ಗದುಗಿನ ಶ್ರೀ ವೀರನಾರಯಣ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗದಗ ‘ಕ್ರತುಪುರ’ ಇದು ಗದುಗಿನ ಪುರಾತನ ಹೆಸರು. ಕ್ರತು ಎಂದರೆ ಯಜ್ಞ. ಕ್ರತಕಪುರವೆಂಬ ಯಜ್ಞಪುರ ಜನಮೇಜಯ ರಾಜನು ಇಲ್ಲಿ ಯಜ್ಞ ಮಾಡಿದನೆಂಬ ಪ್ರತೀತಿಯದೆ. ೨೩-೨-೧೨೧೩ರ ಶನಿವಾರದಂದು ಸ್ಥಾಪಿಸಲ್ಪಟ್ಟ ಒಂದು ಶಿಲಾಶಾಸನವು ಇಲ್ಲಿಯ ತ್ರಿಕೂಟೇಶ್ವರ ದೇವಸ್ಥಾನದ ಪ್ರಾಕಾರದ ಗೋಡೆಯಲ್ಲಿದ್ದು ಅದರಲ್ಲಿ ಗದುಗು ಎಂಬ ಶಬ್ಧ ಪ್ರಯೋಗವಿದೆ.

ಇತಿಹಾಸ[ಬದಲಾಯಿಸಿ]

ಶಾಸನಗಳಲ್ಲಿ ಗದುಗು ಎಂಬ ಹೆಸರು ಪ್ರಪ್ರಥವಾಗಿ ಇಲ್ಲಿ ದೊರಕಿದೆ. ಮುಂದೆ ೧೪-೧೫ನೇ ಶತಮಾನದಲ್ಲಿ ಕುಮಾರವ್ಯಾಸ ಬರೆದ ಭಾರತದಲ್ಲಿ ಗದಗು ಎಂಬ ಹೆಸರು ಜನಪ್ರಿಯವಾಯಿತು. ಶಂಕರ ಕವಿಯ ಚೋರಬಸವ ಚರಿತ್ರೆ (೧೭೬೩)ಯಲ್ಲಿ ಮಹಾಕವಿ ಚಾಮರಸ ಹೂಟ್ಟೂರಿನ ಬಗ್ಗೆ ಹೇಳುವಾಗ ‘ನೀಂ ಪುಟ್ಟಿದೆಡೆ ಗದುಗು’ ಎಂದು ಪ್ರಸ್ತಾಪವಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ರಚಿತವಾದ ಕಿಟೆಲ್ ಕೋಶದಲ್ಲಿ ‘ಗದುಗು’ ಎನ್ನುವುದು ಸ್ಥಳನಾಮವೆಂದಿದೆ. ಶಾಸನ ಹಾಗೂ ಸಾಹಿತ್ಯ ಪ್ರಮಾಣಗಳಿಂದಾಗಿ ಗದುಗಿಗೆ ತನ್ನದೇ ಆದ ಕನ್ನಡದ ರೂಪ ನಿಷ್ಪತ್ತಿ ಇರುವುದು ಸ್ಪಷ್ಟ. ಕ್ರತುಪುರ ಎಂಬ ಹೆಸರು ಗದುಗು ಎಂದು ಬದಲಾವಣೆಗೊಳ್ಳುತ್ತಿದ್ದ ಹೊಸದರಲ್ಲಿ ಅಂದರೆ ೯-೧೦ನೇ ಶತಮಾನಗಳ ಮಧ್ಯಾವಧಿಯಲ್ಲಿಯೇ ಕ್ರತುಪುರ ಮಹಾತ್ಮೆ ಎಂಬ ಸ್ಥಳಪುರಾಣವು ರಚಿಸಲ್ಪಟ್ಟಿತು. ಇದು ಭವಿಷ್ಯೋತ್ತರ ಪುರಾಣದ ಒಂದು ಭಾಗ. ಇದು ಸಂಸ್ಕೃತ ಭಾಷೆಯ ಅನುಷ್ಟುಪ್ ಛಂದದಲ್ಲಿದೆ.ಇದು ಮೂಲತ ಶೈವಪುರಾಣ. ಶೈವರು ಹಾಗು ವೈಷ್ಣವರ ಮದ್ಯೆ ವೈಷಮ್ಯ ಮರೆಯಿಸಿ ಸ್ನೇಹ ಮನೋಭಾವ ಹುಟ್ಟಿಸುವುದೇ ಈ ಪುರಾಣದ ಉದ್ದೇಶವಾಗಿತ್ತು. ಶ್ರೀ ವೀರನಾರಯಣ ದೇವಸ್ಥಾನ ಗದುಗಿನಲ್ಲಿ ಶ್ರೀ ವೀರನಾರಯಣ ದೇವಸ್ಥಾನವನ್ನು ಹೊಯ್ಸಳ ವಿಷ್ಣುವರ್ಧನನು ೧೧೧೭ರಲ್ಲಿ ತಮ್ಮ ಗುರು ಶ್ರೀ ರಾಮಾನುಜಾಚಾರ್ಯರರ ಆಜ್ಞೆಯ ಪ್ರಕಾರ ಕಟ್ಟಿಸಿದನೆಂಬ ಪ್ರತೀತಿಯಿದೆ. ಅವನು ಕಟ್ಟಿಸಿದ ಪಂಚನಾರಯಣ ದೇವಾಲಯಗಳಲ್ಲಿ ಇದೂ ಒಂದು. ೧೦೩೭ರ ಒಂದು ಶಾಸನದ ಪ್ರಕಾರ ದಾಮೋದರ ಶೆಟ್ಟಿ ಎನ್ನುವ ಭಕ್ತರೊಬ್ಬರು ದೇವಾಲಯಕ್ಕೆ ಭೂದಾನ ಮಾಡಿದ ಉಲ್ಲೇಖವಿದೆ. ಈ ದೇವಾಲಯವೆ ಶ್ರೀ ವೀರನಾರಯಣ ದೇವಸ್ಥಾನ. ಇದನ್ನು ನಿರ್ಮಿಸಿದವನು ಮದ್ದಿಮಯ್ಯ ನಾಯಕನೆಂದು, ಅಲ್ಲಿ ದೀಪ ಸ್ತಂಭ ನಿಲ್ಲಿಸಿದವನು ಅವನ ಮಗನೆಂದು ತಿಳಿದುಬರುತ್ತದೆ. ೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನನು ಕಟ್ಟಿಸಿದ ಈ ದೇವಸ್ಥಾನದಲಿ ವೀರನಾರಯಣ ಮೂರ್ತಿಯು ರಾಜಕೀಯ ದಾಳಿಯಿಂದಾಗಿ ಭಗ್ನವಾದಾಗ ಸ್ಥಾನಿಕ ಆಚಾರ್ಯನಾದ ಕಾಳಾಮುಖ ಶೈವ ಪಂಥದ ಕ್ರಿಯಾಶಕ್ತಿ ಹಾಗೂ ವಿಶ್ವಕರ್ಮ ಸಮಾಜದ ವಾಮದೇವ ಎನ್ನುವವರು ಈ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿರಬಹುದು ಎಂದು ತಿಳಿಯಲಾಗುತ್ತಿದೆ. ಇಮ್ಮಡಿ ಹರಿಹರನ .ಕ್ರಿ,ಶ.೧೩೭೮ರ ದತ್ತಿ ಕೊಡುಗೆಗಳನ್ನು ಹೇಳುವ ತಾಮ್ರ ಶಾಸನವೊಂದು ಕ್ರಿಯಾಶಕ್ತಿ ಆಚಾರ‍್ಯರು ಆ ದೊರೆಗಳ ಗುರುಗಳಾಗಿದ್ದರು ಎಂದು ತಿಳಿಸುತ್ತದೆ. ಆದ್ದರಿಂದ ೧೩೭೯ರ ತಾಮ್ರ ಫಲಕಗಳಲ್ಲಿ ರಾಜಗುರುವಾದ ಶ್ರೀಮದ್ ರಾಜಗುರು ಮಹಾಮಂಡಳಾಚಾರ್ಯ ವಾಣೀವಿಲಾಸ ಕ್ರಿಯಾಶಕ್ತಿಯ ಸೂಚನೆಯ ಮೇರೆಗೆ ಇಮ್ಮಡಿ ಹರಿಹರನು ಕೊಟ್ಟ ದಾನಗಳ ಬಗ್ಗೆ ಉಲ್ಲೇಖ ಸಿಗುತ್ತದೆ.

ಶ್ರೀ ವೀರನಾರಯಣ ದೇವಸ್ಥಾನದ ಸ್ವರೂಪ[ಬದಲಾಯಿಸಿ]

ಶ್ರೀ ವೀರನಾರಯಣ ದೇವಸ್ಥಾನವು ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರದ ಶಿಲ್ಪಗಳ ಸುಂದರ ಸಂಗಮವಾಗಿದೆ. ಗೋಪುರವು ವಿಜಯನಗರದ ಶಿಲ್ಪ, ಗರ್ಭಗುಡಿ ಹಾಗೂ ಅದರ ಮೇಲಿನ ಗೋಪುರಗಳು ಚಾಲುಕ್ಯ ಶಿಲ್ಪಗಳನ್ನು ತೋರಿಸುತ್ತದೆ. ದೇವಸ್ಥಾನದ ಭವ್ಯ ಮಹಾದ್ವಾರವು ಪೂರ್ವಾಭಿಮುಖವಾಗಿದೆ.ಒಳಗೆ ಪ್ರವೇಶಿಸಿದ ಕೂಡಲೇ ಗರುಡಗಂಬವಿದೆ. ಗರುಡಗಂಬದ ಹಿಂದಿನ ಓಕಳಿ ಬಾವಿಯ ಹತ್ತಿರ ಶ್ರೀ ವೈಷ್ಣವರ ತ್ರಿಪುಂಡ್ರಗಳಿವೆ. ಅದರ ಮುಂದೆ ಕಲ್ಲಿನ ರಥದಂತೆ ಕಾಣುವ ಗರುಡ ದೇವರ ಗುಡಿಯಿದೆ. ಇಲ್ಲಿ ಗರುಡ ದೇವನು ಶ್ರೀ ವೀರನಾರಯಣ ದೇವರ ಎದುರು ಕೈಮುಗಿದುಕೊಂಡು ನಿಂತ ಮೂರ್ತಿಯಿದೆ. ಹಾಗೇ ನಾಲ್ಕು ಮೆಟ್ಟಲು ಏರಿ ಮೇಲೆ ಹೋದರೆ ರಂಗಮಂಟಪವಿದೆ. ಇಲ್ಲೀಯೇ ‘ಕುಮಾರವ್ಯಾಸ ಕಂಬ’ವಿದೆ. ಕುಮಾರ ವ್ಯಾಸನು ಅಲ್ಲೀಯೆ ಕುಳಿತು ‘ಕರ್ಣಾಟಕ ಭಾರತ ಕಥಾಮಂಜರಿ’ಯನ್ನು ಬರೆದನೆಂದು ಪ್ರತೀತಿ. ಈ ರಂಗ ಮಂಟಪ ದಾಟಿ ಹೋದರೆ ಮಧ್ಯರಂಗ,ಇಲ್ಲಿಯೇ ನಿಂತು ಎಲ್ಲರೂ ವೀರನಾರಯಣನ ದರ್ಶನ ಪಡೆದುಕೊಳ್ಳುತ್ತಾರೆ. ಇಲ್ಲಿ ವೀರನಾರಯಣ ಸ್ವಾಮಿಯ ಅಪೂರ್ವ ವಿಗ್ರಹವಿದೆ. ಇದು ನೀಲಮೇಘ ಶ್ಯಾಮ ವರ್ಣದ ಶಾಲಿಗ್ರಾಮ ಶಿಲೆಯಲ್ಲಿದೆ. ಕಿರೀಟ,ಕರ್ಣಕುಂಡಲಿ, ಶಂಖ,ಚಕ್ರ, ಗದಾ, ಪದ್ಮ, ಅಭಯ ಹಸ್ತಗಳಿಂದ ಭೂಷಿತನಾದ ಸ್ವಾಮಿಯ ಶಿಲೆಯಲ್ಲಿಯೇ ವೀರಗಚ್ಚೆ ಹಾಕಿ ನಿಂತಿದ್ದಾನೆ. ವಿಶಾಲ ವಕ್ಷಸ್ಥಲದಲ್ಲಿ ಲಕ್ಷೀ, ಹಿಂದಿನ ಪೀಠ ಪ್ರಭಾವಳಿಯಲ್ಲಿ ದಶವತಾರ, ಎಡಬಲಗಳಲ್ಲಿ ಲಕ್ಷೀ, ಗರುಡರು ನಿಂತಿದ್ದಾರೆ. ಸ್ವಾಮಿಯ ದರ್ಶನ ಮಾಡಿಕೊಂಡು ದಕ್ಷಿಣ ದ್ವಾರದಿಂದ ಹೊರಗೆ ವಿಶಾಲ ಕೆರೆಕಟ್ಟೆಯಿದೆ. ದೇವಸ್ಥಾನದ ಆವರಣದಲ್ಲಿ ಕೇಶವದಾಸ ಸಾಹುಕಾರರು ಕಟ್ಟಿಸಿದ ಧರ್ಮಶಾಲೆಯಿದೆ. ದಕ್ಷಿಣ ಮಹಾದ್ವಾರದಿಂದ ಒಳಗೆ ಬಂದರೆ ಎಡಗಡೆಗೆ ಸರ್ಪೇಶ್ವರ ಶಿವಲಿಂಗವಿದೆ. ಈ ದ್ವಾರದಿಂದ ಮುಂದೆ ಇರುವ ಹಾಳುದಿಬ್ಬದಲ್ಲಿ ಯಜ್ಞಶಾಲೆಯಿದೆ. ಇದರ ಮುಂದೆ ಚಾಲುಕ್ಯ ಮಾದರಿ ಗುಡಿಯಲ್ಲಿ ಲಕ್ಷೀನರಸಿಂಹ ದೇವಸ್ಥಾನವಿದೆ. ಈ ಲಕ್ಷೀನರಸಿಂಹ ದೇವಾಸ್ಥಾನದ ಎಡಗಡೆಗೆ ಇರುವ ಬಾವಿಗೆ ನರಸಿಂಹ ತೀರ್ಥವೆಂದೇ ಹೆಸರಿದೆ.

ವೃಂದಾವನ[ಬದಲಾಯಿಸಿ]

ಶ್ರೀ ಲಕ್ಷೀ ನರಸಿಂಹ ದೇವಸ್ಥಾನದ ಎದುರು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನವಿದೆ. ಈ ವೃಂದಾವನದ ಮೇಲೊಂದು ಚಿಕ್ಕ ಮಾರುತಿಯ ಅಷ್ಟಭುಜ ಮೂರ್ತಿಯಿದೆ. ಗುಡಿಯ ಪಶ್ಚಿಮ ಭಾಗದಲ್ಲಿ ಕಾನನವಿದ್ದು, ದೇವರಿಗೆ ಬೇಕಾದ ತುಳಸಿ, ಫಲ ಪುಷ್ಪಗಳು ವಿಪುಲವಾಗಿ ಬೆಳೆಯಲಾಗುತ್ತಿತ್ತು ಎಂಬ ಪ್ರತೀತಿಯಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಎಂ ಹೆಚ್ ಹರಿದಾಸ, ಗದುಗಿನ ಶ್ರೀ ವೀರನಾರಯಣ ಕ್ಷೇತ್ರ ದರ್ಶನ, ವಿಕ್ರಮ ಪ್ರಕಾಶನ, ಗದಗ, ೨೦೦೬.