ವಿಷಯಕ್ಕೆ ಹೋಗು

ಕ್ರೀಡಾಂಗಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್

ಕ್ರೀಡಾಂಗಣ ಎಂದರೆ ಸುತ್ತಣ ಪೀಠವ್ಯವಸ್ಥೆಯೂ ಸೇರಿದಂತೆ ಆಟೋಟಗಳ ಅಖಾಡ (ಸ್ಟೇಡಿಯಂ). ಸ್ಟೇಡಿಯಂ ಎಂಬ ಪದದ ಗ್ರೀಕ್ ಮೂಲವಾದ ಸ್ಟೇಡ್ ಎಂಬುದಕ್ಕೆ 606 ಅಡಿ ಎಂಬ ಅರ್ಥವಿತ್ತು. ಒಲಿಂಪಿಯದ ಓಟದ ಅಖಾಡ ಇಷ್ಟೇ ಉದ್ದವಾಗಿತ್ತಾಗಿ ಮೊದಲು ಸ್ಟೇಡ್ ಎಂಬ ಪದ ಅಂಥ ಪಂದ್ಯಕ್ಕೆ ಅನ್ವಯವಾಗಿ ಅನಂತರ ಪಂದ್ಯದ ಅಖಾಡಕ್ಕೂ ಬಳಕೆಗೊಂಡಿತು.

ಆಧುನಿಕ ನಗರಗಳ ರಚನೆ ಮತ್ತು ಅಭಿವೃದ್ಧಿಯಲ್ಲಿ ಕ್ರೀಡಾಂಗಣಕ್ಕೆ ಪ್ರಮುಖ ಸ್ಥಾನ ಇತ್ತೀಚೆಗೆ ದೊರೆಯುತ್ತಿದೆ. ಪ್ರತಿಯೊಂದು ನಗರಕ್ಕೂ ಹೇಗೆ ಒಂದು ಸುಸಜ್ಜಿತವಾದ ಸಭಾಭವನ ಆವಶ್ಯಕವೊ ಅಂತೆಯೇ ಸಮರ್ಪಕವಾದ ಒಂದು ಕ್ರೀಡಾಂಗಣವೂ ಆವಶ್ಯಕವೆನಿಸುತ್ತದೆ.

ಕ್ರೀಡಾಂಗಣದ ರಚನೆಯಲ್ಲಿ ಎರಡು ಮುಖ್ಯ ವಿಷಯಗಳನ್ನು ಗಮನಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವ ಆಟಗಾರರಿಗೆ ಎಲ್ಲ ರೀತಿಯ ಅನುಕೂಲಗಳು ದೊರೆಯಬೇಕು. ಎರಡನೆಯದು ಕ್ರೀಡೆಗಳನ್ನು ನೋಡಲು ಬರುವ ಪ್ರೇಕ್ಷಕ ವೃಂದಕ್ಕೆ ಕ್ರೀಡೆಯನ್ನು ವೀಕ್ಷಿಸಲು ಬೇಕಾದ ಅನುಕೂಲತೆಯೂ ಒದಗಬೇಕು.

ಎಲ್ಲ ಆಟಗಳಿಗೂ ಒಂದೇ ಕ್ರೀಡಾಂಗಣವನ್ನು ನಿರ್ಮಿಸುವುದು ಕಷ್ಟದ ಮಾತು. ಏಕೆಂದರೆ ಆಟದ ವೈಶಿಷ್ಟ್ಯಕ್ಕೆ ತಕ್ಕಂತೆ ಅಖಾಡ ಇರಬೇಕಾಗುತ್ತದೆ. ಸಾಮಾನ್ಯವಾಗಿ ದೈಹಿಕ ಚಟುವಟಿಕೆಗಳ ಕ್ರೀಡಾಂಗಣ ಇನ್ನೂ ಅನೇಕ ರೀತಿಯ ಕ್ರೀಡೆಗಳಿಗೂ ಉಪಯೋಗಕ್ಕೆ ಬರುತ್ತದೆ. ದೈಹಿಕ ಚಟುವಟಿಕೆಗಳ ಕ್ರೀಡಾಂಗಣದ ಪ್ರಮುಖ ಆವಶ್ಯಕತೆಗಳು ಅನೇಕ. ಮೊದಲನೆಯದಾಗಿ 400 ಮೀಟರ್ ಸುತ್ತಳತೆಯ—ಅಂದರೆ ಏಳು ಅಥವಾ ಎಂಟು ಓಟಗಾರರು ಒಟ್ಟಿಗೆ ಅಕ್ಕಪಕ್ಕದಲ್ಲಿ ನಿಂತು ಓಡಲು ಅವಕಾಶವಾಗುವಂಥ-ರನ್ನಿಂಗ್ ಟ್ರ್ಯಾಕ್ ಅಂದರೆ ಓಡುವ ದಾರಿಯೊಂದು ಇದ್ದೇ ತೀರಬೇಕು. ಈ ಸುತ್ತಿನ ಅನಂತರ, ಕ್ರೀಡಾಂಗಣದ ಮೆಟ್ಟಲುಗಳು ಬರಬೇಕು. ಈ ಮಧ್ಯೆ ಸೈಕಲ್ ಓಟವನ್ನು ನಡೆಸಲಾಗುವಂಥ ಸಿಮೆಂಟಿನಿಂದ ಕಟ್ಟಿದ ಸೈಕಲ್ ದಾರಿ ಇರುವುದೂ ಒಳ್ಳೆಯದು. ಕ್ರೀಡಾಂಗಣದ ಸುತ್ತಲೂ ಪ್ರೇಕ್ಷಕರು ಕೂಡಲು ಕೊನೆಯ ಪಕ್ಷ ಎಂಟು ಹತ್ತು ಅಂತಸ್ತಿನ ಮೆಟ್ಟಲುಗಳು ಇರಬೇಕು. ಈ ಮೆಟ್ಟಲುಗಳ ಮೇಲೆ ಚಾವಣಿ ಇದ್ದರೆ ಅನುಕೂಲ. ಚಾವಣಿಯ ಭಾರ ಹೊರಲು ಕಂಬಗಳನ್ನು ಉಪಯೋಗಿಸದೆ ಇದ್ದರೆ, ಪ್ರೇಕ್ಷಕರು ಕ್ರೀಡೆಯನ್ನು ನೋಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಕಂಬಗಳು ನೋಟಕ್ಕೆ ಅಡ್ಡಬರುತ್ತವೆ.

ಆಟಗಾರರು ವಿಶ್ರಾಂತಿ ತೆಗೆದುಕೊಳ್ಳಲು, ತಮ್ಮ ಉಡುಪುಗಳನ್ನು ಬದಲಾಯಿಸಿಕೊಳ್ಳಲು ಅನುಕೂಲವಾಗುವಂಥ ಕೊಠಡಿಗಳೂ ಸ್ನಾನ ಮತ್ತು ಶೌಚಗೃಹಗಳು ಕ್ರೀಡಾಂಗಣದ ಒಂದು ಅವಿಭಾಜ್ಯ ಭಾಗ. ಸುಸಜ್ಜಿತ ಉಪಹಾರ ಮತ್ತು ಭೋಜನ ಗೃಹವೊಂದನ್ನು ಏರ್ಪಡಿಸಿದಲ್ಲಿ ಇನ್ನೂ ಉತ್ತಮ. ಪ್ರೇಕ್ಷಕರು ಟಿಕೆಟ್ಟುಗಳನ್ನು ಅನಾಯಾಸವಾಗಿ ಕೊಳ್ಳಲು ಟಿಕೆಟ್ ಬೂತುಗಳು ಸಾಕಷ್ಟು ಸಂಖ್ಯೆಯಲ್ಲಿ ಇರಬೇಕು. ಪ್ರೇಕ್ಷಕರು ಒಬ್ಬೊಬ್ಬರಾಗಿ ಒಳಗೆ ಬರಲು ಕಿರಿದಾದ ಪ್ರವೇಶದ್ವಾರಗಳಿದ್ದು ಆಟದ ಅನಂತರ ಇಡೀ ಗುಂಪು ಆದಷ್ಟು ಬೇಗ ಹೊರಗೆ ಹೋಗಲು ಅನುಕೂಲವಾಗುವಂಥ ದೊಡ್ಡದೊಡ್ಡ ನಿರ್ಗಮನದ್ವಾರಗಳೂ ಇರಬೇಕು. ಕ್ರೀಡೆಗಳನ್ನು ವೀಕ್ಷಿಸಿ ವರದಿ ಮಾಡಲು ಬರುವ ಪತ್ರಿಕಾ ಪ್ರತಿನಿಧಿಗಳಿಗೆ, ಆಕಾಶವಾಣಿ ವರ್ಗದವರಿಗೆ ಕ್ರೀಡೆಯನ್ನು ಯಾವ ರೀತಿಯ ಅಡಚಣೆಯೂ ಇಲ್ಲದೆ, ನೋಡಲು ಮತ್ತು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ಮಗ್ನರಾಗಲು ಅವಕಾಶ ನೀಡುವಂಥ, ಪ್ರತ್ಯೇಕವಾದ ಸ್ಥಾನಗಳನ್ನು ಮೀಸಲಾಗಿರಿಸುವುದು ಬಹು ಅಗತ್ಯ.

ಒಲಿಂಪಿಕ್ ಜ್ಯೋತಿ ಕುಂಡ, ಧ್ವಜಸ್ತಂಭಗಳು, ವಂದನಾವೇದಿಕೆ, ಪ್ರಮಾಣವಚನ ಸ್ವೀಕಾರ ವೇದಿಕೆ, ಮುಖ್ಯ ಅತಿಥಿಗಳು ಕೂರುವ ವೇದಿಕೆ-ಇವೆಲ್ಲವೂ ಪ್ರತ್ಯೇಕವಾಗಿ ಅಗತ್ಯಕ್ಕೆ ತಕ್ಕಂತೆ ನಿರ್ಮಾಣವಾಗಬೇಕು.

ಕ್ರೀಡೆಗಳನ್ನು ನಡೆಸುವ ಕಾರ್ಯಕರ್ತರ ಅನುಕೂಲತೆಗಾಗಿ ಸುಸಜ್ಜಿತ ಕಾರ್ಯಾಲಯವಿರಬೇಕು. ಇಂಥ ಕಾರ್ಯಾಲಯದಲ್ಲಿ, ಟೆಲಿಫೋನ್, ಟೈಪ್‍ರೈಟರ್, ಮೇಜು, ಕುರ್ಚಿಗಳು, ಸಣ್ಣ ಸಮಿತಿಗಳ ಸಭೆಯನ್ನು ನಡೆಸುವಂಥ ಸಭಾಗಾರ ಮುಂತಾದವು ಇರಬೇಕಾದುದೂ ಅಗತ್ಯವೇ.

ಕ್ರೀಡಾಂಗಣದ ಸುತ್ತಲೂ ಮೆಟ್ಟಲುಗಳ ಕೆಳಗಿನ ಜಾಗದಲ್ಲಿ, ಕೊಠಡಿಗಳನ್ನು ನಿರ್ಮಿಸಬಹುದು. ಈ ಕೊಠಡಿಗಳಲ್ಲಿ ವಿವಿಧ ಕ್ರೀಡಾಸಂಸ್ಥೆಗಳು ತಮ್ಮ ತಮ್ಮ ಕಚೇರಿಗಳನ್ನು ನಡೆಸಲು ಅನುಕೂಲವಾಗುತ್ತದೆ. ಜೊತೆಗೆ ಇವುಗಳಲ್ಲಿ ಪರ ಊರಿನಿಂದ ಬರುವ ಆಟಗಾರರಿಗೆ ಮತ್ತು ಅಧಿಕಾರಿವರ್ಗದವರಿಗೆ ತಂಗಲು ವಸತಿ ಒದಗಿಸಬಹುದು.

