ಕೊಡಗು(ಪತ್ರಿಕೆ)

ವಿಕಿಪೀಡಿಯ ಇಂದ
Jump to navigation Jump to search

ಕೊಡಗು- ಕೊಡಗಿನಲ್ಲಿ ಪ್ರಾರಂಭವಾದ ಒಂದು ಪತ್ರಿಕೆ. 1921ರ ಜೂನ್ 2ರಂದು ಇದರ ಪ್ರಥಮ ಸಂಚಿಕೆ ಮಡಿಕೇರಿಯಲ್ಲಿ ಪ್ರಕಟವಾಯಿತು. ಮುದ್ರಣವಾಗುತ್ತಿದ್ದದ್ದು ಮೈಸೂರಿನಲ್ಲಿ, ಪ್ರಥಮ ಸಂಪಾದಕರು ಕೊಡಗಿನ ಗಾಂಧಿ ಎಂದು ಪ್ರಖ್ಯಾತರಾಗಿದ್ದ ಪದ್ಯಂಡ ಬೆಳ್ಯಪ್ಪ. ಕೊಡಗಿಗೆ ರೈಲು ಇಲ್ಲವೆ ಬಸ್ ಸೌಕರ್ಯವಿರಲಿಲ್ಲ ಹೊರ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ಅದನ್ನು ತಿಳಿಯಲು ಆಸಕ್ತಿಯ ಇಲ್ಲದಿದ್ದಂತಹ ಪರಿಸ್ಥಿತಿ, ಕೊಡಗಿನಲ್ಲಿ ಜನಜಾಗ್ರತಿ ಮೂಡಿಸುವ ದೃಷ್ಟಿಯಿಂದ ವಾರ ಪತ್ರಿಕೆಯನ್ನು ನಡೆಸಬೇಕೆಂದು 1920ರಲ್ಲಿ ಕೊಡಗಿನ ಕೆಲವು ಹಿರಿಯರ ನಿರ್ಧರಿಸಿದರು. ಪಾಲು ಹಣ ಸಂಗ್ರಹಿಸಿ `ಕೊಡಗು ಕಂಪೆನಿ ಸ್ಥಾಪಿಸಿದರು. ಸಂಸ್ಥೆಯ ಪ್ರಕಟಣೆ 'ಕೊಡಗು.

ದೇಶಕ್ಕೆ ಸಂಬಂಧಿಸುವ ರಾಜಕೀಯ, ಆರ್ಥಿಕ ಸಾಮಾಜಿಕ ವಿಷಯಗಳನ್ನು ಚರ್ಚಿಸಿ, ಜನತೆಗೆ ತಿಳಿವಳಿಕೆ ನೀಡುವುದು.....ರಾಜಕೀಯ ವಿಚಾರದಲ್ಲಿ ಭಾರತ ದೇಶದ ಬೇರೆ ಬೇರೆ ಭಾಗಗಳಿಗೆ ಸಿಕ್ಕುವಂಥಾ ಆಡಳಿತ ತಿದ್ದುಪಾಟು, ಸುಧಾರಣೆಗಳು ನಮಗೆ ದೊರೆಯುವಂತೆಯೂ ಸಿಕ್ಕಿದ ನಂತರ ನ್ಯಾಯ ವಿಧಾಯಕ ಸಭೆಯ ಕೆಲಸಗಳು ಚೆನ್ನಾಗಿ ನಡೆಯುವುದಕ್ಕೆ ಸಹಾಯ ಮಾಡುವುದು ಪತ್ರಿಕೆಯ ಉದ್ದೇಶವೆಂದು ಮೊದಲ ಸಂಚಿಕೆಯಲ್ಲಿ ಸ್ಪಷ್ಟೀಕರಣ ನೀಡಲಾಗಿದೆ. ಮೂರು ವರ್ಷ ಕಾಲ ಪತ್ರಿಕೆ ಮೈಸೂರಿನಲ್ಲೇ ಪ್ರಕಟವಾಗುತ್ತಿತ್ತು. ಆಮೇಲೆ ಮಡಿಕೇರಿಯಲ್ಲಿ ಅವರದೇ ಮುದ್ರಣಾಲಯ ಪ್ರಾರಂಭವಾಗಿ, ಪತ್ರಿಕೆ ಮಡಿಕೇರಿಯಿಂದಲೇ ಪ್ರಕಟವಾಗತೊಡಗಿತು. 1971ರಲ್ಲಿ ಈ ಪತ್ರಿಕೆಗೆ ಐವತ್ತು ವರ್ಷಗಳು ತುಂಬಿತು.

ತನ್ನ ಜೀವನದ ಈ ದೀರ್ಘ ಅವಧಿಯಲ್ಲಿ ಪತ್ರಿಕೆ ಹಲವು ಎಡರು ತೊಡರುಗಳನ್ನು ಕಂಡಿದೆ. ಅಚ್ಚ ರಾಷ್ಟ್ರೀಯತಾವಾದಿಯಾದ ಪತ್ರಿಕೆ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸರ್ಕಾರದ ಸುಗ್ರೀವಾಜ್ಞೆಗಳನ್ನು ಎದುರಿಸಬೇಕಾಯಿತು. ಪತ್ರಿಕಾ ಕಚೇರಿ ಹಲವು ಬಾರಿ ಪೋಲೀಸ್ ಶೋಧನೆಗೆ ಒಳಗಾಯಿತು. ಪತ್ರಿಕೆಯ ಮೇಲೆ ದಂಡ ವಿಧಿಸಿದ್ದು ಎರಡು ಸಾರಿ. ಸಂಪಾದಕರಾದ ಬೆಳ್ಯಪ್ಪನವರನ್ನೂ ಅವರ ಅನಂತರ ಸಂಪಾದಕರಾದ ಬಿ.ಡಿ.ಗಣಪತಿಯವರನ್ನೂ 1942ರಲ್ಲಿ ಸರ್ಕಾರ ದಸ್ತಗಿರಿ ಮಾಡಿ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಂಡಿತು. ಆದರೂ ಪತ್ರಿಕೆ ನಿಲ್ಲಲಿಲ್ಲ. ಸ್ವಾತಂತ್ರ್ಯಾನಂತರವೂ ತನ್ನ ಸತ್ಯನಿಷ್ಠೆಯ ಕಾರಣ ಅದು ಅನೇಕ ಎಡರುತೊಡರುಗಳ ದಾರಿಯಲ್ಲೇ ಮುನ್ನಡೆದಿದೆ.

ಈ ಪತ್ರಿಕೆ ಕೊಡಗಿನಲ್ಲಿ ಕನ್ನಡದ ಸ್ಥಾನಮಾನಗಳಿಗಾಗಿಯೂ ಅದರ ಪ್ರಚಾರಕ್ಕಾಗಿಯೂ ಬಹಳ ಸಹಾಯ ಮಾಡಿದೆ. 1921ರಿಂದ ಇದುವರೆಗಿನ ಅದರ ಸಂಚಿಕೆಗಳನ್ನು ಪರಿಶೀಲಿಸಿದಾಗ ಕೊಡಗಿನಲ್ಲಿ ಕನ್ನಡ ಭಾಷೆಯ ಬೆಳೆವಣಿಗೆ ಯಾವ ರೀತಿ ಆಗಿದೆಯೆಂಬುದರ ಸ್ಪಷ್ಟಚಿತ್ರ ಸಿಗುತ್ತದೆ. ಪತ್ರಿಕೆ ತರುಣ ಬರೆಹಗಾರರಿಗೆ ಪ್ರೋತ್ಸಾಹ ನೀಡಿ ಅನೇಕ ಲೇಖಕರನ್ನು ರೂಪಿಸಿದ ಈ ಪತ್ರಿಕೆ 1977ರಲ್ಲಿ ಪ್ರಕಟಣೆ ನಿಲ್ಲಿಸಿತು.


Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: