ಕೋಳಿ ಜುಟ್ಟಿನ ಗಿಡ
ಕೋಳಿ ಜುಟ್ಟಿನ ಗಿಡ(ಗೌರಿ ಗಿಡ/ಅಗ್ನಿಶಿಖೆ)
[ಬದಲಾಯಿಸಿ]ಸಂ: ಲಾಂಗಲೀ, ತಾಮ್ರಚೂಡ
ಹಿಂ: ಕಾಲಿ ಹರಿ
ಮ: ಬಂದಾ
ಗು: ಕೋಕರುಂದಾ
ತೆ: ಕೋಡಿ ಜುಟ್ಟು ಚೆಟ್ಟು
ತ: ಅಗ್ನಿಶಿಖಾ, ಕಿಳಂಗು
ವರ್ಣನೆ
[ಬದಲಾಯಿಸಿ]ತಂಪಾಗಿರುವ ಸ್ಥಳಗಳಲ್ಲಿ ನೀರು ನಾಲೆಗಳ ಪಕ್ಕದಲ್ಲಿ ಬೆಳೆಯುವ ಹಸಿರು ಬಳ್ಳಿ ಎಲೆಗಳು. ಹಸಿರು ಮತ್ತು ಎಳೆ ಜೋಳದ ಎಲೆಗಳನ್ನು ಹೋಲುತ್ತವೆ. ಎಲೆಗಳು ಗರಿಗರಿಯಾಗಿರುತ್ತವೆ. ಹೂಗಳು ಕೋಳಿ ಜುಟ್ಟಿನಂತಿರುತ್ತವೆ. ನೋಡಲು ಅಂದವಾಗಿರುತ್ತವೆ. ಹೂಗಳು ದಟ್ಟದಾಗಿರುತ್ತವೆ. ಮೊದಮೊದಲು ಹಸಿರಾಗಿದ್ದು ನಂತರ ಕಿತ್ತಳೆ ಬಣ್ಣಕ್ಕೆ ತಿರುಗಿ ಕೊನೆಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಸೂರ್ಯಾಸ್ತಮದ ರಂಗನ್ನು ಪಡೆಯುತ್ತದೆ. ಅಗಸ್ಟ್, ಅಕ್ಟೋಬರ್ ತಿಂಗಳಲ್ಲಿ ಹೂ ಕಾಯಿ ಬಿಡುತ್ತದೆ. ನಾಮದ ಚಿಲುಮೆ ಮತ್ತು ದೇವರಾಯನ ದುರ್ಗದಲ್ಲಿ ಈ ಗಿಡವನ್ನು ಕಾಣಬಹುದು.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ಬೇರುಗಳು ಶರೀರದ ನರಗಳನ್ನು ಕೆರಳಿಸುವಂತಹ ಗುಣ ಹೊಂದಿವೆ. ವಾಂತಿ ಮಾಡಿಸುವ ಸ್ವಭಾವವುಳ್ಳದ್ದು. ಕ್ರಿಮಿಗಳು, ಮೂಲವ್ಯಾಧಿ ಮರ್ಮಾಂಗದ ಹುಣ್ಣು, ಉದರಶೂಲೆ, ಕುಷ್ಠಚರ್ಮ, ವ್ಯಾಧಿಗಳು ವಾಸಿಯಾಗುವವು. ಹಾವಿನ ವಿಷವನ್ನು ತಗ್ಗಿಸುವ ಮತ್ತು ಚೇಳಿನ ವಿಷವನ್ನು ಪರಿಹರಿಸುವ ಗುಣಗಳನ್ನು ಹೊಂದಿವೆ. ಗಿರಿಜನರು ಈ ಗಿಡದ ಬೇರನ್ನು ಸಂತಾನ ನಿಯಂತ್ರಣದಲ್ಲಿ ಉಪಯೋಗವಾಗುವುದೆಂದು ತಿಳಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗರ್ಭಪಾತವಾಗುವ ಸಂಭವ ಉಂಟು. ಹೆಚ್ಚಿನ ಎಚ್ಚರಿಕೆಯಿಂದ ಬಳಸಬೇಕಾಗಿರುವ ಗಿಡಮೂಲಿಕೆ ಇದಾಗಿದೆ. ಗರ್ಭಿಣಿ ಸ್ತ್ರೀಯರು ಸೇವಿಸಬಾರದು.
ಚೇಳು ಕಡಿತಕ್ಕೆ
[ಬದಲಾಯಿಸಿ]ಈ ಗಿಡದ ಬೇರನ್ನು ನೀರಿನಲ್ಲಿ ತೇದು ಚೇಳು ಕಚ್ಚಿರುವ ಸ್ಥಳದಲ್ಲಿ ಲೇಪಿಸುವುದು.
ಸರ್ಪದ ವಿಷಕ್ಕೆ
[ಬದಲಾಯಿಸಿ]ಬೇರನ್ನು ನೀರಿನಲ್ಲಿ ತೇದು, ನೀರಿನಲ್ಲಿ ಕದಡಿ ಕುಡಿಸುವುದು ಮತ್ತು ಬೇರನ್ನು ತೇದು ಗಂಧವನ್ನು ಗಾಯಕ್ಕೆ ಹಚ್ಚುವುದು.
ಅಗ್ನಿಶಿಖೆಯ ಅರ್ಕ
[ಬದಲಾಯಿಸಿ]ಅರ್ಕವನ್ನು ಸೇವಿಸುವುದರಿಂದ ಮುಖದ ಶೋಭೆ ಊತ ಮತ್ತು ಜ್ವರ ಪರಿಹಾರವಾಗುವುದು. ಒಂದು ಚೂರು ಬೇರನ್ನು ಬಾಯಲ್ಲಿ ಹಾಕಿಕೊಂಡು ಅಗಿಯುವುದರಿಂದಲೂ ಸಹ ಮುಖದ ರೋಗಗಳು ವಾಸಿಯಾಗುವವು. ರಸವು ಕಹಿಯಾಗಿರುವುದು, ದಾಹವು ಕಡಿಮೆಯಾಗುವುದು.
ಸಹಿಸಲು ಅಸಾಧ್ಯವಾದ ದಾಹ
[ಬದಲಾಯಿಸಿ]ಕೋಳಿ ಜುಟ್ಟಿನ ಗಿಡದ ಬೇರನ್ನು ಚೆನ್ನಾಗಿ ತೊಳೆದು, ಅರ್ಧ ಇಂಚು ಬೇರನ್ನು ಕತ್ತರಿಸಿ ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿಯುವುದು. ರಸವನ್ನು ಆಗಾಗ ಅಗಿಯುವುದು.
ಚರ್ಮವ್ಯಾಧಿಗೆ
[ಬದಲಾಯಿಸಿ]ಕೋಳಿ ಜುಟ್ಟಿನ ಗಿಡದ ಬೇರನ್ನು ತಂದು ತೇದು, ಗಂಧವನ್ನು ಹುಣ್ಣುಗಳಗೆ ಹಚ್ಚುವುದು. ಗಂಭೀರ ರೂಪದ ಕುರುಗಳೂ ಸಹ ವಾಸಿಯಗುವವು.
ಕುಷ್ಠ ರೋಗ, ಗನೇರಿಯಾ ಮರ್ಮಾಂಗದ ರೋಗಗಳು
[ಬದಲಾಯಿಸಿ]ಈ ಗಿಡದ ಬೇರನ್ನು ನುಣ್ಣಗೆ ಚೂರ್ಣಿಸಿ ಹುಡಿಯನ್ನು ಹುಣ್ಣುಗಳ ಮೇಲೆ ಸಿಂಪಡಿಸುವುದು ಮತು ಬೇರಿನ ಚೂರ್ಣವನ್ನು ಗಂಜಿಯೊಡನೆ ಸೇವಿಸಿವುದು, ಅಥವಾ ನೀರಿನಲ್ಲಿ ತೇದ ಬೇರಿನ ಗಂಧವನ್ನು ಕೋಳಿ ಪುಕ್ಕದಲ್ಲಿ ಅದ್ದಿ ಹಚ್ಚುವುದು. ಈ ಮೂಲಿಕೆಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ, ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ವೈದ್ಯಕೀಯ ರಂಗದಲ್ಲಿ ಮಹತ್ತರ ಕೊಡುಗೆ ಕೊಡುವ ನೀರಿಕ್ಷೆಯಿದೆ.