ಕ್ರೀಡಾಂಗಣದ ಸುತ್ತಲೂ ಸೈಕಲ್ಲುಗಳು, ಕಾರುಗಳು, ಮತ್ತಿತರ ವಾಹನಗಳನ್ನು ಬಿಡಲು ಸಾಕಷ್ಟು ಸ್ಥಳಾವಕಾಶವಿರಬೇಕು. ಅಂತೆಯೇ ವಾಹನಗಳ ಮತ್ತು ಜನರ ಸಂಚಾರಕ್ಕೆ ಅಗಲವಾದ ರಸ್ತೆಗಳಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕೆ ಬರುವಂಥ ಒಂದು ಸುಸಜ್ಜಿತ ಪ್ರಥಮ ಚಿಕಿತ್ಸಾಕೇಂದ್ರದ ಅಗತ್ಯವನ್ನು ಒತ್ತಿ ಹೇಳಬೇಕಾಗಿಲ್ಲ.

ಇತಿಹಾಸ: ಕ್ರೀಡಾಂಗಣದ ವ್ಯವಸ್ಥೆ ಕಾಲಕಾಲಕ್ಕೆ ಹೇಗೆ ಬದಲಾಗುತ್ತ ಬಂದಿದೆ ಎಂಬ ವಿಷಯ ಕುತೂಹಲಕಾರಿಯಾಗಿದೆ.

ಗ್ರೀಸಿನ ಒಲಿಂಪಿಯದಲ್ಲಿ ಕ್ರಿ.ಪೂ. ಮೂರನೆಯ ಶತಮಾನದಲ್ಲಾಗಲೆ ಒಂದು ಕ್ರೀಡಾಂಗಣವಿದ್ದಂತೆ ತಿಳಿದುಬಂದಿದೆ. ಆ ಅಂಗಣದ ಸುತ್ತಲೂ ಅರ್ಧಚಂದ್ರಾಕಾರವಾಗಿ ಅಳವಡಿಸಿದ್ದ ಕಲ್ಲಿನ ಪೀಠಗಳ ಅಟ್ಟಣೆಗಳನ್ನು ಜೋಡಿಸಿದ್ದರೆನ್ನಲು ಅವಶೇಷಗಳ ದಾಖಲೆ ಇದೆ. ಅನಂತರ ರೋಮನರು ಗ್ರೀಕರ ಮೇಲ್ಪಂಕ್ತಿಯನ್ನು ಅನುಸರಿಸಿ ವಿಶಾಲವಾದ ಕ್ರೀಡಾಂಗಣಗಳನ್ನು ರಚಿಸಿದರು. ಪ್ರಸಿದ್ಧವಾದ ಸರ್ಕಸ್ ಮ್ಯಾಕ್ಸಿಮಸ್ ಕ್ರೀಡಾಂಗಣದಲ್ಲಿ 250,000 ಪ್ರೇಕ್ಷಕರು ಕೂತು ಆಟ ನೋಡಲು ಅವಕಾಶವಿದ್ದಿತಂತೆ. ಇಂಥ ದೊಡ್ಡ ಅಖಾಡವನ್ನು ಇದುವರೆಗೆ ಯಾರೂ ಕಟ್ಟಿಲ್ಲವೆನ್ನಲಾಗಿದೆ.

ರೋಮನರ ವಾಸ್ತುಕಲೆ ಉನ್ನತಮಟ್ಟಕ್ಕೇರಿದಾಗ ಸುಮಾರು ಕ್ರಿ.ಶ. 72-80ರ ಸುಮಾರಿನಲ್ಲಿ ರೋಮನ್ ಕೊಲೀಸಿಯಂ (ಕ್ರೀಡೆ ಹಾಗೂ ಸಭಾಕಾಂiÀರ್iಗಳಿಗಾಗಿ ಕಟ್ಟಿದ ಭವನ) ಅಸ್ತಿತ್ವಕ್ಕೆ ಬಂತು. ನಾಲ್ಕು ಅಂತಸ್ತಿನ ಈ ಬೃಹದ್‍ಭವನದಲ್ಲಿ 50,000 ಮಂದಿ ಕುಳಿತು ಯಾವ ಅಡಚಣೆಯೂ ಇಲ್ಲದೆ ಕಾರ್ಯಕ್ರಮವನ್ನು ವೀಕ್ಷಿಸಬಹುದಾದಷ್ಟು ಸ್ಥಳವಿತ್ತು. ಜನ ನಿರಾಂತಕವಾಗಿ ಒಳಗೆ ಬರಲು, ಹೊರಗೆ ಹೋಗಲು ಬೇಕಾದ ಅನುಕೂಲಗಳೂ ಇದ್ದುವು.

