ಕೆ. ಉಲ್ಲಾಸ ಕಾರಂತ

ವಿಕಿಪೀಡಿಯ ಇಂದ
Jump to navigation Jump to search
ಉಲ್ಲಾಸ ಕಾರಂತ

ಡಾ. ಕೆ. ಉಲ್ಲಾಸ ಕಾರಂತ ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಸಂಶೋಧಕ ಜೀವಶಾಸ್ತ್ರಜ್ಞರು. ಭಾರತೀಯ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರೆನಿಸಿದ ಶಿವರಾಮಕಾರಂತರ ಸುಪುತ್ರರಾದ ಉಲ್ಲಾಸರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೧೯೪೮ರ ವರ್ಷದಲ್ಲಿ ಜನಿಸಿದರು. ಎಳೆತನದಲ್ಲಿ ತಂದೆಯವರ ಉತ್ತೇಜನ, ಪ್ರಭಾವಗಳ ಜೊತೆಗೆ ಸಲೀಂ ಅಲಿ, ಜಿಮ್ ಕಾರ್ಬೆಟ್ ಅಂಥವರ ಕೃತಿಗಳ ಓದಿನಲ್ಲಿ ಅವರಿಗೆ ಆಸಕ್ತಿ ಮೂಡಿತು. ಪರಿಣಾಮವಾಗಿ ಚಿಕ್ಕಂದಿನಲ್ಲೇ ಪ್ರಕೃತಿವಿಜ್ಞಾನ ಮತ್ತು ವನ್ಯಜೀವಿ ಸಂರಕ್ಷಣೆಗಳತ್ತ ಅವರಲ್ಲಿ ಕುತೂಹಲ, ಆಕರ್ಷಣೆಗಳು ಬೆಳೆದವು.

೧೯೭೧ರಲ್ಲಿ ಇಂಜಿನಿಯರಿಂಗ್ ಪದವಿಗಳಿಸಿದ ಕಾರಂತರ ವೃತ್ತಿಮಾರ್ಗದಲ್ಲಿ ಬೇರೊಂದು ತಿರುವು ಸಂಭವಿಸಿತು. ವೃತ್ತಿಪರ ವನ್ಯಪ್ರಾಣಿಶಾಸ್ತ್ರಜ್ಞನಾಗುವ ಬಯಕೆಯಿಂದಾಗಿ ಮತ್ತೆ ಅಧ್ಯಯನದಲ್ಲಿ ತೊಡಗಲು ಕಾತರರಾದ ಕಾರಂತರು. ವನ್ಯಜೀವಿ ನಿರ್ವಹಣೆಯನ್ನು ಕುರಿತ ಸರ್ಟಿಫಿಕೇಟ್ ಕೋರ್ಸಿನಲ್ಲಿ ಪಾಲ್ಗೊಳ್ಳುವುದಕ್ಕಾಗಿ (೧೯೮೪) ಅಮೆರಿಕಾದ ಸ್ಮಿತ್ಸೋನಿಯನ್ ಸಂಸ್ಥೆಯ ಮೆಟ್ಟಲು ಹತ್ತಿದರು. ಈ ವ್ಯಾಸಂಗಶ್ರದ್ಧೆ ಮುಂದುವರೆದುದರ ಫಲವಾಗಿ ಅವರು ೧೯೮೮ರ ವರ್ಷದಲ್ಲಿ ವೈಲ್ಡ್ ಲೈಫ್ ಇಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ೧೯೯೩ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅನ್ವಯಿಕ ಪ್ರಾಣಿ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯ ಕಿರೀಟ ಅವರ ಮುಡಿಗೇರಿತು. ೧೯೯೩ರ ನಂತರದಲ್ಲಿ ನ್ಯೂಯಾರ್ಕ್ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ಆಶ್ರಯದ ಇಂಡಿಯಾ ಪ್ರೋಗ್ರಾಂ ನಿರ್ದೇಶಕ ಹಾಗೂ ಸಂಶೋಧಕ ವಿಜ್ಞಾನಿಯಾಗಿ ಕಾರಂತರು ತಮ್ಮ ನಿರಂತರ ಸೇವಾಪರತೆಯನ್ನು ಮೆರೆದರು, ಹುಲಿ ಮತ್ತಿತರ ಸಸ್ತನಿವರ್ಗದ ದೊಡ್ಡ ಪ್ರಾಣಿಗಳ ಜೀವಿಪರಿಸ್ಥಿತಿಯನ್ನು ಕುರಿತಂತೆ ಕಾರಂತರು ಸುದೀರ್ಘಕಾಲದ ಸಂಶೋಧನೆ ನಡೆಸಿದರು.

