ಕೃಪಾಕರ ಸೇನಾನಿ
ಕೃಪಾಕರ ಮತ್ತು ಸೇನಾನಿ, ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹಣದ ಬಗ್ಗೆ ಮಾತು ಬಂದಾಗ ಕೇಳಿಬರುವ ಅತಿ ಪ್ರಮುಖ ಜೋಡಿ ಹೆಸರು. ಇವರು ಕನ್ನಡಿಗರೆನ್ನುವುದು ಹೆಮ್ಮೆಯ ವಿಷಯ.ಕೃಪಾಕರ-ಸೇನಾನಿ ಖ್ಯಾತ ಪರಿಸರ ತಜ್ಞರು.ಕಾಡು ಮೇಡು ಎಂದು ಕ್ಯಾಮರಾ-ಪುಸ್ತಕ ಹಿಡಿದು ಸುತ್ತುವುದು,ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳುವುದು ಅವರ ನೆಚ್ಚಿನ ಕೆಲಸ.
ಪರಿಚಯ
[ಬದಲಾಯಿಸಿ]ಖ್ಯಾತ ವನ್ಯಜೀವಿ ಛಾಯಾಗ್ರಾಹಣ[೧] ನಿರ್ಮಾಪಕರಾದ ಕೃಪಾಕರ, ಸೇನಾನಿ[೨] ಜೋಡಿಗೆ ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿ ದೊರಕಿದೆ. ಏಷಿಯಾಟಿಕ್ ಕಾಡುನಾಯಿಗಳ ಕುರಿತು ಅವರು ನಿರ್ಮಿಸಿರುವ 'ದಿ ಪ್ಯಾಕ್' ಸಾಕ್ಷ್ಯ್ತಚಿತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. 'ದಿ ಪ್ಯಾಕ್' ಸಾಕ್ಷ್ಯ ಚಿತ್ರದ ಐದನೇ ಮತ್ತು ಕೊನೆಯ ಕಂತಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿಗಾಗಿ ವಿಶ್ವ ಖ್ಯಾತಿಯ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಅಟಿನ್ ಭರೋ ಅವರ 'ಲೈಫ್ ಸರಣಿ' ಹಾಗೂ ನ್ಯಾಶನಲ್ ಜಿಯೋಗ್ರಫಿಕ್ ಚಾನೆಲ್‌ನ ಮತ್ತೊಂದು ಚಿತ್ರವು ಸ್ಪರ್ಧಿಸಿದ್ದವು. ಇವೆರಡನ್ನೂ ಹಿಂದಿಕ್ಕಿ 'ದಿ ಪ್ಯಾಕ್' ಪ್ರಶಸ್ತಿಯನ್ನು ಬಾಚಿಕೊಂಡಿರುವುದು ವಿಶೇಷ. ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಅಕ್ಟೋಬರ್ 13ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿಶ್ವ್ವದ ಶ್ರೇಷ್ಠ ವನ್ಯ ಜೀವಿ ವಿಜ್ಞಾನಿ ಡಾ.ಜಾರ್ಜ್ ಶಾಲನ್ ಅವರು ನಿರ್ಮಾಪಕ ಕೃಪಾಕರ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಸೇನಾನಿ[೩] ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಏಷ್ಯಾ ಖಂಡದಲ್ಲಿ ನಿರ್ಮಾಣಗೊಂಡು, ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗದಲ್ಲಿ ನಾಮಕರಣಗೊಂಡ ಹಾಗೂ ಪ್ರಶಸ್ತಿ ಪಡೆದ ಏಕೈಕ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ 'ದಿ ಪ್ಯಾಕ್' ಪಾತ್ರವಾಗಿದೆ. ನೀಲಗಿರಿ ಜೈವಿಕ ವಲಯದಲ್ಲಿ ಬೇಟೆ ನಾಯಿಗಳ ಕುರಿತ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗಿದೆ. ಕಾಡುನಾಯಿಗಳ ಸಂಕೀರ್ಣ ಬದುಕಿನ ಬಗೆಗೆ ಇದುವರೆಗೂ ಗೊತ್ತಿರದ ಸಂಗತಿಗಳನ್ನು 'ದಿ ಪ್ಯಾಕ್' ಸಾಕ್ಷ್ಯಚಿತ್ರ ಅನಾವರಣಗೊಳಿಸುತ್ತದೆ. ಕೃಪಾಕರ ಮತ್ತು ಸೇನಾನಿ ಜೋಡಿ ನೀಲಗಿರಿ ಕಾಡುಗಳಲ್ಲಿ ಬಹಳ ವರ್ಷಗಳ ಕಾಲ ಶ್ರಮಿಸಿ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ್ದಾರೆ. ಕಾಡುನಾಯಿಗಳ ಕುರಿತ ಅಚ್ಚರಿ ಸಂಗತಿಗಳನ್ನು ದಿಪ್ಯಾಕ್ ಹೊರಗೆಡುಹಿದೆ. ಕಾಡುನಾಯಿಗಳ ಕುರಿತ 'ದಿ ಪ್ಯಾಕ್' ಸಾಕ್ಷ್ಯ ಚಿತ್ರವಾಗಲಿ, ಕೆ.ಪುಟ್ಟಸ್ವಾಮಿಯವರೊಂದಿಗೆ ಸಂಪಾದಿಸಿರುವ 'ಜೀವಜಾಲ'ದಂತಹ ಪುಸ್ತಕವಾಗಲಿ, ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಮುಖಪುಟ ಚಿತ್ರಗಳಿರಲಿ ಕೃಪಾಕರ ಸೇನಾನಿಯವರ ಕೈಚಳಕ ಎದ್ದು ಕಾಣುತ್ತದೆ.
ಸಾಕ್ಷ್ಯ ಚಿತ್ರ
[ಬದಲಾಯಿಸಿ]ಕನ್ನಡ ಪುಸ್ತಕಗಳು
[ಬದಲಾಯಿಸಿ]- ಜೀವಜಾಲ - 1998 (ಶ್ರೀ ಕೆ. ಪುಟ್ಟಸ್ವಾಮಿ ಯವರ ಜೊತೆ)
- ‘ಸೆರೆಯಲ್ಲಿ ಕಳೆದ 14 ದಿನಗಳು’ - 1999[೬] ಕೃಪಾಕರ-ಸೇನಾನಿ ವೀರಪ್ಪನ್ ಒತ್ತೆಯಾಳುಗಳಾಗಿದ್ದಾಗಿನ ಸಂಗತಿಗಳನ್ನು ಸೊಗಸಾಗಿ ದಾಖಲಿಸಿದ, ಅಪರೂಪದ ಪುಸ್ತಕ.
ಇಂಗ್ಲೀಷ್ ಪುಸ್ತಕಗಳು
[ಬದಲಾಯಿಸಿ]- ಎ ವಾಕ್ ಆನ್ ದಿ ವೈಲ್ಡ್ ಸೈಡ್ : ಅನ್ ಇನ್ಫರ್ಮೇಷನ್ ಗೈಡ್ ಟು ನ್ಯಾಶನಲ್ ಪಾರ್ಕ್ಸ್ ಅಂಡ್ ವೈಲ್ಡ್ ಲೈಫ್ ಸ್ಯಾಂಕ್ಚುಯರೀಸ್ ಆಫ್ ಕರ್ನಾಟಕ, ಕರ್ನಾಟಕ ಅರಣ್ಯ ಇಲಾಖೆ - 2000.
- ವ್ಯಾಲಿ ಅಫ್ ಬ್ಯಾಂಬೂಸ್ ಅಂಡ್ ಫರ್ಗಟನ್ ವಿಲೇಜಸ್: ಎ ಪ್ರೊಫೈಲ್ ಆಫ್ ಭದ್ರಾ ಟೈಗರ್ ರಿಸರ್ವ್ ಅಂಡ್ ದ ರಿಸೆಟಲ್ಮೆಂಟ್ ಆಫ್ ವಿಲೇಜಸ್ - 2002.
- ಬರ್ಡ್ಸ್, ಬೀಸ್ಟ್ಸ್ ಅಂಡ್ ಬ್ಯಾಂಡಿಟ್ಸ್ - 2011
'ಸೆರೆಯಲ್ಲಿ ಕಳೆದ 14 ದಿನಗಳು' ಕೃತಿಯೊಳಗೆ
[ಬದಲಾಯಿಸಿ]- ಲೇಖಕರಿಬ್ಬರನ್ನು ವೀರಪ್ಪನ್ ಅಪಹರಿಸಿದ ನಂತರದ ವಿದ್ಯಮಾನಗಳಿಂದ ಹಿಡಿದು ಬಿಡುಗಡೆಯಾಗುವ ವರೆಗಿನ ವಿಚಾರಗಳು ಈ ಕೃತಿಯಲ್ಲಿವೆ[೭].ಕೃಪಾಕರ-ಸೇನಾನಿ ಬಂಡೀಪುರ ಅಭಯಾರಣ್ಯದ ಪಕ್ಕದಲ್ಲ್ಲಿಯೇ ಒಂದು ಮನೆ ಮಾಡಿರುತ್ತಾರೆ. ಒಂದು ದಿನ ರಾತ್ರಿಯ ಹೊತ್ತು ಇದ್ದಕ್ಕಿದ್ದಂತೆ ಯಾರೋ ಬಾಗಿಲು ಬಡಿದ ಸದ್ದು. ಯಾರೆಂದು ಕೇಳಿದರೆ ಆ ಕಡೆಯಿಂದ ‘ವೀರಪ್ಪನ್’!!! ಬಾಗಿಲು ತೆರೆದಾಗ ತನ್ನ ಸಹಚರರೊಂದಿಗೆ ವೀರಪ್ಪನ್ ಮನೆಯೊಳಗೆ ಪ್ರವೇಶಿಸುತ್ತಾನೆ.
- ಆ ನಂತರದ ಸಂಧರ್ಭವನ್ನು ವರ್ಣಿಸಿದ ರೀತಿ ಮಜಾ ಕೊಡುತ್ತದೆ. ಚಹಾ ಮಾಡಲು ಗ್ಯಾಸ್(ಅಡುಗೆ ಅನಿಲ) ಉರಿಸಿದಾಗ, ಚಮತ್ಕಾರವೆಂಬಂತೆ ವೀರಪ್ಪನ್ ಸಹಚರರು ‘ಅರೆ ಅರೆ..’ ಅನ್ನುವುದು, ಕ್ಯಾಮರಾ,ಜಿಯೋಗ್ರಫಿ ಸಂಬಂಧಿಸಿದ ಪುಸ್ತಕಗಳನ್ನು ತದೇಕಚಿತ್ತದಿಂದ ನೋಡುವುದು ಕಾಡಿನೊಳಗಿನ ಜೀವದ ಉತ್ಸಾಹವನ್ನು ಸೂಚಿಸುತ್ತದೆ. ರಾತ್ರಿ ಹೊತ್ತಲ್ಲಿ ಇವರಿಬ್ಬರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡ ವೀರಪ್ಪನ್ ತಂಡ ತಮ್ಮ ಪ್ರಯಾಣ ಮುಂದುವರಿಸುತ್ತದೆ.
- ಸ್ವಲ್ಪ ನಡೆದ ನಂತರ ಅಲ್ಲಿಯೇ ಕಾಡಿನ ಮಧ್ಯೆ ತಂಗುತ್ತಾರೆ. ಬೆಳಿಗ್ಗೆ ಅಭಯಾರಣ್ಯವನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನು ತಡೆದು ‘ಜಂಗಲ್ ಇಂಟರ್ವ್ಯೂವ್’ ಮಾಡುವ ವೀರಪ್ಪನ್ ನ ಮಾತುಗಳು ನಗೆ ತರಿಸುತ್ತದೆ. ನಂತರ ಕೋಲ್ಕತ್ತಾ ನಿವಾಸಿ, ಬೆಂಗಳೂರಿನಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಮೈಥಿ,ಅರಣ್ಯ ಇಲಾಖೆಯ ಸಿಬ್ಬಂದಿ ಪಾಷ-ರಾಜುವನ್ನು ಒತ್ತೆಯಾಳುಗಳ ಗುಂಪಿಗೆ ಸೇರ್ಪಡಿಸಿ ತಂಡ ಕಾಡು ಪ್ರವೇಶಿಸುತ್ತದೆ.
- ಕಾಡಿನಲ್ಲಿ ಕಳೆದ ಆ ದಿನಗಳನ್ನು ಬಹಳ ಸೊಗಸಾಗಿ ದಾಖಲಿಸಿದ ಈ ಕೃತಿ ಕಾಡಿನ ಬಗ್ಗೆ ಓದುಗನಲ್ಲಿ ತಿಳಿದುಕೊಳ್ಳುವ ಆಸಕ್ತಿ ಉಂಟುಮಾಡುತ್ತದೆ. ಕೃತಿಯ ಮಧ್ಯಾರ್ಧಕ್ಕೆ ಬಂದಾಗ ಅದು ‘ವೀರಪ್ಪನ್ ಭಯಾಗ್ರಫಿ’ ಎಂದೆನಿಸಿದರೆ ತಪ್ಪಲ್ಲ. ಅದನ್ನು ಓದುತ್ತಿದ್ದಂತೆ ವೀರಪ್ಪನ್ ಬಗೆಗಿನ ನಮ್ಮ ‘ಪೂರ್ವಾಗ್ರಹ’ಗಳು ಎಲ್ಲಾ ಹೋಗಿ ಬಿಡುತ್ತದೆ. ವೀರಪ್ಪನ್ ನ ಮಾನವೀಯ ಮುಖಗಳು ತೆರೆದುಕೊಳ್ಳುತ್ತದೆ.
- ಆತ ಹೇಳುವಂತೆ ಆತ ಕೊಂದಿದ್ಡು 15 ಆನೆಗಳನ್ನು ಮತ್ತು ಆತನ ಊರಿನ ಜನರಿಗೆ ತನಿಖೆಯ ನೆಪದಲ್ಲ್ಲಿ ಕಿರುಕುಳಕೊಟ್ಟು ಊರನ್ನೇ ಹಾಳು ಮಾಡಿದ ಭೃಷ್ಟ ಅಧಿಕಾರಿಗಳನ್ನು ! ಉಳಿದದ್ದೆಲ್ಲಾ ‘ವೀರಪ್ಪನ್’ ಹೆಸರಿನವರು ಮಾಡಿದ್ದು. ಹೌದು, ನಮ್ಮ ಜನ ಯಾರದ್ದೋ ಹೆಸರನ್ನು ಬಂಡವಾಳ ಮಾಡಿಕೊಂಡು ಲಾಭ ಪಡೆಯುವವರು.ಅದೇ ರೀತಿ ‘ತಮಗಾಗಿ’ ವೀರಪ್ಪನ್ ಹೆಸರು ಬಳಸಿದರು. ವೀರಪ್ಪನ್ ಆನೆಯ ಬಗ್ಗೆ ಹೇಳುವ ಕಾಳಜಿಯ ಮಾತುಗಳು ಕಸಿವಿಸಿಯನ್ನುಂಟು ಮಾಡುತ್ತದೆ.
- ದಿನ ಕಳೆದಂತೆ ಲೇಖಕರಿಗೆ ವೀರಪ್ಪನ್ ಆತ್ಮೀಯನಾಗುತ್ತಾನೆ. ಆತನ ನೆನಪುಗಳನ್ನು ಮೆಲುಕು ಹಾಕಿ, ಹಂಚಿಕೊಳ್ಳುತ್ತಾನೆ. ಕೆಲವೊಮ್ಮೆ ಹೆಂಡತಿ-ಮಕ್ಕಳನ್ನು ನೆನೆದು ಭಾವುಕನಾಗುತ್ತಾನೆ. ತಾನು ಕೂಡ ಎಲ್ಲರಂತಾಗಬೇಕೆಂದು ಹವಣಿಸುತ್ತಾನೆ. ತಾನು ಸಮಾಜದ ಕೇಂದ್ರ ವಾಹಿನಿಗೆ ಬಂದರೆ ತನ್ನ ಒಡನಾಡಿಗಳಿಗೆ ಗತಿಯಿಲ್ಲದಂತಾಗುತ್ತದೆ. ಅದಾಗಲೇ ಎಸ್ ಟಿ ಎಫ್ ಸಿಬ್ಬಂದಿಗಳು ಅವರ ಕುಟುಂಬಗಳಿಗೆ ಕಿರುಕುಳ ನೀಡಿ, ಇದ್ದ ಸಂಪತ್ತನ್ನೆಲ್ಲಾ ಸರ್ವನಾಶ ಮಾಡಿದ್ದಾರೆ.
