ಗಣಜಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಣಜಿಲೆ (ಚಿಕನ್ ಫಾಕ್ಸ್)
Classification and external resources
ಸೋಂಕು ತಗುಲಿದ ಗಂಡಸು
ICD-10B01
ICD-9052
DiseasesDB29118
MedlinePlus001592
eMedicineped/2385 derm/74, emerg/367
MeSHC02.256.466.175


ಗಣಜಿಲೆ : ಆರೋಗ್ಯ ಏರುಪೇರಾಗದೆ, ತಂಡ ತಂಡಗಳಲ್ಲಿ ದದ್ದುಗಳೇಳುವ ಕೂರಾದ ಒಂದು ಅಂಟು ರೋಗ (ಚಿಕನ್ ಪಾಕ್ಸ್). ಇದನ್ನು ಕೊಟ್ಲೆ, ನೀರು ಕೊಟ್ಲೆ, ಚಿಕ್ಕಮ್ಮ, ಸೀತಾಳ ಸಿಡುಬು ಎಂದು ಸಹ ಕರೆಯುತ್ತಾರೆ.

ಹರಡುವಿಕೆ[ಬದಲಾಯಿಸಿ]

ಸಿಡುಬಿನ ಹಾಗೆ ದದ್ದುಗಳು ಏಳುವುದನ್ನು ಬಿಟ್ಟರೆ ಸಿಡುಬಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಒಂದು ಊರು, ಕೇರಿಯಲ್ಲಿ ಗಣಜಿಲೆ ತಲೆಹಾಕಿದರೆ ಸಣ್ಣ ಸಾಂಕ್ರಾಮಿಕದ ಹಾಗೆ ಅದು ಅಲ್ಲೆಲ್ಲ ಹರಡುತ್ತದೆ. ನಗರದಲ್ಲಿ ನೆಲೆಸಿದರೆ ಒಂದೊಂದು ಕಡೆ ಒಮ್ಮೊಮ್ಮೆ ತಲೆ ಹಾಕುತ್ತ ವರ್ಷವಿಡೀ ಉಳಿದಿರುತ್ತದೆ. 2-6 ವರ್ಷದ ಮಕ್ಕಳಿಗೆ ಅಂಟುವುದು ಸಾಮಾನ್ಯವಾದರೂ ಎಳೆಗೂಸುಗಳೂ ಇದಕ್ಕೆ ಹೊರತಲ್ಲ. ಹಸುಗೂಸಿನ ಮೊದಲ ಆರು ತಿಂಗಳ ತನಕ ಅದನ್ನು ತಾಯಿಯಲ್ಲಿರುವ ರೋಗ ತಡೆವ ಬಲವಿರುವ ಪ್ರತಿವಸ್ತು (ಆಂಟಿಬಾಡಿ) ರಕ್ಷಿಸುತ್ತದೆ. ಎಳೆಯದರಲ್ಲಿ ಇದರ ಕಾಟ ತಪ್ಪಿಸಿಕೊಂಡು ಬೆಳೆದ ದೊಡ್ಡವರಿಗೆ ರೋಗ ತಾಕಿದರೆ ಅದರ ಪರಿಣಾಮ ಜೋರಾಗಿರುತ್ತದೆ. ಒಂದು ಬಾರಿ ಗಣಜಿಲೆ ತಾಕಿದರೆ ಸಾಮಾನ್ಯವಾಗಿ ಸಾಯುವ ತನಕ ಮತ್ತೆ ಇದರ ತೊಂದರೆ ಇರುವುದಿಲ್ಲ.ಗಣಜಿಲೆ ರೋಗಾಣು ಮೂಗು ಗಂಟಲುಗಳ ಮೂಲಕ ಮೈಯಲ್ಲೆಲ್ಲ ಹರಡಿಕೊಳ್ಳುವುದು.

ರೋಗ ಲಕ್ಷಣಗಳು[ಬದಲಾಯಿಸಿ]

ರೋಗಕ್ಕೊಡ್ಡಿದ 14-16 ದಿವಸಗಳಲ್ಲಿ ರೋಗ ತಲೆದೋರುತ್ತದೆ. ಅದರಲ್ಲೂ ಚಟುವಟಿಕೆಯಿಂದ ಆಡುತ್ತಿರುವ ಮಕ್ಕಳಲ್ಲಿ ತುಸು ಜ್ವರ ಬಂದಿದ್ದೂ ಗೊತ್ತಾಗದೆ ಮೊದಲು ದದ್ದುಗಳು ಏಳುವುದರಿಂದ ಬೇನೆ ಗೊತ್ತಾಗುತ್ತದೆ. ಜ್ವರ 1010ಫ್ಯಾ. ಮೇಲೇರದು. ಕೆಲವು ವೇಳೆ ಮಕ್ಕಳಲ್ಲಿ ವಾಂತಿ, ಸೆಳವು, ಏರುಜ್ವರಗಳೊಂದಿಗೆ ಗಣಜಿಲೆ ಕಾಲಿಡಬಹುದು. ದೊಡ್ಡವರಿಗೆ ಬಂದರೆ ತಲೆನೋವು, ಚಳಿ, ಮೈಕಾಲು ನೋವು, ತುಸು ಬೆನ್ನು ನೋವು, ಪುರಾ ಜ್ವರ ಹೆಚ್ಚಿ ಮಲಗಿಸುತ್ತದೆ. ಮುಂದೆ ನ್ಯೂಮೋನಿಯ ಆದರೆ ಅಪಾಯಕರ. ಕೆಲವರಂತೂ 2-3 ದಿವಸಗಳಲ್ಲೇ ಸಾಯುತ್ತಾರೆ. ಮುಂಡದ ಮೇಲೆದ್ದ ದದ್ದುಗಳು ಮುಖ, ನೆತ್ತಿ, ತೋಳು, ತೊಡೆಗಳಿಗೆ ಹರಡುತ್ತವೆ. ಕೈಕಾಲುಗಳಿಗಿಂತ ಮುಂಡದ ಮೇಲೂ ಅವಂಯವಗಳ ಕೊನೆಗಳಿಗಿಂತ ಬುಡ ಭಾಗಗಳಲ್ಲೂ ದದ್ದುಗಳು ಹೆಚ್ಚಾಗಿರುತ್ತವೆ. ಬೇರೆ ಕಡೆ ಎಷ್ಟೇ ಜೋರಾಗಿದ್ದರೂ ಅಂಗೈ, ಅಂಗಾಲುಗಳಲ್ಲಿ ದದ್ದುಗಳೇಳವು. ಗುಳ್ಳೆಗಳು ಒಂದುಗೂಡವು. ದದ್ದುಗಳು ಏಳುತ್ತಿರುವ ತನಕ ಜ್ವರ ಇದ್ದೇ ಇರುವುದು. ದುಂಡಾಗಿಯೋ ಇಲ್ಲವೇ ಚುಕ್ಕಿಯಾಗಿಯೋ ಇದ್ದ ದದ್ದುಗಳು ಕೆಲವೇ ತಾಸುಗಳಲ್ಲಿ ಗುಳ್ಳೆಗಳಾಗುತ್ತವೆ. ಗುಳ್ಳೆಗಳಲ್ಲಿ ಮೊದಲು ತಿಳಿನೀರಿದ್ದು ಆಮೇಲೆ ಸಣ್ಣಮಣಿಗಳನ್ನು ಚರ್ಮದ ಮೇಲಿಟ್ಟ ಹಾಗೆ ತೋರುವುವು. ಒಂದೆರಡು ದಿವಸಗಳಲ್ಲಿ ಗುಳ್ಳೆಗಳಲ್ಲಿನ ನೀರು ಹಿಂಡಿದಂತಾಗಿ ಒಡೆದುಕೊಂಡು ಸಣ್ಣ ತೆಳುಸಿಪ್ಪೆ ಉಳಿಯುತ್ತದೆ. ಇದೂ ಒಣಗುತ್ತ ಬಿದ್ದು ಹೋಗುವುದು. ಇದರಿಂದ ಬೇರೆಯವರಿಗೆ ಸೋಂಕು ಅಂಟದು. ಗಣಜಿಲೆ ದದ್ದುಗಳೂ ಗುಳ್ಳೆ ಸಿಪ್ಪೆಗಳೂ ಅಲ್ಲಲ್ಲಿರುತ್ತವೆ. ದದ್ದುಗಳಲ್ಲಿ ನವೆ, ಕೆರೆತ ಹೆಚ್ಚು. ಅವನ್ನು ಕೆರೆದುಕೊಂಡರೆ ಮಾತ್ರ ಕೀವುಗೂಡಿ ಮುಂದೆ ಕಲೆ ಉಳಿವುದು. ರೋಗಿಯಲ್ಲಿ ದದ್ದುಗಳು ಅಲ್ಲಿ ಇಲ್ಲಿ ಒಂದೊಂದಿರಬಹುದು. ಇಲ್ಲವೇ ನೂರಾರಿರಬಹುದು. ಬಹುಮಟ್ಟಿಗೆ ಗಣಜಿಲೆ ತೊಂದರೆ ಕೊಡುವ ರೋಗವಲ್ಲ. ಆ ಮೇಲಿನ ತೊಡಕುಗಳೂ ಅಷ್ಟಕಷ್ಟೆ. ಗಣಜಿಲೆಗೂ ಉಡಿತದ್ದಿಗೂ (ಷಿಂಗಲ್್ಸ, ಹರ್ಪಿಸ್) ನಿಕಟ ಸಂಬಂಧ ಇರುವುದು ಬಹುಕಾಲದಿಂದ ಗೊತ್ತಿತ್ತು. ಇವೆರಡು ಬೇನೆಗಳಿಗೂ ಒಂದೇ ವೈರಸ್ ಕಾರಣ ಎನ್ನುವುದರಲ್ಲಿ ಈಗ ಅನುಮಾನವಿಲ್ಲ. ಏಕೆಂದರೆ ಉಡಿತದ್ದಿನ ವಿಷಕಣವನ್ನು ಅದಕ್ಕೀಡಾಗುವ ಮಕ್ಕಳಿಗೆ ಚುಚ್ಚಿದರೆ ಗಣಜಿಲೆ ಏಳುವುದಲ್ಲದೆ ಬೇರೆ ಮಕ್ಕಳಲ್ಲೂ ಅದೇ ರೋಗವನ್ನು ಉಂಟುಮಾಡುತ್ತದೆ. ಉಡಿತದ್ದು ಗಣಜಿಲೆಯಷ್ಟು ಅಂಟುರೋಗವಾಗಿ ಹರಡದು. ಇಷ್ಟಾದರೂ ಉಡಿತದ್ದು ದೊಡ್ಡವರ ಕಾಯಿಲೆ, ಗಣಜಿಲೆ ಕೂಸುಗಳ ಬೇನೆ. ದೊಡ್ಡವರಲ್ಲಿನ ಉಡಿತದ್ದು ಮಕ್ಕಳಿಗೆ ತಾಕಿದರೆ ಗಣಜಿಲೆಯಾಗಿ ಮೈದೋರುವುದು. ಗಣಜಿಲೆ ಅಂಟುರೋಗವಾಗಿ ಶಾಲೆಗಳಲ್ಲಿ ಬಲು ಬೇಗ ಹರಡುವುದು. ರೋಗಿಯಿಂದ ನೇರವಾಗಿಯೂ ಸೀನು, ಕಫ, ಉಗುಳು ಮೂಲಕವೂ ಬಟ್ಟೆಬರೆಗಳ ಮೂಲಕವೂ ಸುಲಭವಾಗಿ ಅಂಟುತ್ತದೆ. ದದ್ದುಗಳು ಏಳುವ 24 ತಾಸುಗಳ ಮೊದಲೇ ರೋಗಿ ಇತರರಿಗೆ ಸೋಂಕು ಅಂಟಿಸಬಹುದು. ಗಣಜಿಲೆಗೆ ಯಾವ ಲಸಿಕೆ ಮದ್ದೂ ಇಲ್ಲ. ಗಣಜಿಲೆ ರೋಗಿಯ ಬಳಿ ಇದ್ದವರನ್ನು 20 ದಿವಸಗಳಾದರೂ ಬೇರೆ ಇರಿಸಿ ನೋಡಬೇಕು. ಹಾಗೇ ಶಾಲಾಮಕ್ಕಳೂ 20 ದಿವಸಗಳ ತನಕ ಶಾಲೆಗೆ ಹೋಗಬಾರದು.

ಕಾರಣ[ಬದಲಾಯಿಸಿ]

ಗಣಜಿಲೆ ರೋಗಕ್ಕೆ ವೆರಿಸೆಲ್ಲಾ ಜೋಸ್ಟರ್ ಎಂಬ ವೈರಾಣು ಕಾರಣವಾಗಿದೆ.[೧] .ಇದು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಕಂಡು ಬರುವ ಕಾಯಿಲೆ.

ಉಲ್ಲೇಖಗಳು[ಬದಲಾಯಿಸಿ]

  1. "Chickenpox (Varicella) Overview". cdc.gov. November 16, 2011. Retrieved 4 February 2015.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

External links[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಣಜಿಲೆ&oldid=1060237" ಇಂದ ಪಡೆಯಲ್ಪಟ್ಟಿದೆ