ವಿಷಯಕ್ಕೆ ಹೋಗು

ಗಂಡುಜೇನುನೊಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಡು ಜೇನು ನೊಣಗಳು ಮತ್ತು ಜೇನು ಸಂತಾನದ ವಿಚಿತ್ರಗಳು

[ಬದಲಾಯಿಸಿ]

ಜೇನುಕುಟುಂಬದ ಪ್ರೌಢ ಗಂಡು ನೊಣಗಳು ರಾಣಿನೊಣಕ್ಕೆ ಸಂತಾನ ಸಾಮರ್ಥ್ಯವನ್ನು ನೀಡುವ ಜೀವಿಗಳು. ಇವುಗಳಲ್ಲಿರುವ ವಂಶವಾಹಿನಿ ಬೀಜಕೋಶದ ಭಿತ್ತಿಗಳಲ್ಲಿ ೧೬ ವರ್ಣತಂತುಗಳು ಮಾತ್ರವಿದ್ದು ಇವುಗಳನ್ನು ಹೆಪ್ಲಾಯಿಡ್ (Haploid) ಎನ್ನುತ್ತಾರೆ. ಇವು ಸುಮಾರು ೧ ರಿಂದ ೧.೫ ಮಿಲಿಯ ಬೀಜ ಕಣಗಳನ್ನು ಉತ್ಪಾದಿಸುವ ಶಕ್ತಿಹೊಂದಿವೆ. ಗಂಡು ಜೇನುನೊಣಗಳಿಗೆ ತಂದೆ ಇರುವುದಿಲ್ಲ. ಇವು ರಾಣಿ ಇರಿಸುವ ಫಲೀಕೃತವಲ್ಲದ ಮೊಟ್ಟೆಗಳಿಂದ (Unfertlised egg) ಜನಿಸುತ್ತವೆ. ಏಕ ಕಣಗಳ ವಂಶವಾಹಿ ಗುಚ್ಛ ಮಾತ್ರ ಹೊಂದಿರುವ ಇವುಗಳ ಬೀಜಕೋಶದಲ್ಲಿ (Spermatoza) ಪುನರುತ್ಪತ್ತಿಯ ಇಂತಹ ಕಣಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅಂತರ್ಗತವಾಗಿರುವ ಒಂದು ಸುಧಾರಿಸಿದ ಕಾರ್ಯತಂತ್ರ ಮಿಂಸಿಸ್ (meiosis) ಅಂದರೆ ಜೀವಕಣಗಳನ್ನು ವಿಭಾಗಿಸಿ ವಿರುದ್ಧ ಲಿಂಗೀಯ ಜೀವೋತ್ಪಾದನಾ ತಂತ್ರದಿಂದ ಏಕ ಕಣಗಳನ್ನೊಳಗೊಂಡ (Haploid) ಜೀವೋತ್ಪಾದನ ಕಣಗುಚ್ಛಗಳ ತಂತ್ರವನ್ನು ಕಾಯ್ದುಕೊಂಡಿವೆ. ಇದರಿಂದಾಗಿ ಸ್ಪರ್ಮ್ (Sperm) ಬೀಜಕಣಗಳ ಉತ್ಪಾದನ ಕ್ರಿಯೆಯಲ್ಲಿ ಏಕರೀತಿಯ ಸಮಾನ ಅಂಶದ ಗಂಡು ಬೀಜೋತ್ಪಾದನ ವಂಶವಾಹಿಗಳನ್ನು ಒಳಗೊಂಡಿರುತ್ತದೆ. (ವಿರುದ್ದ ಲಿಂಗೋತ್ಪಾದಕ ಕಣಗಳು) ಅಂದರೆ ರಾಣಿಯಲ್ಲಿರುವ ಅಂಡಕದೊಡನೆ ಸೇರಿ ಫಲೀಕೃತಗೊಂಡು ಒಂದು ಹೆಣ್ಣು ನೊಣವಾಗುವ ಮೊಟ್ಟೆ ಹೊರಬರಲು ಕಾರಣವಾಗುತ್ತವೆ. ಆದುದರಿಂದ ಗಂಡು ಜೇನು ನೊಣಗಳು ಸಮಾನ ಚಾರಿತ್ರಿಕವಾದ ಎಲ್ಲಾ ಅಂಶಗಳನ್ನು ಚಾಚೂ ಬದಲಾಗದಂತೆ ವಂಶ ಮುಂದುವರೆಸುವ ಎಲ್ಲಾ ಸಾಮರ್ಥ್ಯಗಳನ್ನು ಒಳಗೊಂಡಿರುತ್ತವೆ. ಇವುಗಳಲ್ಲಿರುವ ಬೀಜಕೋಶಗಳಲ್ಲಿ (Spermatoza) ಕೋಟ್ಯಾಂತರ ಸಂಖ್ಯೆಯಲ್ಲಿ ಅತ್ಯಂತ ಸಮಾನ ರೀತಿಯ ವಂಶವಾಹಿ ಗುಚ್ಛಗಳು ಉತ್ಪಾದನೆಗೊಳ್ಳುತ್ತವೆ. ಗಂಡು ನೊಣಗಳ ಉತ್ಪಾದನೆಗಾಗಿ ಆಯ್ದುಕೊಳ್ಳುವ ಜೇನುಕುಡಿಗಳಲ್ಲಿ ಗುಣಾತ್ಮಕ (Qulitative) ಹಾಗೂ ಪ್ರಮಾಣಾತ್ಮಕ (Quntitative) ನಡತೆಗಳನ್ನೊಳಗೊಂಡ (charecter) ಮತ್ತು ಅಪೇಕ್ಷಿತ ಸಾಮರ್ಥ್ಯ ಇರುವ ರಾಣಿಯನ್ನೊಳಗೊಂಡ ಕುಡಿಯಲ್ಲಿರುವ ಗಂಡುನೊಣಗಳನ್ನು ಆಯ್ದುಕೊಳ್ಳುವುದು ವಿಹಿತ.

ಜೀವಕಣ ರಚನೆ, ರಾಸಾಯಿನಿಕ ಸಂಯೋಜನೆ ಮತ್ತು ಕೆಲಸಗಳು

[ಬದಲಾಯಿಸಿ]

ಅಂದರೆ Cytalogy (Cells and their structure functions):- ಜೇನುಕೀಟಗಳು ಹೆಚ್ಚು ಮುಂದುವರೆದ ಕೀಟಗಳ ಗುಂಪಿನಲ್ಲಿದ್ದು ಇವುಗಳ ಜೀವಕಣಗಳಲ್ಲಿ ಕಂಡು ಬರುವ ವಂಶವಿಕಸನ ಲಕ್ಷಣ/ತಂತ್ರವಾಗಿದೆ. ಈ ನಿಟ್ಟಿನಲ್ಲಿಏಕಕಣ-ದ್ವಿಕಣ ರಚನಾ ಲಕ್ಷಣಗಳು ಮುಖ್ಯವಾದುದು. Haplodiploidy=೧೬ and ೨n=೩೨. (haploid) ಏಕಕಣದಿಂದ ಗಂಡಾಗಿಯೂ (diploid) ದ್ವಿಕಣದಿಂದ ಹೆಣ್ಣಾಗಿಯೂ (ಕೆಲಸಗಾರ್ತಿ/ರಾಣಿ) ಬೆಳೆಯುತ್ತವೆ. ಆದರೆ ಇದಲ್ಲದೆ ಕೆಲವೊಮ್ಮೆ ಅಸ್ವಾಭಾವಿಕ ಜೀವಿಗಳು ಉದ್ಭವವಾಗುವುದನ್ನು ಕಾಣಬಹುದು. ಅಂದರೆ ಎರಡೂ ಅಂಗಾಂಶಗಳನ್ನೊಳಗೊಂಡ ಶರೀರದ ಒಂದು ಭಾಗ ಗಂಡು ಜೀವಕೋಶಗಳನ್ನು ಹಾಗೂ ಇನ್ನೊಂದು ಭಾಗ ಹೆಣ್ಣು ಜೀವಕೋಶಗಳನ್ನು (tissues) ಒಳಗೊಂಡ ನೊಣಗಳಾಗಬಹುದು. ಈ ರೀತಿ ಎರಡೂ ಕಣಗಳನ್ನು ಒಳಗೊಂಡ ನೊಣಗಳನ್ನು ಗೈನಾಂಡ್ರೋಮರ್ಫಸ್ (Gynandromorphs) ಎನ್ನುತ್ತಾರೆ. ರಾಣಿ ನೊಣವು ಗಂಡಾಗುವ ಅಪಕ್ವವಾದ ಮೊಟ್ಟೆಗಳನ್ನೂ ಮತ್ತು ಹೆಣ್ಣಾಗುವ ಪಕ್ವವಾದ ಮೊಟ್ಟೆಗಳನ್ನು (fertilised & unfertilised) ಹೀಗೆ ಎರಡು ವಿಧದ ಮೊಟ್ಟೆಗಳನ್ನು ಇರಿಸುವುದು. ಅದು ಇಕ್ಕುವ ಏಕಕಣದ ಹೆಪ್ಲಾಯಿಡ್ (Haploid) ಅಪಕ್ವವಾದ ಮೊಟ್ಟೆಗಳಿಂದ ಗಂಡು ಉತ್ಪತ್ತಿಯಾಗುತ್ತದೆ.

ಆದರೆ ಕೆಲವು ವಿರಳ ಸಂದರ್ಭಗಳಲ್ಲಿ ದ್ವಿಕಣ (Diploid) ಹೆಣ್ಣು ಉತ್ಪಾದಕ ಕಣದಿಂದ ಜನಿಸಿದ ಕೆಲಸಗಾರ್ತಿ ನೊಣಗಳು ಅಥವಾ ಕನ್ನಿಕಾರಾಣಿ ಇರಿಸುವ ಅಪಕ್ವವಾದ ಗಂಡುಮೊಟ್ಟೆಗಳಿಂದಲೂ ಒಂದು ಹೆಣ್ಣುನೊಣ ಹುಟ್ಟಿ (parthenogenisis) (ನಿರ್ಲಿಂಗ ಉತ್ಪತ್ತಿ) ಹಾಗೂ ಅದು ರಾಣಿಯಾಗಿ ಅಭಿವೃದ್ದಿಗೊಳ್ಳುವ ವಿಲಕ್ಷಣ ಬೆಳವಣಿಗೆಯನ್ನು ಸಹ ಕಾಣಬಹುದು. ಉದಾಹರಣೆಗಾಗಿ ಎಪಿಸ್‌ಮೆಲ್ಲಿಫೆರಾ ಕ್ಯಾಂಪೆನ್ಸೀಸ್ (Apies mellifera campenisis). ಆಫ್ರಿಕಾ ದೇಶದ ಗುಡ್‌ಹೋಪ್ ಭೂಶಿರ ಪ್ರದೇಶ/ ಸಮುದ್ರ ಪಾತಳಿಗೆ ಅತೀ ಎತ್ತರದ ಜಾಗಗಳಲ್ಲಿ (Cap beesof Africa) ಕಾಣಬಹುದು. ಈ ಜೇನುಕುಡಿಗಳಲ್ಲಿ ರಾಣಿಯು ಆಕಸ್ಮಿಕವಾಗಿ ಇಲ್ಲವಾದರೆ ಇಂತಹ ಏಕಕಣದಿಂದ ಜನಿಸಿರುವ ಅನೇಕ ಹೆಣ್ಣುನೊಣಗಳಲ್ಲಿ ಒಂದು ರಾಣಿಯಾಗಿ ಆ ಕುಟುಂಬವನ್ನು ಕರ್ತವ್ಯ ನಿರ್ವಹಿಸಿ ಮುನ್ನೆಡೆಸುವುದು . ಗಂಡುನೊಣಗಳು ಅಪಕ್ವ ಮೊಟ್ಟೆಗಳಿಂದ ಜನಿಸಿದ್ದಾದ್ದರಿಂದ ಅವುಗಳಿಗೆ ತಂದೆ ಎಂಬುದು ಇಲ್ಲ. ನಿರ್ಲಿಂಗೋತ್ಪತ್ತಿ (Parthenogenisis) ಆದರೆ ಒಂದು ಜೇನುಕುಡಿಯಲ್ಲಿರುವ ರಾಣಿ ಪಕ್ವವಾದ ಮೊಟ್ಟೆಯಿಂದ ಹುಟ್ಟಿಬಂದದ್ದಾದ್ದರಿಂದ ಅದಕ್ಕೆ ತಂದೆ ಮತ್ತು ತಾಯಿ ಇಬ್ಬರೂ ಇರುವುದು. ಆದ್ದರಿಂದ ಯಾವುದೇ ಜೇನುಕುಟುಂಬದಲ್ಲಿ ಆ ಕುಟುಂಬದ ರಾಣಿನೊಣವು ಅದರ ತಂದೆಯಿಂದ ಮತ್ತು ತಾಯಿಯಿಂದ ವರ್ಗಾಯಿಸಲ್ಪಟ್ಟ ವಂಶವಾಹಿ ಜೊತೆಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಾಗಿ ಜೇನುಕುಟುಂಬದ ಬಹುಸಂಖ್ಯಾತ ಕೆಲಸಗಾರ್ತಿ ನೊಣದ ಹೊರತಾಗಿಯೂ ಆ ಕುಟುಂಬದಲ್ಲಿ ಕೇವಲ ರಾಣಿ ಮತ್ತು ಗಂಡು ನೊಣಗಳು ಮಾತ್ರ ಪರಿಗಣಿಸಲ್ಪಡುವುದು. ಈ ಅಂಶವನ್ನು ಇನ್ನೂ ಹಿಂದುವರಿಸಿ ಅನುಲಕ್ಷಿಸಿದರೆ ಅವುಗಳ ಹಿಂದಿನ ಪೀಳಿಗೆಯ ರಾಣಿ ಮತ್ತು ಗಂಡುಗಳ ಪ್ರಾಮುಖ್ಯತೆ ಪರಿಗಣಿಸಲ್ಪಡುವುದು.

ಸೆಕ್ಸ್ ಅಲೆಲ್ಸ್ (Sex Allels) :

[ಬದಲಾಯಿಸಿ]

ಜೇನುಗಳಲ್ಲಿ ಲಿಂಗವು ಅವುಗಳು ಹೊಂದಿರಬಹುದಾದ ಏಕಕಣ ಮತ್ತು ದ್ವಿಕಣ (Haploid & Diploid) [ದ್ವಿಕಣ ಉಳ್ಳವು ಹಾಗೂ ವಂಶವಾಹಿಯ ಪೂರ್ಣಕಣಗಳನ್ನು (೨n=೩೨) ಹೊಂದಿರುತ್ತವೆ] ವಂಶವಾಹಿನಿಯಿಂದಾಗಿ ನಿರ್ಧರಿಸಲ್ಪಡುವುದು. ಹೀಗೆ ಇದು ಅವುಗಳ ಲಿಂಗತ್ವ ನಿರ್ಧರಿಸುವ ಕಣಗಳ ಪೈಕಿ ಒಂದು. ಈಗಾಗಲೇ ಸಂಕುಚಿತ ಸ್ಥಿತಿಯ ವಂಶವಾಹಿನಿಯಿಂದ ಬಳುವಳಿಯಾಗಿ ನಿರ್ಧರಿಸಿ ಬಂದಿರುವ ಹಾಗೂ ಇನ್ನೊಂದು ಹೊಸಹೊಸದಾಗಿ ಪಡೆದು ಅಳವಡಿಸಿಕೊಳ್ಳುವಂತಹ ಗುಣದ ವರ್ಣತಂತುಗಳ ಪೈಕಿ ಶಕ್ತಿಯುತ ವರ್ಣತಂತು ಒಂದರಿಂದ ಆಳಲ್ಪಡುವವು (Allels) ಗಳಿಂದ ನಿರ್ಧರಿಸಲ್ಪಡುತ್ತದೆ.

ಸಜಾತಿಭಕ್ಷಕ (cannibalism):

[ಬದಲಾಯಿಸಿ]

ಒಂದು ಗುಣ ನಡತೆಗೆ ಅನ್ವಯಿಸುವ ಎರಡು ವಂಶವಾಹಿನಿಗಳನ್ನೊಳಗೊಂಡ ಹೊಮೊಸೈಗಸ್ (Homozygus) ಏಕಕಣದ ಒಂದು ಜೋಡಿ ಕಣದ ಮೊಟ್ಟೆ, ಅಂದರೆ ಸಮಾನ ಅಂಶ ಪ್ರತಿನಿಧಿಸುವ ಎರಡು ವಂಶವಾಹಿನಿಗಳನ್ನೊಳಗೊಂಡಿರುವ ಮೊಟ್ಟೆಯಿಂದ ಜನಿಸುವ ಹುಳಗಳನ್ನು ಕೆಲಸಗಾರ್ತಿ ನೊಣಗಳು ತಿಂದುಬಿಡುತ್ತವೆ. ಅಲ್ಲಿ ಉತ್ಪತ್ತಿಯಾಗುವ ವಿಶಿಷ್ಟ ಕಿಣ್ವಗಳೇ (pheromone) ಇದಕ್ಕೆ ಕಾರಣ. ಇದನ್ನು ಕ್ಯಾನಿಬಾಲಿಸಂ ಅಂದರೆ ಸ್ವಜಾತೀಯ ಮಾಂಸಭಕ್ಷಣೆ (cannibalism) ಎನ್ನುವರು. ಇದರಿಂದಾಗಿ ದ್ವಿಕಣವುಳ್ಳ ಗಂಡುನೊಣಗಳು (diploid drons) ಜೇನುಕುಟುಂಬದಲ್ಲಿ ಕಂಡುಬರುವುದಿಲ್ಲ.

ಹತ್ತಿರದ ಸಂಬಂಧಿ ಕೂಡುವಿಕೆ(Inbreeding):

[ಬದಲಾಯಿಸಿ]

ಒಂದು ಜೇನು ಕುಟುಂಬದ ಗಂಡುನೊಣಗಳು ಅದೇ ಕುಟುಂಬದ ರಾಣಿಯೊಂದಿಗೆ ಕೂಡುವುದರಿಂದ ಒಂದೇ ತರಹದ ಎರಡು ವಂಶವಾಹಿನಿಗಳನ್ನೊಳಗೊಂಡ ಅಂದರೆ ಮೇಲೆ ಹೇಳಿದ ವಿಶಿಷ್ಟತೆಯನ್ನೊಳಗೊಂಡ ಗಂಡುಗಳು ಹೆಚ್ಚು ಜನಿಸತೊಡಗುತ್ತವೆ. ಮತ್ತು ಇವೆಲ್ಲವೂ ಸಹ ಕೆಲಸಗಾರ್ತಿಯರಿಂದ ತಿನ್ನಲ್ಪಟ್ಟರೂ, ಆ ಕುಟುಂಬದ ರಾಣಿ ಇರಿಸುವ ಕೆಲಸಗಾರ್ತಿ ನೊಣಗಳ ಮೊಟ್ಟೆಗಳ ಸಂಖ್ಯೆ ಕಡಿಮೆಯಗುತ್ತಾ ಬಂದು ಬಲಹೀನವಾಗುತ್ತವೆ. ಈ ರೀತಿ ಒಳಸಂಕರದಿಂದ ಕೆಲಸಗಾರ್ತಿ ನೊಣಗಳು ಕಡಿಮೆಯಾಗುವುದು ಮತ್ರವಲ್ಲದೇ ಅವುಗಳ ಶಾರೀರಿಕ ಶಕ್ತಿಯೂ ಕುಂದುತ್ತದೆ. ಆದರೂ ಸಹ ಇದು ಅವುಗಳ ವಂಶ ಮುನ್ನಡೆಸುವ ಮತ್ತು ನಿಸರ್ಗದಲ್ಲಿ ಸಮಾನತೆ ಕಾಪಾಡುವ ಒಂದು ಮಾರ್ಗವೆನ್ನುತ್ತಾರೆ! (ಆಹಾರವಿಲ್ಲದೇ ಹಸಿವಿನಿಂದಾಗುವ ಹಾನಿಕಾರಕ ಸಂದರ್ಭಗಳಿಂದ ಪಾರಾಗಲು ಇರಬಹುದೇ?) ಜೇನುಗಳಲ್ಲಿ ಪುನರುದ್ಧಾರಕ ಕೆಲಸ ನಿರ್ವಹಿಸುವ ಶಕ್ತಿ ಇರುವುದೆಂದರೆ, ಅದು ಆ ಕುಟುಂಬದ ಏಕಮಾತ್ರ ರಾಣಿನೊಣಕ್ಕೆ ಮಾತ್ರವೇ ಆಗಿದೆ. ಅದು ಮೊಟ್ಟೆಗಳಿರಿಸುವ ಶಕ್ತಿಯು ಅದಕ್ಕೆ ಒದಗಿಸುವ ಆಹಾರವನ್ನು ಅವಲಂಬಿಸಿದೆ. ಅದು ವಂಶಿಕವಾಗಿ ಬಂದಿದ್ದಲ್ಲ. (ನಿದರ್ಶನ: ಕೆಲಸಗಾರ್ತಿ ಮರಿ ಹುಳಕ್ಕೆ ರಾಜಶಾಹಿ ರಸ ಉಣಿಸಿ, ರಾಣಿಯನ್ನು ಬೆಳೆಸುವುದು.) ರಾಣಿ ಮತ್ತು ಗಂಡುನೊಣಗಳು ಬಾನಂಗಳದಲ್ಲಿ ವಿಶೇಷ ದಿಬ್ಬಣ ಪ್ರದೇಶದಲ್ಲಿ ೨೦-೩೫ ಅಡಿಗಳ ಎತ್ತರದಲ್ಲಿ ಜೋಡಿಯಾಗುತ್ತವೆ. ರಾಣಿಯು ತನ್ನ ಜೀವನದಲ್ಲಿ ಒಮ್ಮೆ ಮತ್ರ ಗಂಡಿನೊಡನೆ ಸೇರುತ್ತದೆ. ರಾಣಿಯು ೧೩-೧೫ ಗಂಡುನೊಣಗಳೊಂದಿಗೆ, ೧-೨ ಬಾರಿ ಹೊರಹಾರಿಹೋಗಿ ಸಂಗಗೊಳ್ಳಬಹುದು. ೨.೫ ಮಿಲಿಯಕ್ಕೂ ಮಿಕ್ಕಿ ಗಂಡುಬೀಜಾಣುಗಳು ಗರ್ಭಕೋಶದಲ್ಲಿ ಸಂಗ್ರಹಗೊಳ್ಳಬಹುದು. ರಾಣಿಯು ತನ್ನ ಅಂಡಾಶಯದಲ್ಲಿ ೧೮೦-೨೦೦ ಅಂಡಕಗಳನ್ನು ಹೊಂದಿರುತ್ತದೆ. ಬೆಟ್ಟಸೀಮೆಯ ಇಲ್ಲಿಯ ನೊಣಗಳು ೭ ರಿಂದ ೧೦ ದಿನಗಳ ಪ್ರಾಯದಲ್ಲಿ ಸಂಗ ಹೊಂದುತ್ತವೆ. ಉತ್ತಮವಾಗಿ ಬೆಳೆದ ಒಂದು ಉತ್ತರದ ಬೆಟ್ಟ ಸೀಮೆಯ ತುಡಿವೆಯಲ್ಲಿ ಎರಡು ವರ್ಷಗಳಲ್ಲಿ ೬೦೦೦-೭೦೦೦ ಗಂಡು ಮತ್ತು ೩.೫ ಲಕ್ಷ ಫಲವತ್ತಾದ ಮೊಟ್ಟೆಗಳನ್ನು ಹಾಗೂ ದಿನವೊಂದಕ್ಕೆ ಸಾವಿರ ಮೊಟ್ಟೆಗಳನ್ನು ಇರಿಸಬಲ್ಲದು. ೬ ನೇ ದಿನದ ಪ್ರಾಯದಲ್ಲಿ ಗಂಡಿನ ಸಂಗವಾದರೆ, ಎಂಟನೇ ದಿನದ ಪ್ರಾಯದಲ್ಲಿ ಮೊಟ್ಟೆ ಇರಿಸತೊಡಗುತ್ತದೆ.ಅಂದರೆ ಬೇಗ ಸಂಗಗೊಂಡರೆ, ಬೇಗ ಬೇಗ ಮೊಟ್ಟೆ ಇರಿಸತೊಡಗುತ್ತದೆ. ಅಲ್ಪ ಸಂಖ್ಯೆಯ ಗಂಡುನೊಣಗಳೊಡನೆ ಸೇರಿದ ರಾಣಿಯು ಬೇಗನೇ ಗಂಡು ಮೊಟ್ಟೆ ಇರಿಸತೊಡಗುತ್ತದೆ. ರಾಣಿನೊಣವು ಅನೇಕ ಗಂಡುನೊಣಗಳೊಂದಿಗೆ ಜೋಡಿಯಾದರೂ ಮತ್ತು ಭಾರತೀಯ ರಾಣಿನೊಣಗಳಲ್ಲಿ ೧೫-೨೦ ಲಕ್ಷ ವೀರ್ಯಾಣುಗಳು ಸಂಗ್ರಹವಾಗಬಹುದಾದರೂ ಅದರ ಗರ್ಭಕೋಶದಲ್ಲಿ ಗಂಡು ಬೀಜಾಣುಗಳು ಅವುಗಳ ಪೊಟ್ಟಣಗಳಿಂದ ಹೊರಬಂದು ಒಂದು ಗಂಡಿನ ಬೀಜಾಣುವು ಇನ್ನೊಂದು ಗಂಡಿನ ಬೀಜಾಣುಗಳೊಂದಿಗೆ ಬೆರಿಕೆಯಗುವುದಿಲ್ಲ. ರಾಣಿಯು ಮೊಟ್ಟೆಗಳನ್ನು ಇಕ್ಕುವಾಗ ಬೀಜಾಣುಗಳನ್ನು ಹೊರಸೆಳೆಯುವ ಕ್ರಿಯೆ ಅದು, ಮೊದಲು ಗಂಡಿನೊಡನೆ ಸೇರಿದ ಅಂದರೆ ಒಂದರ ನಂತರ ಇನ್ನೊಂದು ಗಂಡಿನೊಡನೆ ಸೇರಿದ ಸರದಿಯನ್ನು ಅನುಸರಿಸುವುದಿಲ್ಲ. ಆದುದರಿಂದ ಒಂದಾದ ನಂತರ ಮತ್ತೊಂದು ಪಾಳಿಯಲ್ಲಿ, ಪಂಗಡದಲ್ಲಿ ಹುಟ್ಟಿ ಹೊರಬರುವ ಕೆಲಸಗಾರ್ತಿ ನೊಣಗಳು ಒಂದೇ ರೀತಿ ಗುಣಕಾರ್ಯತತ್ಪರತೆ ಹೊಂದಿರದೇ ಭಿನ್ನತೆಯನ್ನು ಕಾಣುತ್ತೇವೆ. ಯಾವುದೇ ಒಂದು ಸಂದರ್ಭದಲ್ಲಿ ಒಂದು ಜೇನುಕುಟುಂಬದಲ್ಲಿ ಎರಡು-ಮೂರು ಭಿನ್ನ ಕುಟುಂಬಗಳ ತಂದೆ ಹಾಗೂ ತಾಯಿಯ ವಂಶದ ಕೆಲಸಗಾರ್ತಿಯರನ್ನು ಗುರುತಿಸಬಹುದು. ಹೀಗೆ ಒಂದು ಕುಡಿಯಲ್ಲಿ ಬದಲಾದ ತಾಯಿಯ ಗುಣ ಮತ್ತು ಅನೇಕ ತಂದೆಯರಿಂದ ಬಂದ ಬದಲಾದ ಬಿsನ್ನಗುಣಗಳು ಹಾಗು ಅಂತಹ ಕೆಲಸಗಾರ್ತಿ ವಂಶವಾಹಿಗುಣವು ತಂದೆಯಾದ ಗಂಡುನೊಣಗಳಲ್ಲಿರುವ ಗುಣಾಣುಗಳನ್ನು ಅನುಸರಿಸಿ ಬದಲಾವಣೆಯಲ್ಲಿ ಪರಿಣಮಿಸುವುದು. ಒಂದು ಜೇನು ಕುಟುಂಬದ ಕಾರ್ಯವೈಶಿಷ್ಟ್ಯ ಹಾಗೂ ಗುಣಗಳು, ಜೇನುತುಪ್ಪ ಸಂಗ್ರಹಿಸುವಿಕೆ, ಖಾಯಿಲೆ ನಿರೋಧಿಸುವ ಶಕ್ತಿ ಮುಂತಾದ ವಿಹಿತವಾದ ಅಂಶಗಳೆಲ್ಲವೂ ಆ ಕುಟುಂಬದ ಸಂತಾನೋತ್ಪತ್ತಿ ಕರ್ತೃಗಳಾದ ಗಂಡು ಹಾಗೂ ರಾಣಿಯಿಂದಾಗಿ ಹರಿದುಬಂದು ಅದು ಪ್ರತಿಬಿಂಬಿಸುವುದು ಮಾತ್ರ ಆ ಕುಟುಂಬದ ಕೆಲಸಗಾರ್ತಿ ನೊಣಗಳಲ್ಲಿ. ಚಿಕ್ಕ ಚಿಕ್ಕ, ಭೌಗೋಳಿಕ ಪ್ರದೇಶಗಳಲ್ಲೂ ನಿಸರ್ಗದಲ್ಲಿರುವ ಬಿsನ್ನಕ್ಷಮತೆಯುಳ್ಳ ಹಲವು ಕುಟುಂಬದ ಗಂಡು ನೊಣಗಳೊಡನೆ ಸಂಕರಗೊಳ್ಳುವುದು ಸಾಮನ್ಯ ಸಂಗತಿ. ಆದುದರಿಂದ ತಳಿ ಸುಧಾರಣಾ ಕಾರ್ಯದಲ್ಲಿ ಅವುಗಳ ಅನುವಂಶೀಕ ವಿಶೇಷ ಗುಣಗಳನ್ನು ಅನುಲಕ್ಷಿಸುವುದು ತೀರಾ ಅಗತ್ಯ. ಹೀಗೆ ಹೇಳಿದಾಗ ಹೈಮನೋಪ್ತೆರ (Hymonoptera) ಅಂದರೆ ಆಕಾಶದಲ್ಲಿ ಸಂಗ ಹೊಂದುವ ಗುಂಪಿನ ಈ ಕೀಟಗಳಲ್ಲಿ ಗಂಡುಪಾರುಪತ್ಯ ನಿಯಂತ್ರಣವೂ ಸಹ ಕಷ್ಟಸಾಧ್ಯ. ಇಲ್ಲಿ ಉಪಕರಣಗಳ ಸಹಾಯದಿಂದ ಗರ್ಭದಾನ ಮಾಡಿಸುವ ತಾಂತ್ರಿಕತೆಯು ಬೇಡದ ಗಂಡುಗಳ ಸ್ವಚ್ಛಂದ ಸಂಗವನ್ನು ನಿಯಂತ್ರಣ ಮಾಡಲು ಅನುವು ನೀಡುತ್ತದೆ. ಭಾರತೀಯ ತುಡಿವೆ ರಾಣಿನೊಣಗಳಲ್ಲಿ ಅವುಗಳ ಲೈಂಗಿಕಾಂಗವು ಉಪಕರಣಗಳನ್ನು ಬಳಸಿ ಗರ್ಭಧಾರಣೆ ಮಾಡಿಸುವ ತಂತ್ರಕ್ಕೆ ಸುಲಭವಾಗಿಸಿದರೂ ಸಹ ಭಾರತೀಯ ತುಡಿವೆ ಗಂಡುನೊಣಗಳಿಂದ ಬೀಜಾಣುಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಸಂಗ್ರಹಿಸುವುದು ಅತ್ಯಂತ ಕಷ್ಟಕರವಾಗಿದೆ. ಅದೇನೆ ಇದ್ದರೂ ಸಹ ಜೇನು ತಳಿ ಸುಧಾರಣೆಗೆ ಬಳಸುವ ಜೇನು ಕುಟುಂಬಗಳಲ್ಲಿ ಈ ಕೆಳಗಿನ ಅಂಶಗಳು ಇರಬೇಕಾದದ್ದು ಅಪೇಕ್ಷಣೀಯ. ಅದೇನೆಂದರೆ

  1. ದೊಡ್ಡದಾದ ದೇಹಗಾತ್ರ
  2. ಉದ್ದನೆಯ ಹೀರುಕೊಳವೆ (೫.೫ಮಿ.ಮೀ.ಕ್ಕಿಂತ ಮಿಕ್ಕಿರುವ ಅಪೇಕ್ಷಿತ ಹೀರುಕೊಳವೆ)
  3. ಖಾಯಿಲೆ ನಿರೋಧಿಸುವ ಗುಣ
  4. ದೀರ್ಘಾಯುತ್ವ
  5. ಸೌಮ್ಯ ಸ್ವಭಾವ
  6. ಕಡಿಮೆ ಪಾಲಾಗುವ ಗುಣ
  7. ಹೆಚ್ಚು ಜೇನು ತುಪ್ಪ ಸಂಗ್ರಹ ಮಾಡುವ ಗುಣ.


೧) ಮೊಟ್ಟೆ ಹಾಗೂ ಹುಳಬೆಳೆಸುವಿಕೆ:-

[ಬದಲಾಯಿಸಿ]

ತುಡಿವೆ ಜೇನು ಕುಟುಂಬಗಳಲ್ಲಿ ಸಂಸಾರ ಮತ್ತು ಹುಳ ಮೊಟ್ಟೆ ಬೆಳೆಸುವಿಕೆಯು ವಾತಾವರಣದಲ್ಲಿ ಸರಿಸುಮಾರು ೩೦ ರಿಂದ ೩೪ಡಿಗ್ರಿ ಸೆಂಟಿಗ್ರೇಡ್ ಉಷ್ಣತಾಮಾನವಿರುವ ದಿನಗಳಲ್ಲಿ ಉತ್ತಮವಾಗಿ ನಡೆಯುತ್ತದೆ. ಆ ವಾತಾವರಣದಲ್ಲಿ ಜೇನು ಕುಟುಂಬದ ಎಲ್ಲ ನೊಣಗಳು ಚಟುವಟಿಕೆಯಿಂದ ಕೂಡಿದ್ದು, ಅವು ದಿನದುದ್ದಕ್ಕೂ ಕೆಲಸ ನಿರ್ವಹಿಸಲು ಉತ್ತಮವಾಗಿರುತ್ತದೆ. ೪೨ಡಿಗ್ರಿ ಸೆಂಟಿಗ್ರೇಡ್ ಗರಿಷ್ಠ ತಾಪಮಾನದವರೆಗೆ ರಾಣಿಯು ಮೊಟ್ಟೆ ಹಾಕುವುದು ಕಾಣಸಿಗುತ್ತದೆ. ಅತಿ ಸಣ್ಣ ದಿನವಿರುವ (ಹಗಲು ಕಡಿಮೆ) ಮತ್ತು ಕಡಿಮೆ ತಾಪಮಾನದ ದಿನಗಳಲ್ಲಿ ಮತ್ತು ಹೆಚ್ಚು ಗಾಳಿ ಬೀಸುವಿಕೆಯಿರುವಾಗ ರಾಣಿಯು ಮೊಟ್ಟೆ ಹಾಕುವಿಕೆ (ಜನವರಿ-ಫೆಬ್ರವರಿ) ಮತ್ತು ಈ ದಿನಗಳಲ್ಲಿ ಮರಿಬೆಳೆಸುವಿಕೆ ಕುಂಠಿತವಾಗಿರುತ್ತದೆ. ದಕ್ಷಿಣಾಯನದ ಅಂತಿಮ ಭಾಗಗಳಲ್ಲಿ ಈ ವಾತಾವರಣ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವುಬಾರಿ ಕಂಡುಬರುತ್ತದೆ. ಈ ಕಾಲದಲ್ಲಿ ನಿಸರ್ಗದಲ್ಲಿರುವ ತೇವಾಂಶವು ಬಹಳಷ್ಟು ಕಡಿಮೆಯಾಗುವುದು. ಹುಳಮೊಟ್ಟೆಗಳುಳ್ಳ ಏರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ತೇವಾಂಶವು ಕಡಿಮೆಯಾಗುವುದು. ಏರಿಗಳಲ್ಲಿ ತೇವಾಂಶವು ಬತ್ತಿ ಹೋಗುವುದು. (ಡೆಸಿಕೇಷನ್). ಅನೇಕ ಕುಟುಂಬಗಳು ಈ ಅವಧಿಯಲ್ಲಿ ಇದರಿಂದ ಪರಾರಿಯಾಗುವುದನ್ನು ಸಹ ಕಾಣಬಹುದು.

೨) ಜೇನು ನೊಣಗಳ ಭ್ರೂಣ ಮತ್ತು ದೇಹ ರಚನೆ :-

[ಬದಲಾಯಿಸಿ]

ಗಂಡು ನೊಣ, ಕೆಲಸಗಾರ್ತಿ ನೊಣ ಮತ್ತು ರಾಣಿಜೇನು ನೊಣಗಳೆಲ್ಲವೂ ಸಹ ಮೊಟ್ಟೆ, ಹುಳ ಹಾಗೂ ಕೋಶಾವಸ್ಥೆಗಳನ್ನು ಹೊಂದಿ ಬೆಳೆಯುತ್ತವೆ. ಪೂರ್ಣ ದೈಹಿಕ ಮಾರ್ಪಾಡುಗಳೆಲ್ಲವೂ ಹುಳ ಹಾಗೂ ಕೋಶಾವಸ್ಥೆಯಲ್ಲಿ ಶೀಘ್ರಗತಿಯಲ್ಲಿ ಘಟಿಸುವುದು. ಅಂದರೆ, ಅವುಗಳ ಅಂಗಾಂಗಳ ಪೂರ್ಣ ಬೆಳವಣಿಗೆ, ತಲೆ, ಎದೆ, ಹೊಟ್ಟೆ ಹೀಗೆ ಒಂದು ಕೀಟಾಕಾರದಲ್ಲಿ ಬೇಕಾಗುವ ದೈಹಿಕ ಬೆಳವಣಿಗೆ ಮುಗಿದಿರುತ್ತದೆ. ಒಂದು ಜೇನು ಕುಟುಂಬದ ಕೆಲಸಗಾರ್ತಿ, ರಾಣಿ ಮತ್ತು ಗಂಡು ನೊಣಗಳ ಸಾಮಾನ್ಯ ಬೆಳವಣಿಗೆಯು ವಿವಿಧ ಹಂತಗಳಲ್ಲಿ ಈ ಕೆಳಗಿನಂತೆ ಕಾಣಬಹುದು. ವಿವಿಧ ತಳಿಗಳಲ್ಲಿ ಮತ್ತು ಹವಾಮಾನದಲ್ಲಿ ಉಂಟಾಗುವ ಬೆಚ್ಚನೆಯ ವಾತಾವರಣವನ್ನು ಅನುಸರಿಸಿ ಅವುಗಳ ಮರಿ ಬೆಳೆಸುವಿಕೆಯ ಅವಧಿಯು ಸುಮರು ೧೫ ರಿಂದ ೧೮ ದಿನಗಳ ಅವಧಿಯಲ್ಲಿರುವುದು. ಆದರೆ ಗಂಡು ಹುಳದ ಬೆಳವಣಿಗೆಯು ಮಾತ್ರ ಸುಮರು ೧ -೧/೨ ದಿನದಷ್ಟು ಅಧಿಕವಾಗುವುದು ಅಂದರೆ ೧೯.೫ ದಿನಗಳಾಗುವುದು.

ಭಾರತೀಯ ತುಡಿವೆ ಜೇನುಗಳಲ್ಲಿ ಕಂಡುಬರುವ ಮೊಟ್ಟೆ ಮರಿ ಮತ್ತು ಕೋಶಾವಸ್ಥೆ ಹಂತಗಳನ್ನು ಹಾಗೂ ವಿವಿಧ ಅಂಶಗಳನ್ನೊಳಗೊಂಡ ವಿವರಗಳು :-

[ಬದಲಾಯಿಸಿ]
ಕ್ರ.ಸಂ. ವಿವರಗಳು ಕೆಲಸಗಾರ್ತಿ ಗಂಡು ರಾಣಿ
೧. ಮೊಟ್ಟೆ ದಿನಗಳು
ಮೊಟ್ಟೆಯ ಉದ್ದ ೧.೬m.m ೧.೬m.m ೧.೬m.m
ಮೊಟ್ಟೆಯ ತೂಕ ೦.೧mg. ೦.೧mg. ೦.೧mg.
೨. ಹುಳದಾವಸ್ಥೆ ದಿನಗಳು ೪-೫ ೫-೬
ಹುಳದಾವಸ್ಥೆಯಲ್ಲಿ ಪೊರೆಕಳಚುವಿಕೆ
೩. ಕೋಶಾವಸ್ಥೆ (ದಿನಗಳಲ್ಲಿ) ೧೧-೧೨ ೧೩-೧೪ ೭-೮
ಕೋಶಾವಸ್ಥೆ ಅಂತ್ಯದಲ್ಲಿ ಪೊರೆಕಳಚುವಿಕೆ
೪. ಕಣದಿಂದ ಹೊರಬರುವ ದಿನಗಳು ೧೮-೧೯ ೨೪ ೧೫-೧೬
ದೇಹದ ಸುತ್ತಳತೆ ರುಂಡಭಾಗ (ಗರಿಷ್ಠ) ೩.೫mm. ೪mm. ೩.೯mm.
ಸಾಮಾನ್ಯ ಎತ್ತರ-ಉದ್ದ ೧೧.೫mm. - ೧೬mm.
ಸಾಮಾನ್ಯ ಕಣಗಳ ವ್ಯಾಸ ೪.೩mm. ೫mm. ೬mm.


ಈ ಮೇಲಿನ ಕ್ರಮಗಳಲ್ಲಿ ಬೆಳೆಯುತ್ತಿರುವ ಒಂದು ಕೆಲಸಗಾರ್ತಿ ನೊಣವು ತನ್ನ ಹುಳದಾವಸ್ಥೆಯಲ್ಲಿ ೪ ಬಾರಿ ಹೊರಳಿ ತೆಳುವಾದ ಪೊರೆ ಕಳಚಿಕೊಳ್ಳುತ್ತದೆ. ಅಂದರೆ ೧೮ ಘಂಟೆ ಪ್ರಾಯಾವಧಿಯಲ್ಲಿ ಹೊರಳಿ ಪೊರೆ ಕಳಚಿಕೊಳ್ಳತ್ತವೆ. ಪ್ರತಿಯೊಂದು ಹೊರಳುವಿಕೆಯಲ್ಲೂ ಅದು ಆ ಸುತ್ತಿನ ಬೆಳವಣಿಗೆಯನ್ನು ಮುಗಿಸಿರುತ್ತವೆ. ಅಂತಿಮ ಐದನೇ ಸುತ್ತಿನಲ್ಲಿ ಕೋಶಾವಸ್ಥೆಗೆ ಬಂದಿರುತ್ತದೆ. (ಅಂದರೆ ೧೮ ರಿಂದ ೨೪ ಘಂಟೆ ಪ್ರಾಯದಲ್ಲಿರುವಾಗ ೪೨-೪೮ ಘಂ. ೬೦-೬೬ ಘಂ. ಮತ್ತು ೮೪-೯೦)

ಹುಳಾದಾವಸ್ಥೆಯಲ್ಲಿ ದಾದಿ ನೊಣಗಳು ನಿರಂತರವಾಗಿ ರಾಜಶಾಹಿ ರಸದಿಂದ ೩ ದಿನ ಪರ್ಯಂತ ಮರಿಗಳಿಗೆ ಉಣಿಸುತ್ತವೆ. ಈ ರಸ ವಿಶೇಷವು ಮರಿನೊಣಗಳ ತಲೆಭಾಗದಲ್ಲಿರುವ ಹೈಪೋಪೆರೆಂಜಿಯಲ್ (Hypo pherengial) ಗ್ರಂಥಿಯಿಂದ ಕೆಲಸಗಾರ‍್ತಿ ನೊಣಗಳ ನಿರ್ದಿಷ್ಟ ಪ್ರಾಯದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ. ಈ ರಾಜಶಾಹಿ ರಸವು ಬ್ಯಾಕ್ಟೀರಿಯ ನಿರೋಧಕವಾಗಿದ್ದು, ಆಮ್ಲೀಯವಾಗಿರುತ್ತದೆ. ಈ ರಸವನ್ನು ರಾಣಿಯಾಗಿ ನೊಣ ಬೆಳೆಸಲು ಉದ್ದೇಶ ಹೊಂದಿರುವ ಹುಳಗಳಿಗೆ ಮತ್ರ ಹುಳದಾವಸ್ಥೆಯ ಪೂರ್ತಿ ಅವಧಿಗೆ ಮತ್ತು ಕೋಶಾವಸ್ಥೆ ತಲುಪುವವರೆಗೂ ಸತತವಾಗಿ ಉಣಿಸುತ್ತಿರುತ್ತವೆ. (ನೋಡಿ-ಕೆಲಸಗಾರ್ತಿ ನೊಣಗಳಲ್ಲಿರುವ ರಾಜಶಾಹಿ ರಸ ಮತ್ತು ಕೆಲವು ರಸದೂತಗಳು). ಕೆಲಸಗಾರ‍್ತಿ ನೊಣವಾಗುವ ಹುಳಗಳಿಗೆ ೪ ನೇ ದಿನದಿಂದ ಪರಾಗಮಿಶ್ರಿತ ಜೇನನ್ನು ಉಣಿಸುತ್ತವೆ. ಈ ಪರಾಗ ಮಿಶ್ರಿತ ಆಹಾರವು ಶೇ.೬೦ ಸಸಾರಜನಕಯುಕ್ತ ಘನ ಪದಾರ್ಥವೂ ಮತ್ತು ಅದರಲ್ಲಿ ಶೇ.೫೦ ರಷ್ಟು ಪಿಷ್ಟ (ಕಾರ್ಬೋಹೈಡ್ರೇಟ್) ಆಗಿರುವುದು. ಇದು ಆಮ್ಲೀಯವಾಗಿ ಸುಮಾರು ೪.೦ ಪಿ.ಹೆಚ್.ಗುಣಮಟ್ಟದಲ್ಲಿರುತ್ತದೆ. ನಮ್ಮ ದೇಶದ ಉತ್ತರಭಾಗಗಳಲ್ಲಿರುವ ತುಡಿವೆ ಕೆಲಸಗಾರ‍್ತಿ ನೊಣಗಳ ಸರಾಸರಿ ತೂಕವು ಹಸಿದಾಗ ೫೩.೯೩ ಎಂ.ಜಿ. ಮತ್ತು ಆಹಾರ ಸೇವಿಸಿರುವಾಗ ೧೨೦.೬೬ ಎಂ.ಜಿ. ಆಗಿರಬಹುದು. ದಕ್ಷಿಣ ಭಾರತೀಯ ತುಡಿವೆ ನೊಣಗಳು ೨೭ಎಂಜಿ., ಹೊಟ್ಟೆತುಂಬಿದಾಗ ೬೩ಎಂಜಿ. ಹಾಗೂ ೧ಕೆಜಿ ತೂಕದಲ್ಲಿ ಸರಾಸರಿಯಗಿ ೨೭೮೫೦ ಇರುತ್ತವೆ. ಅದೇ ರೀತಿ ಉತ್ತರ ಭಾರತೀಯ ಒಂದು ರಾಣಿ ನೊಣವು ೨೨೩.೩೨ಎಂ.ಜಿ. ಹಾಗೂ ಗಂಡು ೧೩೧.೬ ಎಂ.ಜಿ.ತೂಕವಿರಬಹುದಾಗಿದೆ.

ಕೆಲಸಗಾರ್ತಿ ನೊಣದ ಜೀವನ ಚಕ್ರ :

[ಬದಲಾಯಿಸಿ]

ಕೆಲಸಗಾರ್ತಿ ನೊಣವು ಹುಟ್ಟಿ ಕಣದಿಂದ ಹೊರಬರುತ್ತಿರುವಂತೆ (೧೯ ರಿಂದ೨೧ ದಿನಗಳು) ತನ್ನದೇಹವನ್ನು ತಾನೇ ಶುಚಿಗೊಳಿಸಿಕೊಳ್ಳತೊಡಗುತ್ತದೆ. ಇದು ರಾಣಿಯಿಂದ ಬಳುವಳಿಯಾಗಿ, ಹುಟ್ಟುವಾಗಲೇ ಬಂದಿರುವ ೧೦-೧೨ ಓವರಿಯಲ್ಸ್ ಗರ್ಭ ಕೋಶದಲ್ಲಿ ತತ್ತಿಯ ಕೋಶಗಳನ್ನು ಹೊಂದಿರುತ್ತವೆ. ಅನಂತರ ೩ ದಿನಗಳವರೆಗೆ ತನಗಿಂತ ಹಿರಿಯ ಪ್ರಾಯದ ನೊಣಗಳಿಂದ ಆಹಾರ ಪಡೆದುಕೊಳ್ಳುತ್ತದೆ. ಹೀಗೆ ಪಡೆದ ಆಹಾರವು ಜೇನಾಗಿರಬಹುದು ಇಲ್ಲವೇ ಮಕರಂದವಾಗಿರಬಹುದು. ಮತ್ತು ಕೆಲವೊಮ್ಮೆ ರಾಜಶಾಹಿ ರಸ ಅಥವಾ ಬೇರೆ ರಸ ಗ್ರಂಥಿಗಳಿಂದ ಬರುವ ರಸವನ್ನು ಮಿಶ್ರ ಮಡಿದ ಆಹಾರದ ಗುಟುಕು ಕೂಡಾ ಆಗಿರಬಹುದು. ಆ ನಂತರದ ದಿನಗಳಲ್ಲಿ ಅವುಗಳ ಆಹಾರವು ಕೇವಲ ಪರಾಗ ಮತ್ತು ಜೇನಾಗಿರುತ್ತದೆ. ಜೇನು ನೊಣಗಳು ಸೇವಿಸುವ ಪರಾಗದಿಂದ ಅದರಲ್ಲಿನ ಸಸಾರಜನಕವು ರಾಸಾಯನಿಕವಾಗಿ ವಿಭಜಿಸಲ್ಪಟ್ಟು ವೇಗವರ್ಧಕದಂತೆಯೂ ಮತ್ತು ಆರ್ಯುವರ್ಧಕವೂ ಆಗಿರುವುದು. ಇದಲ್ಲದೆ ಪೆಪ್ಟೋನ್ ಮತ್ತು ಪಾಲಿಪೆಪ್ಟೋನ್‌ಗಳಾಗಿ ನಂತರ ಅಮಿನೋ ಆಮ್ಲಗಳಿಂದ ಕೂಡಿಸಲ್ಪಟ್ಟು ಹೆಚ್ಚಿನಂಶವು ಹೈಪೋಪೆರೆಂಜಿಯಲ್ ರಸದೂತದ ಉತ್ಪತ್ಪಿಯಲ್ಲಿ ಪರಿವರ್ತನೆಗೊಳ್ಳುವುದು. ೧೦ ದಿನಗಳ ಪರ್ಯಂತ ಮತ್ರ ಪರಾಗ ಜೇನುಮಿಶ್ರಿತ ಆಹಾರ ಸೇವಿಸುತ್ತವೆ. ಅನಂತರ ಕೇವಲ ಜೇನು ಮಾತ್ರ ಆಹಾರವಾಗಿರುವುದು. ಈ ಅವಧಿಯಲ್ಲಿ ಹೆಚ್ಚು ಪರಾಗದ ಆಹಾರ ಸೇವಿಸಿದ್ದರೆ ಅದು ಹೆಚ್ಚು ಬಲಿಷ್ಠ ನೊಣವಾಗಿ ಹೆಚ್ಚು ಸಾಮರ್ಥ್ಯವನ್ನು, ಮುಂದೆ ಹೆಚ್ಚು ಮೇಣ ಉತ್ಪಾದನಾ ಶಕ್ತಿಯನ್ನು ಸಹ ಹೊಂದಿರುತ್ತದೆ. ಇದರ ಮಿದುಳು ಗಂಡು/ರಾಣಿ ನೊಣಗಳಿಗಿಂತ ದೊಡ್ಡದು. ಈ ಭಾಗವನ್ನು ಕಾರ್ಪೋರಾಪೆಡೆಂಕ್ಯುಲೇಟಾ (Corpora pedunculata) ಎನ್ನುತ್ತಾರೆ. ಜೇನುನೊಣಗಳಲ್ಲಿ ದೇಹದ ವಿವಿಧ ಅಂಗಗಳ ನಿಯಂತ್ರಣವು ಕೇವಲ ಮಿದುಳಿಗೆ ಮಾತ್ರ ಸೀಮಿತವಾಗಿಲ್ಲ ಹಾಗೂ ಐದುಕೋಣೆಗಳುಳ್ಳ ಹೃದಯ ಎನ್ನಬಹುದಾದ ಭಾಗವಿದ್ದರೂ ಪ್ರತ್ಯೇಕ ರಕ್ತ ಪರಿಚಲನಾ ವ್ಯವಸ್ಥೆಯಿಲ್ಲ. ಒಣ ಹುಲ್ಲಿನ ಬಣ್ಣದಲ್ಲಿರುವ ಇದರ ರಕ್ತದಲ್ಲಿ ಲ್ಯುಕೋಸೈಟ್(leuco cytes) ಮತ್ತು ಫ್ಯಾಗೋಸೈಟ್(phago cytes) ಎಂಬ ಎರಡು ಬಗೆ ಇದ್ದು ಫ್ಯಾಗೋಸೈಟ್ ಬಿಳಿ ರಕ್ತದಂತೆ ರೋಗನಿರೋಧಕ ಕೆಲಸ ಮಾಡುವುದು. ಉಸಿರಾಟದ ವ್ಯವಸ್ಥೆಗಾಗಿ ಗಾಳಿಚೀಲಗಳು ಶ್ವಾಸನಾಳಗಳು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ನಾಳ ಹಾಗೂ ಅದರ ಕವಲುಗಳಿವೆ. ಗಾಳಿಯು ರಂಧ್ರಗಳ ಮೂಲಕ ಸ್ಪಿರಾಕಲ್ಸ್ ಮೂಲಕ ಪ್ರವೇಶಿಸುತ್ತದೆ. ಈ ರಂಧ್ರಗಳು ಥೋರೆಕ್ಸ್ (thorex) ಗ್ರಂಥಿಯ ಮೇಲೆ ಎರಡು ಜೊತೆ ಹಾಗೂ ಹೊಟ್ಟೆಯಮೇಲೆ ಆರು ಜೊತೆಯಲ್ಲಿವೆ. ಆದರೆ ಗಂಡು ನೊಣಗಳಿಗೆ ಏಳು ಜೊತೆಯಲ್ಲಿವೆ. ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಈ ರಂಧ್ರಗಳು ತೆರೆದು ಮುಚ್ಚಿಕೊಳ್ಳುತ್ತವೆ. ಇದರ ಬಾಯಿಯ ಸುತ್ತಲೂ ಚೂಪಾದ ಕೊಳವೆಯಂತಿರುವ ರುಚಿ ಗ್ರಾಹಕಗಳಿವೆ. ಇವುಗಳಿಗೆ ಮಿದುಳಿನ ನೇರಸಂಪರ್ಕವಿದ್ದು ರುಚಿಯನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುತ್ತವೆ. ಜೇನುನೊಣಗಳಿಗೆ ಶೇ.೪ಕ್ಕಿಂತ ಕಡಿಮೆ ಸಕ್ಕರೆಯುಳ್ಳ ದ್ರವವು ಸಿಹಿ ಎನಿಸುವುದಿಲ್ಲ. ಆದುದರಿಂದ ಅದನ್ನು ಸೇವಿಸಲು ಒಪ್ಪುವುದಿಲ್ಲ. ಜೇನುನೊಣಗಳ ಕಾಲುಗಳ ತುದಿಭಾಗದಲ್ಲಿ ‘ಅರೋಲಿಯಂ' ಎಂಬ ಒಂದು ವಿಶಿಷ್ಟ ದ್ರವವಿದ್ದು ಇದರ ಸಹಾಯದಿಂದ ಅತ್ಯಂತ ನಯವಾದ ಗಾಜು ಮುಂತಾದ ಸ್ಥಳದಲ್ಲೂ ಸುಲಭವಾಗಿ ಕುಳಿತುಕೊಳ್ಳಬಲ್ಲವು. ನೊಣಗಳಿಗೆ ಅತ್ಯಂತ ಖಚಿತವಾದ ಸಮಯ ಪ್ರಜ್ಞೆ ಇರುವುದು. ಆದುದರಿಂದ ಮರಗಿಡಗಳಲ್ಲಿ ಹೂವು ಅರಳಿ ಪುಷ್ಪರಸ/ಪರಾಗ ದೊರೆಯುವ ಸಮಯಕ್ಕೆ ಅನುಗುಣವಾಗಿ ಹಗಲಿನಲ್ಲಿ ಹೂವಿನೆಡೆಗೆ ಹಾರಿಹೋಗಿ ಆಹಾರವನ್ನು ಸಂಗ್ರಹಿಸುತ್ತವೆ. ಕೆಲಸಗಾರ‍್ತಿ ನೊಣಗಳ ಎಲ್ಲ ಚಟುವಟಿಕೆಗಳು ಅವುಗಳ ದೈಹಿಕ ವಯಸ್ಸಿಗಿಂತ ಹೆಚ್ಚಾಗಿ (chronological) ಐಚ್ಛಿಕತೆಯಂತೆ (physiological) ಅವಶ್ಯಕತೆಗೆ ಸರಿಹೊಂದುವಂತೆ ನಿಯಂತ್ರಿಸಲ್ಪಡುವುದು. ಹೀಗಿರುವುದರಿಂದಲೇ ಅದರ ಚಟುವಟಿಕೆಗಳು ಆ ಕುಟುಂಬದ ಅವಶ್ಯಕತೆಗೆ ಅನುಗುಣವಾಗಿ ಕೆಲವೊಮ್ಮೆ ಬದಲಾಗಬಹುದು. ಉದಾ: ಅಕಾಲಿಕವಾಗಿ ಮೇಣ ಮತ್ತು ರಾಜಶಾಹಿ ರಸವನ್ನು ಉತ್ಪಾದಿಸುವ ಪ್ರಾಯದ ನೊಣಗಳಲ್ಲದ ನೊಣಗಳು ಸಹ ಸಾಂದರ್ಭಿವಾಗಿ ಜೇನುಮೇಣ, ರಾಜಶಾಹಿರಸವನ್ನು ಉತ್ಪಾದಿಸುವುದಾಗಿದೆ. ಮತ್ತುಳಿದ ಕೆಲಸ ಹಾಗೂ ಕ್ಷೇತ್ರ ಕಾರ್ಯಗಳು ಸಹ ಹೀಗೆ ಬದಲಾಗಬಹುದು. ಜೇನು ನೊಣಗಳು ಬೆಳಕಿಗೆ ಆಕರ್ಷಿಸಲ್ಪಡುವ ಗುಣವನ್ನು ಹೊಂದಿವೆ. ಇದನ್ನು ಫೊಟೋ ಪಾಸಿಟಿವ್ (photo positive) ಗುಣವೆನ್ನುವರು. ಅನೇಕವೇಳೆ ವಿದ್ಯುತ್ ದೀಪದೆಡೆಗೆ ನೊಣಗಳು ಗಿರಕಿ ಹೊಡೆಯುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ. ಮತ್ತು ಗುರುತ್ವ ವಿರುದ್ಧ ಚಲಿಸುವ ಗುಣವನ್ನು ಸಹ ತೋರಿಸುತ್ತವೆ. ಇದನ್ನು ಜಿಯೋನೆಗೆಟಿವ್ (geo negetieve) ಗುಣವೆನ್ನುವರು. ಆದುದರಿಂದ ಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸುವಾಗ ಅಡಿಮಣೆಯನ್ನು ಇಳಿಜಾರಾಗಿರಿಸಿ ಅಡಿಮಣೆಯ ಇಳಿಜಾರಿನಲ್ಲಿ ಕೆಳಗಿನಿಂದ ಮೇಲಕ್ಕೆ ಏರುವಂತೆ ಮಾಡಿ, ನೊಣಗಳನ್ನು ಪೆಟ್ಟಿಗೆಗೆ ಸೇರಿಸುವ ಕೆಲಸವನ್ನು ಸುಲಭಗೊಳಿಸಿಕೊಳ್ಳಬಹುದು. ಕೆಲಸಗಾರ್ತಿ ಜೇನುನೊಣಗಳ ಜೀವನಾವಧಿಯು ಸುಮಾರಾಗಿ ೨೨ ದಿನಗಳಿಂದ ೫೭ ದಿನಳಾವಧಿಯಲ್ಲಿದ್ದು ಮತ್ತು ಅದು ಹುಟ್ಟುವ ಋತು ಹಾಗೂ ಅದರ ಚಟುವಟಿಕೆಗಳನ್ನು ಅವಲಂಬಿಸಿದೆ. ಸಮಶೀತೋಷ್ಣ ವಲಯದಲ್ಲಿ ಜೇನು ನೊಣಗಳಿಗೆ ಆಹಾರವು ವರ್ಷಪೂರ್ತಿ ಸರಿಸುಮಾರಾಗಿ ದೊರಕುವುದು. ಹಾಗಾಗಿ ವರ್ಷವೆಲ್ಲ ಸಂಸಾರದ ಮೊಟ್ಟೆಮರಿ ಬೆಳೆಸುವಿಕೆಯು ನಿರಂತರವಾಗಿರುವುದು. ಈ ಪರಿಣಾಮವಾಗಿ ಅದು ಹೆಚ್ಚು ಕೆಲಸ ನಿರ್ವಹಿಸಬೇಕಾಗಿ ಬರುವುದರಿಂದ ಅಲ್ಪಾಯು ಆಗುವುದು. ಬೇರೆ ಪ್ರದೇಶಗಳಲ್ಲಿ ಅದೇರೀತಿ ಮಳೆಗಾಲ ಚಳಿಗಾಲದಲ್ಲಿ ಸಂಸಾರದಲ್ಲಿ ಕುಂಠಿತಗೊಳ್ಳುವ ಮೊಟ್ಟೆಮರಿ ಬೆಳೆಸುವಿಕೆ ಪರಿಣಾಮವು ಅವುಗಳ ದೇಹದಲ್ಲಿ ಸಸಾರಜನಕಾಂಶದ ಮಟ್ಟವು ವೃದ್ಧಿಸಿ ಹಾಗೂ ಕೆಲಸಕಾರ್ಯ ಕುಂಠಿತಗೊಂಡು ಆಯಸ್ಸು ಹೆಚ್ಚುವುದು. ೪೨ದಿನಗಳಿಗಿಂತ ಕಡಿಮೆ ವಯಸ್ಸಿನ ನೊಣಗಳು ಏರಿಗಳ ಕಣ ಶುಚಿಗೊಳಿಸುವಿಕೆ ಮತ್ತು ಕಣದಲ್ಲಿ ಬೆಳೆಯುತ್ತಿರುವ ಹುಳಗಳಿಗೆ ಶುಶ್ರೂಷೆ ಮಾಡುವವು. ಮೊದಮೊದಲು ದೊಡ್ಡಹುಳಗಳಿಗೆ ಮಾತ್ರ ಆಹಾರವನ್ನು ಕೊಡುತ್ತವೆ. ಅನಂತರ ಎಲ್ಲಾ ಪ್ರಾಯದಲ್ಲಿರುವ ಕಣದಲ್ಲಿ ಬೆಳೆಯುತ್ತಿರುವ ಹುಳಗಳಿಗೆ ಆಹಾರ ನೀಡುತ್ತವೆ. ೬-೭ದಿನಗಳಲ್ಲಿ ಅನೇಕ (೮ಸಾವಿರಕ್ಕೂ ಮಿಕ್ಕಿ) ಸಾವಿರ ಬಾರಿ ಆಹಾರವನ್ನು ಒದಗಿಸುತ್ತವೆ. ೬ರಿಂದ ೧೨ದಿನಗಳ ಪ್ರಾಯದ ನೊಣಗಳು ಮೊಟ್ಟೆಹಾಕುವ ರಾಣಿಗೆ ಆಹಾರ ಉಣಿಸುತ್ತವೆ. ಹೀಗೆ ರಾಣಿಗೆ ಉಣಿಸಲು ಅವುಗಳ ತಲೆಯ ಭಾಗಲ್ಲಿರುವ ಹೈಪೋಪರೆಂಜಿಯಲ್ ಗ್ರಂಥಿಯಿಂದ ವಿಶಿಷ್ಟವಾದ ರಾಜಶಾಹಿರಸವು ಉತ್ಪಾದನೆಗೊಳ್ಳುವುದು. ನಂತರದ ದಿನಗಳಲ್ಲಿ ಶುಶ್ರೂಷತನವು ಕೊನೆಗೊಳ್ಳುತ್ತದೆ. ಅಲ್ಲದೆ ೧೪-೨೦ದಿನ ಪ್ರಾಯದ ನೊಣಗಳು ಹೊಸ ಏರಿ ರಚನೆಯ ಕಾರ್ಯದಲ್ಲಿ ತೊಡಗುತ್ತವೆ. ಆ ಸಮಯದಲ್ಲಿ ಅವುಗಳ ಹೊಟ್ಟೆಯ ತಳಭಾಗದಲ್ಲಿ ಇರುವ ೪ ಜೊತೆ ಮೇಣದ ಗ್ರಂಥಿಗಳು ಸಕ್ರಿಯಗೊಂಡಿರುತ್ತವೆ. ಈ ಸಮಯದಲ್ಲಿ ಅವು ಮಣಿಸರವನ್ನು ಪೋಣಿಸಿದಂತೆ ತಳುಕು ಹಾಕಿ ನಿಶ್ಚಲವಾಗಿ ಕುಳಿತು ಮೇಣ ಉತ್ಪಾದನೆಗೆ ತೊಡಗುತ್ತವೆ. ೩ನೇವಾರದ ಪ್ರಾಯದಲ್ಲಿ ಗೂಡಿನಿಂದ ಹೊರಗಡೆಗೆ ಹೊರಟು ಸಣ್ಣಸಣ್ಣ ಹಾರಾಟವನ್ನು ಪ್ರಾಂಭಿಸುತ್ತವೆ. ಅವುಗಳಲ್ಲಿ ಕೆಲವು ಹಿರಿಯ ನೊಣಗಳು ಆ ಸಮಯದಲ್ಲಿ ಮುಖದ್ವಾರದಲ್ಲಿ ಕುಳಿತು ಪಹರೆ ಕೆಲಸಗಳನ್ನು ನಡೆಸುತ್ತವೆ. ಒಳಬರುವ ನೊಣಗಳನ್ನು ಪರಿಶೀಲನೆ ಮಾಡಿ ಕುಡಿಮೀಸೆಯಿಂದ ಮೂಸಿನೋಡಿ ಗೂಡಿನ ವಾಸನೆಯನ್ನು ಹೊಂದಿರದ, ಆಹಾರವನ್ನೂ ಹೊಂದಿರದ ನೊಣವನ್ನು ಹೊರಗಟ್ಟುತ್ತವೆ. ಅಲ್ಲದೆ ಕುಟುಂಬವು ಹೊಸ ಸ್ಥಳಕ್ಕೆ ಹೋಗಿ ನೆಲೆಸುವ ಸನ್ನಿವೇಶದಲ್ಲಿ ಕೆಲವು ಅನ್ವೇಷಕ ನೊಣಗಳು ಮೊದಲು ಆಹಾರ ಹಾಗೂ ಶತ್ರುಗಳ ಉಪಟಳವಿಲ್ಲದ ಉತ್ತಮವಾದ ವಾತಾವರಣವನ್ನು ಹೊಂದಿರುವ ಪ್ರದೇಶವನ್ನು ಆಯ್ಕೆಮಾಡಿ ತನ್ನ ಕುಟುಂಬ ನೆಲೆಸಲು ಬೇಕಾಗಿರುವ ನೆಲೆಗಳನ್ನು ಕಂಡುಹಿಡಿಯುವವು. ಅಂತಹ ಹೊಸ ನೆಲೆಗಳಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರು ವಾಸಮಾಡಲು ಬೇಕಾಗುವಷ್ಟು ಪೊಟರೆಯು ವಿಶಾಲವಾಗಿದೆಯೇ ಎಂಬೆಲ್ಲಾ ಸೂಕ್ಷ್ಮ ಅಂಶಗಳನ್ನೂ ಸಹ ಅರಿತುಕೊಳ್ಳಲು ಪೊಟರೆಯೊಳಗೆ ಪ್ರವೇಶಿಸಿ ಜೋರಾಗಿ ರೆಕ್ಕೆಯಿಂದ ಶಬ್ದಹೊರಡಿಸಿ ಪ್ರತಿಧ್ವನಿ ಮೂಲಕ ಆ ಸ್ಥಳದ ವಿಶಾಲತೆಯನ್ನು ಗ್ರಹಿಸುತ್ತವೆ. ಅನಂತರದಲ್ಲಿ ಆ ಸ್ಥಳಕ್ಕೆ ರಾಣಿಯೊಂದಿಗೆ ಎಲ್ಲಾ ಸದಸ್ಯರು ಅನುಸರಿಸಿ ಹಾರಿಬರಲು ಮಾರ್ಗದರ್ಶನ ಇವೇ ಮುಂತಾದ ಅನೇಕ ಸಾಂದರ್ಭಿಕ ಕೆಲಸಗಳನ್ನೂ ನೋಡಿಕೊಳ್ಳುತ್ತವೆ. ಗೂಡಿನೊಳಗೆ ಶತ್ರುಗಳು ಬರದಂತೆ ರಕ್ಷಣೆ ಕೆಲಸವನ್ನು ನಿರ್ವಹಿಸುವವು. ಒಂದು ವೇಳೆ ಶತ್ರುಗಳು ಪ್ರಬಲವಾಗಿದ್ದು ಗೂಡಿನೊಳಗೆ ಅತಿಕ್ರಮಿಸಿದರೆ ವಿಶಿಷ್ಟ ಶಬ್ದವನ್ನು ಹೊರಡಿಸಿ ಎಚ್ಚರಿಕೆಯನ್ನು ನೀಡುವವು ಮತ್ತು ಶತ್ರುವನ್ನು ಆಕ್ರಮಿಸಿ ಹಿಮ್ಮೆಟ್ಟಿಸುತ್ತವೆ/ಕೊಂದು ಎಸೆಯುತ್ತವೆ. ಮೊಟ್ಟೆ ಮರಿಯುಳ್ಳ ಏರಿಗಳಮೇಲೆ ಒತ್ತಾಗಿ ಕುಳಿತು ಶಾಖ ಸಂರಕ್ಷಣೆಯ ಕೆಲಸವನ್ನೂ ಇಲ್ಲವೆ ಗೂಡಿನ ಶಾಖ ೯೮ ಡಿಗ್ರಿಗಳಿಗಿಂತ ಅಧಿಕವಾಗತೊಡಗಿದರೆ ರೆಕ್ಕೆಗಳನ್ನು ಜೋರಾಗಿ ಬೀಸುವ ಮೂಲಕ ತಣ್ಣನೆಯ ಗಾಳಿಯನ್ನು ಗೂಡಿನೊಳಗೆ ಕಳುಹಿಸಿ ತಂಪಾಗಿಸಲು ಯತ್ನಿಸುತ್ತವೆ. ಅಧಿಕ ಶಾಖದಿಂದ ಏರಿಗಳು ಕಳಚಿ ಬೀಳದಂತೆ ಮಾಡಲು ನೀರನ್ನು ಅನ್ವೇಷಿಸಿ ಕೂಡಲೇ ತಂದು ಏರಿಯ ಬುಡಕ್ಕೆ ನೀರನ್ನು ತುಂತುರು ಹನಿಯಂತೆ ಸಿಂಪಡಿಸುವವು. ಅಲ್ಲದೇ ಬೇಡದ ಕಸಕಡ್ಡಿಗಳನ್ನು ಗೂಡಿನಿಂದ ತೆಗೆದು ಹೊರಹಾಕುತ್ತವೆ. ಅಂಗವಿಹೀನ/ಸತ್ತುಹೋದ ನೊಣಗಳನ್ನು ಹೊರಕ್ಕೆ ಎಸೆಯುವವು. ಶುಚಿ ಮಾಡುವ ಕೆಲಸವನ್ನು ಸದಾ ನೋಡಿಕೊಳ್ಳುತ್ತಿರುತ್ತವೆ. ಗೂಡಿನಲ್ಲಿ ಸದಾ ಒಂದಲ್ಲ ಇನ್ನೊಂದು ಕೆಲಸವನ್ನು ನಿಷ್ಠೆಯಿಂದಲೂ, ಕಾಳಜಿಯಿಂದಲೂ ನಿರ್ವಹಿಸುತ್ತವೆ. ಹೀಗೆ ಕಾಲಕಾಲಕ್ಕೆ ಆಗಬೇಕಾಗಿರುವ ಎಲ್ಲಾ ಕೆಲಸಗಳನ್ನು ತಪ್ಪದೇ ನಿರ್ವಹಿಸುತ್ತಿರುವಂತೆಯೇ ಅವುಗಳ ರೆಕ್ಕೆಯು ಸವೆದು ಬಲಹೀನವಾಗುತ್ತಿರುವಂತಹ ಈ ಅವಧಿಯಲ್ಲಿ ಬಹುತೇಕವಾಗಿ ಅವುಗಳ ಜೀವನವೇ ಮುಗಿದು ಹೋಗಿರುತ್ತದೆ. ಇನ್ನೂ ಹಿರಿಯ ನೊಣಗಳು ಮಕರಂದವನ್ನು ಕಲೆಹಾಕಿ ತಂದ ನೊಣಗಳಿಂದ ಮಕರಂದವನ್ನು ಪಡೆದು, ಅದನ್ನು ಜೇನುತುಪ್ಪವಾಗಿ ಪರಿವರ್ತಿಸುವ ಕೆಲಸ ಹಾಗೂ ದಾಸ್ತಾನು ಮಾಡುವ ಕೆಲಸವನ್ನು ಮಾಡುತ್ತವೆ. ೩ ವಾರ ಪ್ರಾಯದ ನಂತರ, ಪರಾಗ-ಪುಷ್ಪರಸ-ನೀರು ಸಂಗ್ರಹಿಸಿ ತರುವುದು ಮುಂತಾದ ಕೆಲಸವನ್ನು ಮಾಡುತ್ತವೆ. ಜೇನು ಕುಟುಂಬದಲ್ಲಿನ ಬಹುಪಾಲು ಸಂಖ್ಯೆಯಲ್ಲಿರುವ ಈ ಕೆಲಸಗಾರ್ತಿ ನೊಣಗಳು ಗೂಡಿನ ಎಲ್ಲಾ ಅವಶ್ಯಕವಾದ ಕೆಲಸಕಾರ್ಯಗಳನ್ನು ಕ್ಲುಪ್ತವಾಗಿ ಮಾಡಿ ತನ್ನ ಕೆಲಸವನ್ನು ಮುಗಿಸುತ್ತವೆ. ಈ ಸಲುವಾಗಿ ಅವುಗಳಲ್ಲಿರುವ ಅಂಗಾಂಗಗಳು ಚೆನ್ನಾಗಿ ಬೆಳವಣಿಗೆಯಾಗಿದ್ದರೂ ಅವುಗಳ ಪ್ರಜನನಾಂಗವು ಮಾತ್ರ ಅಪೂರ್ಣ ಬೆಳವಣಿಗೆಯಾಗಿದ್ದು ಸಹಜ ಕೆಲಸವನ್ನು ನಿರ್ವಹಿಸಲಾರದು. ಆದುದರಿಂದ ಇವು ಅಪೂರ್ಣವಾಗಿ ಬೆಳೆದ ಹೆಣ್ಣುನೊಣಗಳು ಎನಿಸಿಕೊಳ್ಳುತ್ತವೆ. ಅವು ಹೀಗೆ ಮಾಡುವ ಎಲ್ಲಾ ಕೆಲಸಕಾರ್ಯಗಳಿಗೆ ಅವುಗಳು ಹುಟ್ಟುವಾಗಲೇ ಪಡೆದು ಬಂದಿರುವ ವಿಶೇಷ ಅಂಗಾಂಗಗಳು ಮತ್ತು ವಿಶಿಷ್ಟ ರಸದೂತಗಳು ಮುಖ್ಯವಾಗಿ ಕಾರಣವೆನ್ನಬಹುದು.

ಕೆಲಸಗಾರ್ತಿ ವಿಶೇಷ ಅಂಗಾಂಗಗಳು ಮತ್ತದರ ಕಿರು ಪರಿಚಯ :

[ಬದಲಾಯಿಸಿ]
  1. ಪರಾಗ ಕುಕ್ಕೆಗಳು
  2. ವಿಶಿಷ್ಟಕೊಂಡಿಗಳುಳ್ಳ ಎರಡು ಜೊತೆ ರೆಕ್ಕೆಗಳು
  3. ಸಂಯುಕ್ತಾಕ್ಷಿಗಳು
  4. ಹೀರು ಕೊಳವೆ
  5. ಮಧು ಕೋಶ
  6. ಕುಡಿಮೀಸೆ
  7. ಚುಚ್ಚುವ ಮುಳ್ಳು
  8. ಮೇಣದ ತಟ್ಟೆಗಳು

೧) ಪರಾಗ ಕುಕ್ಕೆಗಳು (pollen baskets):-

[ಬದಲಾಯಿಸಿ]

ಕೆಲಸಗಾರ್ತಿ ನೊಣಗಳಿಗೆ ಒಂದು ಜೊತೆ ಪರಾಗ ಕುಕ್ಕೆಗಳು ಇವೆ. ಈ ಕುಕ್ಕೆಗಳಿಂದ ಉಂಡೆಕಟ್ಟಿದ ಪರಾಗವನ್ನು ಹೊತ್ತು ಗೂಡಿಗೆ ತರಲು ಸಹಾಯಕವಾಗುತ್ತದೆ. ಇದು ಜೇನುನೊಣಗಳ ಎದೆಯ ಭಾಗಕ್ಕೆ ಜೋಡಿಸಿದ ಇಬ್ಬದಿಯಲ್ಲಿರುವ ೬ ಕಾಲುಗಳ ಪೈಕಿ ಅತಿ ಹಿಂಬದಿಯ ಕಾಲುಗಳಲ್ಲಿನ ಕುಣಿಕೆಯಂತಿರುವ/ಪೊಟರೆಯಂತಿರುವ ಭಾಗವಾಗಿದೆ. ಇದರಲ್ಲಿ ಪುಷ್ಪಗಳಿಂದ ಸಂಗ್ರಹಿಸುವ ಪರಾಗದ ಕಣಗಳನ್ನು ಕಾಲುಗಳಲ್ಲಿರುವ ಸೂಕ್ಷ್ಮವಾದ ಕೂದಲುಗಳ ಸಹಾಯದಿಂದ ಒಗ್ಗೂಡಿಸಿ ಉಂಡೆಕಟ್ಟಿ ಕುಕ್ಕೆಯಲ್ಲಿ ತುಂಬಿಸಿ ಸುಮಾರು ೧೦-೨೫ ಮಿ.ಗ್ರಾಂ.ವರೆಗೂ ಗೂಡಿಗೆ ಹೊತ್ತು ತರುತ್ತವೆ. ಗಾಳಿಯಿಂದ ಪರಾಗಸ್ಪರ್ಶ ಹೊಂದುವ ಸಸ್ಯಕುಲಗಳಿಂದ ದೊರಕುವ ಹಗುರವಾದ ಮತ್ತು ಒಣಗಿದಂತಿರುವ ಪರಾಗವು ಸೇರಿದಂತೆ ಸಂಸಾರಕ್ಕೆ ಬೇಕಾಗುವ ಅನೇಕ ಜಾತಿಯ ಪುಷ್ಪಗಳ ಬಣ್ಣಬಣ್ಣದ ಪರಾಗವನ್ನು ಈ ಕುಕ್ಕೆಯಲ್ಲಿರಿಸಿ ತರುತ್ತವೆ. ಪರಾಗವನ್ನು ಸಂಗ್ರಹಿಸುವಾಗ ಏಕಜಾತಿಯ ಸಸ್ಯಗಳನ್ನು ಆಯ್ಕೆಮಾಡಿಕೊಳ್ಳತ್ತವೆ. ಹೀಗೆ ಪರಾಗವನ್ನು ಸಂಗ್ರಹಿಸುವಾಗ ದಾಡೆಯಿಂದ ಬರುವ ವಿಶಿಷ್ಟವಾದ ದ್ರವವನ್ನು ಪರಾಗದೊಂದಿಗೆ ಮಿಶ್ರಗೊಳಿಸಿ ಉಂಡೆಕಟ್ಟಿ ಕುಕ್ಕೆಯಿಂದ ತರುತ್ತವೆ ಎಂದು ನಂಬಲಾಗಿದೆ. ಆದುದರಿಂದ ಕೃತಕ ಪರಾಗ ಸ್ಪರ್ಶವನ್ನು ಮಾಡುವಾಗ ಮಾನವನ ಹಸ್ತಕ್ಷೇಪವಾದ ಪರಾಗವು ಕೆಲವೇ ನಿಮಿಷಗಳಲ್ಲಿ ಕೆಟ್ಟು ಹೋಗುವುದು ಕಂಡುಬರುವುದು. ಆದರೆ ಜೇನುನೊಣಗಳು ಸಂಗ್ರಹಿಸಿದ ಪರಾಗವು ಮಾತ್ರ ಸುರಕ್ಷಿತವಾಗಿರುವುದು ಕಂಡುಬರುತ್ತದೆ.

೨) ವಿಶಿಷ್ಟಕೊಂಡಿಗಳುಳ್ಳ ಎರಡು ಜೊತೆ ರೆಕ್ಕೆಗಳು (hooked wings):-

[ಬದಲಾಯಿಸಿ]

ನೊಣಗಳ ಎದೆಯ ಮೇಲುಭಾಗ ಅಂದರೆ ಬೆನ್ನು ಭಾಗದಲ್ಲಿ ಎಡಬಲಗಳಲ್ಲಿ ಒಂದರ ಮೇಲೊಂದು ಜೊತೆಜೊತೆಯಲ್ಲಿ ರೆಕ್ಕೆಗಳಿವೆ. ಇವು ಬಲವಾಗಿಯೂ ತೆಳುವಾದ ಹಾಗೂ ಪಾರದರ್ಶಕವೂ ಆದ ರೆಕ್ಕೆಗಳಾಗಿವೆ. ಇವು ಸುಮಾರಾಗಿ ೦.೦೦೪ದಪ್ಪವಾಗಿರುತ್ತವೆ. ಈ ರೆಕ್ಕೆಗಳು ಸುಮಾರು ೧ ಸೆಕೆಂಡ್ ಅವಧಿಯಲ್ಲಿ ೪೪೦ ಬಾರಿ ಕಂಪಿಸಬಲ್ಲದು. ಈ ರೆಕ್ಕೆಗಳ ಸಹಾಯದಿಂದ ೧ ನಿಮಿಷಕ್ಕೆ ೨೪ ಕಿ.ಮೀ. ವೇಗದಲ್ಲಿ ಹಾರಬಲ್ಲವು. ಆದರೆ ಹಾರಾಟವನ್ನು ಮಾಡುವಾಗ ಗಾಳಿಯ ವೇಗವು ೧೫-೨೫ ಕಿ.ಮೀ.ಗಿಂತ ಜಾಸ್ತಿಯಾದರೆ ಹೊರ ಹಾರಾಟವನ್ನು ನೊಣಗಳು ನಡೆಸುವುದಿಲ್ಲ. ಈ ರೆಕ್ಕೆಗಳ ಸಹಾಯದಿಂದ ಹೆಲಿಕಾಪ್ಟರ್‌ನಂತೆ ಮುಂದೆ, ಹಿಂದೆ, ಎಡ, ಬಲ ಮತ್ತು ಮೇಲೆ-ಕೆಳಗೆ ಚಲಿಸಬಲ್ಲವು. ಈ ರೆಕ್ಕೆಗಳು ಒಂದಕ್ಕೊಂದು ಬಲವಾಗಿ ಕೊಂಡಿಗಳ ಸಹಾಯದಿಂದ ಬಂಧಿಸಲ್ಪಡುತ್ತವೆ. ರೆಕ್ಕೆಗಳ ಅಂಚಿನಲ್ಲಿರುವ ಈ ವಿಶಿಷ್ಟಕೊಂಡಿಗಳು ಜೇನುಗಳ ತಳಿಯಿಂದ ತಳಿಗೆ ಹೆಚ್ಚು ಕಡಿಮೆಯಾಗಬಹುದು. ಬೆಟ್ಟಸೀಮೆಯ ನಮ್ಮ ನೊಣಗಳಲ್ಲಿ ಸಾಮಾನ್ಯವಾಗಿ ೧೬-೧೮ ಕೊಂಡಿಗಳಿವೆ. ಇಂತಹ ಕೊಂಡಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಹೊಂದಿದ್ದರೆ ಅದರಿಂದ ನೊಣಗಳ ಹಾರಾಟಕ್ಕೆ ಪೂರಕವಾಗಿ ಕ್ಷಮತೆ ಅಧಿಕವಾಗುವುದು. ಕಠಿಣ ಪರಿಸ್ಥಿತಿಯಲ್ಲೂ ಹೆಚ್ಚು ದೂರ ದೂರಕ್ಕೆ ಹಾರಾಡಿ ಬರಲು ಮತ್ತು ದಣಿವಿಲ್ಲದ ಹಾರಾಟಕ್ಕೂ, ತನ್ಮೂಲಕ ಹೆಚ್ಚು ಜೇನು/ಪರಾಗ ಸಂಗ್ರಹಕ್ಕೂ ಕಾರಣವಾಗುವುದು. ನಮ್ಮ ತುಡಿವೆ ನೊಣಗಳ ಸರಾಸರಿ ಹಾರಾಟದ ದೂರ ೭೫೦ಮೀ. ಗಳಾಗಿದ್ದು ಈ ಪರಿಧಿಯಲ್ಲಿ ಅವು ಹೆಚ್ಚಿನ ಹಾರಾಟ ನಡೆಸಿ ಆಹಾರವನ್ನು ಅನ್ವೇಷಿಸುವುದು ಮತ್ತು ಸಂಗ್ರಹಿಸುವುದು ಮುಂತಾದ ಕೆಲಸವನ್ನು ಮಾಡಲು ಚಲನೆಗೆ ಅನುಕೂಲವಾಗುವುದು.

೩) ಸಂಯುಕ್ತಾಕ್ಷಿಗಳು (compound eyes) :-

[ಬದಲಾಯಿಸಿ]

ಜೇನುನೊಣಗಳಿಗೆ ಒಂದು ಜೊತೆ ಸಾಮಾನ್ಯ ಕಣ್ಣುಗಳಿದ್ದು, ಅಲ್ಲದೇ ಒಂದು ಸಂಯುಕ್ತಾಕ್ಷಿ ನೆತ್ತಿಯ ಭಾಗದಲ್ಲಿ ತ್ರಿಕೋನಾಕಾರದಲ್ಲಿದೆ. ಹತ್ತಿರದ ವಸ್ತುಗಳನ್ನು ಸಾಮಾನ್ಯ ಕಣ್ಣುಗಳಿಂದಲೂ, ದೂರದ ವಸ್ತುಗಳನ್ನು ಸಂಯುಕ್ತಾಕ್ಷಿಗಳಿಂದಲೂ ಗುರುತಿಸುತ್ತವೆ. ಇವುಗಳ ದೃಷ್ಟಿಯು ವಸ್ತುವನ್ನು ಬಿಡಿಬಿಡಿಯಾಗಿ ಹಾಗೂ ಬೇರೆಬೇರೆ ದೃಷ್ಟಿನರಗಳಿಂದ ಹೆಣೆದು ಕೇಂದ್ರೀಕರಿಸಿದ ಚಿತ್ರವಾಗಿರುತ್ತದೆ. ಇದನ್ನು ಮೊಸಾಯಿಕ್ ದೃಷ್ಟಿ ಎನ್ನುತ್ತೇವೆ. ದೂರದ ವಸ್ತುಗಳನ್ನು ಸಂಯುಕ್ತಾಕ್ಷಿಗಳಿಂದ ಗುರುತಿಸುವಾಗ ಸರಳ ಕಣ್ಣುಗಳ ನೆರವನ್ನೂ ಸಹ ಪಡೆದು ಆಕೃತಿಯ ಸ್ಪಷ್ಟ ಚಿತ್ರವನ್ನು ಹೊಂದುತ್ತವೆ. ಜೇನುನೊಣಗಳು ನೀಲಿ, ಹಳದಿ ಮತ್ತು ಬಿಳಿ ಬಣ್ಣಗಳನ್ನು ಸುಲಭವಾಗಿ ಗುರುತಿಸಬಲ್ಲವು. ಹಳದಿ ಮತ್ತು ಹಸಿರು ಬಣ್ಣವು ನೀಲಿಯಂತೆ ಗುರುತಿಸಲ್ಪಡುವುದಾದರೂ ಕೆಂಪುಬಣ್ಣವು ಅವುಗಳಿಗೆ ಕಾಣಿಸಲಾರದು. ಅಲ್ಲದೆ ನೀಲ ರೋಹಿತ ಕಿರಣಗಳನ್ನೂ (ultraviolet) ಸಹ ಗುರುತಿಸಬಲ್ಲವು. ಜೇನು ನೊಣಗಳು ಪುಷ್ಪಗಳನ್ನು ಗುರುತಿಸಲು ಬಣ್ಣವು ನೆರವಾಗುವುದು. ಅದೇ ರೀತಿ ಗಂಡು ನೊಣಗಳಿಗೆ ರಾಣಿನೊಣವನ್ನು ಕಂಡುಹಿಡಿಯಲು ಸಹ ನೆರವಾಗುವುದು. ಗಂಡುನೊಣಗಳಿಗೆ ರಾಣಿ ಹಾಗೂ ಕೆಲಸಗಾರ್ತಿ ನೊಣಗಳಿಗಿಂತ ಪ್ರಬಲವಾದ ಕಣ್ಣುಗಳಿದ್ದು ರಾಣಿಯನ್ನು ದೂರದಿಂದಲೇ ಗುರುತಿಸಲು ಅದು ನೆರವಾಗುವುದು.

೪) ಹೀರು ಕೊಳವೆ (Probosis) :-

[ಬದಲಾಯಿಸಿ]

ಕೆಲಸಗಾರ್ತಿ ಜೇನುನೊಣಗಳ ತಲೆಯ ಎದುರು ಭಾಗದಲ್ಲಿರುವ ಬಾಯಿಯ ಭಾಗದಲ್ಲಿ ಈ ಹೀರು ಕೊಳವೆಯು ಇರುವುದು. ಇದು ಆಹಾರ ನಾಳದ ಒಂದು ತುದಿಯಾಗಿದ್ದು ವಿಶಿಷ್ಟವಾದ ಮಾಂಸಖಂಡಗಳನ್ನೊಳಗೊಂಡಿದೆ. ಇದು ಬೇಕೆನಿಸಿದಾಗ ಮಾತ್ರ ಹೊರಚಾಚಿ ಅದರ ಮಧ್ಯಭಾಗದಲ್ಲಿ ರಂಧ್ರವುಳ್ಳ ಹೀರುಕೊಳವೆಯಾಗಿ ಪರಿಣಮಿಸುವುದು. ಇದರ ಮೂಲಕ ತಲೆಯ ಮೇಲ್ಭಾಗದಲ್ಲಿರುವ (ಆಳದ ನೀರೆತ್ತಿ ಹೊರನೂಕುವ ಪಂಪಿನಂತೆ) ಕೆಲಸಮಾಡುವ ಒಂದು ಅಂಗದ ಸಹಾಯದಿಂದ ಪುಷ್ಪಪಾತ್ರೆಗಳಲ್ಲಿರುವ ಮಕರಂದವನ್ನು/ನೀರಿನ ತಾಣದಿಂದ ಅವಶ್ಯಕತೆಗೆ ತಕ್ಕಂತೆ ಇದೇ ಅಂಗದ ಸಹಾಯದಿಂದ ನೀರನ್ನು ಸಹ ಹೀರಿ ಮಧುಕೋಶದಲ್ಲಿ ತುಂಬಿಸಿಕೊಂಡು ಗೂಡಿಗೆ ಹೊತ್ತು ತರುತ್ತವೆ. ಇದಲ್ಲದೇ ಹೀರುಕೊಳವೆಯ ಸಹಾಯದಿಂದ ಸಜಲಗೊಳಿಸಿದ ಪರಾಗವನ್ನೂ ಸಹ ಬಾಯಿಗೆ ತರಬಲ್ಲವು ಹಾಗೂ ಪರಾಗವನ್ನು ತಿಂದು ಅದರಲ್ಲಿರುವ ಉಳಿಕೆಯನ್ನು ಅಂದರೆ ಕರಗದೇ ಉಳಿದ ಭಾಗವನ್ನು ಕಣದಲ್ಲಿ ಮೊಟ್ಟೆಯು ತಳದಲ್ಲಿ ಭದ್ರವಾಗಿ ಕೂಡಿಸಲು ಅಲ್ಪ ಪ್ರಮಾಣದಲ್ಲಿ ಬಳಸುತ್ತವೆ. ಈ ಹೀರುಕೊಳವೆಯೂ ಸಹ ತಳಿಯಿಂದ ತಳಿಗೆ ಹೆಚ್ಚು ಉದ್ದ ಅಥವಾ ಗಿಡ್ಡವಾಗಿರಬಹುದು. ಸಾಮಾನ್ಯವಾಗಿ ೪.೩ ಮಿ.ಮೀ.ನಿಂದ ೬ ಮಿ.ಮೀ. ಉದ್ದದವರೆಗೆ ಬೇರೆಬೇರೆ ತಳಿಯ ನೊಣಗಳು ಹೊಂದಿರಬಹುದು. ಈ ಕೊಳವೆಯು ಹೆಚ್ಚು ಉದ್ದವಾಗಿದ್ದರೆ ಆಳದ ಪುಷ್ಪಪಾತ್ರೆಗಳಿಂದಲೂ ಸರಾಗವಾಗಿ ಮಕರಂದವನ್ನು ಹೀರಿ ಆ ಮೂಲಕ ಹೆಚ್ಚು ಜೇನನ್ನು ಗೂಡಿನಲ್ಲಿ ಸಂಗ್ರಹಿಸಲು ತುಂಬಾ ಸಹಾಯಕವಾಗಬಲ್ಲದು. ಈ ಹಿಂದೆ ಈಗಿನ ಉಡುಪಿ ಜಿಲ್ಲೆಯ ವಿವಿಧ ಮಧುವನಗಳಲ್ಲಿ ಬೇರೆಬೇರೆ ಜೇನು ಕುಟುಂಬಗಳಲ್ಲಿ ಪ್ರಯೋಗಾತ್ಮಕವಾಗಿ ಈ ಹೀರುಕೊಳವೆಯ ಉದ್ದಳತೆಯ ಸಮೀಕ್ಷೆಯನ್ನು ಮಾನ್ಯ ಶ್ರೀ ಕೆ.ಎಮ್. ಜೋಯಪ್ಪನವರು (ಆಗಿನ ಪೂರ್ವವಲಯದ ಜೇನು ಕೃಷಿ ಅಭಿವೃದ್ಧಿ ಅಧಿಕಾರಿಗಳು) ಗ್ಲಾಸನೋಮೀಟರ್‌ನಿಂದ ನಡೆಸಿದ್ದು ಅದರ ಕೆಲವು ಸ್ಯಾಂಪಲ್‌ಗಳು ಲಭ್ಯವಾಗಿದ್ದು ವಾಚಕರ ಪರಿಜ್ಞಾನಕ್ಕಾಗಿ ನೀಡಲಾಗಿದೆ.

ಕ್ರ.ಸಂ. ಕುಟುಂಬಗಳ ಕ್ರ.ಸಂ. ಹೀರುಕೊಳವೆ ಉದ್ದ ಮಿ.ಮೀ.
೧.
೨. ೫.೫
೩. ೪.೫
೪. ೧೩ ೪.೫
೫. ೧೫
೬. ೨೩ ೫.೫
೭. ೨೬
೮. ೨೭
೯. ೨೮
೧೦. ೩೩
೧೧. ೩೫
೧೨. ೩೬
೧೩. ೪೮ ೪.೫
೧೪. ೬೮ ೪.೫
೧೫. ೮೦
೧೬. ೮೬

೫) ಮಧು ಕೋಶ (Crop/Honey stomach):-

[ಬದಲಾಯಿಸಿ]

ಇದು ಆಹಾರ ನಾಳವು ಉದರಕ್ಕೆ ಸೇರುವ ಜಾಗದಲ್ಲಿರುವ ದೊಡ್ಡದಾದ ಚೀಲದಂತಹ ಭಾಗವಾಗಿದೆ. ಕೆಲಸಗಾರ್ತಿ ನೊಣಗಳಲ್ಲಿ ಮಾತ್ರ ಇದು ಅಭಿವೃದ್ಧಿಯಾಗಿದೆ. ಇದರಲ್ಲಿ ಪುಷ್ಪಗಳಿಂದ ಹೀರಿಕೊಂಡ ಮಕರಂದವನ್ನು ಇರಿಸಿಕೊಂಡು ತರುತ್ತವೆ. ಅನಂತರ ಏರಿಯ ಕಣಗಳಲ್ಲಿ ಕಕ್ಕಿ ಹೊರತೆಗೆದು ಸಂಗ್ರಹಿಸುತ್ತವೆ. ಈ ದ್ರವವು ಕೆಲದಿಗಳಲ್ಲಿ ಚೆನ್ನಾದ ಜೇನಾಗಿ ಮಾರ್ಪಡಿಸಲ್ಪಡುತ್ತದೆ. ಮಧುಕೋಶದಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಮಿ.ಗ್ರಾಂ. ಮಕರಂದವನ್ನು ತುಂಬಿಸಿ ತರಲು ಶಕ್ತವಾಗಿವೆ. ಮಕರಂದವು ಮಧುರವಾದ ಜೇನುತುಪ್ಪವಾಗಿ ಪರಿವರ್ತಿತವಾಗಲು ಪೂರಕವಾಗಿರುವ ಇನ್ವರ್ಟೇಜ್ (Invertage) ಎಂಬ ಒಂದು ಕಿಣ್ವವು ಸಹ ಮಧುಕೋಶದಲ್ಲಿ ಉತ್ಪತ್ತಿಯಾಗಿ ಮಕರಂದದೊಡನೆ ಬೆರೆತುಕೊಳ್ಳುವುದು. ಅಲ್ಲದೆ ಮಧುಕೋಶದಲ್ಲಿ ಸುಮಾರು ೪೦ ಮಿ.ಗ್ರಾಂ.ನಷ್ಟು ನೀರನ್ನೂ ಹೊತ್ತುತರಬಲ್ಲವು. ಜೇನುನೊಣಗಳಿಗೆ ೦.೫% ಉಪ್ಪು ನೀರು ಹೆಚ್ಚು ಒಪ್ಪಿಗೆಯಾಗುತ್ತದೆ ಮತ್ತು ಸಾಮಾನ್ಯವಾಗಿ ೪೦೦F - ೧೧೦೦F ಉಷ್ಣತೆಯಲ್ಲಿರುವ ನೀರನ್ನು ಆಯ್ಕೆಮಾಡುವುದು ಕಂಡುಬರುತ್ತವೆ. ಹೀಗೆ ಮಕರಂದವನ್ನು/ನೀರನ್ನು ಗೂಡಿನ ಬಳಕೆಗಾಗಿ ತರಲು ಹಾಗೂ ಮಕರಂದವನ್ನು ಜೇನಾಗಿ ಪರಿವರ್ತಿಸಲು ಮಧುಕೋಶವು ಬಳಸಲ್ಪಡುವುದು.

