ಗರುಡರು
ವಿಶೇಷವಾಗಿ ಕನ್ನಡ ನಾಡಿನಲ್ಲಿ-ಅದರಲ್ಲೂ ಹೊಯ್ಸಳರ ಕಾಲದಲ್ಲಿ ರಾಜರಿಗೆ ನೆಚ್ಚಿನ ಬಂಟರಾಗಿ, ಅವರಿಗಾಗಿ ಪ್ರಾಣವನ್ನೇ ಪಣವಾಗಿಟ್ಟು ಕಾದುತ್ತಿದ್ದು, ಅವರು ಸತ್ತಾಗ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ವಿಶಿಷ್ಟ ಅಂಗರಕ್ಷಕರು. ಕರ್ನಾಟಕದ ಇತಿಹಾಸದ ವಿವಿಧ ಕಾಲಗಳಲ್ಲಿದ್ದ ಅಂಕಕಾರರು, ಲೆಂಕರು, ವೇಳೆಕಾರರು ಇವರು ಕೂಡ ಇದೇ ಬಗೆಯ ಯೋಧರು. ಕರ್ನಾಟಕದ ಹೊರಗಡೆಯೂ ರಾಜರು ಇಂಥ ನಿಷ್ಠಾವಂತ ಸೇವಕರನ್ನು ನೇಮಿಸಿಕೊಳ್ಳುವ ಪದ್ಧತಿ ಇತ್ತು. ಕೇರಳದಲ್ಲಿ ಈ ಪದ್ಧತಿ ಇತ್ತೆಂಬುದು ಮಾರ್ಕೊಪೋಲೋನ ಬರೆವಣಿಗೆಗಳಿಂದ ಗೊತ್ತಾಗುತ್ತದೆ.
ವಿಷ್ಣುವಾಹನನಾದ ಗರುಡನಂತೆ ಇವರಿಗೆ ತಮ್ಮ ಪ್ರಭುವಿನಲ್ಲಿ ಅನನ್ಯ ಭಕ್ತಿ ನಿಷ್ಠೆಗಳಿದ್ದುದರಿಂದ ಇವರು ಗರುಡರೆಂದು ಹೆಸರಾದರು. ಗರುಡಪಟ್ಟವನ್ನು ಸ್ವೀಕರಿಸಲು ಸಾಮಾನ್ಯವಾಗಿ ಅನೇಕರು ಮುಂದೆ ಬರುತ್ತಿದ್ದರು. ಅವರ ನಿಯಮ, ನಿಷ್ಠೆ ಹಾಗೂ ಪರಾಕ್ರಮಗಳನ್ನು ಗಮನಿಸಿ ಅರ್ಹರಾದವರಿಗೆ ರಾಜ ಅನುಮತಿ ನೀಡುತ್ತಿದ್ದ. ಗರುಡಪಟ್ಟವನ್ನು ಸ್ವೀಕರಿಸಿದವರು ಮೊಣಕಾಲಿನ ಮೇಲೆ ತೊಡರೊಂದನ್ನು ಧರಿಸುತ್ತಿದ್ದರು. ತಮ್ಮ ಪ್ರಭುವಿಗೆ ಸೋಲೊದಗದಂತೆ ರಕ್ಷಿಸಲು ಇವರು ವೀರಪ್ರತಿಜ್ಞೆ ಮಾಡುತ್ತಿದ್ದರು.