ರೋಮನ್ ಸಾಮ್ರಾಜ್ಯ ಇಳಿಮುಖವಾದ ಮೇಲೆ ಸುಮಾರು 12 ಶತಮಾನಗಳ ಕಾಲ ಕ್ರೀಡಾಂಗಣಗಳ ರಚನೆ ಆಗಲೇ ಇಲ್ಲವೆನ್ನಲಾಗಿದೆ. 1900ಕ್ಕೆ ಮೊದಲು ಅಮೆರಿಕದಲ್ಲಿ ಕ್ರೀಡಾಂಗಣಗಳೇ ಇರಲಿಲ್ಲ. ಒಂದನೆಯ ಮಹಾಯುದ್ಧದ ವೇಳೆಗೆ ಐದು ಕ್ರೀಡಾಂಗಣಗಳನ್ನು ನಿರ್ಮಿಸಲಾಯಿತು. ಕುದುರೆಲಾಳದ ಆಕಾರದ ಹಾರ್ವರ್ಡ್ ಕ್ರೀಡಾಂಗಣ ನಿರ್ಮಿತವಾದದ್ದು 1912ರಲ್ಲಿ; 70,900 ಜನಕ್ಕೆ ಅವಕಾಶವಿರುವ ಯೇಲ್ ಬೌಲ್ ನಿರ್ಮಾಣವಾದದ್ದು 1914ರಲ್ಲಿ. ಅಲ್ಲಿಂದಾಚೆಗೆ ಸುಮಾರು 1930ರ ಹೊತ್ತಿಗೆ ಇಡೀ ಸಂಯುಕ್ತ ಸಂಸ್ಥಾನದಲ್ಲಿ 30 ಕ್ರೀಡಾಂಗಣಗಳು ಹುಟ್ಟಿಕೊಂಡವು. 1932ರಲ್ಲಿ ವಿಸ್ತಾರಗೊಂಡ ಲಾಸ್‍ಆಂಜೆಲೆಸ್‍ನ ಕ್ರೀಡಾಂಗಣದಲ್ಲಿ 1,05,000 ಜನಕ್ಕೆ ಪೀಠ ವ್ಯವಸ್ಥೆ ಇದೆ. 1963ರಲ್ಲಿ ರೂಪುಗೊಂಡ ರಾಬರ್ಟ್ ಎಫ್. ಕೆನಡಿ ಕ್ರೀಡಾಂಗಣದಲ್ಲಿ ಫುಟ್‍ಬಾಲ್, ಬೇಸ್‍ಬಾಲ್ ಮೊದಲಾದ ಅನೇಕ ಆಟಗಳಿಗೆ ಅನುಕೂಲವಿದೆ.

ಈಗ ಇರುವ ಕ್ರೀಡಾಂಗಣಗಳಲ್ಲಿ ಅತಿ ದೊಡ್ಡದು ಎಂದರೆ ರೀಯೋ ಡಿ ಜನೇರೋದಲ್ಲಿ ಪುರಸಭೆ ನಿರ್ಮಿಸಿದಂಥದು. ಅದರ ಸುತ್ತಳತೆ ಳಿ ಮೈಲಿ ಇದ್ದು ಒಳಗೆ 1,55,000 ಜನ ಕೂಡಲು ಅವಕಾಶವಿದೆ.

ಹೊರಾಂಗಣ ಅಖಾಡಗಳಂತೆ ಈಚೆಗೆ ಒಳಾಂಗಣ ಅಖಾಡಗಳು ಬಳಕೆಗೆ ಬರುತ್ತಿವೆ. ಚಿಕಾಗೋದಲ್ಲಿ ಇಂಥ ಅತಿ ದೊಡ್ಡ ಕ್ರೀಡಾಂಗಣವೊಂದಿದೆ.

