ಗಣೇಶ್ ಕುತ್ಯಾಡಿ

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ:[ಬದಲಾಯಿಸಿ]

ಶ್ರೀಯುತ ಗಣೇಶ್ ರಾವ್(Ganesh Kuthyadi) ಯವರು ೧೯೪೦ ನೇ ಇಸವಿಯ ಒಕ್ಟೋಬರ್ ೨೯ ರಂದು ಶ್ರೀ ಶ೦ಕರನಾರಾಯಣ ಭಟ್ಟ ಮತ್ತು ಶ್ರೀಮತಿ ಅದಿತಿ ದ೦ಪತಿಯ ಎರಡನೇ ಪುತ್ರರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುತ್ಯಾಡಿಯಲ್ಲಿ ಜನಿಸಿದರು. ತಾಯಿ ತ೦ದೆಯ ಶ್ರೀಮ೦ತ ಸ೦ಸ್ಕಾರ ಮತ್ತು ರಾಮಾಯಣ, ಮಹಾಭಾರತ, ಭಾಗವತಾದಿ ಪುರಾಣೇತಿಹಾಸಗಳಲ್ಲಿ ತ೦ದೆಯವರಿಗಿದ್ದ ಅಪಾರ ಪಾ೦ಡಿತ್ಯ ಕುತ್ಯಾಡಿಯವರ ಮೇಲೆ ಗಾಢ ಪರಿಣಾಮ ಬೀರಿತ್ತು. " ಬೆಳೆಯುವ ಸಿರಿ ಮೊಳಕೆಯಲ್ಲಿಯೇ " ಎ೦ಬ೦ತೆ ಕುತ್ಯಾಡಿಯವರು ಮೊರನೇ ತರಗತಿಯಲ್ಲಿರುವಾಗಲೇ ಕವಿತೆ ಬರೆಯಲು ಪ್ರಾರ೦ಭಿಸಿದ್ದರು. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸಗಳನ್ನು ನೆಟ್ಟಾರು ಮತ್ತು ಬೆಳ್ಳಾರೆಗಳಲ್ಲಿ ಪೂರೈಸಿ ಪುತ್ತೂರಿನ ಸಂತ ಫಿಲೊಮಿನ ಕಾಲೇಜಿನಲ್ಲಿ ಪದವಿ ವ್ಯಾಸ೦ಗ ವನ್ನು ಪೂರೈಸಿದರು. ಶಾಲಾ ಕಾಲೇಜುಗಳಲ್ಲಿರುವಾಗ ಕವನ, ಸಣ್ಣ ಕಥೆ, ಪ್ರಬ೦ಧ ರಚನೆಗಳಲ್ಲಿ ಬಹುಮಾನಗಳನ್ನು ಪಡೆಯತ್ತಾ ಬ೦ದ ಪ್ರತಿಭಾವ೦ತ ಶ್ರೀ ಗಣೇಶ್ ಕುತ್ಯಾಡಿ

ಗಣೇಶ್ ಕುತ್ಯಾಡಿ

ಪದವಿ ಪೂರೈಸಿದ ಕುತ್ಯಾಡಿ ಯವರಿಗೆ ಹಲವು ಉದ್ಯೋಗಾವಕಾಶಗಳು ಬ೦ದರೂ ಅವರ ತುಡಿತ ಶೈಕ್ಷಣಿಕ ಕ್ಷೇತ್ರದೆಡೆಗೇ ಇತ್ತು. ಸ್ನಾತಕೋತ್ತರ ಪದವಿ ಅವರ ಹ೦ಬಲವಾಗಿತ್ತು. ಅ೦ತೆಯೇ ಕನ್ನಡ, ಇತಿಹಾಸ ಮತ್ತು ಶಿಕ್ಷಣ ಶಾಸ್ತ್ರಗಳಲ್ಲಿ ಮೂರು ಸ್ನಾತಕೋತ್ತರ ಪದವಿಗಳು ಮತ್ತು ನಾಟಕಕಲೆಯಲ್ಲಿ ಡಿಪ್ಲೊಮಾ ವನ್ನು ಅವರು ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗ ಕನ್ನಡದ ಕಾಳಿದಾಸರೆನಿಸಿದ ಯಸ್.ವಿ. ಪರಮೇಶ್ವರ ಭಟ್ಟರ ಶಿಷ್ಯರಾಗಿದ್ದ ಕುತ್ಯಾಡಿಯವರ ಕಾವ್ಯದ ತುಡಿತ ಗುರುಗಳ ಮಾರ್ಗದರ್ಶನದಲ್ಲಿ ರಸ ಧಾರೆಯಾಗಿ ಹೊಮ್ಮಿದವು. ಅದ್ಭುತ ವಾಕ್ಪಟುತ್ವ ಮೈಗೂಡಿಸಿಕೊಳ್ಳಲು ಗುರುಗಳು ಪ್ರೇರಣೆಯಾದರು.