ಭಾರತದ ನಾಗರಹೊಳೆ, ಪೆಂಚ್, ಕಾನ್ಹಾ, ಖಾಜೀರಂಗ, ನಾಮ್ ದಫಾ ಮುಂತಾದ ಉದ್ಯಾನಗಳಲ್ಲಿ ಉಲ್ಲಾಸ ಕಾರಂತರದು ವ್ಯಾಪಕವಾದ ಕ್ಷೇತ್ರಕಾರ್ಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಂತರದು ವಿಶ್ವಕ್ಕೇ ಅಧಿಕೃತ ವಾಣಿಯೆಂಬ ಹೆಗ್ಗಳಿಕೆ. ರಾಷ್ಟ್ರೀಯ-ಅಂತರರಾಷ್ಟ್ರೀಯ ಪತ್ರಿಕೆಗಳಲ್ಲೂ ಗ್ರಂಥಗಳಲ್ಲೂ ಕಾರಂತರ ನೂರಾರು ವೈಜ್ಞಾನಿಕ ಬರಹಗಳು ಪ್ರಕಟಗೊಂಡಿವೆ. ಲಂಡನ್ನಿನ ಜೂಲಾಜಿಕಲ್ ಸೊಸೈಟಿ ಮತ್ತು ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗಳಿಂದ ಅವರಿಗೆ ‘ಸೈಂಟಿಫಿಕ್ ಫೆಲೋ’ ಗೌರವ ಪ್ರಾಪ್ತಿಸಿದೆ.


The Way of the Tiger (೨೦೦೧), Monitoring Tigers and thier Prey (೨೦೦೨), A view from the Machan (೨೦೦೬) , Camera traps in Animal Ecology (೨೦೧೦) ಮುಂತಾದವು ಉಲ್ಲಾಸ್ ಕಾರಂತರ ಪ್ರಸಿದ್ಧ ಆಂಗ್ಲ ಪುಸ್ತಕಗಳು. ಕನ್ನಡದಲ್ಲಿ ‘ಕಾಡು ಪ್ರಾಣಿಗಳ ಜಾಡಿನಲ್ಲಿ’, ಟಿ. ಎಸ್. ಗೋಪಾಲ್ ಅವರ ನಿರೂಪಣೆಯಲ್ಲಿ ಮೂಡಿರುವ ‘ಹುಲಿರಾಯನ ಆಕಾಶವಾಣಿ’, ಎಚ್. ಆರ್. ಕೃಷ್ಣಮೂರ್ತಿಯವರ ಅನುವಾದದಲ್ಲಿ ಮೂಡಿರುವ ‘ಹುಲಿಯ ಬದುಕು’ ಮುಂತಾದವು ಉಲ್ಲಾಸ ಕಾರಂತರ ಪ್ರಸಿದ್ಧ ಕನ್ನಡ ಪುಸ್ತಕಗಳು.