ಆ ಕಾಲದಲ್ಲಿ ಈ ಪದ್ಧತಿಗೆ ಧಾರ್ಮಿಕ ಬೆಂಬಲವಿತ್ತು. ಶ್ರದ್ಧೆ ಮತ್ತು ನಿಷ್ಠೆಯಿಂದ ತಮ್ಮ ಪ್ರಮಾಣವಚನಕ್ಕೆ ಬದ್ಧರಾಗಿ ಆತ್ಮಾರ್ಪಣೆ ಮಾಡಿಕೊಳ್ಳುವುದರಿಂದ ತಮಗೆ ವೀರಸ್ವರ್ಗ ಲಭಿಸುವುದೆಂದು ಗರುಡರು ನಂಬಿದ್ದರು. ಗರುಡರ ಸ್ಮರಣಾರ್ಥವಾಗಿ ವೀರಗಲ್ಲುಗಳನ್ನು ನೆಡಿಸುತ್ತಿದ್ದದ್ದುಂಟು. ಗರುಡಗಂಬಗಳೆಂಬ ಹೆಸರು ಇವರಿಂದ ಬಂದಿರಬಹುದೆಂದು ಹೇಳಲಾಗಿದೆ
ಶಾಸನಗಳಲ್ಲಿ ಉಲ್ಲೇಖಗಳು
[ಬದಲಾಯಿಸಿ]ಗರುಡರ ಪರಾಕ್ರಮ, ಸಾಧನೆ ಮತ್ತು ಪ್ರಾಣತ್ಯಾಗಗಳಿಗೆ ಸಂಬಂಧಿಸಿದ ಅನೇಕ ಪ್ರಸಂಗಗಳು ಕನ್ನಡ ಶಾಸನಗಳಲ್ಲಿ ದೊರೆಯುತ್ತವೆ. ಪ್ರ.ಶ.ಸು.865ರಲ್ಲಿ ನೀತಿ ಮಾರ್ಗ ಗಂಗರಾಜ ಮರಣಹೊಂದಿದಾಗ ಆತನ ಗರುಡರಾಗಿದ್ದ ರಾಸೇಯ ಮತ್ತು ಬೇಬಿಯಮ್ಮ(ಣ್ಣ)ರು ಪ್ರಾಣಾರ್ಪಣೆ ಮಾಡಿದರು. ರಾಷ್ಟ್ರಕೂಟ ಕಾಲದಲ್ಲೂ ಈ ಪದ್ಧತಿಯಿತ್ತು. ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ ಅಂಗರಕ್ಷಕ ದಳದ ಅಧಿಪತಿಯಾಗಿದ್ದ ಕುವರ ಲಕ್ಷ್ಮನ ಹೆಸರು ಉಲ್ಲೇಖಾರ್ಹವಾದದ್ದು, ಕುವರಲಕ್ಷ್ಮನೂ ಇವನ ವೀರಪತ್ನಿ ಸುಗ್ಗಲದೇವಿಯೂ ಇವನ ಅಧೀನದಲ್ಲಿದ್ದ ಯೋಧರು ಗರುಡರಾಗಿದ್ದರು. ತಮ್ಮ ದೊರೆಗಾಗಿ ಬದುಕುವುದಾಗಿ, ಅವನಿಗಾಗಿ ಸಾಯುವುದಾಗಿ ಅವರು ಪ್ರತಿಜ್ಞೆಮಾಡಿದ್ದರು. ವೀರ ಲಕ್ಷ್ಮನಿಗೂ ಅವನ ಪ್ರಭುವಾದ ಬಲ್ಲಾಳ ದೊರೆಗೂ ನಡುವೆ ಯಾವ ಭಿನ್ನಭಾವವೂ ಇರಲಿಲ್ಲ. ದೊರೆ ಅವನನ್ನು ತನ್ನ ಮಗನಂತೆಯೇ ಸಾಕಿದ. ತನ್ನ ಕೀರ್ತಿಯಲ್ಲೂ ದೊರೆತನದ ಮರ್ಯಾದೆಯಲ್ಲೂ ಅವನೂ ಪಾಲ್ಗೊಳ್ಳುವಂತೆ ಮಾಡಿದ. ದೊರೆ 1220ರಲ್ಲಿ ಮರಣಹೊಂದಿದಾಗ ಕುವರಲಕ್ಷ್ಮನೂ ಅವನ ಪತ್ನಿಯೂ ಅವನ ಸಾವಿರ ಯೋಧರ ಪಡೆಯೊಡನೆ ಪ್ರಾಣಾರ್ಪಣೆ ಮಾಡಿದರೆಂಬುದು ಹಳೇಬೀಡಿನ ಶಾಸನದಿಂದ ತಿಳಿದು ಬರುತ್ತದೆ. ಹೊಯ್ಸಳ ವೀರ ಸೋಮೇಶ್ವರನ ಮರಣದೊಡನೆ ಅವನ ಗರುಡನಾದ ಕಾಮೇಯ ನಾಯಕ ಪ್ರಾಣಾರ್ಪಣೆ ಮಾಡಿಕೊಂಡ.