ಕೊರಕಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೇರಿಕಾದ ಆ್ಯರಿಜ಼ೋನಾದ ಗ್ರ್ಯಾಂಡ್ ಕ್ಯಾನ್ಯನ್

ಕೊರಕಲು ನದಿಯ ದೀರ್ಘಕಾಲದ ಹರಿಯುವಿಕೆಯಿಂದ ಉಂಟಾದ ಆಳವಾದ ಮತ್ತು ಲಂಬ ಬದಿಗಳಿರುವ ಕಮರಿ (ಕ್ಯಾನ್ಯನ್). ನದಿ ಹರಿಯುವಾಗ ಮಣ್ಣು, ಮರಳು, ಕಲ್ಲು, ಬಂಡೆ ಎಲ್ಲವನ್ನೂ ಕೊಚ್ಚಿಕೊಂಡು ಮುಂದೆ ನುಗ್ಗುತ್ತದೆ. ಆಗ ನದೀಪಾತ್ರ ಸವೆದು ಪಕ್ಕದ ನೆಲಕ್ಕಿಂತ ಕೆಳಮಟ್ಟಕ್ಕೆ ತಗ್ಗುತ್ತದೆ. ಇದರಿಂದ ನದಿಯ ಇಕ್ಕಡೆಗಳಲ್ಲಿ ಎತ್ತರದ ಮತ್ತು ಕಡಿದಾದ ದಂಡೆಗಳು ಉಂಟಾಗುತ್ತವೆ. ಇಂಥ ದೃಶ್ಯಗಳು ಬೆಟ್ಟಗುಡ್ಡಗಳ ಮೂಲಕ ನದಿ ಹರಿಯುವಾಗ ಸಾಮಾನ್ಯ. ನದೀ ಪಾತ್ರ ಮೆದುಮಣ್ಣಿನ ಮೇಲಿದ್ದರೆ ಅಲ್ಲಿ ಸವೆತ ತೀವ್ರಗತಿಯಿಂದ ನಡೆದು ಗಟ್ಟಿ ಬಂಡೆ ಇರುವ ತಳ ಸಿಕ್ಕುವವರೆಗೂ ಅದು ತಗ್ಗುತ್ತಲೇ ಇರುವುದು. ಇದರಿಂದ ದಂಡೆಗಳಿಗೂ ಪಾತ್ರಕ್ಕೂ ಇರುವ ಅಂತರ ಏರುತ್ತದೆ. ಇದು ಯಾವುದೋ ಒಂದು ಮಿತಿಗೆ ಬಂದಾಗ ದಂಡೆಗಳು ಕುಸಿಯುತ್ತವೆ. ನದಿಯನ್ನು ಸೇರಲು ಬರುವ ಕಿರುತೊರೆಗಳು, ಕಾಲುವೆಗಳು, ಮಳೆಗಾಲದ ತೋಡುಗಳು ಮುಂತಾದವು ದಂಡೆಗಳನ್ನು ಕೊರೆದು ಅವನ್ನು ಇನ್ನಷ್ಟು ಶಿಥಿಲಗೊಳಿಸುತ್ತವೆ. ಆದ್ದರಿಂದ ಒಂದು ನದಿಯ ಪ್ರವಹನದಲ್ಲಿ ಅದರ ಪಾತ್ರ ನಿರಂತರವಾಗಿ ತಗ್ಗುವ ಒಲವನ್ನು ತೋರಿಸುತ್ತಿರುವಾಗಲೇ ದಂಡೆಗಳಿಂದ ಕುಸಿದು ಬಿದ್ದ ಮತ್ತು ಮೇಲಿನಿಂದ ಹಾಗೂ ಬದಿಗಳಿಂದ ತೊಳೆದುಕೊಂಡು ಬಂದು ಸೇರಿದ ಮಣ್ಣು ಕಲ್ಲುಕಸ ಮಡ್ಡಿ ಈ ಪಾತ್ರವನ್ನು ಮೇಲೆತ್ತಲು ಪ್ರಯತ್ನಿಸುತ್ತವೆ. ವಿರುದ್ಧಬಲಗಳ ಅಥವಾ ಒಲವುಗಳ ಈ ನಿರಂತರ ಆಟ ನದಿ ಗಟ್ಟಿ ಬಂಡೆಗಲ್ಲುಗಳಿರುವ ಮರುಭೂಮಿ ಪ್ರದೇಶವನ್ನು ಅಡ್ಡಹಾಯುವಾಗ ಗಮನಾರ್ಹವಾಗಿ ಬದಲಾಗುತ್ತದೆ. ನದಿಯ ಕೊರೆತ ಎಂದಿನಂತೆ ಪಾತ್ರವನ್ನು ತಗ್ಗುಮಟ್ಟಕ್ಕೆ ಕೊಂಡೊಯ್ದಂತೆ ಅದರ ಇಕ್ಕೆಲಗಳಲ್ಲೂ ಕುಸಿಯದ ಮತ್ತು ಕಡಿದಾದ ಗಟ್ಟಿಕಲ್ಲಿನ ದಂಡೆಗಳು ನದೀಪಾತ್ರದಿಂದ ಎತ್ತರ ಎತ್ತರವಾಗಿ ಬೆಳೆಯುತ್ತ ಹೋಗುತ್ತವೆ. ಮರುಭೂಮಿ ವಲಯದಲ್ಲಿ ಮಳೆನೀರಾಗಲೀ ಕಿರು ತೊರೆಗಳಾಗಲೀ ಬದಿಗಳಿಂದ ಹರಿದುಬಂದು ದಂಡೆಗಳನ್ನು ಕೊರೆದು ತಿಥಿಲಗೊಳಿಸುವ ಸಂಭಾವ್ಯತೆ ಇಲ್ಲ. ಇನ್ನು ಬಿಸಿಲು, ಗಾಳಿ, ಚಳಿ ಮುಂತಾದ ಬಾಹ್ಯಬಲಗಳಿಂದ ಆಗುವ ಪರಿಣಾಮ ಗಮನಾರ್ಹವಲ್ಲ. ಹೀಗಾಗಿ ಒಮ್ಮೆ ರೂಪುಗೊಳ್ಳಲು ತೊಡಗಿದ ಗಟ್ಟಿ ದಂಡೆಗಳು ಚಿತ್ರವಿಚಿತ್ರವಾಗಿ ಬೆಳೆದು ನದಿಯ ದೈನಂದಿನ ನಿರಂತರ ಚಟುವಟಿಕೆಯ ಸಮಗ್ರ ಪ್ರತೀಕವಾಗಿ ನಿಂತಿರುತ್ತವೆ. ದಂಡೆಗಳ ಮೇಲುಮಟ್ಟದಿಂದ ನೂರಾರು ಅಡಿಗಳ ಆಳದಲ್ಲಿ ನದಿ ಅಂಕುಡೊಂಕಾಗಿ ಹರಿಯುತ್ತ ತನ್ನ ಎಂದಿನ ಕಾರ್ಯವನ್ನು ಮುಂದುವರಿಸುತ್ತಿರುತ್ತದೆ. ಇಲ್ಲಿ ಎದುರಾಗುವ ದೃಶ್ಯ ಕಣಿವೆಗಳಿಗಿಂತ ಭಿನ್ನವಾದದ್ದು. ಇದರ ಕಾರಣವೂ ಅದೇ ರೀತಿ ಭಿನ್ನವಾದದ್ದು. ಆದ್ದರಿಂದ ಇದಕ್ಕೆ ಕೊರಕಲು ಎಂಬ ಬೇರೆ ಹೆಸರನ್ನು ನೀಡಲಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ಕೊರಕಲು ಅಮೆರಿಕದ ಸಂಯುಕ್ತರಾಷ್ಟ್ರಗಳಲ್ಲಿದೆ. ಅಲ್ಲಿ ಕೊಲರಾಡೋ ನದಿ ಅರಿಜೋನಾ ಮರುಭೂಮಿಯನ್ನು ಕೊರೆದು ಅಡ್ಡಹಾಯುವ ಪ್ರದೇಶದಲ್ಲಿ ಇದು ರೂಪುಗೊಂಡಿದೆ. ಕೇವಲ ಕೆಲವೇ ಲಕ್ಷ ವರ್ಷಗಳ ಅವಧಿಯಲ್ಲಿ ಈ ನದೀ ಪಾತ್ರ 6,250' ಗಳಷ್ಟು ಆಳಕ್ಕೆ ಇಳಿದುಹೋಗಿದೆ. 1,000' ಗಳಷ್ಟು ಎತ್ತರದ ಲಂಬ ಬದಿಗಳು ಇಲ್ಲಿ ತೀರ ಸಾಮಾನ್ಯ. ಕೊಲರಾಡೋದ ಮಹಾ ಕೊರಕಲು ಎಂದೇ ಇದನ್ನು ಕರೆಯುವುದುಂಟು. ಸುಮಾರು 200 ಮೈಲಿಗಳ ಉದ್ದದ ಈ ಕೊರಕಲಿನಲ್ಲಿ ಭೂವಿಜ್ಞಾನಿಗಳು ಪೂರ್ವ ಕೇಂಬ್ರಿಯನ್ ಕಲ್ಪದಿಂದ ಇಯೊಸೀನ್ ಕಲ್ಪದವರೆಗಿನ, ಸುಮಾರು 600 ದಶಲಕ್ಷ ವರ್ಷಗಳ ಕಾಲದ, ಅಮೆರಿಕನ್ ಭೂಚರಿತ್ರೆಯನ್ನು ಓದಲು ಸಮರ್ಥರಾಗಿದ್ದಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೊರಕಲು&oldid=892072" ಇಂದ ಪಡೆಯಲ್ಪಟ್ಟಿದೆ