ಕೊಡೆಕಲ್ಲು ಬೆಟ್ಟ
ಕೊಡೆಕಲ್ಲು ಬೆಟ್ಟ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಣಸಿಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಬರುವ ಬಾಳೆ ಗುಡ್ಡ ಎಂಬ ಬೆಟ್ಟದಲ್ಲಿ ಈ ಕಲ್ಲು ಕಾಣಸಿಗುತ್ತದೆ. ಕೊಡೆಕಲ್ಲಿಗೆ ಚಾರ್ಮಾಡಿ ಘಾಟಿಯಲ್ಲಿ ಸಿಗುವ ಬಿದುರು ತಳ ಎಂಬ ಊರಿನಿಂದ ಎರಡು ಕಿಲೋಮೀಟರ್ ಸಾಗಿದರೆ ಕೊಡೆಕಲ್ಲು ತಲುಪಬಹುದು.
ಪರಿಚಯ
[ಬದಲಾಯಿಸಿ]ಈ ಕಲ್ಲು ಕೊಡೆ( ಛತ್ರಿ )ಯ ಆಕಾರದಲ್ಲಿರುವುದರಿಂದ ಇದಕ್ಕೆ ಕೊಡೆಕಲ್ಲು ಎಂಬ ಹೆಸರು ಬಂತು. ಇದು ದೂರದಿಂದ ನೋಡಲು ಛತ್ರಿಯ ಆಕಾರದಲ್ಲಿದ್ದು, ತನ್ನ ಪಾದದ ಕೆಳಗೆ ಐವತ್ತರಿಂದ ನೂರು ಜನ ವಿಶ್ರಾಂತಿ ಪಡೆಯಬಹುದಾದಷ್ಟು ಸ್ಥಳಾವಕಾಶವಿದೆ. ಇದು ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿದ್ದು, ಈ ಬೆಟ್ಟದ ಸುತ್ತ ದೊಡ್ಡ ಪ್ರಪಾತಗಳಿದೆ. ಈ ಬೆಟ್ಟದ ಮೇಲೆ 25-30 ಅಡಿಗಳಷ್ಟು ಬೃಹತಾಕಾರದ ಕೊಡೆಕಲ್ಲನ್ನು ಕಾಣಬಹುದಾಗಿದೆ. ಇದು ವಿಶ್ರಾಂತಿ ಪಡೆಯಲು ಬಹಳ ಅಚ್ಚುಕಟ್ಟಿನ ಸ್ಥಳವಾಗಿದೆ. ಅಲ್ಲೇ ಪಕ್ಕದಲ್ಲಿ ನೀರಿನ ವ್ಯವಸ್ಥೆ ಕೂಡ ಇದ್ದು, ಹಿಂದೆ ಬೇಟೆ ಆಡಲು ಬರುತ್ತಿದ್ದವರು ಇಲ್ಲಿ ಒಂದೆರಡು ದಿನ ಇದ್ದು ವಿಶ್ರಾಂತಿ ಪಡೆದು ಇಲ್ಲಿಂದ ತೆರಳುತ್ತಿದ್ದರು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಹಳ್ಳಿಯ ಜನರು ಕಾಡಿನಲ್ಲಿ ಸಿಗುವ ಸೀಗೆ, ರಾಮಪತ್ರೆ, ಮುರುಗನ ಹುಳಿ ಮುಂತಾದ ಕಾಡು ಪದಾರ್ಥಗಳನ್ನು ಇಲ್ಲಿ ತಂದು ಒಣಗಿಸಿ ಕೊಂಡೊಯ್ಯುತ್ತಿದ್ದರು.
ಸ್ಥಳಗಳು
[ಬದಲಾಯಿಸಿ]ಕೊಡೆಕಲ್ಲು ಎತ್ತರದ ಪ್ರದೇಶದಲ್ಲಿದ್ದು ಅಲ್ಲಿಂದ ನೋಡಿದರೆ ಸುಪ್ರಸಿದ್ಧ ಸ್ಥಳಗಳಾದ ಬಲ್ಲಾಳರಾಯನ ದುರ್ಗ, ಹುಲಿಕಲ್ಲು ಗುಡ್ಡ, ಬೆಳ್ತಂಗಡಿ, ಉಜಿರೆ, ಗಡಾಯಿಕಲ್ಲು ಕಾಣಸಿಗುತ್ತದೆ. ಕೊಡೆಕಲ್ಲು ಚಾರ್ಮಾಡಿ ಘಾಟಿಯ ಸಮೀಪವಿರುವುದರಿಂದ ಇಲ್ಲಿ ಅಣ್ಣಪ್ಪ ಸ್ವಾಮಿಯ ದೇವಸ್ಥಾನವಿದೆ. ಮಲಯ ಮಾರುತ ಗೆಸ್ಟ್ ಹೌಸ್, ಆಲೇಖಾನ್ ಫಾಲ್ಸ್ ಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು.
ಪ್ರಾಣಿಗಳು
[ಬದಲಾಯಿಸಿ]ಕೊಡೆಕಲ್ಲು ದಟ್ಟ ಅರಣ್ಯದ ನಡುವೆ ಇರುವುದರಿಂದ ಇಲ್ಲಿ ಅನೇಕ ಜಾತಿಯ ಪ್ರಾಣಿಗಳು, ಸರಿಸೃಪಗಳು, ಕೀಟಗಳು ಕಾಣಸಿಗುತ್ತದೆ. ಆನೆ, ಹುಲಿ, ಕರಡಿ, ಕಾಡುಕುರಿ, ಕಾಡುಕೋಣ, ಜಿಂಕೆ, ಹೆಬ್ಬಾವು, ಕಾಳಿಂಗಸರ್ಪ, ನಾಗರಹಾವು, ಸಿಂಗಳಿಕ ಮುಂತಾದ ಪ್ರಾಣಿಗಳು ಇಲ್ಲಿ ಹೇರಳವಾಗಿ ಕಂಡುಬರುತ್ತವೆ.
ಹವಾಮಾನ
[ಬದಲಾಯಿಸಿ]ಮಳೆಗಾಲದಲ್ಲಿ ಸದಾಕಾಲ ಮೋಡಗಳಿಂದ ಕೊಡೆಕಲ್ಲು ಮುಚ್ಚಿಕೊಂಡಿರುತ್ತದೆ. ಮಳೆಗಾಲದಲ್ಲಿ ಕೊಡೆಕಲ್ಲಿಗೆ ಹೋಗಲು ಬಹಳ ಕಷ್ಟ. ಏಕೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುತ್ತದೆ. ಅಲ್ಲಿ ಜಿಗಣೆ (ಇಂಬಳ) ಹೇರಳವಾಗಿರುತ್ತದೆ ಹಾಗೂ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಎಲ್ಲಾ ಕಡೆಯೂ ಜಾರುತ್ತದೆ.
ಹಳ್ಳಿಗಳು
[ಬದಲಾಯಿಸಿ]ಕೋಡೆಕಲ್ಲಿನ ಸಮೀಪ ಸಣ್ಣ ಪುಟ್ಟ ಹಳ್ಳಿಗಳನ್ನು ಕಾಣಬಹುದಾಗಿದೆ. ಕೋಡೆ ಕಲ್ಲಿನಿಂದ ಎರಡು ಕಿಲೋಮೀಟರ್ ಅಂತರದಲ್ಲಿರುವ ಬಿದಿರುತಳ, ಈ ಹಳ್ಳಿಯಲ್ಲಿ 6 ಮನೆಗಳಿದ್ದು ಹಳ್ಳಿಯಲ್ಲಿ ನೀರು, ಕರೆಂಟು, ನೆಟ್ವರ್ಕ್, ಟಿವಿ, ರಸ್ತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಸೋಲಾರ್ ಬೆಳಕಿನಲ್ಲಿ ಜೀವನ ಸಾಗಿಸುವ ಇವರು ಪ್ರಕೃತಿಯಲ್ಲಿ ಸಿಗುವ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ಹೆಚ್ಚಾಗಿ ಕಾಡನ್ನೇ ಅವಲಂಬಿಸಿರುವ ಇವರು ಭತ್ತ, ಕಾಫಿ, ಏಲಕ್ಕಿ, ಮೆಣಸನ್ನು ಬೆಳೆಯುತ್ತಾರೆ.
ಆಲೇಖಾನ್ ಹೊರಟ್ಟಿ
[ಬದಲಾಯಿಸಿ]ಇದು ಕೊಡೆಕಲ್ಲಿನಿಂದ ಐದು ಆರು ಗುಡ್ಡಗಳನ್ನು ದಾಟಿದರೆ ಈ ಹಳ್ಳಿ ಸಿಗುತ್ತದೆ. ಇಲ್ಲಿ 36 ಮನೆಗಳಿದ್ದು ಗೌಡ ಹಾಗೂ ಮಲೆಕುಡಿಯ ಎಂಬ ಎರಡು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿ ಭತ್ತ, ಏಲಕ್ಕಿ, ಕಾಫಿ, ಬೆಳೆಗಳನ್ನು ಬೆಳೆಯುತ್ತಾರೆ. ಈ ಹಳ್ಳಿಯಲ್ಲೂ ಕಾಡು ಪದಾರ್ಥಗಳು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸಿಕೊಂಡಿದೆ. ಹಳ್ಳಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಣಬಹುದಾದ ಅನೇಕ ಸಂಸ್ಕೃತಿಗಳು ಆಚರಣೆಗಳನ್ನು ಇಲ್ಲಿ ಪಾಲಿಸುತ್ತಾರೆ. ಹಿಂದೆ ಈ ಹಳ್ಳಿಯ ಮುಖಾಂತರ ಟಿಪ್ಪುಸುಲ್ತಾನ್ ಬಲ್ಲಾಳ ರಾಯನ ದುರ್ಗಕ್ಕೆ ತೆರಳುತ್ತಿದ್ದನಂತೆ. ಇಂದಿಗೂ ಅಲ್ಲಿ ಕುದುರೆಯ ದಾರಿಯನ್ನು ಕಾಣಬಹುದಾಗಿದೆ.
ಮಾರ್ಗಸೂಚಿ
[ಬದಲಾಯಿಸಿ]ಕೊಡೆಕಲ್ಲು ಚಿಕ್ಕಮಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿದೆ. ಚಿಕ್ಕಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರು ತಳ ರಸ್ತೆಯ ಮುಖಾಂತರ ತೆರಳಬಹುದು. ಮಂಗಳೂರಿನಿಂದ ಉಜಿರೆ, ಕಕ್ಕಿಂಜೆ ಮಾರ್ಗವಾಗಿ ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರು ತಳ ರಸ್ತೆಯಿಂದ ಕೊಡೆಕಲ್ಲಿಗೆ ತೆರಳಬಹುದು. ಹಾಗೂ ಹೊರನಾಡಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಮುಖಾಂತರ ಕೋಡೆಕಲ್ಲಿಗೆ ತೆರಳಬಹುದು.
ಸ್ವಚ್ಛತೆ
[ಬದಲಾಯಿಸಿ]ಪ್ರವಾಸಿಗರು, ಚಾರಣಿಗರು ಸ್ಥಳಕ್ಕೆ ಹೆಚ್ಚು ಭೇಟಿ ಕೊಡುತ್ತಾರೆ. ಅಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ಏಕೆಂದರೆ ಇಲ್ಲಿ ಅನೇಕ ವನ್ಯ ಜೀವಿಗಳು ಇರುವುದರಿಂದ ಪ್ಲಾಸ್ಟಿಕ್ ತಿಂದು ಅದರ ಪ್ರಾಣಕ್ಕೆ ಹಾನಿ ಆಗುತ್ತದೆ. ಈ ಕುರಿತು ಅರಣ್ಯ ಇಲಾಖೆಯವರು ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.