ವಿಷಯಕ್ಕೆ ಹೋಗು

ಗದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವ್ಯವನ್ನು ಸ್ಥೂಲವಾಗಿ ಎರಡು ವಿಧವಾಗಿ ವಿಂಗಡಿಸಬಹುದು.

  1. ಗದ್ಯ - ಗದ್ಯವೆಂದರೆ ಛಂದೋಬದ್ಧವಲ್ಲದ್ದು,ಸುಲಭವಾಗಿ ಓದಿಕೊಂಡು ಹೋಗಬಹುದಾದದ್ದು. ವಾಕ್ಯಗಳಲ್ಲಿ ರಚನೆಯಾಗಿರುವಂತಹುದು.
  2. ಪದ್ಯ - ಪದ್ಯವೆಂದರೆ ಛಂದೋಬದ್ಧವಾಗಿ, ಪ್ರಾಸ, ಲಯ ಇತ್ಯಾದಿಗಳಿಂದ ಕೂಡಿರುವಂತಹುದು. ಹಳೆಗನ್ನಡದಿಂದ ಮೊದಲುಗೊಂಡು ಇಂದಿನ ಕಾಲದ ಸಾಹಿತ್ಯದವರೆಗೂ ಎರಡೂ ಪ್ರಕಾರದ ರಚನೆಗಳನ್ನು ಕಾಣುತ್ತೇವೆ.

ಗದ್ಯದ ಸ್ವರೂಪ[ಬದಲಾಯಿಸಿ]

ಗದ್ಯ ಸಾಹಿತ್ಯದ ಉಗಮ, ವ್ಯಾಪ್ತಿಗಳನ್ನು ತಿಳಿಯಲು ಗದ್ಯ ಸಾಹಿತ್ಯ.ಪಾಶ್ಚಾತ್ಯ ವಿದ್ವಾಂಸವರ್ಗಕ್ಕೆ ಅನೇಕ ಶತಮಾನಗಳಿಂದ ಪದ್ಯವೆಂದರೇನು ಗದ್ಯವೆಂದರೇನು ಎಂಬುದು ಜಟಿಲ ಸಮಸ್ಯೆಯಾಗಿದೆ. ಅದನ್ನು ಬಿಡಿಸುವುದು ಹೋಗಲಿ, ಅದರ ವಿಚಾರವಾಗಿ ಅಷ್ಟಿಷ್ಟು ತೃಪ್ತಿಕರವಾಗಿ ಬರೆಯುವುದು ಕೂಡ ಅಸಾಧ್ಯವೆಂದು ತೋರಿಬಂದು, ಹಲವರು ಹತಾಶರಾಗಿದ್ದಾರೆ. ಗೊಂದಲಕ್ಕೆ ಮುಖ್ಯ ಕಾರಣ ನಾಲ್ಕು ರೂಪಕ್ಕೆ ಮೂರೇ ನಾಮ ಇರುವ ನಿಜಾಂಶ. ಅದನ್ನು 19ನೆಯ ಶತಮಾನದಲ್ಲೇ ಒಬ್ಬ ಲಾಕ್ಷಣಿಕ ಎತ್ತಿ ತೋರಿಸಿದ. ಈಚಿನ ಕೆಲವರಿಂದಲೂ ಅದಕ್ಕೆ ಅವಧಾರಣೆ ಸಿಕ್ಕಿತು. ಆದರೂ ಆ ವಿಷಯವನ್ನು ಶಾಸ್ತ್ರೀಯವಾಗಿ ವಿಚಾರಿಸಿ, ಖಚಿತಾರ್ಥದ ಪಾರಿಭಾಷಿಕ ಪದಗಳನ್ನು ತಯಾರಿಸಿ, ಅವನ್ನು ಚೆಚ್ಚರದಿಂದ ಉಪಯೋಗಿಸುತ್ತ ಹೋಗಿ, ಅಸ್ಪಷ್ಟ ಚರ್ಚೆಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡುವ ಸಾರಸ್ವತ ವ್ಯಾಪಾರಕ್ಕೆ ಪ್ರಬಲರಾದವರೂ ಮನಗೊಟ್ಟಿಲ್ಲ. ಪೊಎಟ್ರಿ ಎಂಬ ಶಬ್ದದ ಜೊತೆಯಲ್ಲಿ ವರ್ಸ್ ಎಂಬುದು ನಡೆದಾಡುತ್ತದೆ; ಪ್ರೋಸ್ ಎಂಬ ಶಬ್ದವಾದರೊ ಒಂಟಿ. ಅದು ಪೊಎಟ್ರಿಯ ಎದುರಿಗೂ ನಿಲ್ಲಬೇಕು, ವರ್ಸ ಎದುರಿಗೂ ನಿಲ್ಲಬೇಕು. ಅಲ್ಲದೆ, ಪೊಎಟ್ರಿಯೇ ಕಾವ್ಯ. ಪ್ರೋಸ್ ಅಲ್ಲ ಎಂಬ ಅಭಿಪ್ರಾಯವೂ ಮನಸ್ಸನ್ನು ಪ್ರವೇಶಿಸಿ ಭ್ರಾಂತಿಯನ್ನು ಹೆಚ್ಚಿಸುತ್ತಿದೆ. ಪ್ರೋಸ್ ನೆಲದ ಮೇಲೆ ಹೆಜ್ಜೆಯಿಕ್ಕುತ್ತ ಹೋಗುವ ಭಾಷೆ; ಪೊಎಟ್ರಿ ಆದರೊ ರಥಾರೂಢವಾಗಿ ದಿಬ್ಬಣ ತೆರಳುವ ಅಥವಾ ಲಂಘಿಸಿ ಬಾನಿಗೇರುವ ಭಾಷೆ ಎಂಬ ತಾತ್ಪರ್ಯದ ವಾಕ್ಯಗಳು ಹೇರಳವಾಗಿವೆ.