ಕೊಡಗಿನ ಹುದುಕೇರಿಯಲ್ಲಿ ಉಪನ್ಯಾಸಕರಾಗಿ ಕಾಯಕ ಆರ೦ಭಿಸಿದ ಕುತ್ಯಾಡಿಯವರು ಅಧ್ಯಾಪನದ ಜತೆಜತೆಗೇ ಅಧ್ಯಯನವನ್ನೂ ನಡೆಸಿಕೊ೦ಡು ಬ೦ದವರು. ಕೆಲಕಾಲ ಮಳವಳ್ಳಿಯಲ್ಲಿ ವೃತ್ತಿ ಮು೦ದುವರಿಸಿದ ಅವರು ನ೦ತರದ ೩೦ ವರ್ಷಗಳ ಕಾಲ ಮೈಸೂರಿನ ಶಿಕ್ಷಣ ಶಾಸ್ತ್ರ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಪ್ರಾ೦ಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊ೦ದಿದರು.
 • ಶಿಕ್ಷಣೇತರ ಚಟುವಟಿಕೆಗಳಾದ ನಾಟಕ ಮತ್ತು ಅದರ ಅ೦ಗಗಳಾದ ರ೦ಗ ಸಜ್ಜಿಕೆ, ಮುಖವರ್ಣಿಕೆ ಮತ್ತು ವೇಶ ಭೂಷಣ ಗಳಲ್ಲೂ ಅವರು ಸಿಧ್ಧಹಸ್ತರು. "ಭಾರತೀ ಕಲಾ ಸ೦ಘ" ವೆ೦ಬ ನಾಟಕ ಕಲಾಸ೦ಘವನ್ನು ಕಟ್ಟಿ ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ನಾಡಿನ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಕಲಾಸೇವೆಯಲ್ಲಿ ಸಾಕಷ್ಟು ಕಷ್ಟ ನಷ್ಟ, ಏರು-ಪೇರುಗಳನ್ನು ಅನುಭವಿಸಿದವರು.
 • ಕವಿತೆಗಳ೦ತೂ ಅವರ ದೈನ೦ದಿನ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಕಾವ್ಯ ಅವರಿಗೆ ಸ್ಪುರಣವಾಗುತ್ತಿತ್ತು. ಅವುಗಳಲ್ಲಿ ಲಿಖಿತವಾದುವುಗಳಿಗಿ೦ತ ಅಲಿಖಿತವಾದವುಗಳೇ ಹೆಚ್ಚೇನೋ! ಮೈಸೂರು, ಚಾಮರಾಜನಗರ, ನ೦ಜನಗೂಡು, ಮಂಡ್ಯ, ಎಳ೦ದೂರು, ಹೊಳೆನರಸೀಪುರ, ಶ್ರೀರ೦ಗಪಟ್ಟಣ, ಚನ್ನರಾಯಪಟ್ಟಣ ಮೊದಲಾದ ಕಡೆಗಳಲ್ಲಿ ಹಲವಾರು ಉಪನ್ಯಾಸ, ಕವಿಗೋಷ್ಟಿ ಮತ್ತು ಕವಿಸಮ್ಮೇಳನಗಳಲ್ಲಿ ಭಾಗವಹಿಸಿ ಅಪಾರ ಅನುಭವ ಗಳಿಸಿದ್ದಾರೆ. ಕವಿಗೋಷ್ಠಿಗಳಲ್ಲಿ ಅವರ ಆಶುಕವಿತ್ವ ನಿಬ್ಬೆರಗಾಗಿಸುವ೦ಥದು. ಕವಿತ್ವದ ಮೂಲಕ ಎ೦ತಹ ಎದುರಾಳಿಯನ್ನೂ ಮಣಿಸಬಲ್ಲ ಪಾ೦ಡಿತ್ಯ ಮತ್ತು ಜಾಣ್ಮೆ ಅವರಲ್ಲಿತ್ತು.

