ಗನಾಯ್ ಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಪೂನ್ ಬಿಲ್ (ಪಾಲಿಯೊಡಾನ್)

ಗನಾಯ್ ಡೀ - ಎಲುಬು ಮೀನುಗಳ ಒಂದು ಗುಂಪು.

ಈ ಗುಂಪಿನ ಮೀನುಗಳು[ಬದಲಾಯಿಸಿ]

ಇದು ವೈಜ್ಞಾನಿಕವಾಗಿ ಒಂದು ಸ್ವಾಭಾವಿಕ ಗುಂಪಲ್ಲ. ಈ ಗುಂಪಿನ ಅನೇಕ ಜಾತಿಯ ಮೀನುಗಳು ನಶಿಸಿಹೋಗಿ ಈಗ ಕೆಲವೇ ಜಾತಿಯ ಮೀನುಗಳು ಮಾತ್ರ ಜೀವಂತವಾಗಿವೆ. ಉದಾಹರಣೆಗೆ ಸ್ಟರ್ಜನ್ (ಆಸಿಪೆನ್ಸರ್), ಸ್ಪೂನ್ ಬಿಲ್ (ಪಾಲಿಯೊಡಾನ್), ಬೊಫಿನ್ (ಆಮಿಯ), ಗಾರ್ಪೈಕ್ (ಲೆಪಿಡಾಸ್ಟಿಯಸ್) ಪಾಲಿಪ್ಟೀರಸ್ ಮತ್ತು ಕಾಲೊಮಿಕ್ಥಿಸ್ ಮೀನುಗಳು. ಇವುಗಳಲ್ಲಿ ಪಾಲಿಯೊಡಾನ್ ಮತ್ತು ಆಸಿಪೆನ್ಸರ್ ಜಾತಿಯ ಕೆಲವು ಪ್ರಭೇದಗಳನ್ನುಳಿದು ಮಿಕ್ಕೆಲ್ಲವೂ ಸಿಹಿನೀರಿನ ವಾಸಿಗಳು.

ಲಕ್ಷಣಗಳು[ಬದಲಾಯಿಸಿ]

ಗನಾಯ್ಡ್ ಹುರುಪೆಗಳಿರುವುದು ಈ ಮೀನುಗಳ ಪ್ರಮುಖ ಲಕ್ಷಣ. ಇವುಗಳ ಗನಾಯ್ಡ್ ಹುರುಪೆಗಳು ಸಮಚೌಕಾಕಾರವುಳ್ಳವು. ಗನಾಯ್ಡ್ ಹುರುಪೆಗಳ ಮೇಲುಪದರದಲ್ಲಿ ಗನಾಯಿನ್ ಎಂಬ ಪದಾರ್ಥವಿರುವುದರಿಂದ ಇವು ಪ್ರಕಾಶಮಾನವಾಗಿರುತ್ತವೆ. ಗನಾಯ್ಡ್ ಮೀನುಗಳು ಕೆಲವು ಲಕ್ಷಣಗಳಲ್ಲಿ ಪ್ರಾಚೀನ ಮೀನುಗಳನ್ನು ಹೋಲುತ್ತವೆ. ಈ ಮೀನುಗಳಲ್ಲಿ ಕಿವಿರುಗಳ ಜೊತೆಗಿರುವ ಗಾಳಿಚೀಲಗಳು ನೀರಿನಲ್ಲಿ ತೇಲಾಡಲು ಸಹಾಯ ಮಾಡುವ ಈಜು ಗಾಯಿ ರೀತಿಯ ಸಹಾಯಕ ಅಂಗವಾಗಿಲ್ಲದೆ ಶ್ವಾಸಾಂಗಗಳಾಗಿವೆ.


ಗನಾಯ್ಡ್ ಹುರುಪೆಗಳನ್ನು ಆಸಿಪೆನ್ಸರ್ ಮತ್ತು ಪಾಲಿಯೊಡಾನ್ ಮೀನುಗಳಲ್ಲಿ ಬಾಲದ ರೆಕ್ಕೆಯಲ್ಲೂ ಆಮಿಯ ಮೀನಿನಲ್ಲಿ ತಲೆಯ ಮೇಲೂ ಕಾಣಬಹುದು.


ಲೆಪಿಡಾಸ್ಟಿಯಸ್ (ಗಾರ್ಪೈಕ್) ಮೀನಿನ ಎರಡು ದವಡೆಗಳೂ ಉದ್ದವಾಗಿರುತ್ತವೆ. ಹೀಗೆ ದವಡೆಗಳು ಚಾಚಿ ಉಂಟಾಗಿರುವ ರಚನೆಗೆ ಗಾರ್ ಎಂದು ಹೆಸರು. ಇದನ್ನು ನೀರಿನಿಂದ ಹೊರಕ್ಕೆ ಚಾಚಿ ಗಾಳಿಯನ್ನು ಸೇವಿಸಲು ಬಳಸುತ್ತದೆ. ಗಾರ್ಪೈಕ್ ಮೀನು ಉತ್ತರ ಅಮೆರಿಕದ ಸಿಹಿನೀರಿನ ಸರೋವರಗಳಲ್ಲಿ ವಾಸಿಸುತ್ತದೆ.


ಪಾಲಿಪ್ಟೀರಸ್ ಜಾತಿಯ ಮೀನುಗಳು ಆಫ್ರಿಕ ಖಂಡದ ನದಿಗಳಲ್ಲಿ ಕಾಣಬರುತ್ತವೆ. ಈಗ ಜೀವಂತವಾಗಿರುವ ಎಲುಬು ಮೀನುಗಳಲ್ಲೆಲ್ಲ ಬಹುಪ್ರಾಚೀನ ಗುಣಗಳನ್ನು ಇವು ಪ್ರದರ್ಶಿಸುವುದರಿಂದ ಇವನ್ನು ಜೀವಂತ ಪಳೆಯುಳಿಕೆಗಳು ಎನ್ನುವುದುಂಟು. ಇವುಗಳಲ್ಲಿ ಹಾಲೆಗಳ ರೀತಿಯ ಈಜುರೆಕ್ಕೆಗಳಿವೆ. ಬೆನ್ನಿನ ಒಂಟಿ ಈಜುರೆಕ್ಕೆ ಅನೇಕ ಉಪರೆಕ್ಕೆಗಳಾಗಿ ವಿಂಗಡಣೆಯಾಗಿದೆ. ಪಾಲಿಪ್ಟೀರಸ್ ಬಿಚಿರ್ ಪ್ರಭೇದ ನೈಲ್ನದಿಯ ಕೆಸರು ಭೂಮಿಯಲ್ಲಿ ಆಳವಾದ ಹೋರು ಮತ್ತು ಸಣ್ಣ ಗುಂಡಿಗಳಲ್ಲಿ ವಾಸಿಸುತ್ತದೆ. ಇತರ ಬಗೆಯ ಸಣ್ಣಮೀನುಗಳು ಮತ್ತು ಕಠಿಣ ಚರ್ಮಿಗಳು ಇದರ ಆಹಾರ.


ಕಾಲೊಮಿಕ್ತಿ ಮೀನುಗಳೂ ಆಫ್ರಿಕಕ್ಕೇ ಸೀಮಿತವಾಗಿವೆ; ಲಘು ಶರೀರದ ಚುರುಕಾದ ಮೀನುಗಳು ಇವು. ಹಾವಿನ ಹಾಗೆ ಬಳಕುತ್ತ ಈಜುತ್ತವೆ. ಮುಂದಿನ ಜೊತೆ ಈಜುರೆಕ್ಕೆಗಳೂ ಬೆನ್ನಿನ ಒಂಟಿ ಈಜುರೆಕ್ಕೆಯೂ ಉಪರೆಕ್ಕೆಗಳಾಗಿ ವಿಭಾಗವಾಗಿವೆ. ಕೀಟಗಳು ಮತ್ತು ಕಠಿಣಚರ್ಮಿಗಳು ಇವುಗಳ ಆಹಾರ. ತೆಂಗು ಜಾತಿಮರಗಳ ಬುಡಗಳಲ್ಲಿ ಇವು ಹಲವು ವೇಳೆ ಕಾಣಬರುವುದರಿಂದ ಇವನ್ನು ಪಾಮ್ಮೀನು ಎಂದೂ ಕರೆಯುವುದುಂಟು.

"https://kn.wikipedia.org/w/index.php?title=ಗನಾಯ್_ಡೀ&oldid=877279" ಇಂದ ಪಡೆಯಲ್ಪಟ್ಟಿದೆ