ಕೈಗಾರಿಕೆಗಳ ರಕ್ಷಣೆ
ಒಂದು ದೇಶದ ಕೈಗಾರಿಕೆಗಳು ವಿದೇಶಿ ಸ್ಪರ್ಧೆಯನ್ನೆದುರಿಸಬೇಕಾದ ಪರಿಸ್ಥಿತಿಯಿಂದ ಅವನ್ನು ಪಾರುಮಾಡಿ, ಆ ಪರಿಸ್ಥಿತಿಯಲ್ಲಿ ಅವು ಗಳಿಸಬಹುದಾಗಿದ್ದದ್ದಕ್ಕಿಂತ ಹೆಚ್ಚು ಗಳಿಸುವುದು ಸಾಧ್ಯವಾಗುವಂತೆ ಮಾಡಲು ಸರ್ಕಾರ ಕೈಗೊಳ್ಳುವ ಕಾರ್ಯನೀತಿ (ಪ್ರೊಟೆಕ್ಷನ್ ಆಫ್ ಇಂಡಸ್ಟ್ರೀಸ್). ಆಮದುಗಳೊಂದಿಗೆ ಸ್ಪರ್ಧಿಸುತ್ತಿರುವ, ವಾಸ್ತವವಾಗಿ ಸರಕನ್ನು ರಫ್ತು ಮಾಡುತ್ತಿರುವ, ಭವಿಷ್ಯದಲ್ಲಿ ಸರಕನ್ನು ರಫ್ತು ಮಾಡಬಹುದಾದ ಕೈಗಾರಿಕೆಗಳಿಗೆ ನೆರವು ನೀಡುವ ಸರ್ಕಾರದ ಎಲ್ಲ ಕಾರ್ಯನೀತಿಗಳನ್ನೂ ಒಟ್ಟಿನಲ್ಲಿ ರಕ್ಷಣ ವ್ಯವಸ್ಥೆಯೆಂದು ಪರಿಗಣಿಸುವ ರೂಢಿಯುಂಟು.[೧]
ರಕ್ಷಣೋಪಾಯಗಳು ಮುಖ್ಯವಾಗಿ ನಾಲ್ಕು
[ಬದಲಾಯಿಸಿ]1 ದೇಶೀಯ ಉತ್ಪಾದಕರಿಗೆ ಸಹಾಯಧನ, 2 ಆಮದುಗಳ ಮೇಲೆ ತೆರಿಗೆ, 3 ಆಮದುಗಳ ಪರಿಮಾಣಾತ್ಮಕ ನಿಯಂತ್ರಣ ಮತ್ತು 4 ಸರ್ಕಾರಿ ವ್ಯಾಪಾರ. ಆಮದುಗಳ ಮೇಲೆ ತೆರಿಗೆ ವಿಧಿಸುವುದು ಮತ್ತು ಅದರಿಂದ ಬಂದ ಮೊಬಲಗನ್ನು ದೇಶೀಯ ಕೈಗಾರಿಕೆಗಳಿಗೆ ಸಹಾಯಧನದ ರೂಪದಲ್ಲಿ ನೀಡುವುದು ಐತಿಹಾಸಿಕವಾಗಿ ಮುಖ್ಯವಾದ ಉಪಾಯ. ಆಮದು ಸುಂಕಗಳನ್ನು ಅವುಗಳ ಉದ್ದೇಶ ಮತ್ತು ಸ್ವರೂಪಗಳಿಗೆ ಅನುಗುಣವಾಗಿ ವಿಂಗಡಿಸಬಹುದು. ಸುಂಕದಿಂದ ಸಾಮಾನ್ಯವಾಗಿ ಸರ್ಕಾರಕ್ಕೆ ವರಮಾನ ಪ್ರಾಪ್ತವಾಗುತ್ತದೆ; ಸ್ವದೇಶಿ ಉತ್ಪಾದನೆಗೆ ರಕ್ಷಣೆ ಲಭ್ಯವಾಗುತ್ತದೆ, ರಕ್ಷಿತ ಉತ್ಪನ್ನವನ್ನು ಹೆಚ್ಚು ಬಳಸದಂತೆ ಅದು ನಿರುತ್ತೇಜಿಸುತ್ತದೆ; ಆಮದನ್ನು ಕಡಿಮೆಗೊಳಿಸುತ್ತದೆ. ಇಷ್ಟೆಲ್ಲ ಸಾಧ್ಯವಾದರೂ ಮೂಲತಃ ವರಮಾನ ಪಡೆಯುವ ಉದ್ದೇಶದಿಂದ, ಒಂದು ಪದಾರ್ಥದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಇಲ್ಲವೇ ವಿದೇಶಿ ವಿನಿಮಯದ ಪಾವತಿ ಶಿಲ್ಕಿನ ಪ್ರತಿಕೂಲ ಸ್ಥಿತಿಯನ್ನು ನಿವಾರಿಸುವ ಉದ್ದೇಶದಿಂದ ಸುಂಕವನ್ನು ವಿಧಿಸಬಹುದು. ಒಟ್ಟಿನಲ್ಲಿ ಸ್ಥೂಲವಾಗಿ ರಕ್ಷಣೆ ಅಥವಾ ವರಮಾನಗಳಿಕೆಯ ಉದ್ದೇಶದಿಂದ ಸುಂಕ ವಿಧಿಸುವುದು ವಾಡಿಕೆ. ವಾಸ್ತವವಾಗಿ ಸುಂಕಗಳ ಉದ್ದೇಶಗಳೂ ಅವುಗಳ ನಿಜಪರಿಣಾಮಗಳೂ ಪರಸ್ಪರ ಬೆರೆತುಕೊಂಡು, ಅವುಗಳ ಸ್ಪಷ್ಟವಾದ ವಿಶ್ಲೇಷಣೆ ಕಠಿಣವಾಗುತ್ತದೆ.[೨]
ರಕ್ಷಣನೀತಿಯ ವಾದ-ಪ್ರತಿವಾದಗಳು
