ಕ್ಯಾಮಿಲಿ ಜಾರ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಮಿಲಿ ಜಾರ್ಡನ್ (1838-1921). ಫ್ರಾನ್ಸಿನ ಸುಪ್ರಸಿದ್ಧ ಗಣಿತವಿಜ್ಞಾನಿ.

ಬದುಕು[ಬದಲಾಯಿಸಿ]

ಲಿಯಾನ್ಸ್ ನಗರದಲ್ಲಿ 1838ರ ಜನವರಿ 5ರಂದು ಜನನ. ಪ್ಯಾರಿಸ್ಸಿನಲ್ಲಿ ವಿದ್ಯಾಭ್ಯಾಸ. ಅಲ್ಲಿನ ಎಕೋಲೆ ಪಾಲಿಟೆಕ್ನಿಕ್‍ನಲ್ಲಿ ಗಣಿತ ಪ್ರಾಧ್ಯಾಪಕನಾಗಿ ಸೇರಿ (1876) ದೀರ್ಘ ಸೇವಾನಂತರ 1912ರಲ್ಲಿ ನಿವೃತ್ತನಾದ. ಮರಣ 1921ರ ಜನವರಿ 22ರಂದು.

1885ರಲ್ಲಿ ಜರ್ನಲ್ ಡಿ ಮ್ಯಾಥಮ್ಯಾಟಿಕ್ಸ್ ಎಂಬ ಗಣಿತ ಪತ್ರಿಕೆಯೊಂದನ್ನು ಸ್ಥಾಪಿಸಿ ತನ್ನ ಜೀವಮಾನಪರ್ಯಂತವೂ ಅದನ್ನು ಪ್ರಕಟಿಸಿದ.

ಸಂಶೋಧನೆ, ಸಾಧನೆ[ಬದಲಾಯಿಸಿ]

ಈತನ ಮೊದಲ ಸಂಶೋಧನಾಕ್ಷೇತ್ರ ಜ್ಯಾಮಿತಿ. ಗಣಿತವಿಶ್ಲೇಷಣೆಯಲ್ಲಿ ಇವನು ಸಿದ್ಧಹಸ್ತ. ಎಕೋಲೆ ಪಾಲಿಟೆಕ್ನಿಕ್‍ನಲ್ಲಿ ಈತ ಕೊಟ್ಟ ಉಪನ್ಯಾಸಗಳ ಸಾರಾಂಶವನ್ನೂ ಗಣಿತವಿಶ್ಲೇಷಣೆಯಲ್ಲಿ ನಡೆಸಿದ ಸಂಶೋಧನೆಯ ಫಲಗಳನ್ನೂ ಒಳಗೊಂಡ ಉದ್ಗ್ರಂಥವೊಂದನ್ನು ಪ್ರಕಟಿಸಿದ. ಈ ಬಗೆಯ ಉನ್ನತ ಮಟ್ಟದ ಶಾಸ್ತ್ರೀಯ ಗ್ರಂಥಗಳು ವಿರಳವಾಗಿದ್ದ ಆ ಕಾಲದಲ್ಲಿ ಆಗಿನ ಅನೇಕ ಗಣಿತಶಾಸ್ತ್ರಜ್ಞರಿಗೆ ಗಣಿತದಲ್ಲಿ ಉತ್ಸಾಹವನ್ನೂ ಸ್ಫೂರ್ತಿಯನ್ನೂ ತುಂಬಿದ ಕೀರ್ತಿ ಈ ಗ್ರಂಥಕ್ಕೆ ಸಲ್ಲುತ್ತದೆ.

ಪರಿಬದ್ಧ ವಿಚರಣೆಯ ಉತ್ಪನ್ನಗಳ (ಫಂಕ್ಷನ್ಸ್ ಆಫ್ ಬೌಂಡೆಡ್ ವೇರಿಯೇಷನ್) ಸಿದ್ಧಾಂತಗಳನ್ನು ಜ್ಯಾಮಿತಿಯಲ್ಲಿ ಜಾರ್ಡನ್ ಬಳಸಿದ. ಒಂದು ಸರಳರೇಖೆಯ ಮೇಲಿನ ಬಿಂದುಗಳ ಗಣಕ್ಕೂ ಸಮಸ್ತ ನೈಜಸಂಖ್ಯಗಳ ಗಣಕ್ಕೂ ಒಂದು-ಒಂದು ಸಂವಾದಿತ್ವವೊಂದನ್ನು ಗಣಿತದಲ್ಲಿ ರೂಢಿಗೆ ತಂದ ಕೂಡಲೇ, ಅಂತರ್ಬೋಧೆಗೆ ಮಾತ್ರ ನಿಲುಕುತ್ತಿದ್ದ ವಕ್ರರೇಖೆಗಳಿಗೆ ಸಂಬಂಧಿಸಿದ ಭಾವನೆಗಳನ್ನು ಸಂಖ್ಯೆಗಳ ಆಧಾರದ ಮೇಲೆ ನಿಲ್ಲುವಂತೆ ಈತ ಮಾಡಿದ. ಜಾರ್ಡನ್ ವಕ್ರರೇಖೆಯ ಪ್ರಮೇಯ ಎಂಬ ಹೆಸರಾಂತ ಪ್ರಮೇಯವನ್ನು ಈತ ಸಾಧಿಸಿದ. ಈ ಬಗೆಯ ವಕ್ರರೇಖೆಯೊಂದನ್ನು ಸಮತಳದಲ್ಲಿ ಎಳೆದರೆ, ಆ ಸಮತಳದ ಉಳಿದ ಬಿಂದುಗಳನ್ನು ಈ ರೇಖೆ ಎರಡು ಪರಸ್ಪರ ವಿಸಂಧಿ (ಮ್ಯೂಚುವಲಿ ಡಿಸ್‍ಜಾಯಿಂಟ್) ಉಪಗಣಗಳನ್ನಾಗಿ ಬೇರ್ಪಡಿಸುವುದು. ಇವುಗಳಿಗೆ ಒಂದು ವಿಶಿಷ್ಟ ಗುಣ ಉಂಟು. ಒಂದೇ ಉಪಗಣದಲ್ಲಿರುವ ಯಾವ ಎರಡು ಬಿಂದುಗಳನ್ನಾದರೂ ಒಂದು ರೇಖೆಯಿಂದ (ವಕ್ರವಾದರೂ ಸರಿ) ಸೇರಿಸಬಹುದು; ಮತ್ತು ಈ ಸೇರಿಸುವ ರೇಖೆ ದತ್ತ ಜಾರ್ಡನ್ ವಕ್ರರೇಖೆಯನ್ನು ಎಲ್ಲೂ ಛೇದಿಸುವುದಿಲ್ಲ. ಆದರೆ ಒಂದೊಂದು ಉಪಗಣದಲ್ಲಿ ಒಂದೊಂದರಂತೆ ತೆಗೆದುಕೊಂಡ ಯಾವ ಎರಡು ಬಿಂದುಗಳನ್ನೇ ಆಗಲಿ ಯಾವ ರೀತಿ ಸೇರಿಸ ಹೊರಟರೂ ಈ ಸೇರ್ಪಡೆಯ ರೇಖೆ ದತ್ತ ಜಾರ್ಡನ್ ರೇಖೆಯನ್ನು ಒಮ್ಮೆಯಾದರೂ ಸಂಧಿಸಿಯೇ ತೀರುತ್ತದೆ. ಇದೇ ಮೇಲಿನ ಪ್ರಮೇಯದ ಸಾರಾಂಶ. ಹೀಗೆ, ವಕ್ರರೇಖೆಗಳಿಗೆ ಸಂಬಂಧಿಸಿದ ಇನ್ನೂ ಅನೇಕ ಗುಣಗಳನ್ನು ಈತ ಅಭ್ಯಸಿಸಿದ್ದಾನೆ.

ಗ್ರೂಪುಗಳ ಸಿದ್ಧಾಂತದಲ್ಲಿ ಜಾರ್ಡನ್ ನಡೆಸಿರುವ ಸಂಶೋಧನೆಗಳು ಅಪಾರ. ಪರಿವರ್ತನ್ ಗ್ರೂಪುಗಳ (ಗ್ರೂಪ್ಸ್ ಆಫ್ ಸಬ್‍ಸ್ಟಿಟ್ಯೂಷನ್) ಗ್ಯಾಲ್ವ ಸಿದ್ಧಾಂತವನ್ನು ಬೈಜಿಕ ಸಮೀಕರಣಗಳಿಗೆ ಅನ್ವಯಿಸಿದ ಸುದೀರ್ಘವಾದ ವಿವರಣೆಗಳನ್ನೊಳಗೊಂಡ ಗ್ರಂಥವೊಂದನ್ನು 1870ರಲ್ಲಿ ಪ್ರಕಟಿಸಿದ. ಇದಕ್ಕಾಗಿ ಈತನಿಗೆ ಪ್ಯೋನ್‍ಸ್ಲೆ ಬಹುಮಾನ ದೊರೆಯಿತು. ನೀಲ್ಸ್ ಅಬೆಲ್ (1802-1829) ಎಂಬಾತ ಸೂಚಿಸಿದ್ದ ಸಮಸ್ಯೆಯೊಂದನ್ನು ಸಾಧಿಸಿದ ಹಿರಿಮೆ ಜಾರ್ಡನ್ನನದು.

ಜಾರ್ಡನ್ ಮತ್ತು ಹೋಲ್ಡರ್ (1859-1937) ಪ್ರಮೇಯ ಗ್ರೂಪ್ ಸಿದ್ಧಾಂತದಲ್ಲಿ ಬಲು ಮುಖ್ಯವಾದ್ದು; ಇದರಿಂದ ದತ್ತ ಗ್ರೂಪಿನ ರಚನೆಯನ್ನು ಸಂಪೂರ್ಣವಾಗಿ ತಿಳಿಯಬಹುದು. ಗ್ರೂಪ್ ಸಿದ್ಧಾಂತದ ಮಾರ್ಗಗಳನ್ನು ಗಣಿತ ವಿಶ್ಲೇಷಣೆಯಲ್ಲಿ ಜಾರ್ಡನ್ ವಿಶೇಷವಾಗಿ ಬಳಕೆಗೆ ತಂದ. ಮಾತೃಕೆಗಳ ಸಿದ್ಧಾಂತದಲ್ಲಿ ಈತನ ಕೊಡುಗೆ ಗಮನಾರ್ಹವಾದುದು. ಒಂದು ತೆರನಾದ ಮಾತೃಕೆಗಳನ್ನು ಒಂದು ವಿಶಿಷ್ಟ ಬಗೆಯ ಆದರ್ಶರೂಪಕ್ಕೆ ತರಬಹುದೆಂದು ಈತ ತೋರಿಸಿಕೊಟ್ಟಿದ್ದಾನೆ. ಇದಕ್ಕೆ ಜಾರ್ಡನ್ನನ ಆದರ್ಶರೂಪ ಎಂದೇ ಹೆಸರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: