ವಿಷಯಕ್ಕೆ ಹೋಗು

ಕೊಳಂಬೆ ಪುಟ್ಟಪ್ಪ ಗೌಡರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಳಂಬೆ ಪುಟ್ಟಣ್ಣ ಗೌಡರು
ಜನನಜುಲೈ ೧೫, ೧೯೦೩
ಸುಳ್ಯ, ತಾಲ್ಲೂಕಿನ ಚೊಕ್ಕಾಡಿ
ಮರಣ೨೬.೦೧.೧೯೮೧
ಸುಳ್ಯ
ವೃತ್ತಿಮುಖ್ಯೋಪಾಧ್ಯಾಯ, ಯಕ್ಷಗಾನ ಕಲಾವಿದ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವಿ, ಯಕ್ಷಗಾನ, ಸಂಶೋಧನೆ, ಸಂಪಾದನೆ, ನುಡಿಯರಿವಿಗ
ವಿಷಯಹಳಗನ್ನಡ

ಹುಡುಗಾಟ

[ಬದಲಾಯಿಸಿ]

ಕೊಳಂಬೆ ಪುಟ್ಟಣ್ಣ ಗೌಡರು ಹುಟ್ಟಿದ್ದು ಸುಳ್ಯತಾಲ್ಲೂಕಿನ ಚೊಕ್ಕಾಡಿಯಲ್ಲಿ ೧೯೦೩ರ ಜುಲೈ ೧೫ರಂದು. ತಂದೆ ಸುಬ್ರಾಯಗೌಡ, ತಾಯಿ ಸುಬ್ಬಮ್ಮ. ಸುಳ್ಯದ ಬಳಿಯ ಅಮರ ಪಡ್ನೂರು ಗ್ರಾಮದ ಅಜ್ಜನಗದ್ದೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಶಿಕ್ಷಕರಾಗಿ ದೊರೆತಿದ್ದವರು ಮೇರ್ಕಜೆ ಪುಟ್ಟಣ್ಣನವರು. ನಾಲ್ಕನೆಯ ತರಗತಿಯ ‘ದರ್ಬಾರ’ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲದೆ ಬಹುಮಾನವನ್ನು ಗಳಿಸಿದ್ದರು.

೧೯೨೪ರಲ್ಲಿ ಅಧ್ಯಾಪಕರ ತರಬೇತು ಪಡೆದು ತಾವು ಓದಿದ ಅಜ್ಜನಗದ್ದೆ ಶಾಲೆಗೆ ಅಧ್ಯಾಪಕರಾಗಿ ಸೇರಿ, ವಿದ್ವಾನ್ ಪರೀಕ್ಷೆಯಲ್ಲಿ ಪಾಸಾದ ನಂತರ ಮುಖ್ಯೋಪಾಧ್ಯಾಯರಾಗಿ ಭಡ್ತಿ ಪಡೆದರು. ನಂತರ ಪಂಜ, ಕೋಟಿಮುಂಡುಗಾರು, ಬೊಬ್ಬೆರೇರಿ, ಮಾಣಿ, ಪುತ್ತೂರು, ಉಪ್ಪಿನಂಗಡಿ ಮುಂತಾದೆಡೆಯಲ್ಲೆಲ್ಲಾ ಕಾರ್ಯ ನಿರ್ವಹಿಸಿ ೧೯೫೮ರಲ್ಲಿ ಸುಳ್ಯದ ಬೋರ್ಡ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ನಿವೃತ್ತರಾದರು.

ಅಧ್ಯಾಪಕರಾಗಿದ್ದ ಕಾಲದಲ್ಲಿ ಇವರಿಗೆ ಸಾಹಿತ್ಯದ ಸಂಗಾತಿಗಳಾಗಿದ್ದವರು ಎಂ.ಎಸ್. ಕಾಮತ್, ಉಗ್ರಾಣ ಮಂಗೇಶರಾವ್, ಮೊಳಹಳ್ಳಿ ಶಿವರಾಯರು. ಇವರುಗಳ ಪ್ರೋತ್ಸಾಹದಿಂದ ಕತೆ, ಕವನ, ನಾಟಕಗಳನ್ನು ರಚಿಸತೊಡಗಿದರು. ಯಕ್ಷಗಾನ ಕಲೆ ಮನೆತನಕ್ಕೆ ಬಂದ ಹವ್ಯಾಸ, ಯಕ್ಷಗಾನದ ಬಗ್ಗೆ ಇವರು ಬರೆದ ಮೊದಲ ಕೃತಿ ‘ಅಂಧಕಾಸುರ ಕಾಳಗ’ ೧೯೨೬ರಲ್ಲಿ ಪ್ರಕಟವಾಯಿತು. ಯಕ್ಷಗಾನ ಕಲೆಯಲ್ಲಿ ಖ್ಯಾತರಾಗಿದ್ದು ರಂಗದ ಮೇಲೂ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅದರಲ್ಲಿ ಕೃಷ್ಣಸಂಧಾನ ಪ್ರಸಂಗದಲ್ಲಿ ಕೌರವನ ಪಾತ್ರಧಾರಿಯಾಗಿ ತಮ್ಮ ಮಾತಿನ ವೈಖರಿಯಿಂದ ಜನಪ್ರಿಯ ನಟರೆನಿಸಿದ್ದರು. ದೇರಾಜಿ ಸೀತಾರಾಮಯ್ಯ, ಅಜ್ಜನಗಡ್ಡೆ ಕಲಾವಿದರೊಡನೆ ನಾಟಕ ರಂಗವನ್ನು ಬೆಳೆಸಿದ್ದಲ್ಲದೆ ‘ಶಾರದಾಂಬ ಕೃಪಾ ಪೋಷಿತ ಯಕ್ಷಗಾನ ಮಂಡಲಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬಹುಮುಖ ಪ್ರತಿಭೆಯಿಂದ ಕೂಡಿದ್ದ ಪುಟ್ಟಣ್ಣ ಗೌಡರು ಯಕ್ಷಗಾನದಲ್ಲಿ ಪಾತ್ರವಹಿಸಿದಂತೆ ಹರಿಕಥೆಗಳನ್ನೂ ಮಾಡಿ ಜನರನ್ನು ರಂಜಿಸಿದ್ದರು.

ಕೊಗೆತ/ಸಾಹಿತ್ಯ

[ಬದಲಾಯಿಸಿ]

ಕವನ ಸಣ್ಣಕತೆ, ನಾಟಕ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದು ‘ಹೂವೀಡು’, ‘ಮಾತಿಲ್ಲ ಮಾತಿಲ್ಲ’ ಎಂಬ ಎರಡು ಶಿಶು ಸಾಹಿತ್ಯ ಕೃತಿಗಳು ಪ್ರಮುಖವಾದವುಗಳು. ‘ಕಾಲೂರ ಚೆಲುವೆ’, ‘ನುಡಿವಣಿಗಳು’ ಅಚ್ಚಕನ್ನಡದ ವಿಶಿಷ್ಟ ಕೃತಿಗಳು. ಆಂಡಯ್ಯನ ಕಬ್ಬಿಗರ ಕಾವ, ಮುಳಿಯ ತಿಮ್ಮಪ್ಪಯ್ಯನವರ ಸೊಬಗಿನ ಕಾವ್ಯ ಮಾರ್ಗದಲ್ಲಿ ರಚಿಸಿದ ಕೃತಿಗಳು. ಸುಮಾರು ೪೪೦ ಚೌಪದಿಯಿಂದ ಕೂಡಿರುವ ‘ಕಾಲೂರ ಚೆಲುವೆ’ ಮನೋಹರ ಕಾವ್ಯವಾಗಿದ್ದರೆ ನುಡಿವಣಿಗಳು ಮುಕ್ತಕಗಳ ಸಂಕಲನ. ಇವರ ಮತ್ತೊಂದು ಪ್ರಮುಖ ಕೃತಿ ಎಂದರೆ ‘ಅಚ್ಚ ಕನ್ನಡದ ನಿಘಂಟು’. ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ಕುತೂಹಲಕ್ಕಾಗಿ ಕಲಿತಿದ್ದ ಪುಟ್ಟಣ್ಣ ಗೌಡರು ‘ಬೆರಳುಗಳಿಂದ ಅದೃಷ್ಟ’ ಎಂಬ ಹಸ್ತ ಸಾಮುದ್ರಿಕಾ ಶಾಸ್ತ್ರದ ಪುಸ್ತಕವನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹಲವಾರು ದೇಶಭಕ್ತಿಗೀತೆಗಳನ್ನು ರಚಿಸಿದ್ದು ‘ಪರಡೆ ಕಳಿ ಗಂಗಸರ’ ಎಂಬ ತುಳು ಹಾಡು ಬಹುಜನಪ್ರಿಯ ಹಾಡಾಗಿತ್ತು. ಅಚ್ಚಕನ್ನಡ ಪದಪ್ರಯೋಗಗಳಿಂದ ಭಾಷೆಯ ಸೊಗಸನ್ನು ಹೆಚ್ಚಿಸಿ ಸಾಹಿತ್ಯ ಹಾಗೂ ಯಕ್ಷಗಾನ ಕಲೆಯ ಪೋಷಕರಾಗಿದ್ದು, ಋಜುಸ್ವಭಾವದ, ಹಾಸ್ಯ ಪ್ರವೃತ್ತಿಯ ಕೊಳಂಬೆ ಪುಟ್ಟಣ್ಣ ಗೌಡರು ನಿಧನರಾದದ್ದು ೧೯೮೧ರ ಜನವರಿ ಗಣರಾಜ್ಯೋತ್ಸವ ದಿನದಂದು.