- ಅವರಿಗೊಂದು ನೆಲೆ ಕಲ್ಪಿಸಿಕೊಡಲು ತಾನು ಐದು ಕೋಟಿ ಕೇಳುವುದು ಎಂದು ತನ್ನ ಬೇಡಿಕೆಯ ಉದ್ದೇಶ ತಿಳಿಸುತ್ತಾನೆ. ವೀರಪ್ಪನ್ ಗೆ ಕಾಡಿನಲ್ಲಿ ಹೊರಜಗತ್ತಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾಧ್ಯಮ ರೇಡಿಯೋ. ರೇಡಿಯೋದಲ್ಲಿ ಬರುವ ವಾರ್ತೆಗಳನ್ನು ಆತ ತಪ್ಪದೇ ಕೇಳುತ್ತಿದ್ದ. ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುತ್ತಿರಲಿಲ್ಲ.ಸಂಧಾನ ಬಿಟ್ಟು,ಕಾರ್ಯಾಚರಣೆ ನಡೆಸುತ್ತೇವೆ ಎಂದು ಸರ್ಕಾರ ತನ್ನ ಉದ್ದಟತನವನ್ನು ಪ್ರದರ್ಶಿಸಲು ಪ್ರಯತ್ನಿಸಿದಾಗ ಆತ ಕುದಿಯುತ್ತಿದ್ದ.
- “ಏನ್ ಮಾಡ್ಕೋತಾರೋ ಮಾಡ್ಕೊಳ್ಳಿ. ನಾನೂ ನೋಡುತ್ತೇನೆ” ಎನ್ನುತ್ತಿದ್ದ. ಅದಾದ ಕೆಲಹೊತ್ತು ಕ್ಯಾಂಪ್ ತುಂಬಾ ನೀರವ ಮೌನ ಆವರಿಸುತ್ತಿತ್ತು. ವೀರಪ್ಪನ್ ಒಬ್ಬ ವೈದ್ಯ ಕೂಡ ! ಲೇಖಕರಿಗೆ ಅನಾರೋಗ್ಯ ಸಮಸ್ಯೆ ಬಂದಾಗ ಆತ ಇಂಜೆಕ್ಷನ್ ಕೊಡಲು ಬರುತ್ತಾನೆ.ಇವರು ಹೆದರಿದಾಗ ಸುಮ್ಮನಾಗುತ್ತಾನೆ.ನಂತರ ಆತನ ಸಹಚರ ವೀರಪ್ಪನ್ ವೈದ್ಯಕೀಯ ಪರಿಣತಿಯನ್ನು ತಿಳಿಸುತ್ತಾನೆ.ವೀರಪ್ಪನ್ ಸಹಚರ ಸೇತುಕುಳಿ ಗೋವಿಂದನ್ ನ ಗ್ರಹಿಕೆ ಅಚ್ಚರಿ ತರುವಂತಹದ್ದು.ಒಂದು ಸಣ್ಣ ಶಬ್ದವಾದರೂ ಅದೇನೆಂದು ಸೂಕ್ಷ್ಮವಾಗಿ ಹೇಳಬಲ್ಲ ಶಕ್ತಿ ಆತನ ಕಿವಿಗಿತ್ತು !
- ವೀರಪ್ಪನ್ ಕ್ಯಾಂಪಿನಲ್ಲಿ ಸಾಮಾನ್ಯವಾಗಿ ಊಟ ದೊರಕುತ್ತಿದ್ದುದ್ಡು ಎರಡು ಹೊತ್ತು. ಬೆಳಿಗ್ಗೆ ಸಕ್ಕರೆಯ ಜೊತೆ ಏನೋ ಹುಡಿ ಮಿಶ್ರಣ ಮಾಡಿ ಕುದಿಸಿದ, ಬಾಯಿಗಿಟ್ಟರೆ ‘ಫೆವಿಕ್ವಿಕ್’ನಂತೆ ಅಂಟುತ್ತಿದ್ದ ದ್ರಾವಣವನ್ನು ಗ್ಲಾಸಿನಲ್ಲಿ ಕೊಡುತ್ತಿದ್ದರು. ಬಾಯಿಯ ಹತ್ತಿರಕ್ಕೆ ಹೋದಾಗ ಅದರ ವಾಸನೆ ಬಡಿದು, ಅದು ಚಹಾವೆಂದು ತಿಳಿಯುತ್ತಿತ್ತು. ಮಧ್ಯಾಹ್ನ ರಾತ್ರಿ ಅನ್ನ-ಸಾರು. ಅದು ಬಿಟ್ಟರೆ ಕೆಲವೊಮ್ಮೆ ಬಾಳೆಹಣ್ಣು, ಒಣ ಮಾಂಸ ಇತ್ಯಾದಿ ಊಟದ ಮೆನುವಾಗಿತ್ತು.
- ಊಟ ಮಾಡುವಾಗ ಎಲ್ಲರೂ ಜೊತೆಯಾಗಿಯೇ ಕೂರುತ್ತಿದ್ದರು. ಊಟಕ್ಕೆ ಮೊದಲು ವೀರಪ್ಪನ್ ‘ಒತ್ತೆಯಾಳು’ ಆಗಿದ್ದವರನ್ನು ಪ್ರೀತಿಯಿಂದ ಕರೆದು ಕೂರಿಸುತ್ತಿದ್ದನು. ಸಮಾಜದ ಕಣ್ಣಿಗೆ ಆತ ಕ್ರೂರಿಯಾದರೂ, ನಿಜವಾಗಿಯೂ ಆತ ಮಾನವೀಯತೆಯುಳ್ಳ ವ್ಯಕ್ತಿಯಾಗಿದ್ದನು. ವೀರಪ್ಪನ್ ಆತಿಥ್ಯ ಸವಿದ ಲೇಖಕರಿಗೆ ಕಾಡು ಬಿಟ್ಟು ಹೊರಬರಲು ಮನಸ್ಸೇ ಆಗುತ್ತಿರಲಿಲ್ಲ! ಅಯೋಧ್ಯೆಯ ಬಗ್ಗೆ ವೀರಪ್ಪನ್ ಆಡಿದ ಮಾತುಗಳು,ಎಂತಹವರನ್ನೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.
- ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ ವಿಚಾರವನ್ನು ತಿಳಿಸುತ್ತಾ ಆತ, ಕೆಡವಲು ನನ್ನನ್ನು ಕರೆದಿದ್ದರೆ ನಾನು ‘ನೀವು ಬೇಕಾದರೆ ಕೆಡವಿಕೊಳ್ಳಿ. ನನ್ನ ದೇವರು ನನ್ನ ಅಂತರಾತ್ಮದಲ್ಲಿದ್ದಾನೆ ಎನ್ನುತ್ತಿದ್ದೆ’ ಎನ್ನುತ್ತಾನೆ ! ಕೃಪಾಕರ-ಸೇನಾನಿ ಜೊತೆಯಾಗಿ ವೀರಪ್ಪನ್ ನನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳಷ್ಟು ಪ್ರಯತ್ನಿಸುತ್ತಾರೆ. ವೀರಪ್ಪನ್ ಒಪ್ಪುತ್ತಾನೆ.
- ತನ್ನನ್ನು ಪೊಲೀಸಿನವರಿಗೆ ಒಪ್ಪಿಸಕೂಡದು, ಕೊಯಮುತ್ತೂರು ನ್ಯಾಯಾಲಯದಲ್ಲಿಯೇ ತನ್ನ ವಿರುದ್ಧದ ವಿಚಾರಣೆಯನ್ನು ನಡೆಸಬೇಕು,ತನ್ನ ವಿರುದ್ಧದ ವಿಚಾರಣೆಗಳೆಲ್ಲಾ ಇತ್ಯರ್ಥವಾದ ಬಳಿಕ ಲೈಸನ್ಸ್ ಮಾಡಿ ತನಗೊಂದು ಬಂದೂಕು ನೀಡಬೇಕು ಎಂಬ ಷರತ್ತುಗಳನ್ನು ವಿಧಿಸುತ್ತಾನೆ.ಲೇಖಕರು ಅವನ ಮಾತುಗಳನ್ನು ಕ್ಯಾಸೆಟ್ ನಲ್ಲಿ ರೆಕಾರ್ಡ್ ಮಾಡಿಕೊಡುವಂತೆ ಹೇಳುತ್ತಾರೆ. ಅದರಂತೆ ಆತ ತನ್ನದೇ ಆದ ‘ಶೈಲಿ’ಯಲ್ಲಿ ಮಾತನಾಡುತ್ತಾನೆ.
- ಆಗ ಇವರು ಹಾಗೆ ಮಾತನಾಡಬಾರದು ಎಂದು ‘ಬೇಡಿಕೊಳ್ಳುವ’ ಶೈಲಿಯಲ್ಲಿ ಮಾತನಾಡಿಸುತ್ತಾರೆ. ಕಾರಣ ‘ರಾಜಕಾರಣಿ’ಗಳಿಗೆ ಕರುಣೆ ಬಂದು ಕ್ಷಮಾಧಾನ ನೀಡಲಿ ಎಂದು. ಆದರೆ ಅವರು ಆ ಕ್ಯಾಸೆಟನ್ನು ತಂದು ನಮ್ಮ ‘ಮುಖ್ಯಮಂತ್ರಿ’ಗಳ ಮುಂದೆ ಇಟ್ಟಾಗ ಅವರ ಬಳಿ ಇದ್ದ ಕಮಿಷನರೊಬ್ಬ “ಸಾರ್...ವೀರಪ್ಪನ್ ಈಗ ದುರ್ಬಲನಾಗಿದ್ದಾನೆ. ಆತನ ಮಾತುಗಳೇ ಅದನ್ನು ತಿಳಿಸುತ್ತದೆ.ನಾವು ಅವನನ್ನು ಸುಲಭವಾಗಿ ಹಿಡಿಯಬಹುದು...” ಎಂದು ಉಸುರುತ್ತಾನೆ!
- ಚಂಬಲ್ ಕಣಿವೆಯ ನರಹಂತಕಿ ಪೂಲನ್ ದೇವಿಗೆ ಕ್ಷಮಾಧನ ನೀಡಿ ‘ಸಂಪತ್ ಸದಸ್ಯೆ’ ಎಂಬ ಪಟ್ಟ ನೀಡಿದ ನಮ್ಮ ಆಡಳಿತ ವ್ಯವಸ್ಥೆ,ಅದೇ ರೀತಿಯ ಒಬ್ಬ ದಂತಚೋರನಿಗೆ ಕ್ಷಮಾಧಾನ ನೀಡಲು ಹಿಂದೇಟು ಹಾಕುತ್ತದೆ. ಒಂದು ಕಣ್ಣಿಗೆ ಬೆಣ್ಣೆ,ಮತ್ತೊಂದು ಕಣ್ಣಿಗೆ ಸುಣ್ಣ.ಎಂಥಾ ಕೊಳಕು ಜನ ನಮ್ಮವರು ! ಹೀಗೆ ಹದಿನಾಲ್ಕು ದಿನ ಕಳೆದ ನಂತರ ವೀರಪ್ಪನ್ ‘ಕೃಪಾಕರ-ಸೇನಾನಿ-ಡಾ ಮೈಥಿ’ ಮತ್ತು ಇತರರನ್ನು ಬಿಡುಗಡೆ ಮಾಡುತ್ತಾನೆ.
- ಬೀಳ್ಕೊಡುಗೆಯ ಸಂಧರ್ಭ ಬಂದಾಗ ವೀರಪ್ಪನ್-ಸಹಚರರೆಲ್ಲರೂ ಭಾವುಕರಾಗುತ್ತಾರೆ. ಅವರ ಕಣ್ಣು ತೇವವಾಗುತ್ತದೆ. ವೀರಪ್ಪನ್ ಕೃಪಾಕರ-ಸೇನಾನಿಗೆ “ನಾನು ಸಮಾಜದ ಮುಖ್ಯವಾಹಿನಿಗೆ ಬಂದಾಗ, ನೀನು ನನ್ನನ್ನು ನೋಡಲು ಬರುತ್ತಿಯಾ ಅಲ್ವಾ? ನಂತರ ನಿನ್ನ ಮನೆಗೊಮ್ಮೆ ನಾನು ಬರುತ್ತೇನೆ.
- ಯಾವುದೇ ಕಾರಣಕ್ಕೂ ನಿನ್ನ ಮನೆ ಮಾರಬೇಡ” ಎಂದು ತನ್ನ ಮೇಲಿನ ಅಪಾದನೆಗಳು ಅಂತ್ಯವಾಗುವ ‘ಆಶಾವಾದ’ದ ಮಾತುಗಳನ್ನಾಡುತ್ತಾನೆ. ಆದರೆ ವಾಸ್ತವವಾಗಿ ಹಾಗಾಗಲಿಲ್ಲ. ಆತನಿಗೆ ದಯೆ ಪಾಲಿಸಲಿಲ್ಲ. ಪಾಪಿಗಳು ಗುಂಡಿಕ್ಕಿ ಕೊಂದರು. ಎಲ್ಲಾ ಮುಚ್ಚಿದರು. ಎಲ್ಲರಂತಾಗಬೇಕೆಂದುಕೊಂಡವನೊಬ್ಬ ಈಗ ಈ ಲೋಕದಲ್ಲಿಲ್ಲ!
ಪ್ರಶಸ್ತಿ/ ಪುರಸ್ಕಾರಗಳು
[ಬದಲಾಯಿಸಿ]- ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿ
- ಫೆಸ್ಟಿವಲ್ ಡಿ ಎಲ್ Oiseau ಮತ್ತು ಡೆಲ್ ಲಾ ನೇಚರ್ 2008 (ಅಬ್ಬೆವಿಲ್ಲಾ, ಫ್ರಾನ್ಸ್) – ಅತ್ಯುತ್ತಮ ಪ್ರಕೃತಿ ಸಾಕ್ಷ್ಯಚಿತ್ರ ಪ್ರಶಸ್ತಿ.
- ಜಪಾನ್ ವನ್ಯಜೀವಿ ಚಲನಚಿತ್ರೋತ್ಸವದಲ್ಲಿ 2007 (ಕೊರಿಯ, ಜಪಾನ್) – ಫೆಸ್ಟಿವಲ್ ಗ್ರ್ಯಾಂಡ್ ಪ್ರಶಸ್ತಿ.
- Vatavaran ಪರಿಸರ ಮತ್ತು 2007 ವನ್ಯಜೀವಿ ಚಿತ್ರೋತ್ಸವ (ದೆಹಲಿ, ಭಾರತ) – ಉತ್ಸವ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆ ಪ್ರಶಸ್ತಿ.
- ಏಷಿಯನ್ ಟೆಲಿವಿಷನ್ ಅವಾರ್ಡ್ಸ್ನಲ್ಲಿ 2007 (ಸಿಂಗಾಪುರ) – ಅತ್ಯುತ್ತಮ ನ್ಯಾಚುರಲ್ ಹಿಸ್ಟರಿ ಮತ್ತು ವನ್ಯಜೀವಿ ಕಾರ್ಯಕ್ರಮ.
- Wildscreen 2006 (ಬ್ರಿಸ್ಟಲ್ UK) – ಪಾಂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.
- NaturVision 2006 (Neuschoenau, ಜರ್ಮನಿ) -ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://vijaykarnataka.indiatimes.com/entertainment/review/-/articleshow/45835577.cms
- ↑ http://mallikarjun-divinefeeling.blogspot.in/2015/03/blog-post.html
- ↑ http://eeprapancha.raveeshkumar.com/2009/04/poornachandra-tejaswi-program-mayflower.html
- ↑ http://www.wikiwand.com/kn/%E0%B2%A6%E0%B2%BF_%E0%B2%AA%E0%B3%8D%E0%B2%AF%E0%B2%BE%E0%B2%95%E0%B3%8D
- ↑ https://saangatya.wordpress.com/tag/%E0%B2%95%E0%B3%83%E0%B2%AA%E0%B2%BE%E0%B2%95%E0%B2%B0-%E0%B2%B8%E0%B3%87%E0%B2%A8%E0%B2%BE%E0%B2%A8%E0%B2%BF/
- ↑ http://surahonne.com/?p=7050[ಶಾಶ್ವತವಾಗಿ ಮಡಿದ ಕೊಂಡಿ]
- ↑ http://kannada.readoo.in/2015/04/green-oscar-winners-from-mysore