ಕೆ. ವೆಂಕಟರಾಮಪ್ಪ
ಗೋಚರ
ಕೆ. ವೆಂಕಟರಾಮಪ್ಪ | |
---|---|
ಜನನ | ಮೇ ೨೮, ೧೯೦೬ ಪಾವಗಡ |
ಮರಣ | ಸೆಪ್ಟೆಂಬರ್ ೨, ೧೯೯೧ |
ವೃತ್ತಿ | ಪ್ರಾಧ್ಯಾಪಕರು, ಸಾಹಿತಿ ಮತ್ತು ಸಾಹಿತ್ಯ ಸಂಶೋದಕರು |
ಪ್ರೊ. ಕೆ. ವೆಂಕಟರಾಮಪ್ಪನವರು (ಮೇ ೨೮, ೧೯೦೬ - ಸೆಪ್ಟೆಂಬರ್ ೨, ೧೯೯೧) ಕನ್ನಡ ಸಾಹಿತ್ಯ ಲೋಕದ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಗ್ರಂಥಕರ್ತರಾಗಿ ಪ್ರಖ್ಯಾತರಾಗಿದ್ದಾರೆ.
ಜೀವನ
[ಬದಲಾಯಿಸಿ]- ಪ್ರೊ. ಕೆ. ವೆಂಕಟರಾಮಪ್ಪನವರು ದಿನಾಂಕ ೨೮ ಮೇ ೧೯೦೬ರಂದು ಜನಿಸಿದರು. ಅವರು ಹುಟ್ಟಿದ್ದು ಆಂಧ್ರದ ಗಡಿ ಭಾಗವಾದ ಪಾವಗಡದಲ್ಲಿ. ಬಹುಸಂಖ್ಯಾತ ತೆಲುಗು ಮಾತನಾಡುವವರ ಮಧ್ಯೆ ಬೆಳೆದ ವೆಂಕಟರಾಮಪ್ಪನವರಿಗೆ ಕನ್ನಡದಲ್ಲಿ ಎಷ್ಟು ಪ್ರಾವೀಣ್ಯತೆ ಇತ್ತೋ ತೆಲುಗಿನಲ್ಲೂ ಅಷ್ಟೆ ಪ್ರಾವೀಣ್ಯತೆ ಇತ್ತು. ತಂದೆ ಸುಬ್ಬಾಶಾಸ್ತ್ರಿಗಳು ಮತ್ತು ತಾಯಿ ಸಾವಿತ್ರಮ್ಮನವರು.
- ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಪಾವಗಡದಲ್ಲಿ ನಡೆಸಿದ ವೆಂಕಟರಾಮಪ್ಪನವರು ನಂತರ ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆಸಿದರು. ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕನ್ನಡ ಎಂ.ಎ. ತರಗತಿ ಪ್ರಾರಂಭಿಸಿದಾಗ ಮೊದಲ ಗುಂಪಿನಲ್ಲಿ ಪ್ರವೇಶ ಪಡೆದವರೆಂದರೆ ಕುವೆಂಪು, ಡಿ.ಎಲ್.ಎನ್, ಅನಂತರಂಗಾಚಾರ್, ವೆಂಕಟರಾಮಪ್ಪ ಮುಂತಾದ ಒಂಬತ್ತು ಮಂದಿ. ಎಲ್ಲರೂ ಘಟಾನುಘಟಿಗಳೇ!
ಪ್ರಾಧ್ಯಾಪಕರಾಗಿ
[ಬದಲಾಯಿಸಿ]- ಎಂ.ಎ. ಮುಗಿಸಿದ ನಂತರ ಅಧ್ಯಾಪಕ ವೃತ್ತಿಯನ್ನಾಯ್ದುಕೊಂಡ ವೆಂಕಟರಾಮಪ್ಪನವರು ಅಧ್ಯಾಪಕ ವೃತ್ತಿಗೊಂದು ಘನತೆ, ಗೌರವಗಳ ಭದ್ರಬುನಾದಿ ಒದಗಿಸಿದರು. ಅಧ್ಯಾಪನ ಎನ್ನುವುದು ಒಂದು ಕಲೆ ಎಂಬುದನ್ನು ಸಾಧಿಸಿ ತೋರಿಸಿದರು. ಪಠ್ಯ ವಿಷಯದ ಜೊತೆಗೆ ಇತರ ವಿಷಯಗಳನ್ನು ಬೆರೆಸಿದರೂ ಹೇಳಬೇಕಾದುದೆಲ್ಲವನ್ನೂ ಆಕರ್ಷಕವಾಗಿ ಹೇಳಿ, ವಿದ್ಯಾರ್ಥಿಗಳ ಚಿತ್ತವನ್ನು ಆವರಿಸುವ ಕಲೆ ಅವರಿಗೆ ಕರಗತವಾಗಿತ್ತು.
