ಕ್ಯಾರಿಕೇಚರುಗಳು, ಕಾರ್ಟೂನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಟೂನಿನ ಒಂದು ಉದಾಹರಣೆ

ಕ್ಯಾರಿಕೇಚರುಗಳು, ಕಾರ್ಟೂನುಗಳು ಒಬ್ಬ ವ್ಯಕ್ತಿಯನ್ನೋ ಒಂದು ಸನ್ನಿವೇಶವನ್ನೋ ಪರಿಹಾಸ ಮಾಡುವ ಉದ್ದೇಶದಿಂದ ರಚಿತವಾದ ಚಿತ್ರಗಳು. ವ್ಯಂಗ್ಯಚಿತ್ರ, ವಿಕಟಚಿತ್ರ, ವಿಡಂಬನ ಚಿತ್ರ, ಹಾಸ್ಯಚಿತ್ರ, ಪ್ರಹಸನ ಚಿತ್ರ, ಉಪಹಾಸ ಚಿತ್ರ-ಎಂಬೆಲ್ಲ ಪರ್ಯಾಯನಾಮಗಳು ಇಂಥ ಚಿತ್ರಗಳ ಧ್ಯೇಯಗಳನ್ನು ಸಾಕಷ್ಟು ಸ್ಪಷ್ಟಪಡಿಸುತ್ತವೆ. ಇಟಾಲಿಯನ್ ಮೂಲದಿಂದ ಬಂದ ಕ್ಯಾರಿಕೇಚರ್ ಮತ್ತು ಕಾರ್ಟೂನ್ ಎಂಬ ಈ ಶಬ್ದಗಳನ್ನು ಪಾಶ್ಚಾತ್ಯರಲ್ಲಿ ಪ್ರಸಿದ್ಧ ಪಡಿಸಿದವರು ಫ್ರೆಂಚರು. ಕಾರ್ಟೂನ್ ಎಂಬ ಹೆಸರು ಮೊದಲು ವರ್ಣಚಿತ್ರರಚನೆಗಾಗಲಿ ಪರದೆಗಳ ಮೇಲೆ ರಚಿಸಲ್ಪಡುವ ಚಿತ್ರಗಳಿಗಾಗಲಿ, ಕೆತ್ತನೆಯ ಕೆಲಸಕ್ಕಾಗಲಿ, ಬಟ್ಟೆಗಳನ್ನು ನೇಯುವಾಗ ಹಾಕಬೇಕಾದ ಚಿತ್ರ್ರ ಅಥವಾ ನಮೂನೆಗಾಗಲಿ, ಮಾದರಿಯಾಗುವಂತೆ ದಪ್ಪ ಕಾಗದದ ಮೇಲೆ ಬರೆದ ನಕ್ಷೆಗಾಗಲಿ ಸಲ್ಲುತ್ತಿತ್ತು; ಇತ್ತೀಚೆಗೆ ವ್ಯಾಪಕವಾಗಿ ವ್ಯಂಗ್ಯ ಚಿತ್ರಗಳಿಗೆಲ್ಲ ಅನ್ವಯಿಸುವಂತಾಗಿದೆ.

ಗ್ರೀಕರ ಸುವರ್ಣಯುಗದಲ್ಲೇ ಅರಿಸ್ಟಾಟಲ್ ಮತ್ತು ಅರಿಸ್ಟಾಫೆನಿಸರ ಬರೆವಣಿಗೆಗಳಲ್ಲಿ ವ್ಯಂಗ್ಯಚಿತ್ರದ ಬಗ್ಗೆ ಉಲ್ಲೇಖವಿದೆ. ವೈಯಕ್ತಿಕ ವ್ಯಂಗ್ಯಚಿತ್ರಗಳನ್ನು ಬರೆದು ಆ ಕಾರಣದಿಂದಲೇ ದುಃಖಕ್ಕೀಡಾದ ಪೌಸನ್ ಎಂಬಾತನ ವಿಷಯವನ್ನು ಅವರು ತಿಳಿಸಿದ್ದಾರೆ. ಆದರೂ ವ್ಯಂಗ್ಯಚಿತ್ರಗಳ ನಿಜವಾದ ಬಳಕೆ ಪ್ರಾರಂಭವಾದದ್ದು 16ನೆಯ ಶತಮಾನದ ಅಂತ್ಯದಲ್ಲಿ ಎನ್ನಬಹುದು. ಬೋಲೋನ್ಯ ಪಟ್ಟಣದ ಅನಿಬಾಲ್ ಕರಟ್ಟಿ ಮತ್ತು ಆತನ ಶಿಷ್ಯರು ಈ ಬಗೆಯ ಕೃತಿರಚನೆಯನ್ನು ಪ್ರಾರಂಭಿಸಿದಂತೆ ಕಾಣುತ್ತದೆ. ಇಟಾಲಿಯನ್ ವ್ಯಂಗ್ಯಚಿತ್ರಗಳಲ್ಲಿ ಕೆಲವನ್ನು ಇಂಗ್ಲೆಂಡಿನಲ್ಲಿ ತಗಡಿನ ಕೆತ್ತನೆಕಾರ ಆರ್ಥರ್ ಪಾಂಡ್ ಪ್ರಕಟಿಸಿದ. ಆತನೇ ಇಂಗ್ಲೆಂಡಿನ ಆಂಟಾಯನ್ ವಾಟ್ಟೊ ರಚಿಸಿದ ಡಾ.ಮಿಸೌಬಿನ್ ಎಂಬ ವೈದ್ಯನೊಬ್ಬನ ವಿಡಂಬನ ಚಿತ್ರವನ್ನೂ ಪ್ರಕಟಿಸಿದ (1720). ಇಂಗ್ಲೆಂಡಿನಲ್ಲಿ ಇಂಗ್ಲಿಷಿನವನಿಂದ ರಚಿಸಲ್ಪಟ್ಟ ಮೊದಲ ವ್ಯಂಗ್ಯಚಿತ್ರವಿದು. ಸ್ನೇಹಿತರ ಮನೋರಂಜನೆಗಾಗಿ ಬರೆದ ಈ ವ್ಯಂಗ್ಯಚಿತ್ರಗಳಲ್ಲಿ ತಿಳಿಹಾಸ್ಯಕ್ಕೆ ಅವಕಾಶವಿತ್ತೇ ಹೊರತು ಕಟುಟೀಕೆಯಾಗಲೀ ಮತ್ಸರದ ಧ್ವನಿಯಾಗಲೀ ಇರಲಿಲ್ಲ.

ರಾಜಕೀಯ ವಿಷಯಗಳನ್ನೂ ವ್ಯಕ್ತಿಗಳನ್ನೂ ವಿಡಂಬನೆ ಮಾಡುವ ವ್ಯಂಗ್ಯಚಿತ್ರಗಳು 18ನೆಯ ಶತಮಾನದಲ್ಲಿ ಪ್ರಾರಂಭವಾದುವು. ಇಂಗ್ಲೆಂಡಿನಲ್ಲಿ ಟೌನ್‍ಸೆಂಡ್ ಎಂಬಾತ ವೈಯಕ್ತಿಕ ವ್ಯಂಗ್ಯಚಿತ್ರಗಳು ಯಶಸ್ವಿಯಾಗುವುದಕ್ಕೆ ಕಾರಣನಾದ.

ಈ ಸುಮಾರಿಗೆ ವ್ಯಂಗ್ಯಚಿತ್ರರಚನೆಯಲ್ಲಿ ಹೊಸಪ್ರಯೋಗವೊಂದು ಆರಂಭವಾಯಿತು. ಮೃಗಗಳ ದೇಹವನ್ನು ರಚಿಸಿ, ವಿಡಂಬನೆಗಾಗಿ ಸರಿಯಾದವನ ತಲೆಯನ್ನು ಅದಕ್ಕೆ ಲಗತ್ತಿಸಿ ಅಣಕಾಡುವುದನ್ನಿಲ್ಲಿ ಕಾಣಬಹುದು. ಮನುಷ್ಯರಲ್ಲಿ ಹಲವಾರು ಜನರ ನಡೆವಳಿಕೆ ಮೃಗಗಳ ಗುಣಗಳನ್ನು ನೆನಪಿಗೆ ತರುವುದು ಎಲ್ಲರಿಗೂ ತಿಳಿದ ವಿಷಯ. ಲಂಚವನ್ನು ಯಾರಿಗೂ ತಿಳಿಯದಂತೆ ತೆಗೆದುಕೊಳ್ಳುತ್ತಾನೆಂದು ಕುಪ್ರಸಿದ್ಧನಾದವನನ್ನು ಕಣ್ಣುಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ ಚಿತ್ರಿಸಿದರೆ ವಿಡಂಬನೆ ಕಟು ಟೀಕೆಯಾಗಲು ಸಾಧ್ಯ. ಮೊದ್ದುತನಕ್ಕೆ ಕತ್ತೆ, ಯುಕ್ತಿಗೆ ನರಿ, ಶಕ್ತಿಗೆ ಸಿಂಹ, ದೈನ್ಯಕ್ಕೆ ನಾಯಿ, ನಂಬಿಸಿ ಕೊಲ್ಲುವ ಗುಣಕ್ಕೆ ಕರಡಿ-ಇತ್ಯಾದಿಯಾಗಿ ದೊಡ್ಡ ಭಂಡಾರವೆ ವ್ಯಂಗ್ಯಚಿತ್ರ ಕಲೆಕಾರರಿಗೆ ಸಿಕ್ಕಿದಂತಾಯಿತು.

ಮುದ್ರಣ ಕಲೆಯ ಪ್ರಭಾವ[ಬದಲಾಯಿಸಿ]

15ನೆಯ ಶತಮಾನದಲ್ಲಿ ಮುದ್ರಣಕಲೆ ಆರಂಭವಾಗುವ ತನಕ ವ್ಯಂಗ್ಯಚಿತ್ರಗಳನ್ನು ಅಟ್ಟೆ ಕಾಗದದ (ಕಾರ್ಡು) ಮೇಲೆ ರಚಿಸಿ ಒಬ್ಬರ ಕೈಯಿಂದೊಬ್ಬರಿಗೆ ಪ್ರಸಾರ ಮಾಡಬೇಕಾಗಿತ್ತು. ವ್ಯಂಗ್ಯಚಿತ್ರಗಳ ತೀವ್ರ ಮುನ್ನಡೆಗೆ ಇದೊಂದು ದೊಡ್ಡ ಆತಂಕವಾಗಿತ್ತು. ಮುದ್ರಣಕಲೆ ಬಳಕೆಗೆ ಬಂದ ಮೊದಲ ವರ್ಷಗಳಲ್ಲಿ ಚಿತ್ರಗಳ ಅಚ್ಚುಗಳನ್ನು ತಯಾರಿಸಲು ಮರದ ಹಲಗೆಯನ್ನು ಬಳಸುತ್ತಿದ್ದರು. ಇಂಥ ಅಚ್ಚುಗಳಿಂದ ಹೆಚ್ಚಿನ ಪ್ರತಿಗಳನ್ನು ತೆಗೆಯಲಾಗುತ್ತಿರಲಿಲ್ಲ. ಲೋಹದ ತಗಡಿನಿಂದ ಅಚ್ಚುಗಳನ್ನು ಮಾಡಲು ಪ್ರಾರಂಭಿಸಿದಾಗ ಸಾವಿರಾರು ಪ್ರತಿಗಳನ್ನು ತೆಗೆಯುವುದು ಸಾಧ್ಯವಾಯಿತು. 15ನೆಯ ಶತಮಾನದ ಮಧ್ಯದಲ್ಲಿ ಜರ್ಮನಿಯ ವ್ಯಂಗ್ಯಚಿತ್ರಕಾರನೊಬ್ಬ ಅನಾದಿಯಾಗಿ ನಡೆದು ಬಂದ ಗಂಡು ಹೆಣ್ಣಿನ ಕದನವನ್ನು ಮನೆಯ ಯಜಮಾನಿಕೆ ಯಾರದು ಎಂಬ ಶಿರೋನಾಮೆಯನ್ನು ಕೊಟ್ಟು ಮರದ ಹಲಗೆಯಲ್ಲಿ ಕೆತ್ತಿ ಅಚ್ಚೊತ್ತಿ ಯಶಸ್ವಿಯಾಗಿ ಪ್ರಕಟಿಸಿದ.

ಕಾಗದದ ತಯಾರಿಕೆಯಲ್ಲಿ ಪ್ರಗತಿಯಾಗಿ ಹೊಳಪು ಕಾಗದ ಬಳಕೆಗೆ ಬಂದಾಗ ನೆರಳುಬೆಳಕುಗಳು ಕಾಣುವಂತೆ ಅಚ್ಚೊತ್ತಲು ಸಾಧ್ಯವಾಯಿತು. ಛಾಯಾಚಿತ್ರ ಹಾಗೂ ಎರಕಹೊಯ್ಯುವ ಕಲೆಗಳು ಪ್ರವೃದ್ಧಿಯಾದಾಗ ಹಾಫ್‍ಟೋನ್ ಚಿತ್ರಗಳ ಉಪಯೋಗ ಪ್ರಾರಂಭವಾಯಿತು. ಪೆನ್ಸಿಲಿನಲ್ಲಿ ಬರೆದ, ಇಜ್ಜಲಿನಿಂದ ರಚಿಸಿದ ಸೂಕ್ಷ್ಮ ಚಿತ್ರಗಳನ್ನು ವ್ಯಂಗ್ಯಚಿತ್ರಕಾರರು ಬಳಕೆಗೆ ತರತೊಡಗಿದರು. ಪತ್ರಿಕೆಗಳ ಸಂಖ್ಯೆ ಹೆಚ್ಚಾದಾಗ, ಕಾಗದದ ಬಳಕೆಯೂ ಮಿತಿ ಮೀರಿತಾಗಿ ಸುಲಭದರ ನ್ಯೂಸ್ ಪ್ರಿಂಟ್ ಕಾಗದ ಬಳಕೆಗೆ ಬಂತು. ವ್ಯಂಗ್ಯ ರೇಖಾಚಿತ್ರಗಳನ್ನು ಬರೆದು ಪ್ರಕಟಿಸುವ ಕಲೆ ಈ ಸುಮಾರಿಗೆ ಜನಪ್ರಿಯವಾಯಿತು. ಎರಡೋ ಮೂರೋ ಹತ್ತೋ ಹನ್ನೆರಡೋ ತೆಳು ದಪ್ಪ ಗೆರೆಗಳಲ್ಲಿ ಸೂಕ್ಷ್ಮವಾಗಿ ಹಾಗೂ ಕಟುವಾಗಿ ವಿಡಂಬಿಸುವ ಪ್ರಚಂಡ ವ್ಯಂಗ್ಯಚಿತ್ರಕಾರರು ಹುಟ್ಟಿಕೊಂಡರು. ವಿಡಂಬಿಸಿದ ವಿಷಯ ಎದ್ದು ಕಾಣುವಂತೆ ವ್ಯಂಗ್ಯಚಿತ್ರ ರಚಿಸುವ ವಿಧಾನವನ್ನು ಚಿತ್ರಕಾರರು ರೂಪಿಸಿಕೊಂಡರು. ಸಮಾಜದ ಏರುಪೇರುಗಳಿಂದಲೇ ಸ್ಫೂರ್ತಿಪಡೆದು, ಅಲ್ಲಿನ ಕುಂದು ಕೊರತೆಗಳನ್ನು, ಅನ್ಯಾಯ ದಬ್ಬಾಳಿಕೆಗಳನ್ನು ವಿಡಂಬಿಸತೊಡಗಿದರು. ಹೀಗೆ ವ್ಯಂಗ್ಯ ಚಿತ್ರಗಳ ಸಾಂಸ್ಕøತಿಕ ಮಟ್ಟ ಕೂಡ ಸಮಾಜದ ಸಾಂಸ್ಕøತಿಕ ಸ್ಥಿತಿಯನ್ನೇ ಪ್ರತಿಬಂಬಿಸಿದವು.

ವ್ಯಂಗ್ಯಚಿತ್ರಕಲೆ[ಬದಲಾಯಿಸಿ]

ವಿಡಂಬನವೇ ವ್ಯಂಗ್ಯಚಿತ್ರಗಳ ಜೀವಾಳವಾದ್ದರಿಂದ ಉತ್ಪ್ರೇಕ್ಷೆ ಅದರ ದಾರಿಯಾಗುತ್ತದೆ. ವ್ಯಕ್ತಿಚಿತ್ರಗಳಲ್ಲಿ ವಿಡಂಬನೆಯನ್ನು ತರುವಾಗ ವ್ಯಕ್ತಿಯ ದೈಹಿಕ ಓರೆಕೋರೆಗಳನ್ನು, ವೈಲಕ್ಷಣ್ಯಗಳನ್ನು ಎದ್ದುತೋರುವಂತೆ ಮಾಡುವುದು ಒಂದು ವಿಧಾನ. ಅಂದರೆ ವ್ಯಕ್ತಿಯ ನೀಳವಾದ ಮೂಗನ್ನೋ ದಪ್ಪನಾದ ತಲೆಯನ್ನೋ ಉದ್ದವಾದ ತೆಳುಕತ್ತನ್ನೋ ದಪ್ಪನಾದ ಹೊಟ್ಟೆಯನ್ನೋ ಎದ್ದುಕಾಣುವಂತೆ ತೋರಿಸುವುದು ಸ್ವಾಭಾವಿಕ. ತೆಳುದೇಹ, ದಪ್ಪತಲೆ ಮತ್ತು ಅಗಲವಾದ ಕಿವಿಗಳು ಗಾಂಧೀಜಿಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಣಗಳು. ಇಂದಿರಾಗಾಂಧಿಯವರನ್ನು ಬಣ್ಣಿಸುವಾಗ ಅವರ ನಿಡುಮೂಗಿಗೆ ಪ್ರಾಶಸ್ತ್ಯ ಬರುತ್ತದೆ. ಇದಲ್ಲದೆ ಸಾಮಾನ್ಯ ವ್ಯಂಗ್ಯ ಚಿತ್ರಗಳನ್ನು ಸೃಷ್ಟಿಸುವಾಗ ಕಲೆಗಾರ ಒಂದೊಂದು ಚಿತ್ರದ ಹಿನ್ನೆಲೆ, ವ್ಯಕ್ತಿಗಳ ಚಿತ್ರಣ, ಅದರ ಭಾವವಿಲಾಸಗಳು ಎಲ್ಲವೂ ತನ್ನ ಉದ್ದೇಶಕ್ಕೆ ಹೊಂದುವಂತೆ ಮಾಡುತ್ತಾನೆ. ಅದಕ್ಕೆ ಉಚಿತವಾದ ಶೀರ್ಷಿಕೆಯನ್ನು ಕೊಡುತ್ತಾನೆ. ಶೀರ್ಷಿಕೆ ಯಾವಾಗಲೂ ಚಿಕ್ಕದಾಗಿ, ಚುರುಕಾಗಿ ಉದ್ದೇಶವನ್ನು ಇಲ್ಲದ ವ್ಯಂಗ್ಯ ಚಿತ್ರಗಳೂ ಪ್ರಕಟವಾಗುತ್ತವೆ. ಅಂಥವುಗಳಲ್ಲಂತೂ ಕಲೆಗಾರನ ಕಲ್ಪನೆ ಹುಚ್ಚೆದ್ದು ಕುಣಿದಾಡುವುದನ್ನು ಕಾಣಬಹುದು. ಇನ್ನೂ ಕೆಲವು ಕಲಾವಿದರು ತಮ್ಮ ತಮ್ಮ ಚಿತ್ರಗಳಿಗೆ ಉಚಿತ ನಾಯಕರನ್ನೂ ಸೃಷ್ಟಿಸಿಕೊಂಡುಬಿಟ್ಟಿದ್ದಾರೆ. ಉದಾಹರಣೆಗೆ ಡೇವಿಡ್ ಲೋನ ಕರ್ನಲ್ ಬ್ಲಿಂಡ್ ಅಬೂಬಿನ ಇಬ್ಬರು ಪುಡಾರಿಗಳು, ಶಂಕರರ ಕತ್ತೆ ತಲೆಯ ದಂಪತಿಗಳು, ಡೆಕ್ಕನ್ ಹೆರಾಲ್ಡ್‍ನ ಪೌರ, ನಾಡಿಗರ ಪೆದ್ದಗುಮಾಸ್ತ, ಲಕ್ಷಣ್ ಅವರ ಸಾಮಾನ್ಯ ಗೃಹಸ್ಥ-ಈ ಮೊದಲಾದವರನ್ನು ನೋಡಬಹುದು.

ವ್ಯಂಗ್ಯಚಿತ್ರಗಳಿಗೆ ಬಣ್ಣಕೊಟ್ಟವರು ಬೊಂಬಾಯಿನ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಪತ್ರಿಕೆಯವರು. ಅದರಲ್ಲಿ ಆರ್.ಕೆ.ಲಕ್ಷ್ಮಣ್ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಇಂಗ್ಲೆಂಡಿನ ಪಂಚ್ ಪತ್ರಿಕೆ ಬಹು ಹಿಂದಿನಿಂದ ವರ್ಣರಂಜಿತ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದೆ. ಸಾಮಾನ್ಯವಾಗಿ ವ್ಯಂಗ್ಯಚಿತ್ರಗಳು ಕಪ್ಪು ಬಿಳುಪಿನಲ್ಲಿರುತ್ತವೆ. ಯಾವ ಚಿತ್ರದಲ್ಲೂ ನಿರೂಪಣೆ ಪೂರ್ಣವಾಗಿರುವುದಿಲ್ಲ. ಸ್ಥೂಲವಾಗಿ ದಪ್ಪಗೆರೆಗಳನ್ನೆಳೆದು ಚಿತ್ರಕಾರ ಉಚಿತ ಭಾವ ಮೂಡುವಂತೆ ಮಾಡಿರುತ್ತಾನೆ. ಮಸಿ, ಪೆನ್ಸಿಲ್, ಕ್ರೇಯಾನ್ ಬಣ್ಣಗಳನ್ನು ಸ್ಥೂಲವಾಗಿ ಬಳಸಿ ಚಿತ್ರಗಳನ್ನು ಬಿಡಿಸುವುದು ವಾಡಿಕೆ.

ವ್ಯಂಗ್ಯಚಿತ್ರಶ್ರೇಣಿ (ಕಾರ್ಟೂನ್ ಸ್ಟ್ರಿಪ್) ಈಚೆಗೆ ಜನಪ್ರಿಯವಾಗುತ್ತಿದೆ. ಚಿತ್ರಶ್ರೇಣಿಯಲ್ಲಿ ಸಾಲಾಗಿ ನಾಲ್ಕಾರು ಚಿತ್ರಗಳಿರುತ್ತವೆ. ಎಲ್ಲವೂ ಸೇರಿ ಒಂದು ಅಭಿಪ್ರಾಯ ಮೂಡುತ್ತದೆ. ವಾರಪತ್ರಿಕೆಗಳು ಇಂಥ ಶ್ರೇಣಿಗಳನ್ನು ಪ್ರತಿವಾರವೂ ಪ್ರಕಟಿಸುತ್ತವೆ. ಬಾಂಡ್ಲಿ, ಡೆನಿಸ್ ದಿ ಮೇನೆಸ್-ಇವು ಶ್ರೇಣಿಚಿತ್ರಗಳಿಗೆ ಉದಾಹರಣೆಗಳು.

ವ್ಯಂಗ್ಯಚಿತ್ರಕಲೆಗೆ ಈಚೆಗೆ ಹೆಚ್ಚಿನ ಸ್ಥಾನಮಾನ ದೊರೆತಿದೆ. ಅದಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಿರುವುದು ಪತ್ರಿಕೆಗಳಿಂದ. ಡೇವಿಡ್ ಲೋ, ಆರ್.ಕೆ.ಲಕ್ಷ್ಮಣ್, ಆರ್. ಮೂರ್ತಿ ಮೊದಲಾದವರ ಚಿತ್ರಗಳು ಪುಸ್ತಕರೂಪದಲ್ಲೂ ಪ್ರಕಟವಾಗಿವೆ.

ಬ್ರಿಟನ್[ಬದಲಾಯಿಸಿ]

17ನೆಯ ಶತಮಾನದ ತನಕ ಸಮಾಜದಲ್ಲಿ ರಾಜಮನೆತನಕ್ಕೆ ಅತ್ಯುನ್ನತ ಗೌರವ, ಭಯ, ಭಕ್ತಿಗಳಿದ್ದುವು. ಆದರೆ 1649ರಲ್ಲಿ 1ನೆಯ ಚಾಲ್ರ್ಸ್ ದೊರೆಯ ತಲೆಯನ್ನು ಕಡಿದುಹಾಕುವಷ್ಟರ ಮಟ್ಟಿಗೆ, ಜನರಲ್ಲಿ ರಾಜಕೀಯ ಜಾಗೃತಿ ಉಂಟಾಗಿತ್ತು. ಆ ತನಕ ವ್ಯಂಗ್ಯಚಿತ್ರಕಾರರು ಆಳರಸರನ್ನು ಅಣಕವಾಡುತ್ತಿರಲಿಲ್ಲ. ಈ ಸುಮಾರಿಗೆ ರಾಜಮನೆತನವನ್ನೂ ವ್ಯಂಗ್ಯಕ್ಕೆ ಗುರಿಮಾಡುವ ಕೆಲಸ ಆರಂಭವಾಯಿತು. ಪ್ರತಿಭಾವಂತನಾದ ಹೋಗಾರ್ಥ್ ಮಾನವೀಯ ಕುಂದು ಕೊರತೆಗಳನ್ನು ಅವಗುಣಗಳನ್ನು ವಿಡಂಬಿಸಲು ಪ್ರಾರಂಭಿಸಿ, ಸಮಕಾಲೀನ ವ್ಯಂಗ್ಯಚಿತ್ರಕಾರನಾಗಿಯೇ ಉಳಿಯದೆ, ಸಾರ್ವಕಾಲಿಕ ಮಟ್ಟವನ್ನು ಮುಟ್ಟಿದ.

18ನೆಯ ಶತಮಾನದ ಸಮಾಜದಲ್ಲಿ ಶ್ರೀಮಂತರು, ಬಡವರು, ಕೆಲಸಗಾರರು-ಹೀಗೆ ವಿವಿಧ ಹಂತಗಳಿದ್ದು, ಅವುಗಳಲ್ಲಿನ ವ್ಯಾವಹಾರಿಕ ಅಂತರ ಹಿರಿದಾಗಿತ್ತು. ಗಿಲ್ರೆ ಮತ್ತು ರೌಲೆಂಡ್‍ಸನ್ನರು ಎಲ್ಲ ಕಸುಬುದಾರರನ್ನು ಎಲ್ಲ ಅಂತಸ್ತಿನವರನ್ನೂ ವ್ಯಂಗ್ಯಚಿತ್ರಕ್ಕೆ ಬಳಸಿಕೊಂಡು ಅಪಾರ ವೈವಿಧ್ಯ ಸಾಧಿಸಿದರು.

18ನೆಯ ಶತಮಾನದ ಅಂತ್ಯದಲ್ಲಿ, 19ರ ಆದಿಯಲ್ಲಿ ಸಮಾಜದಲ್ಲಿ ವಿಪರೀತ ಬದಲಾವಣೆಗಳಾದವು. ದೇಶದಲ್ಲಿ ಹಣದ ಸಮೃದ್ಧಿಯಿತ್ತು. ವಿರಾಮವೂ ಇತ್ತು. ಹಾಗಾಗಿ ಹೆಂಗಸರ ಗಂಡಸರ ಉಡುಪು ವೇಷಭೂಷಣಗಳಲ್ಲಿ ನಡೆವಳಿಕೆಯಲ್ಲಿ ಕೀಳ್ದರ್ಜೆಯ ಅಭಿರುಚಿ ಎದ್ದು ಕಾಣುವಂತಾಯಿತು. ಆ ಕಾಲದ ವ್ಯಂಗ್ಯಚಿತ್ರಗಳು ಕೂಡ ಬಲುಕೀಳು ಮಟ್ಟದ ಹಾಸ್ಯವನ್ನೇ ತೋರುತ್ತವೆ.

1840ರಲ್ಲಿ ಪಂಚ್ (ನೋಡಿ- ಪಂಚ್) ಪತ್ರಿಕೆ ಪ್ರಾರಂಭವಾಯಿತು. ರಿಚರ್ಡ್ ಡಾಯಿಲ್, ಜಾನ್ ಲೀಚ್ ಸುಸಂಸ್ಕøತ ಹಾಸ್ಯಚಿತ್ರಗಳ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಂಡಿದೆ. 1880 ಮತ್ತು ಮುಂದಿನ ಕಾಲದಲ್ಲಿ ಮ್ಯಾಕ್ಸ್ ಎಂಬ ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಆಧ್ಯಾತ್ಮಿಕ ಹಿನ್ನೆಲೆಯನ್ನು ಬಳಸಿಕೊಂಡು ವ್ಯಂಗ್ಯಚಿತ್ರಗಳನ್ನು ರಚಿಸಿದ. ವಾಸ್ತವತ್ವದಿಂದ ಊಹಾಲೋಕದಲ್ಲಿ ಎಷ್ಟು ದೂರ ಸರಿದರೂ ಅಷ್ಟೂ ಅಷ್ಟು ಅವನು ಸತ್ಯದ ಹತ್ತಿರಹತ್ತಿರಕ್ಕೇ ಬರುತ್ತಿದ್ದುದು ತನ್ನ ಅಸದೃಶವಾದ ಪ್ರತಿಭೆಯಿಂದಲೇ. ಈ ಕಾಲದಲ್ಲೇ ಪಿಕ್‍ನಿಕ್ ಪೇಪರ್ಸ್ ಕಾದಂಬರಿಗೆ ಸಿಮೋರ್ ಎಂಬ ಪ್ರತಿಭಾವಂತ ಚಿತ್ರಗಳನ್ನು ರಚಿಸಿದ್ದು.

19ನೆಯ ಶತಮಾನದ ಅಂತ್ಯಕಾಲದಲ್ಲಿ ಮತ್ತು 20ರ ಆದಿಯಲ್ಲಿ ಇಂಗ್ಲೆಂಡಿನ ವ್ಯಾಪಾರ ಲೋಕದಲ್ಲೆಲ್ಲ ಹರಡಿತು. 1914ರಲ್ಲಿ ಒಂದನೆಯ ಮಹಾಯುದ್ಧವೂ ಪ್ರಾರಂಭವಾಯಿತು. ವ್ಯಾಪಾರೋದ್ಯಮಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಮನಸೆಳೆಯುವಂತೆ ಮಾಡಲು ವ್ಯಂಗ್ಯಚಿತ್ರಕಾರರು ತಮ್ಮ ಕಲೆಯನ್ನು ಬಳಸಿಕೊಳ್ಳಲಾರಂಭಿಸಿದರು. ಇದರಿಂದ ಅವರು ಸಂಪಾದನೆಯೂ ಉನ್ನತಮಟ್ಟಕ್ಕೇರಿತು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಶತ್ರುಗಳ ಮೇಲಿನ ಕೋಪ, ತಮ್ಮ ಜೀವನದಲ್ಲಿ ಅನುಭವಿಸಬೇಕಾಗಿಬಂದ ಕಷ್ಟಗಳು ಜನರು ಮನಸ್ಸಿನ ಉದ್ವೇಗವನ್ನು ಹೆಚ್ಚಿಸಿದುವು. ಉದ್ವೇಗವನ್ನು ತೋಡಿಕೊಂಡು ಬರೆದ ವ್ಯಂಗ್ಯಚಿತ್ರಗಳು ಜನರನ್ನು ನಗಿಸಿ, ಅವರ ಕಷ್ಟಗಳು ಹಗುರವಾಗುವಂತೆ ಮಾಡಿದವು. ಹಾಗಾಗಿ ವ್ಯಂಗ್ಯಚಿತ್ರಗಳ ಜನಪ್ರಿಯತೆಯೂ ಹೆಚ್ಚಾಯಿತು. ಡೇವಿಡ್ ಲೋ, ಇಲ್ಲಿಂಗ್ಸ್‍ವರ್ಥ್, ಡೌಡ್, ಪೂಗಾಸ್ಸೆ ಇತ್ಯಾದಿಯಾಗಿ ನೂರಾರು ಪ್ರತಿಭಾವಂತ ವ್ಯಂಗ್ಯಚಿತ್ರಕಾರರು ದಿನ, ವಾರ, ಪಕ್ಷ, ಮಾಸ ಪತ್ರಿಕೆಗಳಲ್ಲಿ ವೈವಿಧ್ಯಪೂರ್ಣ, ಸುಸಂಸ್ಕøತ ವಿಡಂಬನ ಚಿತ್ರಗಳನ್ನು ಬರೆದರು. ಈಗಲೂ ಇವರಲ್ಲಿ ಕೆಲವರು ಬರೆಯುತ್ತಿದ್ದಾರೆ.

ಅಮೆರಿಕ[ಬದಲಾಯಿಸಿ]

ಅಮೆರಿಕದಲ್ಲಿ ಸಂಪತ್ಸಮೃದ್ಧಿ ಹೆಚ್ಚಾಗಿ ಜನಜೀವನದ ವೇಗವೂ ಅತಿಯಾದುದರಿಂದ ವ್ಯಂಗ್ಯಚಿತ್ರಗಳಿಗೆ ಹೆಚ್ಚು ಹೆಚ್ಚು ಉತ್ತೇಜನ ದೊರೆಯುವಂತಾಯಿತು. ಹೆಸರಾಂತ ವ್ಯಂಗ್ಯಚಿತ್ರಕಾರರ ರಚನೆಗಳನ್ನು ಸಂಸ್ಥೆಯೊಂದು ಕೊಂಡು ಸುಲಭಬೆಲೆಗೆ ದೇಶದ ಎಲ್ಲ ಮೂಲೆಗಳಲ್ಲಿರುವ ಪತ್ರಿಕೆಗಳಿಗೂ ಹಂಚಲು ತೊಡಗಿತು. ಥಾಮಸ್ ನ್ಯಾಸ್ಟ್‍ನೇ (1840-1902), ಅಮೆರಿಕದ ವ್ಯಂಗ್ಯಚಿತ್ರಕಾರರಲ್ಲಿ ಮೊದಲಿಗನೆನ್ನಬಹುದು. ಈತನೇ ಡೆಮೋಕ್ರಟಿಕ್ ಪಕ್ಷಕ್ಕೆ ಕತ್ತೆಯ ತಲೆಯನ್ನು ಲಗತ್ತಿಸಿದವನು.

ಫ್ರಾನ್ಸ್[ಬದಲಾಯಿಸಿ]

ಕ್ರ್ರಾಂತಿಗೆ ಹೆಸರಾದ ಈ ದೇಶದಲ್ಲಿ ಚಾಲ್ರ್ಸ್ ಫಿಲಿಪಾನ್ ಎಂಬಾತನೇ ಮೊದಮೊದಲು ಯಶಸ್ವಿಯಾಗಿ ವ್ಯಂಗ್ಯಚಿತ್ರಗಳನ್ನು ರಚಿಸಿದವ. ವರ್ಣವ್ಯಂಗ್ಯಚಿತ್ರಗಳನ್ನೂ ಈತನೇ ಬಳಕೆಗೆ ತಂದು, ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳು ಅವಶ್ಯಕ ಎಂದು ತೋರಿಸಿಕೊಟ್ಟ. ಇವನ ಸಂಗಡಿಗರಾದ ದೋಮಿಯಾ, ದಾರೆ, ಗಾವಾರ್ನೆ ಎಲ್ಲರೂ ಪ್ರತಿಭಾವಂತರು. ಯೂರೋಪಿನ ಎಲ್ಲ ದೇಶಗಳಲ್ಲಿಯೂ ಇದೇ ರೀತಿ ವ್ಯಂಗ್ಯಚಿತ್ರಗಳು ಬಳಕೆಗೆ ಬಂದು ಜನಪ್ರಿಯವಾಗಿವೆ. ಸಿಂಪ್ಲಿಸಿಸಿಮ್‍ಸ್, ಕಿಕ್ಕೇರಿಕಿ-ಇತ್ಯಾದಿಗಳು ಶತಮಾನಗಳಿಂದಲೂ ಯಶಸ್ವಿಯಾಗಿ ಪ್ರವರ್ಧಮಾನಕ್ಕೆ ಬಂದಿವೆ.

ರಷ್ಯ[ಬದಲಾಯಿಸಿ]

ಕ್ರಾಂತಿಗೆ ಮುಂಚೆ ಸ್ಟ್ರೆಕೋಸಾó, ಪಾಲಿಮೆಟ್ ಇವುಗಳು ಜನಪ್ರಿಯವಾಗಿದ್ದುವು. ಕ್ರಾಂತಿಯಾದ ಮೇಲೆ ಕಠಿಣ ಆಡಳಿತವಾರಂಭವಾಗಿದ್ದರೂ ವ್ಯಂಗ್ಯಚಿತ್ರಕಾರರು ಬಲು ಎಚ್ಚರದಿಂದ ನಡೆಯಬೇಕಾಗಿರುವಾಗಲೂ ಕ್ರೊಕೊಡಿಲ್ ಹಾಸ್ಯ ಪತ್ರಿಕೆಯ ವ್ಯಂಗ್ಯಚಿತ್ರಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದವು.

ಭಾರತ[ಬದಲಾಯಿಸಿ]

ಹಿಂದೆ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ಹೋರಾಡುತ್ತಿದ್ದ ಕಾಲದಲ್ಲಿ ವ್ಯಂಗ್ಯಚಿತ್ರಗಳು ರಾಜಕೀಯ ವಿಷಯಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದುದು ಸ್ವಾಭಾವಿಕವಾಗಿತ್ತು. ಸ್ವಾತಂತ್ರ್ಯಾನಂತರ ಭಾರತೀಯರೇ ಆಡಳಿತಗಾರರಾಗಿ ಸಚಿವಾದಿ ಅಧಿಕಾರಿಗಳನ್ನು ವ್ಯಂಗ್ಯಚಿತ್ರಗಳಿಗೆ ಗುರಿಮಾಡುವುದು ಹೆಚ್ಚಾಯಿತು. ಪ್ರಗತಿ ಹೊಂದಲು ಉತ್ಸಾಹದಿಂದ ಮುನ್ನುಗ್ಗುವ ಯಾವ ಆಡಳಿತದಲ್ಲೂ ಕುಂದು, ತಪ್ಪುಗಳು ಸಹಜವಾಗಿಯೇ ಇರುತ್ತವೆಯಷ್ಟೆ. ಹಾಗಾಗಿ ವಿಕಟಚಿತ್ರಗಳಿಗೆ ಅಪಾರ ಸಾಮಗ್ರಿಗಳು ಸಿಕ್ಕಿ ವ್ಯಂಗ್ಯಚಿತ್ರಗಳು ವೈವಿಧ್ಯಮಯವಾಗಿ ಬೆಳೆಯಲು ಅವಕಾಶವೇರ್ಪಟ್ಟಿತು. ಭಾರತೀಯ ಸಂಸ್ಕøತಿಯ ಬೆಂಬಲವನ್ನು ಉಪಯೋಗಿಸಿಕೊಂಡ ಪರಿಣಾಮಕಾರಿ ವ್ಯಂಗ್ಯಚಿತ್ರಗಳಿಗೆ ಶಂಕರ್, ಸುಸಂಸ್ಕøತ ವ್ಯಂಗ್ಯಚಿತ್ರಗಳಿಗೆ ಕುಟ್ಟಿ, ರೇಖೆಯ ಸೊಬಗು ಮತ್ತು ಉತ್ತಮ ವಿಡಂಬನೆಗೆ ಲಕ್ಷ್ಮಣ್, ಥಾನು, ವಿಜಯನ್, ಅಬೂ-ಇಂಥ ಹಲವಾರು ಪ್ರತಿಭಾವಂತರು ಯಶಸ್ವಿಯಾಗಿ ಪತ್ರಿಕೆಗಳ ಬೆಂಬಲವಾಗಿ ಕೆಲಸ ಮಾಡುತ್ತಿದ್ದಾರೆ.

ಕರ್ಣಾಟಕ[ಬದಲಾಯಿಸಿ]

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮೂರ್ತಿ ವಿಡಂಬನ ಕ್ಷೇತ್ರದಲ್ಲಿ ಯಶಸ್ವಿ ಕೆಲಸ ಮಾಡುತ್ತಿದ್ದಾರೆ. ಕೊರವಂಜಿ ಆರ್,ಕೆ.ಲಕ್ಷ್ಮಣ್ ಕರ್ಣಾಟಕದ ಗಡಿಮೀರಿ ಭಾರತೀಯ, ಅಂತರರಾಷ್ಟ್ರೀಯ ಅಂತಸ್ತನ್ನು ಮುಟ್ಟಿದ್ದಾರೆ. ಸುಧಾ ಮತ್ತು ಮಯೂರದ ನಾಡಿಗ್ ಹೊಸ ವ್ಯಂಗ್ಯಚಿತ್ರಕಾರರಲ್ಲಿ ಮುಖ್ಯ ಆಗಿದ್ದಾರೆ. ಗಂಗಾಧರ್ ಅಡ್ಡೇರಿಯವರು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲೂ ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಚಿರಪರಿಚಿತರಾಗಿದ ವ್ಯಕ್ತಿ. ಗಳಲ್ಲಿ ಹಲವರು ಇಂಗ್ಲಿಷಿನ ಇತರ ಪತ್ರಿಕೆಗಳ ವ್ಯಂಗ್ಯ ಚಿತ್ರಗಳನ್ನು ಸಾರ್ಥಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಜನಜಾಗೃತಿಯೂ ತಿಳಿವಳಿಕೆಯೂ ಹೆಚ್ಚಾಗಿ, ಸಮಾಜದಲ್ಲಿ ಹಾಸ್ಯಪ್ರವೃತ್ತಿ ವೃದ್ಧಿಯಾದಂತೆಲ್ಲ ವ್ಯಂಗ್ಯಚಿತ್ರಕಾರರ ಸಂಖ್ಯೆ ತನಗೆ ತಾನೇ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ನೂರಾರು ವ್ಯಂಗ್ಯ ಚಿತ್ರಕಲಾವಿದರು ಕ್ರಿಯಾಶೀಲವಾಗಿದ್ದು, ಅವರದೇ ಆದ ಸಂಘಟಣೆಯೊಂದು ನಿಯಮಿತವಾಗಿ ಕಾರ್ಯಕ್ರಮ ನಡೆಸುತ್ತದೆ.

ಚಲನಚಿತ್ರಗಳು[ಬದಲಾಯಿಸಿ]

ಕಾರ್ಟೂನ್ ಕಲೆಯನ್ನು ಬಳಸಿಕೊಂಡು ಚಿಕ್ಕ ದೊಡ್ಡ ಚಲನಚಿತ್ರಗಳನ್ನು ಈಚೆಗೆ ತಯಾರಿಸುತ್ತಿದ್ದಾರೆ. ಇಂಥ ಕಲಾವಿದರಲ್ಲಿ ಪ್ರಸಿದ್ಧನಾದವ ವಾಲ್ಟ್‍ಡಿಸ್ನೆ, ವ್ಯಂಗ್ಯಚಿತ್ರಣವನ್ನು ಬೆಳ್ಳಿತೆರೆಯ ಮೇಲೆ ಯಶಸ್ವಿಯಾಗಿ ಕಲಾತ್ಮಕವಾಗಿ ಬಳಸಿದವರಲ್ಲಿ ಈತ ಅಗ್ರಗಣ್ಯ.