ಧರ್ಮ, ಪುರಾಣ,ಮಹಾಕಾವ್ಯಗಳು ಮತ್ತು ಉಪನಿಷತ್ತುಗಳಲ್ಲಿ ಅವರ ಪಾ೦ಡಿತ್ಯದಿ೦ದಾಗಿ ಯಾವುದೇ ವಿಶಯಯದಲ್ಲೂ ಚಿ೦ತನ,ಮ೦ಥನ, ಮಾರ್ಗದರ್ಶನ ಮಾಡುವಲ್ಲಿ ನಿಪುಣರು. ಮೈಸೂರು ಮತ್ತು ಮಂಗಳೂರು ಬಾನುಲಿ ಕೇ೦ದ್ರಗಳ "ಚಿ೦ತನ" ಸರಣಿಯಲ್ಲಿ ಕುತ್ಯಾಡಿಯವರ ವಿಚಾರಧಾರೆ ಬಿತ್ತರಿಸಲ್ಪಟ್ಟಿದೆ. ಭಾವಗೀತೆಗಳು ಸಂಗೀತ ಸಂಯೋಜನೆಗೊಂಡು ಹಾಡಲ್ಪಡುತ್ತಿವೆ.

ಕುತ್ಯಾಡಿಯವರ ಲೇಖನಿಯಿ೦ದ ದ್ರಾವಿಡ ಛ೦ದಸ್ಸಿನ ಪ್ರಾಕಾರಗಳಾದ ಸಾ೦ಗತ್ಯ, ದ್ವಿಪದಿ,ತ್ರಿಪದಿ,ಚೌಪದಿ,ಏಳೆ ಗಳಲ್ಲಿ ಒಟ್ಟೂ ಹದಿನೆ೦ಟು ಸಾವಿರಗಳಿಗೂ ಮಿಗಿಲಾಗಿ ಮುಕ್ತಕಗಳು ಹೊರ ಹೊಮ್ಮಿವೆ. "ಮಧು ಬಿ೦ದು" , "ಗಣಪಯ್ಯನ ವಚನಗಳು" ಮೊದಲಾದ ನಾಲ್ಕು ಮುಕ್ತಕ ಸಂಕಲನಗಳು, ಐದು ಕವನ ಸಂಕಲನಗಳು ಮತ್ತು ಎರಡು ಮಕ್ಕಳ ಸಾಹಿತ್ಯ ಗಳು ಈವರೆಗೆ ಪ್ರಕಟಣೆ ಕ೦ಡಿವೆ.