ಭಾರತದ ಕ್ರೀಡಾಂಗಣಗಳು: ಎರಡನೆಯ ಮಹಾಯುದ್ಧಕ್ಕೆ ಮೊದಲಿನಿಂದಲೂ ಭಾರತದಲ್ಲಿ ವಿವಿಧ ಕ್ರೀಡೆಗಳಿಗೆ ಬೇಕಾದ ಸೌಕರ್ಯಗಳನ್ನು ಏರ್ಪಡಿಸುವ ಕೆಲಸ ನಡೆಯುತ್ತಲಿದೆ. ಇಲ್ಲಿ ಮುಖ್ಯವಾದ ಮೂರು ಕ್ರೀಡಾಂಗಣಗಳ ವಿಷಯವನ್ನು ಮಾತ್ರ ಪ್ರಸ್ತಾಪಿಸಲಾಗಿದೆ.

ಬ್ರಾಬೌರ್ನ್ ಕ್ರೀಡಾಂಗಣ : 1933ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತದ ಕ್ರಿಕೆಟ್ ಕ್ಲಬ್ಬಿನ ಆಸಕ್ತಿಯಿಂದಾಗಿ ಈ ಕ್ರೀಡಾಂಗಣ ಮುಂಬೈನಲ್ಲಿ 1937ರಲ್ಲಿ ನಿರ್ಮಾಣವಾಯಿತು. ಆಗ್ಗೆ ಮುಂಬೈ ಗೌರ್ನರ್ ಆಗಿದ್ದ ಲಾರ್ಡ್ ಬ್ರಾಬೌರ್ನ್ ಇದರ ಶಂಕು ಸ್ಥಾಪನೆ ಮಾಡಿದ (1936). ಕ್ಲಬ್ ಹೌಸನ್ನು ಬಿಟ್ಟು ಉಳಿದ ಕ್ರೀಡಾಂಗಣ ನಿರ್ಮಾಣಕ್ಕೆ ಆಗಿರುವ ಖರ್ಚು 7,70,000 ರೂಪಾಯಿಗಳು. ಅಂಗಣದಲ್ಲಿ 35,000 ಜನ ಪ್ರೇಕ್ಷಕರಿಗೆ ಕೂಡುವಷ್ಟು ಸ್ಥಳಾವಕಾಶವಿದೆ. ಪಕ್ಕದ ಕ್ಲಬ್ ಹೌಸಿನಲ್ಲಿ 5,000 ಜನ ಕೂಡಬಹುದು. ಇಲ್ಲಿನ ಕ್ರಿಕೆಟ್ ಮೈದಾನವೇ 27,552 ಚದರ ಅಡಿ ವಿಸ್ತೀರ್ಣದ್ದಾಗಿದೆ. ಇದಲ್ಲದೆ ಈ ಕ್ರೀಡಾಂಗಣದಲ್ಲಿ ಪಾಟಿಯಾಲ ಮಹಾರಾಜ ಮತ್ತು ಗೌರ್ನರುಗಳ ಹೆಸರಿನಲ್ಲಿ ಎರಡು ಪೆವಿಲಿಯನುಗಳು, ಒಂದು ಈಜುಕೊಳ, ಟೆನಿಸ್ ಅಂಗಳಗಳು, ಬ್ಯಾಡ್ಮಿಂಟನ್ ಅಂಗಳ, ಬಿಲಿಯಡ್ರ್ಸ್ ಮತ್ತು ಇಸ್ಪೀಟು ಆಟದ ಕೋಣೆಗಳು-ಇವೆಲ್ಲ ಇವೆ.

ತಿರುವನಂತಪುರದ ವಿಶ್ವವಿದ್ಯಾಲಯ ಕ್ರೀಡಾಂಗಣ: ಇದು 1939ರಲ್ಲಿ ಅಸ್ತಿತ್ವಕ್ಕೆ ಬಂತು. ಇಡೀ ಮೈದಾನದಲ್ಲಿ ಹುಲ್ಲು ಬೆಳೆಸಲಾಗಿದೆ. ಊರಿನ ನಡುವೆ ಇದ್ದು ವಸ್ತು ಪ್ರದರ್ಶನಾಲಯಕ್ಕೂ ಪ್ರಾಣಿಸಂಗ್ರಹಾಲಯಕ್ಕೂ ಹತ್ತಿರವಾಗಿರುವುದರಿಂದ ಆಟಗಳಲ್ಲಿ ಆಸಕ್ತರಾದ ಜನಕ್ಕೆ ತುಂಬ ಅನುಕೂಲ ಒದಗಿದೆ. ಇಲ್ಲಿ 30,000 ಜನ ಕೂಡಲವಕಾಶವಿದೆ. ಅಂಗಣದಲ್ಲಿನ ಫುಟ್‍ಬಾಲ್ ಮತ್ತು ಹಾಕಿ ಆಟಗಳಿಗೆ ಸ್ಥಳಾವಕಾಶವಿದೆ. ಜೊತೆಗೆ ಒಳ್ಳೆಯ ಕ್ರಿಕೆಟ್ ಮೈದಾನವೂ ಇದೆ. ವಿಶ್ವವಿದ್ಯಾಲಯಕ್ಕೆ ಸೇರಿರುವ ಇಲ್ಲಿನ ಪೆವಿಲಿಯನಿಗೆ ಜಿ.ವಿ. ರಾಜ ಪೆವಿಲಿಯನ್ ಎಂದು ಹೆಸರು.

ವಿಶ್ವವಿದ್ಯಾಲಯದ ಹಾಗೂ ಸಾರ್ವಜನಿಕ ವತಿಯ ಎಲ್ಲ ಕ್ರೀಡೆಗಳೂ ಇಲ್ಲಿ ನಡೆಯುತ್ತವೆ.

ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣ : 1933ರಲ್ಲಿ ಭವನಗರದ ಮಹರಾಜರು ಈ ಕ್ರೀಡಾಂಗಣವನ್ನು ಕಟ್ಟಿಸಿಕೊಟ್ಟರು. ಅನಂತರ 1951ರಲ್ಲಿ ಪ್ರಥಮ ಏಷ್ಯನ್ ಕ್ರೀಡೆಗಳು ನಡೆಯಬೇಕಾಗಿ ಬಂದಾಗ ಇದ್ದ ಕ್ರೀಡಾಂಗಣವನ್ನು ಪರಿಷ್ಕಾರವಾಗಿ ವಿಸ್ತರಿಸಲಾಯಿತು. ಈಗ ಇದರಲ್ಲಿ 22,000 ಪ್ರೇಕ್ಷಕರಿಗೆ ಕೂಡುವಷ್ಟು ಸ್ಥಳಾವಕಾಶವಿದೆ. ಅಂತರರಾಷ್ಟ್ರೀಯ ಮಟ್ಟದ ಆಟೋಟಗಳನ್ನು ನಡೆಸಲು ಬೇಕಾಗುವ ಎಲ್ಲ ಸೌಕರ್ಯಗಳೂ ಇಲ್ಲಿವೆ. ಫುಟ್‍ಬಾಲ್ ಮೈದಾನ, 400 ಮೀಟರ್ ಓಟದ ದಾರಿ, ಈಜು ಕೊಳ, 4 ಲಾನ್ ಟೆನಿಸ್ ಕೋರ್ಟುಗಳು, 6 ಗಟ್ಟಿ ನೆಲದ ಕೋರ್ಟುಗಳು, ಒಂದು ಹಾಕಿ ಮೈದಾನ, ಒಂದು ಟೇಬಲ್ ಟೆನಿಸ್ ಪಡಸಾಲೆ, 6 ಕ್ರಿಕೆಟ್ ಅಭ್ಯಾಸದ ಮೈದಾನಗಳು, ಒಂದು ಹೊರಾಂಗಣ, ವ್ಯಾಯಾಮಶಾಲೆ, 3 ವಾಲಿಬಾಲ್ ಅಖಾಡಗಳು, ಒಂದು ಬ್ಯಾಸ್ಕೆಟ್ ಬಾಲ್ ಅಂಗಣ-ಹೀಗೆ ಇಷ್ಟೊಂದು ಅವಕಾಶ ಇರುವ ಕ್ರೀಡಾಂಗಣ ಭಾರತದಲ್ಲಿ ಸದ್ಯಕ್ಕೆ ಇದೊಂದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: