ಖ್ಯಾಲ್

ವಿಕಿಪೀಡಿಯ ಇಂದ
Jump to navigation Jump to search

ಖ್ಯಾಲ್ ಅಥವಾ ಖಯಾಲ್ ಭಾರತೀಯ ಸಂಗೀತದಲ್ಲಿ ಒಂದು ಪ್ರಮುಖ ಪ್ರಕಾರವಾಗಿದೆ. ಸಂಗೀತದಲ್ಲಿ ಮತ್ತೊಂದು ಹೆಸರಾಂತ ವಿಧವಾದ ದ್ರುಪದದ ಒಂದು ವಿಧವಾಗಿಯೂ ಖ್ಯಾಲ್ ಗುರುತಿಸಿಕೊಳ್ಳುತ್ತದೆ. ಆದಾಗ್ಯೂ ದ್ರುಪದ ಹಾಗು ಖ್ಯಾಲ್ ಗಳ ನಡುವೆ ಎದ್ದು ಕಾಣುವಂತಹ ವ್ಯತ್ಯಾಸವೆಂದರೆ ಅದು ದ್ರುಪದ ಅಪ್ಪಟ ಭಾರತೀಯ ಸಂಗೀತ ಶೈಲಿಗಳನ್ನು ಅನುಕರಿಸಿದರೆ ಖ್ಯಾಲ್ ಭಾರತೀಯ ಹಾಗು ಫಾರ್ಸಿ ಸಂಗೀತದ ಮಿಶ್ರಣವನ್ನು ಹೊಂದಿದೆ.

ಪರಿಚಯ[ಬದಲಾಯಿಸಿ]

ಖ್ಯಾಲ್ ಸಂಗೀತ ಶೈಲಿ ಆರಂಭವಾದ ಕಾಲಮಾನದ ಬಗ್ಗೆ ಇಂದಿಗೂ ಅನೇಕ ಚರ್ಚೆಗಳು ನಡೆಯುತ್ತಿವೆ. ಆದರೆ ಇಂತಹ ವಿಶೇಷ ಸಂಗೀತ ಪ್ರಕಾರವೊಂದು ಆರಂಭವಾದ ಬಗ್ಗೆ ಕೆಲವು ಸಂಗೀತ ವಿದ್ವಾಂಸರು ಕೆಲವು ಸಂಗತಿಗಳನ್ನು ಊಹಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಸಂಗೀತ ಪ್ರಕಾರಗಳಾದ ಪ್ರಬಂಧ ಹಾಗು ರೂಪಕಗಳು ಚಾಲ್ತಿಯಲ್ಲಿದ್ದವು. ಪ್ರಬಂಧ ಶೈಲಿಯ ಸಂಗೀತದಿಂದ ದ್ರುಪದ ಸಂಗೀತ ಅಭಿವೃದ್ಧಿಯಾಗಿದೆ ಹಾಗು ರೂಪಕ ಶೈಲಿಯಿಂದ ಇಂದಿನ ಖ್ಯಾಲ್ ಹಾಗು ಠುಮರಿ ಸಂಗೀತ ಶೈಲಿ ಅಭಿವೃದ್ಧಿ ಹೊಂದಿವೆ.

ರಾಜಾಶ್ರಯ[ಬದಲಾಯಿಸಿ]

ಮೊಘಲ್ ಆಡಳಿತ ಕಾಲದ ಸುಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ ಖ್ಯಾಲ್ ಶೈಲಿಯ ಗಾಯನವನ್ನು ಪರಿಶೋಧಿಸಿ ಮತ್ತಷ್ಟು ಕೊಡುಗೆಗಳನ್ನು ನೀಡಿರುತ್ತಾನೆ. ಹದಿನಾಲ್ಕನೇ ಶತಮಾನದಲ್ಲಿ ಜೌನ್ ಪುರದ ಸುಲ್ತಾನ ಹುಸೇನ್ ಷಹ ಖ್ಯಾಲ್ ಶೈಲಿಯ ಸಂಗೀತವನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಸಲಹಿದ್ದ ಎಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ [೧]. ಇದಾದ ನಂತರ ಖ್ಯಾಲ್ ಸಂಗೀತ ಶೈಲಿಯನ್ನು ಅವಗಣಿಸಲಾಯಿತು, ಆದರೆ ಮತ್ತೆ ಹದಿನೆಂಟನೇ ಶತಮಾನದಲ್ಲಿ ಮೊಘಲ್ ಸಾಮ್ರಾಟ ಮುಹಮ್ಮದ್ ಷಹ ನ ಸಮಯದಲ್ಲಿ ಖ್ಯಾಲ್ ಶೈಲಿ ಮರಳಿ ಪ್ರಸಿದ್ಧಿಗೆ ಬಂತು. ತಾನ್ ಸೇನ್ನ ವಂಶಸ್ಥರೆಂದೇ ನಂಬಲಾಗಿರುವ ಸದಾರಂಗ ಹಾಗು ಅದಾರಂಗ ಎಂಬ ಇಬ್ಬರು ಸಂಗೀತಗಾರರು ಮುಹಮ್ಮದ್ ಷಹನ ಆಸ್ಥಾನದಲ್ಲಿ ಸಂಗೀತಗಾರರಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಖ್ಯಾಲ್ ಗಳನ್ನು ರಚಿಸಿ ತಮ್ಮ ಶಿಷ್ಯ ಬಳಗದ ಮುಖಾಂತರ ಅವುಗಳನ್ನು ಪ್ರಚಾರ ಮಾಡುವ ಮೂಲಕ ಖ್ಯಾಲ್ ಸಂಗೀತ ಶೈಲಿಯ ಪುನರುಜ್ಜೀವನಕ್ಕೆ ಕಾರಣವಾಗಿದ್ದಾರೆ. ಆಶ್ಚರ್ಯದ ವಿಚಾರವೆಂದರೆ ಆ ಇಬ್ಬರು ಸಂಗೀತಗಾರರು ತಾವಾಗಿಯೇ ಎಂದೂ ಸಂಗೀತ ಹಾಡಿದವರಲ್ಲ ಹಾಗು ತಮ್ಮ ಮುಂದಿನ ಪೀಳಿಗೆಗೂ ಹಾಡುವ ಅನುಮತಿ ನಿರಾಕರಿಸಿದ್ದರಂತೆ. ಹಾಗಾಗಿ ಖ್ಯಾಲ್ ಸಂಗೀತ ಶೈಲಿ ಕೇವಲ ಅವರ ಶಿಷ್ಯರ ಮುಖಾಂತರ ಪ್ರಚಾರ ಪಡೆದುಕೊಂಡು ಮತ್ತೆ ಪ್ರಸಿದ್ಧಿಗೆ ಬಂದಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಕಲೆ ಹಾಗು ಸಂಗೀತ ಕ್ಷೇತ್ರದಲ್ಲಿ ಅಮೀರ್ ಖುಸ್ರೋ ಹಾಗು ಭಾರತೀಯ ಮುಸ್ಲಿಂ ಸಮುದಾಯದ ಹೆಗ್ಗುರುತು ಆಂಗ್ಲ ಲೇಖನ".
"https://kn.wikipedia.org/w/index.php?title=ಖ್ಯಾಲ್&oldid=887342" ಇಂದ ಪಡೆಯಲ್ಪಟ್ಟಿದೆ