ವಿಷಯಕ್ಕೆ ಹೋಗು

ಕೆ.ಎಂ.ರಾಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಎಂ.ರಾಮನ್, ಒಬ್ಬ ವಿಖ್ಯಾತ ಭರತನಾಟ್ಯಪಟು, ಮತ್ತು ಕೇರಳ ರಾಜ್ಯದ ಕಥಕ್ಕಳಿ ನೃತ್ಯ ಶೈಲಿಯಲ್ಲೂ ತಮ್ಮ ಅನುಪಮ ಯೋಗದಾನ ನೀಡಿದ್ದಾರೆ.

ಜನನ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನ[ಬದಲಾಯಿಸಿ]

'ರಾಮನ್, ಕಾಸರಗೋಡಿನ ನೀಲೇಶ್ವರದಲ್ಲಿ ೧೯೩೦ ರಲ್ಲಿ ಜನಿಸಿದರು. ನಾಟ್ಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಾಮನ್, ಭರತನಾಟ್ಯ ಕಲಿಕೆಗಾಗಿ ಮೈಸೂರಿಗೆ ಬಂದು ವಾಸ್ತವ್ಯಹೂಡಿ ಹೆಸರಾಂತ ನೃತ್ಯ ಪಟು, ಕೆ.ಎಸ್.ರಾಜಗೋಪಾಲ್ ಬಳಿ “ಕಥಕ್ಕಳಿ” ಸಂಪ್ರದಾಯದ ನೃತ್ಯಾಭ್ಯಾಸ ಮಾಡಿದರು. ಪ್ರೊ||ಯು.ಎಸ್.ಕೃಷ್ಣರಾವ್ ಹಾಗೂ ಚಂದ್ರ ಭಾಗಾದೇವಿ ದಂಪತಿಗಳ ಬಳಿ “ಪಂದನಲ್ಲೂರು ಶೈಲಿ” ಯಲ್ಲಿ ಭರತನಾಟ್ಯವನ್ನು ಕೆಲವು ಕಾಲ ಅಭ್ಯಾಸಮಾಡಿ ಅನಂತರ ಕಿಟ್ಟಪ್ಪ ಪಿಳ್ಳೆಯವರಲ್ಲೂ ಶಿಷ್ಯವೃತ್ತಿ ಮಾಡಿ ನೃತ್ಯ ಕಲೆಯಲ್ಲಿ ಪ್ರಾವೀಣ್ಯತೆಯನ್ನು ಗಳಿಸಿದರು.

ಗುಬ್ಬಿ ವೀರಣ್ಣನವರ ನಾಟಕ ಕಂಪೆನಿಯಲ್ಲಿ[ಬದಲಾಯಿಸಿ]

ಗುಬ್ಬಿ ವೀರಣ್ಣನವರ ನಾಟಕ ಕಂಪೆನಿಯಲ್ಲಿ ನೃತ್ಯ ನಿರ್ದೇಶಕರಾಗಿದ್ದು, ನಾಟ್ಯಚಾರ್ಯರಾಗಿ ಸೇವೆ ಸಲ್ಲಿಸಿದ ನಂತರ ೧೯೬೨ ರಲ್ಲಿ ತುಮಕೂರಿನಲ್ಲಿ ತಮ್ಮದೇ ಸ್ವಂತ, ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರವನ್ನು ಸ್ಥಾಪಿಸಿ ಸಾವಿರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದ್ದಾರೆ. ಕೇವಲ ಕರ್ನಾಟಕವಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಶಿಷ್ಯರುಗಳು ಹೋಗಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ೨,೦೦೦ ಹೆಚ್ಚಿನ ಕಾರ್ಯಕ್ರಮ ನೀಡಿರುವ ರಾಮನ್ ಅವರ ನೃತ್ಯಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ಕೊಡಲಾಗಿದೆ.

ಪ್ರಶಸ್ತಿ ಸನ್ಮಾನಗಳು[ಬದಲಾಯಿಸಿ]

  • ತುಮಕೂರಿನ ಶ್ರೀ ಸಿದ್ದಗಂಗಾ ಮಠಾಧೀಶ,ಶ್ರೀ ಶಿವಕುಮಾರ ಸ್ವಾಮೀಜಿಯವರು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದ್ದಾರೆ.[೧]
  • ಶ್ರೀ ರೇಣುಕಾ ವೀರ ಗಂಗಾಧರ ಸ್ವಾಮಿಯವರು “ನಾಟ್ಯಕಲಾ ಪ್ರವೀಣ” ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ.
  • ಕೇರಳದ ನೀಲೇಶ್ವರ (ಇವರ ಹುಟ್ಟೂರು) ಪ್ರಜೆಗಳು 'ಶ್ರೀ ವಿ.ಸಿ. ಕೇರಳವರ್ಮ ವಲಿಯರಾಜ'ರಿಂದ ಚಿನ್ನದ ತೋದಾ ತೊಡಿಸಿ ’ನಾಟ್ಯ ಶ್ರಿ’ ಬಿರುದಿನೊಂದಿಗೆ ಸನ್ಮಾನಿಸಿದ್ದಾರೆ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಪ್ರಶಸ್ತಿಯೊಂದಿಗೆ ’ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ನೀಡಿ ಗೌರವಿಸಿದೆ.

ಉಲ್ಲೇಖಗಳು[ಬದಲಾಯಿಸಿ]

  1. 'ಡೆಕ್ಕನ್ ಹೆರಾಲ್ಡ್', 'Activities at a glance' 24 December, 2010

ಬಾಹ್ಯ ಸಂಪರ್ಕಗಳು[ಬದಲಾಯಿಸಿ]