ಭಾರತೀಯರಲ್ಲಿ ಮೂರು ರೂಪ, ಮೂರು ನಾಮಗಳು ಇದ್ದದ್ದರಿಂದ ಈ ವಿಷಯ ಎಂದೊ ನಿಷ್ಕರ್ಷಿತವಾಗಿ ವಾದವಿವಾದಕ್ಕೆ ಆಸ್ಪದ ಬಲುಮಟ್ಟಿಗೆ ಇಲ್ಲದಂತಾಯಿತು. ಶಬ್ದಾಕ್ಷರಗಳ ಜೋಡಣೆಯ ಎರಡು ಪ್ರಮುಖ ವಿಧಾನಗಳಿಗೆ ಪದ್ಯ, ಗದ್ಯವೆಂಬುವು ಪಾರಿಭಾಷಿಕ ಅಂಕಿತ. ಛಂದೋಬದ್ಧವಾದ ನುಡಿಗಟ್ಟು ಪದ್ಯ, ಅಲ್ಲದ್ದು ಗದ್ಯ. ಕವಿಯ ಕರ್ಮವಾದ ಕಾವ್ಯ ಪದ್ಯವನ್ನೂ ಬಳಸಿಕೊಳ್ಳುತ್ತದೆ, ಗದ್ಯವನ್ನೂ ಬಳಸಿಕೊಳ್ಳುತ್ತದೆ. ಒಂದೇ ಕಾವ್ಯದಲ್ಲಿ ಎರಡನ್ನೂ ಕಾಣುವುದು ಸಾಧ್ಯ. ಕೇವಲ ಅರ್ಥ ಪ್ರಮುಖವಾದ ವಚನವಿನ್ಯಾಸದಿಂದ ಕೂಡಿದ ಶಾಸ್ತ್ರ, ನಿಘಂಟು ಇತ್ಯಾದಿ ಪ್ರಬಂಧಗಳು ನಿಜವಾಗಿ ಗದ್ಯಗ್ರಂಥಗಳಾದರೂ ಅವನ್ನು ಪದ್ಯರೂಪದಲ್ಲಿ ಬರೆಯುವುದಕ್ಕೆ ಆಕ್ಷೇಪವಿಲ್ಲ. ಎಂದರೆ, ಆ ಪದ್ಯದಿಂದ ವಿಷಯಕ್ಕೆ ಉತ್ಕರ್ಷವಿಲ್ಲ; ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುದಕ್ಕೆ ಹೆಚ್ಚು ಸೌಕರ್ಯ, ಅಷ್ಟೆ.


ಇಷ್ಟು ಶುಚಿಯಾಗಿ ಇಷ್ಟು ಸುಲಭವಾಗಿ ಇಷ್ಟು ಸರಳವಾಗಿ ವಿಷಯವನ್ನು ನಿಶ್ಚಯಿಸಿಬಿಟ್ಟರೆ, ಎಲ್ಲವನ್ನೂ ಸಂಕೀರ್ಣಗೊಳಿಸುವ ಚಿತ್ತದವರಿಗೂ ಜಿಜ್ಞಾಸೆ ಬಹುಮುಖವಾಗಬೇಕೆಂದು ಹಾತೊರೆಯುವವರಿಗೂ ಪಾಶ್ಚಾತ್ಯ ಕುಶಾಗ್ರಮತಿಗಳಿಗೂ ಸಮಾಧಾನ ಉಂಟಾದೀತೆ? ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಅವರು ಕೇಳುತ್ತಲೇ ಇದ್ದಾರೆ. ಉತ್ತರವನ್ನು ಹಿಂಬಾಲಿಸಿಕೊಂಡು ಉತ್ತರ ಬಂದಿದ್ದರೂ ಎಲ್ಲವೂ ಅವರಿಗೆ ಆಯುಕ್ತವಾಗಿ ತೋರಿವೆ. ಯಾವುದು ಕಾವ್ಯ? ಪದ್ಯದಲ್ಲಿ ಬರೆದದ್ದೆಲ್ಲ ಕಾವ್ಯವೆ? ಗದ್ಯದಲ್ಲಿ ಬರೆದದ್ದೂ ಕಾವ್ಯವಾಗಬಹುದೆ? ಗದ್ಯವೂ ಲಯಾತ್ಮಕವಲ್ಲವೆ? ಪದ್ಯಕ್ಕಿರುವಂತೆ ಅಲ್ಲದಿದ್ದರೂ ಅದರದ್ದೇ ಆದ ಛಂದಸ್ಸು ಗದ್ಯಕ್ಕೇಕಿರಬಾರದು? ಪದ್ಯ ಸಾಧಿಸುವ ಸಾಹಸವೇನು? ಗದ್ಯ ನೆರವೇರಿಸುವ ಕಾರ್ಯ ಯಾವುದು? ಕ್ರೈಸ್ತ ಪವಿತ್ರ ಗ್ರಂಥ, ಪ್ಲೇಟೊವಿನ ಸಂವಾದಗಳು ಗದ್ಯದಲ್ಲಿದ್ದರೂ ಎಷ್ಟೋ ಪದ್ಯಕಾವ್ಯಗಳಿಗಿಂತ ಮೇಲ್ಮಟ್ಟದವಲ್ಲವೆ? ಹಾಗಾದರೆ ಪದ್ಯದಲ್ಲಿ ಏನು ಹೆಚ್ಚುಗಾರಿಕೆ ಕುಳಿತಿದೆ?


ಗದ್ಯ ಸಾಧಾರಣ, ಕಾವ್ಯ ಅಸಾಧಾರಣವೆಂದು ನಿರ್ಧಾರ ಹೇಳಿ, ಎರಡನ್ನೂ ವಿಂಗಡಿಸಿ ಇಡಬಹುದೆಂದು ಅನೇಕರು ಭಾವಿಸಿದರು. ಇಲ್ಲಿ ಪದ್ಯ ಹಿಂದಕ್ಕೆ ಸರಿದಿರುವ ಸಂಗತಿಯನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಕು. ಕಾವ್ಯಕ್ಕೆ ಕಾವ್ಯತ್ವವನ್ನು ತಂದುಕೊಡುವ ಮೂಲಾಂಶ ಅಸಾಧಾರಣತೆ ಎಂದಂತಾಯಿತು. ಇರಲಿ. ಆ ಮೂಲಾಂಶ ಗಮನೀಯವಾದ ಪ್ರಮಾಣದಲ್ಲಿ ಗದ್ಯದಲ್ಲೂ ಕಂಡುಬಂದರೆ ಅದೂ ಕಾವ್ಯವೇ ಆಗುತ್ತದೆ ಅಲ್ಲವೆ?. ತರ್ಕಸಮ್ಮತವಾದ ಈ ಅನುಮೇಯವನ್ನು ಸಕಲರೂ ಸ್ವೀಕರಿಸಬೇಕಾಯಿತು. ಅಲ್ಲೊಬ್ಬ ಇಲ್ಲೊಬ್ಬ ವಿಮರ್ಶಕನಿಗೆ ಅದರಲ್ಲಿ ಏನೊ ಆಭಾಸ. ಮಬ್ಬುಮಬ್ಬಾಗಿ ಕಾಣುತ್ತಿದೆಯೆಂದು ಭಾಸವಾದರೂ ತಲೆಮಾರು ತಲೆಮಾರಿನ ಚರ್ಚೆಯ ಪರಿಣಾಮವಾಗಿ ಕುದುರಿನಿಂತ ಅಭಿಪ್ರಾಯಗಳು ಮೂರು: ಪದ್ಯ (ವರ್ಸ್) ಕಾವ್ಯಕ್ಕೆ ಒಂದು ಭೂಷಣವಾದರೂ ಕಾವ್ಯದ ಮೂಲಕಾರಣವಲ್ಲ; ಕೆಲವು ಗದ್ಯವನ್ನು ಕಾವ್ಯವೆನ್ನದೇ ಗತ್ಯಂತರವಿಲ್ಲ; ಕಾವ್ಯದ ಕಾವ್ಯತ್ವವನ್ನು ಬೇರೆ ಅಂಶದಲ್ಲಿ ಗುರುತಿಸತಕ್ಕದ್ದು. ಅಂತೂ, ಕಾವ್ಯ ಹೇಗೋ ಅಸಾಧಾರಣವೆಂಬುದು ಉಳಿದೇ ಉಳಿಯಿತು; ಹಲವರಲ್ಲಿ ಅದು ಶೋಧನೆಗೆ ನಿಲುಕದ ರಹಸ್ಯವೆಂಬ ಮೂಢನಂಬಿಕೆ ಬೇರೂರಿತು.


ಅಪೂರ್ವವಾದ ಸಾಲಂಕೃತ ವಾಗ್ಧೋರಣೆಯಿಂದ ಕಾವ್ಯ ಹುಟ್ಟುತ್ತದೆ; ಮಹೋನ್ನತ ಶೈಲಿಯೇ (ದಿ ಗ್ರ್ಯಾಂಡ್ ಸ್ಟೈಲ್) ಕಾವ್ಯದ ಪ್ರಧಾನ ಲಕ್ಷಣವೆಂಬ ತತ್ತ್ವ ಪ್ರಾಚೀನ ರೋಮನರ ಕಾಲದಿಂದ ಮಧ್ಯಯುಗ ಪುರ್ತ ಮಾನ್ಯತೆ ಪಡೆದಿತ್ತು. ಈಗಲೂ ಆ ಭಾವನೆಯ ಪ್ರಭಾವ ಅಳಿಸಿ ಹೋಗಿಲ್ಲ. ಆದರೂ ಶೈಲಿಯನ್ನು ಕಾವ್ಯದ ಆತ್ಮಕ್ಕೆ ಸಂಕೇತವಾಗಿ ಭಾವಿಸುವುದು ಸಕ್ರಮವಲ್ಲವೆಂದು ದೃಢಬುದ್ಧಿಯವರಿಗೆ ಅರಿವಾಯಿತು. ಪದದೊಡನೆ ಪದವನ್ನು ಕೂಡಿಸುವ ಬಾಹ್ಯ ವ್ಯಾಪಾರಕ್ಕೆ ಎಷ್ಟೇ ಗಾಢವಾದ ವ್ಯಂಜಕತೆ ಇದ್ದರೂ ಅದು ಹೆಚ್ಚು ಕಡಿಮೆ ಕಾವ್ಯದ ಶರೀರಕ್ಕೆ ಸಂಬಂಧಿಸಿದುದು, ಕಾವ್ಯದ ಆಂತರ್ಯವನ್ನೂ ತಿರುಳನ್ನೂ ನಿರ್ದೇಶಿಸುವ ಮಹತ್ಕಾರ್ಯ ಅದರಿಂದ ಆಗಲಾರದು. ಸ್ಥೂಲವಾಗಿ ಕಾವ್ಯ ಶೈಲಿ, ಶಾಸ್ತ್ರಶೈಲಿಗಳನ್ನು ಪ್ರತ್ಯೇಕಿಸಬಹುದು. ಮೂಲತಃ ಅವುಗಳ ಉದ್ದೇಶ, ವಿಧಾನ, ಪರಿಣಾಮಗಳು ಬೇರೆ ಬೇರೆ. ಶೈಲಿಯ ಮೂಲಕ ಗದ್ಯಕಾವ್ಯ ಪದ್ಯ ಕಾವ್ಯಗಳನ್ನು ಸ್ವಲ್ಪಮಟ್ಟಿಗೆ ವಿಂಗಡಿಸಬಹುದಾದರೂ ಕಾವ್ಯಕ್ಕೆ ಶೈಲಿಯೂ ಒಂದು ಸಾಧನವಾಯಿತೇ ಹೊರತು ಕಾವ್ಯತ್ವಕ್ಕೆ ಅದು ಇನ್ನೊಂದು ಹೆಸರಾಗಲಿಲ್ಲ.


ಪದ್ಯ, ಗದ್ಯ, ಕಾವ್ಯ ಎಂಬ ಶಬ್ದಗಳನ್ನು ಹೆಚ್ಚು ಸಂದೇಹಕ್ಕೆ ಅವಕಾಶವೀಯದೇ ಉಪಯೋಗಿಸುತ್ತಿದ್ದ ಸಮಯದಲ್ಲಿ, ಕಾವ್ಯಕ್ಕೆ ಮೀಸಲಾದ ಸಹಜ ಪದ ಕೋಶವಿದೆಯಾಗಿ ಆ ಪದಕೋಶ ಸಂಭಾಷಣೆಯಲ್ಲಿ ಮತ್ತು ಗದ್ಯದಲ್ಲಿ ಬರಕೂಡದು-ಎಂಬ ಅಭಿಮತವಿತ್ತು. ಅಲ್ಪಸ್ವಲ್ಪ ಸತ್ಯಾಂಶದ ಮೇಲೆ ನಿಂತ ಅಭಿಮತ ಅದು. ಕಾವ್ಯವೇ ಆದರೂ ಗದ್ಯ ಹಲಕೆಲವು ಪದಗಳ ಗೋಜಿಗೆ ಹೋಗುವುದಿಲ್ಲ; ಅವು ಪದ್ಯಕ್ಕೆ ಅನುರೂಪವಾಗಿ ಕಂಡುಬರುತ್ತವೆ; ಗದ್ಯ ಅವನ್ನು ಉಪಯೋಗಿಸಿದರೆ ಕಿವಿಗೆ ಅಹಿತವಾಗುತ್ತದೆ; ಕಿವಿಗೆ ಮಧುರವಾಗಿ ಕೇಳಿಸಿದರೂ ಅವುಗಳಿಂದ ಏನೊ ರಸಭಂಗ ಆದಂತೆ ತೋರುವುದು ನಿಶ್ಚಯ. ಹೀಗಿದ್ದರೂ ಕೇವಲ ಪದಗಳನ್ನು ಗದ್ಯ ಪದ್ಯಕ್ಕೆ ಒರೆಗಲ್ಲಾಗಿ ಸನ್ಮಾನಿಸುವುದು ಸಮರ್ಪಕವಲ್ಲ. ರೊಮ್ಯಾಂಟಿಕ್ ಚಳವಳಿ ನಡೆದಮೇಲೆ, ಮಾತುಗಳನ್ನು ಧಾರಾಳವಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯ ಸಾಹಿತಿಗೆ ಅತ್ಯಗತ್ಯವೆಂಬುದನ್ನೂ ವಿದ್ವಾಂಸರಾದವರು ಅಲಕ್ಷಿಸಿಲ್ಲ. ನವ್ಯಕವಿಗಳಂತೂ ಗ್ರಾಮ್ಯ, ಒರಟು, ಅಶ್ಲೀಲ, ಅನ್ಯದೇಶೀಯ, ಯಂತ್ರತಂತ್ರದ ಪರಿಭಾಷೆ ಎಲ್ಲವನ್ನೂ ನಿರ್ವಂಚನೆಯಿಂದ ಆಡಿಬಿಟ್ಟಿದ್ದಾರೆ. ಎಂದರೆ, ಪದ್ಯಕ್ಕೂ ಗದ್ಯಕ್ಕೂ ಅಂತರವೇ ಇಲ್ಲವೆ? ಒಂದರಲ್ಲಿ ಇರುವ ಕಾವ್ಯವನ್ನು ಇನ್ನೊಂದಕ್ಕೆ ಬದಲಾಯಿಸಿದರೆ ಎರಡೂ ಒಂದೇ ತೆರದ ರಸಾಸ್ವಾದವನ್ನು ಒದಗಿಸ ಬೇಕಲ್ಲವೆ? ಕವಿ ತನ್ನ ಇಷ್ಟಬಂದಂತೆ ಅದನ್ನೊ ಇದನ್ನೊ ಕೈಹಿಡಿಯಬಹುದಲ್ಲವೆ? ಇದನ್ನು ಯಾರೂ ಒಪ್ಪಲಾರರು. ಹಾಗಾದರೆ ಎಲ್ಲಿದೆ ವ್ಯತ್ಯಾಸ? ಗದ್ಯಕ್ಕಿಂತ ಪದ್ಯ ಹೆಚ್ಚು ಸಂಕ್ಷಿಪ್ತ, ಹೆಚ್ಚು ಬಲಿಷ್ಠ, ಹೆಚ್ಚು ಧ್ವನಿಯುಕ್ತ, ಹೆಚ್ಚು ಸುಂದರ-ಎಂದಿದ್ದಾರೆ. ರಾಗಾವೇಶವೂ ವಿಭಾವನೆಯ ತೀಕ್ಷ್ಣತೆಯೂ ಒಂದು ಮಟ್ಟವನ್ನು ಮೀರಿದರೆ ಆಗ ಭಾವಾರ್ಥ ನಿರೂಪಣೆಗೆ ಪದ್ಯವೇ ಉಚಿತವೆಂದೂ ನುಡಿದಿದ್ದಾರೆ. ಹೀಗೆ ಸೂತ್ರ ಹೇಳುವ ಅಲಂಕಾರಶಾಸ್ತ್ರಜ್ಞರೂ ಎರಡರ ನಡುವೆ ಇರುವುದು ಭೇದಿಸಲಾಗದ ಕಲ್ಲುಗೋಡೆಯಲ್ಲ, ಆಚೆ ಈಚೆ ಎತ್ತಿ ಇಡಬಲ್ಲ ಬಿದಿರು ಬೇಲಿ-ಎಂಬುದಕ್ಕೆ ಸಮ್ಮತಿ ಸೂಚಿಸಿದ್ದಾರೆ.


ಛಂದಸ್ಸು, ಶೈಲಿ, ಶಬ್ದಪುಂಜ-ಮೊದಲಾದುವನ್ನು ಕೈಬಿಟ್ಟಮೇಲೆ, ಕಾವ್ಯಕ್ಕೆ ಕಾವ್ಯತ್ವವನ್ನು ಅನುಗೂಡಿಸುವ ಅಂಶ ಯಾವುದು? ಇದನ್ನು ಕುರಿತ ಮೀಮಾಂಸೆ 19ನೆಯ ಶತಮಾನದ ಎರಡನೆಯ ಅರ್ಧದಲ್ಲಿ ಬೆಳೆಯುತ್ತ ಬಂತು. 20ನೆಯ ಶತಮಾನದಲ್ಲಿ ಅದು ಇನ್ನೂ ಹೆಚ್ಚಾಗಿ, ಮನಶಾಸ್ತ್ರದ ವಿಕಾಸದಿಂದ ಪುಷ್ಟಿಗೊಂಡು, ಗಹನವಾಯಿತು.


