ಕೃಷಿ ಮತ್ತು ಹವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹವೆಯ ಏರಿಳಿತಗಳಿಂದ ಕೃಷಿಯ ಮೇಲಾಗುವ ಪರಿಣಾಮಗಳನ್ನು (ಭಾರತ ಪರ್ಯಾಯ ದ್ವೀಪಕ್ಕೆ ಅನ್ವಯಿಸುವಂತೆ) ಈ ಲೇಖನದಲ್ಲಿ ಚರ್ಚಿಸಿದೆ.ವಾತಾವರಣದ ಉಷ್ಣತೆ, ಮಳೆ ಮತ್ತು ಗಾಳಿ-ಇವುಗಳ ಸ್ಥಿತಿಗೆ ಒಟ್ಟಾಗಿ ಹವೆ (ವೆದರ್) ಎಂದು ಹೆಸರು. ಹವೆಯ ಮುನ್ಸೂಚನೆ, ವಾತಾವರಣದ ಚಲನೆ ಮುಂತಾದವನ್ನು ಅಭ್ಯಸಿಸುವ ಶಾಸ್ತ್ರ ಪವನವಿಜ್ಞಾನ ಅಥವಾ ಹವಾವಿಜ್ಞಾನ (ಮೀಟಿಯರಾಲಜಿ). ಒಂದು ನಿರ್ದಿಷ್ಟಪ್ರದೇಶದ ದೀರ್ಘಕಾಲದ ಹವೆಯನ್ನು ಕುರಿತ ಅಂಕಿ ಅಂಶಗಳ ಗುಣಗಳೇ ಅಲ್ಲಿನ ವಾಯುಗುಣ (ಕ್ಲೈಮೇಟ್). ಈ ಅಂಶಗಳ ವೈಜ್ಞಾನಿಕ ಅಧ್ಯಯನ ವಾಯುಗುಣವಿಜ್ಞಾನ (ಕ್ಲೈಮೆಟಾಲಜಿ).ಭಾರತದಲ್ಲಿ ಕೃಷಿ ಪ್ರಧಾನವಾಗಿ ಮಾನ್‍ಸೂನ್ ಮಳೆಯನ್ನು (ಹಿಂದೂ ಸಾಗರದಲ್ಲಿ ಬೀಸುವ ಒಂದು ಕ್ಲುಪ್ತ ಮಾರುತಕ್ಕೆ ಮಾನ್‍ಸೂನ್ ಎಂದು ಹೆಸರು. ಬೇಸಗೆಯಲ್ಲಿ ನೈಋತ್ಯದಿಂದಲೂ ಚಳಿಗಾಲದಲ್ಲಿ ಈಶಾನ್ಯದಿಂದಲೂ ಇದು ಬೀಸುತ್ತದೆ) ಅವಲಂಬಿಸಿದೆ. ಈ ಮಳೆ ದೇಶದ ಹವೆಯನ್ನೂ ಹವೆ ದೇಶದ ಭೌತವಿನ್ಯಾಸವನ್ನೂ ನಿಕಟವಾಗಿ ಹೊಂದಿಕೊಂಡಿರುವುದರಿಂದ ಇವೆಲ್ಲ ಅಂಶಗಳ ಸಮಗ್ರ ಅಧ್ಯಯನದಿಂದ ಮಾತ್ರ ಕೃಷಿಯ ಮೇಲೆ ಹವೆಯ ಪರಿಣಾಮಗಳನ್ನು ತಿಳಿದುಕೊಳ್ಳಬಹುದು. ಹಾಗೂ ಕೃಷಿಯ ಭವಿಷ್ಯವನ್ನು ರೂಪಿಸಬಹುದು.[೧]

ಭಾರತದ ಭೌತ ಹಾಗೂ ವಾಯುಗುಣ ಲಕ್ಷಣಗಳು[ಬದಲಾಯಿಸಿ]

ಚಿತ್ರ 1 ರಲ್ಲಿ ಭಾರತ ಉಪಖಂಡದ ಮೇಲೆ ಬೀಳುವ ಪ್ರಸಾಮಾನ್ಯ (ನಾರ್ಮಲ್) ವಾರ್ಷಿಕ ಮಳೆಯ ವಿತರಣೆಯನ್ನು ನೋಡಬಹುದು. ಅತ್ಯಧಿಕ ಮಳೆ ಬೀಳುವ ಪ್ರದೇಶಗಳೆಂದರೆ ಪಶ್ಚಿಮ ಘಟ್ಟಗಳ ಗಾಳಿಕಡೆಗಿರುವ ಭಾಗಗಳು, ಅಸ್ಸಾಮಿನ ಬೆಟ್ಟಗಳು ಹಾಗೂ ಹಿಮಾಲಯ ಸಾಲುಗಳು. ದೇಶದ ಪ್ರಧಾನ ನದೀ ವ್ಯವಸ್ಥೆಗಳು ಉಗಮಿಸುವುದು ಈ ಜಲಾನಯನ ಪ್ರದೇಶಗಳಲ್ಲಿ. ದಖ್ಖಣದ ಪೀಠಭೂಮಿಯಲ್ಲಿ, ಗಂಗಾ ಬಯಲುಗಳಲ್ಲಿ ಹಾಗೂ ಕರ್ಣಾಟಕದ ಬಯಲುಗಳಲ್ಲಿ ಪರ್ವತಗಳಿಂದ ಉಂಟಾಗುವ ಪರಿಣಾಮಗಳು ಅತ್ಯಲ್ಪ, ಇಲ್ಲವೇ ಇಲ್ಲ ಎಂದರೂ ಸಲ್ಲುವುದು. ಅಲ್ಲದೇ ಇಲ್ಲಿ ಮಳೆ ಬಲು ಕಡಿಮೆ. ವಾಯುವ್ಯ ದಿಕ್ಕಿನಲ್ಲಿರುವ ಪಂಜಾಬ್ ಹಾಗೂ ರಾಜಸ್ಥಾನ ಮತ್ತು ಅವುಗಳ ಉತ್ತರಕ್ಕೂ ಪಶ್ಚಿಮಕ್ಕೂ ಒತ್ತಾಗಿರುವ ತಟ್ಟುಗಳು ಮಳೆಯ ದೃಷ್ಟಿಯಿಂದ ಭಾರತದ ಅತ್ಯಂತ ಒಣಪ್ರದೇಶಗಳು.ಭಾರತ ಪರ್ಯಾಯ ದ್ವೀಪದ ವಿವಿಧ ಮಳೆಯ ಉಪವಿಭಾಗಗಳಲ್ಲಿ ವರ್ಷದ ಬೇರೆ ಬೇರೆ ಶ್ರಾಯಗಳಲ್ಲೂ ಇಡೀ ವರ್ಷದಲ್ಲೂ ಬೀಳುವ ಪ್ರಸಾಮಾನ್ಯ ಮಳೆಯ ವಿವರಗಳನ್ನು ಕೋಷ್ಟಕ 1 ರಲ್ಲಿ ಕೊಟ್ಟಿದೆ.ಉತ್ತರದಲ್ಲಿ ಕಾಶ್ಮೀರ, ವಾಯವ್ಯ ಸರಹದ್ದಿನ ಪ್ರಾಂತ್ಯಗಳು ಹಾಗೂ ಬಲೂಚಿಸ್ತಾನ ಮತ್ತು ದಕ್ಷಿಣದಲ್ಲಿ ಆಗ್ನೇಯ ತಮಿಳುನಾಡು ಇವುಗಳ ಹೊರತಾಗಿ ಮಿಕ್ಕ ಪ್ರದೇಶಗಳಲ್ಲಿ ಬೀಳುವ ಮಳೆಯ ಅತ್ಯಧಿಕಾಂಶ ಜೂನ್‍ನಿಂದ ಸೆಪ್ಟೆಂಬರ್ ವರೆಗಿನ ನೈಋತ್ಯ ಮಾನ್‍ಸೂನ್ ಶ್ರಾಯದಲ್ಲಿ ಆಗಿದೆ ಎಂಬುದು ಸ್ಪಷ್ಟ. ಅತಿ ಉತ್ತರದಲ್ಲಿ ಮಳೆಯ ಅಧಿಕಾಂಶ ಚಳಿಗಾಲದ ಹಿಮಪಾತವಾಗಿಯೋ ಅವಸಾದನವಾಗಿಯೋ ಕೆಡೆದರೆ ಆಗ್ನೇಯ ತಮಿಳು ನಾಡಿನಲ್ಲಿ ವಾರ್ಷಿಕ ಮಳೆಯ ಸುಮಾರು ಅರ್ಧದಷ್ಟು ಮಾನ್‍ಸೂನ್-ಉತ್ತರ ಅಥವಾ ಹಿಂಗಾರು ಮಳೆಯ ಅವಧಿಯಲ್ಲಿ (ಸೆಪ್ಟೆಂಬರಿನ ಅನಂತರ) ಸುರಿಯುತ್ತದೆ.[೨]

ಜೂನಿನ ತರುಣದಲ್ಲಿ ಪ್ರಾರಂಭವಾಗಿ ಜೂನ್ ಮತ್ತು ಜುಲೈಗಳಲ್ಲಿ ಭಾರತ ಉಪಖಂಡದಲ್ಲಿ ವ್ಯಾಪಿಸಿ ಸೆಪ್ಟೆಂಬರ್ ಮತ್ತು ಅಕ್ಟೋಬರಿನಲ್ಲಿ ಕೋಷ್ಟಕ 1[ಬದಲಾಯಿಸಿ]

ಭಾರತದ 30 ಮಳೆ ಉಪವಿಭಾಗಗಳಲ್ಲಿ ಶ್ರಾಯದ ಪ್ರಸಾಮಾನ್ಯ ಮಳೆ ಸುರಿತ (ಇಂಚುಗಳಲ್ಲಿ)

ಉಪವಿಭಾಗ ಚಳಿಗಾಲ ಡಿಸೆಂಬರ್ ಬೇಸಿಗೆ ಅಥವಾ ಮಾನ್ ಮಳೆಗಾಲ ಮಾನ್‍ಸೂನ್ ವಾರ್ಷಿಕ ನಿಂದ ಫೆಬ್ರವರಿವರೆಗೆ ಸೂನ್-ಪೂರ್ವಮಾರ್ಚಿ ಜೂನ್‍ನಿಂದ ಉತ್ತರ ಅಕ್ಟೊಬರ್ ಯಿಂದ ಮೇ ವರೆಗೆ ಸೆಪ್ಟಂಬರ್ ನಿಂದ ನವೆಂಬರ್ ವರೆಗೆ ವರೆಗೆ

1 2 3 4 5 6

ಅಸ್ಸಾಂ 2.38 (2.4) 25.06 (25.7) 64.26 (65.8) 5.96 (6.1) 97.66 ಬಂಗಾಳ 1.53 (2.0) 12.42 (16.5) 56.01 (74.5) 5.17 (6.9) 75.13 ಒರಿಸ್ಸ 1.82 (3.2) 5.62 (9.9) 44.49 (78.2) 4.98 (8.8) 56.91 ಛೋಟಾ ನಾಗಪುರ 2.57 (5.0) 3.64(7.1) 42.71 (83.4) 2.26 (4.4) 51.18 ಬಿಹಾರ್ 1.41 (2.9) 3.30 (6.8) 40.96 (85.0) 2.54 (5.3) 48.21 ಪೂರ್ವ ಉತ್ತರಪ್ರದೇಶ 1.53 (3.9) 1.12 (2.9) 34.44 (88.0) 2.04 (5.2) 39.13 ಪಶ್ಚಿಮ ಉತ್ತರಪ್ರದೇಶ 2.27 (6.0) 1.36 (3.6) 32.98 (87.8) 0.97 (2.6) 37.58 ಪೂರ್ವ & ಉತ್ತರಪಂಜಾಬ್ 2.76 (11.9) 1.89 (8.1) 18.23 (78.4) 0.37 (1.6) 23.25 ನೈಋತ್ಯಪಚಿಜಾಬ್1.28 (13.7) 1.36 (14.9) 6.58 (70.4) 0.13 (1.4) 9.35 ಕಾಶ್ಮೀರ 9.12 (22.1) 9.09 (22.0) 22.19 (53.7) 0.94 (2.3) 41.34 ವಾಯುವ್ಯ ಸರ ಹದ್ದಿನಪ್ರಾಂತ್ಯಗಳು 3.36 (20.0) 4.18 (24.9) 8.65 (51.5) 0.62 (3.7) 16.81 ಬಲೂಚಿಸ್ತಾನ್ 3.50 (45.6) 2.03 (26.4) 1.89 (24.6) 0.26 (3.4) 7.68 ಸಿಂಧ್ 0.67 (10.4) 0.41 (6.4) 5.28 (82.4) 0.08 (1.2) 6.44 ಪಶ್ಚಿಮರಾಜಸ್ಥಾನ್ 0.62 (4.8) 0.56 (4.3) 11.74 (90.0) 0.12 (0.9) 13.04 ಪೂರ್ವರಾಜಸ್ಥಾನ್ 0.96 (3.8) 0.78 (3.1) 22.91 (90.9) 0.55 (2.2) 25.20 ಗುಜರಾತ್ 0.22 (0.7) 0.24 (0.7) 31.46 (96.2) 0.77 (2.4) 32.69 ಪಶ್ಚಿಮ ಮಧ್ಯಭಾರತ 0.85 (2.5) 0.47 (1.4) 31.56 (93.8) 0.75 (2.2) 33.63 ಪೂರ್ವ ಮಧ್ಯಭಾರತ 1.44 (3.7) 0.79 (2.4) 35.05 (90.9) 1.30 (3.4) 38.58 ಬಿರಾರ್ 1.01 (3.1) 0.96 (3.0) 28.10 (87.4) 2.07 (6.4) 32.14 ಪಶ್ಚಿಮ ಮಧ್ಯಪ್ರಾಂತಗಳು 1.47 (3.2) 1.14 (2.5) 41.04 (90.4) 1.76 (3.9) 45.41 ಪೂರ್ವ ಮಧ್ಯಪ್ರಾಂತಗಳು 1.58 (3.0) 2.10 (4.0) 46.37 (89.1) 1.99 (3.8) 52.04 ಕೊಂಕಣ 0.28 (0.3) 1.85 (1.7) 102.45 (93.7) 4.75(4.3) 109.33 ಮುಂಬೈದಖ್ಖನ್ 0.51 (1.7) 2.13 (6.9) 24.41 (79.1) 3.82 (12.4) 30.87 ಉತ್ತರ ಹೈದರಾಬಾದ್ 0.67 (1.9) 1.53 (4.4) 29.51 (84.5) 3.20 (9.2) 34.91 ದಕ್ಷಿಣ ಹೈದರಾಬಾದ್ 0.57 (1.9) 2.10 (7.0) 23.38 (78.1) 3.88 (13.0) 29.93 ಮೈಸೂರು 0.73 (2.0) 5.47 (15.2) 22.27 (61.8) 7.54 (20.9) 36.01 ಮಲಬಾರ್ 2.73 (2.6) 12.61 (12.2) 71.47 (68.9) 16.93 (16.3) 103.74 ಆಗ್ನೇಯ ತಮಿಳುನಾಡು 4.76 (13.6) 4.53 (12.9) 12.01 (34.2) 13.80 (39.3) 35.10 ತಮಿಳುನಾಡು ದಖ್ಖನ್ 0.74 (3.0) 2.42 (9.9) 15.27 (62.3) 0.09 (24.8) 24.52 ಉತ್ತರ ತಮಿಳು ನಾಡು ಕರಾವಳಿ 1.69 (4.2) 3.44 (8.9) 25.03 (62.3) 10.00 (25.9) 40.16 (2) ರಿಂದ (5) ರವರೆಗಿನ ನೀಟ ಸಾಲುಗಳಲ್ಲಿ ಆವರಣಗಳ ಒಳಗೆ ಇರುವ ಸಂಖ್ಯೆಗಳು ವಾರ್ಷಿಕ ಮಳೆಯನ್ನು ಕುರಿತಂತೆ ಆಯಾ ಶ್ರಾಯದಲ್ಲಿ ಬೀಳುವ ಮಳೆಯ ಶೇಕಡ ಪ್ರಮಾಣಗಳನ್ನು ಸೂಚಿಸುತ್ತವೆ.ದಕ್ಷಿಣಾಭಿಮುಖವಾಗಿ ನಿಷ್ಕ್ರಮಿಸುವ ಮಾನ್‍ಸೂನಿನ ಜೊತೆಗೆ ಆವರ್ತಮಾರುತ ಜನ್ಯ ಬಿರುಗಾಳಿಗಳೂ ಸಮುದ್ರಗಳಲ್ಲಿ ತಲೆದೋರುವ ಒತ್ತಡಕುಸಿತಗಳೂ ಭಾರತದ ಹವೆಯ ಮೇಲೆ ಪರಿಣಾಮಕಾರೀ ಪ್ರಭಾವವನ್ನು ಬೀರುತ್ತವೆ. ಇವನ್ನು ಮುಂದೆ ಸಂಕ್ಷೇಪವಾಗಿ ವಿವರಿಸಿದೆ.


ಪೂರ್ವದಿಕ್ಕಿನ ಅಥವಾ ಮಾನ್‍ಸೂನ್ ಒತ್ತಡ ಕುಸಿತಗಳು[ಬದಲಾಯಿಸಿ]

ಮಾನ್‍ಸೂನಿನ ತೀವ್ರತೆಯಲ್ಲಿನ ಏರಿಳಿತಗಳು ಹೆಚ್ಚಾಗಿ ಬಂಗಾಳ ಆಖಾತದ ಶಿರದಲ್ಲಿ ತಲೆದೋರುವ ಒತ್ತಡ ಕುಸಿತಗಳನ್ನು ಅವಲಂಬಿಸಿವೆ. ಇವು ಇನ್ನಷ್ಟು ಪೂರ್ವವಲಯದಿಂದ ಬಂದು ಬಂಗಾಳ ಆಖಾತವನ್ನು ಸೇರಿ ಅಲ್ಲಿನ ಕುಸಿತಗಳನ್ನು ಪುಷ್ಟಿಗೊಳಿಸಬಹುದು. ಅಲ್ಲಿಂದ ಅವು ವಾಯುವ್ಯ ದಿಕ್ಕಿಗಭಿಮುಖವಾಗಿ ಸಾಗಿ ದೇಶದ ಅಡ್ಡಕ್ಕೂ ಹಾಯುತ್ತ ವಾಯುವ್ಯ ಭಾರತವನ್ನು ತಲುಪುತ್ತವೆ. ಸಂಚಾರಪಥದ ಉದ್ದಕ್ಕೂ ಅವು ಮಳೆಸುರಿಸುವುದು ವಾಡಿಕೆ. ಮಾನ್‍ಸೂನ್ ಶ್ರಾಯದಲ್ಲಿ (ಜೂನ್‍ನಿಂದ ಸೆಪ್ಟೆಂಬರ್) ಇಂಥ ಕುಸಿತಗಳ ಆವೃತ್ತಿ ತಿಂಗಳೊಂದರ 3 ರಿಂದ 4. ಒತ್ತಡ ಕುಸಿತಗಳ ಆವೃತ್ತಿ ಬಲು ಕೆಳಮಟ್ಟಕ್ಕೆ ಬರುವ ಕೆಲವು ತಿಂಗಳುಗಳಲ್ಲಿ ಮಾನ್‍ಸೂನಿನ ಮಳೆಸುರಿತ ಪರ್ವತೀಯವಾಗುವುದುಂಟು. ಎಂದರೆ ಆಗ ಮಳೆ ಬೆಟ್ಟಗುಡ್ಡಗಳ ಇಳಿಜಾರು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಉತ್ತರ ಹಾಗೂ ಮಧ್ಯ ಭಾರತದ ಬಯಲುಗಳಲ್ಲಿ ಮಳೆಯ ಸಮುಚಿತ ಪ್ರಾದೇಶಿಕ ವಿತರಣೆಯನ್ನು ಸಾಧಿಸುವಲ್ಲಿ ಈ ಒತ್ತಡಕುಸಿತಗಳ ಪಾತ್ರ ಪ್ರಧಾನವಾದದ್ದು.

ಪಶ್ಚಿಮದ ಒತ್ತಡಕುಸಿತಗಳು[ಬದಲಾಯಿಸಿ]

ನವೆಂಬರ್-ಮೇ ಅವಧಿಯಲ್ಲಿ ಒತ್ತಡ ಕುಸಿತಗಳ ಒಂದು ಶ್ರೇಣಿಯೇ ಪಶ್ಚಿಮ ವಲಯದಲ್ಲಿ ತೊಡಗಿ ವಾಯುವ್ಯ ಸರಹದ್ದು ಹಾಗೂ ಬಲೂಚಿಸ್ತಾನ ಪ್ರದೇಶಗಳ ಮೂಲಕ ಭಾರತ ಉಪಖಂಡವನ್ನು ಪ್ರವೇಶಿಸುತ್ತದೆ. ಇದು ಉತ್ತರ ಭಾರತದಲ್ಲಿ ಪೂರ್ವದಿಗಭಿಮುಖವಾಗಿ ಚಲಿಸುತ್ತ ಅಸ್ಸಾಂ ಮತ್ತು ಬಂಗಾಳ ಪ್ರದೇಶವನ್ನು ತಲುಪುವುದು. ಈ ಕುಸಿತಗಳ ಪರಿಣಾಮವಾಗಿ ಬಯಲುಗಳಲ್ಲಿ ಮೋಡಮುಸುಕಿದ ಹವೆಯೂ ಹಿಮಾಲಯ ಪ್ರದೇಶದಲ್ಲಿ ಹಿಮಪಾತವೂ ಉಂಟಾಗುತ್ತವೆ. ಪ್ರತಿಯೊಂದು ಕುಸಿತವೂ ಪೂರ್ವಾಭಿಮುಖವಾಗಿ ಚಲಿಸುತ್ತಿದ್ದಂತೆ ಅದರ ಹಾದಿಯಲ್ಲಿ ಶೈತ್ಯತರಂಗಗಳನ್ನು ಎಬ್ಬಿಸುತ್ತ ಹೋಗುವುದು. ಸರಾಸರಿಯಾಗಿ ಹೇಳುವುದಾದರೆ ನವೆಂಬರಿನಲ್ಲಿ 2, ಡಿಸೆಂಬರಿನಿಂದ ಏಪ್ರಿಲ್‍ವರೆಗೆ ತಲಾ 4 ರಿಂದ 5 ಮತ್ತು ಮೇಯಲ್ಲಿ ಸುಮಾರು 2 ಒತ್ತಡಕುಸಿತಗಳು ತಲೆದೋರುತ್ತವೆ.

ಆವರ್ತಮಾರುತಜನ್ಯ ಬಿರುಗಾಳಿಗಳು[ಬದಲಾಯಿಸಿ]

ಸಾಮಾನ್ಯವಾಗಿ ಏಪ್ರಿಲ್-ಜೂನ್ ಮತ್ತು ಅಕ್ಟೋಬರ್-ಡಿಸೆಂಬರ್ ಮಧ್ಯಾಂತರ ಅವಧಿಗಳಲ್ಲಿ ತೀವ್ರ ಆವರ್ತಮಾರುತಜನ್ಯ ಬಿರುಗಾಳಿಗಳು ಬಂಗಾಳ ಆಖಾತದಲ್ಲೂ ಅರೇಬಿಯನ್ ಸಮುದ್ರದಲ್ಲೂ ಹುಟ್ಟುತ್ತವೆ. ಅವು ಒಳನಾಡನ್ನು ನುಗ್ಗಿ ಸಾಕಷ್ಟು ಉತ್ಪಾತವನ್ನು ಉಂಟುಮಾಡುವುವು. ಪ್ರಬಲಗಾಳಿ ಸಮೇತವಾದ ಬಿರುಮಳೆ ಬೆಳೆಗಳಿಗೂ ಹಣ್ಣು ಹಂಪಲ ತೋಟಗಳಿಗೂ ಅತಿನಷ್ಟಕಾರಿ. ಕರಾವಳಿ ಪ್ರದೇಶದಲ್ಲಿ ಭೀಕರ ತರಂಗಗಳೆದ್ದು ಜನ ಮತ್ತು ಸಂಪತ್ತನ್ನು ನಾಶಮಾಡುವುದುಂಟು. ಸರಾಸರಿಯಾಗಿ ಹೇಳುವುದಾದರೆ ಮಾನ್‍ಸೂನ್-ಪೂರ್ವ ಅವಧಿಯಲ್ಲಿ 1 ರಿಂದ 2 ಮತ್ತು ಮಾನ್‍ಸೂನ್-ಉತ್ತರ ಅವಧಿಯಲ್ಲಿ 2 ರಿಂದ 3 ತೀವ್ರ ಆವರ್ತಮಾರುತಗಳು ಜನಿಸುತ್ತವೆ.

ನೈಋತ್ಯ ಮಾನ್‍ಸೂನಿನ ಬಗೆಗೆ ಹೆಚ್ಚಿನ ವಿವರಗಳು[ಬದಲಾಯಿಸಿ]

ಭಾರತ ಉಪಖಂಡದ ಹವೆಯ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿ ಇಲ್ಲಿನ ಬೆಳೆಯ ವಾರ್ಷಿಕ ಉತ್ಪನ್ನದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುವ ನೈಋತ್ಯ ಮಾನ್‍ಸೂನ್ ಈ ದೇಶದ ಹವಾವಿಜ್ಞಾನದಲ್ಲಿ ಒಂದು ಪ್ರಮುಖ ವಿದ್ಯಮಾನ. ಆದ್ದರಿಂದ ಅದರ ಕೆಲವು ಲಕ್ಷಣಗಳನ್ನು ನಾವು ತಿಳಿಯುವುದು ಉಚಿತವಾಗಿದೆ.

1. ಮಾನ್‍ಸೂನಿನ ಪ್ರಾರಂಭ[ಬದಲಾಯಿಸಿ]

ಮಾನ್‍ಸೂನಿನ ಸಕಾಲಿಕ ಆರಂಭವನ್ನು ರೈತ ಕುತೂಹಲ ಹಾಗೂ ಕಳವಳಗಳಿಂದ ಕಾಯುತ್ತಿರುತ್ತಾನೆ. ಈ ಮಳೆ ಇಡೀ ಶ್ರಾಯದಲ್ಲಿ ಸಮರ್ಪಕವಾಗಿ ಬೀಳಬೇಕು ಎಂದು ಅವನ ಹಂಬಲ. ಭಾರತದ ವಿವಿಧ ಪ್ರದೇಶಗಳಲ್ಲಿ ಮಾನ್‍ಸೂನ್ ಸಾಮಾನ್ಯವಾಗಿ ಆರಂಭವಾಗುವ ಮತ್ತು ಅಂತ್ಯವಾಗುವ ತಾರೀಖುಗಳನ್ನು ಅನುಕ್ರಮವಾಗಿ ಚಿತ್ರ 2 ಮತ್ತು 3 ರಲ್ಲಿ ಕಾಣಿಸಿದೆ. ಒಂದು ಸ್ಥಳದಲ್ಲಿ ಮಳೆಗಾಲ ಖಚಿತವಾಗಿ ಆರಂಭವಾಗುವ ದಿವಸ ಹಾಗೂ ಮಳೆಗಾಲದಲ್ಲಿ ಅಲ್ಲಿ ಬೀಳುವ ಮಳೆಯ ಮೊತ್ತ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಪಶ್ಚಿಮ ಕರಾವಳಿಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ವಾಸ್ತವಿಕವಾಗಿ ಮಳೆಗಾಲ ಆರಂಭವಾದ ತಾರೀಖುಗಳನ್ನು ಹಲವಾರು ವರ್ಷಗಳಿಗೆ ಅನ್ವಯಿಸುವಂತೆ ಕೋಷ್ಟಕ 2 ರಲ್ಲಿ ಬರೆದಿದೆ. ಉಪಖಂಡದ ನೈರುತ್ಯ ಕೊನೆಯಾದ ತಿರುವಾಂಕೂರು-ಕೊಚ್ಚಿ ಪ್ರದೇಶದಿಂದ ಉತ್ತರದಲ್ಲಿ ಮುಂಬಯಿ ಸಮೀಪದ ಕೊಲಾಬಕ್ಕೆ ಮಾನ್‍ಸೂನ್ ಸಾಗುವ ವೇಗದಲ್ಲಿ ಸಹ ಸಾಕಷ್ಟು ವಿಚಲನೆ ಇರುವುದನ್ನು ಈ ಅಂಕಿ ಅಂಶಗಳು ವ್ಯಕ್ತಪಡಿಸುತ್ತವೆ. ಕೋಷ್ಟಕ 2 ರಲ್ಲಿ ಕೊಟ್ಟಿರುವ ಮಾಹಿತಿಗಳ ಸಾರಾಂಶ ಕೋಷ್ಟಕ 3 ರಲ್ಲಿದೆ. ಕೃಷಿಗೆ ಸಂಬಂಧಿಸಿದ ಮುಖ್ಯ ಕ್ರಿಯೆಗಳನ್ನು ಮಾನ್‍ಸೂನ್ ಮಳೆಯ ಆರಂಭದಲ್ಲಿಯೇ ತೊಡಗಬೇಕಾದ್ದರಿಂದ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಾನ್‍ಸೂನಿನ ಪ್ರಾರಂಭದ ದಿವಸಗಳು, ಮಳೆಸುರಿಯುವ ದಿವಸಗಳು, ಮಳೆನಿಂತ ದಿವಸಗಳು ಇವೆಲ್ಲವನ್ನು ಕುರಿತ ಮುನ್ಸೂಚನೆಗಳು ರೈತರಿಗೆ ಬಲು ಮುಖ್ಯ ಮತ್ತು ಉಪಯುಕ್ತ ಮಾಹಿತಿಗಳು.

2. ಮಹಾಪೂರಗಳ ಹಾಗೂ ಅನಾವೃಷ್ಟಿಗಳ ಆವೃತ್ತಿ[ಬದಲಾಯಿಸಿ]

ಕೃಷಿ, ನೀರಾವರಿ ಕಾರ್ಯಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವಾಗ ನಮ್ಮ ಹಿಂದಿನ ಹವಾವಿಜ್ಞಾನದ ಚರಿತ್ರೆಯಿಂದ ಕಲಿತ ಪಾಠಗಳನ್ನು ಪರಿಶೀಲಿಸುವುದು ಯುಕ್ತ. ಭೂತಕಾಲದ ಎಷ್ಟು ಮಾನ್‍ಸೂನುಗಳು ಸಮೃದ್ಧ ಹಾಗೂ ಉಪಯುಕ್ತ, ಎಷ್ಟು ಭಾಗಶಃ ಉಪಯುಕ್ತ ಮತ್ತು ಎಷ್ಟು ಸಂಪೂರ್ಣ ವೈಫಲ್ಯಗಳು ಎಂಬುದನ್ನು ಈಗ ನೋಡೋಣ. ಇದಕ್ಕಾಗಿ ಭಾರತ ಉಪಖಂಡದ ಉಪವಿಭಾಗಗಳಲ್ಲಿ ಪ್ರತಿವರ್ಷವೂ ಇಡೀ ಮಾನ್‍ಸೂನ್ ಶ್ರಾಯದಲ್ಲಿ ಸುರಿಯುವ ಒಟ್ಟು ಮಳೆಯನ್ನು ನಾವು ಪರಿಶೀಲಿಸಬಹುದು. ಒಂದೊಂದುಕೋಷ್ಟಕ 2 ಭಾರತದ ಪಶ್ಚಿಮ ಕರಾವಳಿಯಲ್ಲಿ ನೈಋತ್ಯ ಮಾನ್‍ಸೂನಿನ ಪ್ರಾರಂಭ ತಾರೀಖು

ವರ್ಷ ತಿರುವಾಂಕೂರು -ಕೊಚ್ಚಿ ದ. ಕನ್ನಡ ರತ್ನಗಿರಿ ಕೊಲಾಬ 1 2 3 4 5 1891 ಮೇ 27 ಜೂನ್ 3 ಜೂನ್ 19 ಜೂನ್ 21 1892 ಮೇ 22 ಮೇ 24 ಮೇ 29 ಮೇ 31 1893 ಮೇ 22 ಜೂನ್ 4 ಜೂನ್ 10 ಜೂನ್ 10 1894 ಜೂನ್ 1 ಜೂನ್ 2 ಜೂನ್ 7 ಜೂನ್ 7 1895 ಜೂನ್ 8 ಜೂನ್ 12 ಜೂನ್ 14 ಜೂನ್ 15 1896 ಮೇ 30 ಮೇ 31 ಜೂನ್ 1 ಜೂನ್ 1 1897 ಮೇ 30 ಜೂನ್ 5 ಜೂನ್ 7 ಜೂನ್ 7 1898 ಜೂನ್ 2 ಜೂನ್ 3 ಜೂನ್ 8 ಜೂನ್ 8 1899 ಮೇ 23 ಜೂನ್ 7 ಜೂನ್ 9 ಜೂನ್ 10 1900 ಜೂನ್ 6 ಜೂನ್ 8 ಜೂನ್ 9 ಜೂನ್ 9 1901 ಜೂನ್ 1 ಜೂನ್ 4 ಜೂನ್ 7 ಜೂನ್ 7 1902 ಮೇ 31 ಜೂನ್ 6 ಜೂನ್ 7 ಜೂನ್ 12 1903 ಜೂನ್ 8 ಜೂನ್ 11 ಜೂನ್ 12 ಜೂನ್ 12 1904 ಮೇ 29 ಜೂನ್ 1 ಜೂನ್ 7 ಜೂನ್ 8 1905 ಜೂನ್ 6 ಜೂನ್ 8 ಜೂನ್ 9 ಜೂನ್ 10 1906 ಜೂನ್ 3 ಜೂನ್ 6 ಜೂನ್ 7 ಜೂನ್ 8 1907 ಮೇ 31 ಜೂನ್ 5 ಜೂನ್ 11 ಜೂನ್ 11 1908 ಜೂನ್ 8 ಜೂನ್ 10 ಜೂನ್ 11 ಜೂನ್ 11 1909 ಜೂನ್ 1 ಜೂನ್ 2 ಜೂನ್ 3 ಜೂನ್ 3 1910 ಮೇ 28 ಜೂನ್ 2 ಜೂನ್ 3 ಜೂನ್ 3 1911 ಜೂನ್ 1 ಜೂನ್ 2 ಜೂನ್ 4 ಜೂನ್ 4 1912 ಜೂನ್ 4 ಜೂನ್ 6 ಜೂನ್ 12 ಜೂನ್ 12 1913 ಮೇ 24 ಜೂನ್ 1 ಜೂನ್ 6 ಜೂನ್ 7 1914 ಮೇ 28 ಜೂನ್ 5 ಜೂನ್ 13 ಜೂನ್ 13 1915 ಜೂನ್ 3 ಜೂನ್ 12 ಜೂನ್ 17 ಜೂನ್ 18 1916 ಮೇ 26 ಮೇ 27 ಮೇ 31 ಜೂನ್ 1 1917 ಮೇ 26 ಮೇ 29 ಜೂನ್ 4 ಜೂನ್ 5 1918 ಮೇ 7 ಮೇ 15 ಮೇ 22 ಮೇ 25 1919 ಮೇ 16 ಮೇ 26 ಜೂನ್ 4 ಜೂನ್ 6 1920 ಮೇ 27 ಜೂನ್ 2 ಜೂನ್ 6 ಜೂನ್ 6 1921 ಜೂನ್ 1 ಜೂನ್ 3 ಜೂನ್ 10 ಜೂನ್ 12 1922 ಮೇ 25 ಮೇ 31 ಜೂನ್ 10 ಜೂನ್ 12 1923 ಜೂನ್ 4 ಜೂನ್ 11 ಜೂನ್ 12 ಜೂನ್ 13 1924 ಮೇ 31 ಜೂನ್ 3 ಜೂನ್ 10 ಜೂನ್ 12 1925 ಮೇ 27 ಮೇ 28 ಮೇ 29 ಮೇ 29 1926 ಮೇ 28 ಜೂನ್ 5 ಜೂನ್ 9 ಜೂನ್ 10 1927 ಮೇ 23 ಮೇ 27 ಜೂನ್ 10 ಜೂನ್ 7 1928 ಮೇ 31 ಮೇ 31 ಜೂನ್ 5 ಜೂನ್ 10 1929 ಮೇ 29 ಮೇ 30 ಜೂನ್ 1 ಜೂನ್ 6 1930 ಮೇ 21 ಜೂನ್ 7 ಜೂನ್ 8 ಜೂನ್ 9 1931 ಮೇ 23 ಮೇ 29 ಜೂನ್ 14 ಜೂನ್ 14 1932 ಮೇ 14 ಜೂನ್ 2 ಜೂನ್ 3 ಜೂನ್ 3 1933 ಮೇ 22 ಮೇ 28 ಜೂನ್ 1 ಜೂನ್ 1 1934 ಜೂನ್ 6 ಜೂನ್ 6 ಜೂನ್ 10 ಜೂನ್ 10 1935 ಜೂನ್ 10 ಜೂನ್ 10 ಜೂನ್ 12 ಜೂನ್ 14 1936 ಮೇ 28 ಮೇ 22 ಮೇ 29 ಜೂನ್ 1 1937 ಜೂನ್ 3 ಜೂನ್ 10 ಜೂನ್ 11 ಜೂನ್ 12 1938 ಜೂನ್ 1 ಜೂನ್ 2 ಜೂನ್ 2 ಜೂನ್ 4 1939 ಜೂನ್ 6 ಜೂನ್ 6 ಜೂನ್ 7 ಜೂನ್ 9 1940 ಜೂನ್ 7 ಜೂನ್ 13 ಜೂನ್ 16 ಜೂನ್ 18 1941 ಮೇ 23 ಜೂನ್ 3 ಜೂನ್ 14 ಜೂನ್ 16 1942 ಜೂನ್ 4 ಜೂನ್ 8 ಜೂನ್ 12 ಜೂನ್ 13 1943 ಮೇ 12 ಮೇ 14 ಮೇ 21 ಮೇ 21 1944 ಮೇ 17 ಮೇ 30 ಜೂನ್ 8 ಜೂನ್ 10 ಕೋಷ್ಟಕ 3


ಭಾರತದ ಪಶ್ಚಿಮ ಕರಾವಳಿಯಲ್ಲಿ ನೈಋತ್ಯ ಮಾನ್‍ಸೂನಿನ ಪ್ರಾರಂಭದ ತಾರೀಖು

ಪ್ರದೇಶ ಪ್ರಸಾಮಾನ್ಯ ಪ್ರಸಾಮಾನ್ಯ ಅತಿಮೊದಲ ಅತಿತಡವಾದ ತಾರೀಖು ವಿಚಲನೆ ತಾರೀಖು ತಾರೀಖು (ದಿವಸಗಳಲ್ಲಿ)

ತಿರುವಾಂಕುರು-ಕೊಚ್ಚಿ ಮೇ 29 7.0 ಮೇ 7 ಜೂನ್ 10 ದ. ಕನ್ನಡ ಜೂನ್ 3 5.7 ಮೇ 14 ಜೂನ್ 13 ರತ್ನಗಿರಿ ಜೂನ್ 7 5.4 ಮೇ 21 ಜೂನ್ 19 ಕೊಲಾಬ ಜೂನ್ 8 5.2 ಮೇ 21 ಜೂನ್ 21


ವಾರ್ಷಿಕ ಪ್ರಸಾಮಾನ್ಯ ಮಳೆಯ ಪರಿಮಾಣ[ಬದಲಾಯಿಸಿ]

ಮಳೆ ಉಪವಿಭಾಗದ ವಾರ್ಷಿಕ ಪ್ರಸಾಮಾನ್ಯ ಮಳೆಯ ಪರಿಮಾಣವನ್ನು (ಹಿಂದಿನ ಹಲವಾರು ವರ್ಷಗಳ ಸುರಿತಗಳ ಆಧಾರದಿಂದ) ಇಂತಿಷ್ಟೆಂದು ನಿಗದಿ ಮಾಡಿರುತ್ತಾರೆ. ಒಂದೊಂದು ವರ್ಷವೂ ಅಲ್ಲಿ ವಾಸ್ತವಿಕವಾಗಿ ಸುರಿಯುವ ಮಳೆಯನ್ನು ಈ ಪ್ರಸಾಮಾನ್ಯದೊಡನೆ ಹೋಲಿಸಿ ವಾರ್ಷಿಕ ವಿಚಲನೆಯನ್ನು (ಇವೆರಡರ ವ್ಯತ್ಯಾಸ) ನಿರ್ಧರಿಸುತ್ತಾರೆ. ಹಲವಾರು ವರ್ಷಗಳ ವಿಚಲನೆಗಳ ಪರಿಶೀಲನೆಯಿಂದ ವಾರ್ಷಿಕ ಸರಾಸರಿ ವಿಚಲನೆಯನ್ನು ಸಹ ನಿಗದಿ ಮಾಡಿರುತ್ತಾರೆ. ಯಾವುದೇ ವರ್ಷ ಒಂದು ಮಳೆ ಉಪವಿಭಾಗದಲ್ಲಿ ವಾಸ್ತವಿಕವಾಗಿ ಸುರಿದ ಮಳೆಯ ಮೊತ್ತ ಆ ಉಪವಿಭಾಗದ ಪ್ರಸಾಮಾನ್ಯ ಇವುಗಳ ವ್ಯತ್ಯಾಸ ಅದೇ ಸ್ಥಳದ ಸರಾಸರಿ ವಿಚಲನೆಯ ಎರಡರಷ್ಟಾದಾಗ, ವ್ಯತ್ಯಾಸ ಧನಾತ್ಮಕವಾಗಿದ್ದರೆ ಆ ವರ್ಷವನ್ನು ಮಹಾಪೂರದ ವರ್ಷವೆಂದೂ ಋಣಾತ್ಮಕವಾಗಿದ್ದರೆ ಆ ವರ್ಷವನ್ನು ಅನಾವೃಷ್ಟಿಯ ವರ್ಷವೆಂದೂ ವ್ಯಾಖ್ಯಿಸಲಾಗಿದೆ. 1875 ರಿಂದ 1951 ರವರೆಗಿನ ಮಹಾಪೂರ-ಅನಾವೃಷ್ಟಿ ವರ್ಷಗಳನ್ನು ಆಯ್ದ ಕೆಲವು ಪ್ರದೇಶಗಳಿಗೆ ಅನ್ವಯಿಸುವಂತೆ ಚಿತ್ರ 5 ರಲ್ಲಿ ತೋರಿಸಲಾಗಿದೆ. ಅಧಿಕ ಸಂಖ್ಯೆಯ ವರ್ಷಗಳನ್ನು ಪರಿಶೀಲಿಸುವಾಗ ಒಂದು ಉಪವಿಭಾಗದಲ್ಲಿನ ಮಹಾಪೂರಗಳ ಮತ್ತು ಅನಾವೃಷ್ಟಿಗಳ ಸಂಖ್ಯೆಗಳು ಪರಸ್ಪರ ಸಮವಾಗುವ ಒಲವನ್ನು ಪ್ರದರ್ಶಿಸುತ್ತವೆ. ಗರಿಷ್ಠ ಸಂಖ್ಯೆಯ ವೈಪರಿತ್ಯಗಳು (ಅಂದರೆ ಮಹಾಪೂರಗಳು ಮತ್ತು ಅನಾವೃಷ್ಟಿಗಳು) ತಲೆದೋರುವುದು ಬಲುಕಡಿಮೆ. ಮಳೆ ಬೀಳುವ ಪ್ರದೇಶಗಳಾದ ಬಲೂಚಿಸ್ತಾನ, ಸಿಂಧ್, ರಾಜಸ್ಥಾನ ಮುಂತಾದೆಡೆಗಳಲ್ಲಿ, ಮಾನ್‍ಸೂನಿನ ಮಳೆ 40”. ಅಥವಾ ಹೆಚ್ಚು ಸುರಿಯುವ ಕೊಂಕಣ, ಕೇರಳ, ಬಂಗಾಳ ಮುಂತಾದ ಪ್ರದೇಶಗಳಲ್ಲಿ ವೈಪರೀತ್ಯಗಳ ಸಂಖ್ಯೆ ತೀರ ಕನಿಷ್ಠ ಮಿತಿಗೆ ಇಳಿಯುತ್ತದೆ.

ಸಾರ್ವತ್ರಿಕ ಅನಾವೃಷ್ಟಿ[ಬದಲಾಯಿಸಿ]

1875 ರಿಂದ 1951 ರವರೆಗಿನ ಅವಧಿಯನ್ನು ಅವಲೋಕಿಸುವಾಗ 1877, 1899 ಮತ್ತು 1918 ಸಾರ್ವತ್ರಿಕ ಅನಾವೃಷ್ಟಿ ವರ್ಷಗಳಾಗಿ ಎದ್ದುನಿಲ್ಲುತ್ತವೆ. ಇಂಥ ದೇಶಾದ್ಯಂತ ಅನಾವೃಷ್ಟಿ ವರ್ಷಗಳು ಸುಮಾರು ಇಪ್ಪತ್ತು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತವೆ. ಮೇಲೆ ಬರೆದಿರುವ ಮೂರು ಸಾರ್ವತ್ರಿಕ ಅನಾವೃಷ್ಟಿ ವರ್ಷಗಳಲ್ಲಿಯೂ ದೇಶವಿಡೀ ಕ್ಷಾಮ ದುರ್ಭಿಕ್ಷಗಳನ್ನು ಅನುಭವಿಸಿದೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 1920 ಭಾಗಶಃ ಅನಾವೃಷ್ಟಿ ವರ್ಷ. ದೇಶದ ವಾಯುವ್ಯ ಮತ್ತು ಮಧ್ಯ ಪ್ರದೇಶಗಳಿಗೆ ಮಾತ್ರ ಇದು ವ್ಯಾಪಿಸಿತ್ತು. ದೇಶಾದ್ಯಂತ ಮಹಾಪೂರ ವರ್ಷಗಳು 1878, 1892 ಮತ್ತು 1917. ಕನಿಷ್ಠಪಕ್ಷ ಎರಡು ಸಂದರ್ಭಗಳಲ್ಲಿ - ಎಂದರೆ 1877, 1878 ಮತ್ತು 1917, 1918 ರಲ್ಲಿ - ಮಹಾಪೂರಗಳು ಮತ್ತು ಅನಾವೃಷ್ಟಿಗಳು ಪಕ್ಕಪಕ್ಕದ ವರ್ಷಗಳಲ್ಲಿ ತಲೆದೋರಿದುವು. ಇವುಗಳ ವಿತರಣೆಯಲ್ಲಿ ಯಾವೊಂದು ಕ್ರಮವಾಗಲಿ ನಿಯತಕಾಲಿಕತೆಯಾಗಲಿ ಇರುವುದಿಲ್ಲ. ಇದು ಹೇಗೂ ಇರಲಿ, ಯಾವುದೇ ಉಪವಿಭಾಗದಲ್ಲಿ ಒಂದು ಅನಾವೃಷ್ಟಿ ವರ್ಷದ ಬೆನ್ನಿಗೆ ಪುನಃ ಇನ್ನೊಂದು ಅನಾವೃಷ್ಟಿ ವರ್ಷ ಅಥವಾ ಒಂದು ಮಹಾಪೂರ ವರ್ಷದ ಬೆನ್ನಿಗೇ ಇನ್ನೊಂದು ಮಹಾಪೂರ ವರ್ಷ ಬರುವುದು ಅತಿ ವಿರಳ, ಅನಾವೃಷ್ಟಿ ಅಥವಾ ಮಹಾಪೂರ ತಲೆದೋರುವ ವರ್ಷಗಳಲ್ಲಿ ಆಯಾ ಪೀಡಿತ ಪ್ರದೇಶಗಳು ಬಲು ಕಡಿಮೆ ಮಳೆ ಬೀಳುವ ಅಥವಾ ಅತಿ ಹೆಚ್ಚು ಮಳೆಸುರಿಯುವ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿರುವುದನ್ನು ಸಹ ಚಿತ್ರ 5 ರಲ್ಲಿ ನೋಡಬಹುದು.

3. ಭಾರತದಲ್ಲಿ ಪ್ರತಿವರ್ಷದ ಸಾಪ್ತಾಹಿಕ ಮಳೆಯ ಮೊತ್ತ[ಬದಲಾಯಿಸಿ]

ಹಲವಾರು ವರ್ಷಗಳ ಸಾಲಿನಲ್ಲಿ ಮಾನ್‍ಸೂನ್ ಮಳೆಯ ಒಟ್ಟು ಸುರಿತವನ್ನು ಚಿತ್ರ 5 ರಲ್ಲಿ ಪರಿಶೀಲಿಸಲಾಗಿದೆ. ಈ ಮೊತ್ತ ಇಡೀ ಮಳೆಗಾಲದಲ್ಲಿ ಸುರಿದ ಮಳೆಗೆ ಒಂದು ಸಾಮಾನ್ಯ ಸೂಚ್ಯಂಕವಷ್ಟೆ. ಕೃಷಿಗೆ ಮಳೆಸುರಿತದ ಸಂಬಂಧವನ್ನು ತಿಳಿಯಲು ಈ ಮೊತ್ತ ಒಂದೊಂದು ವರ್ಷದ ಎಲ್ಲ ಶ್ರಾಯಗಳಲ್ಲೂ ವಾರದಿಂದ ವಾರಕ್ಕೆ ಹೀಗೆ ಹಂಚಿಹೋಗಿದೆ ಎಂಬುದನ್ನು ನೋಡಬೇಕು. ಇದಕ್ಕಾಗಿ ಭಾರತದ ಹವಾವಿಜ್ಞಾನ ಇಲಾಖೆ ಕ್ರಮವಾಗಿ ಪ್ರಕಟಿಸುವ ಸಾಪ್ತಾಹಿಕ ಹವಾವರದಿಗಳಲ್ಲಿ ಇರುವ ಮಳೆಯ ವಿವರಗಳನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ. ಒಂದೇ ಚಿತ್ರದಲ್ಲಿ ವಾಸ್ತವಿಕ ಮಳೆಸುರಿತವನ್ನು ಯಾವುದೇ ವರ್ಷದ 52 ವಾರಗಳಿಗೂ ನಿರೂಪಿಸುವ ವಿಧಾನ ಉಂಟು. ಅದನ್ನು ಭಾರತದ 30 ಮಳೆ ಉಪವಿಭಾಗಗಳಿಗೆ ಸಹ ಅನ್ವಯಿಸುತ್ತಾರೆ. ಪ್ರತಿಯೊಂದು ಉಪವಿಭಾಗಕ್ಕೂ ಪ್ರತಿವಾರಕ್ಕೂ ಎರಡು ಸಂಖ್ಯೆಗಳನ್ನು ಬರೆಯುತ್ತಾರೆ. ಮೇಲಿನ ಸಂಖ್ಯೆ ವಾಸ್ತವಿಕವನ್ನೂ ಕೆಳಗಿನ ಸಂಖ್ಯೆ ಪ್ರಸಾಮಾನ್ಯವನ್ನೂ ಸೂಚಿಸುವುವು. ವೈಪರೀತ್ಯಗಳನ್ನು ಇದೇ ಚಿತ್ರದಲ್ಲಿ ತೋರಿಸಲು ಅನುಕೂಲವಾಗುವಂತೆ ಅನಾವೃಷ್ಟಿ ಮತ್ತು ಮಹಾಪೂರಗಳನ್ನು ಈ ಕೆಳಗಿನಂತೆ ವ್ಯಾಖ್ಯಿಸುತ್ತಾರೆ : ವಾಸ್ತವಿಕ ಸಾಪ್ತಾಹಿಕ ಮಳೆ ಪ್ರಸಾಮಾನ್ಯ ಮಳೆ ಅರ್ಧಕ್ಕೆ ಸಮ ಅಥವಾ ಅದಕ್ಕಿಂತ ಕಡಿಮೆ ಆಗಿರುವ ವಾರಗಳು ಅನಾವೃಷ್ಟಿಗಳು ; ವಾಸ್ತವಿಕ ಸಾಪ್ತಾಹಿಕ ಮಳೆ ಪ್ರಸಾಮಾನ್ಯ ಮಳೆಯ ಎರಡರಷ್ಟಕ್ಕೆ ಸಮ ಅಥವಾ ಅದಕ್ಕಿಂತ ಹೆಚ್ಚು ಆಗಿರುವ ವಾರಗಳು ಮಹಾಪೂರಗಳು. ಇವನ್ನು ಅನುಕ್ರಮವಾಗಿ, ಬೇರೆ ಬೇರೆ ಸಂಕೇತಗಳಿಂದ ತೋರಿಸುತ್ತಾರೆ.

ಆದರ್ಶ ವರ್ಷಗಳು[ಬದಲಾಯಿಸಿ]

ಮಳೆಗಾಲದಲ್ಲಿ ಅನಾವೃಷ್ಟಿಗಳಾಗಲೀ ಮಹಾಪೂರಗಳಾಗಲೀ ಇಲ್ಲದಿರುವ ವರ್ಷಗಳ ಹೆಸರು ಆದರ್ಶ ವರ್ಷಗಳು. ಕೃಷಿ ಉತ್ಪನ್ನದ ಯಶಸ್ಸು ಶ್ರಾಯದಲ್ಲಿ ಸುರಿಯುವುದು ಮಳೆಯ ಒಟ್ಟು ಪರಿಮಾಣವನ್ನು ಅವಲಂಬಿಸಿರುವುದರ ಜೊತೆಗೆ ಸಕಾಲಿಕತೆಯನ್ನೂ ಸಮುಚಿತ ಪ್ರದೇಶ ವಿತರಣೆಯನ್ನೂ ಅವಲಂಬಿಸಿದೆ. ಅವು ಪ್ರಸಾಮಾನ್ಯ (ಪ್ರಸಾಮಾನ್ಯಕ್ಕಿಂತ ಕೆಳಗಿನ ಮಟ್ಟದ) ಮಳೆಯಾದರೂ ಸಮರ್ಪಕವಾಗಿ ಹಂಚಿಹೋಗಿದ್ದರೆ ಅದರಿಂದ ಒಳ್ಳೆ ಫಸಲಿನ ಉತ್ಪಾದನೆ ಆಗಬಲ್ಲದು. ಹಲವಾರು ವರ್ಷಗಳ ಅಂಕಿಅಂಶಗಳನ್ನು ಪರಿಶೀಲಿಸುವಾಗ ಅಲ್ಪಕಾಲದ ಅನಾವೃಷ್ಟಿ ಮತ್ತು ಮಹಾಪೂರ ತಲೆದೋರುವುದನ್ನೂ ಅವುಗಳಿಂದ ಶ್ರಾಯದ ಒಟ್ಟು ಮಳೆ ಮೇಲೆ ಏನೂ ಪ್ರಭಾವ ಆಗದಿರುವುದನ್ನೂ ನೋಡುತ್ತೇವೆ. 5, 10 ಅಥವಾ 20 ವರ್ಷಗಳಿಗೊಮ್ಮೆ ಅನಾವೃಷ್ಟಿ ಮಹಾಪೂರ ಹಲವಾರು ವಾರಗಳ ಕಾಲ ಸತತವಾಗಿ ಒಂದು ಪ್ರದೇಶದಲ್ಲಿ ಹಬ್ಬಿರಬಹುದು. ಸಸ್ಯಗಳ ಬೆಳವಣಿಗೆ ಅವಧಿಕ ಘಟ್ಟಗಳಲ್ಲಿ ತಲೆದೋರುವ ಇಂಥ ಸುದೀರ್ಘ ವೈಪರೀತ್ಯಗಳು ಬೆಳೆಗಳ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಬಲ್ಲವು.ಸ್ಥೂಲವಾಗಿ ಹೇಳುವುದಾದರೆ ಈಶಾನ್ಯಭಾರತದ ಆದ್ರ್ರಪಟ್ಟಿಗಳಲ್ಲೂ ತಿರುವಾಂಕೂರು-ಕೊಚ್ಚಿ ಮಲಬಾರ್ ಕರಾವಳಿಯ ಉದ್ದಕ್ಕೂ ಎರಡು ಮಳೆಗಾಲಗಳೂ ಒಂದರೊಳಗೆ ಇನ್ನೊಂದು ಸೇರಿಕೊಂಡು ಸಾಕಷ್ಟು ದೀರ್ಘಕಾಲದ ಥಂಡಿಕಾಲವನ್ನು ಸೃಜಿಸುತ್ತವೆ. ಇದಾದ ತರುವಾಯ ಅಲ್ಪಾವಧಿಯ ಶುಷ್ಕಶ್ರಾಯ ಬರುತ್ತದೆ. ಭಾರತದ ಮಧ್ಯ ಪ್ರದೇಶಗಳಲ್ಲಿ, ದಖ್ಖಣದ ಪೀಠಭೂಮಿಯಲ್ಲಿ ಮತ್ತು ತಮಿಳುನಾಡಿನ ಆಗ್ನೇಯ ಪ್ರದೇಶದಲ್ಲಿ ಉತ್ತರದಿಂದ ದಕ್ಷಿಣಕ್ಕೆ ನಾವು ಚಲಿಸಿದಂತೆ ಥಂಡಿ ಶ್ರಾಯ ದೀರ್ಘವಾಗುತ್ತ ಹೋಗಿ ಅದು ಮುಗಿದ ತರುವಾಯ ಸ್ಪಷ್ಟವಾಗಿ ಗುರುತಿಸಲಾಗುವ ಶುಷ್ಕಶ್ರಾಯ ಬರುತ್ತದೆ.

ಮಳೆ ಉಪವಿಭಾಗ[ಬದಲಾಯಿಸಿ]

ಮೇಲೆ ವಿವರಿಸಿರುವಂಥ ಪಟ್ಟಿಗಳನ್ನು 40-50 ವರ್ಷಗಳವರೆಗೆ ಪ್ರತಿ ವರ್ಷಕ್ಕೂ ತಯಾರಿಸಿ ಪರಿಶೀಲಿಸುವುದುಂಟು. ಇಂಥವುಗಳ ಸಾರಾಂಶವನ್ನು ಮಳೆ ಉಪವಿಭಾಗವಾರು ಭಾರತದ 30 ಉಪವಿಭಾಗಗಳಲ್ಲಿ ಒಂದೊಂದಕ್ಕೂ ಪುನರ್ವಿತರಣೆ ಮಾಡಿ ಅಭ್ಯಸಿಸುತ್ತಾರೆ. ಮೈಸೂರು ರಾಜ್ಯದ ವಾರ್ಷಿಕ ಪ್ರಸಾಮಾನ್ಯ ಮಳೆ 36”ಗಳ ಸನಿಹದಲ್ಲಿದೆ. ಥಂಢಿ ಶ್ರಾಯ (ಸಾಪ್ತಾಹಿಕ 0.2” ಅಥವಾ ಹೆಚ್ಚು) ಏಪ್ರಿಲ್ ತಿಂಗಳ ಎರಡನೆಯ ವಾರದಿಂದ ನವೆಂಬರ್ ಕೊನೆಯವರೆಗೆ (34 ವಾರಗಳ ಕಾಲ) ವ್ಯಾಪಿಸಿರುವುದು. ಡಿಸೆಂಬರಿನಿಂದ ಮುಂದಿನ ಮಾರ್ಚ್‍ವರೆಗೆ ಸಾಮಾನ್ಯವಾಗಿ ಶುಷ್ಕಶ್ರಾಯ. ಐದು ಅಥವಾ ಹೆಚ್ಚು ವಾರಗಳ ಕಾಲ ಸುರಿಯುವಂಥ ಸಮರ್ಪಕ ಮಳೆ 42 ವರ್ಷಗಳಲ್ಲಿ 14 ಸಲ ಕಂಡುಬಂದಿದೆ. ನಾಲ್ಕು ವಾರಗಳ ಕಾಲದ ಮಹಾಪೂರ 1913ರಲ್ಲಿ ಸಂಭವಿಸಿದೆ. ಪ್ರಸಾಮಾನ್ಯ, ಮಹಾಪೂರ ಮತ್ತು ಅನಾವೃಷ್ಟಿ ವಾರಗಳ ಶೇಕಡಾ ಪ್ರಮಾಣ ಅನುಕ್ರಮವಾಗಿ 43.9, 16.3, 39.8. ಇಡೀ ದೇಶವನ್ನು ಪರಿಶೀಲಿಸುವಾಗ ವಾರ್ಷಿಕ ಮಳೆ 50”ಗಳಿಗಿಂತ ಹೆಚ್ಚು ಇರುವ ಈಶಾನ್ಯ ಭಾರತ, ಮಧ್ಯ ಪ್ರದೇಶಗಳು, ಕೊಂಕಣ ಮತ್ತು ಕೇರಳ ಈ ಪ್ರದೇಶಗಳಲ್ಲಿನ ಮಳೆಸುರಿತದ ವಿಚಲನೆ ಕನಿಷ್ಠ ಪ್ರಮಾಣದ್ದು. ಈ ಭಾಗಗಳಲ್ಲಿ ಮಳೆ ನೀರನ್ನು ಅವಲಂಬಿಸಿ ವ್ಯವಸಾಯ ಮಾಡಬಹುದು. ದೇಶದ ಉಳಿದ ಭಾಗಗಳಲ್ಲಿ ಯಶಸ್ವೀ ಕೃಷಿ ಉತ್ಪಾದನೆಗೆ ಮಳೆಯ ಜೊತೆಗೆ ನೀರಾವರಿಯ ನೆರವೂ ಬೇಕಾಗುತ್ತದೆ. ದೇಶಾದ್ಯಂತ ಅನಾವೃಷ್ಟಿ ಮತ್ತು ಕ್ಷಾಮ ದುರಂತಗಳನ್ನು ಒಂದು ಶತಮಾನದ ಅವಧಿಯಲ್ಲಿ 5 ಅಥವಾ 6 ಸಲ ನಿರೀಕ್ಷಿಸಬಹುದು. ಕೇವಲ ಕೆಲವೇ ವಲಯಗಳಿಗೆ ಸೀಮಿತವಾಗಿರುವ ಆಂಶಿಕ ದುರಂತಗಳು ಒಂದು ಶತಮಾನ ಕಾಲದಲ್ಲಿ 30 ರವರೆಗೂ ಇರಬಹುದು. ಅತಿಶಯ ಸಮೃದ್ಧ ವರ್ಷಗಳ ಅತಿ ಉತ್ಪಾದನೆಯನ್ನು ಕ್ಷೀಣ ವರ್ಷಗಳಲ್ಲಿ ಉಪಯೋಗಿಸಲೋಸ್ಕರ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಬೆಳೆವಿಮೆಯ ಮೂಲಕ ಸರ್ಕಾರ ರೈತರಿಗೆ ರಕ್ಷಣೆ ಒದಗಿಸಬಹುದು.

ಹವೆ ಮತ್ತು ಸಸ್ಯದ ಬೆಳವಣಿಗೆ[ಬದಲಾಯಿಸಿ]

ಮಳೆ, ಉಷ್ಣತೆ, ಆದ್ರ್ರತೆ, ಗಾಳಿ, ಬಿಸಿಲು ಮುಂತಾದವುಗಳ ಅನುಕೂಲತಮ ಅಳವಡಿಕೆಯನ್ನು ಅವಲಂಬಿಸಿ ಪೈರುಗಳ ಆರೋಗ್ಯವಂತ ಬೆಳೆವಣಿಗೆ ಮತ್ತು ಇಳುವರಿ ಇವೆ. ಪ್ರವರ್ಧಿಸುತ್ತಿರುವ ಸಸ್ಯ ಸಮುದಾಯಗಳಿಗೆ ನಿಕಟ ಪರಿಸರವನ್ನು ಒದಗಿಸುವುದು ಇವೇ. ಆದ್ದರಿಂದ ಪ್ರತಿಕೂಲ ಹವೆಯನ್ನು ಕುರಿತ ಮುನ್ನೆಚ್ಚರಿಕೆಗಳು ಸಕಾಲದಲ್ಲಿ ಸರಿಯಾಗಿ ದೊರೆತರೆ ಅವುಗಳಿಂದ ರೈತರಿಗೆ ಖಂಡಿತ ಲಾಭ ಉಂಟು. ಉದಾಹರಣೆಗೆ ಮಾನ್‍ಸೂನ್ ಮಳೆಗಳ ಪ್ರಾರಂಭ ಎಂದು ಆಗಬಹುದು ಎಂಬುದನ್ನು ರೈತನಿಗೆ ಸಾಕಷ್ಟು ಮೊದಲೇ ತಿಳಿಸಿದರೆ ಮತ್ತು, ತರವಾಯ, ಆ ಶ್ರಾಯದಲ್ಲಿ ಮಳೆಸುರಿತ ಹೇಗೆ ಬದಲಾಗಬಹುದು, ಮಳೆಯಲ್ಲಿ ಎಂದು ತಡೆ ಉಂಟಾಗಬಹುದು ಎಂಬಿವೇ ಮುಂತಾದ ವಿವರಗಳನ್ನು ಮುಂದಾಗಿಯೇ ಪ್ರಕಟಿಸಿದರೆ ಕೃಷಿಯ ಹಲವಾರು ಚಟುವಟಿಕೆಗಳಾದ ಪಾತಿಯ ರಚನೆ, ಗೊಬ್ಬರ ಹಾಕುವುದು, ಬಿತ್ತನೆ, ನಾಟಿ, ಕಳೆ ಕೀಳುವಿಕೆ, ಕೊಯ್ಲು ಒಕ್ಕಲು, ಒಣಗಿಸುವುದು ಮುಂತಾದವನ್ನು ಯುಕ್ತವಾಗಿ ಅಳವಡಿಸಿಕೊಂಡು ಬೆಳೆಗೆ ಒದಗಬಹುದಾದ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ಇಳಿಸಬಹುದು; ರೈತನ ಬಲು ಮಿತ ಮೂಲಗಳಾದ ಗೆಯ್ಮೆ, ಗೊಬ್ಬರ, ಬೀಜ, ನೀರು ಇವೇ ಮುಂತಾದವನ್ನು ಲಾಭದಾಯಕವಾಗಿ ಬಳಸಬಹುದು. ಬಿತ್ತನೆಯಿಂದ ಕೊಯ್ಲಿನವರೆಗಿನ ಬೆಳೆಯ ಜೀವಿತದಲ್ಲಿ ಅವಧಿಕ ಕಾಲಗಳಿವೆ. ಬಿತ್ತನೆಯ ಕಾಲವೇ ಸಾಕಷ್ಟು ಗಾಬರಿ ಹುಟ್ಟಿಸಬಹುದು. ಬಿತ್ತನೆ ಮುಗಿದೊಡನೆ ಬಿರುಮಳೆ ಸುರಿದರೆ ಬಹುಶಃ ಬೀಜಗಳು ತೊಳೆದು ಹೋಗಿ ಮೊಳಕೆ ಒಡೆಯುವ ಪ್ರಮಾಣ ಬಲು ಕಡಿಮೆ ಆಗುವುದೆಂಬುದು ರೈತನಿಗೆ ತಿಳಿದಿದೆ. ಬಿತ್ತನೆ ಮುಗಿದ ಬಳಿಕ ಸುದೀರ್ಘ ಅನಾವೃಷ್ಟಿ ತಲೆದೋರಿದರೆ ಎಳೆ ಅಗೆಗಳು ಒಣಗೀ ಹೋಗಬಹುದು; ಮತ್ತು ಈ ಕಾರಣದಿಂದ ಇಡೀ ಗದ್ದೆಯನ್ನು ಪುನಃ ಬಿತ್ತಬೇಕಾದೀತು. ಮೊದಲಿನ ಘಟ್ಟದಲ್ಲಿ (ಎಂದರೆ ಮೊಳಕೆ ಒಡೆಯುವಲ್ಲಿಂದ ತೊಡಗಿ ಚಿಗುರು ಒಡೆಯುವವರೆಗೆ) ಸನ್ನಿವೇಶಗಳೆಲ್ಲವೂ ಅನುಕೂಲಕರವಾಗಿದ್ದರೆ ಬೆಳೆಯ ಪ್ರಾರಂಭ ಉತ್ತಮವಾಗಿ ಆಗುತ್ತದೆ. ಆಮೇಲೆ ಮಳೆಯಿಲ್ಲದ ಸ್ವಚ್ಛ ಹವೆಯ ಅವಕಾಶ ಒದಗಿ ಎಡೆಹೊಡೆಯುವುದಕ್ಕೂ ಕಳೆ ಕೀಳುವುದಕ್ಕೂ ಅನುಕೂಲವಾಗುವುದು. ಎರಡನೆಯ ಘಟ್ಟದಲ್ಲಿ (ಎಂದರೆ ಸಸ್ಯದ ತೀವ್ರ ಬೆಳವಣಿಗೆಯ ಕಾಲ-ಇದನ್ನು ವೈಭವಕಾಲ ಎಂದು ಕರೆಯುವುದುಂಟು) ದ್ಯುತಿಸಂಶ್ಲೇಷಣೆಗೋಸ್ಕರ ನೀರಿನ ಮತ್ತು ಬಿಸಿಲಿನ ಆವಶ್ಯಕತೆ ಗರಿಷ್ಠವಾಗಿದೆ. ಮುಂದಕ್ಕೆ ಮೂರನೆಯ ಘಟ್ಟ ಹೂ ಹೋಗುವುದು, ತೆನೆಗೂಡುವುದು ಮತ್ತು ಕಾಳುಗಟ್ಟುವುದು, ಇದರಲ್ಲಿ ಸಸ್ಯದ ಎಲೆ ಕಾಂಡಗಳ ಬೆಳವಣಿಗೆ ಪೂರ್ಣಗೊಂಡ ತರುವಾಯ ಪುನರುತ್ಪತ್ತಿಯ ಅವಧಿ (ಎಂದರೆ ಮುಖ್ಯವಾಗಿ ಬೀಜಗಳ ಬಲಿಯುವಿಕೆ) ಪ್ರಾರಂಭವಾಗುವುದು. ಈ ವೇಳೆ ಹವೆ ಸ್ವಚ್ಚವಾಗಿರಬೇಕು. ಆದಷ್ಟು ಕಡಿಮೆ ಮೋಡಕವಿದ ವಾತಾವರಣವಿರಬೇಕು. ಹಾಗಲ್ಲದೇ ಈ ಅವಧಿಯಲ್ಲಿ ಮೋಡ ಮುಸುಕಿದ ಥಂಡಿ ಹವೆಯೇನಾದರೂ ಇತ್ತೊ ಅದುವರೆಗೂ ಹುಲುಸಾಗಿ ಬೆಳೆದುಬಂದಿದ್ದ ಪೈರು ತೀರ ನಿರಾಶೆ ಉಂಟುಮಾಡುವಂತೆ ಹಾಳಾಗಿಹೋಗಬಹುದು. ತೆನೆಗಳು ಒಡೆಯುವ ಕಾಲದಲ್ಲಿ, ಕಾಳುಗಳು ಇನ್ನೂ ಹಾಲಿನ ಸ್ಥಿತಿಯಲ್ಲಿಯೇ ಇರುವ ವೇಳೆಯಲ್ಲಿ, ಕೇವಲ ಒಂದು ದಿವಸದ ಬಿಸಿಗಾಳಿಯೂ ತೆನೆಗಳನ್ನು ಒಣಗಿಸಿ ಬೆಳೆಗೆ ಸರ್ವನಾಶ ತರಬಹುದು. ಈ ಶ್ರಾಯ ಯಾವ ಆತಂಕವೂ ಇಲ್ಲದಂತೆ ಕಳೆದು ಹೋದ ಮೇಲೆಯೂ ಪ್ರತಿಕೂಲ ಹವೆಯಿಂದ ಬೆಳೆಗೆ ಒದಗಬಹುದಾದ ಅಪಾಯ ಪೂರ್ಣವಾಗಿ ತಪ್ಪಿತೆನ್ನುವಂತಿಲ್ಲ. ಬಿರುಸು ಜಡಿಮಳೆ, ಆಲಿಕಲ್ಲುಗಳ ಕೆಡೆತ ಮುಂತಾದವು ಬೆಳೆಗೆ ಬಹಳ ಹಾನಿ ಉಂಟುಮಾಡಬಲ್ಲವು. ಇಂಥ ಅಪಾಯಕರ ಸನ್ನಿವೇಶಗಳನ್ನು ಕುರಿತ ಸಕಾಲಿಕ ಮುನ್ನೆಚ್ಚರಿಕೆಗಳನ್ನು ರೈತನಿಗೆ ಕೊಟ್ಟುದೇ ಆದರೆ ಆತ ಕೊಯ್ಲು ಕೆಲಸವನ್ನು ಒಡನೆಯೇ ಚುರುಕಾಗಿ ನಡೆಸಿ ಬೆಳೆಯನ್ನು ಉಳಿಸಿಕೊಳ್ಳಬಲ್ಲ. ಇಲ್ಲಿಗೇ ಮುಗಿಯಲಿಲ್ಲ. ಮುಂದೆ ಕಣದಲ್ಲಿ ಒಟ್ಟಿರುವ ಮೆದೆ ಹಠಾತ್ ಮಳೆ ಬಿರುಗಾಳಿಗಳಿಂದ ಹಾಳಾಗಿಹೋಗುವ ಸಂಭಾವ್ಯತೆಯೂ ಉಂಟು. ಇದುವರೆಗೆ ಹವೆಯ ನೇರ ಪ್ರಭಾವವನ್ನು ಹೇಳಲಾಗಿದೆ. ಹವೆಗೆ ಬೆಳೆಯ ಬೆಳವಣಿಗೆ ಮೇಲೆ ಪರೋಕ್ಷ ಪ್ರಭಾವವೂ ಉಂಟು. ಪೈರು ಬೆಳೆಯುತ್ತಿರುವ ವೇಳೆಯಲ್ಲಿ ಹಲವಾರು ರೋಗಗಳೂ ಕೀಟಪಿಡುಗುಗಳೂ ಅದರ ಮೇಲೆ ದಾಳಿಮಾಡುತ್ತವೆ. ಇಂಥ ದಾಳಿಗಳ ತೀವ್ರತೆ ಮತ್ತು ಪುನರಾವರ್ತನೆ ಹವೆಯ ಕೆಲವು ವಿಶಿಷ್ಟ ಪರಿಸ್ಥಿತಿಗಳನ್ನು ಅವಲಂಬಿಸಿವೆ. ಧಾನ್ಯಗಳಿಗೆ ತಗಲುವ ಬೂಷ್ಟು ರೋಗಗಳು, ಗೋದಿ ಹೊಲಗಳ ಮೇಲೆ ಎರಗುವ ಮಿಡತೆ ದಂಡುಗಳು ರೈತ ಎಂದೂ ಮರೆಯದ ವೈರಿಗಳು.

ಪ್ರತಿಕೂಲ ಹವೆಯ ವಿದ್ಯಮಾನಗಳು[ಬದಲಾಯಿಸಿ]

ಹವೆಯಲ್ಲಿನ ಏರಿಳಿತಗಳೂ ಹೆಚ್ಚಾಗಿ ಪಕ್ಕನೆ ಸಂಭವಿಸುತ್ತವೆ. ಅವುಗಳ ಆಘಾತವನ್ನು ಬೆಳೆಗಳು, ಹಣ್ಣಿನ ತೋಟಗಳು, ಒತ್ತಟ್ಟಿಗಿರಲಿ, ರಸ್ತೆ ಬದಿಯ ಸಾಲು ಮರಗಳು ಸಹ ತಾಳಿಕೊಳ್ಳಲಾರವು. ಪ್ರತಿಕೂಲ ಹವೆಯ ಪರಿಣಾಮವಾಗಿ ಎದ್ದುಕಾಣುವ ವಿನಾಶಕಾರೀ ವಿದ್ಯಮಾನಗಳನ್ನು ಮುಂದೆ ವಿವರಿಸಲಾಗಿದೆ.

ಅತಿವೃಷ್ಟಿ ಹಾಗೂ ಮಹಾಪೂರಗಳು[ಬದಲಾಯಿಸಿ]

ಸತತವಾಗಿ ಹಲವಾರು ದಿವಸಗಳ ಕಾಲ ನದಿಗಳ ಜಲಾನಯನ ಪ್ರದೇಶಗಳಲ್ಲಿ ಬಿರುಮಳೆ ಸುರಿದಾಗ ಸಂಭವಿಸುವ ಮಹಾಪೂರಗಳ ಗಾತ್ರವನ್ನು ಊಹಿಸಿಕೊಳ್ಳಬಹುದು. ಜಲಾನಯನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆದ ಅರಣ್ಯಗಳು ಮತ್ತು ಅಲ್ಲೆಲ್ಲ ವ್ಯಾಪಿಸಿದ ಗಿಡಗಂಟಿಗಳು ನೀರಿನ ಪ್ರವಾಹವನ್ನು ನಿಯಂತ್ರಿಸುತ್ತವೆ. ಒಂದೇ ಸಲ ಕಿರುತೊರೆಗಳಿಗೆ ದುಮ್ಮಿಕ್ಕುವ ನೀರಿನ ಓಟವನ್ನೂ ಮೊತ್ತವನ್ನೂ ತಡೆಹಿಡಿದು ನಿಲ್ಲಿಸುವುದರ ಜೊತೆಗೆ ಮಣ್ಣಿನ ಸವಕಳಿಯನ್ನು ಕನಿಷ್ಠಗೊಳಿಸುವಲ್ಲಿ ಇವುಗಳ ಪಾತ್ರ ಹಿರಿದು. ಹೀಗೆ ಅತಿವೃಷ್ಟಿಯ ಪ್ರಸಾದವಾದ ನೀರು ತಗ್ಗಿನ ಹೊಳೆ, ನದಿಗಳಿಗೆ ಕೊಂಚ ಮಂದಗತಿಯಿಂದ ಪೂರೈಕೆ ಆಗುವುದರಿಂದ ಅವುಗಳಲ್ಲಿ ಪ್ರವಾಹದ ಮಟ್ಟ ಏರುವುದು ನಿಧಾನವಾಗಿ, ಸಂಭವಿಸಬಹುದಾದ ನಾಶ ಕಡಿಮೆ ಆಗುತ್ತದೆ. ಆದ್ದರಿಂದ ಜಲಾನಯನ ಪ್ರದೇಶಗಳಲ್ಲಿ, ಮುಖ್ಯವಾಗಿ, ಅರಣ್ಯಗಳ ಅಭಿವೃದ್ಧಿ ಹಾಗೂ ರಕ್ಷಣೆ ತೀರ ಅವಶ್ಯಕವಾದ ಒಂದು ಕಾರ್ಯ. ಇನ್ನು ಗದ್ದೆ, ಬಯಲುಗಳಲ್ಲಿ ರೈತರು ಕಾಲುವೆಗಳನ್ನೂ ಚರಂಡಿಗಳನ್ನೂ ತೆರೆದಿಟ್ಟು ಅತಿವೃಷ್ಟಿಯ ಅಧಿಕ ನೀರನ್ನು ಅಡೆತಡೆ ಇಲ್ಲದೇ ಹರಿದುಹೋಗಲು ಯುಕ್ತ ಅವಕಾಶ ಕಲ್ಪಿಸಿಕೊಡಬೇಕು. ಮಹಾಪೂರಗಳಿಂದ ಒದಗುವ ಹಾನಿಗಳನ್ನು ತಡೆದುಕೊಂಡು ಬಾಳಿ ಸಮೃದ್ಧ ಬೆಳೆಗಳನ್ನು ನೀಡಬಲ್ಲ ವಿಶಿಷ್ಟ ತಳಿಗಳ ಸಂಶೋಧನೆಯತ್ತ ಲಕ್ಷ್ಯ ಈಚಿನ ದಿವಸಗಳಲ್ಲಿ ಹರಿದಿದೆ.

ಅನಾವೃಷ್ಟಿಗಳು[ಬದಲಾಯಿಸಿ]

ಇವುಗಳ ಪ್ರಮುಖ ದುಷ್ಪರಿಣಾಮ ಬೆಳೆನಾಶ ಮತ್ತು ಅದರಿಂದ ಕ್ಷಾಮ. ಅಂಕಿ ಅಂಶಗಳ ಆಧಾರದಿಂದ ಅನಾವೃಷ್ಟಿ ವರ್ಷಗಳ ಸಂಭಾವ್ಯತೆಯನ್ನು ಊಹಿಸಿ ಆ ಮೊದಲೇ ಅವನ್ನು ಎದುರಿಸಲು ಯುಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ಸಮೃದ್ಧವರ್ಷಗಳಲ್ಲಿ ದೊರೆತ ನೀರನ್ನು ಮಿತವಾಗಿ ವ್ಯಯಿಸಬೇಕು : ಜೊತೆಯಲ್ಲೇ ಸಾಧ್ಯವಾಗುವಷ್ಟು ನೀರನ್ನು ಕೆರೆಕುಂಟೆಗಳಲ್ಲಿ ಜಲಾಶಯಗಳಲ್ಲಿ ಸಂಗ್ರಹಿಸಿಡಬೇಕು ; ನೀರಿನ ಅಪವ್ಯಯವನ್ನು ನಿಲ್ಲಿಸಬೇಕು. ಇವೆಲ್ಲ ಕಾರ್ಯಕ್ರಮಗಳಿಂದ ಅನಾವೃಷ್ಟಿಯ ದುಷ್ಪರಿಣಾಮಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು. ಇನ್ನು ಅವಭೂಮಿ (ಸಬ್‍ಸಾಯಿಲ್) ನೀರಾವರಿಯನ್ನು ತೊಡಗುವುದರಿಂದ ಬಿಸಿಲಿನಿಂದ ಕಾದು ಉಗಿಯಾಗಿ ಹೋಗುವ ನೀರಿನ ನಷ್ಟವನ್ನು ಬಲುಮಟ್ಟಿಗೆ ಪಡೆಯಬಹುದು. ಜಲಾಶಯಗಳಲ್ಲಿ ನೀರಿನ ಮೇಲುತಳದಿಂದ ಆವಿಯಾಗಿ ಹೋಗುವ ನೀರಿನ ಅಂಶವನ್ನು ಕಡಿಮೆ ಮಾಡಲು ಆ ಆವರಣದಲ್ಲಿ ಗಾಳಿಯ ಸ್ವಚ್ಛಂದ ಚಲನೆಗೆ ಅವಕಾಶ ಒದಗದಂತೆ ಸುತ್ತಮುತ್ತಲೂ ಗಿಡಮರಗಳನ್ನು ವಿಪುಲವಾಗಿ ಬೆಳಸಬೇಕು. ಸೆಟೈಲ್ ಸ್ಟರೈಲ್ ಆಲ್ಕೊಹಾಲ್ ಎಂಬ ದ್ರವವನ್ನು ನೀರಿನ ಮೇಲುತಳದ ಮೇಲೆ ತೆಳುವಾಗಿ ಪಸರಿಸಿ ಆವಿಯಾಗಿ ಹೋಗುವ ನೀರಿನ 20%-30% ಅಂಶವನ್ನು ತಡೆಹಿಡಿಯಲಾಗಿದೆ. ಕ್ಷಾಮ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ಎದುರಿಸಿಯೂ ಬೆಳೆಯನ್ನು ನೀಡಬಲ್ಲ ಸಸ್ಯಜಾತಿಗಳ ಸಂಶೋಧನೆಯೂ ಕೃಷಿತಜ್ಞರಿಂದ ನಡೆದಿದೆ.

ಆವರ್ತ ಬಿರುಗಾಳಿಗಳು ಹಾಗೂ ಹವೆಯ ಒತ್ತಡ ಕುಸಿತಗಳು[ಬದಲಾಯಿಸಿ]

ಇವು ಹವಾವಿಜ್ಞಾನದ ಮಹಾವಿದ್ಯಮಾನಗಳು. ಬಂಗಾಳ ಆಖಾತದಲ್ಲಿ ಅಥವಾ ಅರೇಬಿಯನ್ ಸಮುದ್ರದಲ್ಲಿ ಅವು ತಲೆದೋರುವ ಅವಧಿಗಳನ್ನು ಮುನ್ನುಡಿಯಬಹುದು. ವಾಸ್ತವಿಕವಾಗಿ ಅವು ಹುಟ್ಟಿದಾಗ ಆ ಸ್ಥಾನಗಳನ್ನು ಗುರುತಿಸಬಹುದು. ಒತ್ತಡ ಕುಸಿತಗಳಿಂದ ಉಂಟಾಗುವ ಆವರ್ತ ಬಿರುಗಾಳಿಗಳು ನಿರಂತರ ಸಂಚಾರಿಗಳು. ತಮಗೆ ಪ್ರಿಯವಾದ ಪಥದ ಮೇಲೆ ಸಂಚರಿಸುತ್ತ ದಾರಿಯಿಡೀ ಮಳೆ ಸುರಿಸುತ್ತ ಥಂಡಿ ಹವೆ ಬೀರುತ್ತ ಸಾಗುತ್ತವೆ. ಸಮುದ್ರದ ಅಂಚಿನಿಂದ ಅವು ನೆಲವನ್ನು ಪ್ರವೇಶಿಸುವ ದಿವಸಗಳನ್ನು ಮುಂದಾಗಿಯೇ ಹೇಳಲು ಸಾಧ್ಯ ಉಂಟು.

ಮಿಂಚು ಗುಡುಗಿನ ಬಿರುಗಾಳಿಗಳು, ಆಲಿಕಲ್ಲಿನ ಬಿರುಗಾಳಿಗಳು ಮತ್ತು ದೂಳಿಮಯ ಬಿರುಗಾಳಿಗಳು[ಬದಲಾಯಿಸಿ]

ಇಂಥ ಸ್ಥಾನಿಕ ಘಟನೆಗಳು ಸಾಧಾರಣವಾಗಿ ಮಾನ್‍ಸೂನ್ ಮಳೆಯ ಆಗಮನದ ಮೊದಲು ಹಾಗೂ ಕೊನೆಯ ಅವಧಿಯಲ್ಲಿ ಸಂಭವಿಸುತ್ತವೆ. ಹವೆಯಲ್ಲಿ ಆದ್ರ್ರತೆ ಇಲ್ಲದಿದ್ದರೆ ಕೇವಲ ದೂಳಿಮಯ ಬಿರುಗಾಳಿ ಉಂಟಾಗುತ್ತದೆ. ವಾತಾವರಣದಲ್ಲಿ ಸಾಕಷ್ಟು ತೇವ ಇದ್ದರೆ ಮಿಂಚು ಗುಡುಗುಗಳಿಂದ ಕೂಡಿದ ಮಳೆ ಗಾಳಿ ಉದ್ಭವವಾಗುವುದು. ಆಲಿಕಲ್ಲಿನ ಮಳೆಗಳೆಂದರೆ ವಿಶೇಷವಾಗಿ ಗುಡುಗು ಮಿಂಚಿನ ಬಿರುಗಾಳಿಗಳು. ವಾತಾವರಣದಲ್ಲಿ ಆಲಿಕಲ್ಲುಗಳನ್ನು ಉಂಟುಮಾಡಬಲ್ಲಷ್ಟು ಪ್ರಬಲವಾದ ಊಧ್ರ್ವಗಾಮಿಗಾಳಿ ಇದ್ದಾಗ ಆಲಿಕಲ್ಲಿನ ಮಳೆ ಸುರಿಯುತ್ತದೆ. ಇದರಿಂದ ಬೆಳೆಗಳಿಗೆ ಬಲು ಹಾನಿ ಉಂಟು. ಈ ಅಸ್ಥಿರ ಘಟನೆಗಳನ್ನು ಕುರಿತು ಯಾವ ವಿಧದ ಮುನ್ಸೂಚನೆಯನ್ನು ಕೊಡಲೂ ಸಾಧ್ಯವಾಗಿಲ್ಲ. ಆದರೆ ಒಂದು ಪ್ರಕಾರದ ಗುಡುಗು ಮಿಂಚಿನ ಬಿರುಗಾಳಿ ತಲೆದೋರುವ ಪ್ರದೇಶಗಳನ್ನು ಗುರುತಿಸಬಹುದು; ಮತ್ತು ಅದು ಸಂಭವಿಸಲು ಅಗತ್ಯವಾದ ಪರಿಸ್ಥಿತಿಯನ್ನು ಮುಂಚಿತವಾಗಿ ಅರಿಯಬಹುದು. ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಗುಡುಗು ಮಿಂಚಿನ ಬಿರುಗಾಳಿಯ ವಾರ್ಷಿಕ ಆವೃತ್ತಿಯನ್ನು ಚಿತ್ರ 7 ರಲ್ಲಿ ತೋರಿಸಿದೆ. ಹಿಮಾಲಯದ ಪರ್ವತಮಯ ಪ್ರದೇಶಗಳು ಹಾಗೂ ಭಾರತದ ಈಶಾನ್ಯ ಭಾಗಗಳು ಇಂಥ ಗಾಳಿಗಳು ಹೆಚ್ಚಾಗಿ ಸಂಭವಿಸುವ ಪ್ರದೇಶಗಳು. ಕರಾವಳಿ ಪ್ರದೇಶಗಳಲ್ಲಿ ಇವುಗಳ ಸಂಭವ ಬಲು ಕಡಿಮೆ. ಆದರೆ ಒಳನಾಡುಗಳಲ್ಲಿ ಮೈಸೂರು ಹಾಗೂ ದಖ್ಖಣದ ತಪ್ಪಲುಗಳಲ್ಲಿ ಅವು ಮೇಲಿಂದ ಮೇಲೆ ಸಂಭವಿಸುವುದುಂಟು.

ಅತಿಶೀತಗಾಳಿ ಹಾಗೂ ಹಿಮಗಾಳಿ ಉತ್ಪಾತಗಳು[ಬದಲಾಯಿಸಿ]

ಚಿತ್ರ 8(ಎ)ಯಲ್ಲಿ ಜನವರಿ ತಿಂಗಳಿನಲ್ಲಿ ಭಾರತದ ಪ್ರಸಾಮಾನ್ಯ ಸರಾಸರಿ ದೈನದಿಂದ ಕನಿಷ್ಠ ಉಷ್ಣತೆಯನ್ನು ತೋರಿಸಿದೆ. ಚಿತ್ರ 8(ಬಿ)ಯಲ್ಲಿ 1920ರವರೆಗೆ ವರದಿ ಮಾಡಲಾದ ಕನಿಷ್ಠತಮ ಉಷ್ಣತೆಯನ್ನು ಗುರುತಿಸಿದೆ. ಈ ವರದಿಗಳನ್ನು ಮಾಡಿರುವುದು ಸ್ಟೀವನ್‍ಸನ್ ತೆರೆಯ ಮೇಲೆ. 18 ಡಿಗ್ರಿ. ಉ. ಅಕ್ಷಾಂಶದಿಂದ ಕೆಳಗಿನ ಭಾಗದಲ್ಲಿರುವ ಉಪಖಂಡದಲ್ಲಿ ಅತಿಶೀತ ತರಂಗದಿಂದ ಉಂಟಾಗುವ ಅಪಾಯ ಬಲು ಕಡಿಮೆ. ಉತ್ತರಾಭಿಮುಖವಾಗಿ ನಾವು ಸಾಗಿದಂತೆ ಶೀತ ತರಂಗಗಳಿಗೆ ಈಡಾಗುವ ಸಂಭಾವ್ಯತೆ ಏರುತ್ತದೆ. ವಾಯುವ್ಯ ಭಾರತದಲ್ಲಿ ಶೈತ್ಯದ ತೀಕ್ಷ್ಣತೆ ಗರಿಷ್ಠ. ಈ ಮೊದಲೇ ಹೇಳಿದಂತೆ ಚಳಿಗಾಲದ ಪುಂಖಾನುಪುಂಖ ಒತ್ತಡಕುಸಿತಗಳ ಪರಿಣಾಮವೇ ಈ ಶೀತ ತರಂಗಗಳು. ಇವು ವಾಯುವ್ಯ ಭಾರತವನ್ನು ಪ್ರವೇಶಿಸಿ ಪೂರ್ವಾಭಿಮುಖವಾಗಿ ಬಂಗಾಳ ಅಸ್ಸಾಂ ಕಡೆಗೆ ಚಲಿಸುತ್ತವೆ. ಮುಂದೆ ಮುಂದೆ ತೆರಳಿದಂತೆ ಅವು ದುರ್ಬಲಗೊಳ್ಳುತ್ತವೆ.ಗದ್ದೆಗಳಲ್ಲಿನ ಬೆಳೆಗಳು ಮುಂತಾದ ನೆಲಕ್ಕೆ ಒತ್ತಾಗಿರುವ ವಸ್ತುಗಳು ಸ್ವಚ್ಛಾಕಾಶಕ್ಕೆ ಸದಾ ತೆರೆದಿರುತ್ತವೆ. ಹೀಗಾಗಿ ಅವು ತಳೆಯುವ ಕನಿಷ್ಠ ಉಷ್ಣತೆ ಸ್ಟಿವನ್‍ಸನ್ ತೆರೆಯಲ್ಲಿ ವರದಿಯಾಗುವ ಕನಿಷ್ಠ ಉಷ್ಣತೆಗಿಂತಲೂ ಕಡಿಮೆ ಎಂಬುದು ಸುವಿದಿತ. ಹೀಗೆ ಹೊರಗೆ ತೆರೆದಿಟ್ಟ ವಸ್ತುಗಳ ಉಷ್ಣತೆಗೆ ವಿಸರಣ ಕನಿಷ್ಠ ಉಷ್ಣತೆ (ರೇಡಿಯೇಷನ್ ಮಿನಿಮಂ ಟೆಂಪರೇಚರ್) ಎಂದು ಹೆಸರು. ಇದು ಸ್ಟೀವನ್‍ಸನ್ ತೆರೆ ಉಷ್ಣತೆಗಿಂತ 10-12 ಫ್ಯಾ.ಗಳಷ್ಟು ಕಡಿಮೆ. ಚಳಿಗಾಲದ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿಗಳಲ್ಲಿ ವಿಸರಣ ಕನಿಷ್ಠ ಉಷ್ಣತೆ 30 ಡಿಗ್ರಿ. ಫ್ಯಾ.ಗಿಂತ ಕಡಿಮೆ (ಎಂದರೆ ಹಿಮಬಿಂದುವಿಗಿಂತ ಕೆಳಗಿನದು) ಇವರು ದಿವಸಗಳ ಆವೃತ್ತಿಯನ್ನು ಅನುಕ್ರಮವಾಗಿ ಚಿತ್ರಗಳು 8(ಸಿ), (ಡಿ), (ಇ), (ಎಫ್), ನಿರೂಪಿಸುತ್ತವೆ. ಅತಿಶೈತ್ಯಗಳು ವಾಯವ್ಯ ಭಾರತದಲ್ಲಿ ಪದೇ ಪದೇ ಸಂಭವಿಸುತ್ತವೆಂದೂ ಪೂರ್ವ ಅಥವಾ ದಕ್ಷಿಣಾಭಿಮುಖವಾಗಿ ಸಾಗಿದಂತೆ ಇವು ಕಡಿಮೆ ಆಗುವುವೆಂದೂ ಈ ಪಟ್ಟಿಗಳು ತೋರಿಸುತ್ತವೆ. ಶೀತ ತರಂಗಗಳ ಹಾಗೂ ಅತಿಶೈತ್ಯಗಳ ಸಂಭಾವ್ಯತೆಯನ್ನು ಕುರಿತ ಮುನ್ನೆಚ್ಚರಿಕೆಗಳನ್ನು ರೇಡಿಯೋ ಮೂಲಕ ಬಿತ್ತರಿಸುತ್ತಾರೆ. ಆಗ ರೈತರು ತಮ್ಮ ಗದ್ದೆಗಳನ್ನು ಮತ್ತು ಹಣ್ಣು ತೋಟಗಳನ್ನು ಕೃತಕ ವಿಧಾನಗಳಿಂದ ಬೆಚ್ಚಗಿಟ್ಟು ಅಥವಾ ಬಿಸಿನೀರಿನಿಂದ ವ್ಯವಸಾಯ ಮಾಡಿ ಬೆಳೆಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಉಷ್ಣ ತರಂಗಗಳು[ಬದಲಾಯಿಸಿ]

ಬೇಸಗೆ ತೊಡಗಿದಂತೆ ಭಾರತದ ಒಳಭಾಗದಲ್ಲಿ ಉಚ್ಚ ಉಷ್ಣತೆಯ ಒಂದು ಪಟ್ಟಿ ಮೈದಳೆಯುತ್ತದೆ. ಆದರೆ ಮಳೆಗಾಲ ಆರಂಭವಾದಂತೆ ಈ ಪಟ್ಟಿ ಸ್ಥಾನ ಬದಲಾಯಿಸಿ ವಾಯವ್ಯ ಭಾಗಕ್ಕೆ ಹೋಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ 1920ರವರೆಗೆ ವರದಿಯಾದ ಗರಿಷ್ಠ ಉಷ್ಣತೆಗಳನ್ನು ಚಿತ್ರ 9 ರಲ್ಲಿ ಕಾಣಿಸಿದೆ. ಸಿಂಧ್‍ನ ಒಳಭಾಗದಲ್ಲೂ ಪಂಜಾಬ್‍ನಲ್ಲೂ ಗರಿಷ್ಠ ಉಪ್ಣತೆ 125 ಡಿಗ್ರಿ. ಫ್ಯಾ. ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಕನಿಷ್ಠ ಪಕ್ಷ ಒಂದು ಸಲವಾದರೂ ಸಿಡಿದಿದೆ ಎಂಬುದನ್ನು ಚಿತ್ರದಿಂದ ತಿಳಿಯಬಹುದು. ನೆಲದ ಮೇಲ್ಮೈಯನ್ನು ನೀರು ಸಿಂಪಡಿಸಿ ಚಂಡಿ ಮಾಡುವುದು, ನೆಲದ ಮೇಲೆ ಹುಲ್ಲನ್ನು ಬೆಳೆಸುವುದು, ನೆಲವನ್ನು ಚಾಕ್‍ಪುಡಿಯ ತೆಳುಪದರದಿಂದ ಮುಚ್ಚುವುದು - ಇವೇ ಮುಂತಾದ ವಿಧಾನಗಳಿಂದ ನೆಲದ ಹಾಗೂ ಅದಕ್ಕೆ ಸಮೀಪವಿರುವ ಗಾಳಿ ಪದರುಗಳ ಉಷ್ಣತೆಯನ್ನು ತಗ್ಗುಮಟ್ಟದಲ್ಲಿ ಇಡಬಹುದು.

ಅತಿವೇಗದ ಗಾಳಿಗಳು[ಬದಲಾಯಿಸಿ]

ಗುಡುಗಿನಿಂದ ಕೂಡಿದ ಅತಿವೇಗದ ಗಾಳಿಗಳು, ಒತ್ತಡ ಕುಸಿತಗಳು ಮುಂತಾದವು ಬೆಳೆಗಳಿಗೆ, ಹಣ್ಣುತೋಟಗಳಿಗೆ ಮತ್ತು ಗಿಡಗಳ ಸಾಲುಗಳಿಗೆ ಹಾನಿಕಾರಿಗಳು. ಇವು ಉಷ್ಣಮಾರುತಗಳಾಗಿದ್ದರೆ ಸರೋವರಗಳ, ನೆಲದ ಮತ್ತು ಬೆಳೆಗಳ ಶೋಷಣೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಗಾಳಿ ತಡೆಗಳು ಇಂಥ ಗಾಳಿಗಳನ್ನು ತಡೆಯುವುದರಿಂದ ಲಭಿಸುವ ಉಪಯುಕ್ತ ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ಆದರೆ ಎಂಥ ತಡೆಮರಗಳ ಸಾಲೇ ಇರಲಿ ಅದನ್ನು ಲೆಕ್ಕಿಸದೇ ಉತ್ಪಾತವೆಸಗುವ ತೀವ್ರಗಾಳಿಗಳು ಒಮ್ಮೊಮ್ಮೆ ಬೀಸುವುದುಂಟು. ತೀವ್ರ ಚಂಡಮಾರುತಗಳು ಕರಾವಳಿಯನ್ನು ಅಡ್ಡ ಹಾಯುವಾಗ ಆ ಪ್ರದೇಶಗಳ ಮೇಲೆ ಅವುಗಳ ಪ್ರಭಾವ ಅತ್ಯಧಿಕ.

ರೈತನಿಗೆ ಒದಗಿಸುವ ಹವಾ ವರದಿಗಳು[ಬದಲಾಯಿಸಿ]

ಜುಲೈ 1915ರಿಂದ ಭಾರತೀಯ ರೈತನಿಗೆ ಹವೆಗೆ ಸಂಬಂಧಿಸಿದ ವರದಿಗಳನ್ನು ಕ್ರಮವಾಗಿ ಒದಗಿಸಲಾಗುತ್ತಿದೆ. ಈ ಸೇವೆಯನ್ನು ಪೂರೈಸುತ್ತಿರುವುದು ಪುಣೆಯಲ್ಲಿರುವ ಭಾರತೀಯ ಹವಾವಿಜ್ಞಾನ ಇಲಾಖೆ (ಇಂಡಿಯ ಮೀಟಿಯರಾಲಾಜಿಕಲ್ ಡಿಪಾರ್ಟ್‍ಮೆಂಟ್). ಇದರ ಅಂಗವಾಗಿ ದೇಶದ ಎಲ್ಲ ಜಿಲ್ಲೆಗಳಿಗೂ (ಸುಮಾರು 300) ಅನ್ವಯವಾಗುವ ಜಿಲ್ಲಾವಾರು ಮತ್ತು ಬೆಳೆವಾರು ಬೆಳೆ-ಹವೆ ಪಂಚಾಂಗಗಳನ್ನು ಪ್ರಕಟಿಸಲಾಗಿದೆ. ಇದಲ್ಲದೇ ಆಕಾಶವಾಣಿಯ ಮೂಲಕ ಸ್ಥಳೀಯ ಮುನ್ಸೂಚನೆಗಳನ್ನೂ ನಿರ್ದೇಶನಗಳನ್ನೂ ನಿಯತಕಾಲಿಕವಾಗಿ ಬಿತ್ತರಿಸುತ್ತಲೇ ಇರುತ್ತಾರೆ. ಆಯಾ ವಾರಗಳ ವಾಸ್ತವಿಕ ಪರಿಸ್ಥಿತಿಗಳನ್ನು ಸಂಗ್ರಹಿಸಿ ಪುಣೆಯ ಹವಾವಿಜ್ಞಾನ ಇಲಾಖೆ ಪ್ರತಿ ತಿಂಗಳ ಬೆಳೆ ಭವಿಷ್ಯವನ್ನು ರೂಪಿಸುವುದು. ಅಲ್ಲದೆ ರಾಜ್ಯಗಳ ಕೃಷಿ ಇಲಾಖೆಗಳು ಸಹ ಸ್ಥಳೀಯವಾಗಿ ಸವಿವರವಾಗಿ ಈ ಕೆಲಸಗಳನ್ನು ಮಾಡಿ ರೈತಜನರಿಗೆ ಯುಕ್ತಮಾಹಿತಿಗಳನ್ನು ಒದಗಿಸುತ್ತವೆ.

ಕೃಷಿ ಹವಾವಿಜ್ಞಾನ[ಬದಲಾಯಿಸಿ]

ಪರಿಸರ ವಿಧಿಸುವ ನಿಯಂತ್ರಣಾನುಸಾರ ಸಸ್ಯದ ಬೆಳೆವಣಿಗೆ ಮೇಲೆ ಪ್ರಭಾವ ಬೀರುವ ಬೇರೆ ಬೇರೆ ಅಂಶಗಳ ಅಭ್ಯಾಸವೇ ಕೃಷಿ ಹವಾವಿಜ್ಞಾನ. ಎಲ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಈ ವಿಭಾಗ ಭಾರತದಲ್ಲಿ (ಪುಣೆ) ಸ್ಥಾಪಿತವಾಯಿತು (1932). ಈ ವಿಭಾಗದ ಚಟುವಟಿಕೆಗಳು ಪ್ರಧಾನವಾಗಿ ಮೂರು : 1. ಪ್ರಾಯೋಗಿಕ ಸಂಶೋಧನೆ, 2. ಅಂಕಿ ಅಂಶಗಳ ಸಂಶೋಧನೆ, 3. ಹವಾವಿಜ್ಞಾನ ಹಾಗೂ ಕೃಷಿ ನಡುವೆ ಸಂಪರ್ಕ.

ಪ್ರಾಯೋಗಿಕ ಸಂಶೋಧನೆ[ಬದಲಾಯಿಸಿ]

ವಾಸ್ತವಿಕ ಪರಿಸ್ಥಿತಿಗಳಲ್ಲಿ ಸಸ್ಯಗಳ ಮೇಲೆ ಬೇರೆ ಬೇರೆ ಕಾರಕಗಳ ಪ್ರಭಾವಗಳನ್ನು ಪ್ರಾಯೋಗಿಕವಾಗಿ ಅಳೆಯುವುದು. ಇದಕ್ಕಾಗಿ ನಾನಾತರದ ಪ್ರಯೋಗಗಳನ್ನು ರಚಿಸುವುದು ಇವೇ ಮುಂತಾದವು ಇಲ್ಲಿನ ಪ್ರಧಾನೋದ್ದೇಶ. ಸಸ್ಯಗಳ ಮುಖ್ಯ ವಾಸ್ತವಿಕ ಪರಿಸರವೆಂದರೆ ಇವೆರೆಡರ ನೆಲಮಟ್ಟದ ಉಷ್ಣಸಮತೋಲ ಹಾಗೂ ತೇವಸಮತೋಲ. ಪ್ರಭಾವಗಳನ್ನು ಅರಿಯಲು ಸಂಕೀರ್ಣ ಪ್ರಯೋಗಗಳನ್ನು ರೂಪಿಸಬೇಕಾಗುತ್ತದೆ. ಭೂಮಿಗೆ ಲಭಿಸುವ ಉಷ್ಣಶಕ್ತಿಯ ಆಕರ ಸೂರ್ಯನಾದರೂ ನೆಲಮಟ್ಟದಲ್ಲಿನ ಉಷ್ಣಸಮತೋಲ ಸೂರ್ಯನ ಮೇಲೆ ಮಾತ್ರ ಅವಲಂಬಿಸಿರುವುದಿಲ್ಲ. ಉಷ್ಣಪ್ರತಿಫಲನ, ಗಾಳಿಯಲ್ಲಿನ ತೇವ, ಪರಿಸರದ ನೆಲ ನೀರು ಸಸ್ಯ ಮುಂತಾದವುಗಳ ವಿತರಣೆ, ವರ್ಷದ ಋತು ಅಕ್ಷಾಂಶ ಮುಂತಾದ ಹಲವಾರು ಕಾರಕಗಳನ್ನು ಆಧರಿಸಿ ಉಷ್ಣಸಮತೋಲವಿದೆ. ಮಣ್ಣಿನ ಗುಣ, ನೆಲದ ವಿನ್ಯಾಸ, ಮಳೆ ಸ್ಥಳದ ಅಕ್ಷಾಂಶ ಇವೇ ಮುಂತಾದ ಹಲವಾರು ಕಾರಕಗಳನ್ನು ನೆಲಮಟ್ಟದ ತೇವಸಮತೋಲ ಅವಲಂಬಿಸಿದೆ. ಈ ಸಮತೋಲಗಳ ಅಭ್ಯಾಸ ಸಹಜವಾಗಿ ಸೂಕ್ಷ್ಮವಾಯುಗುಣವಿಜ್ಞಾನ (ಮೈಕ್ರೊಕ್ಲೈಮಟಾಲಜಿ) ಎಂಬ ಒಂದು ವಿಶಿಷ್ಟ ಅಧ್ಯಯನಕ್ಕೆ ಹಾದಿ ಮಾಡಿಕೊಡುತ್ತದೆ. ಈ ವಿಜ್ಞಾನ ವಿಭಾಗ ಬೃಹದ್ವಾಯು ಗುಣವಿಜ್ಞಾನಕ್ಕಿಂತ (ಮ್ಯಾಕ್ರೊಕ್ಲೈಮೆಟಾಲಜಿ) ಭಿನ್ನವಾದದ್ದು. ಎರಡನೆಯದು ಆಯಾ ಸ್ಥಳಕ್ಕೆ ಒಟ್ಟು ಸಂಬಂಧಿಸಿದಂತಿದ್ದರೆ ಮೊದಲನೆಯದು ಸಸ್ಯಗಳ ಒತ್ತಿನ ಪರಿಸರಕ್ಕೆ ಮಾತ್ರ ಅನ್ವಯಿಸಿದೆ. ಸೂಕ್ಷ್ಮ ವಾಯುಗುಣವಿಜ್ಞಾನ ಬೃಹದ್ವಾಯು ಗುಣವಿಜ್ಞಾನದಿಂದ ಪ್ರಭಾವಿತವಾಗುವುದಾದರೂ ಅಂತಿಮವಾಗಿ ಸಸ್ಯಗಳ ಬೆಳವಣಿಗೆ ಮೇಲೆ ಪ್ರಭಾವ ಸೂಕ್ಷ್ಮವಾಯುಗುಣವಿಜ್ಞಾನದ್ದೇ. ಬೆಳೆಯ ಈ ಸೂಕ್ಷ್ಮವಾಯುಗುಣ ಬೃಹದ್ವಾಯುಗುಣದಿಂದ ಎಷ್ಟು ವಿಚಲಿತವಾಗಿರುವುದೆಂಬುದು ಬೆಳೆಯ ಬೆಳವಣಿಗೆಯ ಹಂತ, ಅದರ ಸಸ್ಯಗಳ ಸಾಂದ್ರತೆ ಹಸುರಿನ ವಿತರಣೆ, ಮಟ್ಟಸಗಾಳಿಯ ಮೇಲೆ ಸಸ್ಯಗಳು ಒಡ್ಡುವ ತಡೆ ಮತ್ತು ಸೂರ್ಯ, ರಶ್ಮಿ-ಇವನ್ನು ಅವಲಂಬಿಸಿದೆ. ಕಬ್ಬಿನ ಪೈರನ್ನು ಪರಿಶೀಲಿಸಬಹುದು. ಅದರ ಬೆಳವಣಿಗೆಯ ಮುಂದುವರಿದ ಹಂತದಲ್ಲಿ ಇಡೀ ತೋಟವನ್ನು ವ್ಯಾಪಿಸುವ ಹಸುರಿನ ಹಂದರ ಕ್ರಿಯಾ ಮೇಲ್ಮೈ-ಎಂದರೆ ಉಷ್ಣಶಕ್ತಿಯನ್ನು ಹೀರಿಕೊಂಡು ಅದನ್ನು ಪುನರ್ವಿತರಣೆ ಮಾಡುವ ಮೇಲ್ಮೈ-ಆಗಿ ವರ್ತಿಸುತ್ತದೆ. ಇಲ್ಲಿ ನೆಲ ಈ ಕೆಲಸವನ್ನು ಮಾಡುವುದಲ್ಲ ಎಂಬುದನ್ನು ಗಮನಿಸಬೇಕು. ಇದರಿಂದಾಗಿ ತೋಟದ ಒಳಗಿನ ಉಷ್ಣತೆಯಲ್ಲಾಗಲಿ ಗಾಳಿಸಂಚಾರದಲ್ಲಾಗಲಿ ಹೊರಗಿನ ಪರಿಸರಕ್ಕಿಂತ ಹೆಚ್ಚಿನ ಸ್ಥಿರತೆ ಬಂದಿರುತ್ತದೆ. ಹೀಗೆ ಸೂಕ್ಷ್ಮವಾಯುಗುಣ ಕಬ್ಬಿನ ಬೆಳೆಯ ಮೇಲೆ (ಅದೇ ರೀತಿ ಬೇರೆ ಬೆಳೆಗಳ ಮೇಲೆ) ವಿಶೇಷ ಪರಿಣಾಮಕಾರಿಯಾಗಿ ವರ್ತಿಸುವುದು.

ಹವೆ ಮತ್ತು ಬೆಳೆಗಳ ಸಂಬಂಧವನ್ನು ಕುರಿತ ಅಂಕಿ ಅಂಶಗಳ ಸಂಶೋಧನೆ[ಬದಲಾಯಿಸಿ]

ಅಂಕಿ ಅಂಶಗಳ ಕ್ರಮಬದ್ಧ ಸಂಗ್ರಹವನ್ನು ದೀರ್ಘಕಾಲ ಸುಸಂಘಟಿತ ವಿಧಾನದಲ್ಲಿ ಮಾಡುವುದು ಯಾವುದೇ ಶಾಸ್ತ್ರದ ಬೆಳವಣಿಗೆಗೆ ತೀರ ಅವಶ್ಯಕ. ಈ ದಿಶೆಯಲ್ಲಿ ಪುಣೆಯ ಹವಾವಿಜ್ಞಾನ ಇಲಾಖೆಯಲ್ಲಿ ಕಳೆದ ಹಲವಾರು ದಶಕಗಳಿಂದ ಕೃಷಿ ಮತ್ತು ಹವೆಗೆ ಸಂಬಂಧಿಸಿದಂಥ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಸಾಕಷ್ಟು ಸಂಗ್ರಹವಾದ ತರುವಾಯ ಕೃಷಿ-ಹವೆ ಸಂಬಂಧವನ್ನು ಕುರಿತ ನಿಖರ ಮುನ್ಸೂಚನೆಗಳನ್ನು ನೀಡಿ ತನ್ಮೂಲಕ ಕೃಷಿಸುಧಾರಣೆಗಳನ್ನು ಸಾಧಿಸಬಹುದು.

ಹವಾವಿಜ್ಞಾನ ಮತ್ತು ಕೃಷಿ ಇವುಗಳ ನಡುವೆ ಸಂಪರ್ಕ[ಬದಲಾಯಿಸಿ]

ಇಂಥ ಸಂಪರ್ಕವನ್ನು ನಿಕಟವಾಗಿ ಏರ್ಪಡಿಸಿವುದರಿಂದ ಕೃಷಿಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬಹುದು. ಈ ದಿಶೆಯಲ್ಲಿ ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಗಳೂ ತೀವ್ರ ಕುತೂಹಲಿಗಳಾಗಿ ಪ್ರಾಯೋಗಿಕ ಕಾರ್ಯಕ್ರಮಗಳನ್ನು ರೂಪಿಸಿವೆ. ದೇಶದ ಆಹಾರ ಸಮಸ್ಯೆಯ ಪರಿಹಾರದಲ್ಲಿ ಇದೊಂದು ಯೋಗ್ಯ ಹೆಜ್ಜೆ.

ಉಲ್ಲೇಖಗಳು[ಬದಲಾಯಿಸಿ]