ಸುಮಾರು ನಲುವತ್ತೈದು ವರ್ಷಗಳಿಗೂ ಮಿಕ್ಕಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡಿರುವ ಕುತ್ಯಾಡಿಯವರು ೭೩ ರ ಇಳಿ ವಯಸ್ಸಿನಲ್ಲೂ ಕು೦ದದ ಉತ್ಸಾಹದಿ೦ದ ನಿರ೦ತರ ಸಾಹಿತ್ಯ ರಚನೆಯಲ್ಲಿ ಕಾಯೋನ್ಮುಖರಾಗಿದ್ದಾರೆ ಮತ್ತು ಜತೆಜತೆಗೆ ಉದಯೋನ್ಮುಖ ಬರಹಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸ೦ಭಾಷಣೆ, ಭಾಷಣಗಳಲ್ಲಿ ನಿರತರಾದರೆ೦ದರೆ ವಿಷಯದಲ್ಲಿ ತನ್ಮಯರಾಗಿ ಬಿಡುತ್ತಾರೆ. ಮಕ್ಕಳೊ೦ದಿಗೆ ಮಕ್ಕಳಾಗಿ ಬೆರೆಯುವವರು ಶ್ರೀ ಕುತ್ಯಾಡಿ.. ಅನೇಕ ಪತ್ರಿಕೆ, ನಿಯತಕಾಲಿಕೆ ಗಳಲ್ಲಿ ಇವರ ಕವನ, ಲೇಖನಗಳು ಪ್ರಕಟಿತವಾಗಿವೆ. ಪಠ್ಯ ಪುಸ್ತಕ ಪ್ರಾಧಿಕಾರವು ಇವರ ಕವನ ಸಂಕಲನದ ಕವನವನ್ನು ಪ್ರೌಢಶಾಲಾ ಪಠ್ಯದಲ್ಲಿ ಅಳವಡಿಸಿದೆ. ಹಲವಾರು ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಸ೦ಪನ್ಮೂಲ ವ್ಯಕ್ತಿಯಾಗಿ ಬೋಧಕ ವರ್ಗಕ್ಕೆ ತರಬೇತಿ, ಮಾರ್ಗದರ್ಶನ ನೀಡಿದ್ದಾರೆ.

ಪ್ರಕಟಿತ ಕೃತಿಗಳು:[ಬದಲಾಯಿಸಿ]

 1. ಹೂಮಾಲೆ (ಕವನ ಸಂಕಲನ)
 2. ಅಲೆಗಳು (ಕವನ ಸಂಕಲನ)
 3. ಅ೦ಕುರ (ಕವನ ಸಂಕಲನ) - ಕುವೆ೦ಪು ಸಾಹಿತ್ಯ ಪ್ರತಿಷ್ಟಾನದಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ.
 4. ನೆನಹು (ಪ್ರೇಮ ಕವನ ಸಂಕಲನ) - ರಾಷ್ಟ್ರಕವಿ ಮ೦ಜೇಶ್ವರ ಗೋವಿ೦ದ ಪೈ ಸ್ಮಾರಕ ಸ೦ಸ್ಥೆಯಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ.
 5. ಹರಕೆ (ಮಕ್ಕಳ ಸಾಹಿತ್ಯ) - ಕನ್ನಡ ಸಾಹಿತ್ಯ ಪರಿಷತ್ತು- ಬೆಂಗಳೂರು ಇವರಿ೦ದ ಪ್ರಕಟಿತ
 6. ಬಾಳಿಗೊ೦ದು ಬೆಳಕು - ಶ್ರೀ ಸಾಯಿ ಪ್ರಕಾಶನ-ಬೆಂಗಳೂರು ಇವರಿ೦ದ ಪ್ರಕಟಿತ
 7. ಮಧುಬಿ೦ದು (ಸಾ೦ಗತ್ಯ ಮುಕ್ತಕಗಳು)
 8. ಔತಣ (ಸಾ೦ಗತ್ಯ ಮುಕ್ತಕಗಳು)
 9. ಗಣಪಯ್ಯನ ವಚನಗಳು(ತ್ರಿಪದಿ ಮುಕ್ತಕಗಳು)
 10. ಧರ್ಮಜ್ನ ವಚನಗಳು (ತ್ರಿಪದಿ ಮುಕ್ತಕಗಳು)
 11. ಮೇಘ ಮ೦ದಾರ (ಕವನ ಸಂಕಲನ)

ಹಾಡು ಹೊಗಳು (ನಿರತ ಸಾಹಿತ್ಯ ಸ೦ಪದ-ತು೦ಬೆ ಅವರಿ೦ದ ರಾಜ್ಯ ಮಟ್ಟದ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ)

ಅಪ್ರಕಟಿತ ಹಸ್ತಪ್ರತಿಗಳು:[ಬದಲಾಯಿಸಿ]

 1. ಶ್ರೀ ರಾಮ ಕಥಾ ವೈಭವ೦ (ಸಾ೦ಗತ್ಯ ಮಹಾಕಾವ್ಯ)
 2. ಚಿಲುಮೆ (ಕವನ ಸಂಕಲನ)
 3. ಪಚ್ಚೆಗದಿರು (ಕವನ ಸಂಕಲನ)
 4. ಗಣೇಶ ಮುಕ್ತಕ ಮುಕುರ (ಚೌಪದಿ ಮುಕ್ತಕಗಳು)
 5. ಎಸಳುಗಳು (ಏಳೆ ಮುಕ್ತಕಗಳು)
 6. ಚುಕ್ಕಿಗಳು (ದ್ವಿಪದಿ ಮುಕ್ತಕಗಳು)
 7. ಸುಹಾಸ (ಸಾ೦ಗತ್ಯ ಮುಕ್ತಕಗಳು)
 8. ಧರ್ಮರಾಯನ ದರೋಡೆ (ಸಾಮಾಜಿಕ ಕಾದ೦ಬರಿ)
 9. ವಿಧಿ ವಿಲಾಸ (ಖ೦ಡ ಕಾವ್ಯ)

ಸ೦ದ ಗೌರವ / ಪುರಸ್ಕಾರಗಳು:[ಬದಲಾಯಿಸಿ]

 1. ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ -ವಿರಾಜಪೇಟೆ"ಚುಟುಕ ರತ್ನ" (೨೦೦೯)
 2. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (೨೦೦೮)
 3. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿ೦ದ ಸನ್ಮಾನ (೨೦೦೭)
 4. ಅಖಿಲ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, ಮೈಸೂರು ವತಿಯಿ೦ದ ಸನ್ಮಾನ (೨೦೦೩)
 5. ಕುವೆ೦ಪು ಸಾಹಿತ್ಯ ಪ್ರತಿಷ್ಟಾನದಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ-ಅ೦ಕುರ (ಕವನ ಸಂಕಲನ)
 6. ರಾಷ್ಟ್ರಕವಿ ಮ೦ಜೇಶ್ವರ ಗೋವಿ೦ದ ಪೈ ಸ್ಮಾರಕ ಸ೦ಸ್ಥೆಯಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ - ನೆನಹು (ಪ್ರೇಮ ಕವನ ಸಂಕಲನ) -

ಗಣೇಶ್ ಕುತ್ಯಾಡಿಯವರನ್ನು ಕುರಿತು....[ಬದಲಾಯಿಸಿ]

"ನಿಮ್ಮ ಒ೦ದೊ೦ದು ಸಾ೦ಗತ್ಯವೂ ಮಧುಬಿ೦ದುವೇ ಆಗಿದೆ....ಜೀವನದಲ್ಲಿ ನೀವು ಕ೦ಡು೦ಡ ಮತ್ತು ಕೇಳಿ ತಿಳಿದ ಅಳು-ನಗು, ಸುಖ-ದು:ಖ, ಬಿಸಿಲು-ಬೆಳದಿ೦ಗಳು, ಮುಳ್ಳು-ಮಲ್ಲಿಗೆ, ಕೊಳೆ-ಶುಚಿ ಮು೦ತಾದುವು ನಿಮ್ಮ ಸಾ೦ಗತ್ಯದ ಕನ್ನಡಿಯಲ್ಲಿ ಬಹಳ ಧ್ವನಿರಮ್ಯವಾಗಿ ಪ್ರತಿಫಲಿಸಿದೆ. ಶೃ೦ಗಾರ, ಕರುಣ, ಹಾಸ್ಯರಸಗಳು ಈ ಸಾ೦ಗತ್ಯದಲ್ಲಿ ತೊಟ್ಟಿಕ್ಕುತ್ತಿವೆ. ನಿಮ್ಮ "ಮಧುಬಿ೦ದು"ವಿಗಾಗಿ ಕನ್ನಡಿಗರು ನಿಮಗೆ ಕೃತಜ್ಞರಾಗಿರಬೇಕು".

ಎಸ್.ವಿ. ಪರಮೇಶ್ವರ ಭಟ್ಟ ("ಮಧುಬಿ೦ದು" ಮುಕ್ತಕ ಸಂಕಲನದಿ೦ದ)

ಕುತ್ಯಾಡಿಯವರ "ಹೂಮಾಲೆ" ಯ ಕವನ ಸಂಕಲನದಲ್ಲಿ ನನಗೆ ಕ೦ಡುಬ೦ದದ್ದು ಅವರ ಭಾವನೆಯ ತೀವ್ರತೆ, ಶುಧ್ಧ ಭಾಷೆಯ ಶೈಲಿ, ಕವಿಯಲ್ಲಿರಬೇಕಾದ ಪ್ರತಿಭಾಸ೦ಪನ್ನತೆ ಇಲ್ಲಿ ಎದ್ದು ಕಾಣುತ್ತದೆ.

ಡಾ. ಶಿವರಾಮ ಕಾರ೦ತ ("ಹೂಮಾಲೆ" ಕವನ ಸಂಕಲನದ ಕುರಿತು)

’ಕೇಳುಗರ ಮನವನ್ನು ಸೆಳೆದು ನಿಲ್ಲಿಸಿ ಇನ್ನೂ ಕೇಳೊಣ ಎನ್ನಿಸುವ ಒಂದು ಮನೋವಿಲಾಸ ಮತ್ತು ಕೌಶಲ ಶ್ರೀ ಗಣೇಶ್ ಕುತ್ಯಾಡಿಯವರ ರಚನೆಯಲ್ಲಿ ನನಗೆ ಕಡು ಬ೦ದವು. ಅನುಭವದ ಗಾಢತೆ, ವರ್ಣನೆಯಲ್ಲಿನ ಔಚಿತ್ಯ ಪ್ರಜ್ಞೆ, ಹಿ೦ಗದ ಹುರುಪು, ಶುಧ್ಧ ಭಾಷೆಯ ಶೈಲಿ, ಸದಭಿರುಚಿ, ಸೌ೦ದರ್ಯೋಪಾಸನೆ ಕಾವ್ಯರಸಸ೦ವಹನ ಆನ೦ದವಾಹಿಯಾಗಿದೆ...." ಪು.ತಿ.ನ ("ಮೇಘ ಮ೦ದಾರ" ಕವನ ಸಂಕಲನದಿ೦ದ)

’ಬೆಟ್ಟದ ಕಿಬ್ಬಿಯಲ್ಲಿ ಥುಮುಕಿ ಹರಿಯುವ ಝರಿಯ೦ತೆ ಅವರ ಕವನಗಳು ವೇಗವಾಗಿ ಹರಿಯುತ್ತವೆ... ಕುತ್ಯಾಡಿಯವರ ಕವನಗಳ ಇನ್ನೊ೦ದು ಗುಣವೆ೦ದರೆ ಅವುಗಳ ಗೇಯತೆ..... ಅವರು ಭಾಷೆಯನ್ನು ಪಳಗಿಸಿಕೊ೦ಡವರು. ನವುರಾದ ಭಾವನೆಗಳನ್ನೂ ಬದುಕಿನ ವ್ಯಗ್ರತೆಯನ್ನೂ ಸರಳವಾಗಿ ಹಾಗೂ ಖಚಿತವಾಗಿ ಅಭಿವ್ಯಕ್ತಿಸಬಲ್ಲವರು.....

ಎಚ್ಚೆಸ್ಕೆ ("ಅ೦ಕುರ" ಕವನ ಸಂಕಲನದಿ೦ದ)

’"ಮಧುಬಿ೦ದು" ಕುತ್ಯಾಡಿಯವರ ಆಳವಾದ, ಪರಿಪಕ್ವ, ಅನುಭವದ ಪ್ರತಿಫಲ. ಅದು ಕನ್ನಡದ ಶ್ರೇಷ್ಟ ಮುಕ್ತಕ ಸಂಕಲನದ ಸಾಲಿಗೆ ಸೇರಿದೆ.

ಹಾ.ಮಾ. ನಾಯಕ "ಮಧುಬಿ೦ದು" ಮುಕ್ತಕ ಸಂಕಲನದ ಕುರಿತು

ಸಂಪರ್ಕ[ಬದಲಾಯಿಸಿ]

ಕುತ್ಯಾಡಿ ಮನೆ ಅಂಚೆ: ಮಣಿಕ್ಕಾರ ಸುಳ್ಯ ತಾಲೂಕು ೦೮೨೫೭-೨೦೪೦೩೯