[ಬದಲಾಯಿಸಿ]ರಕ್ಷಣನೀತಿಯ ಪರವಾಗಿಯೂ ವಿರೋಧವಾಗಿಯೂ ಇತ್ತೀಚಿನ ಇತಿಹಾಸದ ಉದ್ದಕ್ಕೂ ತೀವ್ರ ವಾದ-ಪ್ರತಿವಾದಗಳು ಬೆಳೆದಿವೆ. ಯಾವ ಕೈಗಾರಿಕೆಗಳಿಗೆ ರಕ್ಷಣೆ ನೀಡಲಾಗುತ್ತದೆಯೋ ಆ ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ಪ್ರೋತ್ಸಾಹ ಲಭ್ಯವಾಗುತ್ತದೆ. ಅದರಿಂದ ಉದ್ಯೋಗ ವೃದ್ಧಿಗೊಳ್ಳುತ್ತದೆ-ಎಂಬುದು ಇದರ ಪರವಾದ ಒಂದು ವಾದ. ನಿರುಪಾಧಿಕ ವ್ಯಾಪಾರದ ಸಮರ್ಥಕರು ಈ ವಾದವನ್ನೊಪ್ಪುವುದಿಲ್ಲ. ರಕ್ಷಿತ ಕೈಗಾರಿಕೆಗಳಲ್ಲಿ ಉದ್ಯೋಗ ಹೆಚ್ಚುವುದಾದರೂ ಬೇರೆ ಕ್ಷೇತ್ರಗಳಿಂದ ಉದ್ಯೋಗಿಗಳು ಇಲ್ಲಿಗೆ ಹರಿದುಬರುವುದರಿಂದ ಇತರ ಕ್ಷೇತ್ರಗಳಲ್ಲಿ ಉದ್ಯೋಗದ ಮಟ್ಟ ಇಳಿಯುತ್ತದೆ. ಆದ್ದರಿಂದ ದೇಶದಲ್ಲಿ ಒಟ್ಟು ಉದ್ಯೋಗಮಟ್ಟ ಅಧಿಕವಾಗದು. ಅಧಿಕ ಉತ್ಪಾದಕತೆಯುಳ್ಳ ಕೈಗಾರಿಕೆಗಳಿಂದ ಕಡಿಮೆ ಉತ್ಪಾದಕತೆಯ ಕೈಗಾರಿಕೆಗೆ ಉದ್ಯೋಗ ಹರಿಯುವುದರಿಂದ ಒಟ್ಟಿನಲ್ಲಿ ದೇಶದ ಆರ್ಥಿಕತೆಗೆ ನಷ್ಟವಾಗುತ್ತದೆ-ಎಂದು ಇವರು ವಾದಿಸುತ್ತಾರೆ.
ವರಮಾನದ ಪುನರ್ವಿಂಗಡಣೆ
[ಬದಲಾಯಿಸಿ]ರಕ್ಷಣೆಯ ಪರವಾದ ಇನ್ನೊಂದು ವಾದವೆಂದರೆ ವರಮಾನದ ಪುನರ್ವಿಂಗಡಣೆಯನ್ನು ಕುರಿತದ್ದು. ಒಂದು ಗೊತ್ತಾದ ದಿಕ್ಕಿನಲ್ಲಿ ಜನರ ವಾಸ್ತವ ವರಮಾನದ ಹಂಚಿಕೆಯಾಗುವುದಕ್ಕೆ ಇದರಿಂದ ಸಹಾಯವಾಗುತ್ತದೆ. ರಕ್ಷಿತ ಕೈಗಾರಿಕೆಯಲ್ಲಿ ನಿರತರಾಗಿರುವವರ ವರಮಾನ ಉತ್ತಮಗೊಳ್ಳುತ್ತದೆ. ಆದರೆ ಇನ್ನು ಕೆಲವರಿಗೆ ತೊಂದರೆಯೂ ಆಗಬಹುದು. ರಕ್ಷಿತ ಕೈಗಾರಿಕೆಗಳ ಪದಾರ್ಥಗಳ ಬಳಕೆದಾರರಿಗೆ ಇದರಿಂದ ನಷ್ಟವಾಗುತ್ತದೆ. ಅವರು ಅವಕ್ಕೆ ಹೆಚ್ಚು ಬೆಲೆ ಕೊಡಬೇಕು. ಕೈಗಾರಿಕೆಗಳಿಗೆ ಸರ್ಕಾರ ಸಹಾಯಧನ ನೀಡಿ ಅವುಗಳ ಪದಾರ್ಥಗಳ ಬೆಲೆ ಏರದಂತೆ ಮಾಡಬಹುದು. ಆದರೆ ಸರ್ಕಾರ ಸಹಾಯಧನ ನೀಡುವುದು ತೆರಿಗೆದಾರರ ಹಣದಿಂದಲೇ ಆದ್ದರಿಂದ ಅಂತಿಮವಾಗಿ ಸಮಾಜ ಈ ನಷ್ಟ ಭರಿಸಬೇಕಾಗುತ್ತದೆ. ಕಾರ್ಮಿಕರಿಗಾಗಿ ಮತ್ತು ಕಚ್ಚಾಸಾಮಗ್ರಿಗಳಿಗಾಗಿ ರಕ್ಷಿತ ಕೈಗಾರಿಕೆಯೊಂದಿಗೆ ಸ್ಪರ್ಧಿಸುವ ಇತರ ಕೈಗಾರಿಕೆಗಳಿಗೂ ತೊಂದರೆಯಾಗುತ್ತದೆ. ಕಾರ್ಮಿಕರನ್ನೂ ಕಚ್ಚಾ ಸಾಮಗ್ರಿಗಳನ್ನೂ ತಮ್ಮೆಡೆಗೆ ಸೆಳೆದುಕೊಳ್ಳಲು ಅವು ಹೆಚ್ಚು ವೆಚ್ಚ ಮಾಡಬೇಕಾಗಿ ಬರಬಹುದು. ಹೀಗೆ ಒಂದು ಕೈಗಾರಿಕೆಗೆ ರಕ್ಷಣೆ ನೀಡುವುದರಿಂದ ದೇಶದ ಅರ್ಥವ್ಯವಸ್ಥೆಯ ವಿವಿಧ ಹಿತಗಳ ನಡುವೆ ಘರ್ಷಣೆ ಸಂಭವಿಸಬಹುದು. ಇದು ಪರಸ್ಪರ ವಿರುದ್ಧವಾದ ರಾಜಕೀಯ ಒತ್ತಡಗಳಿಗೆ ಕಾರಣವಾಗಬಹುದು. ಆದರೆ ದೇಶದ ಬಹುಸಂಖ್ಯಾತರು ಕೃಷಿಯಲ್ಲೇ ನಿರತರಾಗಿರುವಂಥ ದೇಶಗಳಲ್ಲಿ-ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿಯಿಂದ ಕೈಗಾರಿಕೆಗಳಿಗೆ ಜನರು ಚಲಿಸುವಂತೆ ಮಾಡಲು ಕೈಗಾರಿಕೆಗಳಿಗೆ ರಕ್ಷಣೆ, ಪ್ರೋತ್ಸಾಹ ಸೂಕ್ತವಾದದ್ದೆಂದು ಹೇಳಲಾಗಿದೆ.
ಶೈಶವಕೈಗಾರಿಕೆಯ ವಾದ
[ಬದಲಾಯಿಸಿ]ರಕ್ಷಣೆಯ ಪರವಾದ ಅತ್ಯಂತ ಹಳೆಯ ಮತ್ತು ಗೌರವಾನ್ವಿತ ವಾದವೆಂದರೆ ಶೈಶವಕೈಗಾರಿಕೆಯ ವಾದ. ಕಾಲಕ್ರಮದಲ್ಲಿ ಈ ವಾದ ಹೆಚ್ಚು ನವಿರಾಗಿ ಪರಿಣಮಿಸಿದೆ. ಕೆಲವು ಕೈಗಾರಿಕೆಗಳು ಆರಂಭದಶೆಯಲ್ಲಿ ಲಾಭಪ್ರದವಾಗಿರುವುದಿಲ್ಲ. ಅವುಗಳ ಉತ್ಪಾದನೆಯ ಗಾತ್ರ ಹೆಚ್ಚಿದಂತೆ ಉತ್ಪನ್ನ ಘಟಕದ ಉತ್ಪಾದನವೆಚ್ಚ ತಗ್ಗುತ್ತ ಸಾಗುತ್ತದೆ. ಅಂಥ ಕೈಗಾರಿಕೆಗಳ ಉತ್ಪಾದನವೆಚ್ಚ ಸಾಕಷ್ಟು ಕಡಿಮೆಯಾಗಿ ಆ ಕೈಗಾರಿಕೆಗಳು ಸ್ಪರ್ಧಾತ್ಮಕ ಘಟ್ಟ ಮುಟ್ಟುವವರೆಗೂ-ಅನ್ಯದೇಶಗಳ ದೈತ್ಯ ಕೈಗಾರಿಕೆಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸುವ ಬೆಲೆಗೆ ಸರಕನ್ನು ನೀಡುವ ಹಂತ ತಲಪುವವರೆಗೂ-ಅವಕ್ಕೆ ರಕ್ಷಣೆ ನೀಡಬೇಕು. ಆಂತರಿಕ ಆರ್ಥಿಕ ಉಳಿತಾಯ ಸಾಧನೆಗೆ ಇದು ಅವಶ್ಯ-ಎಂದು ವಾದಿಸಲಾಗಿದೆ. ಆದರೆ ಒಂದು ಉದ್ಯಮ ಭವಿಷ್ಯದಲ್ಲಿ ಮಿತವ್ಯಯದಲ್ಲಿ ಉತ್ಪಾದನ ಕಾರ್ಯದಲ್ಲಿ ತೊಡಗುವುದು ಸಾಧ್ಯವಾಗುವುದಾದರೆ, ಹಿಂದಿನ ನಷ್ಟವನ್ನೆಲ್ಲ ಅನಂತರದ ಲಾಭದಿಂದ ತೊಡೆಯಬಹುದೆಂಬ ಭರವಸೆ ಇರುವುದಾದರೆ, ಅದಕ್ಕೆ ರಕ್ಷಣೆಯೇಕೆ?-ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆರಂಭದ ವರ್ಷಗಳಲ್ಲಿ ಸಾಲ ಮಾಡಿ ಅನಂತರ ಅದನ್ನು ತೀರಿಸಬಹುದು. ಆದರೆ ಇಂಥ ಶಕ್ತಿಯಿಲ್ಲದ ಕೈಗಾರಿಕೆಗಳ ಆಂತರಿಕ ದೌರ್ಬಲ್ಯ ನಿವಾರಣೆಗಾಗಿ ರಕ್ಷಣೆ ಅಗತ್ಯವಾಗುತ್ತದೆ. ಅಲ್ಲದೆ ಒಂದು ಪದಾರ್ಥದ ಉತ್ಪಾದನೆಯಲ್ಲಿ ನಿರತವಾದ ಎಲ್ಲ ಉದ್ಯಮಗಳ ಒಟ್ಟು ಬೆಳೆವಣಿಗೆಗೆ ರಕ್ಷಣೆ ಅಗತ್ಯವಾಗುತ್ತದೆ.ಕೈಗಾರಿಕಾ ಕ್ಷೇತ್ರವನ್ನು ತಡವಾಗಿ ಪ್ರವೇಶಿಸುವ ಎಲ್ಲ ರಾಷ್ಟ್ರಗಳಿಗೂ ಶೈಶವ ಕೈಗಾರಿಕಾವಾದ ಅನುಕೂಲಕರವಾಗಿದೆ. ಆ ರಾಷ್ಟ್ರಗಳಲ್ಲಿ ಕೈಗಾರಿಕೆಗಳಿಗೆ ಭವ ಅನುಕೂಲ ವಿಶೇಷವಾಗಿರುತ್ತದೆಯಾದರೂ ಸ್ವಲ್ಪಕಾಲದವರೆಗೆ ವಿದೇಶಿ ಸ್ಪರ್ಧೆಯನ್ನು ತಡೆಹಿಡಿಯದಿದ್ದರೆ ಅವು ಫಲಪ್ರದವಾಗಿ ಬೆಳೆಯಲಾರವು. ಆದರೆ ಈ ವಾದಕ್ಕೆ ಎರಡು ಆಕ್ಷೇಪಣೆಗಳುಂಟು: ಒಮ್ಮೆ ಒಂದು ಕೈಗಾರಿಕೆ ಶೈಶವಸ್ಥಿತಿಯಲ್ಲಿದೆಯೆಂದು ಪರಿಗಣಿಸಿದರೆ ಅದು ಎಂದೆಂದೂ ಅದೇ ಸ್ಥಿತಿಯಲ್ಲೇ ಇರುತ್ತದೆ. ರಕ್ಷಣೆಯ ಮರೆಯಲ್ಲಿ ಕೆಲವು ಆಸಕ್ತ ಹಿತಗಳು ಮನೆ ಮಾಡಿಕೊಂಡು, ಮುಂದೆ ರಕ್ಷಣೆಯನ್ನು ತೆಗೆದುಹಾಕುವ ಕ್ರಮವನ್ನು ಪ್ರಬಲವಾಗಿ ವಿರೋಧಿಸುತ್ತವೆ. ರಕ್ಷಣೆಯ ನೀತಿಯನ್ನು ಒಮ್ಮೆ ಮಾನ್ಯಮಾಡಿದ್ದೇ ಆದರೆ ಅನೇಕ ಬಗೆಯ ಕೈಗಾರಿಕೆಗಳು ಅದಕ್ಕಾಗಿ ಬೇಡಿಕೆ ಮುಂದೊಡ್ಡುತ್ತವೆ. ಇದು ರಾಜಕೀಯವಾಗಿ ಅನೇಕ ಅನೈತಿಕ ವ್ಯಾಪಾರಗಳಿಗೆ ಎಡೆಕೊಡುವುದುಂಟು. ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯ.
ನೈಸರ್ಗಿಕ ಸಂಪತ್ತು
[ಬದಲಾಯಿಸಿ]ಒಂದು ದೇಶದ ನೈಸರ್ಗಿಕ ಸಂಪತ್ತು ಅನ್ಯದೇಶಗಳಿಗೆ ಹರಿದು ಹೋಗದ ಹಾಗೆ ಮಾಡಲು ಕೈಗಾರಿಕೆಗಳ ರಕ್ಷಣ ನೀತಿಯಿಂದ ಸಹಾಯವಾಗುತ್ತದೆ. ಕೃಷಿ ಉತ್ಪನ್ನ, ಕಲ್ಲಿದ್ದಲು, ಮ್ಯಾಂಗನೀಸ್, ಅಭ್ರಕ ಮುಂತಾದ ಸಾಮಗ್ರಿಗಳನ್ನು ರಫ್ತು ಮಾಡುವ ದೇಶಗಳೇ ಸ್ವತಃ ಅವನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅವಕ್ಕೆ ಉತ್ಪಾದನೆಯ ಲಾಭವೂ ದೊರಕುತ್ತವೆ. ನಿಸರ್ಗದ ಸಂಪನ್ಮೂಲಗಳು ಅಮೂಲ್ಯವಾದವು. ರಫ್ತಿಗಾಗಿ ಅವನ್ನು ಬರಿದು ಮಾಡುವುದು ತರವಲ್ಲ. ಈ ಕಾರಣಗಳಿಂದಾಗಿ ಸ್ವದೇಶದ ಕೈಗಾರಿಕೆಗಳ ಸ್ಥಾಪನೆ-ಬೆಳೆವಣಿಗೆಗಳಿಗೆ ಪ್ರೋತ್ಸಾಹ, ರಕ್ಷಣೆ ಅಗತ್ಯ.ಮತ್ತೆ ಕೆಲವು ಕೈಗಾರಿಕೆಗಳಿಗೆ ಒಂದು ದೇಶದಲ್ಲಿ ಅನುಕೂಲ ಪರಿಸ್ಥಿತಿ ಇಲ್ಲದಿದ್ದರೂ ಆ ದೇಶದ ಭದ್ರತೆಯ ದೃಷ್ಟಿಯಿಂದ ಅವಕ್ಕೆ ರಕ್ಷಣೆ ನೀಡುವುದು ಅನಿವಾರ್ಯವಾಗುತ್ತದೆ. ಅಗತ್ಯವಾದ ವಸ್ತುಗಳಿಗಾಗಿ ಅನ್ಯದೇಶಗಳನ್ನು ಅವಲಂಬಿಸುವುದು ತರವಲ್ಲ. ಯುದ್ಧಕಾಲದಲ್ಲಿ ವಿದೇಶಿ ವ್ಯಾಪಾರಕ್ಕೆ ತಡೆ ಒದಗಿದಾಗ ಆ ವಸ್ತುಗಳ ಅಭಾವ ಸಂಭವಿಸಿ ದೇಶಕ್ಕೆ ಅಪಾಯ ತಟ್ಟಬಹುದು. ರಾಷ್ಟ್ರಾಭಿಮಾನ ದೃಷ್ಟಿಯಿಂದಲೂ ಸ್ವದೇಶಿ ವಸ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದು ಅವಶ್ಯವೆಂದು ವಾದಿಸಲಾಗಿದೆ. ಆದರೆ ಇವೆಲ್ಲ ಆರ್ಥಿಕ ಕಾರಣಗಳೆನ್ನುವುದಕ್ಕಿಂತ ರಾಜಕೀಯ ಕಾರಣಗಳೆನ್ನುವುದು ಹೆಚ್ಚು ಸರಿ.
ದೇಶದ ಆರ್ಥಿಕ ಬೆಳೆವಣಿಗೆ
[ಬದಲಾಯಿಸಿ]ಒಂದು ದೇಶದ ಭದ್ರವಾದ ಆರ್ಥಿಕ ತಳಹದಿಯೇ ಅದರ ಬೆಳೆವಣಿಗೆಗೆ ಮುಖ್ಯವಾದ್ದು. ಮೂಲ ಕೈಗಾರಿಕೆಗಳೇ ಆ ತಳಹದಿ. ಅವಕ್ಕೆ ದೇಶದಲ್ಲಿ ಹೆಚ್ಚು ಅನುಕೂಲ ಇದ್ದಿರಲಾರದು. ಆದರೂ ಅವನ್ನು ಬೆಳೆಸುವುದು ಅವಶ್ಯವಾದ್ದರಿಂದ ಅವಕ್ಕೆ ರಕ್ಷಣೆ ನೀಡಬೇಕೆಂದು ವಾದಿಸಲಾಗಿದೆ.ರಕ್ಷಣೆಯ ನೀತಿಗೆ ವಿರೋಧವಾಗಿಯೂ ಅನೇಕ ವಾದಗಳಿವೆ. ಹಿಂದೆ ಹೇಳಿದಂತೆ ರಕ್ಷಣೆಯಿಂದ ಆಸಕ್ತ ಹಿತಗಳ ರಚನೆಯಾಗುತ್ತದೆ. ಒಮ್ಮೆ ರಕ್ಷಣೆ ಲಭ್ಯವಾದರೆ ಸಾಕು, ಅದು ತನ್ನ ಹಕ್ಕು ಎಂಬಂತೆ ಕೆಲವು ಕೈಗಾರಿಕೆಗಳು ಭಾವಿಸುತ್ತವೆ. ಅದನ್ನು ಅನಂತರ ತೆಗೆಯುವುದು ಕಷ್ಟ. ಒಮ್ಮೆ ಶೈಶವ ಸ್ಥಿತಿಯಲ್ಲಿದ್ದ ಕೈಗಾರಿಕೆಗಳು ಬೆಳೆದು ಕೊಬ್ಬಿ, ಒದೆಯಲಾರಂಭಿಸುವುದುಂಟು. ತಾವು ಬೆಳೆದಿರುವುದಾಗಿ ಒಪ್ಪಲು ಅವು ಸಿದ್ಧವಿರುವುದಿಲ್ಲ. ರಕ್ಷಣೆಯಿಂದ ಕೈಗಾರಿಕೆಗಳಿಗೆ ಸ್ಥೂಲಕಾಯ ಬಂದು ಅವು ಜಡವಾಗುವುದುಂಟು. ವಿದೇಶಿ ಸ್ಪರ್ಧೆ ಇಲ್ಲದ್ದರಿಂದ ದಕ್ಷತೆ ಪ್ರಗತಿಗಳಿಗೆ ಅವು ಆದ್ಯಗಮನ ಕೊಡುವುದಿಲ್ಲ. ಅನೇಕ ವೇಳೆ ರಕ್ಷಣೆಯೇ ಭ್ರಷ್ಟಾಚಾರಕ್ಕೆ ಮೂಲ. ಸರ್ಕಾರಗಳು ರಕ್ಷಣೆಯನ್ನು ತೆಗೆಯದಂತೆ ಕೈಗಾರಿಕೆಗಳ ಒಡೆಯರು ಅಧಿಕಾರಿಗಳಿಗೆ ಲಂಚ ಮತ್ತು ಇತರ ಪ್ರಲೋಭನಗಳನ್ನೊಡ್ಡುವುದುಂಟು. ರಕ್ಷಣೆಯಿಂದ ಸ್ಪರ್ಧೆಯ ನಿವಾರಣೆಯಾಗುವುದರಿಂದ ಏಕಸ್ವಾಮ್ಯಗಳು ಬೆಳೆಯುತ್ತವೆ. ದೇಶೀಯ ಕೈಗಾರಿಕೆಗಳು ಒಂದಾಗಿ ಮಾರುಕಟ್ಟೆಯ ಹಿಡಿತ ಹೊಂದಿ, ಅನುಭೋಗಿಗಳನ್ನು ಶೋಷಿಸಬಹುದು. ರಕ್ಷಣೆಯಿಂದ ಅಂತರರಾಷ್ಟ್ರೀಯವಾಗಿಯೂ ಕೆಡಕುಗಳು ಸಂಭವಿಸುವುದುಂಟು. ಒಂದು ದೇಶ ರಕ್ಷಣನೀತಿಯನ್ನನುಸರಿಸಿದಾಗ ಇತರ ದೇಶಗಳು ಪ್ರತೀಕಾರ ಕ್ರಮ ಕೈಗೊಳ್ಳಬಹುದು. ಇದು ಅಂತರರಾಷ್ಟ್ರೀಯ ವಿರಸಗಳಿಗೂ ಯುದ್ಧಗಳಿಗೂ ಮೂಲ. ಮುಕ್ತವ್ಯಾಪಾರದ ಪ್ರತಿಪಾದಕರು ರಕ್ಷಣನೀತಿಯನ್ನು ವಿರೋಧಿಸಲು ಇನ್ನೊಂದು ಪ್ರಬಲ ಕಾರಣವುಂಟು. ಸ್ಪರ್ಧೆಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ರಾಷ್ಟ್ರವೂ ತನಗೆ ಅತ್ಯಂತ ಅನುಕೂಲಕರವಾದ ಕೈಗಾರಿಕೆಗಳಲ್ಲಿ ತೊಡಗುವುದರಿಂದ ಶ್ರಮ ವಿಭಜನೆಯ ತತ್ತ್ವ ಅಂತರರಾಷ್ಟ್ರೀಯ ಮಟ್ಟಕ್ಕೂ ಅನ್ವಯವಾಗಿ, ಒಂದೊಂದು ರಾಷ್ಟ್ರವೂ ಕೆಲಕೆಲವು ಕೈಗಾರಿಕೆಗಳಲ್ಲಿ ವಿಶೇಷ ಪ್ರಾವೀಣ್ಯ ಗಳಿಸುವುದರಿಂದ ಪರಸ್ಪರಾವಲಂಬನೆಯೂ ತನ್ಮೂಲಕ ಅಂತರರಾಷ್ಟ್ರೀಯ ಸೌಹಾರ್ದವೂ ಸಾಧಿಸುವುವೆಂದೂ, ಸರ್ವತ್ರ ಲಾಭಕರವಾದ ವ್ಯವಸ್ಥೆ ಏರ್ಪಡುವುದೆಂದೂ ಅವರು ವಾದಿಸುತ್ತಾರೆ. ರಕ್ಷಣ ನೀತಿಯಿಂದ ಈ ಪ್ರವೃತ್ತಿಗೆ ತಡೆಯುಂಟಾಗುತ್ತದೆ. ಇಡೀ ವಿಶ್ವದ ಜೀವನಮಟ್ಟ ಸಹಜವಾಗಿ ಇರಬಹುದಾದ್ದಕ್ಕಿಂತ ಕಡಿಮೆಯಾಗುತ್ತದೆ. ಆದರೆ ಈ ವಾದ ಆದರ್ಶ ಜಗತ್ತಿನಲ್ಲಿ ಮಾತ್ರ ಸಾಧ್ಯ. ವಾಸ್ತವ ಜಗತ್ತಿನಲ್ಲಿ ಇದಕ್ಕೆ ಅನೇಕ ತಡೆಗಳಿವೆ. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು ಪ್ರಬಲ ರಾಷ್ಟ್ರಗಳ ಮರ್ಮಘಾತಕ ಸ್ಪರ್ಧೆಯಿಂದ ತಪ್ಪಿಸಿಕೊಂಡು ತಮ್ಮ ಕೈಗಾರಿಕೆಗಳ ಬೆಳೆವಣಿಗೆಗೆ ಪ್ರೋತ್ಸಾಹ ನೀಡಲು ರಕ್ಷಣನೀತಿ ಅನಿವಾರ್ಯವೆನಿಸುತ್ತದೆ.
ಇತಿಹಾಸ
[ಬದಲಾಯಿಸಿ]ಕೈಗಾರಿಕೆಯಲ್ಲಿ ಹಿಂದುಳಿದಿದ್ದ ರಾಷ್ಟ್ರಗಳು ಮುಂದುವರಿದಿದ್ದ ರಾಷ್ಟ್ರಗಳ ಸಮಕ್ಕೆ ಬರಲು ರಕ್ಷಣೆಯ ನೀತಿ ಅನುಸರಿಸಿದ ಪ್ರಸಂಗಗಳು ಇತಿಹಾಸದಲ್ಲಿ ಎಷ್ಟೋ ಇವೆ. 19ನೆಯ ಶತಮಾನದಲ್ಲಿ ಅಮೆರಿಕವೂ ಐರೋಪ್ಯ ರಾಷ್ಟ್ರಗಳೂ ಕೈಗಾರಿಕೆಯಲ್ಲಿ ಮುನ್ನಡೆದಿದ್ದ ಬ್ರಿಟನಿನ ವಿರುದ್ಧವಾಗಿ ರಕ್ಷಣನೀತಿ ಅನುಸರಿಸಿದ್ದವು. ಒಮ್ಮೆ ಮುಕ್ತ ವ್ಯಾಪಾರದ ಅಧ್ವರ್ಯುವಾಗಿದ್ದ ಬ್ರಿಟನ್ ಕೂಡ ಶೈಶವಕೈಗಾರಿಕೆಯ ವಾದವನ್ನು ಒಪ್ಪಿಕೊಂಡಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕಾಭಿವೃದ್ಧಿ ಯೋಜನೆಗಳಲ್ಲಿ ರಕ್ಷಣಾಕ್ರಮಗಳಿಗೆ ಮುಖ್ಯ ಸ್ಥಾನವುಂಟು. ಆರ್ಥಿಕ ಬೆಳೆವಣಿಗೆಯ ಅಂಗವಾಗಿ ಒಂದು ಕೈಗಾರಿಕೆಯನ್ನು ಸ್ಥಾಪಿಸಿದಾಗ ಅದರೊಂದಿಗೆ ಸ್ಪರ್ಧಿಸುವ ವಿದೇಶಿ ಕೈಗಾರಿಕಾ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಲಾಗುತ್ತದೆ. ದೇಶೀಯ ಉತ್ಪಾದಕರಿಗೆ ಒಳನಾಡಿನ ಮಾರುಕಟ್ಟೆಯ ಭರವಸೆ ಲಭ್ಯವಾಗುತ್ತದೆ. ಈ ಕ್ರಮ ಕೈಗೊಳ್ಳದಿದ್ದರೆ ಆ ಕ್ಷೇತ್ರದಲ್ಲಿ ಮಾಡಿದ ಬಂಡವಾಳ ವಿನಿಯೋಜನೆಯೆಲ್ಲ ವ್ಯರ್ಥವಾದಂತೆ. ರಕ್ಷಣೆಯ ಭರವಸೆ ಇಲ್ಲದಿದ್ದಾಗ ಬಂಡವಾಳ ಹೂಡುವವರು ಹೊಸ ಉದ್ಯಮ ಕ್ಷೇತ್ರಗಳಿಗೆ ಬರಲು ಅಧೈರ್ಯಪಡುವುದು ಸಹಜ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ.
ರಕ್ಷಣೆಯ ಕ್ರಮಗಳು
[ಬದಲಾಯಿಸಿ]ರಕ್ಷಣೆಯ ಕ್ರಮಗಳು ಎರಡು ಬಗೆ: ಒಂದು ಅಭಯ ಪ್ರದಾತ, ಇನ್ನೊಂದು ಅಭಿವೃದ್ಧಿಕಾರಕ. ಭಾರತದಲ್ಲಿ ಮೊದಮೊದಲು ಅನುಸರಿಸಲಾಗುತ್ತಿದ್ದದ್ದು ವಿವೇಚನಾತ್ಮಕ (ಡಿಸ್ಕ್ರಿಮಿನೇಟಿಂಗ್) ರಕ್ಷಣನೀತಿ. ಇದು ಅಭಯ ಪ್ರಧಾನಾತ್ಮಕವಾದ್ದು. ಸುಮಾರು ಕಾಲು ಶತಮಾನದ ಕಾಲ ಇದು ಜಾರಿಯಲ್ಲಿತ್ತು. ಭಾರತದಲ್ಲಿ ರಕ್ಷಣ ಸುಂಕ ನೀತಿ 1923ರಲ್ಲಿ ಪ್ರಾರಂಭವಾಯಿತು. ಆಗ ಅಂದಿನ ಸರ್ಕಾರ ವಿದೇಶೀಯರ ಸ್ಪರ್ಧೆಗೆ ವಿರುದ್ಧವಾಗಿ ಭಾರತದ ಉದ್ಯಮಗಳಿಗೆ ರಕ್ಷಣೆ ನೀಡಿ, ಅವುಗಳ ಅಭಿವೃದ್ಧಿಯನ್ನು ಬಲಪಡಿಸಲು ತತ್ತ್ವಶಃ ಒಪ್ಪಿಕೊಂಡಿತ್ತು. ಆಗಿಂದಾಗ್ಗೆ ರಚಿತವಾಗುತ್ತಿದ್ದ ಸುಂಕ ಮಂಡಳಿಯಿಂದ ರಕ್ಷಣ ಸುಂಕದ ನಿರ್ಧಾರವಾಗುತ್ತಿತ್ತು. ರಕ್ಷಣೆಗಾಗಿ ಬೇರೆಬೇರೆ ಉದ್ಯಮಗಳಿಂದ ಬಂದ ಪ್ರಾರ್ಥನೆಗಳನ್ನು ಈ ಮಂಡಳಿ ಪರಿಶೀಲಿಸುತ್ತಿತ್ತು. 1923 ರಿಂದ 1939ರ ವರೆಗೆ ಹದಿಮೂರು ಉದ್ಯಮಗಳು ರಕ್ಷಣೆ ಪಡೆದುವು. ಅವು ಕಬ್ಬಿಣ ಮತ್ತು ಉಕ್ಕು, ಹತ್ತಿ ಗಿರಣಿಗಳು, ಸಕ್ಕರೆ, ಕಾಗದ, ಬೆಂಕಿಕಡ್ಡಿ, ಉಪ್ಪು, ಬೃಹದ್ ರಾಸಾಯನಿಕಗಳು, ರೇಷ್ಮೆ ಕೈಗಾರಿಕೆ, ಮೆಗ್ನೀಶಿಯಂ ಕ್ಲೋರೈಡ್, ಪ್ಲೈವುಡ್, ಚಿನ್ನದ ರೇಕಿನ ಉದ್ಯಮ, ಗೋದಿ ಮತ್ತು ಅಕ್ಕಿ ಉದ್ಯಮಗಳು. ಬೆಂಕಿಕಡ್ಡಿ ಮತ್ತು ರೇಷ್ಮೆ ಕೈಗಾರಿಕೆಗಳನ್ನು ಬಿಟ್ಟು ಮಿಕ್ಕ ಉದ್ಯಮಗಳಿಗೆ ಎರಡನೆಯ ಮಹಾಯುದ್ಧವಾದ ಮೇಲೆ ರಕ್ಷಣೆಯನ್ನು ನಿಲ್ಲಿಸಲಾಯಿತು.ಯುದ್ಧಕಾಲದಲ್ಲಿ ಹೆಚ್ಚಿನ ಉದ್ಯಮಗಳಿಗೆ ರಕ್ಷಣೆಯನ್ನು ಕೊಡುವ ಪ್ರಶ್ನೆಯನ್ನು ಎತ್ತಿಕೊಳ್ಳಲಾಗಲಿಲ್ಲ; ಏಕೆಂದರೆ ಅವನ್ನು ನಿಯಂತ್ರಿಸಲಾಗಿತ್ತು. ಆದ್ದರಿಂದಲೇ ವಿದೇಶಿ ವಸ್ತುಗಳ ಜೊತೆಗೆ ಹೆಚ್ಚಿನ ಸ್ಪರ್ಧೆ ಇರಲಿಲ್ಲ. ಯುದ್ಧಾನಂತರ 1945ರಲ್ಲಿ ಸರ್ಕಾರ ಮಧ್ಯಂತರ ಸುಂಕ ಮಂಡಲಿಯನ್ನು ರಚಿಸಿತು. 1945ರಿಂದ ಮುಂದಣ ಐದು ವರ್ಷಗಳಲ್ಲಿ ಈ ಮಂಡಲಿ ನಲವತ್ತಕ್ಕೂ ಹೆಚ್ಚು ಉದ್ಯಮಗಳಿಂದ ಬಂದ ರಕ್ಷಣ ಬೇಡಿಕೆಗಳನ್ನು ಪರಿಶೀಲಿಸಿತು.
