ವಿಷಯಕ್ಕೆ ಹೋಗು

ಕೈಕಾಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Almain rivet gauntlets of Emperor Maximilian I, c. 1514. Museum of Fine Arts (Kunsthistorisches Museum), Vienna
Pair of gauntlets, Germany, late 16th century
Gauntlets, about 1614. V&A Museum no. 1386&A-1888
Japanese (samurai) Edo period gauntlets (han kote).


ಕೈಕಾಪು ಮಧ್ಯಯುಗದಲ್ಲಿ ವೀರ ಸರದಾರರೂ ಖಡ್ಗಮಲ್ಲರೂ ಸೈನಿಕರೂ ತೊಡುತ್ತಿದ್ದ ಕಬ್ಬಿಣದ ಕೈಚೀಲ (ಗಾಂಟ್ಲೆಟ್).

ಅದು ಕೈ ಹರಡಿನ ಬಳಿ ಸಡಿಲವಾಗಿ ರಕ್ಷಣ ಕವಚಗಳಿಂದ ಸಜ್ಜುಗೊಳಿಸಲ್ಪಟ್ಟು, ಯುದ್ಧ ಕವಚಕ್ಕೇ ಸೇರಿಕೊಂಡು ಸೈನಿಕ ಉಡುಪಿನ ಒಂದು ಅಂಗವಾಗಿತ್ತು. ಅದರಿಂದ ಭರ್ಜಿ, ಕತ್ತಿಯನ್ನು ಹಿಡಿದುಕೊಳ್ಳಲು ಸೌಕರ್ಯವಿತ್ತು. ಅದರ ಆಕಾರ, ರಚನಾಕ್ರಮಗಳು ಆಗಿಂದಾಗ್ಗೆ ಬದಲಾಗುತ್ತಿದ್ದವು. ಮೊದಲು ಅದಕ್ಕೆ ತೋಳುಗಳಿದ್ದವು. ಅಂಗೈಕಡೆಯ ಸಂದಿನ ಮೂಲಕ ಕೈಯನ್ನು ಹೊರ ತೆಗೆಯಲು ಸಾಧ್ಯವಾಗಿತ್ತು; ಚೀಲದ ಭಾಗ ಜೇಬಿನಂತೆ ಜೋಲಾಡುತ್ತಿತ್ತು. ಕ್ರಮೇಣ ಈ ಕೈಕಾಪಿನ ಮೇಲ್ಮೈಯಲ್ಲಿ ಚಕ್ಕಳ, ಲೋಹ ಅಥವಾ ಕೊಂಬಿನ ಮುಚ್ಚಿಗೆಯನ್ನು ಸೇರಿಸಿ ಅದು ಯುದ್ಧ ಕವಚಕ್ಕೆ ಬಿಗಿಯಲ್ಪಟು ಅಖಂಡವಾಯಿತು. ತೊಗಲಿನ ಕೈಚೀಲಕ್ಕೆ ಉಕ್ಕಿನ ಬಿಲ್ಲೆಗಳನ್ನು ಸೇರಿಸಿ ಕೈಹಿಂಭಾಗವನ್ನು ಅಗಲವಾದ, ಅಡ್ಡ ಲೋಹತಗಡುಗಳ ಸಣ್ಣ ವರ್ತುಲಗಳು ಶ್ರೇಣಿ ಪರಂಪರೆಯಲ್ಲಿ ಬಿಗಿದಿದ್ದುವು. ಹಿಂಗೈಯ ಬೆರಳುಗಣ್ಣುಗಳಿಂದ ಮಣಿಕಟ್ಟಿನ ವರೆಗೆ ಅಗಲವಾದ ತಗಡಿನಿಂದ ರಕ್ಷಿಸಲ್ಪಟ್ಟಿತ್ತು. ಇದರೊಳಗೆ ತೊಗಲಿನ ಚೀಲವಿತ್ತು. ಅದರ ಮೇಲ್ಭಾಗದ ಬೆರಳುಗಳಿಗೂ ಹೆಬ್ಬೆಟ್ಟಿಗೂ ಮೇಲ್ಚಾಚಿದ ತಗಡುಗಳಿಂದ ರಕ್ಷಣೆ ನೀಡುವ ವ್ಯವಸ್ಥೆಯಿತ್ತು. ಎದುರಾಳಿಗಳಿಗೆ ಬಲವಾಗಿ ಪೆಟ್ಟುಕೊಡಲು ಗೆಣ್ಣುಗಳ ಮೇಲೆ ಚೂಪಾದ ಮತ್ತು ಹರಿತವಾದ ಮೊನೆಗಳೂ ಬುಗಟಿಗಳೂ ನಿರ್ಮಿತವಾದವು. ಕೈಚೀಲವನ್ನು ತಗಡಿಗೆ ಕೀಲುಗಂಟಿನಿಂದ(ರಿವೆಟ್) ಬೆಸೆಯುವ ವಿಧಾನ ಬಂದಿತು. ಆಮೇಲೆ ಗೆಣ್ಣಿನ ಭಾಗವನ್ನು ಪ್ರತ್ಯೇಕ ತಗಡಿನಿಂದ ಮಾಡಿ ಮಣಿಕಟ್ಟಿನ ತುಂಡುಗಳಿಗೆ ಕೀಲುಗಂಟಿನಿಂದ ಬೆಸೆಯುವ ವ್ಯವಸ್ಥೆ ಬಂದಿತು. ಕೊನೆಗೆ ಉಕ್ಕಿನ ಮಿಟನ್ ಎಂಬುದು ಏರ್ಪಾಡಾಯಿತು.

ವಿವಿಧ ಬಗೆಗಳು

[ಬದಲಾಯಿಸಿ]

ಪ್ರತ್ಯೇಕವಾದ ಕೈಕಾಪುಗಳು ವಿವಿಧ ಬಗೆಗಳಲ್ಲಿ ತಯಾರಾದವು. ಕೈಯಿಂದ ಕತ್ತಿ ಜಾರದಂತೆ ಮಾಡುವ ಟ್ಯೂರ್ನಿಯಿಂಗ್ ಕೈಕಾಪು, ಕುದುರೆಯ ಲಗಾಮನ್ನು ಚೆನ್ನಾಗಿ ಹಿಡಿದುಕೊಳ್ಳಲು ಸೌಕರ್ಯಕೊಡುವ ಮ್ಯೂನಿಫರ್ ಕೈಕಾಪು, ಕೈ ಜಜ್ಜಿಹೋಗದಂತೆ ರಕ್ಷಿಸುವ ಬ್ಯಾರಿಯರ್ ಕೈಕಾಪು, ವೈರಿಯ ಕೈಯಿಂದ ಕತ್ತಿಯನ್ನು ಸೆಳೆದುಕೊಳ್ಳಲು ತಕ್ಕಂತ ಕೈಕಾಪು, ಮೊಣಕೈ, (ಎಲ್ಬೋ) ಕೈಕಾಪು ಪಕ್ಷಿಗಳನ್ನು ಬೇಟೆಯಾಡುವ ಗಿಡುಗಗಳನ್ನು ಕೈಯಲ್ಲಿ ಹಿಡಿಯಲು ತಕ್ಕ ಕೈಕಾಪು, ಇತ್ಯಾದಿ.

ಯುದ್ಧದಲ್ಲಿ

[ಬದಲಾಯಿಸಿ]

ಒಬ್ಬ ವ್ಯಕ್ತಿ ಇನ್ನಾವನೋ ತನಗೆ ಅಪಮಾನ ಮಾಡಿದ, ಅಪಕೀರ್ತಿ ತಂದ, ಕಳಂಕ ಹಚ್ಚಿದ, ತಿರಸ್ಕಾರ ಮಾಡಿದನೆಂದು ಭಾವಿಸಿದರೆ ಸ್ವಾಭಿಮಾನಕ್ಕಾಗಿ ಅವನನ್ನು ಕಾಳಗಕ್ಕೆ ಕರೆಕೊಡಲು ತನ್ನ ಕೈಕಾಪನ್ನು ಕೆಳಗೆಸೆಯುವುದು ವಾಡಿಕೆಯಲ್ಲಿತ್ತು. ಈ ಸಂಕೇತವನ್ನು ಫ್ಲಿಂಗಿಂಗ್ ಆರ್ ತ್ರೋಯಿಂಗ್ ಡೌನ್ ದಿ ಗಾಂಟ್ಲೆಟ್ ಎಂದು ಕರೆಯುವುದು ಸಂಪ್ರದಾಯವಾಯಿತು. ಎದುರಾಳಿ ಕದನಕ್ಕೆ ಆಹ್ವಾನವನ್ನು ಸ್ವೀಕರಿಸಲು ಒಪ್ಪಿದರೆ ತನ್ನ ಒಪ್ಪಿಗೆಯನ್ನು ಸೂಚಿಸಲು ಆ ಕೈಕಾಪನ್ನು ಎತ್ತಿ ತೆಗೆದುಕೊಳ್ಳುತ್ತಿದ್ದ. ಈ ಸಂಜ್ಞೆಗೆ ಪಿಕ್ಕಿಂಗ್ ಆರ್ ಟೇಕಿಂಗ್ ಆಫ್ ದಿ ಗಾಂಟ್ಲೆಟ್ ಎಂಬ ಶಬ್ದ ಪ್ರಯೋಗವಿತ್ತು. ಎರಡು ಪಕ್ಷದವರು ಕಾಳಗಕ್ಕೆ ಕಾಲವನ್ನು ನಿಶ್ಚಯಿಸುತ್ತಿದ್ದರು. ಈ ಕಾದಾಟಕ್ಕೆ ವಿಧಿ ಪ್ರಕಾರದ ಕಟ್ಟುಕಟ್ಟಲೆಗಳಿದ್ದವು. ಇಬ್ಬರೂ ಆ ನಿಯಮಗಳನ್ನು ಸಾಕ್ಷಿದಾರರ ಸಮಕ್ಷಮ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಈ ವ್ಯವಹಾರ ನ್ಯಾಯಾಸ್ಥಾನದ ವಿಚಾರಣೆಯಂತೆಯೇ ಸನ್ಮಾನಿಸಲ್ಪಡುತ್ತಿತ್ತು. ಇಂಥ ಕಾಳಗದ ಫಲಿತಾಂಶ ನ್ಯಾಯಾಧಿಪತಿಯ ತೀರ್ಪಿನಂತೆ ಪರಿಗಣಿಸಲ್ಟಡುತ್ತಿತ್ತು. ಕದನದಲ್ಲಿ ಅಪರಾಧಿಯನ್ನು ಸೋಲಿಸಲು ದೇವರು ನಿರಪರಾಧಿಗೆ ಶಕ್ತಿ ಕೊಡುತ್ತಾನೆಂದೂ ಗೆದ್ದವನೇ ಸತ್ಯವಂತನೆಂದು ಗಣಿಸಲ್ಪಡಬೇಕೆಂದೂ ಜನ ನಂಬಿದ್ದರು. ಅನೇಕ ಮಂದಿ ಶ್ರೇಷ್ಠ ಪುರುಷರೇ ಇಂಥ ಕಾಳಗದಲ್ಲಿ ಭಾಗವಹಿಸಿದ್ದರು.

ಸಾಮಾನ್ಯ ಜೀವನದಲ್ಲಿ

[ಬದಲಾಯಿಸಿ]

ಉದ್ದವಾಗಿ, ಸಡಿಲ ತೋಳುಗಳ ಮಡಿಕೆಯುಳ್ಳ ಯಾವ ಕೈಕಾಪಿಗೂ ಗಾಂಟ್‍ಲೆಟ್ ಎಂಬ ಹೆಸರು ಬಂದಿದೆ. ಕ್ರಿಕೆಟ್ ಮೊದಲಾದ ಆಟಗಳಲ್ಲಿ ಚೆಂಡನ್ನು ಜೋರಾಗಿ ಹೊಡೆಯುವುದಕ್ಕೂ ಚಂಡುಹಿಡಿಯಲು ಗುರಿಕೋಲಿನ ಹಿಂದೆ ನಿಲ್ಲುವುದಕ್ಕೂ ಕತ್ತಿವರಸೆಯಲ್ಲಿ ತೊಡುವ ಮಣಿಕಟ್ಟುಳ್ಳ ದಪ್ಪವಾದ ಕೈಕಾಪುಗಳಿಗೂ ಗಾಂಟ್‍ಲೆಟ್ ಎಂದು ಹೆಸರು. ಸೇನೆಯ ಮತ್ತು ನಾವೆಯ ಶಿಕ್ಷಣದಲ್ಲಿ ಎರಡು ಕಡೆಗಳಲ್ಲೂ ಕೋಲು, ಹಗ್ಗ ಮೊದಲಾದವುಗಳಿಂದ ಹೊಡೆಯುವ ಜನರ ಸಾಲಿನ ಮಧ್ಯೆ ಎರಡೂ ಕಡೆಯ ಹೊಡೆತಕ್ಕೆ ಸಿಕ್ಕಿ ತಪ್ಪಿಸಿಕೊಂಡು ಓಡುವುದಕ್ಕೆ ರನ್ನಿಂಗ್ ದಿ ಗಾಂಟ್‍ಲೆಟ್ ಎಂದು ಹೇಳುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈಕಾಪು&oldid=959906" ಇಂದ ಪಡೆಯಲ್ಪಟ್ಟಿದೆ