೬) ಕುಡಿಮೀಸೆ (Antenna) :-

[ಬದಲಾಯಿಸಿ]

ಇದೊಂದು ವಿಶೇಷ ಪ್ರಬಲವಾದ ಅಂಗವಾಗಿದ್ದು ಎಲ್ಲಾ ಜಾತಿಯ ಜೇನುನೊಣಗಳಲ್ಲಿ ಒಂದು ಜೊತೆಯಲ್ಲಿರುವುದು. ಮತ್ತು ಇದರಲ್ಲಿ ಅನೇಕ ಅಂಕಣಗಳು ಸಹ ಇದ್ದು ಸ್ಪರ್ಶಜ್ಞಾನದ ಹೇರಳ ತಂತುಗಳನ್ನು ಒಳಗೊಂಡಿವೆ. ಇದರಿಂದ ನೊಣಗಳು ವಿವಿಧ ನಮೂನೆಯ ವಾಸನೆಯನ್ನು ಮತ್ತು ಸ್ಪರ್ಶಜ್ಞಾನವನ್ನೂ ಸಹ ಕಂಡುಕೊಳ್ಳುತ್ತವೆ. ಇದು ಸುಮಾರು ೫ ಲಕ್ಷ ಘ್ರಾಣ ರಂಧ್ರಗಳಿಂದ ಕೂಡಿದೆ ಎನ್ನಲಾಗಿದೆ. ಗಂಡು ಜೇನುನೊಣಗಳಲ್ಲಿ ಕುಡಿಮೀಸೆಯ ಅಂಗಗಳು ಇನ್ನೂ ಹೆಚ್ಚಾಗಿದ್ದು ಪ್ರಬಲವಾಗಿದೆ. ನೊಣಗಳಿಗೆ ಗೂಡಿನ ಒಳಗೆ ಕತ್ತಲಲ್ಲಿ ಕೆಲಸ ಕಾರ್ಯಗಳಿಗೆ ಕಣ್ಣುಗಳು ಹೆಚ್ಚು ಉಪಯುಕ್ತವಾಗುವುದಿಲ್ಲ. ಆದುದರಿಂದ ಕೇವಲ ವಾಸನೆಯಿಂದಲೇ ಗುರ್ತಿಸಿಕೊಳ್ಳುವ ಅಗತ್ಯವಿದೆ. ಆದುದರಿಂದ ಇದು ಬಹಳ ಪ್ರಬಲವಾಗಿದ್ದು ಶೇ. ೫೦೦ರಲ್ಲಿ ಒಂದುಭಾಗ ದುರ್ಬಲಗೊಳಿಸಿದ ವಾಸನೆಯನ್ನು ಕೂಡಾ ಚೆನ್ನಾಗಿ ಗ್ರಹಿಸಬಲ್ಲವು. ರಾಣಿನೊಣಗಳ ಮತ್ತು ಇತರ ನೊಣಗಳ ವ್ಯಕ್ತಿಗತ ವಾಸನೆ ಹಾಗೂ ಒಂದು ರಾಣಿಯುಳ್ಳ ಕುಟುಂಬದ ಎಲ್ಲ ಸದಸ್ಯರ ವಾಸನೆ, ಹಾಗೂ ಒಟ್ಟಾಗಿ ಗೂಡಿನ ವಾಸನೆ, ಗಂಡು ನೊಣಗಳ ವಾಸನೆ, ಮರಿಹುಳಗಳಿಗೆ ತಿನ್ನಿಸುವ ರಾಜಶಾಹಿ ರಸದ ವಾಸನೆ, ಮೇಣದ ವಾಸನೆ, ಜೇನು ತುಪ್ಪದ ವಾಸನೆ, ಪರಾಗದ ವಾಸನೆ ಹೀಗೆ ಅತ್ಯಗತ್ಯವಾದ ವಿವಿಧ ವಾಸನೆಗಳ ಅರಿವನ್ನು ಕೆಲಗಾರ್ತಿ ನೊಣಗಳು ಮುಖ್ಯವಾಗಿ ಹೊಂದಿರಲೇ ಬೇಕಾಗಿರುತ್ತದೆ. ಇದಕ್ಕಾಗಿ ಕುಡಿಮೀಸೆಯಿಂದ ಅಂತಹ ಅನುಭವವನ್ನು ಹೊಂದಲು ನೆರವಾಗುವುದು. ಅಲ್ಲದೇ ಹೊಸದಾದ ಏರಿಯನ್ನು ರಚಿಸಲು ಮತ್ತು ಗುರುತ್ವಾಕರ್ಷಣೆಯನ್ನು ತಿಳಿಯಲು ಸಹ ಈ ಅಂಗವು ಸಹಕಾರಿಯಾಗಿದೆ. ಗಂಡುನೊಣಗಳಿಗೆ ತಮ್ಮ ಪ್ರಬಲವಾದ ಕುಡಿಮೀಸೆಗಳಿಂದ ವಾಸನೆಯನ್ನು ಗುರ್ತಿಸುವ ಶಕ್ತಿಯಿಂದಲೇ ಕನ್ನಿಕಾರಾಣಿಯನ್ನು ಅರಸಲು ಮತ್ತು ಜೋಡಿಯಾಗಲು ನೆರವಾಗುತ್ತದೆ. ವಾಸನೆಯನ್ನು ಅರಿಯುವ ಅಂಗಗಳು ದೇಹದ ವಿವಿಧೆಡೆಗಳಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದರೂ ಸಹ ಅದು ಕುಡಿಮೀಸೆಯ ಅಂಕಣಗಳಲ್ಲಿ ಕೇಂದೀಕೃತಗೊಂಡಿದೆ. ಇದನ್ನು ಸದಾ ಶುಚಿಯಾಗಿರಿಸಿಕೊಳ್ಳಲು ನೊಣಗಳು ಯತ್ನಿಸುತ್ತವೆ. ಅದಕ್ಕಾಗಿ ತಮ್ಮ ಮುಂಗಾಲುಗಳಲ್ಲಿರುವ ಒಂದು ‘U’ ಆಕಾರದ ಕೊಂಡಿಯನ್ನು ಬಳಸಿ ಆಗಿಂದಾಗ್ಗೆ ಕುಡಿಮೀಸೆಯನ್ನು ಇದರೊಳಗೆ ಇರಿಸಿ ತೀಡುತ್ತಾ ಮತ್ತು ಬಿಗಿಯಾಗಿ ಕುಡಿಮೀಸೆಯನ್ನು ಹಿಡಿದು ಸಿಕ್ಕಿಸಿ ಎಳೆದುಕೊಳ್ಳುವ ಮೂಲಕ ಶುಚಿಗೊಳಿಸಿಕೊಳ್ಳುತ್ತವೆ.

೭) ಚುಚ್ಚುವ ಮುಳ್ಳು (ಅಂಬು)Sting :-

[ಬದಲಾಯಿಸಿ]

ಜೇನು ನೊಣಗಳು ತಮ್ಮ ಕುಟುಂಬದ ಸಾಮೂಹಿಕ ರಕ್ಷಣೆಗೆ ಈ ಅಂಬನ್ನು ಬಳಸುತ್ತವೆ. ಇದೇ ಅವುಗಳ ಆಯುಧವಾಗಿದೆ. ತಮ್ಮ ಕುಟುಂಬ ರಕ್ಷಣೆಗಾಗಿ ಈ ಅಂಬನ್ನು ಬಳಸಿದಾಗಲೆಲ್ಲಾ ತನ್ನ ದೇಹವನ್ನೇ ಬಲಿದಾನವಾಗಿ ನೀಡುತ್ತವೆ. ಈ ರೀತಿ ಒಂದು ಆಯುಧವಿಲ್ಲದೇ ತನ್ನ ಜೇನು ಸಂಗ್ರಹದ ಭಂಡಾರವನ್ನೇ ಅವುಗಳಿಗೆ ಉಳಿಸಿಕೊಳ್ಳುವುದು ಕಠಿಣವಾಗುವುದು. ಹೊಟ್ಟೆಯ ಹಿಂಬಾಗದಲ್ಲಿ ಒಂದು ಚಿಕ್ಕ ಚೀಲದಲ್ಲಿ ಈ ಅಂಬು ಅಡಗಿರುತ್ತದೆ. ರಾಣಿ ಹಾಗೂ ಕೆಲಸಗಾರ್ತಿ ನೊಣಗಳಲ್ಲಿ ಮಾತ್ರ ಈ ಕೊಂಡಿಯು ಇರುತ್ತದೆ. ಗಂಡು ನೊಣಗಳಿಗೆ ಚುಚ್ಚುವ ಮುಳ್ಳು ಇರುವುದಿಲ್ಲ. ಈ ಅಂಬನ್ನು ಶತ್ರುಗಳ ಮೈಮೇಲೆ ಅದರಲ್ಲೂ ಮೃದುಭಾಗದಲ್ಲಿ ಊರಿದಾಗ ಮುಳ್ಳಿನ ಕೊಂಡಿಯು ಚರ್ಮದ ಆಳಕ್ಕೆ ಇಳಿದು ಆಲ್ಕಲಿಗಳಿಂದ ಕೂಡಿದ ಅಲ್ಪ ಪ್ರಮಾಣದಲ್ಲಿ ವಿಷವನ್ನು (೦.೫೦mg.) ನುಗ್ಗಿಸುತ್ತವೆ. ಈ ಮುಳ್ಳು ಮೇಲುಮುಖವಾಗಿರುವ ಉಪಮುಳ್ಳುಗಳಿಂದ ಕೂಡಿದೆ ಹಾಗೂ ಕೊಳವೆಯಂತಿದ್ದು ಬುಡದಲ್ಲಿ ವಿಶೇಷ ಮಾಂಸಖಂಡಗಳಿಂದ ಕೂಡಿದ್ದಾದ್ದರಿಂದ ಚುಚ್ಚಿದ ನಂತರ ತಾನಾಗಿ ಮುಳ್ಳು ಜೇನುನೊಣದ ಶರೀರದಿಂದ ಕಿತ್ತು ಬಲಿಪ್ರಾಣಿಯ ಚರ್ಮದ ಆಳಕ್ಕೆ ಇಳಿಯಲು ಆರಂಭಿಸುತ್ತದೆ. ಮತ್ತು ಅದೇ ಸಮಯದಲ್ಲಿ ಮುಳ್ಳಿನ ಬುಡದಲ್ಲಿರುವ ಚೀಲದಿಂದ ವಿಷವು ಮುನ್ನುಗ್ಗುತ್ತದೆ. ನಿಧಾನವಾಗಿ ವಿಷವು ರಕ್ತದೊಡನೆ ಸೇರಿ ಉರಿ ಮತ್ತು ಊತ ಕಾಣಿಸಿಕೊಳ್ಳುವುದು. ರಾಣಿ ನೊಣಗಳು ಮುಳ್ಳನ್ನು ಎದುರಾಳಿ ರಾಣಿನೊಣದೊಡನೆ ಹೋರಾಡಲು ಮಾತ್ರ ಬಳಸುತ್ತವೆ ಹಾಗೂ ಅದರಲ್ಲಿ ಉಪಮುಳ್ಳುಗಳು ಪ್ರಬಲವಾಗಿರುವುದಿಲ್ಲ ಹಾಗೂ ಅರ್ಧವಿರಾಮ ಚಿಹ್ನೆಯ ಆಕಾರದಲ್ಲಿದೆ. ಆದುದರಿಂದ ಚುಚ್ಚಿದಾಗ ರಾಣಿನೊಣದ ಶರೀರದಿಂದ ಕಿತ್ತು ಹೊರಬರುವುದಿಲ್ಲ. ಅಲ್ಲದೇ ಮನುಷ್ಯ ಅಥವಾ ಇತರ ಪ್ರಾಣಿಯ ಮೇಲೆ ರಾಣಿಯು ಎಂದೂ ತನ್ನ ಮುಳ್ಳು ಬಳಸುವುದಿಲ್ಲ. ಜೇನುನೊಣದ ವಿಷದ ಮುಖ್ಯಾಂಶವು ಮೆಲೆಟಿನ್, ಹಿಸ್ಟಾಮೈನ್, ಪ್ರೋಟೀನ್ ಹಾಗೂ ಇತರ ರಾಸಾಯನಿಕಗಳು ಒಳಗೊಂಡಿವೆ. ಜೇನುನೊಣಗಳು ಚುಚ್ಚಿದಾಗ ಮೊದಮೊದಲು ಉರಿ-ಊತ ಕಂಡುಬಂದರೂ ಸಹ ಅದು ನಮ್ಮ ದೇಹಸ್ಥಿತಿಯ ಮೇಲೆ ಬೀರುವ ಪರಿಣಾಮವು ಅಂತಿಮವಾಗಿ ನಮಗೆ ಉಪಯುಕ್ತವಾಗಿರುತ್ತದೆ. ಈ ವಿಷವು ನಮ್ಮ ರಕ್ತವಾಹಕ ಕೆಪೆಲೆರಿಗಳನ್ನು ವಿಸ್ತರಿಸಿ ರಕ್ತವು ವೇಗವಾಗಿ ಚಲಿಸಲು ನೆರವಾಗುತ್ತದೆ. ಅಲ್ಲದೆ ರಕ್ತದ ಹಿಮೋಗ್ಲೋಬಿನ್ ಕಣಗಳನ್ನೂ ಹಾಗೂ ನಿದ್ರೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಹಾವಿನ ವಿಷದಂತೆಯೇ ರೋಗ ನಾಶಕವಾಗಿ ಬಳಸಬಹುದು. ಅದಲ್ಲದೇ ಅನೇಕ ಖಾಯಿಲೆಗಳಿಗೆ ಉತ್ತಮವಾದ ಔಷಧವೂ ಆಗಿದೆ, ಚಳಿಜ್ವರ ಹಾಗೂ ಕಣ್ಣಿನ ಅನೇಕ ರೋಗಗಳಿಗೆ ಹಾಗೂ ಸಂಧಿವಾತ, ಚರ್ಮ ಒಣಗುವಿಕೆ ಮುಂತಾದ ತೊಂದರೆಗಳಿಗೆ ಉತ್ತಮ ಔಷಧವಾಗಿದೆ. ಇದನ್ನು ಸಂಗ್ರಹಿಸಿ ಒಣಗಿಸಿ ಘನರೂಪಕ್ಕೆ ತರಬಹುದು. ೧೦೦ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಸತತ ಕಾಯಿಸಿದಾಗಲೂ ಮತ್ತು ಅತಿ ಶೈತ್ಯದಲ್ಲೂ ಸಹ ತನ್ನ ಗುಣವನ್ನು ಕಳೆದುಕೊಳ್ಳದು. ಇದು ಅತ್ಯಂತ ತೀಕ್ಷ್ಣವಾಗಿದ್ದು ಒಂದು ಲಕ್ಷದ ಒಂದು ಪಾಲು ಕೂಡಾ ಪ್ರಭಾವಯುತವಾಗಿ ಕೆಲಸಮಾಡುತ್ತದೆ. ಮೊದಲ ಬಾರಿಗೆ ಜೇನುಚುಚ್ಚಿದಾಗ ಸಾಮಾನ್ಯ ಆರೋಗ್ಯ ಸ್ಥಿತಿಯಲ್ಲಿ ಜ್ವರ, ತಲೆನೋವು, ಶರೀರದ ಮೇಲೆ ದದ್ದುಗಳು ಮತ್ತು ಕಿವಿಯಲ್ಲಿ ಗುಂಯ್ ಎನ್ನುವ ಸದ್ದು, ಬೇಧಿ ಕಾಣಿಸಿಕೊಂಡರೆ ಅಂತವರು ಜೇನುನೊಣಗಳ ಅಂಬು ಚುಚ್ಚುವಿಕೆಯಿಂದ ಸುರಕ್ಷಿತವಾಗಿ ದೂರವಿರುವುದು ಒಳ್ಳೆಯದು. ಹಾಗೆಯೇ ಕ್ಷಯ, ಹೃದಯಸ್ತಂಭನ, ಮಧುಮೇಹ, ಗುಹ್ಯರೋಗ ಪೀಡಿತರು ಕೂಡ ದೂರವಿರಬೇಕು. ಜೇನು ಕೃಷಿಕರಿಗೆ ಜೇನುವಿಷದಿಂದ ಉರಿ-ಊತಗಳಿಂದ ಪ್ರತಿರೋಧ ಶಕ್ತಿ ಬರುವುದಾದರೂ ಜೇನುಕೃಷಿಯನ್ನು ದೀರ್ಘಕಾಲ ಬಿಟ್ಟಾಗ ಜೇನುನೊಣಗಳ ಚುಚ್ಚುವಿಕೆ ಇಲ್ಲದಿರುವುದರಿಂದ ಅದರಿಂದ ದೊರೆಯುವ ಈ ಪ್ರತಿರೋಧಕ ಶಕ್ತಿ ಕುಂಠಿತವಾಗುವುದು ಕಂಡುಬರುತ್ತದೆ. ಜೇನುವಿಷ ಶಮನಕಾರಿಯಾಗಿ ಹೋಮಿಯೋಪತಿ ವೈದ್ಯರು Apismel-೨೦೦/Echinacea-೨೦೦ ಬಳಸುತ್ತಾರೆ. ಗರ್ಭಿಣಿಯರಿರುವಾಗ ಜೇನುನೊಣದಿಂದ ಚುಚ್ಚಿಸಿಕೊಂಡ ಪ್ರಸಂಗಗಳಲ್ಲಿ ಆ ತಾಯಂದಿರ ಗರ್ಭದಿಂದ ಉದಿಸಿದ ಶಿಶುಗಳು ಬೆಳೆದ ನಂತರವೂ ಅಧಿಕ ಜೇನುನೊಣ ಕಡಿತಗಳಿಂದ ದುಷ್ಪರಿಣಾಮಗಳನ್ನು ಎದುರಿಸುವ ಅಪಾರ ನಿರೋಧಕ ಶಕ್ತಿಯನ್ನು ಹೊಂದಿರುವುದಲ್ಲದೇ ದಡಾರ ಇತ್ಯಾದಿ ಸೋಂಕುಗಳಿಗೆ ಒಳಗಾಗುವುದಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ. ಇದನ್ನು ವಾಣಿಜ್ಯಿಕವಾಗಿ ಸಂಗ್ರಹಿಸಿ ಉದ್ದಿಮೆ ನಡೆಸಲು ಸಾಧ್ಯವಿರುವುದರಿಂದ ವರಮಾನ ನೀಡುವುದಾಗಿದೆ. ಬಹು ಅಮೂಲ್ಯವಾದ ಈ ಜೇನುವಿಷದಿಂದ ಔಷಧೀಯ ಉಪಯೋಗ ಹೊಂದಬಹುದು. ಇದಕ್ಕಾಗಿ ಜೇನುಕುಟುಂಬಗಳಿಂದ ವಿಷವನ್ನು ಪಡೆದುಕೊಳ್ಳುವ ವಿಧಾನಗಳು ಲಭ್ಯವಿದ್ದು ಇದನ್ನು ಬಳಸಿ ಲಾಭದಾಯಕ ಉದ್ಯಮ ನಡೆಸಬಹುದಾಗಿದೆ.

೮) ಮೇಣದ ತಟ್ಟೆಗಳು: Wax plates-

[ಬದಲಾಯಿಸಿ]

ಹೊಟ್ಟೆಯ ಕೆಳಭಾಗದಲ್ಲಿ ಜೇನುನೊಣಗಳಿಗೆ ನಾಲ್ಕು ಜೊತೆ ಮೇಣದ ತಟ್ಟೆಗಳಿವೆ. ಈ ಪೈಕಿ ಮುಂದಿನ ಮೂರು ಜೊತೆ ಮೇಣದ ತಟ್ಟೆಗಳಿಂದ ಉತ್ತಮ ಪ್ರಮಾಣದಲ್ಲಿ ಮೇಣ ಉತ್ಪಾದನೆಯು ಆಗುವುದು. ಈ ತಟ್ಟೆಗಳಿಗೆ ದ್ರವರೂಪದ ಮೇಣವು ಮೇಣದ ಗ್ರಂಥಿಗಳಿಂದ ಒಸರಿ ಬಂದಾಗ ಅಲ್ಲಿ ಶಾಖ ಕಮ್ಮಿ ಇರುವುದರಿಂದ ಕೆಲಮಟ್ಟಿಗೆ ಮೇಣವು ಗಟ್ಟಿಯಾಗಲು ಆರಂಭಿಸುವುದು. ಗಟ್ಟಿಯಾಗಿರುವ ಮೇಣವನ್ನು ಹಿಂಗಾಲಿನಿಂದ ಮುಗಾಲಿಗೆ ಅನಂತರ ದಾಡೆಗೆ ಪಡೆದು ಚೆನ್ನಾಗಿ ಹದಗೊಳಿಸಿ ಏರಿ ನಿರ್ಮಿಸಲು ಬಳಸುತ್ತವೆ. ಒಮ್ಮೆ ಹೀಗೆ ಪಡೆದ ಮೇಣದ ತುಣುಕನ್ನು ಒಂದು ಬುನಾದಿ ಹಾಕಲು ನೊಣವು ಸುಮಾರು ನಾಲ್ಕು ನಿಮಿಷಗಳ ಸಮಯವನ್ನು ತೆಗೆದುಕೊಳ್ಳುವುದು. ಏರಿಯಲ್ಲಿನ ಜೇನುತುಪ್ಪವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿ ೨೪ ಗಂಟೆಗಳು ಕಳೆದನಂತರ ಮೇಣವನ್ನು ಉತ್ಪಾದಿಸುವ ಪ್ರಾಯದ ನೊಣಗಳು ಗೂಡಿನಲ್ಲಿ ಮಣಿಸರವನ್ನು ಪೋಣಿಸಿದಂತೆ ಥಳಕು ಹಾಕಿ ನಿಶ್ಚಲವಾಗಿ ಕುಳಿತು ಮೇಣ ಉತ್ಪಾದನಾ ಕೆಲಸದಲ್ಲಿ ತೊಡಗುತ್ತವೆ.

ಜೇನುನೊಣಗಳಲ್ಲಿರುವ ವಸ್ತುಸಾರ ಮತ್ತು ರಸದೂತ/ಕಿಣ್ವಗಳು (Pheromones/Glands and Enzymies):

[ಬದಲಾಯಿಸಿ]

ವಸ್ತುಸಾರ/ಫೆರಮೋನ್ (Pheromone) ಎಂದರೆ ಒಂದು ಜೀವಿಯ ವಾಸನೆಯನ್ನು ಹೊಂದಿರುವ ರಾಸಾಯನಿಕಗಳು ಅದೇ ಜಾತಿಯ ಬೇರೊಂದು ಜೀವಿಯ ಚಟುವಟಿಕೆಗಳಿಗೆ ಸಹಕಾರಿಯಾದರೆ ಅದನ್ನು ಫೆರಮೋನ್/ವಸ್ತುಸಾರ/ವಿಶಿಷ್ಟ ವಾಸನೆ ಎನ್ನಬಹುದು.

ರಸದೂತಗಳು/ಕಿಣ್ವಗಳು (Glands Enzymes):

[ಬದಲಾಯಿಸಿ]

ಇದು ಜೀವಂತ ಜೀವ ಕಣಗಳಿಂದ ಉತ್ಪಾದನೆಗೊಳ್ಳುವ ವೇಗೋತ್ಕರ್ಷಕಗಳು. ಇವು ಪದಾರ್ಥಗಳನ್ನು ಜೈವಿಕ ಹಾಗೂ ರಾಸಾಯನಿಕವಾಗಿ ಒಡೆದು ಸರಳಗೊಳಿಸಬಹುದು ಇಲ್ಲವೇ ಹೆಚ್ಚು ಸಂಕೀರ್ಣಗೊಳಿಸಬಹುದಾದ ರಾಸಾಯನಿಕ ಘಟಕಗಳಾಗಿವೆ.

ರಾಣಿನೊಣದಿಂದ ದೊರೆಯುವ ವಸ್ತುಸಾರ (Queen pheromone):

[ಬದಲಾಯಿಸಿ]

ರಾಣಿನೊಣವು ವಿಶಿಷ್ಟವಾದ ಫೆರಮೋನ್‌ನ್ನು ಹೊಂದಿರುತ್ತದೆ. ಒಂದು ರಾಣಿ ನೊಣದಲ್ಲಿ ಸುಮಾರು ನಲ್ವತ್ತಕ್ಕೂ ಮಿಕ್ಕಿ ಫೆರಮೋನ್‌ಗಳು ಇವೆ ಎಂಬುದನ್ನು ಜೇನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಇನ್ವಟೇಜ್ ಕಿಣ್ವ (Invertaze Enzymes):

[ಬದಲಾಯಿಸಿ]

ಇನ್ವರ್ಟೇಜ್ ಎಂಬ ಕಿಣ್ವವು ಕೆಲಸಗಾರ್ತಿ ನೊಣಗಳ ಮಧುಕೋಶದಲ್ಲಿರುವುದು. ಈ ಕಿಣ್ವದಿಂದ ಮಕರಂದವನ್ನು ರುಚಿಕರವಾದ ಜೇನುತುಪ್ಪವಾಗಿ ಪರಿವರ್ತಿಸಲು ನೆರವಾಗುವುದು. ಇದೂ ಸಹ ಕೆಲಸಗಾರ್ತಿ ನೊಣಗಳಲ್ಲಿರುವ ಮುಖ್ಯ ಘಟಕವಾಗಿದೆ.

ಈಗ ಕೆಲಸಗಾರ್ತಿ ನೊಣಗಳಲ್ಲಿರುವ ಕೆಲವು ರಸದೂತಗಳು ಹಾಗೂ ಕಿಣ್ವಗಳ ಕಿರು ಪರಿಚಯವನ್ನು ಮೊದಲು ಹೊಂದೋಣ :-

೧. ರಾಜಶಾಹಿರಸ/ಹೈಪೋಪೆರೆಂಜಿಯಲ್ ಗ್ಯ್ಲಾಂಡ್ (Hypo pherengial Gland- Brood Food Gland) :-

[ಬದಲಾಯಿಸಿ]

ಈ ರಸದೂತವು ಕೆಲಸಗಾರ್ತಿ ನೊಣಗಳಲ್ಲಿ ತಲೆಭಾಗದಲ್ಲಿ ಇದ್ದು, ಅದರ ಪ್ರಾಯ ೧೨-೧೫ ದಿನಗಳಿರುವಾಗ ಹೆಚ್ಚು ಸಕ್ರಿಯವಾಗಿರುವುದು. ಇದಲ್ಲದೆ ಇನ್ನೂ ಹೆಚ್ಚಿನ ಪ್ರ್ರಾಯದ ನೊಣವು ಕೆಲವು ಸಂದರ್ಭಾನುಸಾರದಲ್ಲಿ ಈ ಗ್ರಂಥಿಯನ್ನು ಸಕ್ರಿಯಗೊಳಿಸಿಕೊಂಡು ಗ್ರಂಥಿಯಿಂದ ಒಸರುವ ವಿಶಿಷ್ಟವಾದ ರಸವನ್ನು ಉತ್ಪಾದಿಸಬಹುದು. ಆದರೆ ಇದು ಅಷ್ಟೊಂದು ಗುಣಮಟ್ಟ ಹೊಂದಿರುವುದಿಲ್ಲ ಎನ್ನಲಾಗಿದೆ. ಈ ರಸವನ್ನು ರಾಜಶಾಹಿರಸವೆನ್ನುತ್ತಾರೆ. ಇದು ಪೆರೆಂಜಿಯಲ್ ಎಂಬ ತಲೆಯ ಭಾಗದಲ್ಲಿರುವ ಗ್ರಂಥಿಗಳಿಂದ ಉತ್ಪಾದನೆಯಾಗಿ ದಾಡೆಯ ಒಳಭಾಗದಲ್ಲಿ ಬಿಳಿದ್ರವದ ರೂಪದಲ್ಲಿ ಬಾಯಿಗೆ ಬಂದು ಸೇರುವುದು. ಇದು ಅನಂತರ ಮರಿಹುಳ ಬೆಳೆಸಲೋಸುಗ ಸ್ವಲ್ಪ ಪ್ರಮಾಣದಲ್ಲಿ ಹಾಗೂ ರಾಣಿಯನ್ನು ಬೆಳೆಸುವುದಕ್ಕಾಗಿ ಅಧಿಕವಾಗಿ ಬಳಸಲ್ಪಡುವುದು. ಇದಕ್ಕೆ ನಿದರ್ಶನವಾಗಿ ನಿಸರ್ಗದಲ್ಲಿ ಜೇನುಕುಟುಂಬಗಳಿಗೆ ಅಧಿಕ ಪರಾಗ ಮತ್ತು ಪುಷ್ಪರಸ ದೊರಕುವ ಋತುವಿನಲ್ಲಿ ಗೂಡಿನ ನೊಣಗಳ ಸಂಖ್ಯೆ ಗರಿಷ್ಠಮಟ್ಟ ತಲುಪುವುದು. ಆಗ ರಾಜಶಾಹಿರಸ ಉತ್ಪಾದಕ ನೊಣಗಳ ಸಂಖ್ಯೆಯು ಒಂದು ಹಂತದಲ್ಲಿ ಅಧಿಕವಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಜಶಾಹಿರಸ ಉತ್ಪಾದನೆಯಾಗುವುದು. ಆಗ ಹೆಚ್ಚಿನ ಸಂಖ್ಯೆಯ ಗಂಡುಕಣ/ರಾಣಿಕಣಗಳನ್ನು ಬೆಳೆಸಿ ಅಧಿಕವಾಗಿ ಉತ್ಪಾದನೆಯಾದ ಈ ರಸವನ್ನು ಗುಣಮಟ್ಟವುಳ್ಳ ರಾಣಿಗಳನ್ನು ಬೆಳೆಸಲು ಬಳಸುತ್ತವೆ. ಅಲ್ಲದೆ ಮೊಟ್ಟೆಗಳ ಮೇಲಿನ ಕವಚವನ್ನು ಒಡೆಯಲೂ ಸಹ ರಾಜಶಾಹಿರಸವನ್ನು ಬಳಸುತ್ತವೆ. ಕೆಲಸಗಾರ್ತಿ ನೊಣಗಳಿಗೆ ಕೊಂಚಮಾತ್ರ ಅವುಗಳ ಹುಳದಾವಸ್ಥೆಯಲ್ಲಿ ಈ ರಸವನ್ನು ನೀಡುತ್ತವೆ.

ಈ ರಾಜಶಾಹಿ ಉತ್ಪಾದಿಸುವ ಪ್ರಾಯದ ನೊಣಗಳ ಕೊರತೆಯಾದಾಗ ಗುಣಮಟ್ಟದ ರಾಜಶಾಹಿರಸದ ಉತ್ಪಾದನೆಯೂ ಸಹ ಕಡಿಮೆಯಾಗುವುದು. ಆದುದರಿಂದ ಜೇನು ಕುಟುಂಬದಲ್ಲಿ ಮಳೆಗಾಲದಲ್ಲಿ ಹುಟ್ಟಿ ಬರುವ ಕೆಲಸಗಾರ್ತಿ ನೊಣಗಳಿಗೆ ಇದರ ಅಭಾವ ಉಂಟಾಗಬಹುದು. ಆದುದರಿಂದ ಹೆಚ್ಚು ಕ್ರೀಯಾಶೀಲವಾಗಿ ಕೆಲಸವನ್ನು ನಿರ್ವಹಿಸಲಾರವು. ಕೆಲಸಗಾರ್ತಿ ಹಾಗೂ ಗಂಡುನೊಣವಾಗುವ ಹುಳಗಳಿಗೆ ಮೊದಲ ಮೂರು ದಿನಗಳವರೆಗೆ ಕೊಂಚಮಾತ್ರ ಈ ರಸವನ್ನು ಕೊಡುತ್ತವೆ ಮತ್ತು ಕೆಲಸಗಾರ್ತಿ ಹುಳಗಳಿಗಿಂತ ಗಂಡಾಗುವ ಹುಳಕ್ಕೆ ಸ್ವಲ್ಪ ಜಾಸ್ತಿ ಒದಗಿಸುತ್ತವೆ. ಆದರೆ ರಾಣಿಯಾಗಿ ಬೆಳೆಸಲು ಉದ್ದೇಶಿಸಿರುವ ಹುಳಗಳಿಗೆ ಮಾತ್ರ ಅದರ ಪೂರ್ತಿ ಹುಳದಾವಸ್ಥೆಯವರೆಗೂ, ಅಲ್ಲದೆ ಬೆಳೆಯುತ್ತಿರುವ ಆ ಹುಳದ ಕಣದ ತಳದಲ್ಲೂ ಸಹ ಹೆಚ್ಚು ರಸವನ್ನು ದಾಸ್ತಾನು ಮಾಡಿ ನೀಡಿರುತ್ತವೆ. ಇದೊಂದು ಅತ್ಯಂತ ಪೌಷ್ಟಿಕವಾದ ಆಹಾರವಾಗಿದ್ದು ಈ ರಸವನ್ನು ಸೇವಿಸಿ ರಾಣಿನೊಣದ ಕಣದಲ್ಲಿ ಒಂದು ಸಾಮಾನ್ಯ ಕೆಲಸಗಾರ್ತಿ ಮೊಟ್ಟೆಯು ರಾಣಿಯಾಗಿ ಬೆಳೆದು ಬರುವುದು ಇದರ ಗುಣಮಟ್ಟವನ್ನು ಎತ್ತಿ ತೋರಿಸುವುದು.

ಈ ರಾಜಶಾಹಿ ರಸದಲ್ಲಿ ಎರಡು ವಿಧಗಳಿವೆ ಎಂದು ತಿಳಿಯಲಾಗಿದೆ.

ರಾಜಶಾಹಿರಸ-೧

[ಬದಲಾಯಿಸಿ]

ಇದನ್ನು ಮಿಸೋಯಿನೋಸಿಟಾಲ್ (Misoinositol) ಎನ್ನುತ್ತಾರೆ. ಇದನ್ನು ತಳಿ ಬದಲಾವಣೆಗಾಗಿ ಬಳಸುತ್ತವೆ. ಅಂದರೆ ಸಾಧಾರಣವಾದ ಒಂದು ಕೆಲಸಗಾರ್ತಿ ಹುಳವನ್ನು ರಾಣಿಯಾಗಿ ಮಾರ್ಪಡಿಸಲು ಬಳಸಬಹುದಾಗಿದೆ.

ರಾಜಶಾಹಿರಸ-೨

[ಬದಲಾಯಿಸಿ]

ಹಾಗೆಯೇ ಈ ರಾಜಶಾಹಿರಸವಿಶೇಷದ ಇನ್ನೊಂದು ಬಗೆಯನ್ನು ರಾಜಶಾಹಿರಸ ೨ ಎನ್ನುವರು. ಇದನ್ನು ರಾಣಿಯ ಶರೀರದ ಗಾತ್ರ ಹೆಚ್ಚಿಸುವ ಬೆಳವಣಿಗೆಗಾಗಿ ಹಾಗೂ ರಾಣಿಯ ಅಂಡಾಶಯದ ಪೂರ್ಣ ಬೆಳವಣಿಗೆಗಾಗಿ ಬಳಸಲ್ಪಡುವುದು. ಇದನ್ನು Ergostrain Biotin pteridine Royal jelly ಎಂದು ಎರಡು ವಿಧದಲ್ಲಿ ಇರುವುದಾಗಿ ಪ್ರತ್ಯೇಕಿಸಿದ್ದಾರೆ.

ರಾಜಶಾಹಿರಸ ಉತ್ಪಾನೆ ಮಾಡುವ ಪ್ರಾಯ ಮೀರಿದ ನೊಣಗಳು ಇದನ್ನು ಉತ್ಪಾದಿಸಿದಾಗ ರಾಜಶಾಹಿರಸದ ಗುಣಮಟ್ಟವು ಕಡಿಮೆಯಾಗುವುದು. ಏಕೆಂದರೆ ಹಲವು ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿಯ ರಾಣಿಕಣಗಳನ್ನು ಬೆಳೆಸುವ ಸಂದರ್ಭದಲ್ಲಿ ಸಾಕಷ್ಟು ರಾಜಶಾಹಿ ರಸ ಉತ್ಪಾದನಾ ಪ್ರಾಯದ ನೊಣಗಳು ಇಲ್ಲದೇ ಇರಬಹುದು. ಆದುದರಿಂದ ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿ ಬರುವ ರಾಣಿನೊಣಗಳ ಕಾರ್ಯಕ್ಷಮತೆ ಕುಂಠಿತವಾಗಿರುವುದನ್ನು ಕಾಣುತ್ತೇವೆ. ರಾಜಶಾಹಿರಸವು ನಮಗೂ ಸಹ ವಿಶೇಷ ಅನ್ನಾಂಗಭರಿತ ಪೌಷ್ಟಿಕವಾದ ಆಹಾರವಾಗಿದೆ. ಈ ರಸವು ನಮಗೆ ಹುಳಿರುಚಿಯ ಸ್ವಾದವನ್ನು ಕೊಡುವುದು. ಇದನ್ನು ಜೇನುತುಪ್ಪದೊಡನೆ ಬೆರೆಸಿ ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ವರ್ಧಿಸಿಕೊಳ್ಳಬಹುದು.

ಹಲವು ಪಾಶ್ಚಾತ್ಯರು ‘ಮೆಲ್ಲಿಫೆರಾ' ಎಂಬ ಜೇನು ತಳಿಗಳಿಂದ ಇದನ್ನು ಒಂದು ಆರ್ಥಿಕವಾಗಿ ಲಾಭದಾಯಕವಾಗಿ ಮತ್ತು ಔದ್ಯಮಿಕವಾಗಿ ಉತ್ಪಾದನೆ ಮಾಡುತ್ತಿರುವರು. ನಮ್ಮ ಜೇನುನೊಣಗಳಿಂದಲೂ ಸಹ ಈ ರಸವನ್ನು ಸಂಗ್ರಹಿಸಬಹುದಾಗಿದೆ. ಕ್ರಮಬದ್ಧವಾಗಿ ಜೇನುಕುಟುಂಬದಿಂದ ಸಂಗ್ರಹಿಸಿದ ರಾಜಶಾಹಿರಸವನ್ನು ನಿಯಮಾನುಸಾರವಾಗಿ ಸೇವಿಸಿ ಸಂತಾನ ರಹಿತರೂ ಸಹ ಸಂತಾನ ಪಡೆಯಲು ಸಾಧ್ಯವಿರುವುದೆಂದು ಹೇಳುತ್ತಾರೆ. ಇದಕ್ಕಾಗಿ ರಾಜಶಾಹಿರಸ ಸಂಗ್ರಹಿಸಿರುವ ಜೇನುಕುಟುಂಬದ ಗೂಡಿನೊಳಗಿನ ಉಷ್ಣತೆಯಲ್ಲಿ, ಸಂಗ್ರಹಿಸಲು ಬೇಕಾಗುವ ಬೆಳ್ಳಿ ಉಪಕರಣ ಹಾಗೂ ಪಾತ್ರೆ ಮತ್ತು ಆಗ ತಾನೆ ತೆಗೆದ ಶುದ್ಧ ಜೇನುತುಪ್ಪ ಮುಂತಾದ ವ್ಯವಸ್ಥೆಯೊಂದಿಗೆ ಆಗತಾನೆ ತೆಗೆದ ರಾಜಶಾಹಿರಸವನ್ನೂ ಸೇರಿಸಿ ಸಂರಕ್ಷಿಸಿ ಬಳಸಬೇಕೆಂಬ ನಂಬಿಕೆಯಿದೆ. ಆದುದರಿಂದ ಈ ಅಂಶವನ್ನು ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸಲು ಅವಕಾಶಗಳು ತೆರೆದುಕೊಂಡಿವೆ.

ಇದನ್ನು ಸಂಪಾದನೆಯ ಮೂಲವಾಗಿ ಜೇನುಕುಟುಂಬಗಳನ್ನು ಅಣಿಗೊಳಿಸಿ ಪೌಷ್ಟಿಕ ಹಾಗೂ ಔಷಧೀಯ ರಂಗಕ್ಕೆ ಪೂರಕವಾಗಿರುವಂತೆ ಉತ್ಪಾದಿಸಲು ಸಾಧ್ಯವಿದ್ದರೂ ಸಹ ರಾಜಶಾಹಿರಸದ ಪೌಷ್ಟಿಕತೆ, ಔಷಧೀಯ ಮಹತ್ವದ ಕಡೆಗೆ ಗಮನಹರಿಸುತ್ತಿಲ್ಲ. ಅಷ್ಟೇ ಅಲ್ಲದೆ ಅನೇಕ ಸಂದರ್ಭಗಳಲ್ಲಿ ವನ್ಯವಾಗಿ ದೊರೆತ ಜೇನುಕುಟುಂಬಗಳನ್ನು ತೆಗೆಯುವಾಗ ಮತ್ತು ಜೇನುಪೆಟ್ಟಿಗೆಯಲ್ಲಿ ಪಾಲನೆ ಮಾಡುವ ಜೇನುಕುಟುಂಬಗಳ ರಾಣಿಕಣದಿಂದ ದೊರಕುವ ಇಂತಹ ಮೌಲ್ಯಯುತ ರಾಜಶಾಹಿರಸವನ್ನು ವ್ಯರ್ಥಗೊಳಿಸಲಾಗುತ್ತಿದೆ.

೨. ಇನ್ವರ್ಟೇಜ್ ಗ್ಲ್ಯಾಂಡ್ (Invertaze enzymes):-

[ಬದಲಾಯಿಸಿ]

ಈಗಾಗಲೇ ನಮೂದಿಸಿರುವಂತೆ ಈ ಕಿಣ್ವವು ಕೆಲಸಗಾರ್ತಿ ನೊಣಗಳ ಮಧುಕೋಶದಲ್ಲಿ ಕಂಡುಬರುವುದು. ಈ ಕಿಣ್ವದ ಅಂಶಗಳನ್ನು ಪುಷ್ಪರಸಾಂಗಗಳಲ್ಲೂ ಕಾಣಬಹುದು. ಜೇನುನೊಣಗಳ ಮಧುಕೋಶದಲ್ಲಿ ಮಕರಂದವನ್ನು ರಾಸಾಯನಿಕವಾಗಿ ಒಡೆದು ಪರಿವರ್ತಿಸಿ ಜೇನಾಗುವಂತೆ ಮಾಡುವುದು ಇದರ ಕೆಲಸ. ಗೂಡಿಗೆ ತರುವ ಪ್ರತಿಯೊಂದು ಹನಿ ಮಕರಂದವನ್ನು ಅನೇಕ ನೊಣಗಳು ತಮ್ಮಲ್ಲಿ ವಿನಿಮಯ ಮಾಡಿಕೊಂಡು ಹಾಗೂ ಕಣದಲ್ಲಿರಿಸಿದ ಅಪಕ್ವ ಜೇನನ್ನು ಹೀರಿಕೊಂಡು ನಂತರ ಮೆಲುಕಾಡುವಂತೆ ಬಾಯಿಗೂ ಮಧುಕೋಶಕ್ಕೂ ಪುನಃಪುನಃ ಕಳಿಸಿ ನೀರಿನಾಂಶವನ್ನು ಕಡಿಮೆಗೊಳಿಸಿ ಸಾಕಷ್ಟು ಪರಿವರ್ತಿಸಿ ಜೇನುತುಪ್ಪವಾಗಿ ಮಾರ್ಪಡಿಸುತ್ತವೆ. ಅನಂತರ ಹೀಗೆ ಪಕ್ವವಾಗಿಸಿದ ಜೇನುತುಪ್ಪವನ್ನು ಮಾತ್ರ ಎರಿಗಳಲ್ಲಿ ಭದ್ರಪಡಿಸಿ ಮೊಹರುಮಾಡಿ ಕಾಪಿಡುತ್ತವೆ. ಅದೇರೀತಿ ರಾಸಾಯನಿಕ ಕ್ರಿಯೆಗೆ ಒಳಪಟ್ಟ ಹಾಲು (ಹೆಪ್ಪಿರಿಸಿದ ಹಾಲು) ಭೌತಿಕವಾಗಿ ಮೊಸರಾಗುವಂತೆ ಮಕರಂದವು ಜೇನಾಗಿ ಪಕ್ವವಾಗಲು ಈ ಕಿಣ್ವವೆ ಕಾರಣವಾಗಿದೆ.

೩.ಮೇಣದ ಗ್ರಂಥಿಗಳು (Wax Glands):-

[ಬದಲಾಯಿಸಿ]

ಇದರಿಂದ ಜೇನುನೊಣಗಳು ಮೇಣವನ್ನು ಉತ್ಪಾದಿಸುತ್ತವೆ. ಇದು ಕೆಲಸಗಾರ್ತಿ ನೊಣಗಳು ಮಾತ್ರ ತಯಾರಿಸುವ ಒಂದು ವಿಶಿಷ್ಟ ಪದಾರ್ಥವಾಗಿದೆ. ಇದನ್ನು ಜೇನುಮೇಣವೆಂದೇ ಕರೆಯುತ್ತಾರೆ. ಕೆಲಸಗಾರ್ತಿ ನೊಣಗಳು ೧೫-೨೦ ದಿನಗಳ ಪ್ರಾಯದಲ್ಲಿರುವಾಗ ಈ ಗ್ರಂಥಿಗಳಿಂದ ಹೆಚ್ಚು ಸಕ್ರಿಯವಾಗಿ ಮೇಣವು ಹೊರಬರುವುದು. ನೊಣಗಳಿಗೆ ಹೆಚ್ಚು ವಯಸ್ಸಾದಂತೆಲ್ಲಾ ಈ ಮೇಣ ಉತ್ಪಾದಕ ಗ್ರಂಥಿಗಳು ನಿಷ್ಕ್ರಿಯಗೊಳ್ಳುತ್ತವೆ. ಈಗಾಗಲೇ ತಿಳಿಸಿದಂತೆ ಕೆಲಸಗಾರ್ತಿ ನೊಣಗಳ ಹೊಟ್ಟೆಯ ಕೆಳಭಾಗದಲ್ಲಿ ನಾಲ್ಕು ಜೊತೆಗಳಲ್ಲಿ ಈ ಗ್ರಂಥಿಗಳು ಕಂಡುಬರುತ್ತವೆ. ಈ ಪೈಕಿ ಮೂರು ಗ್ರಂಥಿಗಳು ಮಾತ್ರ ಸಶಕ್ತವಾಗಿ ಹೆಚ್ಚು ಮೇಣವನ್ನು ಜಿನುಗಿಸಬಲ್ಲವು. ಮೇಣವು ಉತ್ಪಾದನಾ ಹಂತದಲ್ಲಿ ಹಿಮದಂತೆ ಬಿಳಿಯ ಬಣ್ಣದಲ್ಲಿ ದ್ರವರೂಪದಲ್ಲಿರುವುದು. ಇದನ್ನು ನೊಣಗಳು ತಮ್ಮ ಕಾಲುಗಳಲ್ಲಿರುವ ಕೂದಲುಗಳ ಸಹಾಯದಿಂದ ದಾಡೆಗೆ ವರ್ಗಾಯಿಸಿ ಅಗಿದು ಹದಗೊಳಿಸಿ ಎರಿಗಳನ್ನು ನಿರ್ಮಿಸಲು ಉಪಯೋಗಿಸುತ್ತವೆ.

ಈ ಮೇಣದ ಉತ್ಪಾದನೆಗಾಗಿ ಜೇನುನೊಣಗಳು ಹೆಚ್ಚು ಜೇನುತುಪ್ಪ/ಸಕ್ಕರೆ ಜೋನಿಯನ್ನು ಸೇವಿಸಬೇಕಾಗುತ್ತದೆ. ಒಂದು ಅಂದಾಜಿನಂತೆ ೧೦-೧೨ m.g ಜೇನುತುಪ್ಪ ಸೇವಿಸಿ ಒಂದು ಕೇಜಿಯಷ್ಟು ಮೇಣವನ್ನು ಮಾತ್ರ ಸ್ರವಿಸಬಹುದಾಗಿದೆ. ಜೇನುಮೇಣವೂ ಸಹ ಜೇನುನೊಣಗಳಿಂದ ಉತ್ಪಾದಿಸಲ್ಪಡುವ ಅಮೂಲ್ಯವಾದ ಪದಾರ್ಥವಾಗಿದೆ. ಇದು ತುಂಬಾ ಹಗುರವಾಗಿದ್ದು ಸಾಪೇಕ್ಷ ಸಾಂದ್ರತೆ ೦.೯೭ ಮತ್ತು ಕರಗುವ ಉಷ್ಣಬಿಂದು ೧೪೩೦F ಆಗಿರುವುದು.

ಹೆಚ್ಚಿನ ಪರಿಶ್ರಮ ವಹಿಸಿ ಸಂಗ್ರಹಿಸಿದ ಅಧಿಕ ಆಹಾರವನ್ನು ಸೇವಿಸಿ ಈ ಮೇಣವನ್ನು ಉತ್ಪಾದಿಸಿ ತಮ್ಮ ಸುಂದರವಾದ ಮಹಲನ್ನು ನಿರ್ಮಿಸಲು ಬಳಸುತ್ತವೆ. ಇವು ನಿರ್ಮಿಸುವ ಎರಿಗಳಲ್ಲಿ ಷಡ್ಭುಜಾಕೃತಿಯ ಸಹಸ್ರಾರು ಕಣಗಳನ್ನು ಹೊಂದಿರುತ್ತವೆ. ಇಂತಹ ಎರಿಯನ್ನು ಮೊಟ್ಟೆಮರಿಗಳನ್ನು ಬೆಳೆಸಲು ಮತ್ತು ಪರಾಗ ಪುಷ್ಪರಸವನ್ನು ಸಂಗ್ರಹಿಸಿಡಲು ಬಹು ಉಪಯೋಗಿಯಾಗಿ ಬಳಸುತ್ತವೆ ಮತ್ತು ಹಳೆಯ ಎರಿಯ ಕಣಗಳಿಗೆ ಹೊಳಪು ನೀಡಲು ಮತ್ತು ಕಣವನ್ನು ನವೀಕರಿಸಲು ಅಲ್ಲದೆ ರಾಣಿಕಣಗಳನ್ನು ನಿರ್ಮಿಸಲೂ ಸಹ ಬಳಸುತ್ತವೆ. ಮೇಣದಿಂದ ರಚಿಸುವ ಷಡ್ಭುಜಾಕೃತಿಯ ಕಣಗಳಲ್ಲಿ ಕೆಲಸಗಾರ್ತಿ ಕಣ ಹಾಗೂ ಗಂಡುನೊಣಗಳನ್ನು ಬೆಳೆಸಲು ಉಪಯೋಗಿಸುವ ಕಣ ಎಂಬುದಾಗಿ ಎರಡು ವಿಧಗಳಿವೆ. ಅವು ರಚಿಸಿದ ಎಲ್ಲಾ ಎರಿಯಲ್ಲಿ ಕೆಲಸಗಾರ್ತಿ ನೊಣಗಳ ಕಣಗಳೇ ಹೆಚ್ಚಾಗಿರುವುದು. ಈ ಕಣಗಳ ಅಳತೆ ಒಂದು ಇಂಚು ದೂರದಲ್ಲಿ ನಿಖರವಾಗಿ ಆರು ಕಣಗಳಿರುವಂತೆ ರಚಿಸಿರುತ್ತವೆ. ಕೋಶಾವಸ್ಥೆಯನ್ನೊಳಗೊಂಡ ಎರಿಯ ಭಾಗದ ಕಣದ ಆಳವು ಸುಮಾರು ೧೧.೫ ಮಿ.ಮೀ. ಹಾಗೂ ಈ ಏರಿಯ ಬುಡದಲ್ಲಿ ತಳಹದಿಯು ಸುಮಾರು ೩.೨ ಮಿ.ಮೀ ಇರುವುದು. ಎರಿಯ ಕೆಳಭಾಗಕ್ಕೆ ಬಂದಂತೆಲ್ಲಾ ತಳಹದಿಯ ದಪ್ಪವು ಕಡಿಮೆಯಾಗುತ್ತಾ ಬಂದು ಕೊನೆಗೆ ೦.೩ ಮಿ.ಮೀ ಮಾತ್ರ ಇರಬಹುದು. ಕೆಲವೊಮ್ಮೆ ಎರಿಗಳಲ್ಲಿ ಗಂಡುನೊಣಗಳನ್ನು ಬೆಳೆಸಲು ಷಡ್ಭುಜಾಕೃತಿಯ ದೊಡ್ಡದಾದ ಕಣಗಳನ್ನು ರಚಿಸುತ್ತವೆ. ಇಂತಹ ಕಣಗಳು ಒಂದು ಇಂಚು ದೂರದಲ್ಲಿ ನಿಖರವಾಗಿ ಐದು ಕಣಗಳನ್ನು ಹೊಂದಿರುತ್ತವೆ.

ಸುಂದರವೂ ಮನೋಹರವೂ ಅತ್ಯಂತ ಕೌಶಲ್ಯ ಪೂರ್ಣವೂ ಹಾಗೂ ಗಣಿತ ಲೆಕ್ಕಾಚಾರಕ್ಕೆ ಸರಿಹೊಂದುವಂತೆ ಈ ಎರಿಗಳನ್ನು ರಚಿಸಿರುವುದನ್ನು ಕಾಣುತ್ತೇವೆ. ಇಂತಹ ಎರಿಗಳ ರಚನೆಯಲ್ಲಿ ಅವುಗಳ ಶ್ರಮವನ್ನು ಮಿತವಾಗಿಸಲು ಹಾಗೂ ಸ್ಥಳವನ್ನೂ ಮಿತವಾಗಿಸಲು ಅದಲ್ಲದೆ ಅತಿಹೆಚ್ಚು ಬಲಯುತವಾಗಿಯೂ ಅಂದರೆ ಕೇವಲ ೧೫೦ ಗ್ರಾಂ. ಮೇಣವನ್ನು ಬಳಸಿ ೨-೨ ೧/೨ k.g ಜೇನುತುಪ್ಪದ ಭಾರವನ್ನು ಹೊತ್ತುಕೊಳ್ಳುವ ಅಸಾಧಾರಣ ಶಕ್ತಿಯುಳ್ಳ ಎರಿಗಳನ್ನು ರಚಿಸುತ್ತವೆ. ಇಂತಹ ಎರಿಗಳಲ್ಲಿ ಮೊಟ್ಟೆ ಮರಿಗಳನ್ನು ಬೆಳೆಸುವುದಕ್ಕೆ ಹಾಗೂ ಅವುಗಳ ಆಹಾರವಾದ ಜೇನುತುಪ್ಪ/ಪರಾಗವನ್ನು ದಾಸ್ತಾನು ಇರಿಸಲು ಸಹ ಬಹುಮುಖಿ ಉಪಯೋಗಿಯಾಗಿರುವಂತೆ ನಿರ್ಮಿಸಿರುತ್ತವೆ. ಅಲ್ಲದೇ ಹಾಗೆ ಬಳಸುವ ಬಹುಮೌಲ್ಯವಾದ ಕಚ್ಚಾವಸ್ತುವಿನಿಂದ ಹೆಚ್ಚು ಪ್ರತಿಫಲ ದೊರಕಿಸಿಕೊಳ್ಳುವ ಅವುಗಳ ಜಾಣ್ಮೆಯನ್ನೂ ಇಲ್ಲಿ ಕಾಣಬಹುದು.

ಇವು ರಚಿಸುವ ಎರಿಗಳ ತಳ/ನೆಲದಲ್ಲಿ (Base) ರೋಂಬಾಯ್ ಅಂದರೆ ಇಂಗ್ಲೀಷ್ ವರ್ಣಮಾಲೆಯ ‘Y' ಅಕ್ಷರದಂತೆ ಇರುವ ಬುನಾದಿಯನ್ನು ಹಾಕಿ ಷಡ್ಭುಜಾಕೃತಿಯ ಕಣಗಳನ್ನು ನಿರ್ಮಿಸಿ ಆ ಕಣಗಳಲ್ಲಿ ಜೇನುತುಪ್ಪವನ್ನು ಸಂಗ್ರಹಿಸಿದಾಗ ಅಲ್ಲಿ ಸಂಗ್ರಹಿಸಿದ ಜೇನುತುಪ್ಪವು ಸೋರಿ ಕೆಳಬೀಳದಂತೆ ಸ್ವಲ್ಪ ಮೇಲ್ಮುಖವಾಗಿ ಕಣಗಳನ್ನು ಬಾಗಿರುವಂತೆ ರಚಿಸುತ್ತವೆ. ಈ ಭಾಗದಲ್ಲಿ ರಚಿಸಿದ ಒಂದು ಕಣದ ಭಾಗದಲ್ಲಿ ಅದಕ್ಕೆ ತಕ್ಕನಾಗಿ ಅದರ ಹಿಂಬಾಗದಲ್ಲಿ ರೋಂಬಾಂಯ್ ತಳಹದಿಯು ಸ್ವಲ್ಪ ವಿರುದ್ಧವಾಗಿ ಬರುವಂತೆ ರಚಿಸಿ ಎರಿಯ ಬಲವರ್ಧನೆಯನ್ನು ಕಾಪಾಡಿರುತ್ತವೆ. ಹೀಗೆ ಎರಡೂ ಭಾಗದಲ್ಲಿ ಅಂದರೆ ಎದುರು ಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬರುವಂತೆ ಕಣ ನಿರ್ಮಿಸುತ್ತವೆ. ಕೌತುಕವೇನೆಂದರೆ ಪ್ರಕೃತಿಯನ್ನು ಸಂಕೇತಿಸುವ ದೈವವಾದ ವಿಘ್ನನಿವಾರಕ ಗಣಪತಿಯನ್ನು ಶ್ರದ್ಧಾಳುಗಳು ಆರಾಧಿಸಲು ಪೂಜಾಮಂಡಲವನ್ನು ನಿರ್ಮಿಸುವಾಗ ಬಳಸಿದ ರೇಖೆಗಳನ್ನು ಹೊರಭಾಗದಿಂದ ತೆಗೆದಾಗ ಮಧ್ಯ ಉಳಿಯುವ ಚಿಹ್ನೆಯು ಕೂಡ ರೋಂಬಾಯ್‌ನಂತೆಯೇ ಆಗಿರುವುದು. ಎರಿಯ ಅಂಚಿನಲ್ಲಿರುವ ಕಣಗಳು ಹಾಗೂ ಚೌಕಟ್ಟುಗಳಿಗೆ ಎರಿಗಳನ್ನು ಜೋಡಿಸಿರುವ ಸ್ಥಳದಲ್ಲಿ ಈ ಕಣಗಳು ಪೂರ್ಣಗೊಂಡಿರುವುದಿಲ್ಲ. ಕೆಲಸಗಾರ್ತಿ ಮತ್ತು ಗಂಡುನೊಣ ಕಣಗಳು ಪರಸ್ಪರ ಸಂಧಿಸುವಲ್ಲಿ ಪರಿವರ್ತನಾ ಕಣಗಳು ಕಂಡುಬರುತ್ತವೆ. ಅದೇರೀತಿ ಒಂದು ಎರಿಯನ್ನು ನಿರ್ಮಿಸುವಾಗ ಬೇರೆಬೇರೆ ಬಿಂದುಗಳಿಂದ ಆರಂಭಿಸಿ ಪೂರ್ಣಗೊಳಿಸುವಾಗ ಸೇರಿಸಿರುವ ಜಾಗದಲ್ಲೂ ಸಹ ಅಲ್ಪಭಿನ್ನತೆ ಗೋಚರಿಸುವುದು. ಈ ಅಮೂಲ್ಯವಾದ ಜೇನುಮೇಣವನ್ನು ಜೇನುಕೃಷಿಯಲ್ಲಿ ಬಳಸುವ ಕೃತಕ ಎರಿ ತಳಹದಿಗಳನ್ನು ತಯಾರಿಸಲು ಬಳಸುತ್ತಾರೆ. ಕೃತಕ ಎರಿ ತಳಹದಿ ಎಂದರೆ ಜೇನುನೊಣಗಳು ನಿರ್ಮಿಸುವ ಎರಿಯಲ್ಲಿರುವ ಕಣಗಳನ್ನು ಹೆರೆದು ತೆಗೆದಾಗ ತಳದಲ್ಲಿ ಕಂಡುಬರುವ ಕಣ ರಚಿಸಲು ಆರಂಭಿಸುವ ನೆಲದಲ್ಲಿರುವ ಬಿಂದುವಾಗಿದೆ. ಇದನ್ನು ಆಧುನಿಕ ಕೈಗಾರಿಕಾ ವಲಯದಲ್ಲೂ ಹಾಗೆ ಸೌಂದರ್ಯವರ್ಧಕಗಳಲ್ಲೂ ಬಳಸುತ್ತಾರೆ. ಅಹಿಂಸಾ ಕ್ರಮದ ಶುದ್ಧ ಮತ್ತು ಅಧಿಕ ಜೇನುತುಪ್ಪ ಉತ್ಪಾದನಾ ತಂತ್ರದ ಯಂತ್ರವನ್ನು ಬಳಸಿ ಅಹಿಂಸಾ ಪದ್ಧತಿಯ ಜೇನುತುಪ್ಪ ಉತ್ಪಾದನಾ ಮೂಲವಾದ ಕೃತಕ ಎರಿಗಳನ್ನು ತಯಾರಿಸಲೂ ಬಳಸುವ ಕಚ್ಚಾವಸ್ತುವಾಗಿದೆ. ಇದು ದೀರ್ಘಕಾಲ ಇರಿಸಿ ಮರುಬಳಕೆ ಮಾಡಲು ಯೋಗ್ಯವಾಗಿರುತ್ತದೆ.

೪.ವಾಸನಾಗ್ರಂಥಿಗಳು (Scent Glands ೧,೨,೩.) :-

[ಬದಲಾಯಿಸಿ]

೧) ನಾಸನೋವ್‌ ಗ್ಲ್ಯಾಂಡ್ :-

[ಬದಲಾಯಿಸಿ]

ಈ ಗ್ರಂಥಿಯು ಕೆಲಸಗಾರ್ತಿ ನೊಣದ ಹೊಟ್ಟೆಯ ಭಾಗದಲ್ಲಿರುವ ಎಂಟನೇ ಅಂಕಣದ ಅಡಿಭಾಗದಲ್ಲಿದೆ. ಇದು ರಾಸಾಯನಿಕಯುಕ್ತ ಅನಿಲವಾಗಿದ್ದು ಇದರಿಂದ ಜೇನುನೊಣಗಳ ಒಗ್ಗಟ್ಟು ಮತ್ತು ಸುರಕ್ಷತೆಗೆ ಹಾಗೂ ಅವುಗಳ ಸಾಮೂಹಿಕ ಜೀವನಕ್ರಮಕ್ಕೆ ನೆರವಾಗುವುದು. ಅಲ್ಲದೆ ಕುಟುಂಬಕ್ಕೆ ಸಂಬಧಿಸಿದ ಸಂತೋಷದ ಸಂದೇಶಗಳನ್ನು ಬಿತ್ತರಿಸಲು ಕೂಡ ನೆರವಾಗುವುದು. ಜೇನು ಕುಟುಂಬಗಳು ಪರಸ್ಪರ ಪೈಪೋಟಿ ನಡೆಸದೇ ಪ್ರತ್ಯೇಕವಾಗಿ ಹಾಗೂ ಸಾಮೂಹಿಕ ನೆಲೆಯಲ್ಲಿ ಜೀವಿಸಲು ಬೇಕಿರುವ ಆನುವಂಶಿಕ ಅವಕಾಶವನ್ನು ಕಲ್ಪಿಸುತ್ತದೆ. ಒಂದು ಜೇನು ಕುಟುಂಬವನ್ನು ಹೊಸದಾಗಿ ಜೇನು ಪೆಟ್ಟಿಗೆಗೆ ಸೇರಿಸುವಾಗ ಆಕಸ್ಮಿಕವಾಗಿ ಕುಟುಂಬದ ರಾಣಿನೊಣವು ಕಳೆದು ಹೋದರೆ ಅತ್ಯಲ್ಪ ಅವಧಿಯಲ್ಲಿಯೇ ಆ ಕುಟುಂಬದಲ್ಲಿ ರಾಣಿಯು ಇಲ್ಲದಿರುವ ವಾರ್ತೆಯು ಎಲ್ಲ ನೊಣಗಳಿಗೆ ಕೂಡಲೆ ತಿಳಿದು ಬರುವುದು. ಆಗ ಕೆಲಸಗಾರ್ತಿ ನೊಣಗಳು ಚಡಪಡಿಸುತ್ತವೆ ಹಾಗೂ ನಿರಾಸೆಯನ್ನೋ, ಮುಂಬರುವ ಅಪಾಯವನ್ನೋ ವ್ಯಕ್ತಪಡಿಸುವ ಶಬ್ಧವನ್ನು ಹೊಮ್ಮಿಸುವುದಲ್ಲದೇ ಅವಿಶ್ರಾಂತವಾಗಿ ರಾಣಿಯನ್ನು ಪತ್ತೆಮಾಡಲು ತೊಡಗುತ್ತವೆ. ಅಂತಹ ಸಂದರ್ಭದಲ್ಲಿ ಒಮ್ಮೆಗೇ ರಾಣಿಯು ಪತ್ತೆಯಾದರೆ ಕೂಡಲೇ ರಾಣಿಯನ್ನು ಪತ್ತೆಮಾಡಿದ ನೊಣಗಳು ತಮ್ಮ ಹೊಟ್ಟೆಯ ತುದಿಭಾಗವನ್ನು ಎತ್ತಿ ಈ ವಾಸನೆಯನ್ನು ಹೊರಸೂಸಿ ಎಲ್ಲ ನೊಣಗಳು ಅತ್ತಕಡೆ ಒಗ್ಗೂಡಿ ಬರುವಂತೆ ಮಾಡುತ್ತವೆ. ರಾಣಿಯ ಸನಿಹದಲ್ಲಿ ಎಲ್ಲ ನೊಣಗಳು ಬಂದು ಸೇರುತ್ತಾ ಇನ್ನಷ್ಟು ನೊಣಗಳು ಹೊಟ್ಟೆಯ ತುದಿ ಭಾಗವನ್ನು ಮೇಲೆತ್ತಿ ಈ ವಾಸನೆಯನ್ನು ಹೊರಸೂಸಿ ಕುಟುಂಬದ ಎಲ್ಲಾ ಸದಸ್ಯರು ಬಂದು ಸೇರಲು ನೆರವಾಗುವುವು. ಇದಲ್ಲದೇ ಪಾಲಾಗಿ ಹೊರಟು ಹೋಗುವ ಸಮಯದಲ್ಲಿ ಕುಟುಂಬದಿಂದ ಹೊರಬರುವಾಗ ಈ ಗ್ರಂಥಿಯ ನೆರವನ್ನು ಹಾಗೂ ಪಾಲಿಗೆ ಬೇಕಾದಷ್ಟು ನೊಣಗಳನ್ನು ಆಕರ್ಷಿಸಲು ಹಾರಾಡುವಾಗ ರೆಕ್ಕೆಯ ವಿಶಿಷ್ಟ ಝೇಂಕಾರದೊಂದಿಗೆ ಬಳಸಿಕೊಳ್ಳತ್ತವೆ. ಇದಲ್ಲದೆ ಹೊಸ ಸ್ಥಳಕ್ಕೆ ವಲಸೆ ಹೋಗಿ ಪೊಟರೆ ಅಥವಾ ಇತರ ನೆಲೆಯಲ್ಲಿ ಸೇರಿಕೊಳ್ಳುವಾಗ ಪೊಟರೆಯ ಬಾಗಿಲಲ್ಲಿ ಕುಳಿತು ಎಲ್ಲ ನೊಣಗಳು ನಿಖರವಾಗಿ ಆ ಸ್ಥಳದ ಒಳಸೇರಲು ಜಮಾಯಿಸುವಂತೆ ಮಾಡುವುದನ್ನು ಕಾಣಬಹುದು. ಆ ಸಮಯದಲ್ಲೂ ಸಹ ಈ ಗ್ರಂಥಿಯಿಂದ ಬರುವ ರಾಸಾಯನಿಕದ ನೆರವನ್ನು ಬಳಸಿಕೊಳ್ಳುತ್ತವೆ. ಈ ಗ್ರಂಥಿಯು ಕೆಲಸಗಾರ್ತಿ ನೊಣಗಳಲ್ಲಿ ಮಾತ್ರ ಕಂಡುಬರುವುದು. ಗಂಡುನೊಣಗಳಲ್ಲಿ ಕಂಡುಬರುವುದಿಲ್ಲ. ಈ ವಾಸನಾ ಗ್ರಂಥಿಯನ್ನು ಪತ್ತೆಮಾಡಿದ ರಷ್ಯಾ ದೇಶದ ವಿಜ್ಞಾನಿ ‘ನಾಸನೋವ್’ ಅವರ ಹೆಸರಿನಲ್ಲಿ ‘ನಾಸನೋವ್‌ ಗ್ಲ್ಯಾಂಡ್’ ಎಂದು ಈ ಗ್ರಂಥಿಯನ್ನು ಹೆಸರಿಸಿ ಗೌರವಿಸಲಾಗಿದೆ.

೨) ಚುಚ್ಚುವ ಮುಳ್ಳಿನ ವಾಸನೆ (೨Heptonon) :-

[ಬದಲಾಯಿಸಿ]

ಇದೊಂದು ಎಚ್ಚರಿಕೆಯನ್ನು ನೀಡಲು ನೊಣಗಳು ಬಳಸುವ ವಾಸನೆಯಾಗಿದೆ. ಈ ವಾಸನೆಯು ಸಹ ಕೆಲಸಗಾರ್ತಿ ನೊಣಗಳು ಮಾತ್ರ ಉತ್ಪಾದಿಸುವುದಾಗಿದೆ. ಚುಚ್ಚುವ ಮುಳ್ಳಿನ, ಪುಚ್ಛಭಾಗದಲ್ಲಿರುವ ಒಂದು ಚಿಕ್ಕ ಚೀಲದಲ್ಲಿ ಇದು ಹುದುಗಿರುವುದು. ಇದನ್ನು ಬಳಸಿ ರಕ್ಷಣಾ ಕಾಯಕದಲ್ಲಿ ನಿರತವಾದ ನೊಣಗಳು ಗೂಡಿನ ಶತ್ರುಗಳ ಚಲನ-ವಲನ/ಧಾಳಿಯನ್ನು ತಕ್ಷಣ ಗ್ರಹಿಸಿ ಶತ್ರುಪ್ರಾಣಿಯ ಮೇಲೆರಗಿ ಅಂಬಿನಿಂದ ಚುಚ್ಚುತ್ತವೆ ಮತ್ತು ಆಗ ಚುಚ್ಚುವ ಮುಳ್ಳಿನ ಪೊಟ್ಟಣದಲ್ಲಿರುವ ವಾಸನೆಯು ಸುತ್ತಲಿನ ಸೀಮಿತ ವಾತಾವರಣದ ಪ್ರದೇಶದಲ್ಲಿ ಹರಡುವುದಲ್ಲದೇ ಅದೇ ಕಾಲದಲ್ಲಿ ಚುಚ್ಚಿದ ನೊಣದಿಂದ ನೋವಿನ ಆರ್ತನಾದ ಹಾಗೂ ಈ ವಾಸನೆಯು ಪ್ರಸಾರವಾಗುವುದು. ಅಲ್ಲಿಗೆ ರಕ್ಷಣಾಪಡೆಯ ನೊಣಗಳು ಜಾಗೃತಗೊಂಡು ರಕ್ಷಣಾವ್ಯೂಹವನ್ನು ಬಲಪಡಿಸುವವು. ಹಾಗೂ ಒಮ್ಮೆಗೇ ಅನೇಕ ನೊಣಗಳು ಆಕ್ರಮಿಸಿ ಶತ್ರುವನ್ನು ಬಲಹೀನಗೊಳಿಸಲು ತೊಡಗುತ್ತವೆ. ಆದುದರಿಂದಲೇ ತುಡಿವೆಜೇನು/ಹೆಜ್ಜೇನು/ಕೋಲುಜೇನುಗಳು ಮೊದಲು ಚುಚ್ಚಿದ ವ್ಯಕ್ತಿಗೆ ಮತ್ತು ಅದೇ ಸ್ಥಳದಲ್ಲಿಯೇ ಇನ್ನಷ್ಟು ನೊಣಗಳು ಬಂದು ಎರಗುವುದನ್ನು ಕಾಣಬಹುದು. ಇದಲ್ಲದೆ ಜೇನುನೊಣಗಳು ಚುಚ್ಚುವಾಗ ಶತ್ರುವನ್ನು ದಾಡೆಯಿಂದ ಕಚ್ಚಿಹಿಡಿದು ಚುಚ್ಚುವ ಕ್ರಿಯೆಯನ್ನು ಮಾಡುತ್ತವೆ. ಆಗ ದಾಡೆಯ ಭಾಗದ ‘ಮ್ಯಾಂಡಿಬುಲರ್’ ಗ್ರಂಥಿಯಿಂದ ದಾಡೆಗೆ ಒಂದು ವಾಸನೆಯು ಹರಿದು ಬಂದು ಪ್ರಸಾರಗೊಳ್ಳುವುದು. ಇದನ್ನು ಎಚ್ಚರಿಕೆ ನೀಡುವ ‘ಫೆರಮೋನ್’ ೧ ಮತ್ತು ೨ ಎಂದು ತಿಳಿಯಲಾಗಿದೆ.

೩) ‘೨ಹೆಪ್ಟನಾನ್’-೨ನೇ ವಿಧ:-

[ಬದಲಾಯಿಸಿ]

ಕೆಲಸಗಾರ್ತಿ ಜೇನುನೊಣಗಳು ತಮ್ಮ ಆಹಾರಕ್ಕಾಗಿ ಅನೇಕ ಪ್ರದೇಶದಲ್ಲಿ ಸುತ್ತಾಡಿ ಮರಗಿಡಬಳ್ಳಿಗಳಲ್ಲಿ ಅರಳಿದ ಪುಷ್ಪಗಳನ್ನು ಅನ್ವೇಷಿಸುತ್ತವೆ. ಹೀಗೆ ಅನ್ವೇಷಕ ಪಡೆಯ ನೊಣಗಳು ತಮಗೆ ಬೇಕಾದ ಹೆಚ್ಚು ಉಪಯುಕ್ತವಾದ ಪುಷ್ಪರಸವನ್ನೊಳಗೊಂಡ ಪುಷ್ಪಗಳನ್ನು ಅನ್ವೇಷಿಸಿದ ಕೂಡಲೇ ಅಂದರೆ ಹೆಚ್ಚು ಸಕ್ಕರೆಯುಕ್ತ ಮಕರಂದವನ್ನೊಳಗೊಂಡ ಪುಷ್ಪದ ಗೊಂಚಲಿನ ಸ್ಥಳ/ಪರಾಗದ ಮೂಲ ಮುಂತಾದ ಸ್ಥಳಗಳಲ್ಲಿ ಈ ರಾಸಾಯನಿಕವನ್ನು ಹರಡುತ್ತವೆ. ಇದರಿಂದ ಆ ಪುಷ್ಪದ ಸುತ್ತಲು ಒಂದು ರಕ್ಷಣಾ ಕವಚವನ್ನು ನಿರ್ಮಿಸಿ ಕೂಡಲೆ ತನ್ನ ಕುಟುಂಬಕ್ಕೆ ಮರಳಿ ಬರುವುದು ಹಾಗೂ ಆಹಾರವನ್ನು ಕಂಡುಹಿಡಿದ ವಾರ್ತೆಯನ್ನು ಆಹಾರವನ್ನು ತರುವ ಇತರ ನೊಣಗಳಿಗೆ ತನ್ನ ಕುಣಿತ ಹಾಗೂ ಅಲ್ಪ ಪ್ರಮಾಣದಲ್ಲಿ ತಾನು ತಂದ ಆಹಾರವನ್ನು ನೀಡುವ ಮೂಲಕ ತಿಳಿಸುವುದು. ಇದರಿಂದ ಆ ಕುಟುಂಬದ ಆಹಾರ ತರುವ ಸಾಕಷ್ಟು ನೊಣಗಳು ಅಲ್ಲಿಗೆ ಧಾವಿಸಿ ತನ್ನ ಕುಟುಂಬದ ನೊಣಗಳು ಪತ್ತೆ ಮಾಡಿದ ಜಾಗದಲ್ಲಿರುವ ಪುಷ್ಪರಸವನ್ನು/ಪರಾಗವನ್ನು ಸಂಗ್ರಹಿಸಲು ಕಾರಣವಾಗುವುದು. ಹೀಗೆ ಒಂದು ಜೇನು ಕುಟುಂಬದ ಅನ್ವೇಷಕ ನೊಣಗಳು ಪತ್ತೆಮಾಡಿದ ಮತ್ತು ರಕ್ಷಣಾ ಕವಚವನ್ನು ನಿರ್ಮಿಸಿ ತನ್ನ ಕುಟುಂಬದ ನೊಣಗಳು ಅಲ್ಲಿಗೆ ಹೋಗುವ ಅಲ್ಪ ಅವಧಿಯವರೆಗೂ ಬೇರೆ ಕುಟುಂಬದ ನೊಣಗಳು ಅದೇಪುಷ್ಪ/ಸ್ಥಳಕ್ಕೆ ಬಂದರೂ ಈಗಾಗಲೇ ಅಲ್ಲಿ ಹರಡಿಕೊಂಡಿರುವ ಈ ವಸ್ತುಸಾರವು ಬೇರೆ ಕುಟುಂಬದ ನೊಣಗಳನ್ನು ವಿಕರ್ಷಿಸುವ ಕೆಲಸ ಮಾಡುವುದು. ಆದುದರಿಂದ ಜೇನುನೊಣಗಳು ಆಹಾರ ಸಂಗ್ರಹಿಸುವ ಕ್ರಮವು ಬಹಳ ಶಿಸ್ತಿನಿಂದ ಹಾಗೂ ತಪ್ಪಿಲ್ಲದ ಕ್ರಮಬದ್ದವಾದ ಕೆಲಸಕ್ಕೆ ಇದು ಅತ್ಯುಪಯುಕ್ತವಾಗುವುದು. ಇದಲ್ಲದೆ ಜೇನುನೊಣಗಳು ಒಂದು ಹೂ ಗೊಂಚಲನ್ನು ಆಹಾರ ಸಂಗ್ರಹಿಸಲು ಆಯ್ಕೆ ಮಾಡಿಕೊಂಡ ಬಳಿಕ ಆ ಗೊಂಚಲಿನ ಹಾಗೂ ಆ ಕೊಂಬೆಯ ಪುಷ್ಪಗಳೆಲ್ಲವನ್ನೂ ಸಂದರ್ಶಿಸಿ ಮುಗಿದ ನಂತರ ಅಲ್ಲಿರಬಹುದಾದ ಅದೇ ಜಾತಿಯ ಇನ್ನೊಂದು ಸಸ್ಯದ ಇನ್ನಷ್ಟು ಪುಷ್ಪಗಳಿಗೆ ಭೇಟಿ ನೀಡುವುದು. ಇದು ಪರಕೀಯ ಪರಾಗ ಸ್ಪರ್ಶ ಕ್ರಿಯೆಯು ಚೆನ್ನಾಗಿ ನಡೆಯಲು ನೆರವಾಗುವುದು. ಇದನ್ನು ಜೇನುನೊಣಗಳ ಶಿಸ್ತು ಮತ್ತು ‘ಒಂದೇ ಸಸ್ಯಕ್ಕೆ ನಿಷ್ಠೆ ತೋರುವುದು’ (Crop constituency- Crop fidelity) ಎನ್ನುತ್ತಾರೆ.

೫.ರಾಣಿಯವಸ್ತುಸಾರ (Mandibular Gland/ Queen Pheromone) :-

[ಬದಲಾಯಿಸಿ]

ಇದು ರಾಣಿಯಲ್ಲಿ ಮಾತ್ರ ಉತ್ಪತ್ತಿಯಾಗುವ ಒಂದು ವಿಶೇಷ ವಸ್ತುಸಾರವಾಗಿದೆ. ಕೆಲಸಗಾರ್ತಿ ನೊಣಗಳಲ್ಲಿ ಈ ಗ್ರಂಥಿಯು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ರಾಣಿಯ ದಾಡೆಯ ಮೇಲ್ಭಾಗದಲ್ಲಿ ಹುದುಗಿರುವ ಈ ಗ್ರಂಥಿಯಿಂದ ವಸ್ತುಸಾರವು ಉತ್ಪಾದನೆಗೊಂಡು ಅನಂತರ ಶರೀರದ ಇತರ ಭಾಗಗಳಿಗೆ ಪ್ರಸರಣಗೊಳ್ಳುವುದು. ಅತ್ಯಂತ ಅದ್ಭುತ ಚಮತ್ಕಾರಿಕ ಪ್ರಭಾವವನ್ನು ಹೊಂದಿರುವ ಈ ವಸ್ತುಸಾರವನ್ನು ರಾಣಿಯಿಂದ ಕೆಲಸಗಾರ್ತಿ ನೊಣಗಳು ನಿತ್ಯವೂ ಅಲ್ಪ ಪ್ರಮಾಣದಲ್ಲಿ ಪಡೆದುಕೊಳ್ಳುತ್ತವೆ. ಇದನ್ನು ಆ ಕುಟುಂಬದ ಕೆಲವು ಕೆಲಸಗಾರ್ತಿ ನೊಣಗಳು ರಾಣಿಯ ವಾಸನೆಯನ್ನು ಆಘ್ರಾಣಿಸಿ ಮತ್ತು ರಾಣಿಯನ್ನು ನೆಕ್ಕುವ ಮೂಲಕ ಪಡೆದುಕೊಳ್ಳುತ್ತವೆ. ಅದರಿಂದ ವಸ್ತುಸಾರವು ಬಹುಪಾಲು ಕೆಲಸಗಾರ್ತಿ ನೊಣಗಳಿಗೆ ವರ್ಗಾವಣೆಗೊಳ್ಳುವುದು. ಅನಂತರ ಇನ್ನುಳಿದ ಕೆಲವು ನೊಣಗಳಿಗೂ ಮೊದಲೇ ರಾಣಿಯ ವಸ್ತುಸಾರವನ್ನು ಹೊಂದಿಕೊಂಡಿರುವ ನೊಣಗಳಿಂದ ನೊಣಗಳಿಗೆ ಆಹಾರ ವಿತರಣೆಯ ಸಮಯದಲ್ಲಿ ವರ್ಗಾವಣೆಗೊಳ್ಳಬಹುದು. ತನ್ಮೂಲಕ ಕುಟುಂಬದ ಎಲ್ಲಾ ನೊಣಗಳಿಗೆ ನಿಯಮಿತವಾಗಿ ದೊರಯುತ್ತಲೇ ಇರುವುದು. ಇದರಿಂದ ಆ ಕುಟುಂಬದಲ್ಲಿ ಒಗ್ಗಟ್ಟಿನಿಂದ, ನಿಷ್ಠೆಯಿಂದ ಕಾಲಕಾಲಕ್ಕೆ ಆಗಬೇಕಾಗಿರುವ ಗೂಡಿನ ಎಲ್ಲಾ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ಕೆಲಸಗಾರ್ತಿ ನೊಣಗಳು ನಿರ್ವಹಿಸಲು ಕಾರಣವಾಗುವುದು. ರಾಣಿಯ ವಸ್ತುಸಾರವನ್ನು ಒಮ್ಮೆಗೆ ಪಡೆದಿರುವ ನೊಣಗಳ ಪ್ರಜನನಾಂಗವು ಬೆಳವಣಿಗೆ ಹೊಂದದೇ ೫-೬ ದಿನಗಳವರೆಗೆ ತಟಸ್ಥವಾಗಿರುವಂತೆ ಅದು ಮಾಡಬಲ್ಲದು ಹಾಗೂ ಅಂಡಾಶಯದ ಬೆಳವಣಿಗೆ ಹಾಗೂ ಮೊಟ್ಟೆಯ ಬೆಳವಣಿಗೆಯಾಗುವಿಕೆಯನ್ನು ನಿರ್ಬಂಧಿಸಲು ಸಹ ಕಾರಣವಾಗುವುದು. ಅಲ್ಲದೆ ರಾಣಿಯೆಡೆಗೆ ಆಕರ್ಷಿಸಿ ಕೆಲಸಗಾರ್ತಿ ನೊಣಗಳು ರಾಣಿಗೆ ನಿಷ್ಠೆಯಿಂದಲೂ ಮತ್ತು ಗೂಡಿನ ಒಗ್ಗಟ್ಟಿಗಾಗಿ ಸದಾ ಕೆಲಸ ನಿರ್ವಹಿಸುವ ಶಿಸ್ತಿನ ಸಿಪಾಯಿಗಳಂತೆ ದುಡಿಯುವವು. ವಿವಿಧ ಕುಟುಂಬದ ರಾಣಿಗಳಲ್ಲಿ ಉತ್ಪತ್ತಿಯಾಗುವ ಈ ವಸ್ತುಸಾರವು ಒಂದೇ ರೀತಿಯಲ್ಲಿದ್ದರೂ ಸಹ ಉತ್ಪತ್ತಿಯಾಗುವ ಪ್ರಮಾಣವು ಮಾತ್ರ ಹೆಚ್ಚುಕಡಿಮೆಯಾಗಬಹುದು. ಹಾಗೂ ಅದನ್ನು ಬಯಸುವ ಕೆಲಸಗಾರ್ತಿ ನೊಣಗಳ ತಳಿಯನ್ನು ಅವಲಂಬಿಸಿ ಬೇಡಿಕೆಯ ಪ್ರಮಾಣವು ವ್ಯತ್ಯಾಸವಾಗಬಹುದು. ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿ ಬಂದಿರುವ ರಾಣಿನೊಣಗಳಲ್ಲಿ ಉತ್ಪತ್ತಿಯಾಗುವ ವಸ್ತುಸಾರವು ಗುಣಮಟ್ಟದಲ್ಲಿರುವುದಿಲ್ಲ. ರಾಣಿಯ ವಸ್ತುಸಾರವು ಕುಟುಂಬದ ಕೆಲಸಗಾರ್ತಿ ನೊಣಗಳ ಅಂಡಾಶಯ ಅಧಿಕವಾಗಿ ಬೆಳೆಯದಂತೆ ತಡೆಹಿಡಿಯುವುದಾದರೂ ಇದರ ಆಂಶಿಕ ಕೊರತೆಯಿಂದಾಗಿ ಕೆಲಸಗಾರ್ತಿ ನೊಣಗಳ ಕೆಲಸಕಾರ್ಯಗಳಲ್ಲಿಯು ಏರುಪೇರು/ವ್ಯತ್ಯಾಸ ಉಂಟಾಗಬಹುದು. ಗಂಡುಕಣ ರಚನೆ/ರಾಣಿಕಣ ರಚನೆಯನ್ನು ಆರಂಭಿಸಬಹುದಾಗಿದೆ. ಜೇನುಕುಟುಂಬದಲ್ಲಿ ಉತ್ತಮವಾದ ಯುವರಾಣಿಯನ್ನೊಡಗೂಡಿದ ಜೋಡಿಯಾದ ರಾಣಿ ಇರುವಾಗ ಸಾಮಾನ್ಯವಾಗಿ ಈ ವಸ್ತುಸಾರದ ಕೊರತೆ ಉಂಟಾಗಲಾರದು. ಒಂದುವೇಳೆ ಕೆಲಸಗಾರ್ತಿ ನೊಣಗಳಿಗೆ ಈ ‘ಫೆರಮೋನ್’ ಪೂರ್ತಿ ಪ್ರಮಾಣದಲ್ಲಿ ಕೊರತೆಯಾಗಿ ಮತ್ತು ಅದೇ ಸಂದರ್ಭದಲ್ಲಿ ಆ ಕುಟುಂಬದಲ್ಲಿ ಮೊಟ್ಟೆಮರಿ ಹುಳಗಳೂ ಇಲ್ಲದ ಸ್ಥಿತಿಯೂ ಇದ್ದು ಹಾಗೂ ರಾಣಿಯ ವಸ್ತುಸಾರವನ್ನು ಹೆಚ್ಚು ಬಯಸುವಂತಹ ೨೧-೨೨ ದಿನಗಳ ಪ್ರಾಯದ ಕೆಲಸಗಾರ್ತಿ ನೊಣಗಳು ಹೆಚ್ಚಿದ್ದಾಗ ಅವುಗಳ ಅಂಡಾಶಯ ಕೂಡಲೆ ಬೆಳೆಯತೊಡಗುವುದು. ಇಂತಹ ಸ್ಥಿತಿಯು ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಹೆಚ್ಚಾಗಿ ರಾಣಿಯು ಇಲ್ಲದಾದಾಗ ತಲೆದೋರಬಹುದು. ಆಗ ಅಧಿಕವಾಗಿ ಅಂಡಾಶಯ ಬೆಳೆದ ಕೆಲಸಗಾರ್ತಿ ನೊಣಗಳು ಕೆಲದಿನಗಳಲ್ಲೇ ಗಂಡುಮೊಟ್ಟೆಗಳನ್ನು ಹಾಕಲು ತೊಡಗುತ್ತವೆ. ಹಾಗೆ ಗಂಡುಮೊಟ್ಟೆಗಳನ್ನು ಇರಿಸಲು ಆರಂಭಿಸಿದ ಒಂದು ಕೆಲಸಗಾರ್ತಿ ನೊಣವು ಒಟ್ಟಾರೆಯಾಗಿ ಹೆಚ್ಚೆಂದರೆ ಸುಮಾರು ೨೮ ಗಂಡಾಗುವ ಮೊಟ್ಟೆಗಳನ್ನಷ್ಟೇ ಇಕ್ಕಬಹುದು. ಆಗ ಅದರ ಬಣ್ಣವು ಸ್ವಲ್ಪ ಕಪ್ಪಾಗತೊಡಗಿರುತ್ತದೆ.

ಒಂದುವೇಳೆ ರಾಣಿಯಿಂದ ದೊರೆಯುವ ವಸ್ತುಸಾರವು ಅಲ್ಪಸ್ವಲ್ಪ ಮಾತ್ರ ಕೆಲಸಗಾರ್ತಿ ನೊಣಗಳಿಗೆ ದೊರಕುತ್ತಿದ್ದರೆ ಆ ಸಂದರ್ಭದಲ್ಲಿ ಮರಿಹಾರಿಸುವ/ಪಾಲಾಗುವ ಆಕಾಂಕ್ಷೆ ಪ್ರಬಲವಾಗುವುದು. ಆಗ ಪ್ರತ್ಯೇಕ ಕುಟುಂಬವಾಗಿ ನೆಲೆಸಲು ತಯಾರಾಗುತ್ತವೆ. ಹೆಚ್ಚಾಗಿ ಈ ಸಂದರ್ಭವು ಸಾಮಾನ್ಯವಾಗಿ ಒಂದು ಕುಟುಂಬದ ರಾಣಿಯು ಹಿಂದಿನ ಒಂದು ವರ್ಷಕಾಲ ಸತತ ಮೊಟ್ಟೆ ಇರಿಸುವ ಕೆಲಸವನ್ನು ಮಾಡಿದ್ದರೆ ಬಲಹೀನವಾಗಿದ್ದಾಗ ಕಂಡುಬರುವುದು. ಆದುದರಿಂದ ಮರಿಹಾರಿಸಿ ಹೊಗುವ ಜೇನು ಕುಟುಂಬದ ಕೆಲಸಗಾರ್ತಿ ನೊಣಗಳ ಪೈಕಿ ಶೇ.೩೫-೫೦ ಅಂಡಾಶಯ ಅಧಿಕ ಬೆಳವಣಿಗೆ ಆಗಿರುವುದು ಕಂಡುಬರುವುದು.

ರಾಣಿಯ ವಸ್ತುಸಾರವು ಅತ್ಯಂತ ಪ್ರಬಲವಾದ ಒಂದು ಸಾವಯವ ರಾಸಾಯನಿಕವಾಗಿರುವುದು. ರಾಣಿಯಿಲ್ಲದ ಕುಟುಂಬಗಳಿಗೆ ಅತಿಶೀಘ್ರವಾಗಿ ಅಂದರೆ ರಾಣಿಯಿಲ್ಲದ ಮೊದಲ ೧-೨ ದಿನಗಳಲ್ಲೇ ಮೃತರಾಣಿ ಶರೀರವನ್ನು ನುಣ್ಣಗೆ ಮಾಡಿದ ಪುಡಿಯೊಂದಿಗೆ ಬೆರೆಸಿದ ಆಹಾರವನ್ನು ನಾವು ಉಣಿಸಿದಾಗಲೂ ಕೆಲ ಅವಧಿಯವರೆಗೆ ಕೆಲಸಗಾರ್ತಿನೊಣಗಳ ಅಂಡಾಶಯದ ಅಧಿಕ ಬೆಳವಣಿಗೆಯನ್ನು ತಡೆಯಬಹುದಾಗಿದೆ.(ಆದುದರಿಂದ ಯಾವುದಾದರೂ ಅವಘಡ ಸಂಭವಿಸಿ ರಾಣಿನೊಣವು ಮೃತಪಟ್ಟಿದ್ದರೆ ಆದನ್ನು ಕಾಪಿರಿಸಿಕೊಂಡು ಈ ರೀತಿ ಬಳಸಬಹುದಾಗಿದೆ.)

ರಾಣಿಯೊದಗಿಸುವ ಈ ಫೆರಮೋನ್‌ನಲ್ಲಿ ಎರಡು ವಿಧಗಳಿವೆ.

೧) ಕನ್ನಿಕಾವಸ್ಥೆಯಲ್ಲಿರುವ ರಾಣಿಯು ಬಿಡುಗಡೆಗೊಳಿಸುವ ಫೆರಮೋನ್-೧ (9 Oxo-2 Decenoic Acid, Sex Attractent) ವಿರುದ್ಧ ಲಿಂಗಾಕರ್ಷಕ ಗುಣವನ್ನು ಹೊಂದಿದೆ. ಹಾಗೂ ವಿವಿಧ ಗೂಡಿನ ಗಂಡುನೊಣಗಳನ್ನು ಆಕರ್ಷಿಸಲು ಉತ್ಪಾದನೆಗೊಳ್ಳುವ ಫೆರಮೋನ್ ಆಗಿರುತ್ತದೆ.

೨) ಜೋಡಿಯಾಗಿ ಮೊಟ್ಟೆಹಾಕಲು ತೊಡಗಿರುವ ರಾಣಿಯು ಬಿಡುಗಡೆಗೊಳಿಸುವ ಫೆರಮೋನ್-೨ ಇದನ್ನು Trans-9-Buxey-2 Deronoic(9 ODA) 9-oxo-2Econoic Acid) ಎನ್ನುತ್ತಾರೆ. ಇದು ಕೆಲಸಗಾರ್ತಿನೊಣಗಳನ್ನು ವಿವಿಧ ಕೆಲಸಕಾರ್ಯಗಳಿಗೆ ಪ್ರೇರೇಪಿಸಲು/ ನಿಯಂತ್ರಿಸಲು ಬಳಕೆಯಾಗುವುದು. ಈಗಾಗಲೇ ತಿಳಿದಿರುವಂತೆ ರಾಣಿನೊಣಗಳಲ್ಲಿ ಉತ್ಪಾದನೆಯಾಗುವ ಸುಮಾರು ೪೦ ವಿಧದ ಫೆರಮೋನ್‌ಗಳಿವೆ ಎಂಬುದನ್ನು ಮೇಲೆ ತಿಳಿಸಲಾಗಿದೆ. ಈ ಪೈಕಿ ಮ್ಯಾಂಡಿಬುಲರ್ ಗ್ರಂಥಿಯಿಂದ ಉತ್ಪಾದನೆಯಾಗುವ ವಸ್ತುಸಾರವು ಬಹಳ ಚಮತ್ಕಾರಿಯೂ, ಅತ್ಯಂತ ಬಲಯುತವು ಆಗಿರುವುದನ್ನು ಮೇಲಿನಂತೆ ಅರಿಯಬಹುದು. ಜೇನುನೊಣಗಳಲ್ಲಿ ಮೇಲೆ ಉಲ್ಲೇಖಿಸಿದ ಕೆಲವೇ ಕಿಣ್ವಗಳು-ಫೆರಮೋನ್‌ಗಳಲ್ಲದೇ ಪೋಸ್ಟ್ ಸೆರೆಬರಲ್, ಥೋರೆಕ್ಸ್, ಥೊರೇಸಿಕ್, ಪೋಸ್ಟ್‌ಜೀನಿಯಲ್ ಮುಂತಾದ ಕಿಣ್ವಗಳು ಸಹ ಇವೆ.


ಇವುಗಳನ್ನೂ ನೋಡಿ

[ಬದಲಾಯಿಸಿ]
  1. ಜೇನು
  2. ಜೇನುಪ್ರಪಂಚ
  3. ಜೇನುಸಾಕಣೆ
  4. ಜೇನು ಹುಳು