ಕವಿ ಮಾಡುವುದು ವಿಶಿಷ್ಟವಾದೊಂದು ಕರ್ಮ; ಅದು ಒಂದು ಬಗೆಯ ಅನುಕರಣೆ ಎಂಬ ಸಿದ್ಧಾಂತ ಪ್ರಾಚೀನ ಗ್ರೀಕರ ಕಾಲದಿಂದ ನಡೆದು ಬಂದು, ಮೆಚ್ಚಿಕೆಗೆ ಪಾತ್ರವಾಗಿತ್ತು. ಅದಕ್ಕೆ ಟಿಪ್ಪಣಿಯಾಗಿ, ಕಾವ್ಯ ನಮಗೆ ಕೊಡುವುದು ವಾಸ್ತವಿಕತೆಯನ್ನಲ್ಲ, ಅದರ ಹೋಲುವೆಯನ್ನು; ಆದ್ದರಿಂದ ಕಲ್ಪಿತಕಥೆಯೇ (ಫಿಕ್ಷನ್) ಕಾವ್ಯದ ಸಾರಸರ್ವಸ್ವ ಎಂಬ ಅನುಸಿದ್ಧಾಂತವೂ ನಡೆದುಬಂತು. ಕವಿಯ ತನ್ನತನದ ಸೃಷ್ಟಿಕಾರ್ಯವನ್ನು ಅನುಕರಣೆಯೆನ್ನುವುದೂ ನಿಜಕ್ಕಿಂತ ನಿಜವೆಂಬುದು ಪ್ರಭಾವ ಬೀರುವ ಕಾವ್ಯ ವಸ್ತುವನ್ನು ಮಿಥ್ಯಾ ಕಲ್ಪನೆಯೆನ್ನುವುದೂ ಸತ್ಯಕ್ಕೆ ದೂರವೆಂದು ನಿಸ್ಸಂದೇಹ. ಕವಿ ಎಸಗುವುದು ಅನುಕರಣವಲ್ಲ, ಪ್ರತಿಚಿತ್ರಣ ಎಂದು ನಿಶ್ಚಯಿಸಿದ್ದ ಕಾಲವಿತ್ತು. ಮಾನವನಿಗೆ ಆದರ್ಶವಾಗಬಲ್ಲ ವ್ಯಕ್ತಿಗಳನ್ನೂ ಧ್ಯೇಯಗಳನ್ನೂ ಪ್ರತಿಬಿಂಬಿಸಿ ಕಾವ್ಯ ಲೋಕೋಪಕಾರ ಮಾಡುತ್ತದೆ ಎಂಬ ನಂಬಿಕೆಯಿತ್ತು. ಕುರೂಪ ಕೀಳ್ತನ ಕೊಳಕುಗಳೂ ಕಾವ್ಯದಲ್ಲಿ ಪ್ರತಿಪಾದಿತವಾಗತೊಡಗಿದ ತರುವಾಯ, ಪ್ರತಿಚಿತ್ರಣವೆಂಬ ವಿವರಣೆಗೆ ಧಕ್ಕೆ ಉಂಟಾಯಿತು.


ಭಾವ, ಭಾವನೆಗಳನ್ನು ಕಾವ್ಯ ಹೊರಗೆಡಹುತ್ತದೆ ಎಂಬುದು ಸರ್ವರಿಗೂ ವೇದ್ಯವಾದ ಸಂಗತಿ. ಅದನ್ನು ಮನನಗೈದು ವಾಕ್ಯವನ್ನು ಹಿಂದುಮುಂದಾಗಿ ತಿರುಗಿಸಿ, ಕ್ರೋಚೆ ಭಾವಪ್ರದರ್ಶನ ಅಥವಾ ಅಭಿವ್ಯಕ್ತಿಯೇ ಕಾವ್ಯ ಎಂದು ಘೋಷಿಸಿದ. ಎಂದರೆ ಅಭಿವ್ಯಂಜಕತೆ ಸಾಕಷ್ಟು ತೀಕ್ಷ್ಣವಾಗಿರಬೇಕು. ಆದರೆ ಆ ತತ್ತ್ವವನ್ನು ವಿವರಿಸುವಾಗ ಆತನೂ ಆತನ ವ್ಯಾಖ್ಯಾನಕಾರರೂ ಪ್ರಕಾಶನವೆಂಬ ವ್ಯವಹಾರಕ್ಕಿಂತಲೂ ಪ್ರಕಾಶಿತ ಪದಾರ್ಥದ ಮೇಲೆ ತಮ್ಮ ಲಕ್ಷ್ಯವನ್ನು ಹೆಚ್ಚು ಹೆಚ್ಚಾಗಿ ಇಡುತ್ತ ಹೋದರು ಕ್ರೋಚೆ, ಬೆನೆಡೆಟೋ.


ಐ.ಎ.ರಿಚಡ್ರ್ಸ್ ಮೊದಲಾದವರು ಅಭಿವ್ಯಕ್ತಿಯನ್ನು ಮುಂದಣ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ಗಂಭೀರವೂ ಸಂಪುರ್ಣವೂ ಅನ್ಯೋನ್ಯವೂ ಆದ ಅಭಿವ್ಯಕ್ತಿಯಿಂದ ಉತ್ಪತ್ತಿಯಾಗುತ್ತದೆ, ಕಾವ್ಯ. ಗದ್ಯವೂ ಅಭಿವ್ಯಕ್ತಿಶಕ್ತಿಯುಳ್ಳದ್ದೇ. ಆದರೆ ಅದರ ಅಭಿವ್ಯಕ್ತಿ ದಪ್ಪದಪ್ಪ, ವಿವರ ರಹಿತ, ಅಸ್ಪಷ್ಟ, ಒರಟೊರಟು. ಕಾವ್ಯಕ್ಕಾದರೊ ಅದರ ಬಿಗಿ ಬಿಕ್ಕಟ್ಟು ಕಡುಪು ದ್ಯೋತಕಗಳಿಂದ ನಿಕಟ ಪರಿಚಯವನ್ನು ಏರ್ಪಡಿಸುವ ಶಕ್ತಿಯುಂಟು. ಇಲ್ಲಿಯೂ ವ್ಯಾಖ್ಯಾನಕಾರರು ಅಭಿವ್ಯಕ್ತಿ ಕ್ರಮಕ್ಕಿಂತಲೂ ತಿಳಿಸುವ ವಿಷಯದ ಕಡೆಗೆ ಚಿತ್ತವನ್ನು ಒತ್ತರಿಸಿ, ಅಪ್ರಸಂಗಕ್ಕೆ ಎಡೆಯಿತ್ತಿದ್ದಾರೆ.

ಕೆಲವು ನವೀನರು ಇನ್ನೊಂದು ಮತವನ್ನು ಸಾರಿದ್ದಾರೆ. ಅದರಂತೆ ಒಂದೊಂದು ವಾಕ್ಯವೂ ಒಂದೊಂದು ಸಲಕ್ಷಣ ಸೃಷ್ಟಿ; ಅದರದ್ದೇ ಆದ ಅಸ್ತಿತ್ವವನ್ನು ಬಗೆದು ತೃಪ್ತರಾಗಬೇಕೇ ವಿನಾ ಮತ್ತಾವುದನ್ನೂ ಅದರಿಂದ ನಿರೀಕ್ಷಿಸಲಾಗದು. ಅದರ ಸಾಮೀಪ್ಯದಿಂದ ನಮಗೆ ಒಂದು ಅನೂನ ಅನುಭವ ಲಭ್ಯವಾಗುತ್ತದೆ. ಅಷ್ಟು ಸಾಲದೆ, ಸಾಹಿತ್ಯ ವ್ಯಾಸಂಗಕ್ಕೆ? ಹೀಗೆ, ಗದ್ಯ ಪದ್ಯಗಳನ್ನು ವಿಂಗಡಿಸಲು ಹೊರಟ ಎಷ್ಟೊ ಲೇಖನಗಳು ಕ್ಷಿಪ್ರದಲ್ಲಿ ಕಾವ್ಯ ಶಾಸ್ತ್ರಗಳ ವ್ಯತ್ಯಾಸವನ್ನು ಕುರಿತ ನಿಬಂಧಗಳಾಗಿ ಬಿಡುತ್ತವೆ. ಆ ವ್ಯತ್ಯಾಸ ಸುವ್ಯಕ್ತವಾಗಿದೆ: ಒಂದು ರಾಗಪ್ರಧಾನವಾದದ್ದು, ಇನ್ನೊಂದು ಬುದ್ಧಿಪ್ರಧಾನವಾದದ್ದು; ಒಂದರಲ್ಲಿ ವಿಭಾವನೆಯ ಲೀಲೆಯಿದೆ, ಇನ್ನೊಂದರಲ್ಲಿ ತರ್ಕದ ನಡೆದಾಟವಿದೆ; ಒಂದರಿಂದ ನಮಗೆ ಪರಿತೋಷ, ಇನ್ನೊಂದರಿಂದ ಜ್ಞಾನಾರ್ಜನೆ. ಗದ್ಯವೆಂಬ ಒಂದೇ ಪದವನ್ನು ಉಪಯೋಗಿಸಿದರೂ ಶಾಸ್ತ್ರದ ಗದ್ಯ ಬೇರೆ, ಸಾಹಿತ್ಯದ ಗದ್ಯ ಬೇರೆ.

ಗದ್ಯಲಯ[ಬದಲಾಯಿಸಿ]

ಗದ್ಯವೂ ಲಯಾತ್ಮಕವೆಂಬ ನಂಬಿಕೆ ಆದಿಯಿಂದಲೂ ಇದೆ. ಪ್ರಾಚೀನ ಗ್ರೀಕ್, ತತ್ವಬೋಧಕ ಥ್ರಾಸಿಮಕಸ್ ತನ್ನ ಭಾಷಣಗಳಲ್ಲಿ ಲಯದಿಂದ ರಂಜಕವಾದ ಪದಗುಚ್ಛಗಳನ್ನು ಉದ್ದೇಶಪುರ್ವಕವಾಗಿ ತಂದು ಸೇರಿಸುತ್ತಿದ್ದ. ವಿಮರ್ಶಕ ಶಿರೋಮಣಿ ಅರಿಸ್ಟಾಟಲಿನಿಂದ ಈ ವಿಧಿ ಬಳಕೆಗೆ ಬಂತು: ‘ಗದ್ಯ ಲಯಬದ್ಧವಾಗಿರಬೇಕು. ಛಂದೋಬದ್ಧವಾಗಕೂಡದು.’ ವಾಗ್ಮಿಯ ಭಾಷಣವನ್ನು ಆಲಿಸುವಾಗ ಗ್ರೀಕ್ ಶ್ರೋತೃಗಳಿಗೆ ಅಂಗೈ ಕುಟ್ಟುತ್ತ ತಾಳಹಾಕುವ ಅಭ್ಯಾಸವಿತ್ತು. ಸಿಸರೊ ಮಾತನಾಡುತ್ತಿದ್ದಾಗ ರೋಮನರೂ ಹಾಗೆಯೇ ಮಾಡುತ್ತಿದ್ದರಂತೆ.


ಗದ್ಯ ಲಯರಹಿತವಲ್ಲವೆಂದು ಒಪ್ಪಿಕೊಂಡದ್ದಷ್ಟೆ ಅಲ್ಲದೆ ಪ್ರಾಚೀನರು ಅದರ ಲಯಕ್ಕೆ ಪ್ರಸ್ತಾರ ನಿಷ್ಕರ್ಷಿಸುವ ಕಾರ್ಯವನ್ನೂ ನೆರವೇರಿಸಿದರು. ಮೊದಲನೆಯದಾಗಿ, ಪದ್ಯ ಛಂದಸ್ಸಿಗೆ ಅನುರೂಪವಾದ ಗಣಗಳು ಗದ್ಯಕ್ಕೆ ಹೊಂದದಿದ್ದುದನ್ನು ಕಂಡುಕೊಂಡರು, ಎರಡನೆಯದಾಗಿ ಒಂದು ಗುರು ಮೂರು ಲಘುವಿನಿಂದಾದ ಪಿಯನ್ ( - UUU ಅಥವಾ UUU -) ಅಕ್ಷರ ನಮೂನೆ ಗದ್ಯಕ್ಕೆ ಅಚ್ಚುಮೆಚ್ಚು ಎಂಬುದನ್ನು ಅರಿತುಕೊಂಡರು. 1ನೆಯ ಪಿಯನ್ (-UUU) ವಾಕ್ಯದ ಪ್ರಾರಂಭದಲ್ಲಿ ಬಂದರೆ ಚೆಲುವು; 4ನೆಯ ಪಿಯನ್ಗೆ (UUU -) ವಾಕ್ಯದ ಅಂತ್ಯ ಯುಕ್ತಸ್ಥಾನ-ಎಂದು ಅರಿಸ್ಟಾಟಲ್ ತೀರ್ಪು ಹೇಳಿದ. ವಾಕ್ಯದ ನಡುನಡುವೆ ಬರುವ ಲಯಸೂಚಕವಾದ ಪದಗುಚ್ಛಗಳ ಕಡೆಗೆ ಗ್ರೀಕರ ಗಮನ ಅಷ್ಟೊಂದಾಗಿ ಹೋಗಲಿಲ್ಲ. ಅದು ಆಶ್ಚರ್ಯ. ಏತಕ್ಕೆಂದರೆ ಲಯ ಎದ್ದು ಕಿವಿತಾಕಬೇಕಾದರೆ ಎರಡು ಅಂಶಗಳು ಅವಶ್ಯಕ: ಹಿತವಾದ ಪದಗುಚ್ಛದ ನಮೂನೆ (ಎ ಪ್ಯಾಟರ್ನ್ ಆಫ್ ಸಿಲಬಲ್ಸ್) ಮತ್ತು ಅದರ ಪುನರುಕ್ತಿ. ಪುನರುಕ್ತಿ ಕ್ಲುಪ್ತ ಅಂತರಗಳಲ್ಲಿ ನಿಯಮಿತವಾಗಿ ಬಂದರೆ ವಚನ ವಿನ್ಯಾಸ ಛಂದಸ್ಸಾಗುತ್ತದೆ; ಗದ್ಯದಲ್ಲಿ ಪುನರುಕ್ತಿ ಬರಬೇಕು, ಆದರೆ ವ್ಯತ್ಯಸ್ತ ಅಂತರಗಳಲ್ಲಿ.


ರೋಮನರೂ ತಮ್ಮ ಲ್ಯಾಟಿನ್ ಗದ್ಯವಾಕ್ಯಗಳನ್ನು ಪರಿಶೀಲಿಸುವಾಗ ಅಂತ್ಯದ ನಮೂನೆಗಳನ್ನು ಮಾತ್ರ ಆಸಕ್ತಿಯಿಂದ ವಿಮರ್ಶಿಸಿದರು. ಅವರಿಗೆ ಪ್ರಿಯವಾಗಿ ತೋರಿಬಂದ ನಮೂನೆ - ಎರಡು ಗುರು ಒಂದು ಲಘುವಿನ ಕ್ರೀಟಿಕ್ (-U-) ಗಣವನ್ನು ಅನುಸರಿಸಿ ಒಂದು ಗುರು ಒಂದು ಲಘುವಿನ (-U) ಟ್ರೋಕಿ ಅಥವಾ ಒಂದು ಗುರು ಎರಡು ಲಘುವಿನ ಡ್ಯಾಕ್ಟಿಲ್ (-UU) ಬರುವ ವಿನ್ಯಾಸ. ಆ ನಮೂನೆಯನ್ನು ಕ್ಲಾಸ್ಯುಲ ಅಥವಾ ಕುರ್ಸಸ್ ಎಂದು ಅವರು ಕರೆದರು. ಲ್ಯಾಟಿನ್ ಭಾಷೆಯಲ್ಲಿ ಕೆಲವು ಉಚ್ಚಾರಾಂಶಗಳ ಮೇಲೆ ಕೂರುವ ಒತ್ತಿಗೂ ಸ್ವಲ್ಪ ಸ್ಥಾನವಿತ್ತು. ಕುರ್ಸಸ್ ಯಾವ ಬಗೆಯದೇ ಆದರೂ ಅದರ ಕಡೆಯ ಉಚ್ಚಾರಾಂಶದ ಮೇಲೆ ಒತ್ತನ್ನು ಇಟ್ಟರೆ ಲಯದ ನಾದಗತಿ ಕೆಡುತ್ತದೆಂದು ಅವರ ಭಾವನೆ. ಅದರ ಹಿಂದಣ ಅಂಶದ ಮೇಲೆಯೇ ಒತ್ತು ಕಡ್ಡಾಯವಾಗಿ ಇರಬೇಕೆಂದು ನಿಗದಿಮಾಡಿದರು. ಏತಕ್ಕೆಂದರೆ, ಕುರ್ಸಸ್ಸಿನ ಶ್ರವ್ಯತೆಗೆ ಅದರಲ್ಲಿರುವ ಎರಡು ಒತ್ತುಗಳ ಧ್ರುವತೆಯೇ (ಪೋಲ್ಯಾರಿಟಿ) ಮುಖ್ಯಕಾರಣವೆಂದು ಅವರ ನಿಶ್ಚಯ.


ಯುರೋಪಿನ ಇತರ ದೇಶಗಳಾದ ಜರ್ಮನಿ, ರಷ್ಯ, ಸ್ಪೇನ್, ಆಧುನಿಕ ಇಟಲಿ ಮುಂತಾದ ಕಡೆಗಳಲ್ಲಿ ಗದ್ಯಲಯದ ವ್ಯಾಸಂಗ ಸಾಕಾದಷ್ಟು ಆಗಿಲ್ಲ. ಫ್ರಾನ್ಸಿನಲ್ಲಿ ಗದ್ಯಕ್ಕೂ ಪದ್ಯಕ್ಕೂ ಏಕಪ್ರಮಾಣದ ಪ್ರಾಧಾನ್ಯ ಇರುವುದರಿಂದ, ಅಲ್ಲಿನ ಪಂಡಿತರು ಗದ್ಯವನ್ನು ನಾನಾಮುಖಗಳಿಂದ ಪರೀಕ್ಷಿಸಿದ್ದಾರೆ. ವಾಕ್ಯವಿನ್ಯಾಸವನ್ನು ಗೀಟುಗಳ ಮೂಲಕ ನಕ್ಷೆ ಮಾಡಿರುವವರೂ ಉಂಟು. ಇಂಗ್ಲಿಷ್ ಗದ್ಯದ ಲಯ ಪರೀಕ್ಷೆ ಸ್ವಲ್ಪಮಟ್ಟಿಗೆ ಜರುಗಿದೆ. ಆದರೆ ಪಂಡಿತರ ದೃಷ್ಟಿ ಭಿನ್ನ ಭಿನ್ನವಾಗಿದೆ. ಒಬ್ಬರ ಅಭಿಮತವನ್ನು ಇನ್ನೊಬ್ಬರು ಒಪ್ಪುವುದು ಅಪರೂಪ. ಛಂದಸ್ಸಿನ ವಿಚಾರದಲ್ಲೇ ನಾಲ್ಕೈದು ಬೇರೆ ಬೇರೆ ಸಿದ್ಧಾಂತಗಳು ತೀವ್ರವಾಗಿ ಹೋರಾಡುತ್ತಿರುವಾಗ ಹೆಚ್ಚು ಸರಾಗವಾದ ಗದ್ಯಲಯವನ್ನು ಕುರಿತು ಒಮ್ಮತವಿರುವುದು ಸಾಧ್ಯವೆ? ಹಾಗೆ ನಿರೀಕ್ಷಿಸಬಹುದೆ, ನಾವು? ಅದೊಂದು ಕೌತುಕ. ಗದ್ಯಲಯದ ವಿಷಯವಾಗಿ ಪಂಡಿತರಲ್ಲಿ ಕಾಣಬರುವ ಹೊಂದಾಣಿಕೆ ಛಂದಸ್ಸಿನ ವಿಷಯವಾಗಿ ಇಲ್ಲ. ಕೆಲವು ಸಂಗತಿಗಳನ್ನು ಸರಿಸುಮಾರಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಅವನ್ನು ಹೀಗೆ ಪಟ್ಟಿಮಾಡಬಹುದು.

  1. ಗದ್ಯಲಯವನ್ನು ವಿವೇಚಿಸುವಾಗ ಇಡೀ ಪದವನ್ನು ಒಂದು ಅಂಶವಾಗಿ ತೆಗೆದುಕೊಳ್ಳತಕ್ಕದ್ದು; ಪದ್ಯದಲ್ಲಿ ನಡೆಯಬಹುದಾದಂತೆ ಪದಚ್ಛೇದ ನಡೆಯಕೂಡದು.
  2. ಒಂದೇ ಉಚ್ಚಾರಾಂಶದ ಗಣ ಇಂಗ್ಲಿಷಿನಲ್ಲಿ ಹೇರಳವಾಗಿ ಬರುತ್ತದೆ. ಇಂಗ್ಲಿಷ್ ಭಾಷೆ ಸಣ್ಣ ಸಣ್ಣ ಪದಗಳಿಂದ ನಿಬಿಡವಾಗಿದೆ. ಪದ್ಯದ ಛಂದಸ್ಸಿಗೆ ಅದು ನಿಷಿದ್ಧ.
  3. ಭಾವಾರ್ಥದ ಅಥವಾ ತರ್ಕದ ವಿನ್ಯಾಸವೂ ಲಯದ ವಿನ್ಯಾಸವೂ ಗದ್ಯದಲ್ಲಿ ಜೊತೆಯಾಗಿ ಓಡುತ್ತವೆ. ಪದ್ಯದಲ್ಲಿ ಅವು ಜೊತೆಗೂಡಬಾರದು.
  4. ಪದ್ಯದಲ್ಲಿ ಬಾರದಿರುವ ಎರಡೊ ಮೂರೊ ಒತ್ತುಗಳಿಂದ ಕೂಡಿದ ಐದು ಉಚ್ಚಾರಾಂಶಗಳ ಗಣ ಡಾಕ್ಮಿಯಕ್ ಗದ್ಯದಲ್ಲಿ ಬರುತ್ತದೆ. ಪದ್ಯದಲ್ಲಿ ಅತಿ ವಿರಳವಾದ ನಾಲ್ಕಂಶಗಳ ಪಿಯನ್ ಅನ್ನು ಗದ್ಯಕ್ಕೆ ಅಧಿಷ್ಠಾನವೆನ್ನಬಹುದು.
  5. ಗದ್ಯ ವೃತ್ತಗಂಧಿಯಾಗಬಹುದೆ? ಅನೇಕರು ಗದ್ಯಲಯಕ್ಕೆ ಮೀಸಲಾದ ನಾದವಿನ್ಯಾಸಗಳು ಇರುವಾಗ ಅದೇತಕ್ಕೆ ಅಲ್ಲಿಇಲ್ಲಿಯಾದರೂ ಛಂದೋಬದ್ಧವಾಗುವುದಕ್ಕೆ ಪರಿತಪಿಸಬೇಕು-ಎಂದಿದ್ದಾರೆ. ಅಪೂರ್ವವಾಗಿ ಛಂದಸ್ಸಿನ ತುಣುಕು ಬಂದರೆ ಗದ್ಯದ ರುಚಿ ಹೆಚ್ಚುತ್ತದೆಂದು ಕೆಲವರ ನಂಬಿಕೆ. ಲೇಖಕನ ಚಿತ್ತಕ್ಕೆ ಗೋಚರವಾಗದಂತೆ ಎಷ್ಟೋ ಕಡೆ ಛಂದೋಬದ್ಧವೆನ್ನಬಹುದಾದ ಪದುಗುಚ್ಛಗಳು ಹೇಗೊ ಬಂದು ಸೇರಿಬಿಡುತ್ತವೆ. ಆದ್ದರಿಂದ ಅವುಗಳನ್ನು ಪರಿತ್ಯಜಿಸುವುದಕ್ಕೆ ಗದ್ಯಲೇಖಕ ಯಾವಾಗಲೂ ಎಚ್ಚೆತ್ತಿರಬೇಕು.
  6. ಲ್ಯಾಟಿನ್ನಿನ ಕುರ್ಸಸ್ಸನ್ನು ಫ್ರೆಂಚ್ ಇಂಗ್ಲಿಷ್ ಗದ್ಯಗಳಲ್ಲೂ ನೋಡಬಹುದು.
  7. ಅಲ್ಲದೆ ಕುರ್ಸಸ್ಸಿಗೆ ಸದೃಶವಾದ ದೇಶೀಯ ನಾದಗತಿ (ನೇಟಿವ್ ಕ್ಯಾಡೆನ್ಸ್)ಗಳನ್ನು ಗುರುತಿಸಬಹುದು. ಇಂಗ್ಲಿಷಿನ ಅಂಥ ವಿನ್ಯಾಸಗಳ ಕಡೆಯ ಉಚ್ಚಾರಾಂಶದ ಮೇಲೆ ಒತ್ತು ಇರಬಹುದು.

ಒಟ್ಟಿನಲ್ಲಿ ಗದ್ಯಲಯಕ್ಕೆ ಛಂದಸ್ಸಿಗಿಂತ ಹೆಚ್ಚು ವೈವಿಧ್ಯವಿದೆ.

ಬಾಹ್ಯ ಕೊಂಡಿ[ಬದಲಾಯಿಸಿ]

  1. ವಿಶ್ವವಿದ್ಯಾನಿಲಯ ವಿಶ್ವಕೋಶ/ಗದ್ಯ[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ಗದ್ಯ&oldid=1054768" ಇಂದ ಪಡೆಯಲ್ಪಟ್ಟಿದೆ