ಕಾರಂತರ ವೈಜ್ಞಾನಿಕ ಅಧ್ಯಯನದ ಕುಶಲತೆಯ ಪ್ರಯೋಜನ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಯು. ಎಸ್. ಎ, ಯು. ಕೆ., ಮಲೇಶಿಯಾ, ಇಂಡೋನೆಷ್ಯ, ಥೈಲ್ಯಾಂಡ್, ಟರ್ಕಿ ಮೊದಲಾದ ದೇಶಗಳ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ನೆರವಾಗುವುದಕ್ಕಾಗಿಯೂ, ಹಲವಾರು ಅಧ್ಯಯನ ಸಂಕಿರಣಗಳಲ್ಲಿ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸುವುದಕ್ಕಾಗಿಯೂ ಕಾರಂತರು ವ್ಯಾಪಕವಾಗಿ ವಿದೇಶ ಪ್ರವಾಸ ನಡೆಸಿದ್ದಾರೆ. ಲಂಡನ್ನಿನ ಜೂಲಾಜಿಕಲ್ ಸೊಸೈಟಿ, ಕ್ಯಾಲಿಫೋರ್ನಿಯಾದ ಅಕಾಡೆಮಿ ಆಫ್ ಸೈನ್ಸಸ್ ನಂಥ ಸಂಸ್ಥೆಗಳಲ್ಲೂ, ಫ್ಲೋರಿಡಾ, ಮೆಸಾಚುಸೆಟ್ಸ್ ವಿಶ್ವವಿದ್ಯಾನಿಲಯಗಳಲ್ಲೂ ಕಾರಂತರು ಆಹ್ವಾನಿತ ಭಾಷಣಕಾರರಾಗಿದ್ದಾರೆ. ನ್ಯೂಯಾರ್ಕ್ ಟೈಮ್ಸ್, ನ್ಯಾಷನಲ್ ಜಿಯಾಗ್ರಫಿಕ್ ಅಂತಹ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲೂ ಬಿಬಿಸಿ, ಸ್ಕೈಟಿವಿ, ಸ್ಟಾರ್, ಡಿಸ್ಕವರಿ, ನ್ಯಾಷನಲ್ ಜಿಯಾಗ್ರಫಿ ಮೊದಲಾದ ದೂರದರ್ಶನ ಜಾಲಗಳಲ್ಲೂ ಭಾರತೀಯ ಸಮೂಹ ಮಾಧ್ಯಮಗಳಲ್ಲೂ ಕಾರಂತರ ಕಾರ್ಯ-ಸಾಧನೆಗಳ ವಿಸ್ತೃತ ಪ್ರಸಾರಣ – ಜ್ಞಾನಸೂರ್ಯನ ಕೀರ್ತಿಕಿರಣದಂತೆ ಪ್ರಕಾಶಿಸಿದೆ. ಉಲ್ಲಾಸ ಕಾರಂತರ ಮಗಳು ಡಾ. ಕೃತಿ ಕಾರಂತ ಅವರು ಸಹಾ ವನ್ಯಜೀವಿ ವಿಜ್ಞಾನಿಯಾಗಿದ್ದಾರೆ. ಉಲ್ಲಾಸ ಕಾರಂತರಿಗೆ ಅನೇಕ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಂಡಳಿಗಳ ಸದಸ್ಯತ್ವದ ಗೌರವ ಸಂದಿದೆ. ಭಾರತದ ಪ್ರಧಾನಿಗಳು ಅಧ್ಯಕ್ಷರಾಗಿರುವ ಇಂಡಿಯನ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಮತ್ತು ಪರಿಸರ ಖಾತೆ ನಿರ್ವಹಿಸುತ್ತಿರುವ ಹುಲಿಯೋಜನೆಯ ಸಂಚಾಲಕ ಮಂಡಳಿಗಳ ಸದಸ್ಯತ್ವ, ಕರ್ಣಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿಸದಸ್ಯತ್ವ, ಗ್ಲೋಬಲ್ ಟೈಗರ್ ಪೆಟ್ರೋಲ್ (ಯುಕೆ) ಮತ್ತು ಟೈಗರ್ ಆಕ್ಷನ್ ಫಂಡ್ ಫಾರ್ ಇಂಡಿಯ (ಯು ಎಸ್ ಎ) ಮೊದಲಾದ ಅಂತರರಾಷ್ಟ್ರೀಯ ಸರ್ಕಾರೇತರ ಸಂಘಟನೆಗಳ ಸಲಹಾಕಾರ ಹೀಗೆ ವಿವಿಧ ಕಾರ್ಯಗಳನ್ನು ಉಲ್ಲಾಸ ಕಾರಂತರು ನಿರ್ವಹಿಸುತ್ತಾ ಬಂದಿದ್ದಾರೆ.

ಪ್ರಸಕ್ತದಲ್ಲಿ ಕಾರಂತರು ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ಹಿರಿಯ ವಿಜ್ಞಾನಿಗಳೂ, ವೈಲ್ಡ್‌ಲೈಫ್ ಕನ್ಸರ್ವೇ ಷನ್ ಸೊಸೈಟಿಯ ಭಾರತೀಯ ಕಾರ್ಯಕ್ರಮಗಳ ನಿರ್ದೇಶಕರೂ, ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ ನಿರ್ದೇಶಕರೂ ಆಗಿ ಕಾರ್ಯ ನಿರ್ವಹಿತ್ತಾ ವನ್ಯಜೀವಿ ಸಂರಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ.

ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಉಲ್ಲಾಸ್ ಕಾರಂತರನ್ನು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾದವು ೨೦೦೬ರಲ್ಲಿ ಸಂದ ಸಿಯೆರಾ ಕ್ಲಬ್‌ನ ಅರ್ಥ್ ಕೇರ್ ಪ್ರಶಸ್ತಿ, ೨೦೦೭ರಲ್ಲಿ ಸಂದ ವರ್ಲ್ಡ್ ವೈಲ್ಡ್‌ಲೈಫ್ ಫಂಡ್‌ನ ಜೆ. ಪಾಲ್‌ಗೆಟ್ಟಿ ಪ್ರಶಸ್ತಿ, ೨೦೦೮ರಲ್ಲಿ ಬಿಎನ್‌ಎಚ್‌ನ ಸಲೀಂ ಅಲಿ ಪುರಸ್ಕಾರಗಳು. ೨೦೦೮ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ, ೨೦೧೧ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಇದೀಗ ಭಾರತ ಸರ್ಕಾರದ ೨೦೧೨ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಮುಂತಾದ ಹಿರಿಮೆಗಳು ಕಾರಂತರಿಗೆ ಸಂದಿವೆ. ನಮ್ಮವರೇ ಆದ ಒಬ್ಬ ಮಹನೀಯರ ಕುರಿತು ನಮ್ಮ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರದ ಗುಲ್ಲೆಬ್ಬಿಸಿ ತೊಂದರೆಗೀಡುಮಾಡಿದರೆ, ಇಡೀ ವಿಶ್ವ ಅವರನ್ನು ಎಂತು ಕೊಂಡಾಡುತ್ತಿದೆ ಎಂಬುದಕ್ಕೆ ವೈಲ್ಡ್ ಲೈಫ್ ಕನ್ಸರ್ ವೇಷನ್ ಸೊಸೈಟಿಯ ಜಗದ್ವಿಖ್ಯಾತ ವನ್ಯಜೀವಿ ಜೀವಶಾಸ್ತ್ರಜ್ಞರಾದ ಡಾ. ಜಾರ್ಜ್ ಷಾಲರ್ ಅವರ ಈ ಮಾತುಗಳು ಉಲ್ಲೇಖನೀಯವಾಗಿವೆ:

“ವೈಜ್ಞಾನಿಕ ಸಾಧನಗಳನ್ನು ಬಳಸಿ ಹುಲಿಯಂತಹ ಅದ್ಭುತಜೀವಿಯ ಉಳಿವಿಗಾಗಿ ಶ್ರಮಿಸಿದವರಲ್ಲಿ ಕೆ. ಉಲ್ಲಾಸ ಕಾರಂತರಂಥವರು ಭಾರತದಲ್ಲೇ ಏಕೆ, ಇಡಿಯ ಜಗತ್ತಿನಲ್ಲೇ ಮತ್ತೊಬ್ಬರಿಲ್ಲ. ಹುಲಿಗಳ ಬದುಕಿನ ಬಗೆಗೆ ಸುಮಾರು ಎರಡು ದಶಕಗಳ ಕಾಲ ತತ್ಪರತೆಯಿಂದ ಅಧ್ಯಯನ ಮಾಡಿದ ಉಲ್ಲಾಸ ಕಾರಂತರು ಭಾರತದ ಅತಿಕುಶಲ ಕ್ಷೇತ್ರ ಜೀವಶಾಸ್ತ್ರಜ್ಞರಾಗಿಯೂ ಹುಲಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿ ಯಶ ಕಂಡ ಸಂರಕ್ಷಣಾವಾದಿಯಾಗಿಯೂ ವಿಶ್ವದ ಗಮನ ಸೆಳೆದಿದ್ದಾರೆ. ಅವರ ವೈಜ್ಞಾನಿಕ ಕಾರ್ಯಕುಶಲತೆ, ಸಂರಕ್ಷಣಾವಾದಿಯಾಗಿ ಅವರ ಹಿರಿಮೆಯನ್ನು ಹೆಚ್ಚಿಸಿವೆ. ಹುಲಿ ಮತ್ತು ಬಲಿಪ್ರಾಣಿಗಳ ಗಣತಿಗಾಗಿ ವಿಶ್ವಸನೀಯ ತಂತ್ರಗಳನ್ನು ಅಭಿವೃದ್ಧಿಪಡಿಸಿರುವ ಕಾರಂತರು, ಇವೆರಡರ ಸಂಖ್ಯೆಗಳ ನಡುವೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ವನ್ಯ ಧೋರಣೆಗಳು ಮತ್ತು ವನ್ಯಧಾಮಗಳ ನಿರ್ವಹಣೆಯ ಮೇಲೆ ಕಾರಂತರ ಆಳವಾದ ಅರಿವು ಸಾಕಷ್ಟು ಪ್ರಭಾವ ಬೀರಿವೆ. ಅಂತರರಾಷ್ಟ್ರೀಯ ಮಟ್ಟದ ವನ್ಯಪರಿಜ್ಞಾನ ಹಾಗೂ ಸಂಶೋಧನಾತಂತ್ರಗಳ ಮೇಲೂ ಕಾರಂತರ ಅರಿವಿನ ಪ್ರಭಾವ ಅಪಾರ. ವೈಜ್ಞಾನಿಕ ಮತ್ತು ಜನಪ್ರಿಯ ಬರವಣಿಗೆಗಳೆರಡರಲ್ಲೂ ಸಿದ್ಧಹಸ್ತರಾದ ಕಾರಂತರ ಲೇಖನಗಳೂ ಪುಸ್ತಕಗಳೂ ವ್ಯಾಪಕವಾಗಿ ಓದುಗರ ಗಮನ ಸೆಳೆದಿವೆ. ಕಾರಂತರಿಂದ ತರಬೇತು ಪಡೆದ ಯುವ ಕ್ಷೇತ್ರ ಜೀವಶಾಸ್ತ್ರಜ್ಞರ ಪಡೆಯ ತತ್ಪರತೆ, ಉತ್ಸಾಹಗಳನ್ನು ಕಂಡು ನಾನು ಬೆರಗಾಗಿದ್ದೇನೆ. ಉಲ್ಲಾಸ ಕಾರಂತರು ವನ್ಯಜೀವನ ಮತ್ತು ಅರಣ್ಯಗಳ ಉಳಿವಿಗಾಗಿ ಇತರರಲ್ಲಿ ಮೂಡಿಸುತ್ತಿರುವ ಜ್ಞಾನ, ಸ್ಫೂರ್ತಿ, ಸಮರ್ಪಣಾ ಭಾವಗಳು ಮುಂಬರುವ ದಿನಗಳಲ್ಲಿ ಹುಲಿ ಮತ್ತಿತರ ಪ್ರಾಣಿಗಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ.”

ಇಂತಹ ಅದ್ಭುತ ಕಾರ್ಯಮಾಡಿ ಇಂದೂ ಸಹ ನಮ್ಮ ನಡುವೆ ಒಂದಷ್ಟು ಕಾಡು ಮತ್ತು ಪ್ರಾಣಿ ಸಂಕುಲ ಉಳಿಯುವಂತೆ ಆಸ್ಥೆ ವಹಿಸಿದ ಡಾ. ಉಲ್ಲಾಸ ಕಾರಂತರಿಗೆ ನಾವು ಎಷ್ಟು ಕೃತಜ್ಞರಿದ್ದರೂ ಸಾಲದು.ವನ್ಯಜೀವಿ ಸಂರಕ್ಷಣೆಗೆ ವೈಜ್ಞಾನಿಕ ನೆಲೆಗಟ್ಟನ್ನು ರೂಪಿಸಿದ ಧೀಮಂತರೆನಿಸಿರುವ ಡಾ. ಕೆ. ಉಲ್ಲಾಸ ಕಾರಂತರಿಗೆ ೨೦೧೨ರ ವರ್ಷದಲ್ಲಿ ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವ ಸಂದಿದೆ. ಈ ಮಹನೀಯರನ್ನು ನಿಧಾನವಾಗಿಯಾದರೂ ಪದ್ಮಶ್ರೀಯಂತಹ ಪ್ರಶಸ್ತಿಯಿಂದ ಗೌರವಿಸಿದ ಭಾರತ ಸರ್ಕಾರ ತನ್ನನ್ನೇ ತಾನು ಒಂದಷ್ಟು ಮಾನ್ಯಮಾಡಿಕೊಂಡ ಕೆಲಸ ಮಾಡಿದೆ. ಡಾ. ಉಲ್ಲಾಸ ಕಾರಂತರು ಮಾಡಿರುವ ಕಾರ್ಯ ಮತ್ತು ಅವರು ಬದುಕಿರುವ ಸಾಧನಾಪೂರ್ಣ, ತೃಪ್ತಿದಾಯಕ ಬದುಕು ಈ ಪ್ರಶಸ್ತಿಗಳೆಲ್ಲವನ್ನೂ ಮೀರಿದಂತದ್ದು. ಈ ಪದ್ಮಶ್ರೀ ಪ್ರಶಸ್ತಿ ಅವರ ಸಾಧನೆಗಳನ್ನು ಸ್ಮರಿಸಲು ಒಂದು ಅವಕಾಶವಾಗಿದೆ.

ಹೊರಕೊಂಡಿಗಳು[ಬದಲಾಯಿಸಿ]

Wildlife conservation society ತಾಣದಲ್ಲಿರುವ ಉಲ್ಲಾಸ ಕಾರಂತರ ಪರಿಚಯ