಾನ ಲಕ್ಷಣವಿದು. ಒಳಗೆ ಪಿಂಡ ಬೆಳೆದಂತೆ ಉದರದ ಆಕಾರ ಬದಲಾವಣೆ ಹೊಂದುವುದು. ಈಯುವ ಕಾಲ ಬಂದಾಗ ಪಕ್ಕೆಗಳಲ್ಲಿ ಗುಳಿ ಬೀಳುವುದು. ಬೆನ್ನು ಮೂಳೆಗಳು ಮೇಲೆದ್ದು ಕಾಣುವುವು. ರೊಂಡಿಯ ಮಾಂಸಗಳು ಇಳಿಬೀಳುವುವು. ಪಿರ್ರೆಯ ಭಾಗ ಕುಗ್ಗುವುದು. ಬಾಲದ ಬುಡದ ಬಳಿ ಗುಳಿ ಚೆನ್ನಾಗಿ ತೋರುವುದು.
ಕೆಚ್ಚಲು: ಗಬ್ಬವಾದ ಮೇಲೆ ಕ್ರಮೇಣ ಕೆಚ್ಚಲು ದಪ್ಪವಾಗುತ್ತ ಹೋಗುವುದು. ಮೊಲೆತೊಟ್ಟುಗಳು ಉದ್ದವಾಗುವುದು. ಕೆಚ್ಚಲು ಮೇಲಿನ ಸುಕ್ಕು ಇಲ್ಲವಾಗುವುದು. ಮರಿಹಾಕುವ ಅವಧಿ ಹತ್ತಿರವಾದಂತೆ ಹಳದಿಬಣ್ಣದ ಅಂಟು ಹಾಲು ಉತ್ಪತ್ತಿಯಾಗುವುದು. ಹಾಲು ಕೊಡುತ್ತಿದ್ದ ಹಸುವಿನ ಹಾಗೂ ಕುದುರೆಯ ಕೆಚ್ಚಲು ಅವು ಗಬ್ಬವಾದ ಮೇಲೆ ಸ್ವಲ್ಪ ಒಣಗಿಹೋಗುವುವು. ಹಸುವಿನಲ್ಲಿ ಏಳು ತಿಂಗಳವರೆಗೆ, ಕುದುರೆಗಳಲ್ಲಿ ಎಂಟರಿಂದ ಒಂಬತ್ತು ತಿಂಗಳವರೆಗೆ ಹಾಲು ಕಡಿಮೆಯಾಗುತ್ತ ಹೋಗಿ, ಆಮೇಲೆ ನಿಂತುಹೋಗುವುದು.
ಗರ್ಭವನ್ನು ಹೊತ್ತ ಪ್ರಾಣಿಯ ದೇಹಭಾರ ಹೆಚ್ಚುತ್ತ ಹೋಗುವುದು. ಮೇಲಾಗಿ ಒಡಲಿನ ಅಕ್ಕಪಕ್ಕಗಳಲ್ಲಿ ಪಿಂಡದ ಓಡಾಟ ಕಾಣಬರುವುದು. ಕುದುರೆಯ ಒಡಲಿನ ಎಡಪಾರ್ಶ್ವದಲ್ಲಿ, ಹಸುವಿನ ಬಲಭಾಗದಲ್ಲಿ ಪಿಂಡದ ಆಂತರಿಕ ಓಡಾಟ ಕಾಣಬರುವುದು. ಗಬ್ಬ ಹೊತ್ತ ಪ್ರಾಣಿ ತಣ್ಣೀರು ಕುಡಿದಾಗ ಅಥವಾ ಸ್ವಲ್ಪ ದೂರ ನಡೆದು ಒಮ್ಮೆಗೆ ನಿಂತುಕೊಂಡಾಗ ಪಿಂಡ ಮಾತ್ರ ಓಡಾಡುವುದು. ಅಲ್ಲದೆ ಹಸುಗಳು ಎಡಕ್ಕೆ ಮತ್ತು ಕುದುರೆಗಳು ಬಲಕ್ಕೆ ಬೇಗನೆ ತಿರುಗಿದರೂ ಈ ಓಡಾಟ ಕಾಣುವುದು. ಮಲಗಿ ಎದ್ದ ಪ್ರಾಣಿಗಳ ಒಡಲಿನಲ್ಲಿ ಈ ಓಡಾಟವನ್ನು ಗುರುತಿಸಬಹುದು. ಚಿಕ್ಕಪ್ರಾಣಿಗಳಲ್ಲಿ ಈ ರೀತಿಯ ಪಿಂಡದ ಓಡಾಟ ಕಾಣಬರುವುದಿಲ್ಲ. ಆದರೆ ಒಡಲಿನ ಮೇಲೆ ಕೈಯಿಟ್ಟು ಸ್ವಲ್ಪ ಒತ್ತಿಹಿಡಿದರೆ ಪಿಂಡದ ಇರುವನ್ನು ಸುಲಭವಾಗಿ ಗುರುತಿಸಬಹುದು.
ಗಬ್ಬವಾದ ಪ್ರಾಣಿಯ ಉಪಚಾರ ಗಬ್ಬವಾದ ಪ್ರಾಣಿಗೆ ಸಾಕಷ್ಟು ವ್ಯಾಯಾಮ ಮತ್ತು ಒಳ್ಳೆಯ ಆಹಾರ ಅವಶ್ಯಕ. ಪಿಂಡದ ಬೆಳೆವಣಿಗೆ ಹಾಗೂ ಪ್ರಾಣಿಯ ಆರೋಗ್ಯರಕ್ಷಣೆಗೆ ಬೇಕಾಗುವ ಸಮತೂಕ ಆಹಾರವನ್ನು ಕೊಡಬೇಕು. ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡುವ, ಭೇದಿಯನ್ನು ಉಂಟುಮಾಡುವ ಆಹಾರವನ್ನು ಕೊಡಬಾರದು. ಆಹಾರದಲ್ಲಿ ತೀವ್ರ ಬದಲಾವಣೆ ಸಹ ಮಾಡಬಾರದು. ತಣ್ಣನೆಯ ಮತ್ತು ಶುಚಿಯಾದ ನೀರನ್ನು ಆದಷ್ಟು ಹೆಚ್ಚಾಗಿ ಕೊಡಬೇಕು. ಕುರಿಗಳು ತಿನ್ನುವ ಹಸುರು ಮೇವಿನಲ್ಲಿ ಸಾಕಷ್ಟು ನೀರಿನ ಅಂಶವಿರುವುದರಿಂದ ಅವಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ಪಿಂಡದ ಚೀಲದ ರಕ್ಷಣೆಗೆ ನೀರು ಬಹಳ ಅವಶ್ಯಕವಾದುದು. ಅಲ್ಲದೆ ಕೆಚ್ಚಲ ಬೆಳೆವಣಿಗೆಗೂ ನೀರು ಬೇಕಾಗುವುದು.
ಕುದುರೆ ಅದರ ಒಡಲು ದಪ್ಪವಾಗುವವರೆಗೂ ಯಥಾಪ್ರಕಾರ ಅದನ್ನು ಪೋಷಿಸಬೇಕು. ಅದಕ್ಕೆ ಬಹಳ ಹಗುರವಾದ ಕೆಲಸ ಕೊಡಬೇಕು. ಸಾಕಷ್ಟು ನೆರಳನ್ನು ಸಹ ಕಲ್ಪಿಸಬೇಕು. ಹನ್ನೊಂದು ತಿಂಗಳ ಮಧ್ಯಭಾಗ ಮುಟ್ಟಿದರೆ ಅದನ್ನು ಮಧ್ಯಾಹ್ನ ಹುಲ್ಲುಮೇಯಲು ಬಿಟ್ಟು ಅನಂತರ ಸ್ವಲ್ಪ ಕೆಲಸಮಾಡಿಸಬೇಕು. ಸವಾರಿಗೆ ಉಪಯೋಗಿಸಬಾರದು. ಕೊನೆಯ ತಿಂಗಳಲ್ಲಿ ಹೆಚ್ಚಿನ ಆಹಾರ ಹಾಗೂ ನೀರನ್ನು ಕೊಡಬೇಕು. ಒಳ್ಳೆಯ ಕುದುರೆಗೆ ಮಸಾಲೆ ಸೊಪ್ಪು ಹಾಗೂ ಹಸಿರು ಹುಲ್ಲನ್ನು ಒದಗಿಸಬೇಕು. ಮರಿಹಾಕುವ ದೊಡ್ಡಿಯನ್ನು ಶುಚಿಯಾಗಿ ಇಟ್ಟಿರಬೇಕು. ಕುದುರೆಗೆ ಮಾಲೀಸುಮಾಡುವಾಗ ನೋವಾಗದಂತೆ ಎಚ್ಚರವಹಿಸಬೇಕು. ಚೊಚ್ಚಲು ಬಸಿರಿನ ಕುದುರೆಯ ಒಡಲನ್ನು ಆಗಾಗ್ಗೆ ನಯವಾಗಿ ಒತ್ತಬೇಕು. ಮೇಲಾಗಿ ಕೆಚ್ಚಲು, ಒಡಲಿನ ಮೇಲೆ ಆಗಾಗ್ಗೆ ಕೈಯಾಡಿಸುತ್ತ ಇರಬೇಕು.
ಹಸು ಗಬ್ಬವಾದ 7 ತಿಂಗಳ ಅನಂತರ ಹಾಲು ಕರೆಯುವುದನ್ನು ನಿಲ್ಲಿಸಬೇಕು. ಇದರಿಂದ ಪಿಂಡದ ಬೆಳೆವಣಿಗೆ ಚೆನ್ನಾಗಿ ಆಗುತ್ತದೆ. ಹಸುವನ್ನು ಯಾವ ರೀತಿಯ ಕಷ್ಟಕ್ಕೂ ಈಡುಮಾಡಬಾರದು. ಮಳೆ, ಗಾಳಿ, ಬಿಸಿಲುಗಳ ತೀವ್ರತೆಯಿಂದ ರಕ್ಷಿಸಬೇಕು. ಹೋರಿಯಿಂದ ಆಗುವ ತೊಂದರೆಯನ್ನು ತಪ್ಪಿಸಬೇಕು. ಭೇದಿ ಉಂಟುಮಾಡುವ ಹಾಗೂ ಮತ್ತುಬರಿಸುವ ಔಷಧಿಗಳನ್ನು ನಿಲ್ಲಿಸಬೇಕು. ಕರುಹಾಕುವ ಕಾಲಬಂದಾಗ ಯಾವ ಅಡೆತಡೆಗಳಿಲ್ಲದ ಒಂದು ಕೊಠಡಿಯಲ್ಲಿ ಈಯಲು ಬಿಡಬೇಕು.
ಕುರಿ ಮತ್ತು ಮೇಕೆ ಇವನ್ನು ಮರಿಹಾಕುವ ರೊಪ್ಪದಲ್ಲಿಟ್ಟು ಎಲ್ಲ ವಿಷಯ ಗಳಲ್ಲಿಯೂ ಗಮನ ಹರಿಸಬೇಕು. ಅವನ್ನು ಒರಟಾಗಿ ಕಾಣದೆ ಓಡಾಡಿಸದೆ ಇಡಬೇಕು. ನಾಯಿಯ ಕಾಟವನ್ನು ತಪ್ಪಿಸಬೇಕು.
ಹಂದಿ ಇವನ್ನು ಹಳೆಯ ಮನೆಯೊಂದರಲ್ಲಿ ಇಡಬೇಕು. ರಾತ್ರಿಯ ವೇಳೆಯಲ್ಲಿ ಒಳ್ಳೆಯ ಆಹಾರ ಹಾಗೂ ತಳಹಾಸುಗಳನ್ನು ಕೊಡಬೇಕು. ಬೇರೆ ಯಾವ ರೀತಿಯ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಮರಿ ಹಾಕುವ ಹಂದಿಗಳನ್ನು ಬೇರೆ ಬೇರೆಯಾಗಿ ಉಣಿಸಬೇಕು. ಇಲ್ಲದಿದ್ದರೆ ಒಂದೊಂದು ಹಂದಿಗೂ ಸರಿಯಾಗಿ ಆಹಾರ ಸಿಗದು.
ನಾಯಿ ಸರಿಯಾಗಿ ಓಡಾಡಿಸಬೇಕು. ಒಳ್ಳೆಯ ಆಹಾರ, ಪಿಷ್ಟರಹಿತ ತಿಂಡಿ, ಆಗಾಗ್ಗೆ ಯಕೃತ್ತಿನ ಚೂರುಗಳನ್ನು ಅಥವಾ ಬೇಯಿಸಿದ ಯಕೃತ್ತನ್ನು ಕೊಡಬೇಕು. ಬೆಚ್ಚನೆಯ ಸ್ಥಳಗಳಲ್ಲಿ ಇವನ್ನು ಇಟ್ಟು ತಳಹಾಸು ಹಾಗೂ ಮೆತ್ತೆಯನ್ನು ಕೊಡಬೇಕು. ಹಾಸಿಗೆ ಹಾಗೂ ಹಚ್ಚಡಗಳನ್ನು ಹಾಕಿ ಬೆಚ್ಚಗೆ ಮಲಗಿಸಬೇಕು.