- ಬೇರೆ ತರಗತಿಯ ವಿದ್ಯಾರ್ಥಿಗಳು ತಮ್ಮ ತರಗತಿಗೆ ತಪ್ಪಿಸಿಕೊಂಡರೂ ವೆಂಕಟರಾಮಪ್ಪನವರ ತರಗತಿಗೆ ತಪ್ಪದೆ ಹಾಜರಾಗುತ್ತಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ತಮ್ಮ ವಾಗ್ವೈಖರಿಯಿಂದ ವಿದ್ಯಾರ್ಥಿಗಳ ಮನ ಗೆದ್ದರು. ನಿವೃತ್ತರಾಗುವ ಮುಂಚಿನ ಕೆಲವು ವರ್ಷಗಳಲ್ಲಿ ಸ್ನಾತಕೋತ್ತರ ವಿಭಾಗದ ರೀಡರ್ ಆಗಿ ಅವರು ನಿವೃತ್ತರಾದರು.
ಬರಹಗಾರರಾಗಿ
[ಬದಲಾಯಿಸಿ]- ವೆಂಕಟರಾಮಪ್ಪನವರು ಬರೆದ ಲೇಖನಗಳೇ ನೂರಾರು. ಇಪ್ಪತ್ತೈದಕ್ಕೂ ಹೆಚ್ಚು ಮಹತ್ವದ ಕೃತಿ ರಚನೆ ಮಾಡಿದರು. ತೆಲುಗು ಚಾಟು ಪದ್ಯಗಳು, ಶ್ರೀನಾಥ, ವೇಮನ, ಹರವಿಲಾಸ, ಪಂಪಭಾರತ ದರ್ಶನ, ಕನಕದಾಸ, ದುರ್ಗಸಿಂಹ, ಶ್ರೀ ಪುರಂದರದಾಸರು, ಜನ್ನನ ಕಾವ್ಯ ಪರಿಚಯ, ಕವಿನೇಮಿಚಂದ್ರ, ಕನ್ನಡ ಸಾಹಿತ್ಯ ಕುರಿತ ಅಂಗೈ ಅಗಲ ಪುಸ್ತಿಕೆ, ಕನ್ನಡ-ತೆಲುಗು ಕವಿಗಳಾದ ಪಂಪ-ನನ್ನಯರ ತೌಲನಿಕ ಅಧ್ಯಯನ, ತೆಲುಗಿನ ಪ್ರಸಿದ್ಧ ಕಾದಂಬರಿ ರುದ್ರಮದೇವಿ ಕನ್ನಡಕ್ಕೆ ಅನುವಾದ ಇವು ವೆಂಕಟರಾಮಪ್ಪನವರ ಮಹತ್ವದ ಕೃತಿಗಳು.
- ವೆಂಕಟರಾಮಪ್ಪನವರ ಸಂಪಾದಿತ ಕೃತಿಗಳು ದೇಜಗೌರೊಡನೆ ಲೀಲಾವತಿಕಾವ್ಯ ಮತ್ತು ನಿತ್ಯಾತ್ಮ ಶುಕಯೋಗಿಯ ಭಾಗವತದ ಭಾಗ 1, 2, ದಶಮಸ್ಕಂದ, ಶ್ರೀಕೃಷ್ಣ ಚರಿತೆ ಮುಂತಾದುವು. ಇಂಗ್ಲಿಷ್ ಭಾಷಾಂತರದಲ್ಲಿ ಪ್ಲೇಟೋನ ರಿಪಬ್ಲಿಕ್ ಗ್ರಂಥವನ್ನು ಕನ್ನಡಕ್ಕೆ ಕೊಟ್ಟ ಹಿರಿಮೆ ವೆಂಕಟರಾಮಪ್ಪನವರದು. ಅವರ ಪ್ರಬಂಧ ಸಂಗ್ರಹಗಳಲ್ಲಿ ವಿಚಾರ ಲಹರಿ, ಹೊಸ ನೀರು, ಕೋಣನ ಮಂತ್ರ. ಕಾವ್ಯಮಂಥನ, ಇಂಗ್ಲಿಷ್ ನಾಟಕಗಳು, ಗಣೇಶನ ಮದುವೆ ಮುಂತಾದ ಕೃತಿಗಳು ಸೇರಿವೆ.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಪ್ರೊ. ಕೆ. ವೆಂಕಟರಾಮಪ್ಪನವರ ವಿದ್ವತ್ತನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಅವರಿಗೆ 1986ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು.
ವಿದಾಯ
[ಬದಲಾಯಿಸಿ]ಬಹುಶ್ರುತರಾದ ಕೋಟೆ ಬಂಡೆ ವೆಂಕಟರಾಮಪ್ಪನವರು ಸೆಪ್ಟಂಬರ್ ೨, ೧೯೯೧ರಲ್ಲಿ ಈ ಲೋಕವನ್ನಗಲಿದರು. ಕನ್ನಡ ನಾಡಿನ ಪ್ರಥಮ ಸಾಲಿನ ಆಚಾರ್ಯರಲ್ಲಿ ಕೆ. ವೆಂಕಟರಾಮಪ್ಪನವರು ಕಂಗೊಳಿಸುವಂತಹ ಚೇತನರು.
ಮಾಹಿತ ಆಧಾರ
[ಬದಲಾಯಿಸಿ]ಕಣಜ.[ಶಾಶ್ವತವಾಗಿ ಮಡಿದ ಕೊಂಡಿ]