ಅಭಿವೃದ್ಧಿಕಾರಕ ರಕ್ಷಣೆಯ ನೀತಿ
[ಬದಲಾಯಿಸಿ]ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅಭಿವೃದ್ಧಿಕಾರಕ ರಕ್ಷಣೆಯ ನೀತಿ ಜಾರಿಗೆ ಬಂತು. 1950ರಲ್ಲಿ ನೇಮಕವಾದ, ಭಾರತದ ವಿತ್ತೀಯ ಆಯೋಗ ಈ ದೃಷ್ಟಿಯಿಂದ ವಿಚಾರಣೆ ನಡೆಸಿ ವರದಿ ನೀಡಿತು. ಸುಂಕವನ್ನು ವಿಧಿಸುವ ಅಧಿಕಾರ `ಸುಂಕ ಆಯೋಗ ಎಂಬ ಹೆಸರಿನಿಂದ ಕರೆಯಲಾಗುವ ಸ್ಥಿರವಾದ ಅಂಗವಾಗಿ ಉಳಿಯಬೇಕು ಎಂದು ಸಲಹೆ ಮಾಡಿತು. ಈ ಸಲಹೆಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಈ ಮಂಡಳಿಗೆ ಈಗ ಮುಂಬಯಿಯೇ ಕೇಂದ್ರ. ಇದು ಒಂದು ಸ್ಥಿರಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಆರ್ಥಿಕ ಬೆಳೆವಣಿಗೆಗೆ ಇಂದು ವಿತ್ತೀಯ ನೀತಿಯೂ ಒಂದು ಸಾಧನ. ಹೆಚ್ಚು ಬಂಡವಾಳದ ಹೂಡಿಕೆ, ಉದ್ಯೋಗ ವೃದ್ಧಿ, ವರಮಾನದ ಹೆಚ್ಚಳ, ವರಮಾನ ಮತ್ತು ಸಂಪತ್ತಿನ ಅಂತರದ ಇಳಿತಾಯ-ಇವು ಆರ್ಥಿಕ ಬೆಳವಣಿಗೆಯ ಮೂಲೋದ್ದೇಶಗಳು. ಈ ಉದ್ದೇಶಗಳ ಸಾಧನೆಯಲ್ಲಿ ರಕ್ಷಣನೀತಿಗೆ ಪ್ರಮುಖ ಸ್ಥಾನವುಂಟು. ಇಂದು ಇದು ನಾನಾ ರೂಪ ತಾಳಿದೆ. ಆಮದು ಸುಂಕ, ಆಮದಿನ ನಿಯಂತ್ರಣ, ಆಮದು ಹಸುಗೆಯ (ಕೋಟಾ) ನಿಷ್ಕರ್ಷೆ-ಇವು ಇಂದು ಅನುಸರಿಸಲಾಗುತ್ತಿರುವ ಕೆಲವು ವಿಧಾನಗಳು. ಆಮದು ಸುಂಕ ವಿಧಿಸುವುದರಿಂದ ಸರ್ಕಾರಕ್ಕೆ ವರಮಾನವೂ ಉಂಟು. ಆದರೆ ಆಮದು ಹಸುಗೆಯನ್ನು ನಿಗದಿ ಮಾಡಿದಾಗ ವರಮಾನಕ್ಕೆ ಅವಕಾಶವಿಲ್ಲ. ಸ್ವದೇಶದ ಕೈಗಾರಿಕೆಗಳ ಸರಕು ಉತ್ಪಾದನೆ ಮತ್ತು ರಫ್ತುಗಳಿಗೆ ಪ್ರೋತ್ಸಾಹದಾಯಕವಾದ ವಸ್ತುಗಳ ಆಮದುಗಳಿಗೆ ಅವಕಾಶ ನೀಡಿ, ಉಳಿದ ವಸ್ತುಗಳ-ಸ್ವದೇಶದಲ್ಲೇ ತಯಾರಿಸಬಹುದಾದ-ವಸ್ತುಗಳ ಆಮದುಗಳ ಮೇಲೆ ನಿರ್ಬಂಧ ಹೇರುವ ಕ್ರಮ ಭಾರತದಲ್ಲಿ ಜಾರಿಯಲ್ಲಿದೆ. ವಿದೇಶಿ ವಿನಿಮಯದ ಅಭಾವ ಸಮಸ್ಯೆಯ ಪರಿಹಾರಕ್ಕೂ ಇದು ಒಂದು ಮಾರ್ಗ. ಸ್ವದೇಶದ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಕ್ಷಣೆ ನೀಡುವ ಉದ್ದೇಶದಿಂದ ವಿದೇಶಿ ವ್ಯಾಪಾರವನ್ನು ಸರ್ಕಾರವೇ ವಹಿಸಿಕೊಳ್ಳಬಹುದು. ದೇಶದ ಆರ್ಥಿಕಾಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಾದ ಸರಕುಗಳನ್ನು ಆಮದು ಮಾಡುವ, ದೇಶೀಯ ಕೈಗಾರಿಕೆಗಳು ಉತ್ಪಾದಿಸಿದ ಸರಕುಗಳನ್ನು ರಫ್ತುಮಾಡುವ ಹೊಣೆ ಹೊತ್ತು ಅವಕ್ಕೆ ಬೇಡಿಕೆಯನ್ನು ಸೃಷ್ಟಿಮಾಡುವ ಹೊಣೆ ಸರ್ಕಾರದ್ದಾಗುತ್ತದೆ. ಈ ವ್ಯಾಪಾರದಿಂದ ಬಂದ ಲಾಭವನ್ನು ದೇಶದ ಕೈಗಾರಿಕೆಗಳ ಬೆಳೆವಣಿಗೆಗಾಗಿ ಸಹಾಯಧನ ರೂಪದಲ್ಲಿ ನೀಡುವ ಪದ್ಧತಿಯನ್ನೂ ಜಾರಿಗೆ ತರಬಹುದು. ಭಾರತದಲ್ಲಿ 1956ರಲ್ಲಿ ಸ್ಥಾಪಿತವಾದ ರಾಜ್ಯ ವ್ಯಾಪಾರ ಕಾರ್ಪೋರೇಷನ್ ರಾಷ್ಟ್ರದ ವಿದೇಶಿ ವ್ಯಾಪಾರದಲ್ಲಿ ಅಧಿಕಾಧಿಕ ಪಾತ್ರ ವಹಿಸುತ್ತಿದೆ. ಕೈಗಾರಿಕೆಗಳಿಗೆ ರಕ್ಷಣೆ ನೀಡುವ ತತ್ತ್ವ ಇಂದು ವ್ಯಾಪಕವಾಗಿ ಪರಿಣಮಿಸಿದೆ.
ಉಲ್ಲೇಖಗಳು
[ಬದಲಾಯಿಸಿ]